ಸಾಕವ್ವ ಮತ್ತು ಉಮಾಶ್ರೀ…

ಒಡಲಾಳ ನಾಟಕ…

ರೇಖಾ ಗೌಡ

ನಟಿ ಉಮಾಶ್ರೀಯವರನ್ನು ಸಾಕವ್ವಳ ಪಾತ್ರದಲ್ಲಿ ನೋಡೋದು ನನ್ನ ಕನಸುಗಳಲ್ಲೊಂದು ಅವರು ಈ ಪಾತ್ರ ಮಾಡಿದ್ದೋ, 18ರ ವಯಸ್ಸಿನಲ್ಲಿ! ನಮ್ಮಂಥ ಸಾಹಿತ್ಯಾಸಕ್ತರಿಗೆ/ರಂಗಾಸಕ್ತರಿಗೆ ಬೇಕೆಂದ ಪಾತ್ರ, ಬೇಕಾದಾಗ ನೋಡುವ ಭಾಗ್ಯವೆಲ್ಲಿ?

ಆ ನಾಟಕದ ವಿಡಿಯೋ ಮಾಡಿದ್ದಾರೋ, ಅದೆಲ್ಲಿ ಸಿಗುವುದೋ ನಾ ಕಾಣೆ! ಒಂದಿಬ್ಬರನ್ನು ವಿಚಾರಿಸಿದೆ, no luck. ಇದೆ ಅಥವಾ ಇಲ್ಲ, ಒಂದು ಖಚಿತ ಉತ್ತರ ಸಿಗುವವರೆಗೂ ವಿಚಾರಿಸುವ!

ಉಮಾಶ್ರೀ ನಂತರ ಯಾರಾದರೂ ಈ ನಾಟಕ ಮತ್ತು ಆ ಪಾತ್ರ ಮಾಡಿರುವರೋ ಇಲ್ಲವೋ, ಈಗಲೂ ಈ ಪ್ರಯೋಗ ನಡೆಯುತ್ತಿರುವುದೋ, ನಿಂತಿರುವುದೋ, ಕುತೂಹಲ ಬಹಳಿದೆ.

ಕನಸು ಸಾಕಾರ ಆಗುವವರೆಗೂ ಮನಸು ಕೇಳಬೇಕಲ್ಲ! ಕನಸಿಗೆ ಹತ್ತಿರದ ಆಸೆಯನ್ನಾದರೂ ಪೂರೈಸಲು ಮನಸಿಂದ ಒತ್ತಡವಾಗಲು ದೇವನೂರು ಮಹಾದೇವರ ಒಡಲಾಳ ನಾಟಕದ ಕೃತಿ ಕೈಗೆತ್ತಿಕೊಂಡೆ.

ಯಾರಾದರೂ ಕೋಳಿ ಕದ್ದಾಗ ಅದನ್ನು ಸಾಕಿದವರು ಮನೆ ಮುಂದೆ ನಿಂತು, ಕದ್ದವರಿಗೆ ಹೊಲಹೊಲಸು ಬೈಗುಳ, ಪೂರ್ಪೂರಾ ಶಾಪ ಹಾಕುವುದು ಹಳ್ಳಿಯಲ್ಲಿ ಸಾಮಾನ್ಯ ಎಂದು ಗೊತ್ತಾದದ್ದು ಇಲ್ಲೇ ಒಂದೆಡೆ ನೋಡಿದಾಗ.

ಅದೇನು ಕದ್ದವರಿಗೆ ತಾಗುವುದೋ, ತಾಕುವ ಹಾಗಿದ್ದರೆ ಕದಿಯುವ ಮನಸು ಮಾಡುತ್ತಿದ್ದರೋ, ಕಳೆದುಕೊಂಡವರಿಗೆ ಕಳೆದುಕೊಂಡ ನಿರಾಶೆ, ಕುದಿವ ಕೋಪ, ಸಿಗದೆಂಬ ಅಸಹಾಯಕತೆಯೋ, ಹೇಗೋ, ಏನೋ! ಆದರೆ ಒಡಲಾಳದಲ್ಲಿ ಸಾಕವ್ವಳಲ್ಲಿ ಕಂಡಿದ್ದು “ಅಷ್ಟು” ಕಷ್ಟಪಟ್ಟು ಸಾಕಿದ ಹುಂಜ ಎಂಬುದೇ ಹೊರತು ಇಲ್ಲಿ ಬರುವುದು ಬರಿಯ ಹುಂಜದ ಬೆಲೆಯ ಸಂಗತಿಯಲ್ಲ. ಹಾಗೇ, ಹಳ್ಳಿಯ ಮುಗ್ಧರು ಅವರ ಸಾಕುಪ್ರಾಣಿಗಳನೆಷ್ಟು ಹಚ್ಚಿಕೊಂಡಿರುತ್ತಾರೆ ಎಂಬುದೂ! (ಈ ನಾಟಕ ನೋಡಿ, ಕದಿಯುವವರು ಇದನ್ನರ್ಥೈಸಿಕೊಂಡರೆ ಅವಳ ಪಾತ್ರ ಹಾಗೆ ಸಾರ್ಥಕ.) ಅದಕಾಗಿ ಗುಟ್ಟಾಗಿ ತಿಪ್ಪೆಯಿಂದ ತಿಪ್ಪೆ ಅಲೆಯುವಳು, ಇಡೀ ತಿಪ್ಪೆಯನೇ ಮೇಲ್ಕೆಳಕಾಗಿಸುವಳು, ಕಾರಣಕರ್ತರ ಹುಡುಕಿ ಝಾಡಿಸಲೋ ಎಂಬಂತೆ.

ದೇವರಿಗೆ ಬಿಟ್ಟ ಹುಂಜವ ದೇವರು ದಿಂಡರ ಲಕ್ಷಿಸದೆ ಮುರಿದಿರಬೇಕು ಇಲ್ಲವೇ ತನಗಾಗದವರ್ಯಾರ್ಯಾರೆಂದು ನೆನಪು ಮಾಡಿಕೊಳ್ಳುವ ಅವಳ ಮನಸಿನ ಮೂಲೆ ಮೂಲೆಯಲ್ಲೂ ಅವಳ ಹುಂಜವೇ ತುಂಬಿರುತ್ತದೆ. ಕೊಕ್ ಕೊಕ್ ಎನ್ನುತಾ ಹುಡುಕುತಾ ಊರನ್ನೇ ಸುತ್ತಿಬಿಡುವ ಅವಳ ಹಠ, ಛಲ, ಆಸೆ!ಎಷ್ಟಾದರೂ ಬದುಕಿಗಾಗಿ ಹೋರಾಡಿ ರೂಢಿಯಾದ ಜೀವ!

ಅವಳ ಸವೆದ ದೇಹವ, ಮುರುಕು ಮನೆಯ ಒಂದೊಂದೂ ಕೋಣೆಯ-ಪರಿಸ್ಥಿತಿಯ ಹಾಗೂ ಅದರೊಳಗೆ ತಮ್ಮನ್ನು ಗುರುತಿಸಿಕೊಂಡವರ, ಸಾಕವ್ವನ ಶಾಪದ ಕಲೆಯ ರೂಪದ ಲಯವ, ದೇವನೂರು ಮಹಾದೇವರು ಪದಗಳಲ್ಲೇ ಚಿತ್ರ ರೂಪದಲ್ಲಿ ಕಟ್ಟಿಕೊಟ್ಟು ಅಚ್ಚರಿ ಮೂಡಿಸುತ್ತಾರೆ. ಜೀವನ ಪ್ರೀತಿ ಇಲ್ಲದೇ ಇಷ್ಟು ತೀವ್ರವಾಗಿ ಸಂಗತಿಗಳನು ಗಮನಿಸಲಾಗದು, ಚಿತ್ರ ವೈಭವವ ಬರಹದಲ್ಲಿ ಮೂಡಿಸಲಾಗದು. ಕಂಬ ಕಮಾನುಗಳನೂ ದೇವನೂರು ನೋಡುವ ರೀತಿ, ಭಾವಿಸುವ ರೀತಿ ಮನೋಜ್ಞ.

ಅತ್ತೆ ಸೊಸೆಯರ, ಅಮ್ಮ ಮಕ್ಕಳ ಮಾತಿಗೆ ಮಾತು, ನಾಟಕೀಯ ಸಂದರ್ಭಗಳು ಪ್ರಾತಿನಿಧಿಕ ಎಂಬಂತಿದೆ. ಅಷ್ಟೊಂದು ಜೀವನ ಕಂಡವಳ, ಅನುಭವಿಯ ಬಾಯಿಗೆ, ಬಾಯಿ ಕೊಡಲಾದೀತೆ?

ಸತ್ತಾಗ ಯಮಧರ್ಮನಿಗೆ ಹೇಗೆ ಜೋರು ಮಾಡುವಳು, ತಾನೇ ಮುಂದಾಗಿ ಹೇಗೆ ಮಾತಾಡುವಳು, ಅವನು ತನ್ನನ್ನು ಏನು ತಾನೇ ಮಾಡಿಯಾನು ಎಂಬ ಛಾತಿ, ಬದುಕಲ್ಲಿ ಏನೆಲ್ಲಾ ಅನುಭವಿಸಿಯಾದವಳಿಗೆ ಇನ್ಯಾತರ ಭಯ ಎಂಬ ಮನೋಭಾವ ಅವಳ ಜೀವನ ಮತ್ತು ಸಾವನ್ನು ನೋಡುವ ದೃಷ್ಟಿ, ಹಾಸ್ಯಪ್ರಜ್ಞೆಯ ಪರಿಚಯಿಸುತ್ತದೆ.

ಈ ನಾಟಕದಲ್ಲಿ ಒಂದೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇರುವುದು, ಶಕ್ತಿಯುತ ಪಾತ್ರಗಳಿರುವುದು, ಅವರವರ ಪಾತ್ರಕ್ಕೆ ಗರಿಷ್ಠಮಟ್ಟದಲ್ಲಿ ನಿಷ್ಠರಾಗಿರುವುದು ಒಂದು ಸಂಗತಿಯಾದರೆ,ಒಡಲಾಳದ ಭಾಷೆಯೋ ಭಾಷೆ! (ಮನುಷ್ಯನ ಗಮನ ಆಡುವ ಪದಗಳ ಆದಷ್ಟೂ ಸುಲಭ, ಸರಳ ಮಾಡಿಕೊಳ್ಳುವಲ್ಲಿ) ಈ ಭಾಷೆಗೆ ಲಾಲಿತ್ಯ, ಲಯವಿದೆ, ಒಂದು ಚಂದವಿದೆ, ಬರಹಗಾರರು ಬಳಸಿರುವ ಪದಗಳೂ ಇದಕ್ಕೆ ಇನ್ನಷ್ಟು ಮೆರುಗು ಕೊಟ್ಟಿದೆ.ಈ ಭಾಷೆಯನ್ನೂ ಭಾಷಾ ವಿಜ್ಞಾನದಲ್ಲಿ ಅಧ್ಯಯನ ಮಾಡಿರುವರೇ? ಕುತೂಹಲವಿದೆ, ಭಾಷಾ ಪ್ರಿಯರಿಗೆ ಆಸಕ್ತಿಯಿದೆ.

‍ಲೇಖಕರು Admin

April 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: