ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಂದು ಮುತ್ತಿನ ಹಿಂದೆ ಎಷ್ಟೆಲ್ಲಾ ಕಥೆಗಳಿರಲು ಸಾಧ್ಯ…' – ರೂಪಾ ಹಾಸನ್ ಬರೀತಾರೆ

ಒಂದು ಮುತ್ತಿನ ಕಥೆ!

ರೂಪ ಹಾಸನ

ಅಷ್ಟು ದೊಡ್ಡ ಪುಟಾಣಿಗಳ ಗುಂಪು. ಎಲ್ಲರೂ ಅವರವರದೇ ಯಾವುದೋ ಪ್ರಪಂಚದಲ್ಲಿ ವ್ಯಸ್ತ. ಆದರೆ ಅವಳ ನೆಟ್ಟ ನೋಟ ಮಾತ್ರ ನನ್ನ ಮೇಲೆಯೇ. ಅಪ್ಪಿತಪ್ಪಿ ಅವಳೆಡೆಗೆ ನನ್ನ ದೃಷ್ಟಿ ಹಾದರೆ ತನ್ನ ಉಬ್ಬಿದ ಗಲ್ಲ ಮತ್ತಷ್ಟು ಉಬ್ಬಿಸಿ ಕಣ್ಣ ತುಂಬಾ ನಗುವಿನ ಅಲೆ. ಅವರೊಂದಿಗಿನ ನಮ್ಮ ಕಾರ್ಯಕ್ರಮ-ಕೆಲಸ ಮುಗಿಸಿ ಹೊರಟು ನಿಂತಾಗ ಹಿಂದಿನಿಂದ ಯಾರೋ ಸೆರಗು ಎಳೆದಂತಾಗಿ ನೋಡಿದರೆ, ಸಂಕೋಚದ ಮುದ್ದೆಯಾಗಿ ನಿಂತ ಅವಳು! ‘ಮತ್ತೆ ಬೇಗ ಬನ್ನಿ ಅಮ್ಮ’ ಎಂಬ ಪ್ರೀತಿಯ ಆಹ್ವಾನ. ‘ಕಳ್ಳಿ ಆಗಿಂದ ನನ್ನೇ ನೋಡ್ತಾ ಇದ್ದೆ’ ಎಂದು ಮೃದುವಾಗಿ ಬಳಸಿ ಹಿಡಿದುಕೊಂಡೆ. ‘ನನ್ನ ಕಂಡರೆ ನಿಮಗೆ ಇಷ್ಟನಾ ಅಮ್ಮ?’ ತನ್ನ ಪುಟ್ಟ ಕಣ್ಣುಗಳನ್ನ ದೊಡ್ಡದಾಗಿ ಅರಳಿಸುತ್ತಾ ಕೇಳಿದಳು. ‘ತುಂಬಾ ಇಷ್ಟ ಪುಟ್ಟಿ’ ಎನ್ನುತ್ತಾ ಕೆನ್ನೆಗೊಂದು ಮುತ್ತು ಕೊಟ್ಟೆ. ಅದೇನು ಸಂಭ್ರಮವೋ, ನಾಚಿಕೆಯೋ, ಮುಜುಗರವೋ ತಿಳಿಯುವ ಮೊದಲೇ ಬಿಡಿಸಿಕೊಂಡು ಒಳಗೆ ಓಡಿ ಹೋದಳು.

ಮಾರನೇ ಬೆಳಗ್ಗೆ ಬಾಲಕಿಯರ ಬಾಲಮಂದಿರದಿಂದ ವಾರ್ಡನ್ ಫೋನ್. ರಾತ್ರಿಯೆಲ್ಲಾ ಹರ್ಷಿತ ತನ್ನ ಗೆಳತಿಯರ ಹತ್ತಿರ ‘ರೂಪಮ್ಮ ನಂಗೆ ಮುತ್ತು ಕೊಟ್ಟರು’ ಅಂತ ಹೇಳ್ಕೊಳ್ತಿದ್ದಾಳಂತೆ. ನಿಜವಾಗ್ಲೂ ನೀವವಳಿಗೆ ಮುತ್ತು ಕೊಟ್ರಾ ಮೇಡಂ? ‘ಹೌದು ಕೊಟ್ಟೆ ಏನಾದ್ರೂ ತೊಂದರೆ ಆಯ್ತಾ?’ ‘ಏನಿಲ್ಲ ಮೇಡಂ ಅವಳು ಸುಳ್ಳು ಹೇಳ್ತಿರ್ಬಹುದು ಅಂತ ಮಕ್ಕಳೆಲ್ಲಾ ಕಂಪ್ಲೆಂಟ್ ಮಾಡಿದರು ಅದಕ್ಕೆ ಕೇಳ್ದೆ ಅಷ್ಟೇ

ಪಾಪ ಅಮ್ಮನ ಪ್ರೀತಿಯ ಮುತ್ತಿನ ಅನುಭವವಿಲ್ಲದ ಮಗು ಅದೆಷ್ಟು ಸಂಭ್ರಮಿಸಿದೆಯೋ? ಆದರೆ ಸಾಕ್ಷಿಯೇ ಇಲ್ಲದಿದ್ದರೆ ಅದನ್ನು ಮಗು, ಬೇರೆಯವರ ಮುಂದೆ ಪ್ರೂವ್ ಮಾಡೋದಾದ್ರೂ ಹೇಗೆ? ಒಂದು ಜುಜುಬಿ ಮುತ್ತೂ ಇಷ್ಟೊಂದು ದುಬಾರಿಯೇ? ಕಣ್ಣು ತುಂಬಿ ಬಂತು. ಮುಂದಿನ ಬಾರಿ ಎಲ್ಲರೂ ಕಾಣುವಂತೆಯೇ ಆ ಮಗುವಿಗೆ ಮುತ್ತು ಕೊಟ್ಟು ಬರಬೇಕು ಎಂದು ನಿರ್ಧರಿಸಿದಾಗ ಮನಸು ಕೊಂಚ ಹಗುರಾಯ್ತು. ಆದರೂ…… ಒಂದು ಮುತ್ತಿನ ಹಿಂದೆ ಎಷ್ಟೆಲ್ಲಾ ಕಥೆಗಳಿರಲು ಸಾಧ್ಯ…… ಯೋಚಿಸುತ್ತಾ ಹೋದಂತೆ….. ಕರುಳು ನಡುಗಿತು…..

 

 
 

‍ಲೇಖಕರು avadhi

11 June, 2013

9 Comments

  1. hvvenugopal

    ಮನ ಮುಟ್ಟುವಂತಿದೆ.

  2. nagaraj hettur

    Roopa medam istavaaguvude intaha barahagalinda

  3. Renuka Nidagundi

    very touching.

  4. Veerendra ravihal

    ತುಂಬ ಚನ್ನಾಗಿದೆ ರೂಪಾ ಮೇಡಂ. ಯಾಕೋ ಇತ್ತೀಚೆಗೆ ಹೊಸ ಕವಿತೆಗಳು ಬಂದಂತಿಲ್ಲ. ನಿಮ್ಮ ಕವಿತೆಗಳಿಗಾಗಿ ಕಾದಿದ್ದೇನೆ

  5. chalam

    ಅಬ್ಬ……ನಿಜವಾಗಿ ಆಗಬೇಕಾದ ಕೆಲಸಗಳು….ಹೀಗೆ ಗೊತ್ತಿಲ್ಲದಂತೆ ನಡೆದುಬಿಡುತ್ತವೆ.ಹಾಗೆ ಕೆಲವೊಮ್ಮೆ ಯಾವುದಕ್ಕೆ ಖುಷಿ,ಯಾವುದಕ್ಕೆ ಬೇಜಾರು ಅಂತಲೇ ತಿಳಿಯುವುದಿಲ್ಲ.

  6. ಹನುಮಂತ ಹಾಲಿಗೇರಿ

    ಚಿಕ್ಕ ಸುಂದರ ಕಥೆ, ಆದರೆ ನಡೆದದ್ದು!

  7. Arkalgud Jayakumar

    Barahagalalli enthaha apthathe dakkuvudu varthamaanada dinagalalli aparupave sari, bhaavanegalige bele sigada e dinagali RupaHassan maguvina manadaalakke thalupuva hrudayasparshi kshanagalige saakshiyaagidddannu oduthale bhaavukanaagiddene. Thanks to Rupahasan n spl thanks to AVADHI for a good read.

  8. ugamasrinivas

    ರೂಪ ಹಾಸನ ಅವರದ್ದು ಎಷ್ಟೊಂದು ಪ್ರೀತಿ ತುಂಬಿದ ಬರೆಹ. ನಿಜಕ್ಕೂ ಕಣ್ಣು ಒದ್ದೆಯಾಯಿತು. ಮುತ್ತು ಕೊಡಿಸಿಕೊಂಡಾಗ ಆ ಮಗುವಿನ ಕಣ್ಣ ಬೆರಗನ್ನು ನೋಡಬೇಕು ಅನಿಸುತ್ತಿದೆ. ರೂಪ ಅವರ ಈ ಪುಟ್ಟ ಬರೆಹ ಮಳೆಗಾಲದ ಈ ಸಂಜೆ ತುಂಬಾ ಬೆಚ್ಚಗಿನ ಅನುಭವ ನೀಡಿತು.

  9. ರೂಪ ಹಾಸನ

    ನಿಮ್ಮೆಲ್ಲಾ ಸಹೃದಯ ಸ್ಪಂದನೆಗೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading