ಖ್ಯಾತ ಕಲಾವಿದೆ ಗಿರಿಜಾ ಲೋಕೇಶ್ ಅವರ ಆತ್ಮಕಥನ ಹೊರಬರುತ್ತಿದೆ.

ಜೋಗಿ ಇದನ್ನು ನಿರೂಪಿಸಿದ್ದಾರೆ.
ಅಂಕಿತಾ ಪ್ರಕಾಶನ ಹೊರತರುತ್ತಿರುವ ಈ ಕೃತಿಗೆ ಚಂದ್ರಶೇಖರ ಕಂಬಾರರು ಬರೆದ ಮುನ್ನುಡಿ ಇಲ್ಲಿದೆ-

ಚಂದ್ರಶೇಖರ ಕಂಬಾರ
ಶ್ರೀಮತಿ ಗಿರಿಜಮ್ಮನವರನ್ನು ನಾನು ಕಂಡದ್ದು 1972ರ ಅವಧಿಯಲ್ಲಿ. ಲಂಕೇಶರ ನೇತೃತ್ವದಲ್ಲಿ ನನ್ನ ‘ಜೋಕುಮಾರಸ್ವಾಮಿ’ ಲಂಕೇಶರ ‘ಸಂಕ್ರಾಂತಿ’ ಹಾಗೂ ‘ಈಡಿಪಸ್’ ಅನುವಾದ – ಈ ಮೂರು ನಾಟಕಗಳ ಮೂರು ದಿನಗಳ ಒಂದು ನಾಟಕೋತ್ಸವ ಆಚರಿಸಲು ನಿರ್ಧರಿಸಿದೆವು. ಮೂರು ನಾಟಕಗಳನ್ನು ನಿರ್ದೇಶಿಸಲು ಆಗ ದೆಹಲಿಯಲ್ಲಿದ್ದ ಬಿ ವಿ ಕಾರಂತರನ್ನು, ನಟಿಸಲು ಸಿನಿಮಾ ಸ್ಟಾರ್ ಖ್ಯಾತಿಯ ಗಿರೀಶ್ ಕಾರ್ನಾಡರನ್ನು ಕರೆಸಿ, ಒಂದು ತಿಂಗಳು ರಿಹರ್ಸಲ್ ಮಾಡಿ ಕಲಾಕ್ಷೇತ್ರದ ಬಯಲನ್ನು ರಂಗವಾಗಿಸಿ ಆಡಿದೆವು.
ಮೊದಲನೇ ದಿನ ಮೊದಲನೇ ಶೋ ‘ಜೋಕುಮಾರಸ್ವಾಮಿ’ ನಾಟಕ ಮುಗಿಸಿ ಪ್ರತಿಕ್ರಿಯೆಗಾಗಿ ಹೊರಗೆ ಬಂದರೆ ಗೌಡನ ಪಾತ್ರ ಗಿರೀಶರಿಲ್ಲ. ನಾಟಕಕೋರ ನಾನಿಲ್ಲ, ನಿರ್ದೇಶಕ ಕಾರಂತರಿಲ್ಲ – ಎಲ್ಲರ ಬಾಯಿ ತುಂಬ ಗಿರಿಜಾ ಗಿರಿಜಾ… ಆ ದಿನ ಶಿವರಾಮ ಕಾರಂತರು ನಾಟಕ ನೋಡಲು ಬಂದಿದ್ದರು. ಅವರ ಅಭಿಪ್ರಾಯ ನನ್ನ ಸ್ನೇಹಿತರಿಂದ, ತಿಳಿಯಿತು: ಶಿವರಾಮ ಕಾರಂತರು ಗಿರಿಜಾ ನಟನೆಯನ್ನು ತುಂಬ ಹೊಗಳಿದರು! ಮನೆಗೆ ಹೋದವರೇ ಅವಸರದಲ್ಲಿ ತಮ್ಮ ಮಗಳನ್ನು ಎರಡನೇ ಶೋ ನೋಡಲು ಕಳಿಸಿದರು!
ಇಂಥದೇ ಇನ್ನೊಂದು ಘಟನೆ ಹೇಳುತ್ತೇನೆ: ‘ಜೋಕುಮಾರಸ್ವಾಮಿ’ ಒಂದೇ ವಾರದಲ್ಲಿ ಇಡೀ ದೇಶದ ರಂಗಾಸಕ್ತರ ಕುತೂಹಲ ಕೆರಳಿಸಿತು. ದೆಹಲಿಯ ನಾಟ್ಯ ಸಂಘದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಬಂತು. ಪ್ರಶಸ್ತಿ ಕೊಡುವ ದಿನ ನಾಟಕದ ಪ್ರದರ್ಶನವೂ ಇರಬೇಕೆಂದು ತಂಡಕ್ಕೂ ಕರೆ ಬಂತು.
ಸುದೈವದಿಂದ ಆ ದಿನ ನಾಟಕ ಪ್ರದರ್ಶನಕ್ಕೆ ಅಲ್ಕಾಜಿ ಬಂದಿದ್ದರು, ನಾಟಕ ನೋಡಿ ನಮ್ಮ ಇಡೀ ತಂಡಕ್ಕೆ ಮಾರನೇ ದಿನ ಎನ್ ಎಸ್ ಡಿ ಗೆ ಟೀ ಗೆ ಬರಬೇಕೆಂದೂ ಕರೆ ಬಂತು. ಅಲ್ಕಾಜಿ ಸಾಮಾನ್ಯರೇ, ಆಧುನಿಕ ಭರತಮುನಿಯೆಂಬಷ್ಟು ಗೌರವಾನ್ವಿತರು. ನಮ್ಮ ನಾಟಕದ ಸ್ತ್ರೀ ಪಾತ್ರಗಳ ಪ್ರತಿಭೆಯನ್ನ ಹೊಗಳಿ ಮಾತಾಡಿದರು. ಅವರ ಬಾಯಲ್ಲೂ ಗಿರಿಜಮ್ಮನೇ! ಹೋಗುವಾಗಿರಲಿಲ್ಲ, ಬರುವಾಗ ಟ್ರೇನಿನಲ್ಲಿ ಸಹ ನಟನಟಿಯರ ಬಾಯಲ್ಲೂ ಗಿರಿಜಮ್ಮನೇ. ಆಗಲೇ ಅವರು ತಮ್ಮ ಸಹ ನಟಿಯರ ಮುಂದೆ ʼಗುಂಗುರು ಕೂದಲಿನ ಹುಡುಗʼನೊಬ್ಬನ ಬಗ್ಗೆ ಮೋಗಂ ಬಾಯಿ ಬಿಟ್ಟಿದ್ದರು. ಅದು ಮುಂದೆ ಲೋಕೇಶನೊಂದಿಗಿನ ಮದುವೆಯಲ್ಲಿ ನಿಜವಾಯಿತು.

ಇರಲಿ, ಕಪ್ಪಣ್ಣ, ನಾಗೇಶ್, ಕಾರಂತ, ಲೋಕೇಶ್, ಸಿಂಹ ಇತ್ಯಾದಿ ಅವರ ಬಳಗದ ಒಂದೆರಡು ನಾಟಕ ಪ್ರವಾಸದಲ್ಲೂ ನಾನಿದ್ದೆನೆಂದು ನೆನಪು. ನನ್ನ ನಾಟಕದಲ್ಲಿ, ನನ್ನ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಲೋಕೇಶ್ ನಾನು ನೆರೆ ಹೊರೆಯಾಗಿ ಬಂದ ಅಲ್ಪಾವಧಿಯಲ್ಲೇ ನಮ್ಮನ್ನಗಲಿದರು. ಗಿರಿಜಮ್ಮನ ಮೇಲೆ ಬಿದ್ದ ಕೌಟುಂಬಿಕ ಭಾರ ನಮ್ಮ ಕಲ್ಪನೆಗೆ ಮೀರಿದ್ದು. ಎಳೆಯ ಮಕ್ಕಳನ್ನು ಉಡಿಯಲ್ಲಿ ಕಟ್ಟಿಕೊಂಡು ಅವರಿಗೆ ಅತ್ಯುತ್ತಮ ಭವಿಷ್ಯ ಕಟ್ಟಿಕೊಟ್ಟು ಅವರ ಬಾಳು ಬೆಳಗುವಂತೆ ಮಾಡಿ ನಗುನಗುತ್ತಾ ಎಲ್ಲರಿಗೂ ಬೇಕಾಗಿ ಬೆಲ್ಲದ ಹೇರಾಗಿ ಬದುಕುವುದು ಸಣ್ಣ ಸಾಧನೆಯಲ್ಲ.
ಗಿರಿಜಮ್ಮ ಕನ್ನಡದ ಅತ್ಯುತ್ತಮ ರಂಗನಟಿಯರಲ್ಲಿ ಒಬ್ಬರು. ನಟನೆಯಲ್ಲಿ ಲೋಕೇಶನಂತೆ ತಮ್ಮದೂ ಒಂದು ಶೈಲಿಯನ್ನು ಸೃಷ್ಟಿಸಿಕೊಂಡು ರಂಗಕ್ಷೇತ್ರದಲ್ಲಿ, ಗಟ್ಟಿಯಾಗಿ ನಿಂತು ಚರಿತ್ರೆ ನಿರ್ಮಿಸಿಕೊಂಡವರು. “ದಿನಕ್ಕೆ ನಾಲ್ಕು ನಾಟಕಗಳ ನಾಲ್ಕು ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದು…. ಆಗ ಅಂಥ ಎನರ್ಜಿ ಇತ್ತು. ಅನಿವಾರ್ಯತೆಯೂ ಇತ್ತು. ಹೊಟ್ಟೆ ಎಲ್ಲವನ್ನೂ ಕಲಿಸುತ್ತದೆ. ಎಷ್ಟು ಬೇಕಾದರೂ ದುಡಿಸುತ್ತದೆ” – ತಪಸ್ವಿನಿ ಗಿರಿಜಮ್ಮನ ಮಾತುಗಳಿವು!
ವಿಶೇಷವೆಂದರೆ ಇದು ಆತ್ಮಚರಿತ್ರೆ. ಸಾಮಾನ್ಯವಾಗಿ ಆತ್ಮಚರಿತ್ರೆಗಳೆಂದರೆ ಸತ್ಯ ಹೇಳುವ ನೆಪದಲ್ಲಿ ತಮ್ಮನ್ನು ತಾವು ವೈಭವಿಸಿಕೊಳ್ಳುವ ಆತ್ಮಪ್ರಶಂಸೆಗಳಾಗಿರುತ್ತವೆ. ಆಶ್ಚರ್ಯವೆಂದರೆ ಇಲ್ಲಿಯ ಸಾಕ್ಷಿಪ್ರಜ್ಞೆ ತನ್ನನ್ನು ತಾನು ನಿಯಂತ್ರಿಸಿಕೊಂಡು ತಾನೊಬ್ಬ ಸಾಮಾನ್ಯ ನಟಿ, ಮಡದಿ, ತಾಯಿ ಎಂಬ ಪ್ರಜ್ಞೆ ಅವರನ್ನು ದಾರಿ ತಪ್ಪಿಸಿಲ್ಲ. ಆದ್ದರಿಂದಲೇ ಇದು ಇಷ್ಟೊಂದು ಸೊಗಸಾದ ಆತ್ಮಚರಿತ್ರೆಯಾಗಿರೋದು.
ಕನ್ನಡದ ಹೆಮ್ಮೆಯ ಕಲಾವಿದೆ, ಮತ್ತು ತಾಯಿಯಾದ ಗಿರಿಜಮ್ಮನವರಿಗೆ ವಂದನೆಗಳು. ಹಲ್ಲುಕಚ್ಚಿ ವಾಸ್ತವತೆಗೆ ಕಟ್ಟುಬಿದ್ದು ಅತ್ಯುತ್ತಮ ಆತ್ಮಚರಿತ್ರೆ ನೀಡಿದ ಮಿತ್ರ ಜೋಗಿ ಅವರಿಗೂ ನಮ್ಮ ಅಭಿನಂದನೆಗಳು ಸಲ್ಲುತ್ತವೆ.






0 Comments