ಮಳೆ ಮತ್ತು ಹಂಚಿನ ಮನೆಗಳು

ವಿನಿ ನಾಯಕ್
ರಾತ್ರಿಯೀಡಿ ‘ಧೋ’ ಎಂದು ಎಡೆಬಿಡದೆ ಸುರಿದ ಮಳೆ. ಹಂಚಿನ ಮನೆಯ ಮಾಡಿಂದ ಜಲಪಾತ ಹರಿದ ಸದ್ದು. ಅಲ್ಲಲ್ಲಿ ಹಂಚಿನ ತೂತುಗಳ ನಡುವಿಂದ ಆಗೊಮ್ಮೆ ಈಗೊಮ್ಮೆ ಜಿನಗುಡುವ ನೀರ ಹನಿಗಳು. ನೆಲವೆಲ್ಲಾ ತಂಪು ತಂಪು.
ಬಿರುಗಾಳಿಗೆ ಅಲ್ಲಾಡುವ ಎಲೆಗಳ ಸದ್ದು. ಆಗೊಮ್ಮೆ ಈಗೊಮ್ಮೆ ಡುಬುಕ್ಕನೆ ಮರದಿಂದ ಮಾವಿನಹಣ್ಣು ಬಿದ್ದ ಸದ್ದು. ಜೋರು ಗಾಳಿಯೊಡನೆ ರಪ್ಪನೆ ಮೂಗಿಗೆರಚುವ ಮಣ್ಣಿನ ಪರಿಮಳ. ಇದ್ದಕ್ಕಿದ್ದಂತೆ ಗುಂಡು ಹೊಡೆದಂತೆ ಸಪ್ಪಳವಾಗುವ ಗುಡುಗು.
ಕರೆಂಟು ಹೋಗುತ್ತೆ ಅಂದುಕೊಳ್ಳುವಷ್ಟರಲ್ಲೇ ಬಲ್ಬುಗಳೆಲ್ಲಾ ಆರಿಹೋಗಿ ಕತ್ತಲೆ. ಹಚ್ಚಿದ ಮೇಣದ ಬತ್ತಿಯ ಮಂದ ಬೆಳಕು. ಅದರತ್ತ ಓಡಿ ಬಂದ ಹುಳು ಹುಪ್ಪಡಿಗಳು. ಇನ್ನೆಲ್ಲೋ ಕಪ್ಪೆ ವಟಗುಡುವ ಸದ್ದು. ಎಲ್ಲ ಸೇರಿ ಒಂಥರಾ ಕಾಡುವ ಹಾಡು ಎನಿಸಿಬಿಡುತ್ತದೆ. ಕೇಳಿದ ಓದಿದ ಕವಿತೆಗಳೆಲ್ಲಾ ಪ್ರಕೃತಿಯ ನಾದಕ್ಕೆ ಶೂನ್ಯವೆನಿಸಿಬಿಡುವ ಹೊತ್ತು.
ಒಲೆಯಲ್ಲಿ ಯಾರೋ ಹುರಿದ ಹಲಸಿನ ಬೀಜದ ಕಂಪು ಮನೆ ತುಂಬ. ಹಬೆಯಾಡುವ ಬಿಸಿ ಅನ್ನ. ಘಮಗುಡುವ ಮೀನು ಸಾರಿನಲ್ಲಿ ಜುಮ್ಮನಕಾಯಿಯ ಘಾಟು. ಹಾಗೆಯೆ ಅನ್ನ ಕಲಿಸಿ ಬಾಯೊಳಗಿಟ್ಟುಕೊಂಡರೆ ಜೀವನದ ಪರಮಸುಖಗಳೆಲ್ಲಾ ಇಲ್ಲೇ ಗೂಟ ಹೊಡೆದು ಮಲಗಿಬಿಟ್ಟಿವೆಯೆಂಬ ಭಾವ.
ಮಳೆಯ ರಭಸಕ್ಕೆ ಅದರ ಅಬ್ಬರಕ್ಕೆ ಹಂಚಿನ ಮನೆಯೆಲ್ಲ ಒದ್ದೆ ಒದ್ದೆ.ಮನಸ್ಸುಗಳು ಕೂಡ. ಭೂತ ಭವಿಷ್ಯ ವರ್ತಮಾನದ ಯೋಚನೆಗಳೆಲ್ಲ ಒಂದಾಗಿ ಇದ್ದಕ್ಕಿದ್ದಂತೆ “ಏನು ಅನ್ನಿಸದಂತಹ” ಮನಸ್ಥಿತಿ. ಒಂದಿಷ್ಟು ಖಾಲಿತನ. ಮತ್ತೊಂದಿಷ್ಟು ತುಂಬುತನ. ಹಾಗೆಯೆ ಆವರಿಸಿಬಿಡುವ ಬೆಚ್ಚಗಿನ ನಿದ್ದೆ.
ಬೆಳಗಿನ ಚುಮು ಚುಮು ಚಳಿಯಲ್ಲಿ ಅಂಗಳದ ತಂಪು ಮಣ್ಣಿನ ಮೇಲೆ ಕಾಲಿಟ್ಟರೆ ಮನದ ತುಂಬ ಬತ್ತದ ಹಸಿರಿನ ಉತ್ಸಾಹ. ಅಂಗಳದ ಗಿಡದಲ್ಲಿ ನಿನ್ನೆ ಹುಟ್ಟಿದ ಗುಲಾಬಿಯೊಂದು ಮಳೆಯ ಆರ್ಭಟಕ್ಕೆ ಒಂದಿಷ್ಟೂ ಜಗ್ಗದೆ ಇನ್ನಷ್ಟು ಅರಳಿಕೊಂಡು ಒದ್ದೆ ಒದ್ದೆಯಾಗಿ ಮುದ್ದಾಗಿ ಕಂಡು ಅಚ್ಚರಿ ಹುಟ್ಟಿಸಿಬಿಡುತ್ತದೆ.
ಮಣ್ಣಿನ ಅಂಗಳವಿರುವ ಹಂಚಿನ ಮನೆಗಳಲ್ಲಿ ಮಳೆಗಾಲದ ಒಂದಿಷ್ಟು ದಿನ ಕಳೆದಿಲ್ಲ ಅಂದರೆ ನಿಮ್ಮ ಮಳೆಗಾಲದ ಅನುಭವಗಳು ಅಪೂರ್ಣ.





ತುಂಬಾ ಹಿತವಾದ ಅನುಭವ; ತಾಜಾತನ, ಮಳೆಹನಿಯಲ್ಲಿ ಮಿಂದೆದ್ದ ಅನುಭೂತಿ; ಉಲ್ಲಾಸಕರ ಓದು 🙂 ಥ್ಯಾಂಕ್ಯೂ ವಿನಿ ನಾಯಕ್ 🙂
ಮಣ್ಣಿನ ಅಂಗಳವಿರುವ ಹಂಚಿನ ಮನೆಗಳಲ್ಲಿ ಮಳೆಗಾಲದ ಒಂದಿಷ್ಟು ದಿನ ಕಳೆದಿಲ್ಲ ಅಂದರೆ ನಿಮ್ಮ ಮಳೆಗಾಲದ ಅನುಭವಗಳು ಅಪೂರ್ಣ.
ನಿಜ… ಆ ಹಳೆಯ ದಿನಗಳೆಲ್ಲ ಮತ್ತೆ ಎದ್ದು ಬಂದು ಕರೆದ ಹಾಗಾಯ್ತು . ಬಾಲ್ಯ ಒಂದು ಸುತ್ತು ತಿರುಗಿತು ಕಣ್ಣು ಮುಂದೆ. Thanks
ಒಂದು ಕ್ಷಣ ನನ್ನ ಬಾಲ್ಯವನ್ನು ನೆನಪಿಸುವಂತೆ ಮಾಡಿದಿರಿ, ಧನ್ಯವಾದಗಳು……….
thank you. 😉 shwetha mattu shama avare 😉