ಐ ಟಿ ಉದ್ಯಮ ವರ್ಷನ್ 2.0

ನಾರಾಯಣಮೂರ್ತಿಯವರ ಹೊಟ್ಟೆನೋವು ಈ ದೇಶದ ಹೊಟ್ಟೆನೋವಾಗಿಬಿಟ್ಟಿದೆ ಎಂದರೆ, ಆ ವ್ಯವಹಾರ ಮಾಡೆಲ್ ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಎಂದೇ ಅರ್ಥ. ಫಸ್ಟ್ ಜನರೇಷನ್ ನ ಅಪ್ಪ-ಅಮ್ಮ, ಅವರ ಹೊಟ್ಟೆ ಬಟ್ಟೆ ಕಟ್ಟಿ ಕಷ್ಟದಿಂದ ಸಾಕಿ, ಬೆಳೆಸಿ, ಕಲಿಸಿ ಬಿಟ್ಟ ಮಗ ಈಗ ಮದುವೆ ಆದಮೇಲೆ ತನ್ನ ಸಂಸಾರ ತಾಪತ್ರಯ ಎಂಬ ಕಾರಣ ಕೊಟ್ಟು, ಅಪ್ಪ-ಅಮ್ಮನನ್ನು ಬೀದಿಗೆ ತಳ್ಳುವುದು ನೈತಿಕವಾಗಿಯೂ, ಕಾನೂನುಬದ್ಧವಾಗಿ ತಪ್ಪು ಎಂಬುದು ಭಾರತದಲ್ಲಿ ಒಪ್ಪಿತ ಸಂಗತಿ.

ಈಗ ಮಾಹಿತಿ ತಂತ್ರಜ್ನಾನ ಇಂಡಸ್ಟ್ರಿಯಲ್ಲಿ ಆಗುತ್ತಿರುವುದು ಇದೇ. ಈವತ್ತು ಚರಿತ್ರೆ ಮರೆತವರೇ ಎಲ್ಲೆಡೆ ಆಯಕಟ್ಟಿನ ಜಾಗಗಳಲ್ಲಿ ಸೇರಿಕೊಂಡಿರುವುದರಿಂದ ತಕ್ಷಣಕ್ಕೆ ನಮ್ಮ  ಎದುರಿರುವ “H1B ವೀಸಾ”  ಸಮಸ್ಯೆ ಭೂತಾಕಾರವಾಗಿ ಕಾಣುತ್ತಿದೆಯೇ ಹೊರತು ಅದು ಹೀಗೆ ಭೂತಾಕಾರವಾಗಲು ಸಾಗಿಬಂದ ಹಾದಿ ಮರೆತುಹೋಗಿದೆ.

1972ರಲ್ಲಿ ಭಾರತ ಕಂಪ್ಯೂಟರುಗಳಲ್ಲಿ ಜಗತ್ತಿನ ಭವಿಷ್ಯ  ಇದೆಯೆಂದು ಎಂದು ಮೊದಲ ಬಾರಿಗೆ ಕಂಡುಕೊಂಡಿತು. ದೇಶದಲ್ಲಿ ಆ ಉದ್ದಿಮೆಯನ್ನು ಬೆಳೆಸಲು ಅಮೆರಿಕದಿಂದ ಕಂಪ್ಯೂಟರುಗಳ ಆಮದಿಗೆ ಅವಕಾಶ ನೀಡಲಾಯಿತು. ಆದರೆ ಒಂದು ಷರತ್ತು ಇತ್ತು. ಆಮದಿಗೆ ಖರ್ಚು ಮಾಡಿದ ಎರಡು ಪಟ್ಟು ರಫ್ತು ಮಾಡಲೇ ಬೇಕು ಎಂಬ ಷರತ್ತದು. ಮುಂದೆ 1980ರವೇಳೆಗೆ ಸಾಫ್ಟ್ ವೇರ್ ರಫ್ತು ಪ್ರೋತ್ಸಾಹ ಮಂಡಳಿ (SEPC)  ರಚನೆಯಾಯಿತು ಮತ್ತು ಆಮದು ನೀತಿಗಳು ಬಹಳ ಸಡಿಲಗೊಂಡವು.

1990ರಲ್ಲಿ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ರೂಪುಗೊಂಡ 4 ವಿಶೇಷ ಟಾಸ್ಕ್ ಫೋರ್ಸ್ ಗಳು ಇಡಿಯ ಐಟಿ ಉದ್ಯಮಕ್ಕೆ ಹೊಸ ದಿಕ್ಕು ನೀಡಿದವು. 1998ರ ಮೇ 22ರಂದು ಆ ಸಮಿತಿಗಳು ನೀಡಿದ 108 ಶಿಫಾರಸುಗಳನ್ವಯ ಇಡಿಯ ಮಾಹಿತಿ ತಂತ್ರಜ್ನಾನ ಕ್ಷೇತ್ರ ಅಮೂಲಾಗ್ರ ಬದಲಾವಣೆ ಕಂಡಿತು. ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ಸ್ ಇಲಾಖೆ ಎಂಬ ಪುಟ್ಟ ಲೆಕ್ಕಭರ್ತಿ ಇಲಾಖೆಯು ಮಿನಿಸ್ಟ್ರಿ ಆಫ್ ಕಮ್ಯುನಿಕೇಷನ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ ಎಂದು ಮರುಹುಟ್ಟು ಪಡೆಯಿತು. ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಹೊಸ ಉದ್ಯೋಗ ಸ್ರಷ್ಟಿ ಆಗಬೇಕೆಂಬ ಷರತ್ತಿನ ಮೇರೆಗೆ ಐಟಿ ಇಂಡಸ್ಟ್ರಿಗೆ 2010ರ ತನಕ ತೆರಿಗೆ ರಜೆ, ವಿದೇಶಿ ಗಳಿಕೆಯನ್ನು ವಿದೇಶದಲ್ಲೇ ವಿನಿಯೋಗಿಸುವ ಅವಕಾಶ, ಸುಂಕ ವಿನಾಯಿತಿ, ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್, ವಿಶೇಷ ಎಕನಾಮಿಕ್ ಝೋನ್, ಮೂರು ಕಾಸಿನ ಬೆಲೆಗೆ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬಯಿ, ದಿಲ್ಲಿ, ಪುಣೆ ಮಹಾನಗರಗಳಲ್ಲಿ ಬೆಲೆಬಾಳುವ ಭೂಮಿ… ಹೀಗೆ ಏನುಂಟು ಏನಿಲ್ಲ – ಸಕಲ ಸೌಲಭ್ಯಗಳನ್ನೂ ನೀಡಲಾಯಿತು. ಈ ಹಂತದ ತನಕವೂ ಸರ್ಕಾರಗಳು ಐಟಿ ಇಂಡಸ್ಟ್ರಿಗೆ ತಾವು ಕೊಟ್ಟ ಪ್ರೋತ್ಸಾಹದಿಂದ ದೇಶಕ್ಕೆ ಏನು ಲಾಭ ಆಗಲಿದೆ ಎಂಬ ಲೆಕ್ಕಾಚಾರಗಳನ್ನು ಸರಿಯಾಗಿಟ್ಟುಕೊಂಡಿದ್ದವು.

ಹೀಗೆ ಒಂದು ಹಂತಕ್ಕೆ ಬೆಳೆದು ನಿಂತ ಐಟಿ ಉದ್ಯಮ 1995-2000 ತಲುಪುವ ಹೊತ್ತಿಗೆ ದೇಶದ ಸರ್ಕಾರಗಳನ್ನು ಮೀರಿ ಬೆಳೆಯಲಾರಂಭಿಸಿತ್ತು ಮತ್ತು ಸರ್ಕಾರದಲ್ಲಿರುವವರನ್ನು ತಮ್ಮ ಬೆರಳಿನ ತುದಿಯಲ್ಲಿ ಕುಣಿಸಲಾರಂಭಿಸಿತ್ತು. ವರ್ಷಕ್ಕೆ ಅಂದಾಜು 9%ದರದಲ್ಲಿ ಬೆಳೆಯುತ್ತಾ ಬಂದಿರುವ ಐಟಿ ಉದ್ಯಮ 2000-2016 ನಡುವೆ 2283 ಕೋಟಿ ಡಾಲರುಗಳ ವಿದೇಶಿ ಹೂಡಿಕೆಯನ್ನು ತಂದಿದೆ. ಕೇವಲ 2016ನೇ ಸಾಲಿಗೆ ಅಂದಾಜು 16,000 ಕೋಟಿ ರೂಪಾಯಿಗಳ ವಹಿವಾಟು ಮಾಡಿದೆ!

ಆದರೆ, ಯಾವತ್ತಿಗೆ ಮೂಲ ಸಾಫ್ಟ್ ವೇರ್ ಡೆವಲಪ್ ಮೆಂಟ್ ಬಿಟ್ಟು ಬಾಡಿ ಶಾಪಿಂಗ್ ವ್ಯವಹಾರಕ್ಕೆ ಈ ಉದ್ಯಮ ಇಳಿಯಿತೋ, ಅಲ್ಲಿಂದಾಚೆಗೆ ಐಟಿ ಉದ್ಯಮಕ್ಕೆ ದೇಶ, ದೇಶದ ಬಡಜನ ಹೊಟ್ಟೆಬಟ್ಟೆ ಕಟ್ಟಿಕೊಂಡು ತಮ್ಮ ತೆರಿಗೆ ಹಣದಿಂದ ಒದಗಿಸಿಕೊಟ್ಟ ಸವಲತ್ತುಗಳು ಮರೆತುಹೋಗಿದ್ದವು. ಈವತ್ತು ಈ ಬೆಳವಣಿಗೆಯ ಸಮತೋಲನ ಎಷ್ಟು ಕೆಟ್ಟಿದೆ ಎಂದರೆ, ಐಟಿ ಉದ್ಯಮದ 25%  ಆದಾಯ ಬರುತ್ತಿರುವುದು ದೇಶದ ಕೇವಲ 5 ದೊಡ್ಡ ಐಟಿ ಕಂಪನಿಗಳಿಂದ.ಇನ್ನೊಂದೆಡೆ ದೇಶದ ಒಟ್ಟು ರಫ್ತಿನ 73% ಭಾಗಕ್ಕೆ ದೇಶವು ಐಟಿ ಉದ್ಯಮವನ್ನೇ ಅವಲಂಬಿಸಿದ್ದು, ಅದರಲ್ಲಿ 62% ಅಮೆರಿಕದ ಪಾಲಾದರೆ, 29% ಯುರೋಪಿನ ಪಾಲು!

ಈಗಿನ ಬದಲಾದ ಜಾಗತಿಕ ಸನ್ನಿವೇಶದಲ್ಲಿ ಭಾರತದಂತಹ ದೇಶಗಳ ಅತಿ ಹಸ್ತಕ್ಷೇಪವನ್ನು ಅರ್ಥಮಾಡಿಕೊಂಡಿರುವ ಅಮೆರಿಕ ತನ್ನ ಪ್ರಜೆಗಳ ಹಿತಾಸಕ್ತಿ ರಕ್ಷಣೆಗಾಗಿ “ಅಮೆರಿಕ ಫಸ್ಟ್” ಎಂದು ಘೋಷಿಸಿ, ಭಾರತೀಯ ಐಟಿ ತಂತ್ರಜ್ನರನ್ನು ದೇಶದಿಂದ ಹೊರಹಾಕುವ ಬಗ್ಗೆ ಯೋಚಿಸುತ್ತಿದೆ. ಆದರೆ ಇದೇ ವೇಳೆಗೆ ಭಾರತದ ಐಟಿ ಕಂಪನಿಗಳು ತಮ್ಮನ್ನು ಈ ಹಂತಕ್ಕೆ ಬೆಳೆಸಿದ ದೇಶದ ಹಿತಾಸಕ್ತಿಯನ್ನು ಮರೆತು ಅಮೆರಿಕದ ನಾಗರಿಕರನ್ನೇ ಅಲ್ಲಿ ತಮ್ಮ ಕಂಪನಿಗಳಲ್ಲಿ ನೌಕರಿಗೆ ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದಿವೆ. ಮೊನ್ನೆ ಇನ್ಫೋಸಿಸ್ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, 10,000  ಉದ್ಯೋಗಗಳಿಗೆ ಅಮೆರಿಕನ್ನರ ನೇಮಕ ಆಗಲಿದೆ ಎಂದು ಘೋಷಿಸಿದೆ.

ತಮ್ಮ ಉಳಿವಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಹಾಕುವ ಇಂತಹ ವ್ಯವಹಾರಗಳನ್ನು ಪ್ರೋತ್ಸಾಹಿಸುವುದು ದೀರ್ಘಕಾಲಿಕ ದ್ರಷ್ಟಿಯಿಂದ ದೇಶಕ್ಕೆ ಮಾರಕ ಆಗಲಿದೆ. “ಐಟಿ ಇಂಡಸ್ಟ್ರಿಯವರೇ, ನಿಮಗೆ ಕೊಡುವುದನ್ನೆಲ್ಲ ದೇಶ ಕೊಟ್ಟಾಗಿದೆ ಈಗ ನಿಮ್ಮ ಸರದಿ. ದೇಶದಲ್ಲಿ ಉದ್ಯೋಗ ಸ್ರಷ್ಟಿ, ಸಂತುಲಿತ ಬೆಳವಣಿಗೆಗೆ ನಿಮಗೂ ಹೊಣೆ ಇದೆ” ಎಂದು ಗಟ್ಟಿ ಧ್ವನಿಯಲ್ಲಿ ಹೇಳಬೇಕಾದ ಸಮಯ ಇದು. ತಮ್ಮ ಕಿಸೆ ಗಟ್ಟಿ ಮಾಡಿಕೊಳ್ಳುವುದಕ್ಕೆ  ಹೊರಟಿರುವ ಐಟಿ ಕಂಪನಿಗಳು ಸರ್ಕಾರದಿಂದ ಪಡೆದಿರುವ ಬಿಟ್ಟಿ ಸವಲತ್ತುಗಳನ್ನು ಸರಕಾರವು ವಾಪಸ್ ಪಡೆದು, ಅದನ್ನು ಬೇರೆ ಆದ್ಯತೆಯ ರಂಗಗಳಲ್ಲಿ ಮರುಹಂಚಿಕೆ ಮಾಡಿ, ದೇಶದ ಬೆಳವಣಿಗೆಗೆ ಸಂತುಲನ ತರುವುದಕ್ಕಿದು ಸರಿಯಾದ ಸಮಯ.

ಹೆಚ್ಚಿನ ಓದಿಗಾಗಿ:

http://www.iimahd.ernet.in/~ subhash/pdfs/Indian% 20software%20industry.pdf

 

 

 

 

 

 

 

‍ಲೇಖಕರು avadhi

May 4, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Suma

    I completely agree with you. Being born and brought up in Kartataka, they never entertained the thought of hiring local talent.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: