ಕಣಿವೆಯ ಭಾರದ್ವಾಜರ ‘ಕ್ರಮಣ’

ಧ್ವನಿಪೂರ್ಣವಾಗಿ ಮಾತನಾಡುವ ’ಕ್ರಮಣ’

ಸ್ಮಿತಾ ಅಮೃತರಾಜ್, ಸಂಪಾಜೆ

ತಾನೊಬ್ಬ ಅದ್ಭುತ ಕತೆಗಾರ ಅನ್ನುವ ಯಾವ ಹಮ್ಮುಬಿಮ್ಮುಗಳಿಲ್ಲದೆ, ತಾನು ಏನನ್ನೂ ಬರೆದೇ ಇಲ್ಲ ಎನ್ನುವಂತೆ ನಿರ್ಲಿಪ್ತವಾಗಿ ಸಾಮಾನ್ಯರಂತೆ ಬದುಕುತ್ತಿರುವ  ಭಾರದ್ವಜ ಕೆ. ಆನಂದತೀರ್ಥರು ಕಣಿವೆ ಭಾರದ್ವಾಜರೆಂದೇ ಚಿರಪರಿಚಿತ. ಈಗಾಗಲೇ ಸಾಕಷ್ಟು ಕೃತಿಗಳನ್ನ ಬರೆದಿದ್ದರೂ ಇಲ್ಲಿ ತನಕ ಅವುಗಳನ್ನು ನಾನು ಓದಿಕೊಂಡೇ ಇರಲಿಲ್ಲ. ಕಳೆದೆರಡು ವರ್ಷ ಕೊಡಗಿನಲ್ಲಿ ಕಂಡೂ ಕೇಳರಿಯದಂತ  ದುರಂತ ಸಂಭವಿಸಿತು. ಅಲ್ಲಿಯ ಸಾವು, ನೋವು, ದು:ಖದ ಸಾಗರದೊಳಗೆಯೂ ನಡೆದ ದೊಡ್ಡ ಮನುಷ್ಯರ ಸಣ್ಣತನ, ಕ್ರೌರ್ಯಗಳನ್ನು ಯಾವುದೇ ಭೀತಿಯಿಲ್ಲದೆ ನಿರ್ಬಿಡೆಯಿಂದ ಬರೆದ ಪುಸ್ತಕವನ್ನು ನಾನು ಓದಿದ್ದೆ. ಅವರ ಎದೆಗಾರಿಕೆಯನ್ನು ಮೆಚ್ಚಿಕೊಂಡಿದ್ದೆ. ಇತ್ತೀಚೆಗೆ ಅವರ ಪರಿಚಯ ಆದರೂ ನನ್ನ ಇಂತಹ ಪುಸ್ತಕ ಬಂದಿದೆ ಓದಿ ಅಂತ ಅವರು ಹೇಳಿರಲೇ ಇಲ್ಲ.  ಗೆಳತಿ ಸುನೀತಾ ಕುಶಾಲನಗರರವರ ಮೂಲಕ ಕೈಸೇರಿದ ಅವರ ’ಕ್ರಮಣ ’ ಕಾದಂಬರಿಯನ್ನು ಬಲು ಉತ್ಸುಕತೆಯಿಂದ ಕೈಗೆತ್ತಿಕೊಂಡು  ಓದಿ ಮುಗಿಸಿದ್ದೇನೆಂದರೆ ಇದು ಅತಿಶಯೋಕ್ತಿಯಲ್ಲ.

ಕೊಡಗಿನಲ್ಲಿ ಇಷ್ಟು ಚೆನ್ನಾಗಿ ಬರವಣಿಗೆಯಲ್ಲಿ ಪಳಗಿಸಿಕೊಂಡ  ಕಾದಂಬರಿಕಾರರು ಇದ್ದಾರೆಂಬುದು ನಿಜಕ್ಕೂ ನನಗೆ ಗೊತ್ತಿರಲಿಲ್ಲ. ನಿಮಗೆ ಸಿಕ್ಕ ಪ್ರಚಾರ ಸಾಲದು ಏನೋ?, ಅಥವಾ ಇದು ನನ್ನ ಗ್ರಹಿಕೆಯ  ಮಿತಿಯೋ ಗೊತ್ತಿಲ್ಲ ಅಂತ  ಕಾದಂಬರಿ ಓದಿ ಮುಗಿದಾದನಂತರ ನಾನು ಅವರಲ್ಲಿ ಕೇಳಿದ ಮೊದಲ ಪ್ರಶ್ನೆಯಿದು. ನಿಮ್ಮ ‘ಕ್ರಮಣ’ ಕಾದಂಬರಿ ನಾಡಿನ ಪ್ರಮುಖ ಕೃತಿಗಳಲ್ಲಿ ಸೇರುವ ಎಲ್ಲ ಅರ್ಹತೆಯನ್ನು ಪಡೆದುಕೊಂಡಿದೆಯಂತ ಮನಸಾರೆ ಹೊಗಳಿದ್ದೆ. ಇದರಲ್ಲಿ ಉತ್ಪ್ರೇಕ್ಷೆಯೇನು ಇಲ್ಲ.

ಕಣಿವೆ ಭಾರದ್ವಾಜರ ಕಾದಂಬರಿ ಹೆಚ್ಚು ಮಾತನಾಡುವುದಿಲ್ಲ. ಕಡಿಮೆ ಸಾಲಿನಲ್ಲಿ ಧ್ವನಿಪೂರ್ಣವಾಗಿ ಹೇಳಬೇಕಾದುದ್ದನ್ನು ಹೇಳಿ ಮುಗಿಸುತ್ತದೆ. ಇದು ಅವರ ಬರಹದ ವೈಶಿಷ್ಟ್ಯತೆ. ಒಂದು ಕಾದಂಬರಿಯ ಪಾತ್ರದೊಂದಿಗೆ ಹುಸಿ ನಂಬಿಕೆಗಳನ್ನು ಸಾರಾಸಗಟಾಗಿ  ತಳ್ಳಿ ಹಾಕುವುದು, ನಂಬಿಕೆಯನ್ನು ಒಪ್ಪಿಕೊಂಡು ಬದುಕಿದಂತೆ ಅನ್ನಿಸಿದರೂ ಒಳಗೊಳಗೆ ಅದನ್ನು ಧಿಕ್ಕರಿಸುವುದು ಸುಲಭದ ಮಾತಲ್ಲ.  ವ್ಯವಸ್ಥೆಯ ಕೆಲವೊಂದು ಧೋರಣೆಗಳನ್ನು ತಿರಸ್ಕರಿಸುವುದು , ಓದುಗನನ್ನು ಯೋಚಿಸುವಂತೆ ಮಾಡುವುದು ಇಲ್ಲಿಯ ಪಾತ್ರಗಳ ಲಕ್ಷಣ.

ಸುಮ್ಮಗೆ ಕತೆ ಹುಟ್ಟಿ ಕತೆ ಇಲ್ಲಿ ಬೆಳೆಯುವುದಿಲ್ಲ. ಯಾವುದೋ ಉದ್ದೇಶ ಇಟ್ಟುಕೊಂಡೇ ಕತೆಗಳು ಚಲಿಸುತ್ತವೆ. ಹುಟ್ಟುವ ಪ್ರತೀ ಕತೆಯ ಹಿನ್ನಲೆಯೂ ಇಲ್ಲಿ ಮುಖ್ಯವಾಗುತ್ತದೆ. ಬ್ರಾಹ್ಮಣ ಮನೆತನದಲ್ಲಿ  ಅಂಗವೈಕಲ್ಯದಿಂದ  ಹುಟ್ಟಿದ ಹುಡುಗನೊಬ್ಬ ಕುಂಟನೆಂದೇ ಕರೆಸಿಕೊಂಡು ತಿರಸ್ಕೃತನಾಗುವುದು, ಅನಿವಾರ್ಯವಾಗಿ ಪೌರೋಹಿತ್ಯ ಮಾಡುವುದು, ಹುಟ್ಟಿನಿಂದ ಯಾರು ಬ್ರಾಹ್ಮಣರಲ್ಲ ಅನ್ನುವ ನಿಲುವಿಗೆ ಬದ್ಧನಾದ ಹುಡುಗ ತನ್ನ ವೈಫಲ್ಯವನ್ನು ಮೀರಲಿಕ್ಕೆ ಪೌರೋಹಿತ್ಯವನ್ನು ಮಾಡುತ್ತಲೇ ಒಳಗೊಳಗೆ ಅದನ್ನು ಪರೀಕ್ಷಿಸುತ್ತಲೇ ಧಿಕ್ಕರಿಸಿದ್ದು, ವಿಧವೆಯಾದ ಕುರುಬ ಹೆಣ್ಣುಮಗಳನ್ನು ಮದುವೆಯಾಗಿ ಕ್ರಾಂತಿ ಮಾಡಿದ್ದು, ಜನರ ಮೂಡನಂಬಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡು ಯಾವುದೋ ಒಂದು ಗಳಿಗೆಯಲ್ಲಿ ದೇವಿಯ ಆರಾಧಕನಾಗಿ ಜನರ ಆಶೋತ್ತರಗಳನ್ನು ಈಡೇರಿಸುವ ಮಹಿಮಾಪುರುಷನಾದದ್ದು, ಇವೆಲ್ಲದರ ಹಿಂದೆ ಅವಮಾನ, ನೋವು , ರೋಷ ಇದೆ.

ಕುಂಟನೆಂದು ಕರೆಸಿಕೊಳ್ಳುವಾಗ ಪಟ್ಟ ಹಿಂಸೆಯನ್ನ ತಾನೀಗ ದೇವಿಯ ಪೂಜಾರಿಯಾದ ಬಳಿಕ ತಾನು ಕುಂಟಶಾಸ್ತ್ರಿಯೆಂದು ವಿಳಾಸ ಕೊಡುವಷ್ಟರ ಮಟ್ಟಿಗೆ ಎಲ್ಲವನ್ನ ಮೀರಿ ಬೆಳೆದದ್ದು ಸೋಜಿಗವೇ. ಜನರ ನಂಬುಗೆಗೆ ಚ್ಯುತಿ ಬರದಂತೆ, ತಾಯತ, ಭಸ್ಮ, ಪ್ರಸಾದ ಕೊಡುತ್ತಲೇ ಮನೋಚಿಕಿತ್ಸೆಯ ಮೂಲಕವೇ ಜನರ ಸಂಕಷ್ಟಗಳನ್ನ ಪರಿಹರಿಸುತ್ತಿದ್ದದ್ದು, ಅದನ್ನು ಜನರು ಪವಾಡವೆಂದು ಬಗೆಯುವುದು, ಇದನ್ನು ನೋಡಿದಾಗ ನಮ್ಮ ವ್ಯವಸ್ಥೆಯ ಪೂರ್ವಗ್ರಹಪೀಡಿತ ಮನಸುಗಳ ವಿಡಂಬನೆಯನ್ನು ತೋರಿಸುವುದಕ್ಕೆ  ಕುಂಟ ಶಾಸ್ತ್ರಿ ರೂಪಕದಂತೆ ಗೋಚರಿಸುತ್ತಾರೆ. ನಡೆಯಲಾಗದ ತನ್ನ ಅಸಹಾಯಕತೆಯನ್ನು ಮೀರಲು ಮಗನನ್ನು ಅಪ್ರತಿಮ ಓಟಗಾರನಾಗಲು ಪ್ರೇರೇಪಿಸುತ್ತಾನೆ. ವ್ಯವಸ್ಥೆಯಲ್ಲಿ ಇದ್ದುಕೊಂಡೇ ವ್ಯವಸ್ಥೆಯನ್ನು ಮೀರುವ ಛಲ ಕುಂಟ ಶಾಸ್ತ್ರಿಯಲ್ಲಿ ಕಾಣುತ್ತದೆ.  ದೇವಿ ಪೂಜೆಯನ್ನೇ ಅಸ್ತ್ರವಾಗಿಸಿಕೊಂಡು ತಾನು ನಂಬಿದ ಸಿದ್ಧಾಂತಗಳನ್ನು ಅನುಸರಿಸುತ್ತಲೇ ಬದುಕಿನ ಸತ್ಯದರ್ಶನ ಮಾಡಿಸುವುದು ಪೊರೆ ಕಟ್ಟಿಕೊಂಡ ಜನರಿಗೆ ಕಾಣಿಸುವುದಿಲ್ಲ.

ಬದುಕಿನ ಸಂಧಿಗ್ದತೆಗಳಿಗೆ, ದ್ವಂದ್ವಗಳಿಗೆ ಮುಖಾಮುಖಿಯಾಗುವ ಕುಂಟ ಶಾಸ್ತ್ರಿಯ ಮಗ ಭಾರ್ಗವನ ಪಾತ್ರವೂ ಇಲ್ಲಿ ಬಹುಮುಖ್ಯವಾದದ್ದು. ಎಲ್ಲ ಚಟಗಳಿಗೆ ಅಂಟಿಯೂ ಅಂಟದಂತೆ  ಅಂತರ ಕಾಯ್ದುಕೊಂಡು ಆತನ ವ್ಯಕ್ತಿವವನ್ನು ಬಲು ಸಂಯಮದಿಂದ ಲೇಖಕರು ಇಲ್ಲಿ ನಿರ್ವಹಿಸಿದ್ದಾರೆ. ಒಂದು ಕುತೂಹಲಭರಿತ ಕತೆಯಂತೆ ಸರಿ ತಪ್ಪುಗಳ ತುಲನೆ ಮಾಡಿಕೊಂಡು ಆಳಕ್ಕಿಳಿದು ಓದಿಸಿಕೊಂಡು ಹೋಗುವ ಇಲ್ಲಿಯ ಕುಂಟ ಶಾಸ್ತ್ರಿಯ ಪಾತ್ರವನ್ನು ನಾವು ಅಲ್ಲೆಲ್ಲೋ ನೋಡಿದ್ದೇವೆ ಅನ್ನುವಷ್ಟರ ಮಟ್ಟಿಗೆ ಹುಡುಕಾಟ ಶುರುವಾಗುತ್ತದೆಯೆಂದರೆ ಅದು ಕಾದಂಬರಿಯ ಗೆಲುವು. ಕೆಲಸಗಾರ ಅಂಜಿ, ಮತ್ತೆ ಕುಡಿತ ಶುರು ಮಾಡಿದ ಅಂದರೆ ಆ ದಿನ ತನಗೆ ಸಾವು ಬರುತ್ತದೆ ಅಂತ ಆಣೆ ತೆಗೆದುಕೊಂಡ ಶಾಸ್ತ್ರೀ, ಯಾವುದೋ ಒಂದು ಗಳಿಗೆಯಲ್ಲಿ ಅಂಜಿಯ ಶಪಥ ಸಡಿಲಗೊಳ್ಳುವುದು, ತಿಳಿದ ಶಾಸ್ತ್ರೀ ತನ್ನ ನಿರ್ಣಯಕ್ಕೆ ಬದ್ಧರಾದಂತೆ ಸಾವನ್ನಪ್ಪುವುದು, ಇವೆಲ್ಲವೂ ಪವಾಡವೋ ಕಾಕತಾಳಿಯವೋ ಒಂದು ಗೊತ್ತಾಗದಂತೆ ಬೆಚ್ಚಿ ಬೀಳಿಸುವಂತೆ ಬಲು ಎಚ್ಚರಿಕೆಯಿಂದ ನಿರ್ವಹಿಸಿದ ಲೇಖಕರ  ಕಥನ ಕುಶಲಗಾರಿಕೆ ಮನಸು ತಲೆದೂಗುತ್ತದೆ.

ತನ್ನ ವೃತ್ತಿ ಜೀವನದ ಯಾವ ಸಂಗತಿಗಳು ಪವಾಡವಲ್ಲ ಅಂತ  ಪ್ರಾಮಾಣಿಕವಾಗಿ ಪತ್ರದ ಮೂಲಕ ಆತ್ಮನಿವೇದನೆ ಮಾಡಿಕೊಳ್ಳುವ ಪ್ರತಿ ಸಾಲುಗಳು ನಮ್ಮನ್ನು ದಿಗ್ಮೂಢರನಾಗಿಸುತ್ತವೆ.  ಶಾಸ್ತ್ರಿಗಳ ಬಯಕೆಯಂತೆ ಮಗ ಭಾರ್ಗವ ಕಾಶಿ ಯಾತ್ರೆಗೆ ಹೋಗುವುದು, ಅಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು  ರೋಚಕ ಸಂಗತಿಯೇ.  ಆದರೆ ಕಾದಂಬರಿಯ ಅಂತ್ಯ ತೀರಾ ಸಾಮಾನ್ಯವಾಗಿ  ನಮ್ಮ ತೀವ್ರ ಓದಿಗೆ ಭಂಗ ತಂದಿತೇನೋ ಅಂತ ಅನ್ನಿಸಿದ್ದು ಸುಳ್ಳಲ್ಲ. ಕನ್ನಡದ ಉತ್ತಮ ಕಾದಂಬರಿಗಳಲ್ಲಿ  ಒಂದು ಅಂತ ಪರಿಗಣಿಸಬಹುದಾದ ಕ್ರಮಣಕ್ಕೂ, ಲೇಖಕ ಕಣಿವೆ ಭಾರದ್ವಾಜರಿಗೂ ಅಭಿನಂದನೆಗಳು.

‍ಲೇಖಕರು avadhi

March 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: