ಒಂದು ಡಾಕ್ಯುಮೆಂಟರಿ ನೋಡಿದ ಸಂದರ್ಭ

ಎನ್.ಸಿ.ಮಹೇಶ್

doc_image.jpgವನ ಹೆಸರು ತಾಹಿರ್. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಸ್ನಾತಕೋತ್ತರ ಪದವಿಯ ವ್ಯಾಸಂಗಕ್ಕೆ ವಿದ್ಯುನ್ಮಾನ ಮಾಧ್ಯಮದ ವಿಷಯ ಆಯ್ಕೆ ಮಾಡಿಕೊಂಡಿದ್ದಾನೆ. ಗೆಳೆಯ ಮುರಳಿ ಮೋಹನ್ ಕಾಟಿ “ಒಂದು ಅಪರೂಪದ ಡಾಕ್ಯುಮೆಂಟರಿ ಸ್ಕ್ರೀನ್ ಮಾಡ್ತಿದ್ದೇವೆ, ಬಂದು ನೋಡಿ” ಅಂತ ಕರೆದಿದ್ದಕ್ಕೆ ಸಂವಾದ ಸಂಸ್ಥೆಗೆ ನಾನು ಹೋದೆ. ಅಲ್ಲಿ ಪರಿಚಯವಾದವನು ಈ ತಾಹಿರ್. ತುಂಬ ಸಂಯಮದಿಂದ ಕೂತಿದ್ದವನನ್ನು ಮಾತಿಗೆಳೆದಾಗ ಅವನ ಹಿನ್ನೆಲೆಯ ಒಂದೊಂದು ವಿವರಗಳು ಸ್ಪಷ್ಟವಾಗತೊಡಗಿದವು. ಮೂಲತಃ ಕಾಶ್ಮೀರಿಯಾದ ತಾಹಿರ್ ಡಾಕ್ಯುಮೆಂಟರಿ ನೋಡುವ ಮೊದಲೇ ತುಂಬ ಉತ್ಸುಕನಾಗಿ, ಕಾನ್ಫಿಡೆಂಟಾಗಿ ಕೂತಿದ್ದ. ಕಾರಣ, ಆ ಡಾಕ್ಯುಮೆಂಟರಿ ಕೂಡ ಕಾಶ್ಮೀರದ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತದ್ದಾಗಿತ್ತು. ನಮ್ಮ ಆ ಗುಂಪಿನಲ್ಲಿ ಕಾಶ್ಮೀರವನ್ನು ತುಂಬ ಹತ್ತಿರದಿಂದ ಕಂಡಿದ್ದವನು ಅವನೊಬ್ಬನೆ. “ಸೊ, ನೀವು ನಮ್ಮೆಲ್ಲರಿಗಿಂತ ತುಂಬ ಸ್ಪಷ್ಟ ಚಿತ್ರ ಕೊಡ್ತೀರಿ” ಅಂದೆ. “ಎಕ್ಸಾಟ್ಲೀ” ಅಂದ.

ಆಮೇಲೆ ಅದೇನನಿಸಿತೋ ಏನೋ “ಕಾಶ್ಮೀರ ಅಂದರೆ ನಿಮಗೆ ಥಟ್ಟನೆ ನೆನಪಾಗೋದು ಏನು?” ಅಂತ ಕೇಳಿದ. ಅಲ್ಲಿನ ಹಿಮ ಹೊದ್ದುಕೊಂಡ ಪರ್ವತಶ್ರೇಣಿಗಳು, ವಿಪರೀತ ಚಳಿ ಇವೆಲ್ಲ ಮರೆತು ನಾನು “ಟೆರರಿಸಂ” ಅಂದೆ.

ತಾಹಿರ್ ಸುಮ್ಮನಾಗಿಬಿಟ್ಟ. ಮನಸ್ಸಿನಲ್ಲೇ ಏನೇನೋ ಲೆಕ್ಕಾಚಾರ ಹಾಕುತ್ತಿದ್ದಂತಿತ್ತು. ಏನಾಯಿತೋ ಏನೋ ಎಂದುಕೊಂಡು ನಾನು ಇನ್ನಿತರರೊಂದಿಗೆ ಮೆಲುದನಿಯಲ್ಲಿ ಮಾತು ಶುರು ಮಾಡಿದೆ. ಮತ್ತೆ ಮೆಲ್ಲಗೆ ನನ್ನ ಬಳಿ ಬಂದ ತಾಹಿರ್ “ಟೆರರಿಸಂ ಎಲ್ಲಿಲ್ಲ ಹೇಳಿ? ಎಲ್ಲ ಕಡೆ ಇದೆ. ಕರ್ನಾಟಕದಲ್ಲಿಲ್ಲವಾ? ಬೆಂಗಳೂರಿನಲ್ಲಿಲ್ಲವಾ? ಬಿನ್ ಲ್ಯಾಡೆನ್ ದೊಡ್ಡ ಟೆರರಿಸ್ಟ್ ಅಂತಾರೆ. ನನ್ನ ಪ್ರಕಾರ ಹಿಟ್ಲರ್ ಮಹಾದೊಡ್ಡ ಟೆರರಿಸ್ಟ್” ಏನಂತೀರಾ?” ಅಂದ.

ನನಗೆ ಅನುಮಾನ ಶುರುವಾಯಿತು. ಈತ ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡನೋ ಹೇಗೆ? “ನಿನ್ನನ್ನ ನಾನು ಟೆರರಿಸ್ಟ್ ಥರ ಕಾಣ್ತಿದೀನಿ ಅಂತಲ್ಲ ಮಾರಾಯ ಅದರ ಅರ್ಥ. ಕಾಶ್ಮೀರದಲ್ಲಿ ಈ ಟೆರರಿಸಂ ಉಪಟಳ ಹೆಚ್ಚದೆ ಅಂದ್ಕೊಂಡಿದ್ದೀನಿ” ಅಂತ ಹೇಳಬೇಕೆನ್ನುವಷ್ಟರಲ್ಲಿ ಡಾಕ್ಯುಮೆಂಟರಿ ಶುರುವಾಯಿತು. ಎಲ್ಲರೂ ಸ್ತಬ್ಧರಾದರು.

ಮಂಗಳೂರಿನ ಹುಡುಗಿ ಕವಿತಾ ಪೈ ಈ ಡಾಕ್ಯುಮೆಂಟರಿ ಮಾಡಿದ್ದರು. ಒಂದಿಲ್ಲೊಂದು ಮಾರಾಮಾರಿ ನಡೆಯುವ ಆ ಊರಿನಲ್ಲಿ ಹೆಣ್ಣುಮಕ್ಕಳು ಹೇಗೆ ಕಾಲ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಾಹಸ ಮಾಡುತ್ತದೆ ಈ ಡಾಕ್ಯುಮೆಂಟರಿ. ಇದ್ದುದರಲ್ಲಿ ನೆಮ್ಮದಿ ಕಂಡುಕೊಳ್ಳಲು ಹವಣಿಸುವ ಕುಟುಂಬಗಳಲ್ಲಿನ ಮಕ್ಕಳನ್ನು ಮೊದಲು ಶಂಕಿಸಿ ವಿಚಾರಣೆಗೆಂದು ಕೆಲವರು ಕರೆದೊಯ್ಯುತ್ತಾರೆ. ವಿಚಾರಣೆ ಮುಗಿಯಿತೆ? ಮಗ ಹಿಂದಿರುಗಬಹುದೆ? ಹೋಗಲಿ ಏನಾಗುತ್ತಿದೆ? ಇಂಥ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಆ ಹೆಣ್ಣುಮಕ್ಕಳು ಒಂದು ರೀತಿಯ ವಿಚಿತ್ರ ಮನಸ್ಥಿತಿಗಳಲ್ಲಿ ಕಾಯುತ್ತಲೇ ಇದ್ದಾರೆ. “ದೇರ್ ವಾಸ್ ಎ ಕ್ವೀನ್” ಎಂದು ಕವಿತಾ ತಮ್ಮ ಡಾಕ್ಯುಮೆಂಟರಿಗೆ ಹೆಸರಿಟ್ಟಿದ್ದಾರೆ. ತನ್ನ ಮಗ ಇವತ್ತೋ, ನಾಳೆಯೋ ಬರುತ್ತಾನೆ ಎಂದು ನಂಬಿಕೊಂಡೇ ಇರುವ ಪ್ರತಿ ಹೆಣ್ಣುಮಗಳೂ ಕೂಡ ಕವಿತಾಗೆ “ರಾಣಿ”ಯಂತೆ ಕಂಡಿದ್ದಾರೆ. ಅವರ ಬೇಗುದಿ, ಹೋರಾಟ, ಪ್ರತಿಭಟನೆ, ರ್ಯಾಲಿಗಳು ಎಲ್ಲವನ್ನೂ ದೃಶ್ಯಗಳಲ್ಲಿ ಹಿಡಿದಿಟ್ಟಿದ್ದಾರೆ. ಆ ಎಲ್ಲ ಹೆಣ್ಣುಮಕ್ಕಳ ಭಾವತೀವ್ರತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಟ್ಟಿಸಲು ಕವಿತೆಯ ಕೆಲಸಾಲುಗಳನ್ನು ಬಳಸಿಕೊಂಡಿದ್ದಾರೆ. ದೃಶ್ಯಗಳನ್ನು ಸೆರೆಹಿಡಿದು ತಾವು ವ್ಯಾಖ್ಯಾನಕ್ಕೆ ಒಡ್ಡುವುದಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಅವರವರ ಮಾತುಗಳ ಮೂಲಕವೇ ಚಿತ್ರವಾಗಿಸುವ ಪ್ರಯತ್ನಿಸಿದ್ದಾರೆ. ನಿಮಿಷದಿಂದ ನಿಮಿಷಕ್ಕೆ ಆ ದೃಶ್ಯಗಳಲ್ಲಿನ ಬದುಕಿನ ತೀವ್ರತೆ ನಮ್ಮನ್ನು ಆವರಿಸಿಕೊಳ್ಳಲು ಶುರುವಾಗುತ್ತದೆ. ಬರಬರುತ್ತಾ ಇದು “ಇವರ ಪ್ರಶ್ನೆಗಳಿಗೆ ಅವರ ಉತ್ತರಗಳು” ಎಂಬ ಜಾಡಿನಲ್ಲೇ ಕಡೆಯವರೆಗೂ ಸಾಗುತ್ತದೆ. ಇದನ್ನೆಲ್ಲ ಕಂಡು ಟೆರರಿಸಂನ ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳುತ್ತಿದ್ದಾಗ ಕನ್ನಡದಲ್ಲಿ ಪಿ.ಶೇಷಾದ್ರಿ ನಿರ್ದೇಶಿಸಿದ
“ಅತಿಥಿ” ಚಿತ್ರ ನೆನಪಾಯಿತು. “ಅತಿಥಿ”ಗಿಂತ ಕವಿತಾ ಪೈರ ಡಾಕ್ಯುಮೆಂಟರಿ ಹೆಚ್ಚು ಅರ್ಥಪೂರ್ಣ ಅನಿಸತೊಡಗಿತು.

“ಅತಿಥಿ”ಯಲ್ಲಿ ಒಬ್ಬ ನಕ್ಸಲ್, ಹಿಂಸಾಮಾರ್ಗದ ಕ್ರಾಂತಿಕಾರಿ ನಿಲುವು ತಳೆದವನು. ತನ್ನನ್ನು ಶುಶ್ರೂಷೆ ಮಾಡುವ ಡಾಕ್ಟರ್ ಬಳಿ ನ್ಯಾಯ-ಅನ್ಯಾಯಗಳ, ಧರ್ಮಾಧರ್ಮಗಳ ಸಂಘರ್ಷದ ಕುರಿತಂತೆ ತನ್ನದೇ ವಾದ ಮಂಡಿಸುತ್ತಾನೆ. ಚಿತ್ರದಲ್ಲಿ ಇದೆಲ್ಲ ಒಂದು ಮಟ್ಟದಲ್ಲಿ ಸಮಂಜಸ ಅನಿಸುತ್ತದೆ. ಆದರೆ ಶೇಷಾದ್ರಿ ಈ ಚಿತ್ರಕ್ಕೆ ತಮ್ಮ ಆಶಾದಾಯಕ ಎಂಡಿಂಗ್ ಒದಗಿಸಲು ಬಹಳಷ್ಟು ಸನ್ನಿವೇಶಗಳನ್ನು ತಂದಿದ್ದಾರೆ. ಪುಟ್ಟ ನಾಯಿಮರಿಯನ್ನು ನಿರ್ದಯವಾಗಿ ಕೊಲ್ಲುವ ಆ ನಕ್ಸಲ್ ನಂತರದಲ್ಲಿ ನಿಧಾನಕ್ಕೆ ಒಬ್ಬ ಪುಟ್ಟಹುಡುಗಿಯಲ್ಲಿನ ಲವಲವಿಕೆ, ಜೀವನಪ್ರೇಮಕ್ಕೆ ಕರಗುತ್ತಾ ಮನುಷ್ಯತ್ವದ ಕಡೆಗೆ ಹೊರಳುತ್ತಾನೆ. ತಾನು ಕೊಂದ ನಾಯಿಮರಿಗೆ ಬದಲಾಗಿ ಮತ್ತೊಂದು ಮರಿಯನ್ನು ತರಿಸಿಕೊಡುತ್ತಾನೆ. ಡಾಕ್ಟರನ್ನು ಬೆದರಿಸಿದರೂ ಒಂದಿಲ್ಲೊಂದು ಬಗೆಯಲ್ಲಿ ಕರಗುತ್ತಿರುತ್ತಾನೆ. ಎಲ್ಲಕ್ಕೂ ಆ ಪುಟ್ಟ ಹುಡುಗಿ ಕಾರಣಳಾಗುತ್ತಿರುತ್ತಾಳೆ.

ಇಂಥ ಆಶಾವಾದದ ಆಶಯಗಳನ್ನು ನಮ್ಮಲ್ಲಿ ಹುದುಗಿಸಿಕೊಳ್ಳಲು ಯಾವ ಅಡ್ಡಿಯೂ ಇಲ್ಲ. ಟೆರರಿಸ್ಟ್ ಗಳು ಹೇಗೆ ಮನಸ್ಸು ಬದಲಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತಾ ಕೂರಲು ಸಾಧ್ಯವಿಲ್ಲವೆಂಬುದನ್ನು ಕವಿತಾ ಅವರ ಡಾಕ್ಯುಮೆಂಟರಿ ಹೇಳುತ್ತದೆ. ಕವಿತಾರ ವಾಸ್ತವ ಪ್ರಜ್ಞೆ, ಶೇಷಾದ್ರಿಯವರ ಆಶಾದಾಯಕ ಕಲ್ಪನೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ಯೋಚಿಸುತ್ತಿರುವಾಗಲೇ ಮತ್ತೆ ತಾಹಿರ್ ಎದುರಾದ. ಕಾಶ್ಮೀರಿಗಳೆಲ್ಲ ಟೆರರಿಸ್ಟ್ ಗಳಲ್ಲವೆಂದು, ತಾವೂ ಕೂಡ ಎಲ್ಲರಂತೆ ಇರಲು ಬಯಸುವವರೆಂದು, ಮಾಧ್ಯಮಗಳು ಕಾಶ್ಮೀರಿಗಳ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಚಿತ್ರಿಸುತ್ತಿವೆಯೆಂದೂ ನಿವೇದಿಸಿಕೊಳ್ಳತೊಡಗಿದ. ಕವಿತಾ ಡಾಕ್ಯುಮೆಂಟರಿ ಬಗ್ಗೆ ಹೇಳು ಮಾರಾಯ ಅಂದರೆ, ಅಲ್ಲಿನ ವಾಸ್ತವಗಳನ್ನು ಒಪ್ಪಿಕೊಳ್ಳುತ್ತ ತನ್ನ ಜೀವನದ ಭಯಾನಕ ಸನ್ನಿವೇಶಗಳ ಕುರಿತ ಹೇಳತೊಡಗಿದ. ಇದು ಮತ್ತೊಂದು ಡಾಕ್ಯುಮೆಂಟರಿಗೆ ಸರಕಾಗುತ್ತದೆ ಎಂದುಕೊಂಡು ನಕ್ಕು, ಅವನು ನನ್ನ ಮಾತುಗಳನ್ನು ಅರ್ಥೈಸಿಕೊಂಡಿದ್ದ ಕ್ರಮವನ್ನು ತಿದ್ದಲು ಪ್ರಯತ್ನಿಸಿದೆ. ಅದನ್ನು ಗಮನಕ್ಕೇ ತಂದುಕೊಳ್ಳದೆ ಕಾಶ್ಮೀರದ ತನ್ನ ಅನುಭವಗಳನ್ನೇ ಒಂದರ ಹಿಂದೊಂದು ಹೇಳತೊಡಗಿದ.

ಹೇಳುವ ಉಮೇದು ಅವನಿಗಿದ್ದರೂ ಕೇಳಿಸಿಕೊಳ್ಳುವ ತಾಳ್ಮೆ, ಸಮಯ ಎರಡೂ ನನ್ನಲ್ಲಿರಲಿಲ್ಲ.

ಇನ್ನೊಮ್ಮೆ ಎಂದಾದರೂ ಕೂತು ನಿಧಾನಕ್ಕೆ ಮಾತಾಡೋಣ ಅಂತಂದು ಹೊರಡುವಷ್ಟರಲ್ಲಿ ಡಾಕ್ಯುಮೆಂಟರಿ ನೋಡಿದ ಒಬ್ಬರು ಹೇಳಿದರು: “ಇದೆಲ್ಲ ನೋಡಿದ ಮೇಲೆ ನನಗೆ ಅಂಬೇಡ್ಕರ್ ಮಾತು ನೆನಪಾಗ್ತಿದೆ. ತನ್ನ ಒಡಹುಟ್ಟಿದ ಜೀವಗಳನ್ನು ಕೊಲ್ಲುವುದು ಹೇಗೆಂದು ಚಿಂತಿಸುತ್ತಿದ್ದ ಅರ್ಜುನನಿಗೆ ಕೃಷ್ಣ ಹೇಳಿದ್ದೇನೆಂದರೆ “ಅರ್ಜುನ… ನೀನು ಕೊಲ್ಲುವುದು ದೇಹಗಳನ್ನು ಮಾತ್ರ. ಆತ್ಮಗಳನ್ನಲ್ಲ. ಆತ್ಮಗಳನ್ನು ಕೊಲ್ಲಲು ಸಾಧ್ಯವೂ ಇಲ್ಲ. ಆದ್ದರಿಂದ ಧೃತಿಗೆಡದೆ ಕೊಲ್ಲು”, ಅಂದರೆ, “ಬೇರೆಯವರನ್ನು ಕೊಲ್ಲಲಿಕ್ಕೆ ಭಗವದ್ಗೀತೆ ಒಂದು ರೀತಿ ಲೈಸೆನ್ಸ್ ಕೊಟ್ಟಂತಿದೆ” ಎಂದರಂತೆ ಅಂಬೇಡ್ಕರ್.

ಈ ಮಾತು ನನ್ನ ಮನಸ್ಸಿನಲ್ಲಿ ಹಾಗೇ ಉಳಿದುಬಿಟ್ಟಿತು.

‍ಲೇಖಕರು avadhi

March 6, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. chetanachaitanya

    ಈ ಡಾಕ್ಯುಮೆಂಟರಿ ನೋಡಬೇಕಲ್ಲ…
    ಬರಹ ಪರಿಣಾಮಕಾರಿಯಾಗಿದೆ.
    – ಚೇತನಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: