'ಕಂದ ಹೊರಗಾಗಲೆಂದು ಕಾಯುತ್ತಾ…' – ರೂಪ ಹಾಸನ

ರೂಪ ಹಾಸನ

ಇಂದು ಹೊರಗಾಗಬಹುದು…. ನಾಳೆ ಹೊರಗಾಗಬಹುದು……. ಆತಂಕದಲ್ಲಿ ಕಾದಿದ್ದೇ ಬಂತು. ಆ ಕಂದ ಹೊರಗಾಗಲೇ ಇಲ್ಲ……. ಮತ್ತೆ ಈಗ ಆ ಮಗುವಿನ ಬಸಿರೊಳಗೆ ಎಂಥೆಂಥಾ ಬಾಂಬುಗಳನ್ನು ಹಾಕಬೇಕೋ….. ಜರ್ಜರಿತವಾಗುವ ಆ ಕಂದನ ಮೈ-ಮನಸುಗಳಲ್ಲಿ ಅದೇ ಮೊದಲಿನ ತಾಜಾತನ, ಸಹಜತೆಯನ್ನ ಮತ್ತೆ ಯಾರಿಗಾದರೂ ಎಂದಾದರೂ ಅರಳಿಸಲು ಸಾಧ್ಯವೇ? ಎಂದು ಯೋಚಿಸುತ್ತಲೇ ಹೃದಯ ದ್ರವಿಸುತ್ತದೆ.
ಆ ಕಂದನ ತಾಯಿ ಅನಿವಾರ್ಯತೆಗೆ ಸಿಕ್ಕಿ ಲೈಂಗಿಕವೃತ್ತಿಯಲ್ಲಿ ತೊಡಗಿಕೊಂಡ, ತರಕಾರಿಯನ್ನು ಮಾರಿ ಜೀವಿಸುವ ಓರ್ವ ದಲಿತ ಹೆಣ್ಣುಮಗಳು. ತನ್ನಂತೆ ತನ್ನ ಮಗಳೂ ಆಗಬಾರದೆಂಬ ಕಾಳಜಿಯಿಂದ ಅತೀ ಎಚ್ಚರಿಕೆಯಿಂದಲೇ ಅವಳನ್ನು ಕಾಯುವವಳು…… ಅಂದು ಅದೆಂಥಾ ದುರ್ದಿನವೋ 2 ದಿನಗಳಿಂದ ಕಾಲುನೋವಿನ ನೆವ ಹೇಳಿ ಶಾಲೆಗೆ ಹೋಗದೇ ಮನೆಯಲ್ಲೇ ಕೂತ ಮಗಳನ್ನು ಬೈಯ್ದು, ಎರಡೇಟು ಬಿಗಿದು ಗದರಿದ್ದಾಳೆ. ಆ ಬಾಲಕಿಯ ಶಿಕ್ಷಕಿ ದಾರಿಯಲ್ಲಿ ಸಿಕ್ಕು, ‘ಚೆನ್ನಾಗಿ ಓದೋ ಹುಡುಗಿನ ಮನೆಯಲ್ಲಿ ಯಾಕೆ ಕೂರಿಸ್ತಿಯಾ’ ಎಂದು ತಾಯಿಯ ಮೇಲೆ ಜಬರದಸ್ತು ಮಾಡಿದ್ದೇ ಇವಳ ಸಿಟ್ಟಿಗೆ ಕಾರಣ!
ಮತ್ತೂ….. ಮನೆಯಲ್ಲಿ ಎಂಥಹಾ ವಾತಾವರಣವಿತ್ತೋ…….ಮಾರನೇ ದಿನ ಬೆಳಗ್ಗೆಯೇ ಈ 14ರ ಹರೆಯದ ಬಾಲೆ ಎನ್ಎಸ್ಎಸ್ ನೆವ ಹೇಳಿ ಮನೆ ಬಿಟ್ಟವಳು…… ದಿನಗಳುರುಳಿದರೂ ಪತ್ತೆಯೇ ಇಲ್ಲ. ಪೊಲೀಸ್ ಇಲಾಖೆಯ ಮೇಲೆ ನಿರಂತರ ಒತ್ತಡ ತಂದು ಹುಡುಕಿಸಲು ಪ್ರಯತ್ನಿಸಿದಾಗ ಕೊನೆಗೂ 20ದಿನಗಳ ನಂತರ ಬಟ್ಟೆಯ ಮಾಲ್ ಒಂದರಲ್ಲಿ ಸಿಕ್ಕಿ ಬಿದ್ದಿದ್ದಳು……

ತಾಲ್ಲೂಕು ಕೇಂದ್ರದ ತನ್ನ ಮನೆಯಿಂದ ಜಿಲ್ಲಾ ಕೇಂದ್ರಕ್ಕೆ ಬಂದು ದಿಕ್ಕು ತೋರದೇ ಇಡೀ ದಿನ ಬಸ್ಸ್ಟ್ಯಾಂಡ್ನ ಕಲ್ಲಿನ ಮೇಲೆಯೇ ಕಳೆದಿದ್ದಾಳೆ. ಬೆಳಗಿನಿಂದ ಇವಳನ್ನು ಗಮನಿಸುತ್ತಿದ್ದು ರಾತ್ರಿ ಪರಿಚಯ ಮಾಡಿಕೊಂಡ 22ರ ಹರೆಯದ ಯುವಕನ ಬಳಿ ತನಗೊಂದು ಕೆಲಸ ಕೊಡಿಸಲು ಕೇಳಿಕೊಂಡಿದ್ದಾಳೆ. ಅದಕ್ಕೆ ವಯಸ್ಸಿನ ಪ್ರಮಾಣ ಪತ್ರ ಮಾಡಿಸಬೇಕಾಗುತ್ತದೆ, ಸ್ವಲ್ಪ ಸಮಯ ತಗುಲುತ್ತದೆಂದು ಹೇಳಿ ಅವಳನ್ನು ಪಕ್ಕದ ಹಳ್ಳಿಯೊಂದರಲ್ಲಿ ಮನೆ ಮಾಡಿ ಇರಿಸಿಕೊಂಡು ಅವಳನ್ನು ಅಷ್ಟೂ ದಿನವೂ ಉಪಯೋಗಿಸಿಕೊಂಡಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ಋತುಮತಿಯಾಗಿರುವ ಈ ಎಳೆಯ ಬಾಲೆಗೆ ಇದೊಂದು ಅತ್ಯಾಚಾರ, ಅವನು ಮಾಡುತ್ತಿರುವುದು ಅಪರಾಧವೆಂಬುದರ ಅರಿವೂ ಇಲ್ಲ.
ಇವಳು ಸಿಕ್ಕ ನಂತರ, ಅವಳ ಮಾಹಿತಿಯನ್ನನುಸರಿಸಿ ಆ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ, ಕದ್ದೊಯ್ಯುವಿಕೆ…… ಇತ್ಯಾದಿ ಕೇಸುಗಳೂ ಅವನ ವಿರುದ್ಧ ದಾಖಲಾಗಿವೆ. ಚಾಕೊಲೇಟ್ ಹೀರೋನಂತಿರುವ ಆ ಚಿಕ್ಕ ವಯಸ್ಸಿನ ಹುಡುಗನನ್ನು ನೋಡಿದರೂ ಇಂತಹ ಕೆಲಸ ಮಾಡಿದನಲ್ಲಾ ಎಂದು ಸಿಟ್ಟುಕ್ಕುವ ಬದಲು, ಬದುಕು ಹಾಳುಮಾಡಿಕೊಂಡನಲ್ಲಾ ಎಂದು ಸಂಕಟವೆನಿಸುತ್ತದೆ…… ಆದರೆ ಅವನು ಅಮಾಯಕನೇನಲ್ಲ ಪ್ರೀತಿ-ಪ್ರೇಮವಿಲ್ಲದೇ ಸಿಕ್ಕ ಅವಕಾಶ ಉಪಯೋಗಿಸಿಕೊಂಡ ಜಾಣನೇ, ಕಾನೂನು ತಿಳಿದವನೇ….. ಇಷ್ಟಕ್ಕೂ ಅಪರಾಧ ಅಪರಾಧವೇ ತಾನೇ?
ಆದರೆ ಪ್ರೇಮ-ಕಾಮ, ಅತ್ಯಾಚಾರ ಯಾವುದರ ಅರಿವೂ ಇಲ್ಲದ ಈ ಹಳ್ಳಿಯ ಬಾಲೆ, ಅನಿರೀಕ್ಷಿತವಾಗಿ ಗರ್ಭಧರಿಸಿ, ಈಗದನ್ನು ಕಿತ್ತೆಸೆಯಲು ತನ್ನ ಪುಟ್ಟ ಬಸಿರೊಡ್ಡಿ ಅಪರಿಚಿತರೆದುರೆಲ್ಲಾ ಅಸಹಾಯಕವಾಗಿ ನಿಲ್ಲಬೇಕಿದೆ. ತಾಯಿಯ ಪ್ರೀತಿಯ ಆಶ್ರಯವೂ ಇಲ್ಲದೇ ಎಲ್ಲಾ ಬಿಟ್ಟು ಬಾಲಮಂದಿರದಲ್ಲಿದ್ದು ನ್ಯಾಯಾಲಯಕ್ಕೆ ಸಾಕ್ಷಿಯಾಗಬೇಕಾಗಿದೆ…….. ತಪ್ಪು ಯಾರದು? ಸಮಾಜದ್ದೋ, ಪರಿಸರದ್ದೋ, ವಯಸ್ಸಿನದೋ, ಕಾಲದ್ದೋ ಗೊಂದಲದಲಿ ಮನಸು ರೋಧಿಸುತ್ತಿದೆ…..
(ಸತ್ಯ ಘಟನೆಯೊಂದರ ಆಧಾರದ ಮೇಲೆ)

‍ಲೇಖಕರು G

November 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Prabhakar Nimbargi

    ತಪ್ಪು ಯಾರದು? ಸಮಾಜದ್ದೋ, ಪರಿಸರದ್ದೋ, ವಯಸ್ಸಿನದೋ, ಕಾಲದ್ದೋ ಗೊಂದಲದಲಿ ಮನಸು ರೋಧಿಸುತ್ತಿದೆ….. Very delicate issue, can’t be resolved at one stage. This is a proof that reality is much more cruel than cruelty itself!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: