
ಒಂಯೇಕಾಚಿ ಇಲೋ ನೈಜೀರಿಯಾದ ಕವಿ, ಸಾಹಿತಿ, ಫೋಟೋಗ್ರಾಫರ್ ಮತ್ತು ದೃಶ್ಯ ಕಲಾವಿದ. ಕಲೆಯನ್ನು ಕ್ರಾಂತಿಯ ಅಸ್ತ್ರವೆಂದು ನಂಬುವ ವ್ಯಕ್ತಿ. ನನಗೆ ಆತನ ಕವನಗಳ ಪ್ರಖರ ತೀಕ್ಷ್ಣತೆ ಬಹಳ ಕಾಡುತ್ತದೆ. ಜಗತ್ತಿನ ಉತ್ತಮ ಕವನ ಪೋರ್ಟಲ್ ಗಳಲ್ಲಿ ಈತನ ಕವನ ಪ್ರಕಟವಾಗಿರುತ್ತದೆ. ಸಿಕ್ಕಾಪಟ್ಟೆ ಕಾವ್ಯ ಪ್ರಶಸ್ತಿಗಳನ್ನು ಗಳಿಸಿದ್ದಾನೆ.
ಮೊನ್ನೆ ಒಂದು ಸಂದರ್ಶನದಲ್ಲಿ ಯುವಕವಿಗಳಿಗೆ, ದಯವಿಟ್ಟು ಪ್ರಶಸ್ತಿಗಳಿಗಾಗಿ ಕವನ ಬರೆಯಬೇಡಿ ಎಂದು ಸಂದೇಶ ಕೊಟ್ಟ.
ಈತನ ಇನ್ನಷ್ಟು ಕವನಗಳನ್ನು ಅನುವಾದಿಸುವ ಆಸೆ ನನಗಿದೆ. ಆದರೆ ಅವು ಬಹಳ ಸಂಸ್ಕೃತಿ -ಮಿತಿಗೊಳಪಟ್ಟವಾದ್ದರಿಂದ (ಕಲ್ಚರ್ – ಸ್ಪೆಸಿಫಿಕ್) ಅಡಿಟಿಪ್ಪಣಿಗಳ ಅಗತ್ಯ ಬಹಳ ಇರುತ್ತದೆ.
2021ರಲ್ಲಿ ಒಂದು ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಈತನ ಕವನ ‘It Is Once Again the Season of Corn’ ನಲ್ಲಿ, ಬೆಂಕಿನ ಬಣ್ಣದ ಉಡುಗೆ ತೊಟ್ಟ ಕಪ್ಪು ಮಹಿಳೆಯರು ಮೆಕ್ಕೆ ಜೋಳ ಸುಡುತ್ತಾ ಹಾದಿಬದಿಯ ಬಸ್ ಡ್ರೈವರ್ ಗಳಿಗೆ, ಗಸ್ತು ಪೊಲೀಸರಿಗೆ ತಿನ್ನಲು ಕೊಡುತ್ತಿರುವ ಚಿತ್ರಣ ಒಂದು ಅದ್ಭುತ ಅನುಭವ. ಪ್ರಸ್ತುತ ಕವನ ‘A Compendium of Excuses To Not Call In The Aftermath of Falling Out of Love’ ದ ಅನುವಾದ.
ಪ್ರೀತಿ ಮುಗಿದ ನಂತರ ಕರೆಮಾಡದಿರಲು ನೆಪಗಳ ಸಂಕಲನ
ಒಂಯೇಕಾಚಿ ಇಲೋ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಸಾರಿ, ನಾನು ಸ್ನಾನದಲ್ಲಿದ್ದೆ.
ಸಾರಿ, ನನ್ನ ಫೋನ್ ಚಾರ್ಜ್ ಆಗಿರಲಿಲ್ಲ.
ಸಾರಿ, ನಾನು ಬಟ್ಟೆ ಒಗೀತಿದ್ದೆ.
ಸಾರಿ, ನಾನು ಉತ್ತರ ಧ್ರುವಕ್ಕೆ ಹೋಗಿದ್ದೆ.
ನಮ್ಮ ಸುತ್ತ ಪೆಂಗ್ವಿನ್ ಗಳು ಜಾರುತ್ತಿದ್ದವು.
ಸಾರಿ, ಹಳೇ ನೋವುಗಳು ಮತ್ತೆ ನನ್ನ ಬಾಗಿಲು ಬಡಿಯುತ್ತಿದ್ದವು
ಕಕ್ಕಸಿಗೆ ಅವಸರವಾಗಿರುವವರು ಬಡಿಯುವ ಹಾಗೆ.
ಸಾರಿ, ರಾಜ ನಮ್ಮನ್ನು ಕಣದಲ್ಲಿ ಎಸೆಸಿದ, ನಾವು ಬರಿಗೈಗಳಿಂದ
ಸಿಂಹವನ್ನು ಸೆಣೆಸಬೇಕಿತ್ತು.
ಸಾರಿ, ಸೂಪರ್ ಮ್ಯಾನ್ ನಮ್ಮ ಮನೆಯನ್ನು ಬಾಹ್ಯಾಕಾಶದಿಂದ
ದಾಳಿ ಮಾಡಿದ ಏಲಿಯನ್ ಕಡೆಗೆ ಎಸೆದ,
ನಾನಿದನ್ನು ಮುರಿದ ಜಗಲಿಯ ಮೇಲೆ ಕೂತು ಬರೆಯುತ್ತಿದ್ದೇನೆ.
ಛಾವಣಿ ಇಲ್ಲ, ತಾರಸಿ ಇಲ್ಲ, ಏನೇನೂ ಇಲ್ಲ, ತಲೆ ಮೇಲೆ ಬರಿ ನಕ್ಷತ್ರಗಳು ಮಾತ್ರ.
ಆಕಾಶದ ಶೋಕಿಲಾಲಾಗಳ ತೊಡೆ ನಡುವಿಂದ ಬರುತ್ತಿದ್ದ ಬೆಳಕಿನಿಂದ ನಾನು ಮತ್ತನಾದೆ.
ಸಾರಿ, ನನ್ನ ತಾತನ ಆತ್ಮ ಒಂದು ಸಂದೇಶ ಕಳಿಸಿತು:
ಮಗೂ, ನಿನಗೆ ಸ್ವಲ್ಪ ಉಸಿರಾಡುವ ಅವಕಾಶ ಬೇಕಲ್ಲವೇ?
ಸಾರಿ, ಗತಕಾಲದಲ್ಲಿ ಕಳೆದುಹೋದ ವಸ್ತುಗಳನ್ನು ಹುಡುಕುತ್ತಿದ್ದೆ
ಸಾರಿ, ಇಡೀ ರಾತ್ರಿ ನಾನು ನಿದ್ದೆ ಮಾಡಲಿಲ್ಲ, ನಾನೊಂದು ಹಳೆ ಟಿ-ಶರ್ಟ್ ಹುಡುಕುತ್ತಿದ್ದೆ.
ಅದು ಸಿಕ್ಕಲಿಲ್ಲ, ಆದರೆ ಸಿಕ್ಕಿದ್ದರ ಬಗ್ಗೆ ಸಾರಿ, ಇದೇ ತೂತಿನಿಂದ ಸಂತೋಷ ಸೋರಿಹೋಗಿ
ನಾವು ರಾತ್ರಿಯ ದಪ್ಪ ಕೆಸರಿನಲ್ಲಿ ಹೂತುಹೋದೆವಲ್ಲಾ, ಆ ತೂತು.
ಮೀನುಗಾರನೊಬ್ಬ ಕಡಲಿಗೆ ನೀನೆಷ್ಟು ಸೂರ್ಯಗಳನ್ನು ಇಟ್ಟುಕೊಳ್ಳಬಲ್ಲೆ
ಎಂದು ಕೇಳುವ ಹಾಡು, ಜೊತೆಗೆ ಮೂರು ಹಕ್ಕಿಗಳು, ಒಂದು ಬಿಳಿ, ಒಂದು ಕಪ್ಪು
ಮೂರನೆಯದರ ಬಣ್ಣ ಹೇಳಲಿಲ್ಲ ಆ ಹಾಡಿನಲ್ಲಿ.
ಪ್ರಳಯಕಾಲದ ನಾಲ್ವರು ರಾವುತರು ಜೀನು ಬಿಗಿಯುತ್ತ
ಮರಳ ಮೇಲೆ ಖುರಪುಟದ ಗುರುತು ಮಾಡುತ್ತಾ
ಎಂಥ ಒಳ್ಳೆ ಹುಡುಗರು, ಎಂಥೆಂಥಾ ಒಳ್ಳೆ ಹುಡುಗರು ಎಂದು ಹಾಡುತ್ತಾ
ಶೋಕದ ಐದು ಹಂತಗಳು, ಹಾಸಿಗೆಯ ಮೇಲೆ ಅರೆ ನಗ್ನ
ಪರ್ಪಲ್ ರೇನ್ ನ ತಮ್ಮದೇ ವರ್ಷನ್ ಹಾಡುತ್ತಾ
ಸಾರಿ, ಸೂಪರ್ ಮ್ಯಾನ್ ನಮ್ಮ ಮನೆ ಹಿಂದಿರುಗಿಸಿದ, ಆದರೆ ಅದನ್ನು ಓರಣ ಮಾಡುವಲ್ಲಿ
ಹೆಣ ಬಿದ್ದು ಹೋಗಿದೆ, ನಾಯಿ ಚೆಂಡಾಟದಲ್ಲಿ ತಾರಸಿಯೆಲ್ಲಾ ಮಣ್ಣು ಮಾಡಿದೆ.
ಸಾರಿ, ಸತ್ತವರನ್ನೆಲ್ಲಾ ನಾವು ಮತ್ತೆ ಫೋಟೋ ಫ್ರೆಮಿನೊಳಗೆ ಕೂರಿಸಲು ಯತ್ನಿಸುತ್ತಿದ್ದೇವೆ
ಸಾರಿ, ನಮ್ಮ ದೊಡ್ಡಪ್ಪ ತಾನು ಸತ್ತಿಲ್ಲ ಎಂದು ಹಠ ಹಿಡಿದಿದ್ದಾನೆ
ಸಾರಿ, ಅವನು ಟೀ ಸುರಿದುಕೊಳ್ಳುತ್ತಿದ್ದಾನೆ, ನಾವು ಯುದ್ಧ ಗೆದ್ದೆವೇ ಎಂದು ಕೇಳುತ್ತಿದ್ದಾನೆ.
ಸಾರಿ, ನೀನು ನನಗೆ ಕೊಡಿಸಿದ ಪತ್ರಿಕೆಯನ್ನು ಅವನು ಬೆಂಕಿಗೆ ಹಾಕಿದ್ದಾನೆ
ಸಾರಿ, ಎಲ್ಲಾ ಜಿರಳೆಗಳೂ ನಾನು ಕಾಫ್ಕಾನನ್ನು ನೋಡಿದ್ದಿನಾ ಎಂದು ಕೇಳುತ್ತಿವೆ.
ಸಾರಿ, ಈ ಕವನದಿಂದ ನಿನ್ನ ಒಂದು ಕೈ ಒಂದು ಕಾಲು ಕತ್ತರಿಸಿಹೋಗುತ್ತದೆ
ಆಗ ಹೇಗೆ ಫೋನ್ ಎತ್ತಿಕೊಳ್ಳುತ್ತೀಯಾ?
ಒಂದು ಕಾಲದಲ್ಲಿ ಮೃದುಮಧುರ ಎಂದುಕೊಂಡ ಎಲ್ಲವನ್ನೂ ಚಚ್ಚಿ ಹಾಕುತ್ತಿರುವ
ಈ ಮರುಕವಿಲ್ಲದ ಯಂತ್ರವನ್ನು ಹೇಗೆ ಸುಮ್ಮನಾಗಿಸುವುದು?
ಸಾರಿ, ನಿನಗೆ ಉಂಟಾದ ಯಾವುದೇ ಅಡಚಣೆಗೆ, ಆದರೆ ಈ ಕವನದ ಬೆಲೆ ಒಂದು ಹೃದಯ.
ರಕ್ತ ಒಸರುತ್ತಿರುವ ಸ್ಪಂಜಿನಂತಹ ಮಿಡಿಯುತ್ತಿರುವ ವಸ್ತುವನ್ನು ಇಲ್ಲಿ ಹಾಕಿ.
ಸಾರಿ, ಒಲವೇ, ಈಚೆಗೆ ಇಲ್ಲಿ ಬಹಳಷ್ಟು ನಡೆದಿದೆ.
***






ವ್ಹಾರೆವ್ಹಾ…
ಅಕ್ಕೋವ್ ನಿನಗೆ ಅಡ್ಡಬಿದ್ದೆ,
ಇಷ್ಟು ಚಂದದ ಅನುವಾದ ಮಾಡಿ ನಮಗೆ ಈ ಆಫ್ರಿಕನ್ ಲೇಖಕನ ಕವನ ದಾಟಿಸಿದ್ದಕ್ಕೆ…
Thank you sureshaa