ಕಡೆಯ ಶ್ರಾವಣ ಶನಿವಾರಕ್ಕೆ ಜೊತೆಬಿದ್ದ ಅರ್ಸ್ಯಾವೆ!

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ವರ್ಷಕ್ಕೆ ಒಮ್ಮೆ ನನ್ನ ಊರು ಶ್ರಾವಣವನ್ನು ಮೈದುಂಬಿಕೊಳ್ಳುವ ಪರಿ ಬೆರಗಿನದು. ಶ್ರಾವ್ಣ ಹುಟ್ತು, ಕಡ್ಯಾಗವತ್ಗೆ ಅರ್ಸ್ಯಾವೆ ಮಾಡ್ಬೇಕು. ಎಲ್ಲ ಒಂದಿಸ್ಕಮವತ್ಗೆ ಕಡೇ ಶ್ರಾವ್ಣ ಶೆನ್ವಾರ ಬಂದ್ಬಿಡುತ್ತೆ. ಗಾಡ್ಗಾಡ ಬೇಕಾದ್ದೆಲ್ಲಾ ಒಂದಿಸ್ಕಳ್ರಿ ಹೀಗೆ ಪ್ರತಿ ಮನೆಯ ಪಡಸಾಲೆಯಲ್ಲಿ ಅರ್ಸ್ಯಾವೆ ಕುರ್ತೆ ಮಾತುಗಳು. ಶ್ರಾವಣ ಮಾಸ ನಮ್ಮೂರಿಗೆ ಅಮರವೆಂಬಂತೆ ಬರುವುದೇ ವಿಶೇಷ.

ಊರಿನಲ್ಲಿ ಮನೆಗೊಬ್ಬರಂತೆ ಸೇರಿ ಕಡೇವಾರ ಒರಗ್ಳು ಗುಡಿತಗೆ ಆಗ್ಬೇಕಾದ ಎಲ್ಲವನ್ನೂ ಕುರಿತು ಸಿದ್ದ ಮಾಡ್ಕಂಡ್ರೆ ಊರು ಹೊಸದೊಂದು ಹಸಿರ ಚಲನೆಗೆ ಮುಖಾಮುಖಿಯಾಗಿ ಬಿಡುತ್ತದೆ. ಮಕ್ಳುಮರಿ ಸಂಭ್ರಮದ ತಟನಿಯೊಂದನ್ನು ಮನದಲ್ಲೇ ಹರಿಸಿಕೊಂಡು ಹಿಗ್ಗುವುದನ್ನು ಎದುರಿದ್ದೇ ನೋಡಬೇಕು. ಊರಿನಲ್ಲಿ ಇರುವ ದೈವ ಬೂತ್ರಾಯ.

ಈ ರಾಯ ಊರೊಳಗೊಂದು, ಹೊರಗೊಂದು ಜನರೇ ಕಟ್ಟಿಕೊಟ್ಟ ಆಸರೆಯ ತಾಣದಲ್ಲಿ ನೆಲೆಸಿದ್ದಾನೆ. ತಾವೇ ಶ್ರಮಿಸಿ ಪಡೆದುಕೊಂಡ ಫಲವನ್ನು ಆ ನಮ್ಮಪ್ಪ ಬೂತ್ರಾಯ್ಗೆ ಮಣೇವಾಕಿ ಆರ್ತಿ ಬೆಳ್ಗಿ ಒರಗ್ಳು ಗುಡಿತಗೆ ಜನೊಂದು ಜನ್ವೆಲ್ಲಾ ಪಂತಿಕುಂತು ಉಣ್ಣತಕ ಸಮಾಧಾನ ಇರಲ್ಲ. ಈ ಬೂತ್ರಾಯನ ಹೆಸರಿನಲ್ಲಿ ಊರಿನೆಲ್ಲ ಮನೆಗಳಲ್ಲಿ ಬತ್ತೇವು ಎತ್ತುವುದು ಕೂಡ ಒಂದು ಪರ್ವದಂತೆಯೇ ಜರುಗುತ್ತದೆ.

ಹಿರಿಕಿರಿಯರೆಲ್ಲ ಜತ್ಯಾಗಿ ಮನೆಮನೆಯಲ್ಲೂ ಅರ್ಸ್ಯಾವೆಗೆ ಬೇಕಾದ ಎಲ್ಲವನ್ನೂ ಸಂಗ್ರಹಿಸಿ ಹಜಾರದಲ್ಲಿ ಬಿಡಿಬಿಡಿಯಾಗಿ ಇಡುತ್ತಾರೆ. ಅಕ್ಕಿ, ಬೆಳೆಕಾಳು, ಬೆಲ್ಲವೇ ಪ್ರಧಾನ ಗುಡ್ಡೆಗಳು. ಮೂರ್ನಾಲ್ಕು ದಿನವಿದ್ದ ಹಾಗೆ ಗುಡಿಗೆ ಸುಣ್ಣ ಒಯ್ಯಕೆ ಊರ್ಮಂದಿ ಓಗೋ ಸಿರಿನ ನೋಡ್ಬೇಕು. ಸುಮ್ಮನೆ ತಮ್ಮಷ್ಟಕ್ಕೆ ಮೌನವಾಗಿ ಕುಳಿತಿರುವ ದೈವಗಳೊಳಗೆ ಜೀವತುಂಬುವ ಜನರೇ ಭಗ್ವಂತ್ನಿಚ್ಛೆ ಅಂಗೆ ಎಲ್ಲಾ ಆಗುತ್ತೆ ಅನ್ನೋ ನಿಲುವಿನಲ್ಲಿ ನಿಲ್ಲುವ ಮುಗುದತೆ ಹಲವು ರೂಪಗಳಲ್ಲಿ ಹರಿದಾಡುತ್ತೆ.

ಕಡೇ ಶ್ರಾವಣದ ಶೆನ್ವಾರ ಮುಗ್ಯವತ್ಗೆ ಕಡ್ಬಿದ್ದೋಗವಷ್ಟು ಬದ್ಕು ಎಲ್ಲರಿಗೂ. ನೆಲ ಒಲೆ ತೊಳ್ಕಂಡು, ಅಟ್ಟಿಗೆ ಬಗ್ಡಬಳ್ದು ನೀರು ನಿಡಿ ಮುಗ್ಸವತ್ಗೆ ನಾವೆಲ್ಲ ನಿಟ್ಟುಸ್ರು ಬಿಡ್ತಿದ್ವಿ. ಆಗೆಲ್ಲ ನಮ್ಗೆ ಹೊಸ್ ಕಸಪಡ ಬತ್ತವೆ ಅಂಬದೆ ಸಡಗರ. ಬೂತ್ರಾಯುನ್ ನೆಪ್ದಗೆ ಕೊತ್ಬಟ್ಟೆ ಎಲ್ರುನ್ನು ಸಿಂಗರ್ಸವು.

ಬತ್ತೇವು ಎತ್ತಿದ್ಮೇಲೆ ಎಲ್ಲಾ ಇಂಗ್ಡುಸಿ ಅರ್ಸ್ಯಾವೆ ಇಂದಿನ ದಿನ್ವೇ ಗುಡಿತಕೆ ತಾಂಡೋಗರು. ಮನ್ಗೊಬ್ರಂಗೆ ಓಗಿ ಅಡ್ಗೆ ಬದ್ಕು ಮೊದ್ಲಾಗ್ತಿತ್ತು. ಪ್ರತೀ ಶ್ರಾವಣದಲ್ಲು ಅನ್ನ, ಸ್ವಾಡ್ಗೆ, ಕೀರು, ಕಾಳ್ಗಳ ಪಲ್ಲೇವು, ಇಷ್ಟೇ ಇರೋದು. ಒತ್ತು ನೆತ್ತಿ ಬಿಟ್ಟು ಇಳ್ಯವತ್ಗೆ ಹೆಂಗುಸ್ರು ಮಕ್ಳು ವಾರ ಮುಗ್ಸಿ ಆರ್ತಿ ಮಾಡ್ಕಂಡು ಮಡ್ವಾಳ್ರು ಸಿದ್ದಣ್ಣುಂತಗೆ ಮನ್ಗೆಲ್ಲ ಗೋವಾಕ್ಸಿ ಭಯಬಕುತಿಯಿಂದ ಊರಗಿರ ಎಲ್ಲಾ ಹೆಣ್ಣು ಮಕ್ಳು ತೊಮ್ಟುದಾರ್ತಿ ಕಟ್ಟಿ ದಬ್ರಿಗೆಗೆ ತುಂಬಿ ತುಪ್ಪುದ್ದೀಪ ಅಚ್ಕಂಡು ಕಣುಗ್ಲೂವಿನ ಸಿಂಗಾರ ಮಾಡಿ ಮೂಡ್ಗಡಿಕೆ ಬೆಳ್ಗಿ ಗುಡಿತಕೆ ಒತ್ಕಂಡೋಗ್ತಿದ್ವಿ.

ಇಡೀ ಗುಡಿಯೇ ಸುಣ್ಣದಲ್ಲಿ ಬೆಳಗಿಸಿಕೊಂಡು ಒಳಗಿರುವ ಸಮವಲ್ಲದ ಐದು ಕರಿಯ ಬೆನಕಗಳು ದೊಡ್ಡಳ್ಳುದ್ ಗಡ್ಡೆಗೆ ಏಕ ಇರುವ ಎಲ್ಲಾ ವರ್ಣದ ಕಣುಗ್ಲುವ್ವನ್ನು ತಾವೇ ಮುಡಿಸ್ಕಂಡು ಮಿಂಚಲು.. ದೊಡ್ಪೂಜೆ ಆಗವತ್ಗೆ ಇನ್ನೇನು ಹೊತ್ಮುಣುಗ್ತಾ ಬರದು.

ಗುಡಿ ಮುಂದೆ ಕರೇ ಕಂಬ್ಳಿ ಹಾಸಿ ದೊಡ್ಡ ಉದ್ದನೆಯ ಅಗ್ರುದೆಲೆ ಹಾಸಿ ಬಿಗ್ಯಾದರು ನೂರು ಜನ ಒಟ್ತುಂಬ ತಿಂಬವಷ್ಟು ಬಾಳೆಹಣ್ಣು ಕಾಯ್ತುರಿ ಬೆಲ್ಲ ಕಲ್ಸಿ ರಾಶಿ ಹಾಕರು. ಪೂಜಾರ್ರು ಒಳ್ಗು ಒರ್ಗು ಮಂಗ್ಳಾರ್ತಿ ಮುಗ್ಸಿದ್ಮೇಲೆ ಊರೆಣ್ಮಕ್ಳೆಲ್ಲ ಗುಡಿಸುತ್ತ ಮೂರ್ಸುತ್ತು ಬಂದು ಆರ್ತಿ ಬೆಳ್ಗಿ ಒರಗಿರೋ ದೀಪ ಒರೋ ಕಂಬುಂದ್ಮುಂದೆ ಕಣುಗ್ಲೂವಿನ್ ಕಡ್ಡಿ ಕಿತ್ತಾಕಿ ಆದ್ಮೇಲೆ ಮುಂದಿನ ಕೆಲಸ ಉಸಿರಿಡಿದು ಕುಳಿತು ನೋಡ್ತಾ ಇದ್ವಿ.

ಅಗಲನೆಯ ಹಣತೆ ಹಚ್ಚಿ ಬೆನಕಗಳಿಗೆ ಎದುರಾಗಿ ನಿಂತ ಉದ್ದನೆಯ ಕಲ್ಲುಕಂಬದ ಮೇಲೆ ದೀಪೇರೊ ಕಾಲಕ್ಕೆ ಸೇರಿದ ಜನ್ವೆಲ್ಲ ಕೈಮುಕ್ಕಂಡು ನಿಂತ್ಕಮ ಏಕಾಗ್ರತೆ ಬಯದ್ದೇ ಆಗಿರುತ್ತಿತ್ತು. ಒಂದೀಟೆನನ ಎಚ್ಚುಕಮ್ಮಿ ಆದ್ರೆ ಜನರ ಗುಂಪಿನಲ್ಲಿ ಏನೋ ಅಂಟ್ಮುಂಟು ಆಗೆಯ್ತೆ ಅಮ್ತ ಇದಕ್ಕೆಲ್ಲ ಹೆಣ್ಣು ಮಕ್ಕಳನ್ನೇ ಗುರಿಮಾಡುವ ಗಂಡು ದೈವ ಭಕ್ತರ ಮೌಢ್ಯದ ವಿಕಾರ ತಿಳುವಳಿಕೆಗೆ ಮಾತ್ರ ಅಂತ್ಯವಿಲ್ಲ.

ಗಂಡುಗರ್ವದ ಪ್ರಜ್ಞೆ ತನ್ನೆಲ್ಲ ಶಕುತಿಯನ್ನು ಹೆಣ್ಣುಮಕ್ಕಳು ಗಂಡಾಜ್ಞೆಯಲ್ಲೇ ಇರಬೇಕೆಂದು ಬಯಸುವುದನ್ನು ತಡೆಯಲು ಆಗೇ ಇಲ್ಲ. ಈ ನೆಲದಲ್ಲಿ ಕಡೆಯ ಎಲ್ಲಾ ಹಿಂಸೆಗಳನ್ನು ಹೆಣ್ಣೇ ಹೊರಬೇಕು. ಅವೈಚಾರಿಕತೆಯ, ಕಂದಾಚಾರದ ತರ್ಕಗಳನ್ನು ಮನುಷ್ಯನಾಗಲಾರದ ಗಂಡು ಹೆಚ್ಚೇ ಸೃಷ್ಟಿಸಿದ್ದಾನೆ. ಧ್ವಜಗಂಬದ ಮೇಲೆ ಕುಂತ ದೀಪ ಒಂದೀಟು ಸೊಟ್ಗಾದ್ರೆ ಏನೆಲ್ಲಾ ಶಂಕೆಗಳು ಓಡಾಡಿಬಿಡ್ತವೆ. ಇವೆಲ್ಲವೂ ಮುಗಿದ ಮೇಲೆ ಬಯಲಿನ ಸುತ್ತಲೂ ಮಳ್ಳಾಕಿರೆ ಮಳ್ಳು ಇಳಿದಂಗೆ ಜನ ಕೂಡಿರೋರು.

ಕರೇಕಂಬ್ಳಿಮೇಲೆ ಗುಡ್ಡೇಕುಂತ ಮಣೇವಿಗೆ ಪೂಜಾರಪ್ಪ ದೊಡ್ಡ ಚಾಟಿ ಇಡ್ಕಂಡು ರಣರಣ ಕೆಂಪ್ಗು ಕೆಂಪ್ಗಲೆ ಮಖ ಮಾಡ್ಕಂಡು ರವರವ ನಡಿಕ್ಕಂಡು ಮೈಯ್ಯೊಂದು ಮೈಯ್ಯೆಲ್ಲಾ ಕೆಂಪ್ಗೆ ಬರೆಬೀಳಂಗೆ ಚಾಟಿಲಿ ತನ್ನನ್ನೇ ಒಡ್ಕಮರು. ನಾವೆಲ್ಲ ಕೈಮುಕ್ಕಂಡು ನಿಂತಿರ್ತಿದ್ವಿ. ಇದೆಲ್ಲಾ ಮುಗುದ್ಮೇಲೆ ಮಣೇವ್ ಗೆ ಬಗ್ಗಿ ತನ್ಗಾಗವಷ್ಟು ತಿಂದ್ಮೇಲೆ ಉಳಿದದ್ದನ್ನು ದೇವ್ರ ಹಸಾದ ಅಂತ ಎಲ್ಲಾರ್ಗು ಕೊಡರು. ದೇವರಿದ್ದಾನೋ ಇಲ್ಲವೋ ಒಟ್ಟಾರೆ ಮನುಷ್ಯರು ರೂಪಿಸಿಕೊಂಡ ಆಚರಣೆಗಳಲ್ಲಿ ಒಂದಾಗುವ ಕೆಲವು ಐಕ್ಯಸತ್ಯಗಳಿವೆ. ಊರಲ್ಲಿ ಏನೇ ಜಗ್ಳ ಜೂಟಿ ಇದ್ರು ಮರ್ತು ಎಲ್ಲಾ ಒಂದಾಗಿ ಒಂದೆಂಟು ದಿನಗಳು ಲವಲವಿಕೆಯಿಂದ ಒಂದಾಗೋರು. ಎಲ್ಲ ಪೂಜೆ ಪುನಸ್ಕಾರ ಮುಗ್ದು ಊಟ ಶುರ್ವಾಗೋದು. ಪಂತಿ ಎದ್ಮೇಲೆ ಪಂತಿ ಕುಂತು ಊಟದ್ದೆಲ್ಲವೂ ಮುಗಿವ ಹೊತ್ತಿಗೆ ಇರುಳತ್ತು ದಾಟೋದು.

ಮರು ದಿವಸ ಊರ ಮಂದಿಯೆಲ್ಲ ಜೊತೆಗೂಡಿ ಗುಡಿಸುತ್ಲು ಗುಡ್ಸಿ ಸಾರ್ಸಿ ಅಚ್ಕಟ್ ಮಾಡಿ ಬಂದ್ರೆ ಶ್ರಾವಣಸಂಭ್ರಮಕ್ಕೆ ತೆರೆಬೀಳೋದು. ಈ ಬೂತ್ರಾಯ ಮರುವರ್ಷ ಶ್ರಾವ್ಣ ಹುಟ್ಟತನ್ಕ ಸುಮ್ನೆ ಕುಂತಿರಲ್ಲ. ಸುತ್ಮುತ್ಲು ಊರರ್ನು ತನ್ನಂಗ್ಲುಕೆ ಕರಿಸ್ಕಮ್ತನೆ. ಯಾವುದೇ ಶುಭಕ್ರಿಯೆಗಳು ನಡೆಯಲು ಅಪ್ಣೆ ಕೇಳದು ಇಲ್ಲಿಯೇ. ಶನಿವಾರ ಪೂಜೆ ಮಾಡ್ಕೊಡಿ ಅಂತ ಪೂಜಾರ್ರುನ್ನ ಕರೆಸಿ ಕಣುಗ್ಲು ಮಗ್ಗೇರ್ಸಿ ಪೂಜೆ ಮಾಡ್ಸಿ ಎದುರೇ ಕೂರೋದು.

ಸ್ವಾಮಿ ನಮ್ಮಪ್ಪ ಎಲ್ಲಾ ನಿನ್ನ ಹೊಟ್ಟೆಗೆ ಆಕ್ಕೆಂಡು ನಾವನ್ಕಂಡಂಗೆ ಸಲೀಸಾಗಿ ಎಲ್ಲಾನೂ ಆದ್ರೆ ಕೋಳಿಕೊಯ್ದು ಆರ್ತಿ ಮಾಡ್ತಿನಪ್ಪ. ನಾನು ಕುರ್ತ್ಕಂಡಿರ ಮಗ್ನೆ ಬಲುಕ್ಕೊಡು ಸ್ವಾಮಿ ಅಂತೆಲ್ಲಾ ಜೋರಾಗಿ ಮಾತಾಡ್ಕಂಡೆ ಮೌನ ಬೆನಕನನ್ನು ಬೇಡುತ್ತಾರೆ. ಕೆಲವೊಮ್ಮೆ ದಿನವಿಡೀ ಕುಂತ್ರು ಮಗ್ಗು ಕದ್ಲಲ್ಲ. ಆಗೆಲ್ಲ ದೇವ್ರಪ್ಣೆ ಆಗಿಲ್ಲ ಅಂತ ಯಾವ ಕೆಲಸಕ್ಕೂ ಮುಂದೆ ಹೋಗಲ್ಲ ಜನ. ರಾತ್ರಿ ಕವ್ಡೆ ಹಾಕುಸ್ತಾರೆ ಪೂಜಾರ್ರು ಮನೆಗೆ ಬಂದು. ಇಂತೆಲ್ಲ ದೇವರನ್ನು ಹೊದ್ದೇ ದುಡಿಯುವ ಜನ ತಮಗೇನಾದರೂ ಅಪಾಯಗಳಾದರೆ ದೇವರ ಹೆಸರಿನಲ್ಲಿ ಪೂಜಿಸಿ ಎಲ್ಲಾ ಬೇಡಿದ್ದನ್ನು ದಾಟಿಸಿಕೊಂಡು ದೃಢವಾಗಿ ಬದುಕುತ್ತಾರೆ.

ಮಾನಸಿಕವಾಗಿ ಕುಸಿಯದಂತೆ ಬಾಳುವ ಹಳ್ಳಿ ಮಂದಿಗೆ ಮನೋರೋಗಗಳು ಕಡಿಮೆಯೇ. ಹೊತ್ತಿಡೀ ಶ್ರಮಿಸುವ ಇವರಿಂದಲೇ ಅನ್ನ ನೀರು ಕಾಣುವ ದೈವಗಳು ಇವರಿಗೆ ಕೊಟ್ಟಿದ್ದೇನು ಇಲ್ಲ. ಇವರೆಲ್ಲ ದೇವರಿಗೆ ಕೊಡುವುದೇ ಬಲುಜಾಸ್ತಿ. ತಮ್ಮಿಂದಾಯಿತೆಂಬ ಆತ್ಮರತಿಯ ಸಿಕ್ಕಿಗೆ ಬೀಳದೆ ಎಲ್ಲಾ ನಮ್ಮಪ್ಪ ಭಗ್ವಂತ ಕೊಟ್ಟಿದ್ದೆಂದೇ ಬದುಕಿ ಬಿಡುತ್ತಾರೆ. ನಾವೆಲ್ಲ ಸಣ್ಣವರಿದ್ದಾಗ ಕಾಯ್ಲೆ ಬಂದ್ರೆ ಆಸ್ಪತ್ರೆ ಅಂತ ಹೋಗಿದ್ದೆ ವಿರಳ.

ನಮ್ಮ ದೊಡ್ಡಪ್ಪ ದೊಡ್ಡಮ್ಮ ಮಕ್ಳುಮರಿನೆಲ್ಲಾ ತೋಡ್ಕಂಡು ಅಮಾಸೆ, ಪೋರ್ಣಾಮಿ ದಿನ ಮಂದೆ ಕಾಸೋರು. ರಾತ್ರಿ ಮಲಗೋಕೆ ಹೊರಗಿನ ಗುಡಿಗೇ ಹೋಗ್ತಿದ್ವಿ. ಹೊಲ್ಮಾಳುದ್ ತುಂಬಾ ಕರಡಿಗಳು ಓಡಾಡಿ ಉಡ್ರಿಕೆ ಹಾಕುದ್ರು ನಾವೆಂದೂ ಹೆದರಿಲ್ಲ. ಇವತ್ತಿಗೂ ಈ ಗುಡಿಗೆ ಬಾಗಿಲು ಬೀಗ ಏನು ಇಲ್ಲ. ಮುಕ್ತವಾಗಿ ಬಯಲ ಆಲಯದಲ್ಲಿ ಮನುಷ್ಯ ನಿರ್ಮಿತ ದೈವ ಕುಂತಿರುವ ಅಂಗಳದ ಸುತ್ತ ದಡಿ ಅರಳಿ ಮರಗಳಿವೆ. ವರ್ಷದಲ್ಲಿ ಅನೇಕ ದಿನ ಇಲ್ಲಿ ಮಂದೆ ಕಾಸೋದ್ರಿಂದ ಉಸಿರು ಶುದ್ಧವಾಗುವ ಬಿನ್ನಣದ ಸತ್ಯ ಕೂಡ ಬೂತ್ರಾಯನ ಪಾಲಾಗಿದೆ.

ರಾತ್ರಿ ಅಲ್ಲಿ ಮಲಗಿ ನಸುಕಿಗೆ ಎದ್ದು ಗುಡಿಯಡಿಯನ್ನು ತಂಪಾಗಿಟ್ಟು ಗಿಡಗೆಂಟೆಗೆ ನೀರು ಕೊಡುವ ಮಗ್ಗಲಿನ ಕಟ್ಟೆಯಲ್ಲಿ ಮಾರೆ ತೊಳ್ದು ಒಂಭತ್ತು ಸುತ್ತು ಗುಡಿ ಸುತ್ತಿ ಮನೆಕಡಿಕೆ ಬಂದ್ರೆ ಅರ್ಕೆ ತೀರ್ತು. ಏನು ವಿಜ್ಞ ಬಂದ್ರು ಎಲ್ಲಾ ಬೂತ್ರಾಯುನ್ಮೇಲೆ ಎಸ್ದು ಗಟ್ಟಿಯಾಗಿ ಬದುಕಿಬಿಡುವ ನಮ್ಮೂರಿನ ಜನರ ಪ್ರಜ್ಞೆಯಲ್ಲಿ ಅಸಹಾಯಕತೆ ಬಲು ಕಡಿಮೆ. ಭಾವನೆಗಳಲ್ಲಿಯೇ ದೈವವನ್ನು ತಮಗೆ ಬೇಕಾದಂತೆ ಕಡೆದು ಕಡೆದು ತಮ್ಮ ದುಡಿಮೆಯಲ್ಲಿಯೇ ಫಲ ಗಳಿಸುವ ಇವರು ಎಲ್ಲವನ್ನೂ ದೈವಕ್ಕೆ ಮೀಸಲಿಡುವ ಮಹಾಶಕ್ತರು.

ಊರಾಚೆಗಿನ ಈ ಗುಡಿಗಾಸರೆಯಾದ ಬಯಲಲ್ಲಿ ಮುಕ್ತವಾಗಿ ಆಡಿ ತಿಂದುಂಡು ಬೆಳೆದ ನನಗೆ ಅಲ್ಲಿನ ಅರಳೀಮರಗಳ ಹಸಿರೇ ಹೆಚ್ಚು ಕೊಟ್ಟಿದೆ….
ಕೊಟ್ಟು ಬಿಡು ದೈವವೇ ನಿನಗೆ ಸಾಧ್ಯವಾದರೆ
ಕೊಡುಗೈಯ ಕರ್ಣನಂತೆ ನಿನ್ನ ನಂಬಿದ ಊರಿನೆಲ್ಲ ಜೀವಕುಲಕ್ಕೆ ನೆಮ್ಮದಿಯ.
ನಿನಗೆಂದು ಕಟ್ಟಿಸಿಕೊಂಡ
ಆಲಯಗಳ ಮುಂದೆಲ್ಲ ಭಿಕ್ಷೆ ತಟ್ಟೆಯ ಒಳಗೆ ಕೈ ತಡವಿ
ಜಮಾಯಿಸದ ಪೈಸೆಗಳ ತೆಗಳುತ್ತಾ ತೆವಳುವ ಭಿಕ್ಕುಗಳಿಗೆಲ್ಲ ಗಮ್ಯದೀಕ್ಷೆಯನು….

December 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vishwas

    ಬೂತ್ರಾಯನ ತೀವ್ರ ಮೌನ!

    ಶ್ರಾವಣ ಶನಿವಾರವೆಂಬ ಸಭಾಂಗಣವು, ಊರಿನ ಮಂದಿಯನ್ನೆಲ್ಲಾ ಒಂದು ಮಾಡಲು ಆಯೋಜಿಸಿಕೊಂಡ ಸಭೆಯು ‘ಅರ್ಸ್ಯಾವೆ’.
    ಅದಕ್ಕೆ ಸಕಲ ಸಿದ್ಧತೆಗಳನ್ನು ಮಾಡುವ ಸ್ವಯಂಸೇವಕರೂ ‘ನಾವೇ’ ಅದನ್ನ ಸಂಭ್ರಮಿಸುವ ಮುಖ್ಯ ಅತಿಥಿಗಳೂ ‘ನಾವೇ’.
    ಇವೆಲ್ಲವೂ ಒಬ್ಬ ಮುಖ್ಯಸ್ಥರ ಸಮ್ಮುಖದಲ್ಲಿ ಹಾಗೂ ಉಪಸ್ಥಿತಿಯಲ್ಲಿ, ನಡೆಯಬೇಕು. ಇದನ್ನ ಪೂರೈಸೋ ಜವಾಬ್ದಾರಿಯನ್ನ ಹೊತ್ತವನೇ ನಮ್ಮಪ್ಪ ಬೂತ್ರಾಯ! ಎಲ್ಲಾ ಆಚರಣೆಗಳನ್ನ ಅವನು ‘ಮೌನ’ದಿಂದಲೇ ಗಮನಿಸುವುದು ಇಲ್ಲಿನ ವಿಶೇಷ.

    * ಅರ್ಸ್ಯಾವೆಗೆ ಬೇಕಿರುವ ಅಕ್ಕಿ, ಬೆಳೆಕಾಳು, ಬೆಲ್ಲದ ಗುಡ್ಡೆಗಳನ್ನು ಹಜಾರದಲ್ಲಿ ಇಟ್ಟಾಗಲೂ ‘ಮೌನ’.
    * ತಾನಿರುವ ಗುಡಿಯು ತಳ ತಳ ಹೊಳೆಯುವಂತೆ ಸ್ವಚ್ಛಿಸಿ ಸುಣ್ಣ ಬಳಿದಾಗಲೂ ‘ಮೌನ’.
    * ಹೊಸಬಟ್ಟೆ, ಸಿಂಗಾರಗಳನ್ನ‌ ಕಂಡರೂ ‘ಮೌನ’.
    * ಅನ್ನ, ಕೀರು, ಕಾಳ್ಗಳ ಪಲ್ಯಗಳ, ಬಾಳೆ ಹಣ್ಣಿನ ರಸಾಯನದ ನೈವೇದ್ಯ ಮಾಡಿದಾಗಲೂ ‘ಮೌನ’.
    * ಬೆನಕನರಿಗೆ ಹಣತೆ ಹಚ್ಚಿ, ಕಲ್ಲುಕಂಬದ ದೀಪದ ಬೆಳಕಿಗೂ ‘ಮೌನ’.
    * ನಡೆಯಬೇಕಾದ ಆಚಾರದಲ್ಲಿ ಸ್ವಲ್ಪ ಏರು ಪೇರಾದರೂ ‘ಮೌನ’, ಹಾಗೆಂದೂ ಎಲ್ಲವೂ ಸರಿಯಾಗಿ ನಡೆದರೂ ಮುರಿಯದ ‘ಮೌನ’.
    * “ಹಣ್ಣು ಕೊಡಲು, ಗಿಡವು ಮಣ್ಣು ಉಣ್ಣಬೇಕಾಯಿತು” ಎಂಬಂತೆ, ತಮ್ಮ ಶ್ರಮದಿಂದ ಎಲ್ಲವೂ ಸರಿಯಾಗಿ ಸಾಗುವಂತೆ ನೋಡಲು ಹೆಣ್ಣೊಬ್ಬಳು ಎಷ್ಟೇ ಶ್ರಮಿಸಿದರೂ, ತಪ್ಪಿಗೆಲ್ಲ ಹೊಣೆಗಾರಿಕೆ ಹೆಣ್ಣೇ ಎಂದ ಪಟ್ಟ ಕಟ್ಟುವ ಗಂಡಸರನ್ನೂ ದಿನ ನಿತ್ಯ ನೋಡುತ್ತಿದ್ದರೂ ‘ಮೌನ’ .
    * ಪುಜಾರಪ್ಪ ಚಾಟಿಯಲ್ಲಿ ಮೈ ಕೆಂಪಗಾಗಿ, ಬರೆಬರುವಂತೆ ಹೊಡೆದುಕೊಂಡರೂ ‘ಮೌನ’.
    * ಕಣುಗ್ಲು ಮಗ್ಗೇರ್ಸಿ ಪೂಜೆ ಮಾಡಿ, ಅಪ್ಪಣೆ ಕೇಳಿ, ಹರಕೆ ತೀರಿದರೂ ‘ಮೌನ’.

    ಇವೆಲ್ಲವನ್ನೂ ಕಂಡೂ‌ ಕಾಣದಂತೆ, ಕೇಳಿಸಿ ಕೇಳದಂತೆ ಕುಂತಿರುವನು ಬೂತ್ರಾಯ!! ಇದು ಏಕೆ ಎಂದು ಯೋಚಿಸಿದರೆ ತಿಳಿದದ್ದೇನೆಂದರೆ, ಬೂತ್ರಾಯ ನೆಲಸಿರೋದು ಹೊರಗಿನ ಸುಣ್ಣದ ಗುಡಿಯಲ್ಲಲ್ಲ‌. “ನಮ್ಮೊಳಗಿನ ಮನೋಮಂದಿರದಲ್ಲಿ”. ಅಷ್ಟೆಲ್ಲ ಶ್ರಮದ ಪ್ರತಿಫಲ, ಯಶಸ್ಸಿಗೆ ಪಾತ್ರರಾಗೋದು ಯಾರು?? ಅದು ನಾವೇ! ಕಷ್ಟಾರ್ಜಿತದಿಂದ ದುಡಿದು, ಮನೋಬಲವನ್ನು ಹೆಚ್ಚಿಸೋದು ಯಾರು?? ಅದೂ ನಾವೇ!. ನಮಗೇ ತಿಳಿಯದಂತೆ ನಮ್ಮೊಳಗಿನ ದೇವರನ್ನು ಎಷ್ಟು ಸಂತಸ, ಸಂಭ್ರಮಗಳಿಗೆ ಪಾತ್ರನ್ನಾಗಿಸುತ್ತಿದ್ದೇವೆ, ಅವನನ್ನು ನಮ್ಮ ಮನದೊಳಗೆಯೇ ಖುಷಿಯಿಂದ ಕುಣಿದು ಕುಪ್ಪಳಿಸುವಂತೆ ಮಾಡುತ್ತಿದ್ದೇವೆ ನಾವೆಲ್ಲರು.

    ದೇವರನ್ನು, ಹೊರಗಿನ ಪ್ರತಿಮೆಯಲ್ಲಲ್ಲದೇ ಒಳಗಿನ *ಮನೋಮೂರ್ತಿಯಲ್ಲಿ* ಕಾಣುವ ಸೌಭಾಗ್ಯವನ್ನು ನಮ್ಮದಾಗಿಸಿಕೊಂಡ ಕೂಡಲೇ ಪ್ರಗತಿಯನ್ನು ಕಾಣಬಹುದು ಎಂಬ ಪಾಠ ಕೊಟ್ಟ ಅಕ್ಕನ ಅಂಕಣಕ್ಕೆ ನಮನ!!!

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಧನ್ಯವಾದಗಳು ವಿಶ್ವಾಸ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: