ಆರ್ ವಿಜಯರಾಘವನ್
ಬಲು ಹಿಂದೆ, ಹಗಲಿರುಳುಗಳಿಲ್ಲದಿದ್ದಾಗ, ಬೀಸುವ ಗಾಳಿಗೆ ಸದ್ದಿಲ್ಲದಿದ್ದಾಗ, ಸ್ಪರ್ಶಮಾತ್ರಕ್ಕೆ ಅನುಭವಕ್ಕೆ ಅದು ದಕ್ಕುತ್ತಿದ್ದಾಗ ನಡೆದಾಡಬಲ್ಲ ಜನರಿದ್ದರು, ಅವರು ಹಾರಬಲ್ಲವರೂ ಆಗಿದ್ದರು. ಅವರು ಕಣ್ಣಿದ್ದವರು. ಆದರೆ ಅವರು ಮಗುವಾಗಿ ಮಾತು ಬರುವ ಮೊದಲೇ ಮುಗ್ಧತೆ ಕಳೆದ ಕಾರಣವಾಗಿ ಕಣ್ಣುಗಳಿಗೆ ಮೃದುವಾದ ಹಗ್ಗದ ಹುರಿಯ ಗಾಂಧಾರಿ ಪಟ್ಟಿಯನ್ನ ಕಟ್ಟಿಕೊಂಡಿದ್ದರು. ಯಾರು ಯಾವುದನ್ನು ಕಂಡರಿಯರೋ ಅದನ್ನು ಯಾರೂ ವಿವರಿಸಲಾರರು. ಮುಗ್ಧತೆಯಳಿದ ಮೇಲೆ ವಿಶ್ವದ ಶುದ್ಧತೆಯನ್ನು ಎಂದೂ ಕಾಣಲಾಗದು ಎಂದೇ ಅವರು ಭಾವಿಸಿದ್ದರು. ಅವರ ಕಣ್ಣುಗಳನ್ನ ಅಂತು ಕಟ್ಟಿದಮೇಲೆ ಅವರು ಸ್ಪರ್ಶ, ಗಂಧ, ನಾದಗಳನ್ನು ಅನುಭವಿಸಲು ತೊಡಗಿದರು. ತಮ್ಮ ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳಲು, ಕಾಡಿಗೆ ತೆರಳಿ ಬೇಟೆಯಾಡಲು ತೊಡಗುತ್ತಿದ್ದರು. ಮೀನು ಹಿಡಿಯಲು ಸಾಗರಕ್ಕೆ ಹಾರುತ್ತಿದ್ದರು. ತಮಗೆ ಅಪರಿಚಿತವಾದ ಸದ್ದೇನಾದರೂ ಕೇಳಿಬಂದರೆ, ಅದೇನಾದರೂ ಅಪಾಯಕಾರಿಯಂತೆ ತೋರಿದರೆ ಅದರ ಮೂಲವನ್ನು ಹುಡುಕಿ ನಿರ್ಮೂಲ ಮಾಡುತ್ತಿದ್ದರು. ಕುರುಡರು ಎಷ್ಟು ನೆಮ್ಮದಿಯಿಂದ ಇರಬಹುದೋ ಅಷ್ಟು ನೆಮ್ಮದಿಯಿಂದ ಅವರು ಬದುಕು ಸಾಗಿಸುತ್ತಿದ್ದರು.
ಏನಾಯಿತೋ, ಹೇಗಾಯಿತೋ ಯಾರೂ ಅರಿಯರು. ಥಟ್ಟನೆ ಅವರೆಲ್ಲರಿಗೂ ಏನೊಂದೂ ಕೇಳದಾಯಿತು, ಯಾವ ವಾಸನೆಯೂ ಹತ್ತದಾಯಿತು, ಸ್ಪರ್ಶಜ್ಞಾನವೇ ಇಲ್ಲವಾಗಿಹೋಯಿತು. ಅವರು ಅಂಜಿಕೊಂಡುಬಿಟ್ಟರು. ತಮ್ಮ ರಕ್ಷಾಕವಚಗಳನ್ನು ತೊಟ್ಟು ಊರಿನಾಚೆ ಅಡಗಿ ಕುಳಿತರು. ಅಂಜಿಕೆಗೆ ಕಾರಣವಾದುದಕ್ಕೆ ಕಾದರು. ಕಾದು ಕಾದು ಆ ಜನ ಹಸಿವಿನಿಂದ ಸಾಯತೊಡಗಿದರು. ಕೆಲವರು ಮುಂದೆ ಹೋಗಿ ತಮ್ಮವರ ಭಲ್ಲೆಗಳಿಗೆ ಸಿಕ್ಕಿ ಸತ್ತರು.

ಆ ಊರಿನ ಎಲ್ಲರಿಗಿಂತಲೂ ಕಿರಿಯಳಾದ ಒಬ್ಬ ಹೆಣ್ಣು ಮಗಳು ತನ್ನ ಕಣ್ಣುಪಟ್ಟಿಯನ್ನು ಕಿತ್ತೆಸೆಯಲು ನಿರ್ಧರಿಸಿದಳು. ಪಟ್ಟಿಯನ್ನು ಬಿಚ್ಚಿದೊಡನೆಯೇ ಪ್ರಖರ ಸೂರ್ಯಕಿರಣಗಳು ಅವಳ ಕಣ್ಣುಗಳನ್ನು ಪ್ರವೇಶಿಸಿದವು. ಅವಳು ಕೂಡಲೇ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ಅವಳಿಗೆ ಬೆಳಕಿನ ಭಯವಾಯಿತು. ಬೆಳಕೆಂದರೇನು ಎನ್ನುವುದು ಅವಳ ಸ್ಮೃತಿಯಲ್ಲಿ ಇದ್ದಿರಲಿಲ್ಲ.
ನಿಧಾನ ಅವಳು ಕಣ್ತೆರೆದು ನೋಡುವುದನ್ನು ಅಭ್ಯಾಸ ಮಾಡಿಕೊಂಡಳು. ಹಾಗೆ ಕಣ್ಣು ತೆರೆದ ಅವಳು ಕಂಡಿದ್ದು ಸಾಯುತ್ತಲಿದ್ದ ತನ್ನ ಜನರನ್ನು. ಸಾವೆನ್ನುವುದು ಏನೆಂದು ಅವಳಿಗೆ ಅರಿವಾಗದಿದ್ದರೂ ಅವರ ಸಾವು ಅವಳಿಗೆ ಅಪಾರ ವೇದನೆಯನ್ನು ತಂದಿತು. ಅವಳು ತನ್ನಿಂದ ಎಷ್ಟು ಜೋರಾಗಿ ಅಳುವುದು ಸಾಧ್ಯವೋ ಅಷ್ಟು ಜೋರಾಗಿ ಅತ್ತಳು. ಅವಳ ಅಳುವ ಧ್ವನಿ ಅವಳಿಗೇ ಕೇಳುತ್ತಿರಲಿಲ್ಲ. ಅವಳು ತನ್ನ ಜನ ಸಾಯುವುದನ್ನು ಅಸಹಾಯಳಾಗಿ ನೋಡುತ್ತಿದ್ದಳು. ದೂಃಖಿಸುತ್ತಿದ್ದಳು.
ಅದೆಷ್ಟು ದಿನ ಅವಳು ಹೀಗೆ ಅತ್ತಳೋ, ಒಂದು ದಿನ ಅವಳಿಗೆ ತನ್ನ ದನಿ ಕೇಳಲಾರಂಭಿಸಿತು. ಹಾಗೆಯೇ ಅವಳ ಜನಗಳೂ ಶಬ್ದವನ್ನು ಕೇಳಲಾರಂಭಿಸಿದರು. ಆಕೆ ತನ್ನ ದುಗುಡವನ್ನು ಹಾಡಿಕೊಳ್ಳಲು ಪ್ರಾರಂಭಿಸಿದಳು. ಅವಳು ತನ್ನ ಜನರನ್ನು ಅವರ ಹೆಸರು ಹಿಡಿದು ಕರೆಯುತ್ತಿದ್ದಳು. ತಾನು ಕಂಡಿರುವುದನ್ನು ವರಿಗೆ ವರ್ಣಿಸುತ್ತಿದ್ದಳು; ಸೂರ್ಯ, ಸೂರ್ಯನ ಕಿರಣ, ಸೂರ್ಯೋದಯ, ಸೂರ್ಯಾಸ್ತ, ಇರುಳು, ಇರುಳಿನಾಗಸದ ತಾರೆಗಳು ಹೀಗೆ ಕಾಣುವವೆಲ್ಲವೂ ಅವಳ ವರ್ಣನೆಗೆ ವಸ್ತುಗಳಾದವು.
ಹೀಗೆ ಅವಳು ತನ್ನ ಜನರನ್ನು ಬದುಕು ಉಳಿಸಿಕೊಂಡಳು. ಮುಗ್ಧತೆಯಿಂದ ಹೊರಬರುವುದು ವಿಶ್ವದ ಪಾವಿತ್ರ್ಯವನ್ನು, ಪರಿಶುದ್ಧತೆಯನ್ನು ಹಾಳುಗೆಡವದು ಎನ್ನುವುದನ್ನು, ಬದಲಿಗೆ ಅದು ಆ ಶುದ್ಧತೆಯನ್ನು ಮತ್ತಷ್ಟು ಉತ್ತಮಗೊಳಿಸುವುದು ಎಂಬುದನ್ನು ಕಂಡುಕೊಳ್ಳಲು ಅವರಿಗೊಂದು ಅವಕಾಶ ಕಲ್ಪಿಸಿಕೊಟ್ಟಳು.
ಆ ಆಳ ಅರಿವು ಯಾವ ಸಂಕೀರ್ಣತೆಯನ್ನು ಕುರಿತು ತನ್ನ ಜನರು ಹೆದರಿದ್ದರೋ ಅದನ್ನು ಅರಿಯಲು ಸಹಾಯಮಾಡಿತು.
ಇದು ನಾನು ಚಿಕ್ಕಂದಿನಲ್ಲಿ ಕೇಳಿದ ಹಲವು ಕಥೆಗಳಲ್ಲಿ ಒಂದು. ಇದು ನನಗೆ ವಿವರಿಸಿಕೊಟ್ಟಿದ್ದು ಅಪಾಯವು ಅನ್ವೇಷಣೆಗೆ ಹಚ್ಚುವುದರ ಸೂಕ್ಷ್ಮವನ್ನು, ಬದುಕಿನ ಅನಂತ ಸಾಧ್ಯತೆಗಳನ್ನು, ಭರವಸೆಯು ಶೂನ್ಯವಾದ ಸಂದರ್ಭಗಳಲ್ಲಿ ತುಂಬಬಹುದಾದ ಭರವಸೆಯ ಸೆಲೆಯನ್ನು, ಅರ್ಥಪೂರ್ಣವಾದೊಂದೇ ಬಗೆಯಲ್ಲಿ ಬದುಕು ಸಾಗುವುದನ್ನು. ಈ ಕಥೆಯು ಕಲಿಸಿದ ಪಾಠಗಳು ನನ್ನ ನೆತ್ತರ ನಾಳಗಳಲ್ಲಿ ತುಂಬಿಕೊಂಡಿವೆ. ಬದುಕಿನ ಅನುಭವಗಳು ನನ್ನ ಬದುಕನ್ನು ರೂಪಿಸಿವೆ.
ಇಸ್ಮಾಯಿಲ್ ಬಿಯಾ
Weeping Unfamiliar Tears, Dedicated to the people of Darfur : writings on fear, risk, and hope / edited by Luke Reynolds and Jennifer Reynolds; foreword by George Saunders.






ಚೆನ್ನಾಗಿದೆ.
ಅರಿವು ಅಹಂಕಾರವನ್ನು ಉದ್ದೀಪಿಸಬೇಕಾಗಿಲ್ಲ ಅದು ಗುರುವೂ ಆಗಬಲ್ಲುದು ಎಂಬುದನ್ನು ಪ್ರತೀಕತ್ಮಕವಾಗಿ ಹೇಳುವ ….ನಿಮ್ಮ ಕತೆ ಚೆನ್ನಾಗಿದೆ
ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್ ಓದು ಖುಷಿ ಕೊಡ್ತು