ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ನೇಗಿಲಿನ ಕಣ್ಮರೆ ಮತ್ತು ಹದಿನೈದು ಕನ್ನಡ ಪದಗಳ ಸಾವು

ಮಲ್ಲಿಕಾರ್ಜುನ ಹೊಸಪಾಳ್ಯ

ನೇಗಿಲು ಹೊಲ ಉಳುವ ಸಾಧನ. ಅದರಲ್ಲಿ ಮೋಟು ನೇಗಿಲು, ದೊಡ್ಡ ನೇಗಿಲು ಇತ್ಯಾದಿ ವಿಧಗಳಿವೆ. ಸುಮಾರು 20 ವರ್ಷಗಳ ಹಿಂದೆ ಮರದ ನೇಗಿಲುಗಳು ವ್ಯಾಪಕ ಬಳಕೆಯಲ್ಲಿದ್ದವು. ನಂತರ ಸ್ವಲ್ಪ ವರ್ಷ ಕಬ್ಬಿಣದ ನೇಗಿಲು ಬಂದವು, ಆನಂತರ ಟ್ರ್ಯಾಕ್ಟರ್ ಹಾಗೂ ಟಿಲ್ಲರುಗಳ ಆಗಮನವಾಗಿದೆ. ಈಗಲೂ ತೀರಾ ಅಪರೂಪಕ್ಕೆ ಮರದ ನೇಗಿಲಿನ ಬಳಕೆ ಕಾಣಬಹುದು.

ಒಂದು ಮರದ ನೇಗಿಲಿನಲ್ಲಿ ಮೇಣಿ, ಹಿಡಿಕಾಯಿ, ಮಡಿಕೆ, ಕುಳ, ಜಿಗಣಿಕೊಂಡಿ, ಬುಡ್ಡಗೀಲು, ಬದಿಚಕ್ಕೆ, ಬಾಳು, ಈಚು, ನೊಗ, ಮಿಣಿ, ಕ್ವಾಲ್ಡಿಗೆ, ಪಟಗಣ್ಣಿ, ಚಿಲಕಣಿ, ಉಗಳು ಮುಂತಾದ ಹದಿನೈದು ಭಾಗಗಳಿರುತ್ತವೆ. ಅಥವಾ ಇವೆಲ್ಲಾ ಸೇರಿ ಒಂದು ಪರಿಪೂರ್ಣ ನೇಗಿಲು ರೂಪ ತಾಳುತ್ತದೆ. ಇಂದು ಮರದ ನೇಗಿಲು ಕಣ್ಮರೆಯ ಜಾಡಿನಲ್ಲಿದೆ. ಹಾಗಾಗಿ ಇಂದು ನಮ್ಮೂರಿನಲ್ಲಿ ಈ ಪದಗಳನ್ನು ಬಹುತೇಕ ಮಾತಾಡುವುದೇ ಇಲ್ಲ. ಮುಂದಿನ ಒಂದೆರಡು ತಲೆಮಾರುಗಳಲ್ಲಿ ಸಂಪೂರ್ಣ ಇಲ್ಲವಾಗಬಹುದು. ಅಂತಹ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ನೇಗಿಲಿನ ಬದಲು ಟ್ರಾಕ್ಟರ್ ಬಳಸಲು ಆರಂಭಿಸಿದಾಗ ಆಗುವ ಪದ ಬದಲಾವಣೆಯನ್ನು ಗಮನಿಸಿ; ಡೀಸಲ್, ಸ್ಟೇರಿಂಗ್, ಟೈರು, ಟ್ಯೂಬು, ಸ್ಪಾನರ್, ರಿಮ್ಮು, ಏರ್, ಗ್ರೀಸು, ಲೈಟು, ಬಲ್ಪು, ಟಿಪ್ಪರ್, ಟ್ರಾಲಿ, ಗೇರ್… ಇತ್ಯಾದಿ. ಗ್ರಾಮೀಣ ಬದುಕಿನಲ್ಲಿ ಆಗುತ್ತಿರುವ ಪಲ್ಲಟಗಳು, ಕೃಷಿಯಲ್ಲಾಗುತ್ತಿರುವ ಬದಲಾವಣೆ ಹಾಗೂ ಒಟ್ಟೂ ಬದುಕಿನ ಪರಿವರ್ತನೆಯಿಂದ ಈ ಪದ ವೈವಿಧ್ಯ ಕ್ಷಯಿಸುತ್ತಿದೆ.

ಒಂದು ಪುಟ್ಟ ನೇಗಿಲಿನ ನಿರ್ಗಮನವೇ ೧೫ ಕನ್ನಡ ಪದಗಳ ಸಾವಿಗೆ ಕಾರಣವಾಗುತ್ತದೆಂದರೆ ಈಗಾಗಲೇ ನಾವು ಕಳೆದುಕೊಂಡಿರುವ ಮತ್ತು ಕಳೆದುಕೊಳ್ಳುತ್ತಿರುವ ಪದಸಂಪತ್ತು ಎಷ್ಟಿರಬಹುದು. ಇದನ್ನು ನನ್ನ ‘ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ’ ಪುಸ್ತಕದಲ್ಲಿ ಈ ಬಗ್ಗೆ ಪುಟ್ಟ ಲೇಖನವಿದೆ. ನಿನ್ನೆ ಕ್ಲಬ್ ಹೌಸಿನಲ್ಲಿ ಕನ್ನಡ ಭಾಷೆ ಉಳಿವಿನ ಬಗ್ಗೆ ನಡೆದ ಚರ್ಚೆಯಲ್ಲಿ ಈ ಬಗ್ಗೆ ಮಾತಾಡಿದೆ.

‘ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ’ ಕೃತಿ ಕೊಳ್ಳಲು ಸಂಪರ್ಕಿಸಿ- 70191 82729

‍ಲೇಖಕರು Admin

18 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading