
ಗೀತಾ ಹೆಗ್ಡೆ
ಏಯ್ ಚೋಟೂ
ಇದೇನೊ ನಿನ್ನ ಸಾಹಸ ?
ಕಾಲವನ್ನೇ ಹೊತ್ತೊಯ್ಯುತಿರುವೆಯಲ್ಲ !
ಈ ಜಗದ ಜಂಜಡವೇ
ನನಗೆ ಬೇಡಾ ಎಂದು ರೋಸಿ
ಎಲ್ಲಿಗೊ ಸಾಗಿದಂತಿದೆ ನಿನ್ನ ಪಯಣ.
ನಿನ್ನ ಕಾಲಡಿಯಲ್ಲೆ ಇದೆ ನಿನ್ನ ಪ್ರತಿಬಿಂಬ
ಬೆನ್ನಿಗೇರಿದ ಕಾಲನೂ ನಿನ್ನ ಹಿಂಬಾಲಿಸುತಲಿಹನು
ದಯವಿಟ್ಟು ಒಮ್ಮೆ ಬಗ್ಗಿ ನೋಡು.
ತರವಲ್ಲ ನಿನಗೆ ಸಿಟ್ಟು ಸೆಡಗು ಬಿಟ್ಟಾಕು
ದಿಡ್ಡಿಯ ಬಾಗಿಲು ತೆರೆದಿದೆ ಓಡಿ ಹೋಗುವ ಹುನ್ನಾರವೆ
ಕಾಲ ಯಾರನ್ನೂ ಬಿಟ್ಟಿಲ್ಲ ಕಣೊ.
ಹಿಂದೆ ಭೀಷ್ಮ ಪಿತಾಮಹ
ಉತ್ತರಾಯಣ ಪುಣ್ಯ ಕಾಲಕ್ಕಾಗಿ ಕಾದ
ಮುಳ್ಳಿನ ಮಂಚದಲ್ಲಿ ಮರಣ ಶಯ್ಯೆಯಲ್ಲಿ.
ಗೌತಮ ಮಹಷಿ೯ಯ ಶಾಪಕ್ಕೆ ಗುರಿಯಾದ ಅಹಲ್ಯೆ
ಕಲ್ಲಾಗಿ ಕುಳಿತಳು ಸಾವಿರ ವರುಷ
ರಾಮನ ಪಾದ ಸ್ಪರ್ಶಕ್ಕಾಗಿ.
ಸಿಹಿಯಾದ ಬೋರೆ ಹಣ್ಣನು ಹಿಡಿದು
ರಾಮ ಬರುವ ದಾರಿಗಾಗಿ
ಮುದುಕಿ ಶಬರಿಯೂ ಕಾಯಲಿಲ್ಲವೆ ?
ಇತಿಹಾಸದ ಉದ್ದಗಲಕ್ಕೂ ಕಾಯಿಸಿದೆ ಕಾಲ
ಇನ್ನು ಮನುಜರಾದ ನಾವು ಯಾವ ಲೆಕ್ಕ
ಕಾಲನ ಹೊತ್ತೊಯ್ದರೂ ಅದು ನಿನ್ನ ಬಿಡಲಾರದು.
ಮುಸ್ಸಂಜೆಯ ಸೂರ್ಯ ಮುಳುಗುವ
ಹೊತ್ತಲ್ಲದ ಹೊತ್ತಲ್ಲಿ ಒಬ್ಬಂಟಿಯಾಗಿ ಅದೆಲ್ಲಿಗೆ ಹೋಗುವೆ
ನಿನಗೂ ಒಂದು ಕಾಲವಿದೆ ನೀನೂ ಕಾಯಲೇ ಬೇಕು.
ಮರೆಯಾಗಿ ಹೆತ್ತ ಕರುಳಿನ ಹೊಟ್ಟೆ ಉರಿಸ ಬೇಡ
ಹುಟ್ಟಿರುವೆ ಭೂಮಿ ತಾಯಿಯ ಮಡಿಲಲ್ಲಿ
ದಿಟ್ಟ ತನದಿಂದ ಬದುಕಿ ತೋರಿಸು ಜಗಕೆ ಮಾದರಿಯಾಗಿ !





Nice one
ತುಂಬಾ ಚಂದಾದ ಕವನ ಸಮಯೋಚಿತವಾದ ಭಾವನೆಗಳಿಗೆ ಸ್ಪಂದಿಸುವ ಬರವಣಿಗೆಯ ಸಾಲುಗಳು …ಓದಿ ತುಂಬಾ ಸಂತಸವಾಯಿತು….ಅಭಿನಂದನೆಗಳು ಗೀತಾ ಮೇಡಂ ಅವರೆ….
ಧನ್ಯವಾದಗಳು ರಾಜು
ಧನ್ಯವಾದಗಳು ವಿಜಯಾ