ಸಾಹಿತ್ಯ ಹಾಗೂ ಸಮಕಾಲೀನ ವಿಷಯಗಳ ವೆಬ್ ಪತ್ರಿಕೆಗಳ ಪೈಕಿ ‘ಋತುಮಾನ’ಕ್ಕೆ ತನ್ನದೇ ಆದ ಸ್ಥಾನವಿದೆ. ಕುಂಟಾಡಿ ನಿತೇಶ್ ನೇತೃತ್ವದ ಈ ಸಾಹಸಕ್ಕೆ ಈಗ ೫ ವರ್ಷ.
ಆರ್ಥಿಕ ಮೂಲಗಳಿಲ್ಲದ ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕೇವಲ ಸಾಹಿತ್ಯದ ಮೇಲಿನ ಪ್ರೇಮದಿಂದ ವೆಬ್ ಸಾಹಸ ನಡೆಸುವುದು ಕಷ್ಟವೇ. ಇಂತಹ ಸಂದರ್ಭದಲ್ಲಿ ‘ಋತುಮಾನ’ ಒಳ್ಳೆಯ ಹೂರಣದೊಂದಿಗೆ ಐದು ವರ್ಷ ಪೂರೈಸಿರುವುದು ಋತುಮಾನಕ್ಕೆ ಮಾತ್ರವಲ್ಲ ಕನ್ನಡ ಡಿಜಿಟಲ್ ಪತ್ರಿಕೋದ್ಯಮಕ್ಕೆ ಸಂಭ್ರಮ.
‘ಅವಧಿ’ ಋತುಮಾನಕ್ಕೆ ಶುಭಾಶಯವನ್ನು ಹೇಳುತ್ತಾ ಕುಂಟಾಡಿ ನಿತೇಶ್ ಬರೆದ ಟಿಪ್ಪಣಿಯನ್ನು ಹಂಚಿಕೊಳ್ಳುತ್ತಿದೆ.

‘ಋತುಮಾನ’ ಶುರುವಾಗಿ ಐದು ವರ್ಷಗಳು ತುಂಬಿತು. ನಾವಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ಸಾಧಿಸಿದ್ದೇವೆ ಎಂಬ ಸಂತೃಪ್ತಿ ನಮಗೆ. ನಾಲ್ಕು ವರ್ಷ ನಮ್ಮೊಡನಿದ್ದ ಎಲ್ಲರನ್ನೂ ಮತ್ತೊಮ್ಮೆ ಸ್ಮರಿಸುತ್ತಾ ಐದನೇ ವರ್ಷದಲ್ಲಿ ಅದೇ ನಿರಂತರತೆಯನ್ನು ಕಾಯ್ದುಕೊಳ್ಳುಕೊಳ್ಳುವಲ್ಲಿ ನಮ್ಮೊಂದಿಗಿದ್ದವರು ಪ್ರಮುಖವಾಗಿ ಇವರು.
ಬೇರೆ ಭಾಷೆಯಿಂದ ಪ್ರಮುಖ ವೈಚಾರಿಕ ಲೇಖನಗಳನ್ನು ಕನ್ನಡಕ್ಕೆ ತರುವಲ್ಲಿ, ನಾವು ಚಿತ್ರೀಕರಿಸಿದ ವಿಡಿಯೋಗಳನ್ನು ಎಡಿಟ್ ಮಾಡುವಲ್ಲಿ, ಪ್ರಕಟವಾದ ಕತೆ ಮತ್ತು ಕವಿತೆಗಳಿಗೆ ಚಿತ್ರ ಬರೆದು ಜೀವ ತುಂಬುವಲ್ಲಿ, ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸುವಲ್ಲಿ, ಋತುಮಾನ ಆಯ್ಕೆ ಮಾಡಿ ಪ್ರಕಟಿಸಿದ ಇ ಪುಸ್ತಕಗಳ ತಯಾರಿಕೆಯಲ್ಲಿ ಬಹಳ ಆಸ್ಥೆಯಿಂದ ದುಡಿದವರಿವರು. ಇವರಲ್ಲದೆ ಇನ್ನೂ ಅನೇಕರು ಈ ವರ್ಷ ನಮಗೆ ನೆರವಾಗಿದ್ದಾರೆ. ಅವರೆಲ್ಲರಿಗೂ ತುಂಬು ಮನಸಿನ ಕೃತಜ್ಞತೆಗಳು.

ವಿನಂತಿಸಿದಾಗ ಲೇಖನ ಬರೆದುಕೊಟ್ಟ – ವಿಡಿಯೋ ಸರಣಿಯಲ್ಲಿ ಮಾತಾಡಿದ ಮಹನೀಯರಿಗೂ, ನಮ್ಮ ಪ್ರಯೋಗವನ್ನು ಮೆಚ್ಚಿ ತಮ್ಮ ಕೈಲಾದಷ್ಟು ಧನಸಹಾಯ ಮಾಡಿದ ಎಲ್ಲರಿಗೂ ನಾವು ಆಭಾರಿ. ಇನ್ನೊಂದು ವರ್ಷ ಇದೇ ತೆರನಾಗಿ ನಮ್ಮ ಧ್ಯೇಯೋದ್ದೇಶಗಳಿಗೆ ನಿಷ್ಠರಾಗಿ, ಎಲ್ಲರನ್ನೂ ಒಳಗೊಂಡು ದುಡಿಯುವ ಹುರುಪಿರಲಿ.
ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು.
ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ– https://imjo.in/5fZZ9X






0 Comments