ಕಡಿದಾಳು ಶಾಮಣ್ಣ ಸಿಕ್ಕರು..

ನೆಂಪೆ ದೇವರಾಜ್

ನನ್ನ ಕ್ರಿಯಾಶೀಲತೆಯನ್ನು ಮೌನದ ಮೂಲಕವೇ ಉದ್ದೀಪಿಸುತ್ತಾ ಅದೆಷ್ಟೋ ಸುಸ್ತನ್ನು ಮೈಯೊಳಗಿಟ್ಟುಕೊಂಡು ಆಸ್ಪತ್ರೆಯಿಂದ ಇದೀಗ ಮನೆಗೆ ಬಂದ ಶಾಮಣ್ಣನವರನ್ನು ನೋಡದೆ ಇರಲಾದೀತೆ? ಇವತ್ತು ಬೇರೊಂದು ಕಾರ್ಯಕ್ರಮ ನಿಮಿತ್ತ ತೀರ್ಥಹಳ್ಳಿ ಕಡೆ ಹೋಗಿದ್ದೆ.. ಶಾಮಣ್ಣನವರ ಆರೋಗ್ಯ ವಿಚಾರಿಸುವುದಕ್ಕಿಂತ ಅವರನ್ನು ನೋಡಿ ನನ್ನನ್ನು ಇನ್ನಷ್ಟು ಹದಗೊಳಿಸಿಕೊಳ್ಳಬೇಕಿತ್ತು. ಕಿರಿಯ ಗೆಳೆಯರಾದ ಶಶಿ ಕುಮಾರ್ ಮತ್ತು ನಿರಂಜನ್ ಇವರನ್ನು ಕರೆದುಕೊಂಡು ಭಗವತಿಕೆರೆಗೆ ಹೋಗಿಯೇ ಬಿಟ್ಟೆ..

ಶ್ರೀದೇವಕ್ಕ ಅತ್ಯಂತ ಲವಲವಿಕೆಯೊಂದಿಗೆ ಕಂಡರು. ಶಾಮಣ್ಣನವರಿಗಿಂತ ಶ್ರೀದೇವಕ್ಕ ಇಂದು ಹೆಚ್ಚು ಮಾತಾಡಿದರು. ಎಪ್ಪತ್ತನೇ ಇಸವಿಯಲ್ಲಿ ವಧುವಾಗಿ ಹಾರೋಗದ್ದೆಯಿಂದ ಕಡಿದಾಳಿಗೆ ಬಂದವರು ಮಾವನ ಮನೆಯಲ್ಲಿ ಹೆಚ್ಚು ದಿನವಿರಲಿಲ್ಲ, ಸುಖದ ಸುಪ್ಪತ್ತಿಗೆಯ ಮಲೆನಾಡಿನ ಫಲವತ್ತಾದ ಜಾಗಕ್ಕೆ ವಿದಾಯ ಹೇಳಿ ಭಗವತಿಕೆರೆಯ ಬಿರುಕುಬಿಟ್ಟ ನೆಲದಲ್ಲಿ ಎಡವಿ ಬೀಳುತ್ತಾರೆಂಬುದೇ ಆ ಕಾಲದ ಹಲವರ ಊಹೆಯಾಗಿತ್ತು. ಆದರೆ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ದಂಪತಿಗಳು ಬೆಂಗಾಡಾಗಿದ್ದ ಭಗವತಿಕೆರೆಗೆ ಇಡೀ ಮಲೆನಾಡಿನ ವೈವಿಧ್ಯತೆಯನ್ನೇ ತಂದು ನಿಲ್ಲಿಸಿದ ಹೆಗ್ಗಳಿಕೆಯಲ್ಲಿ ಶ್ರೀದೇವಕ್ಕನವರ ಪಾತ್ರ ವೆಂತದ್ದು ಎಂಬುದನ್ನು ಇನ್ನೊಮ್ಮೆ ಹೇಳ ಬಯಸುವೆ.

ಇಂದು ಶಾಮಣ್ಣನವರನ್ನು ನೋಡಿದಾಕ್ಷಣದಲ್ಲಿ ಉಂಟಾದ ಆ ಭಾವುಕ ಗಳಿಗೆಗಳು ಕಣ್ಣಂಚಿನಲ್ಲಿ ನೀರಾಗಿ ಹೊರಹೊಮ್ಮುವುದನ್ನು ತಡೆಯಲು ಹರಸಾಸಪಡಬೇಕಾಯಿತು. ಹೋರಾಟವೆಂಬ ಒಣಕಟ್ಟಿಗೆಯಲ್ಲಿ ಸಾಹಿತ್ಯ ಮತ್ತು ಸಂಗೀತದ ಪಸೆ ತುಂಬಿದ ಬಗೆಗಳು ಒಂದೊಂದೇ ನೆನಪಿಗೆ ಬರತೊಗಿದವು. ಎಪ್ಪತ್ತನೆ ಇಸವಿಯಲ್ಲಿ ದಂಪತಿಗಳಾಗಿ ಭಗವತಿಕೆರೆಯ ದಿಣ್ಣೆಯಲ್ಲಿ ಹಾಳೆ ತಡಕಿಯ ಗುಡಿಸಲು ನಿರ್ಮಿಸಿಸಿಕೊಂಡಿದ್ದಾಗ ಕರಡಿಗಳ ಹಿಂಡು ಇವರಿಗೆ ಅನು ದಿನವೂ ತಮ್ಮ ದಿವ್ಯ ದರುಶನ ನೀಡದೆ ಇರುತ್ತಿರಲಿಲ್ಲವಂತೆ.

ಕಾಡು ಹಂದಿಗಳೋ ಹಿತ್ತಿಲು -ಮುಂಚೆ ಕಡೆಯಲ್ಲೆಲ್ಲ ತಮ್ಮ ಆರ್ಭಟದ ಪ್ರದರ್ಶನದ ಸ್ಪರ್ಧೆಯಲ್ಲಿರುವ ಕಾಲ. ಆದರೆ ಕರಡಿ ಹಂದಿಗಳ ಜೊತೆಗೆ ನೂರಾರು ಜಿಂಕೆಗಳ ಸಾಲಲಂಕೃತ ಮೆರವಣಿಗೆಯನ್ನು ನೋಡಿ ಮೈದುಂಬಿಕೊಂಡದ್ದನ್ನು ಮುಖವರಳಿಸಿಕೊಂಡು ಶ್ರೀದೇವಕ್ಕನವರು ವಿವರಿಸುತ್ತಾರೆ.

ಶ್ರೀದೇವಕ್ಕನವರಿಗೆ ಭಗವತಿಕೆರೆಯ ಜನರು ಹಾಗೂ ಭೂಮಿಯ ಮೇಲಿನ ಮೋಹದ ಜೊತೆಗಿನ ಅವಿನಾಭಾವತೆ ನಮ್ಮನ್ನೆಲ್ಲ ಮಂತ್ರಮುಗ್ಧಗೊಳಿಸಿ ತದೇಕ ಚಿತ್ತರಾಗಿ ಇವರ ಮಾತುಗಳನ್ನು ಆಲಿಸುವಂತೆ ಮಾಡಿತು.. ಊರ ತುಂಬಾ ಅಡಿಕೆ ಸುಲಿಯಲು ವಿವಿಧ ಕಂಪನಿಗಳು ಅಡಿಕೆ ಸುಲಿವ ಯಂತ್ರಗಳ ಮೂಲಕ ದಾಳಿ ಮಾಡುತ್ತಿರುವಾಗಲೂ ತಮ್ಮ ಹತ್ತಾರು ಎಕರೆಗಳ ಅಡಿಕೆ ಗೊನೆಗಳನ್ನು ಲಾಗಾಯ್ತಿನ ಹತ್ತಾರು ಜನರ ಮೂಲಕ ಕೈಸುಲಿತವನ್ನು ಮಾಡಿಸುವ ಬಗೆ ಇವರ ತಪೋಭೂಮಿಯ ಮೆರಗನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಈಗಷ್ಟೇ ಆಸ್ಪತ್ರೆಯ ಸಣ್ಣ ಪ್ರಮಾಣದ ಉಪಚಾರ ಮುಗಿಸಿ ಹೊರಬಂದಿರುವ ಶಾಮಣ್ಣನವರು ಇಂದು ಕೊಳಲು ನುಡಿಸಿದರು. ಅವರ ಕೊಳಲ ನಿನಾದ ನಮ್ಮನ್ನು ಮತ್ತಷ್ಟು ಭಾವುಕಗೊಳಿಸಲಾರಂಭಿಸಿತು. ಮುದುರಿ ಕುಳಿತಿದ್ದ ಹತ್ತಾರು ಹೋರಾಟದ ನೆನಪುಗಳು ಗರಿ ಬಿಚ್ಚಿ ಹಾರುವ ಅನಿರ್ವಚನೀಯ ಅಲೌಕಿಕ ಪ್ರಪಂಚದ ರಾಶಿ ರಾಶಿ ನೆನಪುಗಳು ಹೊರ ಬರುವಂತೆ ಮಾಡಿತು. ಕಿರಿಯ ಗೆಳೆಯರಾದ ನಿರಂಜನ ಮತ್ತು ಶಶಿ ಕುಮಾರನಿಗೆ ಕೊಳಲು ಕಲಿಸುವ ಭರವಸೆ ನೀಡಿದರು.

ನಿರಂಜನನ ಹತ್ತಿರವಿದ್ದ ಕ್ಯಾಮರಾವನ್ನು ತಮ್ಮ ಮೃದುವಾದ ಕರಗಳಿಂದ ಮುಟ್ಟುವ ರೀತಿಯಿಂದಲೇ ಇವರ ಫೋಟೋಗ್ರಫಿಯ ಮೇಲಿನ ಆಸಕ್ತಿ ಯಾವ ಪ್ರಮಾಣದ್ದು ಎಂಬುದನ್ನು ಸಾರುತ್ತಿತ್ತು. ಶಾಮಣ್ಣನವರು ಬಾರೀ ಮಾತಾಡಿದ್ದನ್ನು ನಾಕಾಣೆ. ಗಂಟೆಗಟ್ಟಲೆ ಮಾತಾಡಿದವರನ್ನು ಯಾವ ಭಾವಾವೇಶಕ್ಕೂ ಒಳಗಾಗದೆ ಮೂಕ ಪ್ರೇಕ್ಷಕರಾಗೀ ಕೇಳುತ್ತಾ ಕೂತ ದಾಖಲೆಗಳನ್ನು ಇವರಿಂದ ಇಂದಿಗೂ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದು. ಆದರೆ ವೇದಿಕೆಗಳಲ್ಲಿ ಮಾತೇ ಆಡದ ಅಥವಾ ಆಡಿದರೂ ಎದುರಿಗಿರುವ ಜನರ ಬೇಕು ಬೇಡಗಳನ್ನು ಕಣ್ಣರೆಪ್ಪೆ ಮುಚ್ಚಿ ಬಿಡುವುದರೊಳಗೆ ಗ್ರಹಿಸಿ ತಮ್ಮ ಭಾಷಣಕ್ಕೆ ತಾವೇ ನಿರ್ದಯಿಯಾಗಿ ಕತ್ತರಿ ಪ್ರಯೋಗ ಮಾಡಿಕೊಂಡ ವಿಶಿಷ್ಟತೆ ಇವರಿಗಿದೆ. ಆದರೂ ಕೂಡಾ ‘ಶಾಮಣ್ಣ ಏನು ಹೇಳಿದರು ‘ಎಂಬುದೇ ಪತ್ರಕರ್ತ ಮತ್ತು ಸಾಹಿತ್ಯಿಕ ವಲಯದ ಕುತೂಹಲವಾಗಿ ಸದಾ ಕಾಡುವುದನ್ನು ತಿಳಿಯಬೇಕಿದೆ. ಇನ್ನೂ ಬಾರೀ ಇವರ ಬಗ್ಗೆ ಬರೆಯುವುದಿದೆ. ಒಂದಷ್ಟನ್ನು ದಾಖಲಿಸಿಕೊಂಡಿದ್ದೇನೆ ಕೂಡಾ….

‍ಲೇಖಕರು Admin

August 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: