ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಮ್ಮೆ ನೆಲ ಒಮ್ಮೆ ಮುಗಿಲು..

-ದೀಪಾ ಗೋನಾಳ

ಬೋಳುಮರದ ನೆತ್ತಿ
ಮೇಲೆರಡು ಕಾಡು ಹಕ್ಕಿ
ಒಂದು ಗಂಡು ಒಂದು ಹೆಣ್ಣು
ನೋಡುತಿಹವು
ಒಮ್ಮೆ ನೆಲ ಒಮ್ಮೆ ಮುಗಿಲು;
ಗೂಡು ಕಟ್ಟಲು ಹೊಸ ಟಿಸಳು;
ಉದುರಿದ ಹಣ್ಣೆಲೆಗಳ ತುಂಬು ಇನ್ನೂ
ಇದೆ ಹಸಿ-ಬಿಸಿ
ನೆಲದ‌ ಮೇಲಣ ಮಣ್ಣಿಗಾಂತ
ಹಣ್ಣೆಲೆ- ಎದೆಬಿರಿದ ಹಣ್ಣೂ
ಅದರಿಂದ ಹಡೆದ ಬೀಜಗಳು;
ನೆಲ ಪಿತಿಪಿತಿ
ಇದು ಸಂಜೆ

ಇಡೀ ಕಾಡು
ನಡುಗುತ್ತಿದೆ ತಾಳದೆ ಚಳಿ
ಮಂಜುಗಟ್ಟಿದೆ ಕೆರೆನೀರು
ಮರಗುತ್ತಿವೆ ಮರಗಳು
ನೋಡಲಾಗದೆ
ಜೀವ ಸಂಕುಲದ ನಡು-
ಕವ, ಬಿರಿಯುತ್ತಿಲ್ಲ ಮೊಗ್ಗು
ಅರಳುತ್ತಿಲ್ಲ ಹೂ;
ಹಾರುತ್ತಿಲ್ಲ ತುಂಬಿ
ಇದು ಬೆಳಗು

ಅಪರಾಹ್ನಕ್ಕೆ;
ಒಣಗಿದ ತರಗೆಲೆಗೆ
ಬೆಂಕಿ ಬಿದ್ದು
ಜಗತ್ತು ಸುಟ್ಟು ಹೋಗಬೇಕು
ಜಿಗಿಯುತ್ತವೆ ಜಿಂಕೆ
ಹೊಟ್ಟೆಯ ತಳದ ಬೊಟ್ಟಲ್ಲಿ
ಹುಟ್ಟಿದ ಸುವಾಸನೆಯ
ಕಾಡೆಲ್ಲ ಹುಡುಕುತ್ತ;
ತಿಳಿಯಾದ ಕೆರೆಯ ಮೇಲೆ
ಹಂಸಗಳ ಮೆರವಣಿಗೆ
ಮಹಾಪ್ರಾಣದ ಅಮ್ಮ
ಮುಂದೆ ಮುಂದೆ
ಅಲ್ಪಪ್ರಾಣದ ಮರಿಗಳ ಹಿಂಡು
ಹಿಂದೆ ಹಿಂದೆ
ಈಜುವವು ಸುಖಾಸುಮ್ಮನೆ
ನುಲಿಯುತ್ತ

ಆ ಬೆಳಗಿಗೆ;
ತಣ್ಣಗೆ ಕೊರೆಯುವ ಮಂಜಿನಿಂದ
ಆವೃತವಾಗಿ ಪರದಾಡಬೇಕು
ಜೀವಿಗಳು ಉಸಿರಿಗೆ
ಬೆಳಗಾಗುವುದರೊಳಗೆ ಏನಾದರೂ
ಆಗಿಬಿಡಬಹುದು

ಇಲ್ಲವೇ-
ಆ ಮಧ್ಯಾಹ್ನಕ್ಕೆ;
ಒಣಗಿದೆಲೆಯಲೆ ಮುಚ್ಚಿ
ಹೋದ ಕಾಡಿಗೆ
ಬೆಂಕಿ ಬಿದ್ದು
ಎಲ್ಲ ಭಸ್ಮವಾಗಬಹುದು

ರಾತ್ರಿಗೆ;

ಪ್ರತಿ ಶಿಶಿರಕ್ಕು
ಹೀಗೆ ಆಗುವುದೇನೊ
ಇದೆಲ್ಲ ಮುಗಿದೆ ಹೋಗುವುದೇನೊ
ಅನ್ನಿಸುತ್ತದೆ ಕವಿಗೆ
ಕವಿಯುತ್ತದೆ ಅವನ ಕಣ್ಣಿಗೆ
ಮಮಕಾರದ ಮಂಜು
ಮರಗುತ್ತಾನೆ ಬೆಂದು
ಕರಕಲಾಗದಿರಲಿ ಈ
ಜಗವೆಂದು

ರಾತ್ರಿಗಳು ಉರುಳುತ್ತವೆ
ಗರಗರನೇ ಚಕ್ಕಡಿಯ
ಚಕ್ರದಂತೆ,
ಮುಗಿಯುತ್ತದೆ ಈ ಕಾಲವೂ
ಬದಲಾಗುತ್ತದೆ ಋತು,
ಹುಟ್ಟುತ್ತದೆ
ಹೊಸ ಚಿಗುರು
ವಸಂತನ ವಾಸನೆ
ಕಾಡ ತುಂಬೆಲ್ಲ
ಗೂಡುಗಳಲಿ
ಮೊಟ್ಟೆಗಳ ಸಾಲು
ಅಪ್ಪನ ಹಾರಾಟ
ಅವ್ವನಾದವಳ ಬೆಚ್ಚಗಿನ ಪುಕ್ಕ
ಜಗದ ತುಂಬ ಹೊಸ ಮಕ್ಕಳ ಕೇಕೆ
ಮರದ ಕೊಂಬೆಯಲೂ
ಕೊಂಬೆಗಾಂತ ಗೂಡಿನಲೂ

‍ಲೇಖಕರು Admin

31 December, 2025

1 Comment

  1. ಐನಂಡ ಪ್ರಭುಕುಮಾರ್

    ʼಬೋಳುಮರದ ನೆತ್ತಿʼ ಕವನದಲ್ಲಿ

    “ಅನ್ನಿಸುತ್ತದೆ ಕವಿಗೆ
    ಕವಿಯುತ್ತದೆ ಅವನ ಕಣ್ಣಿಗೆ”

    – ಇದು ಈ ಕೆಳಗಿನಂತಾಗಲಾರದೇ?

    “ಅನ್ನಿಸುತ್ತದೆ ಕವಯಿತ್ರಿಗೆ
    ಕವಿಯುತ್ತದೆ ಅವಳ ಕಣ್ಣಿಗೆ”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading