ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲು…

ಶ್ರೀನಿಧಿ ಹೆಚ್ ವಿ

ಒಬ್ಬನೇ ಇದ್ದೆ
ದುಃಖ ಮನದುಂಬಿತ್ತು
ಸಾಕು ಸಾಕೆನಿಸಿದ್ದ ಗೌಜು ಗಲಾಟೆ
ಮಧ್ಯೆ , ಒಬ್ಬನೇ ಇದ್ದ ನನ್ನನ್ನು
ಏಕಾಂತ ಕೈ ಬೀಸಿ ಕರೆಯುತ್ತಿತ್ತು.

ಏಕಾಂತದ ಕೈ ಬೆವರ ಹನಿ
ಉಪ್ಪುಪ್ಪು ಎನಿಸಿ ಸಮುದ್ರದ ಕಡೆ ಹೊರಟೆ.
ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ
ಸಮುದ್ರದ ಎದುರು ಕಾಲು ಚಾಚಿದ್ದೆ.

ಕುಳಿತಿದ್ದೆ ಸುಮ್ಮನೆ ಅಕಾರಣ
ಸಮುದ್ರದ ಸುವಿಶಾಲತೆಗೆ ತಲೆದೂಗಿ,
ಸರಿದು ಹೋಯಿತು ದುಃಖ
ಅದರ ಒಡಲು ಸೇರಿ.

ಅಲೆಗಳ ಏರಿಳಿತಕ್ಕೆ ತಕ್ಕಂತೆ
ಶ್ವಾಸ ನಿಶ್ವಾಸವಾಗಿ
ಶವಾಸನದ ಭಂಗಿಯಲಿ ನಿದ್ದೆ ಹೋದೆ,
ಅದೋ ಶಬ್ಧಸೂತಕವಿಲ್ಲದ ಸ್ವಪ್ನಪ್ರಪಂಚ.

ಎದ್ದಾಗ ನೋಡಿದರೆ, ಸುತ್ತಲೂ
ಸಾವಿರಾರು ಮಂದಿ ನನ್ನ ಹಾಗೆ
ಮಲಗಿದ್ದಾರೆ ಕಡಲ ದನಿಗೆ ಕಿವಿಯಾಗಿ,
ದುಃಖ ಸೇರುತ್ತಿದೆ ಕಡಲನ್ನು, ಸಹಸ್ರಧಾರೆಯಾಗಿ.

ಬಯಸಿದ್ದು ಏಕಾಂತ
ಸಿಕ್ಕಿದ್ದು ಲೋಕಾಂತ,
ಸಾಕೆಂದು ಎದ್ದು ಹೊರಟೆ ಸಂತೆಯ ಕಡೆಗೆ.

‍ಲೇಖಕರು Admin

23 March, 2022

2 Comments

  1. Nitya

    Meaningful thought told in simplified manner

  2. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading