ಮಿ.ಲುಟ್ಝ್ ನೆನಪಾದರು ‘ಫಾದರ್ಸ್ ಡೇ’ ದಿನ
ಎಸ್.ಪಿ.ವಿಜಯಲಕ್ಷ್ಮಿ
ಜರ್ಮನಿಯ ಸ್ಟುಟ್ಗಾರ್ಟ್ ಹತ್ತಿರದ ‘ರೊಮೆಲ್ಸ್ಬಾಖ್’ ಎನ್ನುವ ಹಳ್ಳಿಗೆ ಹೊರಟಿದ್ದು ರೈಲಿನಲ್ಲಿ. ‘ಧೋ’ ಎಂದು ಸುರಿವ ಮಳೆ. ರೈಲಿನಪಯಣ, ಹಾದಿ ಎಲ್ಲವೂ ಬಲು ಸುಂದರ. ಮಳೆಯೂ ಚೇತೋಹಾರಿಯಾಗೇ ಇತ್ತು. ಆದರೆ, ಮೊತ್ತಮೊದಲಬಾರಿಗೆ ಆ ದಂಪತಿಯನ್ನು ಕಾಣಲು ಹೊರಟಿರುವುದು.
ಅವರು ಹೇಗೋ, ಏನೋ… ಜರ್ಮನ್ನರು ಸ್ವಲ್ಪ ಜಿಗುಟು, ಬಿಗುಸ್ವಭಾವದವರು. ಹೆಚ್ಚಿಗೆ ಹಚ್ಚಿಕೊಳ್ಳುವ ಪೈಕಿಯಲ್ಲ. ಹಚ್ಚಿಕೊಂಡರೆ ಮಾತ್ರ ಬಹಳ ಆಪ್ತರಾಗುತ್ತಾರೆ…ಈ ಎಲ್ಲ ಕೇಳಿತಿಳಿದ ಸಂಗತಿ. ಪ್ರಾಕ್ಟಿಕಲ್ ಗೆ ಬಂದರೆ, ಹೇಗಿರಬಹುದು ನನಗೆ ಸ್ವಾಗತ…? ಇಂಥ ಯೋಚನೆಯ ನಡುವೆಯೇ ನಾವು ಇಳಿಯಬೇಕಾದ ನಿಲ್ದಾಣ ಬಂತು.
ಇಲ್ಲಿಂದ ಆ ಪುಟ್ಟ ಹಳ್ಳಿಗೆ ರೈಲು ಹೋಗೋದಿಲ್ಲ. ಹಾಗಾಗಿ ಮಿ. ಲುಟ್ಝ್ ತಾವೇ ಕಾರು ಚಲಾಯಿಸಿಕೊಂಡು ಬಂದಿದ್ರು. ಹ್ಞಾಂ, ಮಳೆ ಸುರಿಯುತ್ತಲೇ ಇತ್ತು. ಹಾಗಿದ್ದರೂ, ಸಮಯ ಪರಿಪಾಲನೆಯಲ್ಲಿ ನಿಸ್ಸೀಮರೆನಿಸಿರುವ ಜರ್ಮನ್ ಪ್ರಜೆಯಾದ ಈತ ಕಾರಿಂದಿಳಿದು, ಛತ್ರಿಯ ಸುರಕ್ಷತೆಯಲ್ಲಿ ನಾವು ನಿಂತ ಸ್ಟೇಷನ್ ಒಳಕ್ಕೆ ಬಂದಾಗ, ನನ್ನವರು ಅವರ ಪರಿಚಯ ಮಾಡಿಕೊಟ್ಟರು. ಎಂಬತ್ತು ತುಂಬಿರುವ ವಯೋವೃದ್ಧ. ತುಸುಗಾತ್ರ ಹೆಚ್ಚೆನಿಸುವ, ತುಸುಕುಳ್ಳಗಿನ ಪೈಕಿ ಎನ್ನಿಸುವ ದೇಹ, ಕೆಂಪುಬಣ್ಣ, ಮಿರಿಮಿರಿ ಮಿಂಚುವ ಹೊಳಪಿನ ಮುಖ, ನೀಟಾದ ಮೂಗು, ಕಣ್ಣು, ಎಲ್ಲಕ್ಕಿಂತ ಶುಭ್ರನಗೆ…
ನನ್ನ ಕೈಕುಲುಕುತ್ತ ನನ್ನವರ ಕಡೆ ತಿರುಗಿ, ‘ಹೇ, ಯೂ, ಯುವರ್ ವೈಫ್ ಈಸ್ ಬ್ಯೂಟಿಫುಲ್. ಇಂಡಿಯನ್ ಬ್ಯೂಟಿ, ಇಂಡಿಯನ್ ಸ್ಯಾರಿ, ಪ್ರಿಟ್ಟಿ, ವೆರಿ ಪ್ರಿಟ್ಟಿ ‘ ಎಂದು ಬಾಯಿತುಂಬ ನಕ್ಕು, ಕಾರಿನೆಡೆಗೆ ಹೋಗುತ್ತಿದ್ದಂತೆ, ‘ಮೈ ಫ್ರೆಂಡ್, ಯುವರ್ ಸೀಟ್ ಈಸ್ ಬ್ಯಾಕ್. ಸೀಟ್ ನೆಕ್ಸ್ಟ್ ಟು ಮಿ ಈಸ್, ಫಾರ್ ದಿಸ್ ಬ್ಯೂಟಿಫುಲ್ ಲೇಡಿ..’ ಎಂದು ನಗುತ್ತಾ, ಮುಂದಿನ ತಮ್ಮ ಪಕ್ಕದ ಸೀಟಿನೆಡೆಯ ಬಾಗಿಲ ತೆರೆದು, ‘ವೆಲ್ಕಮ್ ಮಿಸ್ಸೆಸ್ ಕೂಮಾರ್ ‘, ಎಂದಾಗ, ನನಗೊಂದಿಷ್ಟು ಸಂಕೋಚ. ಆದರೆ, ಇದು ಅವರ ಶಿಷ್ಟಾಚಾರ. ‘ಲೇಡೀಸ್ ಫಸ್ಟ್’ ಎಂದು ಹೆಂಗಸರಿಗೆ ಅವರು ತೋರುವ ಗೌರವ.
ಒಳಗೆ ಕೂತೆ. ಕಾರು ಆ ಹಳ್ಳಿಗೆ ಓಡಿತು. ಹಾದಿಯುದ್ದ ಹಿಂಬಾಲಿಸಿತ್ತು ‘ಜೊರ್ರೋ…’ ಎಂದು ಸುರಿವ ಮಳೆ. ಎಲ್ಲಿ ನೋಡಲಿ, ಹಸಿರೋ ಹಸಿರು, ಜಾರುವಬಂಡೆಯಷ್ಟು ನಯದ ಹಾದಿ, ಎಲ್ಲೋ ಆಗೊಂದು ಈಗೊಂದು ಕಾರು… ಒಟ್ಟಾರೆ ತುಂಬ ಚಂದವಿತ್ತು. ಮನೆ ಬಂದಿತು. ಕಾರಿಂದಲೇ ರಿಮೋಟ್ನಲ್ಲಿ ಗರಾಜ್ ಬಾಗಿಲು ತೆರೆದು ಕಾರು ಒಳನುಗ್ಗಿಸಿದರು. ಹೊರಬಂದು. ಮತ್ತೆ ರಿಮೋಟ್ನಿಂದ ಬಾಗಿಲಮುಚ್ಚಿ, ಪಕ್ಕದಲ್ಲೇ ಇದ್ದ ಮೆಟ್ಟಿಲುಗಳ ಹತ್ತಿ, ಬಾಗಿಲಬಳಿ ನಿಂತು, ‘ವೆಲ್ಕಮ್ ಲೇಡಿ’ ಎಂದು, ತಮ್ಮ ಬಳಿಯಿದ್ದ ಕೀಯಿಂದ ಬೀಗ ತೆರೆವಾಗಲೇ, ಒಳಗಿಂದ, ಮಿಸ್ಸೆಸ್.ಲುಟ್ಝ್ ಇದೀಗ ಬಾಗಿಲಬಳಿ ಬರುತ್ತಿದ್ದರು. ‘ಓ ಹನಿ, ಸೀ ದಿಸ್ ಪ್ರಿಟ್ಟಿ ಲೇಡಿ’ ಎನ್ನುವುದನ್ನು ಜರ್ಮನ್ ಭಾಷೆಯಲ್ಲಿ ಹೇಳುತ್ತ, ಹೆಂಡತಿಯ ತುಟಿಗೆ ನನ್ನೆದುರೇ ಮುತ್ತಿಕ್ಕಿದಾಗ ನನಗೆ ಇನ್ನೂ ಸಂಕೋಚವಾಯ್ತು.
ಇವೆಲ್ಲಾ ನಾ ಕಂಡಿಲ್ಲವೆಂದಲ್ಲ. ಪಾಶ್ಚಾತ್ಯರಲ್ಲಿ ಈ ‘ಗೆಸ್ಚರ್’ ಕಾಮನ್ ಎನ್ನುವುದು ಎಲ್ಲ ಪ್ರವಾಸದಲ್ಲೂ ಕಂಡ ಸಂಗತಿ. ಆದರೆ, ಅವರಾರೂ ಗೊತ್ತಿಲ್ಲದವರು. ಇಲ್ಲಿ ಹಾಗಲ್ಲ, ಇರುವ ನಾಲ್ಕೇ ಮಂದಿಯ ಮಧ್ಯೆ….? ‘ಛೇ, ಇವರಿಗಂತೂ ಯಾವ ಎಗ್ಗೂ ಇಲ್ಲ, ‘ಬಿಂದಾಸರು’, ಗಂಡ-ಗುಂಡಿ ಇಬ್ಬರೇ ಇರುವ ಸಂಸ್ಕೃತಿ, ಭೂತ-ಭವಿಷ್ಯತ್ತಿನ ಬಗ್ಗೆ ಕುರಿತು ಚಿಂತಿಸದ, ಹಚ್ಚಿಕೊಳ್ಳದ ನಿರಾಳಜೀವಿಗಳು, ನಮ್ಮಂತೆ ‘ಸೆಂಟಿಮೆಂಟಲ್ ಫೂಲ್’ಗಳಲ್ಲ, ಮಕ್ಕಳ ಬಗ್ಗೆಯೂ ಅಟ್ಯಾಚ್ಮೆಂಟೇ ಇರಲ್ಲ’….ಇಂಥ ಒಂದು ಕೂಪಮಂಡೂಕದ ಯೋಚನೆ ಒಂದುಕ್ಷಣ ಮನಸಿನಲ್ಲಿ ಹಾಯ್ದಿತು..
ಆಕೆ ಕೂಡ ಎಂಬತ್ತರ ವಯಸ್ಸಿನವರು. ಮುಖ ಪೂರ್ತಿ ನಿರಿಗೆಗಳಿಂದ ತುಂಬಿದೆ. ದೇಹ ಸ್ವಲ್ಪ ತೋರವೇ ಆದರೂ, ಟ್ರಿಮ್ ಆಗಿದ್ದಾರೆ. ‘ಗೂಟೆನ್ ಮಾಗೆನ್ ‘ ಎಂದರು. ಒಂದೇ ಒಂದು ಇಂಗ್ಲೀಷ್ ಪದ ಬಾರದು. ಈ ಜನರೇಷನ ನವರು ಹೀಗೇ. ಅವರಲ್ಲಿ ಮೊದಲು ತಾವೇ ಶ್ರೇಷ್ಠ, ತಮ್ಮ ಭಾಷೆಯೇ ಶ್ರೇಷ್ಠ ಎನ್ನುವ ಸ್ವಲ್ಪ ಆತ್ಮರತಿ ಇದ್ದಿತಂತೆ. ಹಾಗಾಗಿ ಅನಿವಾರ್ಯವಿಲ್ಲದಿದ್ದರೆ, ‘ನೋ ಇಂಗ್ಳೀಷ್’ ಎನ್ನುವ ಮನೋಭಾವ.
ನಾನು ಕಂಡ ಬಹುಮಂದಿ ಹೀಗೇ ಇದ್ದುದರಿಂದ, ಅವರು ಅವರ ಭಾಷೆ, ನಾನು ತಲೆಯಾಡಿಸುವುದು…ಆದರೇನು, ನನಗೆ ಅವರ ಶಿಷ್ಟಾಚಾರ ಇಷ್ಟವಾಯ್ತು. ನನಗೆ ಬಡಿದರೂ, ಜರ್ಮನ್ಭಾಷೆ ಬಾರದೆಂದು ಗೊತ್ತಿದ್ದರೂ, ಆಕೆ ನನ್ನನ್ನು ನೋಡುತ್ತಲೇ, ನನಗೇ ಹೇಳುತ್ತಿರುವಂತೆ ಪಟಪಟ ಮಾತನಾಡುತ್ತಿದ್ದರು. ಮಿ.ಲುಟ್ಜ್ ಅಥವಾ ನನ್ನವರೇ ಅದನ್ನು ನನಗೆ ಅನುವಾದಿಸಿ ಹೇಳ್ತಿದ್ದರು.
ಒಳಗಿನ ಪುಟ್ಟಕೋಣೆಗೆ ಕರೆದೊಯ್ದರು. ಅದೇ ಲಿವಿಂಗ್ ರೂಂ. ಮನೆ ಚಿಕ್ಕದು ಆದರೆ, ಬಹಳ ಅಚ್ಚುಕಟ್ಟು. ಅಲ್ಲಿ ಡೈನಿಂಗ್ ಟೇಬಲ್ ಮೇಲೆ ಆಗಲೇ, ದೊಡ್ಡದಾದ ಸ್ಟ್ರಾಬೆರ್ರಿ ಕೇಕ್, ಆಪಲ್ಕೇಕ್, ಎರಡು ಸೇರಿನ ಗಾತ್ರದ ಸುಂದರ ಕೆಟಲ್ಲಿನಲ್ಲಿ ಬ್ಲ್ಯಾಕ್ ಕಾಫಿ, ಪುಟ್ಟ ಕುಡಿಕೆಯಲ್ಲಿ ಹಾಲು ನಮಗಾಗಿ ಕಾಯುತ್ತಿತ್ತು. ಸರಿ, ತಿಂದು, ಕುಡಿದು ಮಾಡುತ್ತ ಪರಿಚಯ, ಹರಟೆಯಲ್ಲಿ ತೊಡಗುವಾಗ, ನಾ ಕಂಡ ಆ ದಂಪತಿಗಳ ಪರಸ್ಪರ ಹೃದಯಗಳ ರವಾನೆಯ ಸಂಕೇತಗಳು ನನಗೆ ಹೊಸತೇ ಭಾಷ್ಯ ತಿಳಿಸಿತು.
ಆಕೆಗೆ ಇಂಗ್ಳೀಷ್ ಬಾರದು. ಆದರೂ, ನಮಗರ್ಥವಾಗಿಯೇ ಆಗುತ್ತೆ ಅನ್ನುವ ಭಾವದಲ್ಲಿ ಅವರು ನನ್ನೊಂದಿಗೆ ತಮ್ಮ ಕುಟುಂಬದ ಹೋರಾಟ, ಕಷ್ಟಗಳು, ಜವಾಬ್ದಾರಿಯ ಪಡಿಪಾಟಲುಗಳೆಲ್ಲವನ್ನೂ ಹೇಳುತ್ತ ಹೋಗುವಾಗ, ಒಂದೊಂದು ಸರ್ತಿ ಭಾರದ ನಿಟ್ಟುಸಿರು, ಒಮ್ಮೊಮ್ಮೆ ಖುಷಿ, ತೃಪ್ತಿಯನಗು ಒಮ್ಮೊಮ್ಮೆ ಬೇಸರ, ನೋವು ಹೀಗೆ ಅವರು ಯಾವುದೇ ತೀವ್ರತರನಾದ ಭಾವ ಹೊರಹಾಕುತ್ತಿದ್ದರು. ಅವರ ಭಾರವಾದ ದನಿ ಗಂಟಲೊತ್ತಿದಾಗೆಲ್ಲಾ, ನನ್ನೊಡನೆ ಮಾತನಾಡುವ ಪತ್ನಿಯನ್ನೇ ಪ್ರೀತಿಯ ಕಂಗಳಿಂದ ನೋಡುತ್ತಿದ್ದ ‘ಲುಟ್ಝ್ ‘ತಕ್ಷಣವೇ, ‘ಹನೀ, ಐ ಲವ್ ಯೂ…’ ಎಂದು ತಮ್ಮ ಕೈಗಳಿಗೆ ಮುತ್ತಿಕ್ಕಿಕೊಂಡು ಗಾಳಿಯಲ್ಲಿ ಅವರೆಡೆಗೆ ತೇಲಿಬಿಡುತ್ತಿದ್ದರು. ಆಗ, ಆಕೆಯ ಮುಖ ನೋಡಬೇಕಿತ್ತು….! ಕ್ಷಣಕಾಲ ಮುಖದ ಮೇಲೆರಗಿದ ಹಳೆಯ ನೋವು, ಹಾಗೇ ಮಂಜಿನಂತೆ ಮಾಯವಾಗುತ್ತಿತ್ತು.
ಮದುವೆಯಾದರೂ ಮಗನಿನ್ನೂ ಓದುತ್ತಿದ್ದಾನೆ, ಹಾಗಾಗಿ ಅವನಿಗೆ ಆರ್ಥಿಕ ಸಹಾಯ ಮಾಡುವ ಅನಿವಾರ್ಯತೆ ತಮಗೆ ಎಂದಾಗಲೂ, ಪತಿಯ ‘ಫ್ಲೈಯಿಂಗ್ ಕಿಸ್ ‘ ಅವರೆಡೆ ಹಾರಿಬಂತು. ಇದು ಆಗಾಗ ವಿನಿಮಯವಾಗುತ್ತಿದ್ದ ಅವರ ಪ್ರೀತಿಯ ಹೃದಯಭಾಷೆ. ಮಧ್ಯೆಮಧ್ಯೆ ಅಲ್ಲಿಲ್ಲಿ ಓಡಾಡುವಾಗ, ಹತ್ತಿರ ಬಂದು ಪ್ರೀತಿಯಿಂದ ಅವರ ಬೆನ್ನು ಸವರಿ ತಮ್ಮ ಜಾಗದಲ್ಲಿ ಕೂತುಕೊಳ್ತಿದ್ದ ‘ಲುಟ್ಝ್’ ರನ್ನು ನೋಡ್ತಾ ನನಗೀಗ ಮುಜುಗರವಾಗಲಿಲ್ಲ, ಬದಲಾಗಿ ಬಹಳ ಗೌರವ, ಆಸಕ್ತಿ ಹುಟ್ಟಿತು. ನಾವು ಹೊರಡುವ ತನಕವೂ ಇವರ ಪ್ರೀತಿ ವಿನಿಮಯ ಹೀಗೆ ಸಭ್ಯವಾಗಿ, ನಿರಾತಂಕವಾಗಿ, ಯಾವುದೇ ಮುಜುಗರ, ದಾಕ್ಷಿಣ್ಯಗಳಿಲ್ಲದೆ ಆಕಾಶಕ್ಕೂ-ಭೂಮಿಗೂ ಬೆಸುಗೆ ಹಾಕಿದ ಸುಂದರ ಕಾಮನಬಿಲ್ಲಂತೆ ಅರಳಿಕೊಂಡೇ ಇತ್ತು..
ಈಗ, ಲುಟ್ಝ್ ಹೇಳಿದರು, ‘ಯೂ ಸೀ, ನಿಮ್ಮಂಥ ಕೂಡು ಕುಟುಂಬ ನಮಗೂ ಇಷ್ಟ. ಆದರೆ, ಇಲ್ಲಿ ಅದು ಸಾಧ್ಯವಿಲ್ಲ. ಸಂಗಾತಿಗಳು ಒಟ್ಟಿಗೇ ಇರುತ್ತೇವೆ, ಆದರೆ, ಮಕ್ಕಳು ಇರುವ ಸಮಾಜ ನಮ್ಮದಲ್ಲ. ಆದರೆ, ನನಗೀಗ ಎಂಬತ್ತೆರಡು ವರ್ಷ. ಹೆಂಡತಿಗೆ ಎಂಬತ್ತೊಂದು. ಒಮ್ಮೊಮ್ಮೆ ನಮ್ಮ ಕೆಲಸವೇ ನಮಗೆ ಹೊರೆಯಾಗಿಬಿಡುತ್ತೆ. ‘ಮಕ್ಕಳಿದ್ದರೇ…’ ನಾನು ನಿರಾಳವಾಗಿರಬಹುದಿತ್ತು ಎನ್ನಿಸಿಬಿಡುತ್ತದೆ. ಮೂವರೂ ಮೂರು ದಿಕ್ಕು. ಮಕ್ಕಳ ಅನುಪಸ್ಥಿತಿ ಅದ್ಯಾಕೋ ಈಗೀಗ ತುಂಬ ಕಾಡುತ್ತಿದೆ….’ ಎಂದು ಹನಿಗಣ್ಣಾದರು. ಬಹುಷಃ, ಅವರ ಹೃದಯ ತೊಂದರೆ ಅವರೊಳಗನ್ನು ಕಲಮಲಿಸಿತ್ತೇನೋ…!
ಫೋನ್ ‘ಟ್ರಿನ್’ಗುಟ್ಟಿತು. ‘ಹನೀ…’ಎನ್ನುತ್ತ ದಢಕ್ಕನೆ ಎದ್ದು ಫೋನ್ ಬಳಿ ಹೋದರು. ‘ಹಾಯ್ ಡ್ಯಾಡ್, ಗೂಟೆನ್ ಮಾಗೆನ್. ‘ಹ್ಯಾಪಿ ಫಾದರ್ಸ್ ಡೇ..’ ಹತ್ತಿರವಿದ್ದ ನನಗೆ ಈ ಮಾತು ಕ್ಷೀಣವಾಗಿ ಕೇಳಿಸಿತು. ಹೌದು, ಈ ದಿನ ‘ಫಾದರ್ಸ್ ಡೇ’ ನೆನಪಾಯಿತು. ಈಗ, ಲುಟ್ಝರ ಮುಖ ಅರಳಿತು. ಕಣ್ಣುಗಳಲ್ಲಿ ಕಾಂತಿ ಉಕ್ಕಿತು. ಬಹುಷಃ, ಅವರು ಮಕ್ಕಳ ಕರೆಗಾಗಿಯೇ ಕಾಯುತ್ತಿದ್ದರೇನೋ…! ಫಾದರ್ಸ್ ಡೇ ದಿನ ತಮ್ಮನ್ನು ನೆನಪಿಸಿಕೊಂಡು ವಿಶ್ ಮಾಡಿದ ಮಗನ ಚರ್ಯೆಗೆ ಹಿರಿಹಿರಿ ಹಿಗ್ಗುತ್ತ, ‘ಥ್ಯಾಂಕ್ ಯೂ ಸನ್..’ಎಂದಾಗ, ಕಣ್ಣು ಜಿನುಗಿದಂತೆ ನನಗೆ ಕಂಡಿತು.
ಫೋನ್ ಇಟ್ಟಮೇಲೆ ‘ಮೈ ಸನ್…’ ಎಂದು ಹೇಳಿದರು. ಅವರ ಮುಖದಲ್ಲಿ ಸಾವಿರ ಕ್ಯಾಂಡಲ್ ಬಲ್ಬೊಂದು ಹೊತ್ತಿಕೊಂಡಂತೆ ನನಗನ್ನಿಸಿತು. ನಾವಲ್ಲಿದ್ದ ಸಮಯದಲ್ಲೇ ಮತ್ತಿಬ್ಬರು ಮಕ್ಕಳೂ ಫೋನಿಸಿ ವಿಶ್ ಮಾಡಿದರು. ಈಗ ದಂಪತಿಗಳು ಗೆಲುವಾದರು.
ಪೂರ್ವವೋ, ಪಶ್ಚಿಮವೋ-ಉತ್ತರವೋ, ದಕ್ಷಿಣವೋ ಎಲ್ಲಿದ್ದರೇನು, ಮಾನವಸಂಬಂಧಗಳು, ಭಾವನೆಗಳು, ಅಂತಃಕರಣ ಎಲ್ಲವೂ ಒಂದೇ, ಅದು ಮನುಷ್ಯ ಸಹಜವಾದ್ದು. ಕರುಳಿನ ಕಕ್ಕುಲತೆ ಪ್ರಾಣಿಗಳಲ್ಲೇ ಅಗಾಧವಾಗಿ ಕಂಡುಬರುವಾಗ, ಮನುಜ ಮಾತ್ರದವರಲ್ಲಿ ತೂಕ ಅದೆಷ್ಟು ಹೆಚ್ಚಿಗಿದ್ದೀತು….!
ಎಲ್ಲವನ್ನೂ ನೋಡುತ್ತ, ಕೇಳುತ್ತ ಕುಳಿತಿದ್ದ ನನಗೆ ‘ಛೇ, ನಾನೇನೆಲ್ಲ ಅಂದ್ಕೊಂಡಿದ್ದೆ. ಇವರಿಗೂ ನಮ್ಮಂತೆ ಕಷ್ಟ, ಜವಾಬ್ದಾರಿ, ಕರುಳಿನ ಸೆಳೆತ ಎಲ್ಲ ಇವೆ. ಬಾಹ್ಯಕ್ಕೆ ಕಂಡ ಅವರ ಬದುಕು ಬಿಂದಾಸ್, ನಿರಾಳ ಎಂದು ನಿರ್ಧರಿಸಿಬಿಡುವುದು ಎಷ್ಟು ತಪ್ಪು. ವೃದ್ಧಾಪ್ಯದಲ್ಲಿ ಮಕ್ಕಳು ಹತ್ತಿರವಿಲ್ಲದ ಅವರ ಒಂಟಿತನದ ಬದುಕು ಒಂದಷ್ಟು ಯಾತನಾಮಯವೇ ಹೌದು ಎನ್ನಿಸಿತು.
ಜೊತೆಯಲ್ಲೇ, ನಮ್ಮ ನೆಲದಲ್ಲಿ ಬೀಸಿ, ನಮ್ಮ ಮೌಲ್ಯಗಳನ್ನೂ ಧೂಳಾಗಿಸುತ್ತಿರುವ ಅನುಕರಣೆಗಾಳಿಯ ಅವಾಂತರವೂ ಎದೆಗಣ್ಣಿಗೆ ರಾಚಿತು. ನಮ್ಮಲ್ಲಿ ತಾನೇ ಮಕ್ಕಳು ಜೊತೆಗೆಲ್ಲಿ ಇರುತ್ತಾರೆ…? ವೃದ್ಧಾಪ್ಯದ ಒಂಟಿತನ, ವೃದ್ಧಾಶ್ರಮ ಇಲ್ಲಿ ಸರ್ವೇಸಾಮಾನ್ಯ ಎನ್ನುವ ನಿಲುವಿಗೆ ಬಂದು ಕೂತಿದೆ. ಅವರಿಗೇನೋ ಶತಶತಮಾನಗಳಿಂದ ನಡೆದು ಬಂದ ಪದ್ಧತಿ, ಅವರಿಗದು ಸಹಜ…ಆದರೆ, ನಮ್ಮ ನೆಲಕ್ಕೆ….?
‘ನಾವೂ ನಿಮ್ಮಂತೆ ಹತಾಶರಾಗುತ್ತಿದ್ದೀವಿ….’ ಮೌನದಲ್ಲಿ ಸ್ವಗತಿಸಿಕೊಂಡೆ.
ಅವರನ್ನು ಬೀಳ್ಕೊಂಡು ಹೊರಬಂದಾಗ, ಆ ವಿದೇಶೀಯರ ಆಂತರ್ಯಕ್ಕಿಳಿದು ಕಂಡುಕೊಂಡ ಹೊಸಸಂಗತಿಗೆ ಕಣ್ಣು ತೇವವಾಗಿತ್ತು, ಮನಸ್ಸು ಚೂರು ಭಾರವಾಗಿತ್ತು.
ಈ ‘ಫಾದರ್ಸ್ ಡೇ’ ಜಗದಲ್ಲಿನ ಎಲ್ಲ ತಂದೆಯರ ಕರುಳ ಕಳವಳವನ್ನೂ ದೂರಮಾಡಲಿ ಎಂದೇನೋ ಆಶಿಸಬಹುದು. ಆದರೆ, ಕಾಲನ ಕಾಲಡಿಯಲ್ಲಿ ಮಾತ್ರ ಇದಕ್ಕೆ ಉತ್ತರ…ಇರಲಿ,
‘ಹ್ಯಾಪಿ ಫಾದರ್ಸ್ ಡೇ…’





Really heart touching mam thank u for great article
Thank you Vihiyavare…..