ಮೊನ್ನೆ ಸತೀಶ್ ನಾಯ್ಕ್ ಫೇಸ್ ಬುಕ್ಕಿನಲ್ಲಿ ಒಂದು ಸ್ಟೇಟಸ್ ಹಾಕಿದ್ದರು.
ಆಮೇಲೆ ಭಾರತಿ ಅವರು ಅವಧಿಯಲ್ಲಿ ಬರೆದ “ಜಯಾ ಬಾಧುರಿ ’ಪತಿಯರೆಲ್ಲಾ ಪ್ರಿಯಕರರಲ್ಲ’ ಅಂದುಬಿಟ್ಟಿದ್ದರೆ!” ಲೇಖನ ಓದಿ ಆ ಲೇಖನಕ್ಕೆ ಪ್ರತಿಕ್ರಯಿಸಿದ್ದರು.
ಒಂದು ಲೇಖನ ನಾವು ಆಲೋಚಿಸುವ ರೀತಿಯನ್ನು ಹೀಗೆ ಬದಲಾಯಿಸಬಹುದು ಅಂದರೆ … ಯಾಕೋ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು.
***
ಸತೀಶ್ ನಾಯ್ಕ್
ಸತೀಶ್ ನಾಯ್ಕ್ ಫೇಸ್‌ಬುಕ್ ನಲ್ಲಿ ಹಾಕಿದ ಸ್ಟೇಟಸ್ ಇಲ್ಲಿದೆ :
ಮದುವೆ ಆಗಿ ಆರು ವರ್ಷದ ನಂತರ ಒಬ್ಬ ತನ್ನ ಹೆಂಡತಿಯ ಒತ್ತಾಸೆಯನ್ನ ತಾಳಲಾರದೆ ಅವಳನ್ನ ಹನಿಮೂನ್ ಗೆ ಕರಕೊಂಡು ಹೋದನಂತೆ. ಅದು ಕೂಡ ಜೆರುಸಲೇಮ್ ಗೆ.
ಜೆರುಸಲೇಮ್ ನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲ ನೋಡೋವಾಗ.. ಏಸು ಪ್ರಭುಗಳು ಸತ್ತು ಮೂರು ದಿನದ ನಂತರ ತಾವು ಎದ್ದು ಬಂದ ಗುಹೆಯನ್ನ ಗೈಡ್ ಆ ದಂಪತಿಗಳಿಗೆ ತೋರಿಸೋವಾಗ ಹೆಂಡತಿಗೆ ಹೃದಯಾಘಾತವಾಗಿ ಅಲ್ಲಿಯೇ ಪ್ರಾಣ ಬಿಡುತ್ತಾಳಂತೆ.
ಮ್ಲಾನ ಮುಖವನ್ನ ಹೊತ್ತು ನಿಂತಿದ್ದ ಗಂಡನನ್ನ ನೋಡಿ ಗೈಡ್ ಕೇಳಿದ. ಸಾರ್ ಏನ್ ಸಾರ್ ಹೀಗ್ ಆಗೋಯ್ತು. ಆದ್ರೂ ನಿಮ್ ಹೆಂಡತಿ ಲಕ್ಕಿ ಸಾರ್.. ಇಂಥಾ ಪುಣ್ಯ ಭೂಮೀಲಿ ತಮ್ಮ ಪ್ರಾಣ ಬಿಟ್ಟಿದಾರೆ. ಎಷ್ಟು ಜನಕ್ಕೆ ಬರಬೇಕು ಇಂಥಾ ಭಾಗ್ಯ. ನೋಡಿ ಸಾರ್ ಇಲ್ಲಿಂದ ನೀವು ನಿಮ್ಮ ಹೆಂಡತಿ ಶವವನ್ನ ನಿಮ್ಮ ದೇಶಕ್ಕೆ ತೆಗೆದುಕೊಂಡು ಹೋಗೋದಾದ್ರೆ ಅಂದಾಜು ಐದು ಸಾವಿರ ಡಾಲರ್ ಖರ್ಚಾಗತ್ತೆ.. ಅದೇ ಇದೇ ಪುಣ್ಯ ಭೂಮೀಲಿ ಮಣ್ಣು ಮಾಡಿದ್ರೆ ನೂರೈವತ್ತು ಡಾಲರ್ ಖರ್ಚಾಗತ್ತೆ. ನೋಡಿ ಸಾರ್ ಏನ್ ಮಾಡ್ತೀರ ನಿಮಗೆ ಬಿಟ್ಟದ್ದು.
ಗಂಡ ತನ್ನ ಹೆಂಡತಿಯ ಮುಖವನ್ನೇ ಮೌನವಾಗಿ ಒಂದಷ್ಟು ಹೊತ್ತು ದಿಟ್ಟಿಸಿ ತನ್ನ ಹೆಂಡತಿಯ ದೇಹವನ್ನ ತನ್ನ ಜೊತೆಗೇ ತೆಗೆದುಕೊಂಡು ಹೋಗುವುದಾಗಿ ತಿಳಿಸ್ತಾನೆ ಆ ಗೈಡ್ ಗೆ.
ಗೈಡ್ ಅವನನ್ನ ಕಂಡು ಆಶ್ಚರ್ಯ ವ್ಯಕ್ತಪಡಿಸ್ತಾನೆ. ಬೇರೆ ಯಾರೇ ಆಗಿದ್ರು ಆ ಪುಣ್ಯ ಭೂಮಿಲಿ ತಮ್ಮವರನ್ನ ಮಣ್ಣು ಮಾಡಿ ಹೋಗ್ತಿದ್ರು. ಹಾಗೆ ಅದೆಷ್ಟೊಂದು ಜನ ಮಾಡಿದಾರೆ ಕೂಡಾ. ಇವನು ಅದನ್ನ ಬಿಟ್ಟು ತನ್ನ ಹೆಂಡತಿಯ ಶವವನ್ನ ಅಷ್ಟೆಲ್ಲಾ ಕಷ್ಟಪಟ್ಟು.. ಅಷ್ಟು ಖರ್ಚು ಮಾಡಿ ತನ್ನೊಟ್ಟಿಗೆ ತೆಗೆದುಕೊಂಡು ಹೋಗ್ತಾನೆ ಅಂದ್ರೆ.. ಹೆಂಡತಿ ಮೇಲೆ ಅದೆಂಥಾ ಪ್ರೀತಿ ಇರಬೇಕು. ನಿಜವಾಗಲು ಇವನೊಬ್ಬ ಅದ್ಭುತ ಪ್ರೇಮಿ ಅಂದುಕೊಂಡು ಅವನ ಕಡೆ ಅಭಿಮಾನದ ನೋಟ ಬೀರ್ತಾನೆ.
ತನ್ನ ಹೆಂಡತಿಯ ಶವವನ್ನ ತನ್ನೂರಿಗೆ ತಂದು ಮಣ್ಣು ಮಾಡಿದ ದಿನ ಬಾರಲ್ಲಿ ಕೂತು ಕುಡೀತಿದ್ದ ಅವನನ್ನ ಅವನ ಸ್ನೇಹಿತ ಕೇಳ್ತಾನೆ.. ಏನೋ ನೀನು ಯಾವಾಗ ನೋಡಿದ್ರೂ ನಿನ್ ಹೆಂಡತಿ ಮೇಲೆ ಅದು ಇದೂ ಕಂಪ್ಲೇಂಟ್ ಹೇಳ್ತಾನೆ ಇದ್ದೆ. ನಾನು ಕೂಡಾ ನನ್ ಹೆಂಡತಿಯಿಂದ ನಾನು ರೋಸಿ ಹೋದ ಹಾಗೆ.. ನಿನ್ನ ಹೆಂಡತಿಯಿಂದ ನೀನು ಬೇಸತ್ತಿದಿಯ ಅಂದ್ಕೊಂಡಿದ್ದೆ. ಆದ್ರೆನೀನು ಅವಳನ್ನ ಇಷ್ಟು ಪ್ರೀತಿಸ್ತಿದ್ದೆ ಅಂತ ನನ್ ಕೈಲಿ ನಂಬೋಕೆ ಆಗ್ತಿಲ್ಲ. ನಿನ್ ಹೆಂಡ್ತೀ ನ ಅಂಥಾ ಪುಣ್ಯ ಜಾಗದಲ್ಲಿ ಮಣ್ಣು ಮಾಡದೇ.. ನೆನಪಿಗೆ ಅಂತ ಇಲ್ಲೇ ತನಕ ತೆಕ್ಕೊಂಡು ಬಂದು ಮಣ್ಣು ಮಾಡಿದ್ಯಲ್ಲ ನೀನು ನಿಜವಾಗಲು ಗ್ರೇಟ್ ಕಣೋ.
ಕುಡಿದ ಗ್ಲಾಸ್ ಕೆಳಗಿಟ್ಟು ಬಾಯಿ ಒರೆಸಿಕೊಂಡ ಅವನು ಹೇಳಿದ.. ಗ್ರೇಟು ಇಲ್ಲ ಮಣ್ಣು ಇಲ್ಲ.. ಆ ಜಾಗ ಏಸು ಪರಮಾತ್ಮ ಸತ್ತು ಮೂರು ದಿನ ಆದ್ಮೇಲೆ ಮತ್ತೇ ಎದ್ದು ಬಂದ ಜಾಗವಂತೆ. ಭಗವಂತನ ದಯೆ ಇಂದ ಇವಳು ಹಾಗೆ ಎದ್ದು ಬಂದ್ರೆ ಏನ್ ಮಾಡೋದು..?? ಅದ್ಕೆ ಐದು ಸಾವಿರ ಡಾಲರ್ ತಾನೇ ಒಂದೇ ಹೊತ್ತಿಗೆ ಹೋದ್ರೆ ಹೋಯ್ತು ಅಂತ ಇಲ್ಲೇ ತಗೊಂಡು ಬಂದು ಮಣ್ಣು ಮಾಡಿದ್ದು..!!
ಅವನ ಮಾತು ಕೇಳಿ ಅವನ ಸ್ನೇಹಿತ ಯಾವ ರೀತಿ ದಂಗಾಗಿರಬಹುದು ಊಹೆ ನಿಮ್ಮದು..
ಇದು ಫೇಸ್ಬುಕ್ ಗುಂಪೊಂದರಲ್ಲಿ ನೋಡಿದ ಬರಹ. ಅಲ್ಲಿ ಅದು ಇಂಗ್ಲಿಷ್ ನಲ್ಲಿತ್ತು.. ನಾನು ಕನ್ನಡದಲ್ಲಿ ಬರೆದಿದ್ದೀನಿ ಅಷ್ಟೇ..
***
ಇದು ಸತೀಶ್ ನಾಯ್ಕ್ ಭಾರತಿಯವರ ಅಂಕಣ ಬರಹ ಓದಿ ಬರೆದ ಕಾಮೆಂಟ್ :
ನಾನು ಎಂಥಾ ಸಮಯದಲ್ಲಿ ನನ್ನ ಫೇಸ್ಬುಕ್ ಸ್ಟೇಟಸ್ ಒಂದರಲ್ಲಿ ಈಗ ಇಲ್ಲಿ ನೀವು ಪ್ರಸ್ತಾಪಿಸಿರುವಂಥ ವಿಚಾರದ ಕುರಿತಾಗಿ ಸಂಬಂಧ ಪಟ್ಟ ಜೋಕ್ ಒಂದನ್ನ ಹಾಕಿ ಬಿಟ್ಟೆನಲ್ಲ ಅನ್ನೋ ಒಂದು ಪಶ್ಚಾತಾಪಕ್ಕೆ ಬಂದು ಈ ಕಾಮೆಂಟ್ ಅನ್ನ ಕಾಮೆಂಟಿಸಿರುತ್ತೇನೆ..
ನಿಮ್ಮ ಈ ಲೇಖನವನ್ನ ನಿನ್ನೆಯೇ ನಾನು ಓದಿದ್ದಿದ್ರೆ ಇಂಥಾ ಒಂದು ಪೋಸ್ಟ್ ಹಾಕುವ ಕಡೆ ಯೋಚನೆಯನ್ನ ಕೂಡಾ ಮಾಡ್ತಾ ಇರ್ಲಿಲ್ಲ.
ವಾಸ್ತವವಾಗಿ ನೋಡಿದ್ರೆ.. ಅತಿಯಾಗಿ ತನ್ನ ಹೆಂಡತಿಯನ್ನ ಪ್ರೀತಿಸೋ ವ್ಯಕ್ತಿ ಮಾತ್ರವೇ ತನ್ನ ಹೆಂಡತಿಯನ್ನ ಯಾವುದೇ ಈಗೋ ಇಲ್ಲದೆ ಅವಳಿಗೂ ನೋವಾಗದ ಹಾಗೆ.. ಅವರಿಬ್ಬರಿಗೂ ಕಚಗುಳಿ ಇಡುವ ಹಾಗೆ ಇಂಥಾ ಕಾಲೆಳೆಯುವಿಕೆ ಒಂದನ್ನ ಪರಸ್ಪರ ಮಾಡಿಕೊಳ್ಳೋ ದಂಪತಿಗಳಿಂದಲೇ ಇಂಥಾ ಜೋಕ್ ಗಳು ಚಾಲ್ತಿಗೆ ಬಂದಿರಬಹುದೇನೋ. ಮತ್ತು ಅಂತಹ ಕಾರಣಗಳಿಂದಷ್ಟೇ ಇಂಥಾ ಜೋಕ್ ಗಳು ಹುಟ್ಟಿರಬಹುದು. ಅದು ಕೂಡಾ ಇಂಥಾ ಜೋಕ್ ಗಳು ಪರಸ್ಪರ ತಮ್ಮಿಬ್ಬರ ನಡುವೆ ವಿನಿಮಯ ಆಗಿದ್ದರೆ ಖಂಡಿತ ಹೊರ ಜಗತ್ತಿಗೆ ಇವು ಪರಿಚಯ ಆಗೋ ಸಾಧ್ಯತೆಗಳು ಇರಲಿಕ್ಕಿಲ್ಲವೇನೋ. ಯಾವಾಗ ನಮ್ಮ ಆತ್ಮೀಯ.. ನಮ್ಮ ತದ್ರೂಪು.. ನಾವೇ ಅಂದುಕೊಳ್ಳುವಂಥ ಕೆಲವೊಂದು ಅತಿ ಆತ್ಮೀಯ ಸಂಬಂಧಗಳ ಎದುರು ಯಾವುದೇ ಎಗ್ಗಿಲ್ಲದೆ ಇಂಥಾ ಪರಸ್ಪರ ಕಾಲೆಳೆಯುವಿಕೆಯನ್ನ ನಡೆಸಿಕೊಳ್ತೆವೋ ಅಲ್ಲಿ ಇವು ಜಗಜ್ಜಾಹೀರಾಗಿರಬಹುದು.
ಯಾವುದೋ ಒಂದು ವಿಶೇಷ ಸಮಾರಂಭ.. ಒಂದೇ ಕಡೆ ಕೆಲಸ ಮಾಡುವ ಅತೀ ಆತ್ಮೀಯ ಸ್ನೇಹಿತರಿಬ್ಬರು ತಮ್ ತಮ್ಮ ಹೆಂಡತಿಯರೊಡನೆ ಒಂದು ಕಡೆ ಒಂದು ಕೂಟದಲ್ಲಿ ಸೇರಿದಾಗ ಖಂಡಿತವಾಗಿಯೂ ಇಂಥದ್ದೊಂದು ಕಾಲೆಳೆಯುವಿಕೆ ಜರುಗೇ ಜರುಗುತ್ತದೆ. ಆದರೆ ಅಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಕೇವಲ ತನ್ನ ಪ್ರೀತಿ ಪಾತ್ರರಾದವರನ್ನ ಛೇಡಿಸುವ ಸಲುವಾಗಿಯಷ್ಟೆ ಇಂಥಾ ಕಾಲೆಳೆಯುವಿಕೆ ಹುಟ್ಟಿ ಕೊಳ್ಳಲು ಸಾಧ್ಯ. ಸಣ್ಣ ಸಣ್ಣ ಜಗಳ ಮತ್ತು ಹುಸಿಕೊಪದಲ್ಲಿ ಪ್ರೀತಿ ಜಾಸ್ತಿ ಅನ್ನೋ ಮಾತಿದೆ ನೋಡಿ ಹಾಗಾಗಿ. ಇನ್ನೊಂದು ವಿಚಾರ ಅಂತಂದ್ರೆ.. ಸಂಸಾರದ ವಿಚಾರಗಳ ಸಮೇತ ಎಲ್ಲಾ ವಿಚಾರಗಳನ್ನ ಯಾವುದೇ ಎಗ್ಗಿಲ್ಲದೆ ವಿನಿಮಯ ಮಾಡಿಕೊಳ್ಳುವಂಥವರಷ್ಟೇ ಅಷ್ಟು ಆತ್ಮೀಯ ಮಾತುಕತೆಗೆ ಅರ್ಹ. ಅಲ್ಲಿಂದ ಶುರುವಾದ ಇಂಥಾ ಗಂಡ ಹೆಂಡತಿಯರ ಜೋಕ್ ಗಳು ಇಲ್ಲಿಯ ತನಕ ಚಾಲ್ತಿಯಲ್ಲಿರಬಹುದು. ವಿಷಾದ ಅಂದ್ರೆ ಕೇವಲ ಹೆಂಡತಿಯರನ್ನ ಅಥವಾ ಹೆಣ್ಣನ್ನ ವಿಲನ್ ಆಗಿ ತೋರಿಸುವಂಥಾ ಜೋಕ್ ಗಳಿಗಷ್ಟೇ ಮನ್ನಣೆ.. ಅಂಥಾ ಜೋಕ್ ಗಳಿಗಷ್ಟೇ ಪ್ರಾಧಾನ್ಯತೆ ಸಿಕ್ತಾ ಇರೋದ್ರಿಂದ ಗಂಡಸರನ್ನ ಛೇಡಿಸುವಂಥ ಜೋಕ್ ಗಳು ಸಿಕ್ಕದೆ ಇರಬಹುದು.
ಪುರುಷ ಪ್ರದಾನ ಸಮಾಜ ನೋಡಿ ನಮ್ಮ ಅಹಮ್ಮಿಗೆ ಪೆಟ್ಟು ಬೀಳಬಾರದು ಅನ್ನೋ ಸಣ್ಣ ಭಯ ಮತ್ತು ಇಂತಹವನ್ನ ನೀವುಗಳು (ಹೆಣ್ಣು) ಅಷ್ಟು ಗಂಭೀರವಾಗಿ ತೆಗೆದು ಕೊಳ್ಳಲಾರಿರಿ.. ಇಂಥವು ನಿಮ್ಮನ್ನ ಭಾದಿಸವು ಅನ್ನೋ ಉಡಾಫೆ ಇಂದಲೂ ಇವುಗಳ ಬೆಳವಣಿಗೆ ನಿರಂತರ ಆಗಿರಬಹುದು. ಮಾಧ್ಯಮಗಳು ಕೂಡಾ ಇದೆ ತಪನ್ನ ಮಾಡ್ತಿರೋದ್ರಿಂದ ಇದು ಇನ್ನೂ ಜೀವಂತವಾಗಿದೆ ಅಂದ್ರೂ ತಪ್ಪಿಲ್ಲ. ಇನ್ನು ನೀವು ಕೇಳಿದ್ರಲ್ಲಾ ..?? ಇನ್ನು ನಿಮ್ಮುಂದೆ ನಾನೂ ಸೇರಿ ಯಾರಾದ್ರೂ ಇಂಥ ಜೋಕ್ ಹಾಕ್ತಾರಾ ನೋಡಿ..?? ನಿಮ್ಮ ಹಾಗೆ ಎಲ್ಲರೂ ಕೇಳಿದಲ್ಲಿ ಇದು ನಿಂತರೂ ನಿಲ್ಲಬಹುದು. ಅಂತ ಪ್ರಯತ್ನಗಳಾಗೋದು ಕಡಿಮೆಯೇ.. ಗುಲಗಂಜಿ ಕದ್ದಿದ್ದಕ್ಕೆ ಹೋದರೂ ಕೂಡಾ ಮಾನ ಮಾನವೇ ನೋಡಿ ಹಾಗಾಗಿ. ನಿಮ್ಮ ಹಾಗೆ ಎಲ್ಲರೂ ಇದನ್ನ ಪ್ರಶ್ನಿಸೋದಾದ್ರೆ.. ನಾವು ನಿಮ್ಮ ಮೇಲೆ ಜೋಕ್ ಗಳನ್ನ ಕಟ್ಟಿ ಹರಿ ಬಿಡ್ತೀವಿ ಅಂತ ಹೆದರಿಸೋದಾದ್ರೆ.. ಇದಕ್ಕೊಂದು ತಕ್ಕ ರೀತಿಯ ಲಗಾಮು ಹಾಕಲು ಸಾಧ್ಯ. ಗೌರವದ ಭಯ.. ಮಾನದ ಭಯ ಅನ್ನುವುದು ಮನುಶ್ಯನನ್ನ ಕೆಲವು ಕೆಲಸಗಳನ್ನ ಮಾಡದಂತೆ ತಡೆಯಬಹುದು.
ವಿಷಯ ಅಂತಂದ್ರೆ ತಮ್ಮ ಆತ್ಮೀಯರ ಹೊರತಾಗಿ ಯಾವ ಮನುಷ್ಯನೂ ತಮ್ಮ ವಿಚಾರಗಳನ್ನ ಇನ್ನೊಬ್ಬರ ಮುಂದೆ ಹರವಿಕೊಳ್ಳಲಾರ. ತನ್ನ ಹೆಂಡತಿಯ ಬಗ್ಗೆ ತನ್ನಾತ್ಮೀಯರ ಬಳಿ ಒಬ್ಬ ಮನುಷ್ಯ ಅವನ ವಿಚಾರಗಳನ್ನ ಪ್ರಸ್ತಾಪಿಸಿಕೊಳ್ಳುತ್ತಾನೆ ಅನ್ನೋದಾದರೆ ಅದು ಅವಳ ಕುರಿತಾಗಿನ ಅತಿಯಾದ ಪ್ರೀತಿ ಇಂದ ಅಥವಾ ಜಿಗುಪ್ಸೆ ಇಂದಷ್ಟೇ ಸಾಧ್ಯ. ಅದರಲ್ಲೂ ಹೆಂಡತಿಯ ಮೇಲೆ ಕೊಪವಿರುವ, ತಾತ್ಸಾರವಿರುವ, ಜಿಗುಪ್ಸೆ ಇರುವ ಯಾವ ಮನುಷ್ಯನೂ ಕೂಡಾ ಇಂಥಾ ಜೋಕ್ ಗಳನ್ನ ಹುಟ್ಟು ಹಾಕೋ ಪ್ರಯತ್ನ ಮಾಡುವುದಿಲ್ಲ. ಆ ನೆಪದಲ್ಲಿ ಮತ್ತೆ ಮತ್ತೆ ಅವನ ಹೆಂಡತಿಯ ನೆನಪನ್ನ ಅವನು ಮಾಡಿಕೊಳ್ಳುವಂಥ ಪ್ರಯತ್ನ ಅವನು ಮಾಡುವುದಿಲ್ಲ. ಅವನ ಹೆಂಡತಿಯ ಕುರಿತಾಗಿನ ತಾತ್ಸಾರತೆಯನ್ನ ಯಾರೂ ಕೂಡಾ ಈ ರೀತಿ ವಿನೋದ ಮನಸ್ತಿಥಿಯಿಂದ ಮತ್ತೊಬ್ಬರ ಬಳಿ ಚರ್ಚಿಸಿಕೊಳ್ಳುವ ಸಾಧ್ಯತೆಗಳೂ ಕಮ್ಮಿಯೇ. ಹೆಂಡತಿಯ ಮೇಲೆ ಕೋಪವುಳ್ಳ ವ್ಯಕ್ತಿಯ ವಿಚಾರಗಳು ಕೋಪದ ಮೂಲಕವೇ ಹೊರಬರುವಂಥದ್ದು ರೂಡಿಕೆ. ನಾನು ಅಂತಹವುಗಳನ್ನ ಕಂಡು ಬೆಳೆದಿದ್ದೇನೆ. ಆದ್ರಿಂದ ಇಂಥಾ ಜೋಕ್ ಗಳು ಒಂದು ಆಹ್ಲಾದಕರ ವಾತಾವರಣದಲ್ಲಿ ಹುಟ್ಟಿರಲಿಕ್ಕೆ ಸಾಧ್ಯ. ಅವು ಪ್ರಚಲಿತಕ್ಕೆ ಬಂದು ಹೀಗೆ ವಿಶ್ವ ವ್ಯಾಪಿಯಾಗಿ ವ್ಯಾಪಿಸಿಕೊಂಡಿರಬಹುದು.
ನಮ್ಮಲ್ಲಿ ಸರ್ದಾರ್ ಜೋಕ್ ಗಳನ್ನ ಅದೆಷ್ಟು ಜನ ಈಗಲೂ ಬಳಸುತ್ತಿಲ್ಲ..?? ಮನೆಗೊಬ್ಬರಂತೆ ಸೈನ್ಯಕೊಬ್ಬರನ್ನ ಮೀಸಲಿಡುವ ವೀರ ಪರಂಪರೆ ಸರ್ದಾರ್ ಗಳದ್ದು.. ಅವರ ವೀರತ್ವವನ್ನ ಛೇಡಿಸಲು ಬ್ರಿಟೀಷರು ಮಾಡ್ಕೊಂಡ ಸುಲಭ ವಿಧಾನ ಅವರ ಜೋಕ್ ಗಳನ್ನ ಸೃಷ್ಟಿಸಿದ್ದು. ದುರಂತ ಅಂದ್ರೆ ಇದು ಗೊತ್ತಿದ್ದೂ ಕೂಡಾ.. ಭಾರತೀಯರಾಗಿ ನಾವುಗಳು ಅದೆಷ್ಟೋ ದಶಮಾನಗಳಷ್ಟು ಹಿಂದಿನ ಈ ಪದ್ದತಿಯನ್ನ ಬ್ರಿಟೀಷರಿಂದ ಮುಕ್ತರಾದರೂ ನಾವಿನ್ನೂ ಮರೆತಿಲ್ಲ. ಇದು ಗೊತ್ತಿದ್ದೂ ಕೂಡಾ ಇಂದಿಗೂ ಸರ್ದಾರ್ ಜೋಕ್ ಗಳನ್ನ ಚಾಲ್ತಿಯಲ್ಲಿ ಇಟ್ಕೊಂಡಿದ್ದೀವಿ. ಸರ್ದಾರ್ ಜೋಕ್ ಗಳನ್ನ ಬಳಸಿದವರನ್ನ ಹಿಡಿದು ಒಳಗೆ ಹಾಕ್ತೀವಿ.. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡ್ತೀವಿ ಅನ್ನೋ ಒಂದು ವಾತಾವರಣ ಬರಲಿ ನೋಡೋಣ.. ಆಗ ಇಂಥವುಗಳನ್ನ ಉಪಯೋಗಿಸೋ ಗಂಡೆದೆ ಯಾರಿಗೆ ಇರತ್ತೆ ನೋಡೋಣ. ನಾವು ನಮ್ಮ ವೀರರುಗಳನ್ನ ನಾವೇ ಅವಮಾನಿಸಿಕೊಳ್ಳೋದು ನಮ್ಮನ್ನ ನಾವೇ ಘೋರವಾಗಿ ಅವಮಾನಿಸಿಕೊಂಡಷ್ಟೇ ಸಮವಲ್ಲವೇ..?? ನಮ್ಮ ವೀರತ್ವ ಪ್ರದರ್ಶನ ಕೂಡಾ ನಮ್ಮ ದೇಶಾಭಿಮಾನದ ಸಂಕೇತವಲ್ಲವೇ..??
ಇಂಥವುಗಳೆಲ್ಲ ನಾವಿನ್ನು ಸಹಿಸಿಕೊಳ್ಳುತ್ತಿರೋ ಕಾರಣಕ್ಕಷ್ಟೇ ಚಾಲ್ತಿಯಲ್ಲಿರೋದು. ಇನ್ನೊಬ್ಬರಿಗೆ.. ಇನ್ನೊಬ್ಬರ ಭಾವನೆಗಳಿಗೆ ಇದರಿಂದ ಖಂಡಿತ ಧಕ್ಕೆ ಬರುವುದಾದರೆ ಇಂಥವುಗಳನ್ನ ತಡೆಯೋದೆ ಸೂಕ್ತ. ಅದು ಮನುಷ್ಯ ಸ್ವಾಭಾವಿಕ ಪರಿಜ್ಞಾನ ಕೂಡಾ. ನಾನು ಪೋಸ್ಟ್ ಮಾಡಿದ ಆ ಜೋಕ್ ಪೋಸ್ಟ್ ಮಾಡುವ ವರೆಗೂ ಕೇವಲ ಜೋಕ್ ಆಗಿಯಷ್ಟೇ ನನ್ನ ಕಣ್ಣಿಗೆ ಕಾಣಿಸಿದ್ದು. ಅದರ ಒಳವಲಯ ಹೊರವಲಯದ ಯಾವ ಪರಿಚಯವೂ ನನಗಿರಲಿಲ್ಲ ನಿಮ್ಮ ಈ ಬರಹ ಓದುವ ತನಕ. ಇನ್ನೊಬ್ಬರ ಆತ್ಮಗೌರವಕ್ಕೆ ಅವರ ಭಾವುಕತೆಗೆ ಧಕ್ಕೆ ತರುವ ಯಾವ ವಿಚಾರವಾದರೂ ಅದನ್ನ ತಡೆ ಹಿಡಿಯುವುದು ಸೂಕ್ತ. ಇಂಥವುಗಳು ಹುಟ್ಟಿಸುತ್ತಿದ್ದ ನಗುವಷ್ಟೇ ಪರಿಚಯವಿತ್ತು ನೋವುಗಳ ಪರಿಚಯವಿರಲಿಲ್ಲ.. ಇನ್ನು ನೀವು ಮಾಡಿಸಿದೆರಲ್ಲಾ ಇಂಥಾ ಜೋಕ್ ಗಳಿಗೊಂದು ದೊಡ್ಡ ನಮಸ್ಕಾರ. ಭಾರತಿ ಅಕ್ಕ.. ಅಗತ್ಯವಾಗಿ ಚರ್ಚೆ ಆಗಲೇ ಬೇಕಿದ್ದ ವಿಚಾರವನ್ನ ಬಹಳ ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದೀರಾ ಖುಷಿಯಾಯ್ತು. ಹಾಗೆ ಪಶ್ಚಾತಾಪ ಕೂಡ.. 🙂
ಇನ್ನು ಹೆಂಡತಿಯ ಜೊತೆ ಬಟ್ಟೆ ತೊಳೆಯುವುದು.. ಪಾತ್ರೆ ತೊಳಿಯುವುದು.. ಅಡುಗೆ ಮಾಡುವಾಗ ಅವಳಿಗೆ ಸಹಾಯ ಮಾಡೋದನ್ನ ಪ್ರೀತಿಯ ಇನ್ನೊಂದು ಪರಿ ಅಂತ ಅಂದುಕೊಳ್ಳುವ ಯಾರಿಗಾದರೂ ಅವು ಸ್ಥಾನ-ಮಾನವನ್ನ ಭಾದಿಸುವ ವಿಚಾರಗಳು ಅನ್ನುವುದು ಕಾಡುವುದಿಲ್ಲವೇನೋ. ಮನುಷ್ಯ ಪ್ರೀತಿಸುವುದನ್ನ ಕಲಿತಲ್ಲಿ ಸ್ಥಾನ ಮಾನಗಳ ವಿಚಾರ ಪರಿಗಣನೆಗೆ ಬರುವುದೇ ಇಲ್ಲ. ನಾವು ಪ್ರೀತಿಸುವುದರಲ್ಲಿ ತಾರತಮ್ಯ ಮಾಡ್ತಾ ಇರೋದ್ರಿಂದಲೇ ನಮ್ಮ ಸ್ತಾನ ಮಾನಗಳಲ್ಲಿ ಏರು ಪೇರಾಗ್ತಾ ಇರೋದಲ್ವೆ..?? ಬ್ಯಾಚಲರ್ ಗಳಾಗಿ ಇದನ್ನೆಲ್ಲಾ ಮಾಡಿಕೊಳ್ಳುವಾಗ ನಮಗೆ ಕಾಣದ ಮಾನದ ಪ್ರಶ್ನೆ ಮದುವೆಯಾದ ಒಡನೆ ಹೆಂಡತಿ ಇರುವಾಗ ಬರುತ್ತದೆಂದರೆ ಅದೂ ಒಂದು ಥರದ ಮೂಢ ನಂಬಿಕೆಯೇ ಸರಿ.
***
’ಚಪ್ಪಾಳೆ…’!







ಭಳಿರೇ!
ನಿಮ್ಮ ಬರಹಕ್ಕೆ….ಭೇಶ್….ಭೇಶ್…!!!
Onde ondu gandu inmunde aa thara aadkollakke munche yochisthini andiddakke naanu baredaddu saarthaka aaytu ansthu … 🙂
Good one! Loved the joke/story :-p
ಓಹ್.. ನನ್ನದೊಂದು ಕಾಮೆಂಟ್ ಒಂದು ಪ್ರತ್ಯೇಕ ಲೇಖನವಾಗಿ ಪ್ರಕಟಗೊಳ್ಳುತ್ತೆ ಅನ್ನೋ ಕಲ್ಪನೇನೆ ಇರ್ಲಿಲ್ಲ.. ಇದು ಅವಧಿಯಲ್ಲಿ ಪ್ರಕಟವಾದ ನನ್ನ ಮೊದಲ ಬರಹ.. ಹೃತ್ಪೂರ್ವಕ ಧನ್ಯವಾದಗಳು ಅವಧಿ.. 🙂
Chennagide sathish 🙂