ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂಟಿ ನಾನು, ಪರಂತು..!!

-ಪ್ರಕಾಶ್‍ ಕೊಡಗನೂರ್

೧ .ವಿಷಾದ ವಿಸ್ಮಯಗಳ ನಡುವೆ

ನಾನೇನು
ಸ್ವಯಂ ಉದ್ಭವಿಸಿದವನಲ್ಲ;
ನೀವೇ ಸೃಷ್ಟಿಸಿದ
ರಕ್ತಮಾಂಸಗಳಿಲ್ಲದ
ಮನುಜ ನಾನು!

ನಾನೇನು
ಸ್ವಯಂ ಉದ್ಭವಿಸಿದವನಲ್ಲ;
ನೀವೇ ಸೃಷ್ಟಿಸಿದ
ಶತಕೋಟಿ ದೇವರುಗಳ
ನೆಂಟ ನಾನು!

ನಾನೇನು
ಸ್ವಯಂ ಉದ್ಭವಿಸಿದವನಲ್ಲ;
ನೀವೇ ಸೃಷ್ಟಿಸಿದ
ಶಾಸ್ತ್ರ ಸಂಪ್ರದಾಯಗಳ
ಒಡೆಯ ನಾನು!

ನಾನೇನು
ಸ್ವಯಂ ಉದ್ಭವಿಸಿದವನಲ್ಲ;
ನೀವೇ ಸೃಷ್ಟಿಸಿದ
ಮೇಲು ಕೀಳುಗಳ
ಪರಂಪರೆ ನಾನು!

ನಾನೇನು
ಸ್ವಯಂ ಉದ್ಭವಿಸಿದವನಲ್ಲ;
ನೀವೇ ಸೃಷ್ಟಿಸಿದ
ಒಡಕುಕೆಡಕುಗಳ
ಪರಿಪಾಲಕ ನಾನು!

ಹೇ ಬುದ್ಧ
ಹೇ ಬಸವ
ಹೇ ಗಾಂಧಿ
ಹೇ ಅಂಬೇಡ್ಕರ್‌!

ಬಲ್ಲೆ ನಾನು;
ನನ್ನನ್ನು ಮಟ್ಟಹಾಕುವಲ್ಲಿ
ನೀವು ಪಟ್ಟ ಪಾಡನ್ನು;
ಸಾಧಿಸಿದ ಯಶಸ್ಸನ್ನೂ!

ನಾನು
ಸೋತೆನೆಂದುಕೊಂಡಿರಾ?

ಉಹ್ಞುಂ…
ನೀವೇ ಸೃಷ್ಟಿಸಿದ
ಶಿಕ್ಷಣ ಸಾಹಿತ್ಯ
ಸಂಗೀತ ಕಲೆಯಾಚೆಗೂ
ನಾನೀಗ ಚಾಚಿಕೊಂಡಿದ್ದೇನೆ;
ನಾಗಾಲೋಟದ ನಿಮ್ಮ ಗೆಲುವಿಗೂ
ಲಗಾಮು ಹಾಕಿದ್ದೇನೆ!

ನೀವೊ ನಾನೊ?
ಸಮರ ಜಾರಿಯಲ್ಲಿರಲಿ!

ಆದರೆ ಏಕೊ?
ಪಟ್ಟಿಗೆ ಪ್ರತಿಪಟ್ಟು
ಹಾಕುವ ಜಿದ್ದಿನಲಿ
ತಲೆಮಾರುಗಳು
ತರಗೆಲೆಗಳಾಗುವ ವಿಷಾದ;
ತರಗೆಲೆಗಳು
ತಲೆಮಾರುಗಳಾಗುವ ವಿಸ್ಮಯ
ಘಟಿಸುತ್ತಲೇ ಇದೆ!!

೨ .ಒಂಟಿ ನಾನು, ಪರಂತು..!!

ಒಂಟಿ ನಾನು
ಪರಂತು ರಹಣಹದ್ದಿನಂತೆ
ಜೀವನದ ಕಷ್ಟಗಳನ್ನು
ಸೂಕ್ಷ್ಮವಾಗಿ ಅವಲೋಕಿಸಿದ್ದೇನೆ!

ಒಂಟಿ ನಾನು
ಪರಂತು ಆನೆಯಂತೆ
ಜೀವನದ ಕಷ್ಟಗಳನ್ನು
ಎದುರಿಸುತ್ತ ನಡೆದಿದ್ದೇನೆ!

ಒಂಟಿ ನಾನು
ಪರಂತು ಹುಲಿಯಂತೆ
ಜೀವನದ ಕಷ್ಟಗಳನ್ನು
ಭರಿಸುತ್ತ ಅಲೆದಾಡಿದ್ದೇನೆ!

ಒಂಟಿ ನಾನು
ಪರಂತು ಸಿಂಹದಂತೆ
ಜೀವನದ ಕಷ್ಟಗಳನ್ನು
ಚಾತುರ್ಯದಿಂದ ನಿಭಾಯಿಸಿದ್ದೇನೆ!

ಒಂಟಿ ನಾನು
ಪರಂತು ಚಿರತೆಯಂತೆ
ಜೀವನದ ಕಷ್ಟಗಳನ್ನು
ನಿರ್ಭೀತಿಯಿಂದ ಕಳೆದಿದ್ದೇನೆ!

ಒಂಟಿ ನಾನು
ಪರಂತು ಋಷಿಯಂತೆ
ಜೀವನದ ಕಷ್ಟಗಳನ್ನು
ಸವಾಲಾಗಿ ಸ್ವೀಕರಿಸಿದ್ದೇನೆ!

ಒಂಟಿ ನಾನು
ಪರಂತು ಬೆಟ್ಟದಂತೆ
ಜೀವನದ ಕಷ್ಟಗಳನ್ನು
ಮೌನವಾಗಿ ಹೊತ್ತಿದ್ದೇನೆ!

ಒಂಟಿ ನಾನು
ಪರಂತು ಕಲಾವಿದನಂತೆ
ಜೀವನದ ಕಷ್ಟಗಳನ್ನು
ಕಲೆಯಾಗಿಸಿ ಸವಿದಿದ್ದೇನೆ !

‍ಲೇಖಕರು Admin

7 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading