
ರಾಜಕುಮಾರ್ ಮಡಿವಾಳರ
ಶಿವಮೊಗ್ಗ ಸುಬ್ಬಣ್ಣನವರು, “ಆನಂದಮಯ” ಹಾಡಿಗೂ ಆನಂದ ತುಂಬಿಕೊಟ್ಟವರು! ಆ ಹಾಡು, ಆ ಹಾಡಿನ ಕನ್ನಡ ಅದು ಸುಬ್ಬಣ್ಣನವರ ಶಾರೀರಕ್ಕೆ ಹೇಳಿ ಮಾಡಿಸಿದ್ದು, ಸಾಹಿತ್ಯ ಮತ್ತು ಶಾರೀರ ಮೇಡ್ ಫಾರ್ ಈಚ್ ಅದರ್ ಅನ್ನವಂತಿತ್ತು.
ಆ ಅಂತಹ ಸುಬ್ಬಣ್ಣನವರೇ ಹಾಡಿದ “ಕಾಡು ಕುದುರೆ ಓಡಿ ಬಂದಿತ್ತಾ” ಹಾಡಿನ, ಅಲ್ಲಿನ ಶಾರೀರದ್ದು ಮಾತ್ರ ಪವಾಡ, ಕಂಬಾರರ ಹಾಡು, ನಮ್ಮ ಕಡೆಯ ಕನ್ನಡ, ಲಾವಣಿ, ಸಣ್ಣಾಟದ ಝಲಕ್, ಜನಪದ ಬೇರಿನಿಂದ ಯಾವ ನಾಜೂಕಿಲ್ಲದ ಕಾಂಡದ ತುದಿಯಲ್ಲಿ ಅರಳಿದ ಕಾಡು ಹೂ. ಧ್ವನಿ, ಮಾತು, ಸ್ವಭಾವ, ಮನಸು, ಇವೆಲ್ಲವುಗಳ ಸಾತ್ವಿಕ ರೂಪದ ಅವತಾರ ಸುಬ್ಬಣ್ಣನವರು, ಕಾಡು ಕುದುರೆಗೆ ತಮ್ಮ ಧನಿಯಿಂದಲೇ ಕಾಡುತನದ ಜೀವಂತಿಕೆ ತುಂಬಿಬಿಟ್ಟರು.
ಕನ್ನಡ ಚಿತ್ರರಂಗದಲ್ಲಿ…
ಹಾಡುಗಳ ಮುಖೇನ ಎರಡು ಕುದುರೆಗಳು ಯಾವತ್ತೂ ಅಮರ, ಒಂದು ಸುಬ್ಬಣ್ಣನವರ ಧನಿಯ ಕಾಡು ಕುದುರೆ, ಇನ್ನೊಂದು ಡಾ. ರಾಜಕುಮಾರರ ಧನಿಯಲ್ಲಿ ಅಶ್ವಮೇಧದ ಕುದುರೆ. ಎರಡು ಕುದುರೆಗಳೂ ಸಾಹಿತ್ಯ, ಸಂಗೀತ, ಕಂಠ ಇವುಗಳಿಂದ ಸುಪುಷ್ಠ ಕುದುರೆಗಳೆ.

ಅವತ್ತು ಅಣ್ಣಾವ್ರು, ಇವತ್ತು ಸುಬ್ಬಣ್ಣ…
ನಿರ್ಗಮಿಸುವುದರೊಂದಿಗೆ , ಕನ್ನಡದ ಮಕ್ಕಳು ಕನ್ನಡ ಇರುವತನಕ ಕುದುರೆ ಆಡಿಕೊಳ್ಳಲಿ-ಹಾಡಿಕೊಳ್ಳಲಿ ಅನ್ನುತ್ತ, ಎಂದೂ ಸಾಯದ ಜೀವಂತಿಕೆ ಹಾಡಲ್ಲಿ ತುಂಬಿ ಹೋಗಿದ್ದಾರೆ.
ಕಣ್ಣು ಮುಚ್ಚಿ…
ಧ್ಯಾನಸ್ಥ ಅನ್ನುವಂತಹ ಸ್ಥಿತಿಗಿಳಿದು ಹಾಡಿದ್ದನ್ನು ನೋಡಿದ್ದೆ. ಕಣ್ತೆರೆದಾಗ ಆಸುಪಾಸು ಝಳಪಿಸುವ ನಿಮ್ಮ ಕಣ್ಣಿನೊಳಗಿನ ಸಣ್ಣ ಖಡ್ಗವನ್ನೂ ಕಂಡಿರುವೆ. ನಿಮ್ಮ ನೆನಪೆ ಆನಂದಮಯ, ಈ ಜಗಹೃದಯ-
ಕ್ಕೆ.






0 Comments