ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡ್ಡಿಪುಡಿ …ಸೂರಿಗೊಂದು ಥ್ಯಾಂಕ್ಸ್- ದಿನೇಶ್ ಕುಮಾರ್

ದಿನೇಶ್ ಕುಮಾರ್ ಎಸ್ ಸಿ

ಇದು ಅಕ್ಷರಶಃ ಸೂರಿ ದುನಿಯಾ. ಇಲ್ಲಿ ಪಾತ್ರಗಳು ನಾವಂದುಕೊಂಡಂತೆ ಮಾತನಾಡುವುದಿಲ್ಲ. ಘಟನೆಗಳು ಕೂಡ ನಮ್ಮ ಕಲ್ಪನೆಯನ್ನು ದಾಟಿ ಮುಂದೆ ನೆಗೆಯುತ್ತಲೇ ಇರುತ್ತವೆ. ಪ್ರತಿ ಫ್ರೇಮು ಕೂಡ ಒಂದು ಕಮರ್ಷಿಯಲ್ ಸಿನಿಮಾ ಸಿದ್ಧಸೂತ್ರಗಳ ಚೌಕಟ್ಟನ್ನು ಒಡೆದು ತೋಳು ಚಾಚುತ್ತಲೇ ಇರುತ್ತದೆ. ಸೂರಿ ತನ್ನ ಸಿನಿಮಾಗಳ ಮೂಲಕ ಮಾತನಾಡುವುದೇ ಹಾಗೆ. ಆತ ವಾಚಾಳಿಯಲ್ಲ. ಕಡ್ಡಿಪುಡಿಯಲ್ಲಂತೂ ಸಾಕಷ್ಟು ಬಾರಿ ಮೌನವೇ ಕಣ್ಣಮುಂದೆ ಎದ್ದು ಕೂರುತ್ತದೆ. ಕಿತ್ತು ಹೋದ ಚಪ್ಪಲಿಗೆ ಬಾಯಿಯಿಲ್ಲ, ಆದರೆ ಅದು ಆಡುವ ಮಾತು ನಮಗೆ ಕೇಳಿಸದಿದ್ದರೆ ಸೂರಿ ಅರ್ಥವಾಗುವುದಿಲ್ಲ, ಸಿನಿಮಾ ಕೂಡ.

ಕಡ್ಡಿಪುಡಿಯ ಪಾತ್ರಗಳನ್ನು ಸೂರಿ ಕಟ್ಟುವಾಗ ಪ್ರಜ್ಞಾಪೂರ್ವಕವಾಗಿ ಅವುಗಳಿಂದ ಒಂದು ಅಂತರ ಕಾಪಾಡಿಕೊಂಡಂತೆ ಅನಿಸುತ್ತದೆ. ಯಾವ ಪಾತ್ರದಲ್ಲೂ ನಿರ್ದೇಶಕ ಕಾಣಿಸುವುದಿಲ್ಲ. ಕಾಣಿಸುವುದು ಆಯಾ ಪಾತ್ರಗಳು ಮಾತ್ರ. ತನ್ನ ಕಥೆಯ ಪಾತ್ರಗಳನ್ನು ತನ್ನ ಇಷ್ಟಕ್ಕೆ ತಕ್ಕಂತೆ ಆಡಿಸುವ ಉಸಾಬರಿಗೂ ಸೂರಿ ಹೋದಂತಿಲ್ಲ. ಪಾತ್ರಗಳನ್ನು ಕಟ್ಟಿ, ಅವುಗಳ ಮೈಗೆ ರಕ್ತ ಮಾಂಸ ತುಂಬಿ ಅವುಗಳನ್ನು ರಂಗಸ್ಥಳದ ಮಧ್ಯೆ ನೂಕಿ ತಾನು ತೆರೆಮೆರೆಗೆ ಸರಿದಿದ್ದಾರೆ. ನಿರ್ಧೇಶಕನ ಹಿಡಿತ ತಪ್ಪಿದಂತೆ ಕಾಣುವ ಈ ಪಾತ್ರಗಳು ತಮ್ಮ ಪಾಡಿಗೆ ತಾವು ಬೆಳೆದುಕೊಳ್ಳುತ್ತಾ ಹೋಗುತ್ತವೆ.

ಕಡ್ಡಿಪುಡಿಯನ್ನು ರೌಡಿಜಂ ಸಿನಿಮಾ ಎಂದು ಒಂದೇ ಸಾಲಿನಲ್ಲಿ ಬ್ರಾಂಡ್ ಮಾಡಿಬಿಡುವುದು ಸುಲಭ. ಆದರೆ ಹಾಗೆ ಮಾಡಿದರೆ ಅದು ನಿರ್ದೇಶಕನಿಗೆ ಮಾಡುವ ಅನ್ಯಾಯ. ಯಾಕೆಂದರೆ ರೌಡಿಜಂ ಇಲ್ಲಿ ಕಥೆಯ ಮೂಲತಂತುವಾದರೂ ಅದನ್ನು ಮೀರಿ ಬೆಳೆಯುತ್ತಾ ಹೋಗುತ್ತದೆ. ಕಿತ್ತುಹೋದ ಚಪ್ಪಲಿಯಂಥ ಕೆಳಮಧ್ಯಮ ವರ್ಗದ ಬದುಕು ಇಲ್ಲಿ ಅನಾವರಣಗೊಳ್ಳುತ್ತದೆ. ಅಡ್ಡಾದಿಡ್ಡಿ ಸುತ್ತಿದ ಚಾಪೆ, ನೆಲದ ಮೇಲಿಟ್ಟ ಮುರುಕಲು ಟೇಬಲ್ ಫ್ಯಾನು, ಬಣ್ಣವೇ ಕಾಣದ, ಕಿತ್ತುಹೋದ ಗೋಡೆಗಳು, ಜೋರಾಗಿ ಒದ್ದರೆ ಮುರಿದುಹೋಗುವಂಥ ಬಾಗಿಲುಗಳು ಇಲ್ಲಿ ಚದುರಿದ ಚಿತ್ರಗಳಾಗಿ ಕಣ್ಣಿಗೆ ರಾಚುತ್ತವೆ. ಮೇಲ್ಮಧ್ಯಮ, ಶ್ರೀಮಂತ ಜನವರ್ಗದ ಕಥೆಗಳ ಸಿನಿಮಾಗಳನ್ನು ಸಾವಿರ ಸಾವಿರ ನೋಡಿದ್ದೇವೆ. ಎಂ.ಎಸ್.ಸುಬ್ಬುಲಕ್ಷ್ಮಿಯ ಸುಪ್ರಭಾತದ ಬದಲಿಗೆ ಇಲ್ಲಿ ಮೂಗಿಗೆ ನಾಟುವುದು ಚಿಕನ್ ಸಾರಿನ ಪರಿಮಳ. ಸಿಹಿಸುದ್ದಿ ಕೇಳಿದ ತಕ್ಷಣ ತುಪ್ಪದ ದೀಪ ಹಚ್ಚಲು ಓಡುವ ಅಜ್ಜಿಯರ ಬದಲಿಗೆ `ದಿನಾ ತಗೋತೀರಾ?’ (ಮದ್ಯ) ಎನ್ನುವ, ಕ್ರಿಕೆಟ್ ಸ್ಕೋರು ಹೇಳುವ ಅಜ್ಜಿ ಇಲ್ಲಿ ಕಾಣಸಿಗುತ್ತಾಳೆ.

ಕಡ್ಡಿಪುಡಿಯಲ್ಲಿ ಹೀರೋ ಸೇರಿದಂತೆ ಯಾರೂ ದೈವಾಂಶಸಂಭೂತರಲ್ಲ. ಶಿವರಾಜ್ ಕುಮಾರ್ ಆವಾಹಿಸಿಕೊಂಡಿರುವುದು ತಾವು ಇದುವರೆಗೆ ಆವಾಹಿಸಿಕೊಂಡ ರೌಡಿಯಾಗಿದ್ದರೂ ಸಮಾಜೋದ್ಧಾರಕನೆಂಬ ಗಾಡ್ ಫಾದರ್ನ ಪಾತ್ರವನ್ನಲ್ಲ. ಕಡ್ಡಿಪುಡಿ ಅಲಿಯಾಸ್ ಆನಂದ ಕೊನೆಯಲ್ಲಿ ಅನಂತ್ ನಾಗ್ (ಎಸಿಪಿ) ಹೇಳುವಂತೆ ಚಾಣಾಕ್ಷ ರಾಕ್ಷಸನಷ್ಟೆ. ಅವನು ರೌಡಿಯಾಗಿದ್ದಕ್ಕೂ ಒಂದು ಕಾರಣವಿದೆ, ರೌಡಿಜಂ ಬಿಟ್ಟಿದ್ದಕ್ಕೂ ಕಾರಣವಿದೆ, ಮತ್ತೆ ಅದೇ ಚಾಳಿಗೆ ಹೊರಳುವುದಕ್ಕೂ ಒಂದು ಕಾರಣವಿದೆ. ಆದರೆ ಯಾವುದೂ ಸಮರ್ಥನೆಯಾಗಿ ಉಳಿದುಕೊಳ್ಳುವುದಿಲ್ಲ. ಹೀಗಾಗಿಯೇ ಕಡ್ಡಿಪುಡಿಯ ಕೈಯಲ್ಲಿ ಹತನಾದ ಬಜ್ಜಿ ಸತೀಶನ ಮಗ ಚಿತ್ರವನ್ನು ಮುಗಿಸಲು ಬಿಡದೆ, ಅಲ್ಪವಿರಾಮವನ್ನಷ್ಟೆ ಇಡುವಂತೆ ನಿರ್ದೇಶಕನನ್ನು ನಿರ್ದೇಶಿಸುತ್ತಾನೆ.

 

ಸೂರಿ ಮಾಮೂಲಿ ರೌಡಿಜಂ ಚಿತ್ರಗಳಂತೆ ಇಲ್ಲಿ ರಕ್ತದ ಕೋಡಿಯನ್ನೇನು ಹರಿಸಿಲ್ಲ. ಆದರೆ ವ್ಯವಸ್ಥೆಯ ಕ್ರೌರ್ಯ ಇಲ್ಲಿ ನಿಮ್ಮನ್ನು ರಕ್ತದ ಕಮಟು ಘಾಟಿಗಿಂತ ಹೆಚ್ಚಾಗಿ ಕಾಡುತ್ತದೆ. ಲಾಂಗ್ ಹಿಡಿದು ಗಂಡನನ್ನು ಅಟ್ಟಿಸಿಕೊಂಡು ಬರುವ ನಾಯಕಿ ಮುದ್ದಾಗಿ ಕಾಣುತ್ತಾಳೆ. ಅವಳ ಮುಖದಲ್ಲಿ ಕ್ರೌರ್ಯದ ಎಳೆಯೂ ಕಾಣುವುದಿಲ್ಲ. ಆದರೆ ಅದೇ ನಾಯಕಿ ನನ್ನನ್ನು ಎನ್ ಕೌಂಟರ್ ಮಾಡಲು ಅನುಮತಿ ಕೊಡುವೆಯಾ ಎಂಬ ನಾಯಕನ ಪ್ರಶ್ನೆಗೆ ಹೌದು, ಕೊಡುತ್ತೇನೆ ಎನ್ನುವಾಗ ಸಿಡಿಯುವ ಕ್ರೌರ್ಯಕ್ಕೆ ಎಣೆಯೇ ಇಲ್ಲ. ಇದೇ ಮಾತು ನಾಯಕನ ಪಾತ್ರಕ್ಕೂ ಅನ್ವಯವಾಗುತ್ತದೆ. ನಾಯಕನಿಗೆ ಕೊಲ್ಲಬೇಕಿರುವುದು ನಾಲ್ವರನ್ನು ಮಾತ್ರ, ಕೊಂದಿದ್ದು ಏಳು ಮಂದಿಯನ್ನು. ಸತ್ತವರ ಪೈಕಿ ಹಿತೈಶಿಗಳು ಯಾರು, ಶತ್ರುಗಳು ಯಾರು ಗೊತ್ತಿಲ್ಲ ಎಂದು ನಾಯಕ ಹೇಳುವಾಗ ಅವನ ಕಣ್ಣಲ್ಲಿ ದಿಗ್ಗನೆ ಎದ್ದುನಿಲ್ಲುವುದು ಅದೇ ಕ್ರೌರ್ಯ. ಎಸಿಪಿ ಸತ್ಯಮೂರ್ತಿ (ಅನಂತ್ ನಾಗ್) ಖಚಿತವಾಗಿ ಗುರುತಿಸಿದಂತೆಯೇ ಅವನು ಚಾಣಾಕ್ಷ ರಾಕ್ಷಸ. `ಒಬ್ಬನನ್ನು ಕೊಂದವನು ಕೊಲೆಗಾರ, ಹತ್ತು ಲಕ್ಷ ಜನರನ್ನು ಕೊಂದವನು ಸಾರ್ವಭೌಮ’ ಎನ್ನುತ್ತಾನೆ ಸತ್ಯಮೂರ್ತಿ. ಹಿಂಸೆಯ ವಿಸ್ತಾರಗಳನ್ನು ಸೂರಿ ಕಟ್ಟಿಕೊಡುವುದು ಹೀಗೆ. ಅದು ಒಂದೇ ಗುಕ್ಕಿಗೆ ನಮಗೆ ನಿಲುಕದೇ ಇದ್ದರೆ ನಮ್ಮ ಸಮಸ್ಯೆ ಅಷ್ಟೆ.

ಕಡ್ಡಿಪುಡಿಯ ಕಥೆ ಹೇಳುತ್ತ ಹೇಳುತ್ತ ಸೂರಿ ನೂರಾರು ಪುಟ್ಟಪುಟ್ಟ ಕಥೆಗಳನ್ನು ಹೇಳಿ ಮುಗಿಸುತ್ತಾರೆ. ಕೇಳಿಸಿಕೊಳ್ಳುವ ತಾಳ್ಮೆ ಮತ್ತು ಏಕಾಗ್ರತೆ ನಮಗಿರಬೇಕು ಅಷ್ಟೆ. ವೇಶ್ಯೆಯ ಪಾತ್ರ ನಿಭಾಯಿಸಿರುವ ಐಂದ್ರಿತಾ ರೈಗಾಗಿ ಇರುವ ಐಟಮ್ ಸಾಂಗ್ ಇದಕ್ಕೊಂದು ಉದಾಹರಣೆ. ಕಾಲು ಮುರಿದುಕೊಂಡ ಎಳೇ ವಯಸ್ಸಿನ ಹುಡುಗನಿಗೂ ಅವಳೇ ಬೇಕು, ಅವನು ಆಸೆಯಿಂದ ನೋಡುವಾಗ ಐಂದ್ರಿತಾ ತಿರಸ್ಕಾರ ತೋರಿ ಮುಂದೆ ನಡೆಯುತ್ತಾಳೆ. ಇದು ಬಂದು ಹೋಗುವುದು ಒಂದೇ ಒಂದು ಫ್ರೇಮಿನಲ್ಲಿ. ಅದಕ್ಕೇ ಹೇಳಿದ್ದು, ಸೂರಿ ಹೇಳುವ ಕಥೆಗಳನ್ನು ಕೇಳಿಸಿಕೊಳ್ಳುವುದಕ್ಕೆ ಏಕಾಗ್ರತೆ ಬೇಕು.

ಸೂರಿಗೆ ಬೆಂಗಳೂರಿನ ಸಾಮಾಜಿಕ, ಆರ್ಥಿಕ, ರಾಜಕೀಯ ನಾಡಿಮಿಡಿತ ಚೆನ್ನಾಗಿ ಅರ್ಥವಾಗಿದೆ. ರೌಡಿಜಂ ಬಿಟ್ಟವರು ಹುಡುಕಿಕೊಳ್ಳುವ ದಾರಿ ರಾಜಕಾರಣ, ಪತ್ರಿಕೋದ್ಯಮ, ಸಮಾಜಸೇವೆ ಅಥವಾ ಸಿನಿಮಾ. ರೌಡಿಗಳು ಇದ್ದಕ್ಕಿಂತ ಸಮಾಜಸೇವಕರಾಗಿ, ಪತ್ರಕರ್ತರಾಗಿ, ಎಂಎಲ್ ಎಗಳಾಗಿ, ಕಾರ್ಪರೇಟರ್ಗಳಾಗಿ ರೂಪಾಂತರಗೊಳ್ಳುವ ವಾಸ್ತವ ನಮ್ಮ ಮುಂದೆಯೇ ಇದೆ. ಬೇರೇನೂ ಬೇಡ, ನಾನು ವಾಸವಿರುವ ಕ್ಷೇತ್ರದ ಎಂಎಲ್ಎ ಕೂಡ ಒಬ್ಬ ರೂಪಾಂತರಗೊಂಡ ರೌಡಿ. ರೌಡಿಗಳು ಪತ್ನಿಯರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವುದೂ ಈಗ ಮಾಮೂಲಿ ವಿದ್ಯಮಾನ. ಯಾವ ಅತಿರೇಕಗಳೂ ಇಲ್ಲದಂತೆ ಈ ರೂಪಾಂತರದ ಕಥೆಯನ್ನು ಕಡ್ಡಿಪುಡಿ ಸಿನಿಮಾ ಹೇಳುತ್ತದೆ, ಕಣ್ಣುಬಿಟ್ಟು ಬೆಂಗಳೂರಿನ ಬೀದಿಬೀದಿಯಲ್ಲಿ ನೇತುಬಿದ್ದಿರುವ ಒಂದಷ್ಟು ಫ್ಲೆಕ್ಸ್ ಗಳನ್ನು ನೋಡಿದರೆ ನೂರಾರು ಮಂದಿ ಕಡ್ಡಿಪುಡಿಗಳು, ಅವರ ಹೆಂಡಿರು ಕಣ್ಣಿಗೆ ಕಾಣುತ್ತಾರೆ.

ಸೂರಿ ಇಷ್ಟೆಲ್ಲ ಕಥೆಗಳನ್ನು ಡಾಕ್ಯುಮೆಂಟರಿಯ ರೂಪದಲ್ಲಿ ನಿರೂಪಿಸುವ ತಪ್ಪನ್ನೆಲ್ಲೂ ಮಾಡಿಲ್ಲ. ಸಿನಿಮಾ ಸಿನಿಮಾ ಆಗಿಯೇ ಉಳಿಯುತ್ತಲೇ ಸಿನಿಮಾದ ಸಿದ್ಧಸೂತ್ರಗಳನ್ನು ಮೀರುವ ಪ್ರಯತ್ನ ಮಾಡುತ್ತಿರುತ್ತದೆ. ಸಿನಿಮಾ ಅನ್ನೋದು ಕಣ್ಣು-ಕಿವಿಯ ಮಾಧ್ಯಮ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬೇಕಿರುವುದೇನೇನು ಅನ್ನುವುದು ಅವರಿಗೆ ಗೊತ್ತು. ಹೀಗಾಗಿ ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಸಂಕಲನ ಎಲ್ಲವೂ ಅವರ ಐಡಿಯಾಗಳಿಗೆ ತಕ್ಕಂತೆ ದುಡಿಯುತ್ತವೆ.

ಸಾಮಾನ್ಯವಾಗಿ ಚಿತ್ರ ನಿರ್ದೇಶಕರ ಮಿತಿ ಎದ್ದು ಕಾಣುವುದು ಅವರು ಪಾತ್ರಗಳನ್ನು ಕಟ್ಟುವ ರೀತಿಯಲ್ಲಿ. ಕೆಲವು ಸಿನಿಮಾಗಳಲ್ಲಂತೂ ಎಲ್ಲ ಪಾತ್ರಗಳೂ ಒಂದೇ ರೀತಿಯಲ್ಲಿ ಮಾತನಾಡುತ್ತಿರುತ್ತವೆ. (ಇತ್ತೀಚಿನ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಇದಕ್ಕೊಂದು ಉದಾಹರಣೆ) ಮತ್ತೆ ಕೆಲವು ನಿರ್ದೇಶಕರ ಒಂದು ಪಾತ್ರ ಮತ್ತೊಂದು ಸಿನಿಮಾದಲ್ಲಿ ಮುಂದುವರೆದಿರುತ್ತದೆ. ಸೂರಿ ಈ ಮಿತಿಯನ್ನು ಮೀರಿದ್ದಾರೆ. ರೆಕ್ಕೆ ವೆಂಕಟೇಶ ಮತ್ತವನ ಇಬ್ಬರು ಸಹಚರರ ಪಾತ್ರಗಳು ಕನ್ನಡ ಸಿನಿಮಾಗಳಲ್ಲಿ ಕಂಡುಕೇಳರಿಯದ ಪಾತ್ರಗಳು. ಯಾವ ಕೋನದಿಂದ ನೋಡಿದರೂ ಮನುಷ್ಯರಂತೆ ಕಾಣದ ಈ ಪಾತ್ರಗಳು ನಮ್ಮೊಳಗೆ ತಳಮಳ ಹುಟ್ಟಿಸುತ್ತ ಹೋಗುತ್ತವೆ, ಮನುಷ್ಯತ್ವಕ್ಕೆ ಸವಾಲೆಸೆಯುತ್ತ ಹೋಗುತ್ತವೆ.

ಕಡ್ಡಿಪುಡಿಯ ಗೆಲುವು ಕೇವಲ ಸೂರಿಯ ಗೆಲುವು ಅಲ್ಲ. ಎಲ್ಲ ಪಾತ್ರಧಾರಿಗಳ, ತಂತ್ರಜ್ಞರ ಗೆಲುವು. ಶಿವಣ್ಣ ಮತ್ತು ರಾಧಿಕಾ ಪಂಡಿತ್ ಅವರುಗಳದು ಜೀವನಶ್ರೇಷ್ಠ ನಟನೆ. ಕಪ್ಪು-ಬಿಳುಪು ಎಂದು ವಿಭಾಗಿಸಲಾಗದ ಈ ಪಾತ್ರಗಳನ್ನು ಇವರಿಬ್ಬರೂ ನಿರ್ವಹಿಸಿರುವ ರೀತಿ ಅದ್ಭುತ. ರಾಧಿಕಾ ಕಣ್ಣಲ್ಲೇ, ತುಟಿಯ ಕೊಂಕಲ್ಲೇ ಮಾತನಾಡುವಷ್ಟು ಚತುರೆ. ರಂಗಾಯಣ ರಘು ನಗೆಯ ಕಾರಂಜಿ ಹರಿಸುವ ಜಾದೂಗಾರ. ರಾಜೇಶ್, ಶರತ್ ಲೋಹಿತಾಶ್ವ, ಅವಿನಾಶ್, ಅನಂತ್ ನಾಗ್ ಅವರುಗಳು ಕಥೆಯ ಓಘಕ್ಕೆ ತಕ್ಕಂತೆ ಹರಿದಾಡುತ್ತಾರೆ. ಐಂದ್ರಿತಾ ಸಿಕ್ಕ ಅವಕಾಶದಲ್ಲಿ ಮಿಂಚಿ ಮರೆಯಾಗುತ್ತಾಳೆ. ಹರಿಕೃಷ್ಣರ ಸಂಗೀತ, ಜಯಂತ್ ಕಾಯ್ಕಿಣಿ-ಯೋಗರಾಜ್ ಭಟ್ ಅವರ ಸಾಹಿತ್ಯ ಜೋಡಿಗೆ ಮನಸೋಲದೇ ಇರಲು ಸಾಧ್ಯವೇ ಇಲ್ಲ. ಛಾಯಾಗ್ರಾಹಕ ಕೃಷ್ಣ ಸೂರಿ ಸಿನಿಮಾಗೆ ಏನೇನು ಬೇಕಿತ್ತೋ ಎಲ್ಲವನ್ನೂ ಧಾರೆಯೆರೆದಿದ್ದಾರೆ.

ಕಡ್ಡಿಪುಡಿ ಕಾಡುವ ಸಿನಿಮಾ. ಯಾಕೆಂದರೆ ಮನುಷ್ಯ ಸಂಬಂಧಗಳನ್ನು ಅವು ಇದ್ದಂತೆ ತೋರಿಸುವುದು ಸೂರಿಗೆ ಸಾಧ್ಯವಾಗಿದೆ. ಸಾಮಾಜಿಕ ಸೂಕ್ಷ್ಮಗಳನ್ನು ಯಾವುದೇ ಮೈಕು-ಸ್ಪೀಕರ್ನ ಅವಶ್ಯಕತೆಯಿಲ್ಲದಂತೆ ಸಣ್ಣ ಸಣ್ಣ ರೂಪಕಗಳ ಮೂಲಕ ತೋರಿಸುವುದು ಅವರಿಗೆ ಸಾಧ್ಯವಾಗಿದೆ. ಹಾಗಂತ ಏನೋ ಮಹತ್ತರವಾದ ಸಂದೇಶವೊಂದನ್ನು ಈ ಸಿನಿಮಾದ ಮೂಲಕ ನೀಡುತ್ತಿದ್ದೇನೆ ಎನ್ನುವ ಅಹಂ ಕೂಡ ಸೂರಿಗೆ ಇದ್ದಂತಿಲ್ಲ. ಹೀಗಾಗಿಯೇ ಎಲ್ಲ ಪಾತ್ರಗಳ ಹಕೀಕತ್ತನ್ನು ನೋಡುಗರ ಮಡಿಲಿಗೇ ಹಾಕಿ ಸೂರಿ ತಣ್ಣಗಾಗುತ್ತಾರೆ. ಕಿತ್ತು ಹೋದ ಚಪ್ಪಲಿಯ ಉಂಗುಷ್ಠದ ಕೊಂಡಿಗೆ ಪಿನ್ನು ಚುಚ್ಚಿಕೊಂಡು ಓಡಾಡಿದವರಿಗಷ್ಟೇ ಅದರ ನೋವು ಎದೆಗೆ ಇಳಿಯುವುದು ಸಾಧ್ಯ. ಕಿತ್ತು ಹೋದ ಚಪ್ಪಲಿಯಿಂದ ಹಿಡಿದು ಮೊದಲ ರಾತ್ರಿಗೆ ಅಡಚಣೆ ಮಾಡುವ ಲಾಂಗ್‌ವರೆಗೆ  ಎಲ್ಲವೂ ಇಲ್ಲಿ ಪಾತ್ರಗಳೇ. ಎಲ್ಲವೂ ಮಾತನಾಡುತ್ತವೆ.

ಇದು ಹೀಗೇ ಶುರುವಾಗಿ ಹೀಗೇ ಅಂತ್ಯವಾಗುತ್ತದೆ ಎಂದು ಸುಲಭವಾಗಿ ಊಹಿಸಬಲ್ಲ ಸಿನಿಮಾಗಳ ನಡುವೆ ಕಡ್ಡಿಪುಡಿ ಹೊಸ ಭರವಸೆ ಮೂಡಿಸುತ್ತದೆ. ಕನ್ನಡ ಸಿನಿಮಾಗಳು ಇತರ ಭಾಷೆಗಳ ಸಿನಿಮಾಗಳ ಜತೆ ಸರಿಸಾಟಿಯಾಗಿ ನಿಂತು ಸೆಣೆಸಬೇಕಿರುವುದು ಈ ರೂಪದಲ್ಲೇ. ನಿಜ, ಕೆಲವರಿಗೆ ಕಡ್ಡಿಪುಡಿ ಇಷ್ಟವಾಗಿಲ್ಲದೇ ಇರಬಹುದು. ಯಾಕೆಂದರೆ ಸೂರಿಯ ಕಡ್ಡಿಪುಡಿ ಒಗರು ಒಗರು, ಘಾಟು. ಅಷ್ಟು ಸುಲಭಕ್ಕೆ ಇದು ನಮ್ಮ ರೋಮ್ಯಾಂಟಿಕ್ ಮನಸುಗಳಿಗೆ ದಕ್ಕುವುದಿಲ್ಲ. ಯಾಕೆಂದರೆ ಇಂಥ ಪ್ರಯತ್ನಗಳು ಆಗಿರುವುದು ಕಡಿಮೆ. ಈಗಲಾದರೂ ಆರಂಭವಾಗಿರುವುದಕ್ಕೆ ಸೂರಿಗೊಂದು ಥ್ಯಾಂಕ್ಸ್.

‍ಲೇಖಕರು avadhi

15 June, 2013

6 Comments

  1. Satyanarayana BR

    ಕಡ್ಡಿಪುಡಿ ಚಿತ್ರ ಮತ್ತೆ ಮತ್ತೆ ಚರ್ಚೆಗೆ ತೆರೆದುಕೊಳ್ಳತ್ತಲೇ ಇದೆ. ಕನ್ನಡ ಚಿತ್ರವೊಂದು ಮಾದ್ಯಮದಲ್ಲಿ ಹೀಗೆ ಚರ್ಚೆಯಾಗುತ್ತಿರುವುದು ಚಿತ್ರೋದ್ಯಮದ ಸದ್ಯದ ಪರಿಸ್ಥಿತಿಯಲ್ಲಿ ಒಳ್ಳೆಯ ಬೆಳವಣಿಗೆ.

  2. roopa

    Superb review sir 🙂 thanks

  3. CHALAM

    ಸಿನೆಮಾವನ್ನು ತುಮಬಾ ಚೆನ್ನಾಗಿ ವಿಶ್ಲೇಶಿಸಿದ್ದೀರಿ.ಸೂರಿ ನಿಜಕ್ಕೂ ಕಾಡುವ ನಿರ್ದೇಶಕ.

  4. vasanth

    This film is very good compare to Annabond of the same director. This film has some inspiration from Tamil cinema’s like Paruthiveeran, and some others. Very raw in content and depicts the life of downtrodden. Cinematography of the film is too good, Suri’s background has an artist has worked very well in this film. Great work. If I want to see this film again, it is because of the camera work.Suri play with lights.
    Good review, thanks to Dinesh Kumar as well.

  5. sumanth

    ಕಡ್ಡಿಪುಡಿ ಚಿತ್ರದ ಬಗ್ಗೆ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ನಂಗೆ ಕಡ್ಡಿಪುಡಿ ಚಿತ್ರ ನೋಡುವ ಕಾತರ ಹೆಚ್ಚಾಗಿದೆ. ಧನ್ಯವಾದಗಳು

  6. Raghu

    Superb movie and superb review,this is what we are expecting from kannada directors,stop remakes and start doing movies like this

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading