ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಮೆ ಕಂಡ ‘ಉಯಿಲು’

ಯಮುನಾ ಗಾಂವ್ಕರ್ ‘ಉಯಿಲಿಗೆ ಸಹಿ ಹಾಕಿ’
 sunanda kadame
ಸುನಂದಾ ಪ್ರಕಾಶ ಕಡಮೆ
ಯಮುನಾ ಗಾಂವ್ಕರ್ ಬರೆದ ಈ ಕವಿತೆಗಳ ಬಿಡುಗಡೆಯ ನೆಪದಲ್ಲಿ ಕವಿತೆಯೊಡನೆಯ ಒಂದೊಳ್ಳೆಯ ಅನುಸಂಧಾನ ಇದು. ಯಮುನಾ ಸ್ವರಚಿತ ಕವಿತೆಗಳನ್ನು ವಾಚಿಸಿದ್ದನ್ನು ಈ ಮೊದಲು ಕೇಳಿದ್ದೆ. ಆದರೆ ಹೀಗೆ ಒಟ್ಟಂದದಲ್ಲಿ ಅವಳ ಕವಿತೆಗಳನ್ನು ಓದುವುದೇ ಹೊಸ ರೀತಿಯ ಹೋರಾಟದ ಸ್ಪೂರ್ತಿಗಳಲ್ಲಿ ಒಂದು ಅಂತ ನನಗನ್ನಿಸಿದೆ. ಒಂದು ಜಾಗೃತ ಸ್ಥಿತಿಯಲ್ಲಿರುವ ಚೈತನ್ಯಶೀಲ ಕವಿತೆಗಳಿವು. ಅವಳ ಹೋರಾಟಗಳಲ್ಲಿ ಹೇಗೆ ಜಾಗೃತ ಮನಸ್ಥಿತಿಯ ಭಾವಗಳಿವೆಯೋ, ಅದೇ ರೀತಿಯ ಎಚ್ಚರದ ಸ್ಥಿತಿಯ ಮುಂದುವರಿಕೆಯಂತೆ ಈ ಕವಿತೆಗಳು ನಮಗೆ ದಕ್ಕುತ್ತವೆ.

ಹಿಂದಿನ ವ್ಯಾಕರಣ ಪ್ರಾಸಗಳ ಆಭರಣವನ್ನು ಹಟಾತ್ತಾಗಿ ಕಳಚಿಟ್ಟು, ಸರಳ ಮತ್ತು ಸಹಜವಾಗಿ ಒಡಮೂಡುವ ಕವಿತೆಗಳಲ್ಲೇ ಹೆಚ್ಚಿನ ಅರ್ಥವಂತಿಕೆಯನ್ನು ನಾವಿಂದು ಗಮನಿಸುತ್ತಿದ್ದೇವೆ. ಇಲ್ಲಿ ಮುನ್ನುಡಿ ಬರೆದಂಥ ಆತ್ಮೀಯ ಗೆಳತಿಯರಾದ ವಿನಯಾ ಮತ್ತು ಅನುಪಮಾ ಹೇಳುವಂತೆ ‘ಇಂದಿನ ಸಾಮಾಜಿಕತೆಯೇ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುವ ಒಂದು ಸಂದಿಗ್ಧ ಕಾಲದಲ್ಲಿದೆ’ ಹಾಗಾಗಿ ಕವಿಗಳು ಕೂಡ ಆ ಬಿಕ್ಕಟ್ಟುಗಳ ಒಂದು ಭಾಗವೇ ಆಗಿದ್ದಾರೆ ಅಂದುಕೊಂಡಿದ್ದೇನೆ.

yamuna gaokar cover

ಈ ನಿಟ್ಟಿನಲ್ಲಿ ಹೊರೇಸ್ ಅನ್ನೋ ಇಂಗ್ಲೀಷ ಲೇಖಕ ಒಂದೆಡೆ ಹೇಳಿದ ನೆನಪನ್ನು ಕೆದಕುವದಾದರೆ, ‘ಕವಿಯು ಅಕ್ವೇರಿಯಂನಲ್ಲಿ ಬದುಕಿದರೆ, ಸಮುದಾಯಗಳು ಸಾಗರದ ಸಂಗಡ ಗುದ್ದಾಡುತ್ತಾ ಇರುತ್ತವೆ’ ಅನ್ನುವುದು. ಹಾಗೆ ಸಾಗರದ ಸಂಗಡ ಗುದ್ದಾಡುತ್ತ ಇರೋ ಸಮುದಾಯದ ಪರವಾಗಿ ಕೆಲಸ ಮಾಡುವ ಕವಿ ಯಮುನಾ, ಇಲ್ಲಿಯ ತನ್ನ ಮಾತಲ್ಲಿ ಅದನ್ನೇ ಹೇಳುತ್ತಾಳೆ. ‘ಈ ಕವಿತೆಗಳು ಸುತ್ತಲಿನ ಸಮುದಾಯದೊಂದಿಗಿನ ನನ್ನ ಒಡನಾಟದ ಅಭಿವ್ಯಕ್ತಿಗಳೇ ಆಗಿವೆ’ ಅಂದಿರುವದಕ್ಕೆ ಪೂರಕವಾಗಿ ಕವಿ ಎಚ್ ಎಸ್ ಶಿವಪ್ರಕಾಶ್ ಒಂದು ಕಡೆ ಹೇಳುತ್ತಾರೆ ಏನೆಂದರೆ ‘ಕಾವ್ಯದ ಪ್ರಯೋಜನ ಕವಿಗೇ ಬೇರೆ, ಓದುಗನಿಗೇ ಬೇರೆ, ಮತ್ತು ಸಮುದಾಯಕ್ಕೇ ಬೇರೆ, ಹಾಗಾಗಿ ಇಂದಿನ ಕವಿ ಅಕ್ವೇರಿಯಂ ನಲ್ಲಿ ಕೂತರೆ ಪ್ರಯೋಜನ ಇಲ್ಲ, ಕವಿ ಸಮುದಾಯದಲ್ಲಿ ಒಂದಾಗಬೇಕು’ ಈಗ ಯಮುನಾ ಬದುಕುತ್ತಾ, ಉಸಿರಾಡುತ್ತಾ  ಇರುವುದು ಸಹ ಅದನ್ನೇ.

ಸಮುದಾಯ ಪರ ಚಿಂತನೆಗೆ ಪುಷ್ಟಿ ಕೊಡುವ ಹಾಗೆ, ಕವಿ ಸುಬ್ಬು ಹೊಲೆಯಾರ್ ಒಂದು ಭಾಷಣದಲ್ಲಿ ಹೇಳಿದ್ದು ಏನೆಂದರೆ, ‘ಕಾವ್ಯ ಮತ್ತು ಕಲೆ ಅನ್ನೋದು ಎಲ್ಲರ ಮನೆಯ ಮೇಲೆ ಸುರಿಯೋ ಮಳೆಯಂತಿರಬೇಕು, ಆದರೆ ಕೆಲವರು ಮಳೆ ನನ್ನ ಮನೆ ಮೇಲೆ ಮಾತ್ರ ಸುರಿಯಲಿ, ನನ್ನ ಮನೆಯನ್ನ ಮಾತ್ರ ಸೊಂಪಾಗಿಡಲಿ ಅನ್ನೋ ರೀತಿಯ ಭಜನೆಯನ್ನ ಪಠಿಸುತ್ತಾರೆ’ ಎಂಬ ಮಾತನ್ನು ಅವರು ತುಂಬ ನೋವಿನಿಂದ ಹೇಳುತ್ತಾರೆ. ಸುಬ್ಬು ಅವರ ಮಾತು ಇಡೀ ಮನುಷ್ಯ ಕುಲವನ್ನು ಹೇಗೆ ಒಳಗೊಳ್ಳಲಿಕ್ಕೆ ಹಂಬಲಿಸುತ್ತಿದೆ ಅಂದರೆ, ಅಂಥದ್ದೊಂದು ಹಂಬಲವೇ ಕಾವ್ಯವನ್ನು ಒಂದು ಉನ್ನತ ಮಟ್ಟದ ಆದರ್ಶದ ನೆಲೆಗೆ ಒಯ್ಯುವದು. ಉನ್ನತ ಆದರ್ಶ ಅಂದರೆ, ಅದು ಬೇರೆ ಏನೋ ಅಲ್ಲ. ‘ನಮ್ಮ ಸಂಗಾತಿ ಜೀವಿಗಳನ್ನು ನಮ್ಮಂತೆಯೇ ಪೊರೆಯುವದೇ’ ಆಗಿದೆ. ಇಲ್ಲಿ ಯಮುನಾ ಹೋರಾಟದ ಭಾಗವೇ ಅದು.

brechtಜೀವಪರವಾಗಿ ಸ್ಪಂದಿಸುತ್ತಾ ಹೋಗಲಿಕ್ಕೆ ದೊಡ್ಡ ಹುದ್ದೆಯೇ ಬೇಕೆಂತಿಲ್ಲ, ಸೂಟು ಬೂಟು ಹಾಕಿಕೊಂಡು ವಿಡಿಯೋ ಕ್ಯಾಮೆರಾ ಎದುರುಗಡೆ, ಅಷ್ಟೇ ಉದ್ದದ ಕಸಬರಿಗೆ ಹಿಡಿದು, ಊರ ಕಸವನ್ನು ಹೊಡಿಯಬೇಕಾಗಿಲ್ಲ, ಊರ ಕಸ ಹೊಡೆಯೋಕೆ ಮೊದಲು ರಾಜಕಾರಣಿಗಳು ಇಂದು ತಂತಮ್ಮ ಮನಸ್ಸಿನ ಕಸವನ್ನು ಹೊಡೆದುಕೊಳ್ಳುವಂಥ ಅಸಹಿಷ್ಣುತೆಯ ಸ್ಥಿತಿ ಸೃಷ್ಟಿಯಾಗಿದ್ದನ್ನು ನಾವೆಲ್ಲ ಕಾಣುತ್ತಿದ್ದೇವೆ. ಹಾಗೆಯೇ ತನ್ನ ನಿರಂತರ ಹೋರಾಟದಿಂದಲೇ ಇಡೀ ಸಮುದಾಯದ ಮನಸ್ಸಿನ ಕಸವನ್ನು ಹೊಡೆಯುತ್ತ ಇರುವವಳು ಯಮುನಾ, ಒಂದರ್ಥದಲ್ಲಿ ನಮಗೆಲ್ಲ ಮಾದರಿಯಾದಂಥವಳು.

ವಿಮರ್ಶಕ ಓಎಲ್ಎನ್ ಒಂದು ಕಡೆ ಹೇಳಿದ್ದನ್ನು ಇಲ್ಲಿ ನೆನಪಿಸಬಹುದು ಅನಿಸುತ್ತದೆ, ‘ಕಾವ್ಯ ಅನ್ನೋದು ಒಂದು ಸಾಹಿತ್ಯ ಪ್ರಕಾರ ಅಷ್ಟೇ ಅಲ್ಲ, ಬದುಕನ್ನು ನೋಡುವ ಒಂದು ಕ್ರಮ ಕಾವ್ಯ, ಬದುಕನ್ನು ನೋಡುವ ಒಂದು ದೃಷ್ಟಿಕೋನ ಕಾವ್ಯ’ ಅಂತ. ಅಂಥದ್ದೊಂದು ದೃಷ್ಟಿಕೋನದಿಂದ ಕಾವ್ಯವನ್ನು ಬರೀತಾನೇ ಕಾವ್ಯವಾಗಿ ಬದುಕುತ್ತಾ ಇರೋಳು ಯಮುನಾ. ಹಾಗಾಗಿ ಯಮುನಾ ಕವಿತೆಗಳು /ಓ ಮುಂಜಾವಿನ ಹೊಂಬಿಸಿಲೇ/ ಗೇಣರ್ಧ ಅರಿವೆ ತತ್ವಾರದ /ಝೋಪಡಿಗಳಿಗೆ ತುತ್ತು ಕೂಳಾಗಿ ಬಾ/ ಅನ್ನುವ ಮಾನವೀಯ ಸಂವೇದನೆಯನ್ನು ಹೊಂದಿದವುಗಳಾಗಿವೆ.

ಇಡೀ ಜಿಲ್ಲೆಯ ತುಂಬ ‘ಕೆಂಬಾವುಟದ ಹೋರಾಟಗಾರ್ತಿ’ ಎಂದೇ ಹೆಮ್ಮೆಯಿಂದ ಕರೆಸಿಕೊಳ್ಳುವ ಯಮುನಾ ನಿರಂತರ ಹೋರಾಟ ಮತ್ತು ಇತ್ತೀಚಿನ ಕಾವ್ಯ, ಎರಡೂ ಅಸ್ತ್ರಗಳಿಂದ ಇಲ್ಲಿಯ ಅಸಹಾಯಕ ಮಹಿಳೆಯರ ಮೌನವನ್ನು ಮುರಿಯುತ್ತಿರುವಂಥವಳು.

ಈ ‘ಕಾವ್ಯ’ ಮತ್ತು ‘ಹೋರಾಟ’ ಎರಡೂ ಖಂಡಿತ ಬೇರೆ ಬೇರೆ ಅಲ್ಲ, ‘ಸಾಮಾಜಿಕ ಚಳುವಳಿ’ ಎಂಬ ಒಂದು ವೃಕ್ಷದ ಎರಡು ರೆಂಬೆಗಳೇ ಆಗಿವೆ. ಮತ್ತು ಅವೆರಡೂ ಜೀವಪರವಾಗಿ ಸ್ಪಂದಿಸುವ ರೆಂಬೆಗಳೇ. ಕಾವ್ಯ ಅಕ್ಷರದ ನೆಲೆಯಲ್ಲಿನ ಅಭಿವ್ಯಕ್ತಿಯಾದರೆ, ಹೋರಾಟ ಇದು ಚಳುವಳಿಯ ನೆಲೆಯಲ್ಲಿನ ಅಭಿವ್ಯಕ್ತಿ. ಹಾಗಾಗಿ ಯಮುನಾ ಕವಿತೆಗಳು, /ಹುಟ್ಟಿ ಬಂದೋರಿಗೆಲ್ಲ/ ಬಿತ್ತಿ ಬೆಳೆಯೋಷ್ಟು ಜಾಗ/ ಯಾಕಿಲ್ಲ ಯಾಕಿಲ್ಲ/ ಎಂಬ ಮೌಲ್ಯಯುತವಾದ ಸಮಾಜವಾದಿ ಪ್ರಶ್ನೆಯನ್ನು ಎತ್ತುತ್ತದೆ.

ಅವರ ಅರಮನೆಯಲ್ಲಿ/ ನಿಮ್ಮ ಬೆವರ ಹನಿ/ ಅನ್ನುತ್ತಲೇ ಯಮುನಾ ಕವಿತೆಗಳು ಶ್ರಮ ಶಕ್ತಿಯನ್ನು ಕದ್ದ ದುಡಿಮೆಗಳ್ಳರ ಸ್ವಾರ್ಥವನ್ನು ಸಹ ಕೆದಕಿ ನಮ್ಮ ಮುಂದಿಡುತ್ತವೆ.

ಎಲುಬು ಮಂಸಗಳ ಜೀವ ಜಗತ್ತು/ ಕರುಳ ಬಳ್ಳಿಯ ದೂರ ಎಸೆದಿತ್ತು/ ಎಂಬ ಸಾಲಾಗಲೀ, ನಮ್ಮ ಪೊರೆ ಹೊದ್ದ ಕಣ್ಣಿಂದ / ನಿನ್ನ ಮುಖ ಭಾವಗಳ / ಗುರ್ತಿಸಬಲ್ಲ ಮನುಷ್ಯ ನಾನಾಗಲಿಲ್ಲ/ ಹಿಬಾಕುಶಾ/ ಹೀಗೆ ಇಲ್ಲಿಯ ಕವಿತೆಗಳಿಗೆ ಬಡವರ ಕುರಿತು ಕಾಳಜಿ, ಹಸಿವಿನ ಕುರಿತು ತಿಳಿವಳಿಕೆ, ತಾನೇ ತಾನಾಗಿ ಹೋರಾಟದ ಗಳಿಗೆಯಲ್ಲೇ ಸಿಕ್ಕಿದೆ ಅಂದುಕೊಂಡಿದ್ದೇನೆ.

ಹಾಗಾಗಿಯೇ / ಝೋಪಡಿ ಜನಗಳ ದಂಡು ದಂಡು ಒಂದಾಗಿ /ಉಳ್ಳವರ ತ್ಯಾಜ್ಯ ಬಾಚುವುದಿಲ್ಲ/ ಎಂದಾಗ/ ನನ್ನ ಸುಖ ಬೆತ್ತಲಾಯಿತು/ ಎಂಬಂತಹ ಕಾವ್ಯ ಕಟ್ಟಲು ಯಮುನಾಗೆ ಸಾಧ್ಯವಾಗಿದೆ ಅಂದುಕೊಂಡಿರುವೆ.

ಅಳುಮುಖ ನೋಡಿ ಕನ್ನಡಿ ಎಂದೂ ನಗುವುದಿಲ್ಲ/ ಅವಳ ಕನ್ನಡಿ ಯಾವಾಗಲೂ ನಗುತ್ತದಲ್ಲ/ ಬ್ರಹ್ಮಚಾರಿ ಎಂದವನ ಸಹಧರ್ಮಿಣಿ/ ಜಶೋಧಾ ಬೆನ್ ಕುರಿತು ಕವಿತೆ ಒಂದು ರೀತಿಯಲ್ಲಿ ಅನುಕಂಪದಿಂದ ತುಡಿಯುತ್ತದೆ. ಹೀಗೆ ಇನ್ನೂ ಹಲವಾರು ಕವಿತೆಗಳು ಮಹಿಳೆಯರ ಸಮಾನತೆಯ ಕುರಿತು ನಮ್ಮ ಅರಿವನ್ನು ಹೆಚ್ಚಿಸುತ್ತದೆ.

ನನ್ನ ಆಲೋಚನೆಗಳು ಮಾರಲ್ಪಡುವದಿಲ್ಲ/ ಹಂಚುವೆ/ (ಪ್ರತಿಧ್ವನಿಸುವೆ) ಮತ್ತು /ನನ್ನದಲ್ಲದ ಸ್ವಪ್ನ ನಿರೀಕ್ಷಿಸಲಾರೆ/ ಅಲ್ಲದ ತಪ್ಪುಗಳ ನಾ ಒಪ್ಪಲಾರೆ/ (ಉಯಿಲಿಗೆ ಸಹಿ ಹಾಕಿ) ಎಂಬಲ್ಲೆಲ್ಲ ಒಂದು ನಿಸ್ವಾರ್ಥದ ಮಾನವೀಯ ಸ್ಪಂದನ ಕಾಣುತ್ತದೆ.

ಇಲ್ಲಿ ಕಾವ್ಯ ಅಂದರೆ, ಅವಳ ಹೋರಾಟದ ಅನುಭವಗಳ ಇನ್ನೊಂದು ಅವತಾರವೇ, ಇಲ್ಲಿಯ ಕಾವ್ಯದ ಅಂಗಾಂಗ ಕೂಡ ಈ ಕವಿಯ ಜೀವನದರ್ಶನದಿಂದಲೇ ಮೈತಾಳಿದ್ದು ಅಂತ ನನಗಂತೂ ಅನ್ನಿಸಿದೆ. ಅನೆಕ್ಸ್ ಹೆಲಿ ಅನ್ನೋ ಆಂಗ್ಲ ಲೇಖಕ ಹೇಳಿದ ಒಂದು ಮಾತು ಇಲ್ಲಿ ನೆನಪಿಸಿಕೊಳ್ಳುವದಾದರೆ, ‘ಒಬ್ಬ ಬಡವ, ಒಬ್ಬ ದಲಿತ, ಒಬ್ಬ ಮಹಿಳೆ, ಈ ಮೂವರಲ್ಲಿ ನಾವು ಯಾರೇ ಒಬ್ಬರಾಗಿದ್ದರೂ ಈ ಭೂಮಿಯಲ್ಲಿ ಸುರುಳೀತ ಬದುಕು ನಡೆಸಲು ಅಸಾಧ್ಯ’ ಅಂತ. ಹಾಗಾದರೆ, ಈ ಮೂರೂ ಆಗಿರುವಂಥ ಮಹಿಳೆಯರ ಪಾಡು ಏನು?

ಅಂತೆಯೇ ಬಡ – ದಲಿತ – ಮಹಿಳೆಯರ ಪರವಾಗಿ ಹೋರಾಟ ಮಾಡಿ, ಅವರ ಅಭಿವೃದ್ಧಿಯ ಕನಸು ಕಾಣುತ್ತಿರುವ ಯಮುನಾಗೆ, ನೊಂದ ಮಹಿಳೆಯರೆಲ್ಲ ಅವಳ ಕೈಗೂಸುಗಳೇ. ಮತ್ತು ಈಗ ಕವಿಯಾಗಿರುವ ಯಮುನಾ ಈ ಸಮಾಜದ ಕೈಗೂಸು ಅನ್ನಬಹುದು.

ಗ್ರಾಮಭಾರತದ ಅವಳ ಚಿಂತನೆಗೆ ಒಂದು ತಾಜಾ ಉದಾಹರಣೆಯಂತೆ ಇಲ್ಲಿ ಅವಳ ಒಂದು ಕವಿತೆ ನಾವು ಗಮನಿಸಬಹುದು, /ನನ್ನ ಕವನ ಹುಟ್ಟಿದ್ದು/ ಒಳ್ಳಿಗೆ ಮೈಗೊಟ್ಟು ನುಂಪಾದ ಧಾನ್ಯದಲ್ಲಿ/ ಕೆರಮಣೆಯ ಗರಗಸಕ್ಕೆ ತುತ್ತಾದ ಕಾಯಿಕಡಿಯಲ್ಲಿ/ ಅನ್ನುತ್ತದೆ. ಇಲ್ಲಿ ಬರುವ ಗ್ರಾಮೀಣ ಭಾಷೆಯ ಹದ ನೋಡಿ, ನನಗೆ ವಯಕ್ತಿಕವಾಗಿ ತುಂಬ ಇಷ್ಟವಾದ ಪದ್ಯ ಇದು. ಇಲ್ಲಿ ಬರುವ ಜನಪದದ ಭಾಷೆಯೇ ಕವಿತೆಗೆ ಲಯ ಮತ್ತು ಹೊಸ ವಿಸ್ತಾರವನ್ನು ತಂದುಕೊಟ್ಟಿದೆ ಅಂದುಕೊಂಡಿದ್ದೇನೆ.
finger printಮುಳುಗಿ ತೇಲುತ್ತ / ಉಸಿರಿಡ್ಹಿದು ಈಜುತ್ತ/ ರುಚಿಕಟ್ಟು ಮೀನ್ ಪಳ್ದಿ ನಮ್ ಬಾಯಿಗೆ/ ಇದು ಕೂಡ ಮೀನುಗಾರರ ಅನಿಶ್ಚಿತ ಸಾಹಸದ ಕುರಿತು ಹೇಳುವ ಇನ್ನೊಂದು ಗ್ರಾಮ್ಯ ಪದ ಬಳಕೆಯ ವಿಶಿಷ್ಟ ಕವಿತೆ. ಹಿಂದೆ ವಡ್ರ್ಸವರ್ಥ ನಂತಹ ಕವಿಗಳು ಕೂಡ ಜನಭಾಷೆಗೆ ಅಗ್ರಸ್ಥಾನವನ್ನೇ ಕೊಟ್ಟಿದ್ದರು. ಇಲ್ಲಿ ಅವನೇ ಹೇಳಿದ ಸಾಲನ್ನು ನೆನಪಿಸೋದಾದ್ರೆ, ‘ಭಾವನೆಗಳ ತೀವ್ರತೆಯನ್ನು ಹೊತ್ತು ನಿಲ್ಲಲು ಸಮರ್ಥವಾಗುವ ಭಾಷೆ ಎಂದರೆ, ಗ್ರಾಮ್ಯ ಭಾಷೆಯೇ’ ಹಾಗಾಗಿಯೇ /ತಾನುಟ್ಟ ಕಚ್ಚೆ ತುಂಡು ಬದಲಾಗದೇ / ಇಡೀ ವಸ್ತ್ರ ಸಿಗಲಾರದೇ/ ಎನ್ನುವ ಕುಣಬೀ ಅಜ್ಜ ತಾಂಬ್ಡ್ಯಾ ನನ್ನು ಯಮುನಾ ತನ್ನ ಕಾವ್ಯದಲ್ಲಿ ಹಿಡಿದಿಡಬಲ್ಲಳು.
ಯಮುನಾ ಕಾವ್ಯದ ಗುಣವೇ ಮಾನವೀಯತೆಯನ್ನು ಮತ್ತು ನೈತಿಕತೆಯನ್ನು ಬೆಳೆಸುವದು. ಮತ್ತು ಆಮೂಲಕ ಅಸಹಾಯಕರಿಗೊಂದು ಅಸ್ಥಿತ್ವವನ್ನು, ಅವರಲ್ಲೊಂದು ವ್ಯಕ್ತಿತ್ವವನ್ನು ರೂಪಿಸುವದು. /ನಿನಗೇಕೆ ಜ್ಞಾನ ಸಂಪತ್ತು ವಿದ್ಯೆ ವ್ಯವಹಾರ/ ಎಂದ ಮನುಸ್ಮೃತಿಯ ಮನುವಿನ ಮಾತಿಗೆ ಪ್ರತಿರೋಧವನ್ನು ವ್ಯಕ್ತಪಡಿಸುತ್ತಲೇ ಯಮುನಾ /ಒಣಹುಲ್ಲ ಬರಿ ಮೇವು ಈ ಜೀವ/ ಎಂದು ಒಂದು ಹಾಲಕ್ಕಿ ಹೆಣ್ಣಿನ ಕುರಿತೂ ಮಿಡಿಯಬಲ್ಲಳು.

ಇವೆಲ್ಲದರ ಹಿನ್ನೆಲೆಯಲ್ಲಿ ‘ಒಂದು ಸಮಾಜದ ಅಭಿವೃದ್ಧಿಯನ್ನು ಅಳೆಯಬೇಕಿದ್ದರೆ, ಆ ಸಮಾಜದಲ್ಲಿಯ ಮಹಿಳೆಯರ ಅಭಿವೃದ್ಧಿಯನ್ನು ಪರಿಗಣಿಸಬೇಕು’ ಎಂದು ಅಂಬೇಡ್ಕರ್ ಯಾವಾಗಲೂ ಹೇಳುತ್ತಿದ್ದ ಹಾಗೆ, ಅಂಥದೊಂದು ಅಭಿವೃದ್ಧಿಯ ಮಹಿಳಾ ಸಮಾಜವನ್ನು ಕಟ್ಟಲು ಕಂಕಣ ಕಟ್ಟಿ ನಿಂತವಳು ಯಮುನಾ.
ಶಿಖರದಾಚೆಗೆ ನನ್ನ ಮನೆಯೋ / ಶಿಖರದೀಚೆಗೆ ನನ್ನ ಮನೆಯೋ / ಎಂದು ಸೀಮಾತೀತ ಹಸುಕಂದನ ದ್ವಂದ್ವವನ್ನು ಹೇಳುವ ಜೊತೆಜೊತೆಗೇ ಯಮುನಾ ಕವಿತೆಗಳು /ಪ್ಯಾಲಿಸ್ಟೇನ್ ಗುಬ್ಬಚ್ಚಿ ಸುತ್ತ ಹದ್ದುಗಳ ಗಾಳಿಪಟ ಹಾರಿಸಿವೆ/ ಎಂದು ಅಮೇರಿಕೆಯ ಅಟ್ಟಹಾಸದ ಕುರಿತೂ ಬರೆಯಬಲ್ಲಳು. /ಚಿನ್ನದ ಗಣಿಗಿಳಿದ ಎಲುಬಿನ ಗೂಡುಗಳ/ ಹಸಿವಿನ ಧ್ವನಿ ನೀನು/ ನಿನ್ನದೇ ಧ್ವನಿ/ ನನ್ನಲ್ಲೂ ಪ್ರತಿಧ್ವನಿಸಿದೆ/ ಮಂಡೇಲಾ/ ಅನ್ನುವ ಹೋರಾಟಕ್ಕೆ ಸ್ಪೂರ್ತಿಯಾದ ಕವಿತೆಯಾಗಿರಬಹುದು, /ಸುಡು ಬಿಸಿಲ ಬೋಳು ಗುಡ್ಡದಲಿ/ ಬೆಂಕಿಪಟ್ನ ಮನೆಗಳೆದ್ದವು/ ಕುದಿವ ಕಬ್ಬಿಣದ ತಗಡು/ ನೆತ್ತಿಯಲಿ/ ಕಾಲೆಡವಿದರೆ/ ಬೀಳುವ ಗೋಡೆ/ (ಸೀಬರ್ಡ ಪರಿಹಾರ) ಅನ್ನುವ ಸಂತೃಸ್ತರ ಕವಿತೆಯಾಗಿರಬಹುದು, /ಮೌನ ಮುರಿದ ಭಾಷೆಗೆ / ಮಂಥರೆಯ ಪಟ್ಟ ಕಟ್ಟಿದ / ಎಂಬಂಥ ಪುರಾಣ ಕತೆಗಳು ಕೂಡ ಹೆಣ್ಣಿನ ಸಿದ್ಧ ಮಾದರಿಯೊಂದನ್ನು ತಾನೇ ರೂಪಿಸಿ ಕೂಡಿಸಿವೆ ಎಂಬ ಕಾಳಜಿಯನ್ನು ತೋರ್ಪಡಿಸುತ್ತಲೇ ಯಮುನಾ, ಈ ವ್ಯವಸ್ಥೆ ಹೆಣ್ಣುಮಕ್ಕಳಿಗೆ ಸುರುಳೀತ ಮಾತಾಡಲು ಬಿಡುತ್ತಿಲ್ಲ ಎಂಬುದನ್ನು ಸೂಚ್ಯವಾಗಿ ಅರುಹುತ್ತಾಳೆ. ಹೀಗೆ ಇಲ್ಲಿ ನನ್ನಿಷ್ಟದ ಕವಿತೆಗಳು ತುಂಬಾ ಇವೆ. ನೀವೆಲ್ಲ ಪುಸ್ತಕ ಕೊಂಡು ಓದಲಿ ಎಂಬ ಕಾರಣಕ್ಕೆ, ಇಲ್ಲಿ ಕೆಲವೊಂದು ಕವಿತೆಗಳನ್ನು ಮಾತ್ರ ಹೆಸರಿಸುತ್ತಿದ್ದೇನೆ.

ಹಾಗಾಗಿ ಬರವಣಿಗೆ ಮತ್ತು ಹೋರಾಟದ ಮೂಲಕವಾದರೂ ನಾವೆಲ್ಲ ಈ ಅಸಹನೀಯ ಮೌನವನ್ನು ಮುರಿಯಲೇಬೇಕಾಗಿದೆ, ಅನ್ನುವ ಸಂದೇಶವನ್ನು ಈ ಕೃತಿಯುದ್ದಕ್ಕೂ ನಾವು ಕಾಣುತ್ತೇವೆ. ಹೀಗೆ ಅಪ್ಪಟ ಕವಿಗಳು ಯಾವಾಗಲೂ ತಮ್ಮ ಆಶಯವನ್ನು ಒಂದು ಸಂದೇಶದ ಮೂಲಕ ಓದುಗರನ್ನು ಮುಟ್ಟುತ್ತಾರೆ, ಕವಿಯಾಗಿ ಯಾವುದೇ ಒಂದು ಸಂದೇಶವನ್ನು ಮಾನವಕುಲಕ್ಕೆ ಕೊಡದೇ ಇದ್ದರೆ, ಅಂಥ ಕವಿತೆಗಳು ವ್ಯರ್ಥ ಅಂತ ನಾನಂತೂ ನಂಬಿದ್ದೇನೆ.

ಈ ಕರಾಳ ವ್ಯವಸ್ಥೆಯ ಸಾಮಾಜಿಕ ಪರದೆಯ ಹಿಂದೆ ನಲುಗುತ್ತಿರುವ ಜೀವಿಗಳ ಚಿತ್ರಗಳನ್ನು ಎಳೆತಂದು ರಂಗಸ್ಥಳಕ್ಕೆ ಹಾಕುವುದಷ್ಟೇ ಕವಿಗಳ ಕೈಯಲ್ಲಿ ಸಾಧ್ಯವಾಗುವ ಸಾಮಥ್ರ್ಯ ಮಾತ್ರ ಆಗಿ ಉಳಿದಿಲ್ಲ ಈಗ, ಯಮುನಾಳಂತಹ ಅಪರೂಪದ ವ್ಯಕ್ತಿತ್ವವುಳ್ಳವಳು, ಜನಸಮುದಾಯದ ನಡುವೆ ಹೋಗಿ ನಿಂತು, ಅವರ ಸಂಕಷ್ಟಗಳಿಗೆ ಸಾಂತ್ವನದ ಮಡಿಲು ನೀಡುವ ಮಾನವೀಯ ಮನಸ್ಸಿನ ಬದ್ಧತೆಯನ್ನು ಹೊಂದಿದ್ದಾಳೆ, ಎಂಬುದು ಒಂದು ಮಹತ್ವದ ಹಾಗೂ ಇಡೀ ಲೋಕವೇ ಮೆಚ್ಚತಕ್ಕ ಸಂಗತಿ.

ಹೀಗೊಂದು ಮಾನವೀಯ ನೆಲೆಯ ಆಲೋಚನೆಯ ಬೆಳಕು, ಯಮುನಾ ಬರೆದ ಪ್ರತಿಯೊಂದು ಕವಿತೆಯಲ್ಲಿ ಎದ್ದು ತೋರುತ್ತದೆ, ಆ ಬೆಳಕು ಸಹೃದಯರಿಗೂ ದಕ್ಕಲಿ ಎಂದು ಆಶಿಸುತ್ತ, ಅವಳ ನಿಸ್ವಾರ್ಥ ಹೋರಾಟಕ್ಕೂ ಮತ್ತು ಅವಳ ಈ ನಿಸ್ವಾರ್ಥ ಕವಿತೆಗಳಿಗೂ, ತುಂಬು ಪ್ರೀತಿಯಿಂದ ಶುಭಕೋರುವೆ.

‍ಲೇಖಕರು Admin

24 February, 2016

3 Comments

  1. Roopa.k

    ಯಮುನಾ ನಿಮ್ಮ ಈ ಚೈತನ್ಯಕ್ಕೆ ನಮಸ್ಕಾರ.

  2. Anonymous

    ಚೆನ್ನಾಗಿ ಬರೆದಿದ್ದಾರೆ,

  3. ಸುಬ್ರಾಯ ಮತ್ತೀಹಳ್ಳಿ.

    ಯಮುನಾ ರವರ ಬದುಕಿನ ಒಟ್ಟೂ ಹೋರಾಟವೇ ಕಾವ್ಯವಾಗಿ ಹರಳು ಗಟ್ಟಿದೆ. ಅವರ ಻ಅಂತರಂಗದ ಪ್ರಾಮಾಣಿಕ ಸಂವೇದನೆಯನ್ನು
    ಅಷ್ಟೇ ಕಾವ್ಯಾತ್ಮಕವಾಗಿ ಸುನಂದಾ ತಮ್ಮ ಻ಅಕ್ಷರದಲ್ಲಿ ಹಿಡಿದಿರಿಸಿದ್ದಾರೆ. ನಾನು ಅತ್ಯಂತ ಇಷ್ಟ ಪಡುವ ಲೇಖಕಿಯರು ಅವಧಿಯ ಪಾನಕದಲ್ಲಿ ಸಕ್ಕರೆ ಏಲಕ್ಕಿಯಾಗಿ ಬೆರೆತು ಖುಷಿನೀಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಒಬ್ಬ ಸಮರ್ಥ ಕವಯತ್ರಿಯಾಗಿ ಅರಳಿದ ಯಮುನಾ ಗಾಂವಕರ್ ಮತ್ತು ಅಷ್ಟೇ ಸಮರ್ಥವಾಗಿ ಕಾವ್ಯದ ರಸಗ್ರಹಣಗೈದ ಸುನಂದಾ ರಿಗೆ ಹಾರ್ದಿಕ ಶುಭಾಶಯಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading