ಡಾ ವೈ ಎಂ ಯಾಕೊಳ್ಳಿ
ಒಲವು ಜಗತ್ತನ್ನು ಹಿಡಿದಿಡುವ ಸೂತ್ರ. ಜೀವನ ಸಾಕ್ಷಾತ್ಕರಿಸಿಕೊಳ್ಳುವ ಅಮರ, ಅದ್ಭುತ ಭಾವ. ಒಲವು ಪಡೆದವರು ಧನ್ಯರಾಗಿದ್ದಾರೆ. ಒಲವು ಕಳೆದುಕೊಂಡವರು ಅಮರರಾಗಿದ್ದಾರೆ. ಅದಕ್ಕೇ ಒಲವಿನ ಕವಿ ಬೇಂದ್ರೆ
ಒಲವಿನಲ್ಲಿ ಬೆಳಿ, ಒಲವಿನಲ್ಲಿ ಉಳಿ
ಒಲವೆ ಬಾಳ ಚೆಲುವು
ಒಲ್ಲದಿಲ್ಕ ಒಲಿಯುವದೆ ಎಲ್ಲ
ಒಲಿಯುವದು ಬದುಕು ಬಲವು
ಎನ್ನುತ್ತಾರೆ. ಒಲವಿನ ಮಹತ್ವವೇ ಅದು ಒಲವಿಲ್ಲದೆ ಏನಿದೆ ಇಲ್ಲಿ. ಅದಕ್ಕೆ ಕವಿಗಳು ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ಎಂದಿದ್ದರು. ಶರಣರಂಥ ಶರಣರೇ ಒಲಿದವರು ಅಗಲುವ ಸಂಕಷ್ಟವನ್ನು ‘ಒಲಿದವರ ಕೊಲುವಡೆ ಮಸೆದ ಕೂರಲಗೇಕೆ, ಒಲ್ಲೆನೆಂಬುದೆ ಸಾಕು’ ಎಂಬ ವಾಣಿಯನ್ನು ನುಡಿದಿದ್ದರು. ಬದುಕು ಸಾರ್ಥಕವಾಗುವದೇ ಒಲಚಿನಿಂದ ಎನ್ನು ಕವಿ ಬೇಂದ್ರೆ ಇನ್ನೊಂದು ಶಲಿನಲ್ಲಿ
ಏನಿಹುದೋ ಎಂತಿಹುದೋ ಸಂಸಾರ ಸಾರ
ಕಂಡವರು ಯಾರದಾರ ಅಂತಪಾರ
ಹೃದಯ ಸಂಪುಟದಲ್ಕಿ ಒಲವ ಲೆಕ್ಕಣಿಕೆ
ಮಾಡಿ ಬರೆಯಲೊ ಹುಡುಗ ನಿನ್ನ ಒಕ್ಕಣಿಕೆ

ಎನ್ನುತ್ತಾರೆ. ವರಕವಿ ಬೇಂದ್ರೆ ಶಬ್ದ ಗಾರುಡಿಗರು. ಒಲವೇ ಲೆಕ್ಕಣಿಕೆ ಯಂತೆ ! ಬರೆಯುವದು ಬಾಳ ಸಂಪುಟದಲ್ಲಿ! ಅಲ್ಲಿ ಹುಡುಗನ ಒಕ್ಕಣಿಕೆ ಪ್ರೀತಿಯೊಂದಲ್ಲದೇ ಏನಿರಲು ಸಾದ್ಯ. ಹೀಗೆ ಒಲವನ್ನೇ ಉಂಡುಟ್ಟು ಬೆಳೆದ ಕವಿ ಇನ್ನೊಬ್ಬರಿಲ್ಲ.
ನಮ್ಮ ಹಿರಿಯರು ತಮ್ಮ ಪ್ರೇಮ ಸಾರ್ಥಕ್ಯವನ್ನು ಮದುವೆಯೊಳಗಡೆ, ತಮ್ಮ ಮನೆಯೊಳಗಡೆ, ಮಡದಿಯೊಂದಿಗೆ ಕಂಡರು. ನಮ್ಮದು ಮದುವೆಯಾಚೆಗಿನ ಪ್ರೇಮ ಸಲ್ಲ. ಮದುವೆ ಮುಂಚಿನ ಪ್ರೇಮವೂ ಅಲ್ಲಿ ಅಷ್ಟು ಗೌರವಾರ್ಹವಾದುದಲ್ಲ..ಇಂದಿನ ಕಾಲದ ಅತ್ಯಾಧುನಿಕ ಲವ್.. ಅವರಿಗೆ ಗೊತ್ತಿರಲಿಲ್ಲ. ಅವರದೇನಿದ್ದರೂ ನವಿಲೂರನೊಳಿಗೆಲ್ಲ ನೀನೇ ಬಲು ಚಲುವೆ ಅದಕೆ ನಮ್ ಇಬ್ಬರಿಗೆ ನಾಳೆಯೇ ಮದುವೆ ಎನ್ನುವ ಚೌಕಟ್ಟಿನೊಳಗೇ ಸಾದ್ಯವಾಗುವ ಪ್ರೇಮ. ಅದಕ್ಕೆ ರಾಷ್ಟ್ರಕವಿಗಳು ಒಲುಮೆ ಯನ್ನ ಗೃಹ ತಪಸ್ಸಿನ ದೀಕ್ಷೆ ಎಂದದ್ದು. ಇದು ಜಗತ್ತಿನ ಬೃಹತ್ ಹೊತ್ತಿಗೆ. ಅದನ್ನು ಓದುವದು ಒಂದು ಜನುಮದಲ್ಲಿ ಅಸಾಧ್ಯ. ಆದ್ದರಿಂದಲೇ ಬೇಂದ್ರೆ ಕವಿ
ಒಲವೆಂಬ ಹೊತ್ತಿಗೆಯನೋದಬಯಸುವ ಪ್ರಾಣಿ
ಬೆಲೆ ಎಷ್ಟು ಎಂದು ಕೇಳುವೆಯ ಹುಚ್ಚ
ಹಲ ಜನುಮ ದುಡಿದರೂ ಇಡೀ ಜನುಮ ಕಳೆದರೂ
ನೀ ತೆತ್ತಲಾರೆ ಬರೀ ಅಂಚೆ ವೆಚ್ಚ
ಒಲವೆಂಬ ಹೊತ್ತಗೆಯನ್ನ ಅಂಚೆಯಿಂದ ಬಂದಾಗ ಕೊಟದಟು ಬಿಡಿಸಿಕೊಳ್ಳುವದೂ ನಮ್ಮಿಂದ ಸಾಧ್ಯವಿಲ್ಲ. ಅಷ್ಟು ಬೃಹತ್ತಾದ ಕೈಪಿಡಿ ಅದು. ಹಾಗಾದರೆ ಅದು ಎಲ್ಲಿ ಜನಿಸುತ್ತದೆ ಎಂದರೆ ಅದು ಇದು ಎದೆಯಲ್ಲಿ ಜನಿಸುವ ರಸಗಂಗಾ ನದಿಯದು ಎನ್ನುವ ಕವಿ ‘ಹೆಸರದಕೆ ಪ್ರೀತಿ ಬಾಳಿನ ರೀತಿಯು, ಆತ್ಮದ ನೀತಿಯು’ ಎಂದು ಉದ್ಘೋಶಿಸುತ್ತಾರೆ. ಗಂಡು ಹೆಣ್ಣಿನ ಒಲವು ಹೋಗಿ ಆತ್ಮಾನುಭೂತಿಯಾಗಬೇಕು ಎನ್ನುವದು ಭಾರತೀಯರ ನಿಲುವು. ಇಂಥ ಪ್ರೇಮ ದೈವದೊಲುಮೆಯಿಲ್ಲದೇ ಸಾಧ್ಯವಾಗದು. ಅದು ಇದೊಂದೇ ಜನುಮಕ್ಕಂಟಿದುದಲ್ಲ. ಜನ್ಮ ಜನ್ಮಾಂತರಗಳ ನಂಟು. ನನಗೂ ನಿನಗೂ ನಂಟಿದ ಅಂಟು. ದೈವಬಲವಿದ್ದರೆ ತಾನೇ ಒಲವು (ಪ್ರೀತಿ) ಘಟಿಸುತ್ತದೆ. ಇದು ನಮ್ಮವರ ಗಟ್ಟಿ ನಂಬಿಗೆ. ಇದನ್ನೆ ಮಧುರಚನ್ನರು
ದೇವ ಲೀಲೇಯೋ ಕಾಣೆ ಕರ್ಮಜಾಲವೋ ಕಾಣೆ
ಅದು ನಮ್ಮ ಬುದ್ದೊಯಾಚೆಗಿನ ಮಾತು
ಯಾವುದೇನೇ ಇರಲಿ, ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು
ಎನ್ನುವ ಸಾಲು ಬರೆಯುತ್ತಿರುವದು ಬರೀ ಗಂಡು ಹೆಣ್ಣಿನ ಒಲವಿಗಷ್ಟೇ ಅಲ್ಲವಾದರೂ ಅಲ್ಲಿ ಒಲವು ಸ್ನೇಹಗಳ ಅನುಭವವೂ ಇದೆ. ಪ್ರೀತಿ- ಒಲವು ಸಿಕ್ಕ ಸಿಕ್ಕಲ್ಲಿ ಅರಳುವದಿಲ್ಲ. ಅದು ಅರಳಲು ಹೃದಯ ಸಂಸ್ಕಾರ ಬೇಕುಸಂಸ್ಕಾರವುಳ್ಳ ಹೃದಯವೂ ಬೇಕು. ಇದನ್ನೇ ಕವಿ
ಇದು ಉಪ್ಪುನೀರ ಕಡಲಲ್ಲೋ
ನಮ್ಮ ಒಡಲಲ್ಲೆ ಇದರ ನೆಲೆಯು
ಕಂಡವರಿಗಲ್ಲ ಕಂಡವರಿಗಷ್ಟೇ
ತಿಳದದ ಇದರ ಬೆಲೆಯು
ಎನ್ನುವ ಕವಿ ಬೇಂದ್ರೆ ಒಲವಿನ ಅನಂತ ಜಾಡನ್ನುಪದಗಳಲ್ಲಿ ಹಿಡಿದ ರೀತಿ ಮಾತಲ್ಲಿ ಬಣ್ಣಿಸಲಾಗದ್ದು. ಕವಿ ಕಂಡವರು ಎನ್ನುವ ಪದವನ್ನು ಎರಡು ಸಲ ಬಳಸಿ ಅಚ್ಚರಿಗೊಳಿ ಸುತ್ತಾನೆ. ಮೊದಲ ಸಲ ಬಂದ ಕಂಡವರಿಗಲ್ಲ ಎನ್ನುವಲ್ಲಿ ಬರೀ ನೋಟ ಎಂಬ ಅರ್ಥವಿದ್ದರೆ, ಎರಡನೆ ಪದ ಉಂಡವರು ಎಂಬ ಅರ್ಥ ಸೂಚಿಸಿ ವಿಶೇಷ ಅರ್ಥ ಹೊಮ್ಮಿಸುತ್ತದೆ

ಒಲವು ಇಲ್ಲದೇ ಬದುಕಬಹುದೆ? ಯಾರಾದರೂ ಬದುಕಿದ್ದಾರೆಯೇ? ಎಂಬ ಪ್ರಶ್ನೆಗೆ ಜಗದ್ವಿಖ್ಯಾತ ಕವಿ ಉಮರ್ ಖಯ್ಯಾಂ ನೀಡುವ ಉತ್ತರವಿದು.
ಒಲವಿನಿಂ ಬೇಯದವನೆದೆಯದೇಂ ಬರೀ ಪಾಳು
ಹುಚ್ಚು ಹಿಡಿಸುವದೊಲವು ಚಿಂತೆವೊಲ್ ಬಿಸಿಯಿಂ
ಒಲವು ಸುಳಿಯದೆ ಕಳೆದ ಸುಡುಗಾಡು ದಿನಕಿಂತ
ವೆರ್ತದಾ ದಿನವೊಂದುಮಿರದು ಬಾಳಿನಲಿ
ಎನ್ನುತ್ತಾನೆ. ಹೀಗೆ ಒಲವಿನ ವಿಸ್ತಾರ ಪದಗಳಿಗೆ ಸಿಗಲಾರದ್ದೆಂದು ಕವಿಗಳೇ ಕೈ ಚೆಲ್ಲಿದ್ದಾರೆ. ಮಾತಲ್ಲಿ ಬಣ್ಣಿಸುವ ಒಲವಿನ ವಿಸ್ತಾರವನ್ನು ಬಣ್ಣಿಸುವ ಯತ್ನಮಾಡಿದ್ದಾರೆ. ಈ ಕೆಲಮಾತುಗಳಲ್ಲಿ ಹೇಳುವೆನೆನ್ನುವದು ದಾರ್ಷ್ಟ್ಯ.ಅದು ವಿಸ್ತೃತ ಅಧ್ಯಯನ ಬಯಸವಂಥದ್ದು.






0 Comments