ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓತಿಯ ಬೆನ್ನೇರಿ…

ಸಿದ್ಧರಾಮ ಕೂಡ್ಲಿಗಿ

ನಿನ್ನೆ ಮನೆಯೊಳಗೆ ಕಂಪ್ಯೂಟರ್ ನಲ್ಲಿ ಕವನಗಳನ್ನು ನೋಡುತ್ತಿರುವಾಗ ಮನೆಯಾಕೆ ಹೊರಗಿನಿಂದ  ಕೂಗಿದಳು. ವಿಷಯ ಗಂಭೀರವಾದುದೇ ಇರಬೇಕೆಂದು ಹೊರಗೆ ಓಡಿದೆ. ‘ಅಲ್ನೋಡ್ರಿ ಓತಿಕ್ಯಾತ’ ಎಂದಳು. ‘ಎಲ್ಲೈತೆ?’ ಎಂದು ಮನೆಯಾಕೆ ತೋರಿಸಿದ ಜಾಗದಲ್ಲೆಲ್ಲ ಹುಡುಕಾಡಿದೆ. ದಾಳಿಂಬೆ ಗಿಡದಲ್ಲಿ ಬರೀ ಕಾಯಿ, ಹಣ್ಣು, ಹೂಗಳೇ ಕಾಣುತ್ತಿದ್ದವೇ ಹೊರತು ಓತಿಕ್ಯಾತ ಕಾಣಲಿಲ್ಲ. ‘ಅಲ್ಲಿ ನೋಡ್ರಿ ಎಷ್ಟು ಚಂದ ಐತೆ ನೋಡ್ರಿ’ ಎಂದು ಬೆರಳು ಮಾಡೀ ತೋರಿಸಿದರೂ ಕಾಣಲಿಲ್ಲ.

ನಾನೂ ಅಂತೂ ಇಂತೂ ಕುರುಡ ಹುಡುಕಾಡಿದಂತೆ ಆ ಹಸಿರೆಲೆಗಳ ಮಧ್ಯೆ ಟೊಂಗೆಯೊಂದರ ಮೇಲೆ ‘ಪ್ರಪಂಚಕ್ಕೂ ನನಗೂ ಸಂಬಂಧವಿಲ್ಲ’ ಎಂಬಂತೆ ಗಂಭೀರವದನದಿಂದ ಗತ್ತಿನಲ್ಲಿ ಕುಳಿತಿದ್ದ ಓತಿಕ್ಯಾತ ಕಂಡೇಬಿಟ್ಟಿತು. ಮುಖದ ಭಾಗ ಕೆಂಪಗಿದ್ದು ಸ್ವಲ್ಪ ದೊಡ್ಡದೇ ಆಗಿದ್ದ ಓತಿಕ್ಯಾತದ ದೇಹಕ್ಕಿಂತ ಬಾಲವೇ ಉದ್ದಕ್ಕಿದ್ದಂತೆ ಕಾಣಿಸಿತು.

ಬೇಗ ಬೇಗನೆ ಕೆಮರ ತೆಗೆದುಕೊಂಡು ಬಂದು ಅಲ್ಲಿಯೇ ಕ್ಲಿಕ್ ಮಾಡಿದೆ. ಮಾಳಿಗೆಯನ್ನೇರಿದರೆ ಇನ್ನೂ ಸ್ಪಷ್ಟವಾಗಿ ಹತ್ತಿರದಿಂದ ಕ್ಲಿಕ್ ಮಾಡಬಹುದೆಂದು ಧಡಧಡನೆ ಮೆಟ್ಟಿಲುಗಳನ್ನೇರಿ ಮೇಲೆ ಹೋದೆ. ಹಾಂ! ಈಗ ಓತಿಕ್ಯಾತನ ಬ್ರಹ್ಮಾಂಡ ದರ್ಶನವಾದಂತಾಯಿತು. ನನಗೆ ಹೇಗೆ ಬೇಕೋ ಹಾಗೆ ಕ್ಲಿಕ್ ಮಾಡಬಹುದು ಎನಿಸಿತು.

ಸಾಮಾನ್ಯವಾಗಿ ಓತಿಕ್ಯಾತಗಳು ಮನುಷ್ಯನಿಗೆ ಅಷ್ಟೊಂದು ಹೆದರಿದಂತೆ ಕಾಣವು. ಕುಳಿತಲ್ಲೇ ಕುಳಿತಿರುತ್ತವೆ. ಫೋಟೊಗ್ರಾಫರ್ ಗಳಿಗೆ ಹೇಳಿ ಮಾಡಿಸಿದ ಜೀವಿಗಳಿವು. ಅವುಗಳಿಗೆ ತೊಂದರೆ ಕೊಡಬಾರದಷ್ಟೆ. ಮೇಲೆ ಧಗಧನೆ ಉರಿವ ಸೂರ್ಯ ನೆಲ ಕಾಯ್ದಿತ್ತು. ಪಾದಗಳು ಚುರುಗುಟ್ಟುತ್ತಿದ್ದರೂ ಓತಿಕ್ಯಾತವನ್ನು ಪೂರ್ಣವಾಗಿ ನೋಡುವ ಸುವರ್ಣಾವಕಾಶ ಬಿಡಬಾರದೆಂದು ಅಲ್ಲಿಯೇ ನಿಂತು ಕೆಮರಾದಿಂದ ನೋಡುತ್ತಲೇ ಕ್ಲಿಕ್ ಮಾಡುತ್ತಿದ್ದೆ.

ನಾನು ಕೆಮರಾದಿಂದ ಝೂಮ್ ಮಾಡಿ ನೋಡುತ್ತಲೇ ಇದ್ದೆ. ಮುಂಭಾಗ ಗದ್ದದ ಬಳೀ ಚರ್ಮ ಜೋತುಬಿದ್ದಂತಿದ್ದ ಓತಿಯ ತಲೆ ತ್ರಿಕೋನಾಕಾರದಲ್ಲಿತ್ತು. ಕಣ್ಣಿನ ರೆಪ್ಪೆಯ ಮೇಲಿನ ವಿನ್ಯಾಸ ಹೇಗಿತ್ತೆಂದರೆ ಅದು ಕಣ್ಣು ಮುಚ್ಚಿದ್ದೂ ಗೊತ್ತಾಗದಂತಿತ್ತು. ಕಣ್ಣಿನ ಹಿಂಭಾಗ ಕಿವಿಯ ತಮಟೆ. ಬಾಯಿ ತೆರೆಯದಿದ್ದರೂ ಯಾರೋ ಬಾಯಿಯ ಮೇಲೆ ಹಲ್ಲುಗಳ ಚಿತ್ರ ಬಿಡಿಸಿರುವರೇನೋ ಎಂಬಂತಹ ವಿನ್ಯಾಸ.

ಮೈಮೇಲೆಲ್ಲ ಸುಂದರ ಹುರುಪೆಗಳು. ತಲೆಯಿಂದ ಬೆನ್ನಿನ ಮೇಲೆಲ್ಲ ಮುಳ್ಳುಗಳೇ ಎದ್ದುನಿಂತಿವೆ ಎಂಬಂತಹ ಹುರುಪೆಗಳು. ಮುಂಭಾಗ, ಹಿಂಭಾಗದ ಕೈ ಕಾಲುಗಳಲ್ಲಿ ಐದೈದು ಬೆರಳುಗಳು. ತನ್ನ ದೇಹಕ್ಕಿಂತ ಉದ್ದವಾದ ಚೂಪಾದ ಬಾಲ. ಅತ್ಯಂತ ಸುಂದರವೆನಿಸಿತು. ಅದೂ ಸಹ ಸುಮ್ಮನೇ ಕುಳಿತಿತ್ತು. ಇಡೀ ದೇಹವನ್ನು ಅವಲೋಕಿಸಲು ನನಗೊಂದು ಸುವರ್ಣಾವಕಾಶವನ್ನೇ ಪ್ರಕೃತಿ ಒದಗಿಸಿಬಿಟ್ಟಿದೆಯೇನೋ ಎನಿಸಿಬಿಟ್ಟಿತು.

ತಲೆಯನ್ನು ಒಮ್ಮೆ ಅತ್ತ ಒಮ್ಮೆ ಇತ್ತ ಓಲಾಡಿಸುತ್ತ ನೋಡುತ್ತಿತ್ತು. ಒಮ್ಮೆ ಕಣ್ಣು ಮುಚ್ಚಿ ತೆರೆಯುತ್ತಿತ್ತು. ಒಮ್ಮೆ ಹೊರಳಿ ನನ್ನೆಡೆ ನೋಡುತ್ತಿತ್ತು. ಈ ಆಸಾಮಿ ತೊಂದರೆ ಕೊಡುವವನಲ್ಲ ಎಂದುಕೊಂಡಿತ್ತೇನೋ ನಾನು ಸರಿಸುಮಾರು ಅರ್ಧ ಗಂಟೆಯ ಕಾಲ ಅಲ್ಲಿಯೇ ಇದ್ದರೂ ಓತಿ ತನ್ನ ಜಾಗದಿಂದ ಕದಲದೆ ನನ್ನ ಕ್ಲಿಕ್ ಗಳಿಗೆ ಪೋಸ್ ಕೊಡುತ್ತಲೇ ಇತ್ತು.

ಉದ್ಯಾನವನದ ಹಲ್ಲಿ, ಓತಿಕೇತ, ಡೊಣ್ಣೆಕಾಟ ಎಂದೆಲ್ಲ ಕರೆಯುವ ಇವುಗಳು ಸಾಮಾನ್ಯವಾಗಿ ಎಲ್ಲೆಂದರಲ್ಲಿ ನೋಡಸಿಗುತ್ತವೆ. ಹೆಚ್ಚಾಗಿ ಗಿಡಗಳಲ್ಲಿ, ಬಂಡೆಗಳ ಕೊರಕಲುಗಳಲ್ಲಿ ನೋಡಸಿಗುತ್ತವೆ. ಇವುಗಳಲ್ಲಿಯೇ ಹಲವಾರು ವಿಧಗಳು, ಪ್ರಕಾರಗಳಿವೆ. ಹಲ್ಲಿ, ಉಡ, ಊಸರವಳ್ಳಿ ಇವೆಲ್ಲ ಇದರ ಬಂಧುಗಳು, ನೆಂಟರು. ಕೆಲವು ಸಸ್ಯಾರಿ ಕೆಲವು ಮಾಂಸಾಹಾರಿ. ಸಾಮಾನ್ಯವಾಗಿ ಇವು ಹಾರುವ ನೊಣ, ಚಿಟ್ಟೆ, ಏರೋಪ್ಲೇನ್ ಚಿಟ್ಟೆ, ಮುಂತಾದ ಹುಳುಹುಪ್ಪಟೆಗಳನ್ನು ತಿಂದರೆ ಕೆಲವು ಚಿಗುರು, ಎಲೆ, ಹಣ್ಣುಗಳನ್ನೂ ತಿನ್ನುತ್ತವೆ.

ಓತಿಯನ್ನು ನೋಡುತ್ತ ಹೋದಂತೆ ನಿಜವಾಗಿಯೂ ನನಗೆ ತಕ್ಷಣ ನೆನಪಾದದ್ದು ಗುರುಗಳಾದ ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿ. ಹಾರುವ ಓತಿಯನ್ನು ಬೆನ್ನುಹತ್ತಿದ ಅದ್ಭುತ ಕಥಾನಕ. ಅದೇ ಗುಂಗಿನಲ್ಲಿಯೇ ಓತಿಯನ್ನು ನೋಡುತ್ತಿದ್ದೆ. ಇದೂ ಸಹ ಹಾರುವ ಓತಿಯಂತೆ ತನ್ನ ರೆಕ್ಕೆಗಳನ್ನಗಲಿಸಿ ಹಾರಬಾರದೆ? ಎಂದು ಒಂದು ಕ್ಷಣ ಕಲ್ಪನೆ ಹೊಳೆದು ನಗುಬಂತು. ಹಾರುವ ಓತಿಯನ್ನು ನೋಡದಿದ್ದರೂ ಅದರ ದಾಯಾದಿಯನ್ನಾದರೂ ನೋಡಿದೆನಲ್ಲ ಎಂದು ತೃಪ್ತನಾದೆ. ನನಗೆ ತೃಪ್ತಿಯಾದ ನಂತರ ಅಲ್ಲಿಂದ ಮರಳಿದೆ. ಅದು ಗಿಡಗಳ ಮರೆಯಲ್ಲಿ ಮರೆಯಾಯಿತೇನೋ, ನನ್ನ ಕೆಮರಾ ಸ್ಮೃತಿಪಟಲದಲ್ಲಂತೂ ಉಳಿಯಿತು.

ಅಂದಹಾಗೆ ಓತಿಯ ವಿವಿಧ ಪ್ರಕಾರಗಳ ಬಗ್ಗೆ ಇಲ್ಲಿದೆ ನೋಡಿ ವಿಶೇಷತೆಗಳು :

Frill neck lizard ಎಂಬ ಓತಿ ತನಗೆ ಅಪಾಯವೆನಿಸಿದಾಗ ತನ್ನ ಕುತ್ತಿಗೆಯ ಬಳಿಯ ಚರ್ಮವನ್ನು ಅಗಲಿಸಿ ಎದುರಾಳಿಗಳನ್ನು ಹೆದರಿಸಲು ಯತ್ನಿಸುತ್ತದೆ.

Green basilisk lizard ಎಂಬ ಓತಿ ನೀರಿನ ಮೇಲೆಯೇ ನಡೆಯುವಂತೆ ಅದರ ಪಾದಗಳು ರೂಪುಗೊಂಡಿರುವುದರಿಂದಾಗಿ ಸೆಕೆಂಡಿಗೆ 1.5 ಮೀಟರ್ ಗಳಷ್ಟು ಓಡುತ್ತದೆ.

Chameleon ಎಂಬ ಊಸರವಳ್ಳಿ ತನ್ನ ದೇಹದ ಗಾತ್ರಕ್ಕಿಂತಲು ಹೆಚ್ಚಿನ ನಾಲಗೆಯನ್ನು ಹೊಂದಿದೆ ಮತ್ತು ತನ್ನ ಕಣ್ಣುಗಳಿಂದ ಏಕಕಾಲಕ್ಕೆ ಬೇರೆ ಬೇರೆ ಪ್ರದೇಶವನ್ನು ವಿಭಿನ್ನ ಕೋನದಲ್ಲಿ ನೋಡಬಲ್ಲುದಾಗಿದೆ.

ಗಲಾಪಗೋಸ್ ಎಂಬ ದ್ವೀಪದಲ್ಲಿರುವ ಇದೇ ಜಾತಿಯ ಇಗ್ವಾನಾ ಎಂಬ ಹಲ್ಲಿ ಜಾತಿಯ ಧಡೂತಿ ದೇಹದ ಓತಿಗಳು ಸಮುದ್ರದ ಕಳೆ, ಪಾಚಿಯನ್ನು ತಿನ್ನುತ್ತವೆ.

ಅತ್ಯಂತ ದೊಡ್ಡ ದೇಹದ ಓತಿ ಪ್ರಭೇದವನ್ನು Komodo Dragon ಎಂದು ಕರೆಯಲಾಗುತ್ತದೆ. ಇದರ ಉದ್ದ ಸರಿಸುಮಾರು 10 ಫೀಟ್ ಗಳು 80 ಕಿಲೊ ತೂಕದ್ದಾಗಿರುತ್ತದೆ.

ಅತ್ಯಂತ ಸಣ್ಣ ಗಾತ್ರದ್ದೆಂದರೆ Tiny dwarf gecko. ಇದು 1.6 ಸೆಂ.ಮೀ ಉದ್ದ ಇರುತ್ತದೆ ಅಷ್ಟೆ.

ಅಂತೂ ಇಂತೂ ಒಂದು ಓತಿಯನ್ನು ಮನಸಾರೆ, ಪರಿಪೂರ್ಣವಾಗಿ ನೋಡುವ ಅವಕಾಶವನ್ನು ನಮ್ಮ ಮನೆಯ ಗಿಡ ಒದಗಿಸಿಕೊಟ್ಟಿತು.

‍ಲೇಖಕರು Avadhi

14 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading