ಮಂಜುನಾಥ ಸ್ವಾಮಿ ಎಂಬ ಸ್ವಯಂಘೋಷಿತ ‘ಚಿತ್ರದುರ್ಗ ಎಕ್ಸ್ ಪ್ರೆಸ್’ ತನ್ನ ರೂಮಿನಲ್ಲಿ ಚಿತ್ರದುರ್ಗದವರನ್ನೇ ಒಟ್ಟು ಮಾಡಿಕೊಳ್ಳುವಾಗ ಈ ಸಮಸ್ಯೆ ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ. ಅಡಿಗೆ ಮಾಡುತ್ತಾ ಕೂರುವ ಯೋಗ ಇವರಿಗೆ ಸಿಕ್ಕಿದೆ. ಹಾಗಾಗಿಯೇ ತಮ್ಮ ಬ್ಲಾಗ್ನಲ್ಲಿ ಅಡುಗೆ ರುಚಿಯನ್ನೂ ಬಡಿಸುತ್ತಿದ್ದಾರೆ. ಇಲ್ಲಿದೆ ಅವರ ಬೆಣ್ಣೆ ಬಿಸ್ಕೆಟ್ ಬರಹ.
ಬೆಣ್ಣೆ ಬಿಸ್ಕತ್ ಗಳನ್ನು ನಾವು ಬೇಕರಿಯಿಂದ ಕೊಂಡು ತಂದು ತಿನ್ನುತ್ತಿದ್ದೆವು. ಅದನ್ನು ಮಾಡಲು ಪಾಕತಜ್ಞರಿಂದ ಮಾತ್ರ ಸಾಧ್ಯ ಎಂದು ತಿಳಿದಿದ್ದ ನಮಗೆ, ಅತ್ತಿಗೆ ಮನೆಯಲ್ಲೇ ಮಾಡುತಿದ್ದದ್ದು ಸಕತ್ ಆಶ್ಚರ್ಯವಾಗಿತ್ತು. ಮನೆಯಲ್ಲಿಯೇ ಮಾಡಿದ ಬಿಸ್ಕತ್ ನ ರುಚಿಯೇ ಬೇರೆ. ಅದರಲ್ಲೂ ನಮ್ಮತ್ತೆ ಕೈ ಬಿಸ್ಕತ್ತು ಸಂಬಂಧಿಗಳ ಮನೆಗಳಲ್ಲಿ ತುಂಬಾ ಪ್ರಸಿದ್ಧಿ. ನನಗಂತು ಹೊಸ ಹೊಸ ತಿಂಡಿ ತಿನಿಸುಗಳನ್ನು ತಿನ್ನುವುದು, ಮಾಡುವುದೆಂದರೆ ಮೊದಲಿಂದಲೂ ತುಂಬಾ ಆಸಕ್ತಿ. ನಾನು ಪಿಯುಸಿ ಓದುವಾಗ ಒಮ್ಮೆ ಇವರ ಮನೆಗೆ ಬಂದಿದ್ದೆ. ಆಗ ಇವರ ಬೆಣ್ಣೆ ಬಿಸ್ಕತ್ತಿಗೆ ಮಾರು ಹೋಗಿ, ಮನೆಗೆ ಬಂದು ನಾನೂ ಮಾಡಿ ಸಂತೋಷ ಪಟ್ಟಿದ್ದೆ.
ನೀವು ಆ ಬೆಣ್ಣೆ ಬಿಸ್ಕತ್ ರುಚಿ ನೋಡಬೇಕೆ? ಹಾಗಿದ್ದರೆ ನಿಮಗಾಗಿ ಮಾಡುವ ವಿಧಾನ ಕೊಟ್ಟಿದ್ದೇನೆ ಪ್ರಯತ್ನಿಸಿ.
ಬೇಕಾಗುವ ಪದಾರ್ಥಗಳು: ಮೈದಾ ಅರ್ಧ ಕಿಲೋ, ಸಕ್ಕರೆ ಅರ್ಧ ಕಿಲೋ, ಒಂದು ಕಪ್ ಬೆಣ್ಣೆ ಅಥವಾ ವನಸ್ಫತಿ, ಬೇಕಿಂಗ್ ಪೌಡರ್ ಒಂದು ಚಮಚೆ, ಒಂದು ಕಪ್ ತುರಿದ ಒಣ ಕೊಬ್ಬರಿ, ಏಲಕ್ಕಿ ಪುಡಿ ಒಂದು ಚಮಚೆ, ಬೆಣ್ಣೆಯಲ್ಲಿ ಕರಿದ ಗೊಡಂಬಿ ಚೂರು ಅರ್ಧ ಕಪ್.
ಮಾಡುವ ವಿಧಾನ: ಮೊದಲು ಸಕ್ಕರೆಯನ್ನು ಪುಡಿ ಮಾಡಿಟ್ಟುಕೊಳ್ಳಿ. ಬೆಣ್ಣೆಯನ್ನು ದ್ರವರೂಪಕ್ಕೆ ಬರುವವರೆಗೂ ನಾದಿಕೊಳ್ಳಿ. ನಂತರ ಪುಡಿ ಮಾಡಿದ ಸಕ್ಕರೆ ಮತ್ತು ಮೈದಾವನ್ನು ಸೇರಿಸಿ ಬೆಣ್ಣೆಯಲ್ಲಿ ಕಲಸಿ. ಬೇಕಿಂಗ್ ಪೌಡರ್, ಏಲಕ್ಕಿ ಪುಡಿ, ಗೋಡಂಬಿ ಚೂರನ್ನು ಬೆರಸಿ. ಸಮನಾದ ಆಕಾರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ. ನಂತರ ಉಂಡೆಗಳನ್ನು ಒಂದು ತಟ್ಟೆಯಲ್ಲಿಟ್ಟು ಮೈಕ್ರೋ ಓವನ್ನಲ್ಲಿಡಿ. ಸುಮಾರು 75 ಡಿಗ್ರಿ ಉಷ್ಣಾಂಶದಲ್ಲಿ ನಾಲ್ಕು ನಿಮಿಷ ಬಿಡಿ. ಬಿಸಿ ಬಿಸಿಯಾದ ಬೆಣ್ಣೆ ಬಿಸ್ಕತ್ ರೆಡಿ.
ಓವನ್ ಬರುವ ಮೊದಲು ಬಿಸ್ಕತ್ ಮಾಡಲು ನಮ್ಮತ್ತೆ ಒಂದು ಉಪಾಯ ಕಂಡುಕೊಂಡಿದ್ದರು. ನುಣುಪಾದ ಮರಳನ್ನು ಒಂದು ಬಾಣಲೆಯಲ್ಲಿ ಹಾಕಿ ಗ್ಯಾಸ್ ಸ್ಟವ್ ಮೇಲಿಟ್ಟು, ಅದರ ಮೇಲೆ ತಟ್ಟೆಯನ್ನು ಬೋರಲಾಗಿ ಇಟ್ಟು, ಅದು ಬಿಸಿಯಾದ ಮೇಲೆ ಎಲ್ಲವನ್ನೂ ಮಿಶ್ರಮಾಡಿ ಕಟ್ಟಿಟ್ಟ ಉಂಡೆಗಳನ್ನು ಇಡುತ್ತಿದ್ದರು. ಇಪ್ಪತ್ತು ನಿಮಿಷಗಳಲ್ಲಿ ಬಿಸ್ಕತ್ ತಯಾರಾಗುತ್ತಿತ್ತು. ಓವನ್ ಇಲ್ಲದಿದ್ದವರು ಬೇಕಿದ್ದರೆ ಈ ತಂತ್ರಜ್ಞಾನದಲ್ಲಿ ಪ್ರಯೋಗ ಮಾಡಿ ನೋಡಬಹುದು. ಓವನಲ್ಲಿ ಮಾಡಿದ ಬಿಸ್ಕತ್ ಗಳಿಗಿಂತ ಇವು ರುಚಿಯಾಗಿರುತ್ತಿದ್ದವು. ಅಥವಾ ನಮ್ಮ ಭ್ರಮೆಯೋ…







0 Comments