ಅಪ್ಪನೂ ಒಲೆಯುರಿಯೂ
ರೂಪ ಹಾಸನ್

1
ಬೆಳಗ್ಗೆ ಬಚ್ಚಲೊಲೆ ಉರಿಸಿ ನೀರು ಕಾಯಿಸಲು
ದಿನವಿಡೀ ಅಪ್ಪನ ತಯಾರಿ
ಹೆರೆದು ಬಿಟ್ಟ ಕರಟ
ತೆಂಗಿನ ಮೊಟ್ಟೆ ಚರಟ
ಅಂಗಳದಲಿ ಚೆಲ್ಲಾಡಿ ಬಿದ್ದ ಒಣ ಮಾವಿನೆಲೆ
ಗೀರಿಬಿಟ್ಟ ಬೆಂಕಿಕಡ್ಡಿ ಹಳತಾದ ಮದುವೆ ಕರೆಯೋಲೆ
ದಿನಸಿ ಕಟ್ಟಿದ ಹಣ್ಣು ಸುತ್ತಿದ ಪೇಪರು
ಹಾಳುಮೂಳು ರಸೀತಿ ಪ್ಲಾಸ್ಟಿಕ್ ಕವರು
ಸೋಪಿನ ಪೇಸ್ಟಿನ ಕಾಗದದ ಡಬ್ಬಿ
ಒಂದೇ ಎರಡೇ ಸಿಕ್ಕ ಕೆಲಸಕ್ಕೆ ಬಾರದ್ದೆಲ್ಲಾ
ಒಲೆ ಪಕ್ಕ ದಬ್ಬಿ
ರಬ್ಬರು ಪ್ಲಾಸ್ಟಿಕ್ಕು ಹಳೆಬಟ್ಟೆ
ಪೊರಕೆ ಕೂದಲು ಅಳಿದುಳಿದ ಪಟಾಕಿ ಇನ್ನೇನೇನೋ…
ಯಾರ್ಯಾರೋ ಅವನ್ನೆಲ್ಲಾ ಉರಿಸಬಾರದೆಂದರೂ
ಉರಿಯುವಂತದ್ದೆಲ್ಲಾ
ಬೆಂಕಿಯಾಗುವುದೆಲ್ಲಾ ಅಗ್ನಿಗಾಹುತಿ
ಸಿಕ್ಕಿದ್ದೆಲ್ಲಾ ದಹಿಸಿ ಬಿಸಿ ನೀರಾಗಲು ಸರತಿ
ಕಸವಾರಿಸುತ್ತಾ ದಿನಾ ಅಪ್ಪ ಹದಗೊಳ್ಳುವಾ ರೀತಿ.
2
ಒಲೆ ಉರಿಸುವುದೆಂದರೆ
ಅಪ್ಪನ ಪಾಲಿಗೆ ತಪಸ್ಸೇ ಸರಿ
ನಿತ್ಯ ಬೂದಿ ತೆಗೆದು ಒಲೆ ಖಾಲಿ ಮಾಡಿ
ಅಂಗಳದ ಮರದ್ದೇ ಅವನೇ
ಕಡಿದ ಒಣರೆಂಬೆಕೊಂಬೆಗಳೊಟ್ಟಿ
ಮಧ್ಯದಲಿ ತೆಂಗಿನ ಕರಟವನಿಟ್ಟು
ತೆಂಗಿನ ಮೊಟ್ಟೆ ನಾರುಗಳ ಪೇರಿಸಿಟ್ಟು
ನಿಧಾನಕ್ಕೆ ಹಳೆಪಳೆ ತುಂಡು ಕಾಗದಕ್ಕೆ
ಬೆಂಕಿಹೊತ್ತಿಸಿ ಒಲೆಯೊಳಗಿಟ್ಟು
ಒಂದಿಷ್ಟೂ ಸೀಮೆಎಣ್ಣೆ ಹನುಕಿಸದೇ
ಬೆಂಕಿಯಾರದಂತೆ ಒಂದರ ಮೇಲೊಂದು
ಕಾಗದ ತ್ಯಾಜ್ಯವನೊಟ್ಟಿ ಒಟ್ಟಿ
ಸೌದೆ ಹೊತ್ತುವವರೆಗೂ ಘನಸಾಹಸ
ತಾಳ್ಮೆಯಲಿ ಬೆಂಕಿ ಹೊತ್ತಿಸುವ ಪ್ರಯಾಸ
ಊದುಗೊಳವೆಯಲಿ ಊದಿಊದಿ
ಮತ್ತೆ ಮತ್ತೆ ಒಲೆಯುರಿಸುವ
ಅಪ್ಪನೆಂಬೋ ಪ್ರವಾದಿ.
3
ಗಂಟೆಗಟ್ಟಲೆ ಕೂತು ಸಹನೆಯಲಿ ಅಪ್ಪ
ಒಲೆಯುರಿಸುವ ಸಾಹಸದ ಪರಿ
ನೋಡಿ ಮಗನಿಗೋ ಕಿರಿಕಿರಿ
‘ಸೋಲಾರು,ಗೀಸರು,ಬಾಯ್ಲರು
ಎಲ್ಲ ಅನುಕೂಲವಿದ್ದರೂ ಈ ಇಳಿವಯಸಿನಲಿ
ಹೊಗೆ ಮಸಿಗಳ ಜೊತೆಗೆ ಗುದ್ದಾಡಿ
ಅಲ್ಲಿಲ್ಲಿನ ಕಸಗಳನೆಲ್ಲಾ ಒಟ್ಟು ಮಾಡಿ
ಮೈ-ಕೈ ನೆಗ್ಗಿಸಿ ಜುಂಗಾಡಿ
ಗಂಟೆಗಟ್ಟಲೆ ಬಿಸಿ ಕಾವಿನ ಮುಂದೆ ಕೂತು
ಯಾಕಿಂಥಾ ನರಕ
ಆರಾಮದಲಿ ಕಳೆಯಬಾರದೇ ಉಳಿದ ಬದುಕ?’
ಗೊಣಗುಗಳು ಮೊಳಗಿದಾಗೆಲ್ಲಾ
ಸ್ಥಿತಪ್ರಜ್ಞ ಅಪ್ಪ ನಕ್ಕು ನುಡಿಯುತ್ತಾನೆ
‘ಒಲೆಯುರಿಸುವುದೆಂದರೆ
ಬಿಸಿ ನೀರು ಕಾಯಿಸುವುದಲ್ಲ ಮಗನೇ
ಹುಡುಕಿ ಸುಟ್ಟು ಸುತ್ತಮುತ್ತಲಿನ ಕೊಳೆ
ದಿವ್ಯವಾಗುತ್ತಾ ಹದಗೊಳ್ಳುವಾ ಕಲೆ
ಬದುಕು ಮಾಗಲು ಬೆವರು ಕಟ್ಟುವಾ ಬೆಲೆ’
4
ಬಚ್ಚಲೊಲೆ ಉರಿಸಲು ಕುಳಿತ ಅಪ್ಪನೆಂಬೋ ಸಂತ
ಧಗಧಗ ಉರಿಯ ಮುಂದೆಯೂ ಶಾಂತ.
ಇವನ ಪಾಲಿಗೆ ಒಲೆಯುರಿಸುವ ಕಾಯಕ
ನೀರು ಉರಿಗಳ ನಡುವೆ ಹದಗೊಳ್ಳುವ ಲೌಕಿಕ
ಎಂಥ ಸಿದ್ಧತೆ! ಏನು ಬದ್ಧತೆ!
ದಢಗುಡುವ ಆತುರವಿಲ್ಲ
ಹೇಗೋ ಉರಿಸಿದರಾಯ್ತೆಂಬ ಉದಾಸೀನವಿಲ್ಲ
ನಿಧಾನಕ್ಕೆ ಸೌದೆ ಹೊತ್ತಿಸಿ ಕಾವು ಮೂಡಿಸಿ ಒಲೆಯುರಿಸುತ್ತಾನೆ
ನೀರು ಮೆಲ್ಲಗೆ ಕಾಯುತ್ತಾ ಕಾಯುತ್ತಾ
ಬಿಸಿಯೇರಿ ಹದಗೊಳ್ಳುತ್ತದೆ!







‘ಒಲೆಯುರಿಸುವುದೆಂದರೆ
ಬಿಸಿ ನೀರು ಕಾಯಿಸುವುದಲ್ಲ ಮಗನೇ
ಹುಡುಕಿ ಸುಟ್ಟು ಸುತ್ತಮುತ್ತಲಿನ ಕೊಳೆ
ದಿವ್ಯವಾಗುತ್ತಾ ಹದಗೊಳ್ಳುವಾ ಕಲೆ
ಬದುಕು ಮಾಗಲು ಬೆವರು ಕಟ್ಟುವಾ ಬೆಲೆ’
ee saalugalu tumba tumba ista aaytu 🙂
ರೂಪಾ, ಯಾವಾಗಿನಂತೆ ನಿಮ್ಮ ಈ ಕವನವೂ ಮನಮುಟ್ಟುತ್ತದೆ. ನನ್ನ ಅಪ್ಪನೂ ಮಾಡುತ್ತಿದ್ದುದು ಹೀಗೇ. ಅದು ಅವರಿಗೆ ಪ್ರಿಯವಾದ ಕೆಲಸ. ನಾವೆಲ್ಲಾ ಏಳುವಾಗ ಬಿಸಿನೀರು ರೆಡಿ.
ಮೊನ್ನೆ ಮೊನ್ನೆ ತುಪ್ಪ ಕಾಯಿಸುವ ಕವಿತೆ,ಇಂದು ನೀರು ಕಾಯಿಸುವ ಧ್ಯಾನ……ಎಲ್ಲಾ ಸುಲಭ ಮಾಡಿಕೊಂಡು ಬೇಡದ ಕೆಲಸಗಳಿಗೆ ತಲೆಹಾಕುವ ಇಂದಿನವರಿಗೆ ದಾರಿದೀಪ.
ನೀರು ಕಾಯಿಸುವುದರ ಮೂಲಕ ಪ್ರಾರಂಭಗೊಂಡು ಶ್ರೇಷ್ಟ ಪ್ರತಿಮೆಯಾಗಿ ನಿಂತ ಕವಿತೆ. ಚೆನ್ನಾಗಿದೆ ಅಕ್ಕ… 🙂
ನಿಮ್ಮ ಕಾವ್ಯ ಕೃಷಿ ಖುಷಿ ಆಯಿತು.. ತಾಳ್ಮಯ ಕವಿತೆ.. ಅಭಿನಂದನೆಗಳು.
ಅಪ್ಪ = ಗುರು=ಅಕ್ಕಸಾಲಿಗ ಮತ್ತು ದೇವರು ಒಂದೇ ಭಾವಾರ್ಥದ ಪ್ರತಿಮೆಗಳು. ನಮ್ಮ ಮನೆಯೊಳಗೇ ಕಾವ್ಯ ಪ್ರತಿಮೆಗಳು ಬೇಕಾದಷ್ಟು ಇವೆ ಎಂದು ಇಲ್ಲಿ ಸಾಭೀತು ಪಡಿಸಿದ್ದೀರಿ.
ನಿಮ್ಮೆಲ್ಲರ ಕಾವ್ಯ ಪ್ರೀತಿ ಮತ್ತು ಪ್ರತಿಕ್ರಿಯಿಸುವ ಸಹೃದಯತೆಗೆ ಧನ್ಯವಾದಗಳು.
ರೂಪ
ಧಗಧಗ ಉರಿಯ ಮುಂದೆಯೂ ಶಾಂತ. adbhutavaad maatu
ನಿಜ ಮೇಡಮ್….ಅಪ್ಪನೆಂಬುವ ವ್ಯಕ್ತಿಯೇ ವಿಸ್ಮಯ…ಅರಿತುಕೊಳ್ಳಲು ಸಮೀಪ ಹೋದರೆ ಮತ್ತಷ್ಟು ನಿಗೂಡತೆಯ ನಸುನಗುವ ಬೃಹದಾಕೃತಿ…ಕವನ ಚೆನ್ನಾಗಿದೆ….ಅಪ್ಪನಿಗೆ ಸಾವಿರದ ಸಲಾಮ್.ಗಳು….
The poem starts in a casual tone giving ordinary details of a very ordinary daily core and moves on in a subdued tone and before we realise , we have a revelation of the higher purpose,the extra-ordinary meaning thru the painting of an ordinary core very nice
ಹುಡುಕಿ ಸುಟ್ಟು ಸುತ್ತಮುತ್ತಲಿನ ಕೊಳೆ
ದಿವ್ಯವಾಗುತ್ತಾ ಹದಗೊಳ್ಳುವಾ ಕಲೆ
…………sooperb!!
kavithe olagella dyana vide
ಆತ್ಮತೃಪ್ತಿಗಾಗಿ ಕರ್ತ್ಯವ್ಯದಲ್ಲಿ ಮಗ್ನನಾಗುವ ಜೀವಿಯ ಭಾವನೆ ಗಳನ್ನು ಬಹಳ ಸುಂದರವಾಗಿ ನಿರೂಪಿಸಿದ್ದೀರೀ. ಧನ್ಯವಾದಗಳು.
ಸಹೃದಯ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ರೂಪ