ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನೆಲ್ಲಾ ಮಾಲಿನ್ಯ ಇಲ್ಲಿ….

ಮಹಾನಗರದ ಮಹಾಸಮಸ್ಯೆಗಳು

ಶ್ರೀನಾಥ್ ಭಲ್ಲೆ

ಮಹಾನಗರದ ಹೊರವಲಯವೊಂದರ ನೋಟ. ವಿಧವಿಧ ಜಾತಿಯ ಶ್ವಾನ(ಗಳ) ಪಿಡಿದು ವಾಕಿಂಗ್ ಹೊರಟ ದೊಡ್ಡ ಜನ. ಶ್ವಾನಗಳ ಬಹಿರ್ದೆಶೆಯ ಶುಭ ಸಮಯ. ಟಾಮಿಯ ಕುತ್ತಿಗೆಗೆ ಬಿಗಿದ್ದ ಬೆಲ್ಟಿನ ಮತ್ತೊಂದು ಬದಿಯನ್ನು ಹಿಡಿದ ಎಡಗೈಯಿನ ದೇಹದವರ ಬಲ ಹಸ್ತ ಬ್ಲ್ಯಾಕ್-ಬೆರ್ರಿಯೋ, ಸ್ಮಾರ್ಟ್ ಫೋನನ್ನೋ ಹಿಡಿದು ಹೊರಟಿತ್ತು. ತನ್ನಿಚ್ಚೆ ಬಂದಾಗ ಕಾಲೆತ್ತುವುದೋ, ಕೂರುವುದೋ ಮಾಡುತ್ತಾ ಹೊರಟಿದ್ದೆ ಶ್ವಾನದ ಹಿಂದೆ, ಡೌನ್ಲೋಡ್ ಆಗದ ವಿಡಿಯೋವನ್ನು ಶಪಿಸುತ್ತ ಸಾಗುತ್ತಿಹರು ಸಿಡುಕುಮೋರೆಯವರು.
ವಿದೇಶದಲ್ಲಿದ್ದಾಗಲೂ PET’ಅನ್ನು ಸಾಕಿದ್ದು, Pet Waste’ಅನ್ನು ಪ್ಲಾಸ್ಟಿಕ್’ನಲ್ಲಿ ಎತ್ತಿಕೊಂಡು ನಿಗದಿತ ಸ್ಥಳದಲ್ಲಿ ಇರಿಸಲಾಗಿದ್ದ ವೇಸ್ಟ್-ಟ್ರ್ಯಾಷ್’ನಲ್ಲಿ ಹಾಕುವವರು, ಭಾರತ ಭೂಮಿಯಲ್ಲಿ ಮಾತ್ರ ಈ ರೀತಿ ಆಡುವುದೇಕೆ ಎಂಬುದು ನಾಯಿಯನ್ನು ಸಾಕಿಲ್ಲದವರ ಅಹವಾಲು. ಹೀಗೇ ಮುಂದುವರೆದರೆ, ಶಿಸ್ತು ಬಾರದಿರೆ, ಇಡೀ ಪುಟ್ಟ ಪ್ರಾಂತ್ಯ ಮಂಡೂರು ಆಗಲಿದೆ !!
ಇದು ಮಲಿನದ ಮಾಲಿನ್ಯ !

ಹದಿನೈದು ಮಹಡಿ ಅಪಾರ್ಟ್ಮೆಂಟು. ಇದ್ದೋರೆಲ್ಲ ಐಟಿ, ಬಿಟಿ, ಡಾಕ್ಟರ್, ಇತ್ಯಾದಿ ಹುದ್ದೆಯವರೇ. ಭಾರತದ ಘನ ಬೆಂಗಳೂರಿನಲ್ಲಿ ಇರುವ ಇವರು, ಹೆಚ್ಚು ಕಮ್ಮಿ ಧರಣಿಯ ಯಾವುದೋ ಇನ್ನೊಂದು ಭಾಗವನ್ನು ಕಂಡು ಬಂದವರೇ. ವಿದೇಶಿ ವಿಸ್ಕಿ ವಿದೇಶದಲ್ಲೇ ಕುಡಿದವರು. ಪರದೇಶೀ ಬ್ರ್ಯಾಂಡ್ ಸಿಗರೇಟನ್ನು ಅಲ್ಲೇ ಎಳೆದು ಬಂದವರು. ಕರಿಯರ ನಾಡಲ್ಲಿ ಕರಿಯರಾಗಿ, ಬಿಳಿಯರ ನಾಡಲ್ಲಿ ಬಿಳಿಯರಂತಾಡಿ, ಕಂದಾಗಿ ಹುಟ್ಟಿ, ಕಂದಾಗೇ ಬೆಳೆದು, ಕಂದಾಗೇ ಉಳಿದು ಇಂದು ಕಂದುನಾಡಿನಲ್ಲಿ ಮೇಲ್ನೋಟಕ್ಕೆ ಬಿಳಿಯರಂತೆ ಆಡುವ ಹೈ-ಟೆಕ್ ಜನ.
ಇಲ್ಲಿ ಎಲ್ಲರೂ ಭಯಂಕರ ಸ್ನೇಹಿತರು …. ನೆಡೆದಾಡುತ್ತಿರುವಾಗ ಮಾತ್ರ ಸ್ನೇಹಿತರು. ಕಾರಿನಲ್ಲಿ ಕೂತಾಗ ಅವರು ಅರಿಭಯಂಕರರು ! ಅರಿವನ್ನೇ ಅರಿಯಾಗಿ ಕಾಣುವವರು !! ಏನೋ ಒಂದು ರೀತಿ ಭಾವನೆ ಆವರಿಸುತ್ತದೆ. ತಾನು ಎಲ್ಲರಿಗಿಂತ ಮುಂದಾಗಿ ಹೋಗಬೇಕು. ತಾನು ಮೊದಲಿರಬೇಕು ಎಂಬ ಹುಚ್ಚುಕುದುರೆ ಓಟದಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯಕ್ಕಿಂತ ಹೆಚ್ಚೇ ವ್ಯಯಿಸುವ ಮಂದಿ. ಕಾಯುವ ವ್ಯವಧಾನ ತೋರದೇ ಬೈದಾಡುತ್ತಲೋ, ತಮ್ಮ ವಾಹನದ ಹಾರ್ನ್ ಬಡಿಯುತ್ತಲೋ ಅಶಾಂತಿ ಹಂಚುವ ಮಂದಿ. ತಮ್ಮ ದೊಡ್ಡವಾಹನಗಳನ್ನು ಚಿಕ್ಕ ರಸ್ತೆಯಲ್ಲಿ ನುಗ್ಗಿಸುವ ಅತಿರಥಿಗಳು. ಕಾರಲ್ಲೋ, ಬೈಕಲ್ಲೋ ಕೂತು ಮೊಬೈಲಲ್ಲಿ ಮಾತನಾಡುತ್ತ ಸಾಗುವ ಮಹಾರಥಿಗಳು.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಪಾರ್ಟಿ ಪ್ರಿಯರು. ರಾತ್ರಿ ಆರಂಭಗೊಂಡು ಮುಂಜಾನೆಯವರೆಗೂ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಕುಡಿದು, ಕುಪ್ಪಳಿಸಿ ಮೆರೆವ ಭಂಡ ಜನ. ಇವರಿಗೆಲ್ಲ ಅಂಕುಶ ಹಾಕುವವರಾದರೂ ಯಾರು? ಗಣೇಶ ಹಬ್ಬಕ್ಕೆ ಪೆಂಡಾಲ್ ಏರಿಸಿ, ಹಬ್ಬದ ನೆವದಲ್ಲಿ “ಶೀಲಾ ಜಿ ಜವಾನಿ” ಹಾಡುಗಳನ್ನು ಕೇಳುವ ದಿನಗಳು ಹೆಚ್ಚು ದೂರವಿಲ್ಲ ಗೆಳೆಯರೇ!
ಇದು ಶಬ್ದ ಮಾಲಿನ್ಯ !

ಮಹಾನಗರದಾಚೆಗಿನ ಇಂತಹ ಒಂದು ಬಹುಮಹಡಿ ಕಟ್ಟಡದಲ್ಲಿ ಬೆಂಗಳೂರಿನಲ್ಲೇ ಅಲ್ಪಸಂಖ್ಯಾತರಾದ ಕನ್ನಡವರೊಬ್ಬರ ಮನೆಯೂ ಒಂದು. ಈಚೆಗೆ ಮಗಳ ಬಾಣಂತನಕ್ಕೆಂದು ಒಬ್ಬ ತಾಯಿ ವಿಸಿಟರ್ ವೀಸಾ ಮೇಲೆ ಮೈಸೂರಿನಿಂದ ಬಂದಿದ್ದರು ! ಏನು? ಮೈಸೂರಿನಿಂದ ಬೆಂಗಳೂರಿಗೆ ವಿಸಿಟರ್ ವೀಸಾ? ಎಂದು ಹುಬ್ಬೇರಿಸದಿರಿ. ಹೇಗೆ ಹೊರದೇಶಕ್ಕೆ ಹೋದವರನ್ನು ಅತಿಥಿಗಳಾಗಿ ಸ್ವೀಕರಿಸಿ ಆರು ತಿಂಗಳಾಗುತ್ತಿದ್ದಂತೆ ಹೊರಡಿರೆಂದು ಹೇಳುವರೋ ಹಾಗೇ ಈ ವ್ಯವಹಾರವೂ ಸಹ. ಎಲ್ಲೆಡೆ ಎಲ್ಲರಿಗೂ ಪ್ರೈವೆಸಿ ಬೇಕಿದೆ.
ಹದಿನೈದನೇ ಮಹಡಿ ಮೇಲಿನ ತಮ್ಮ ಮನೆಯ ಬಾಗಿಲು ತೆರೆದು ನಾಲ್ಕು ಹೆಜ್ಜೆ ಇಡುತ್ತಿದ್ದಂತೇ, ಲಿಫ್ಟ್ ವ್ಯವಸ್ಥೆ. ಇಳಿದು ಹೋದರೆ ಅಲ್ಲೇ ತರಕಾರಿ ಅಂಗಡಿ. ಹನ್ನೊಂದು ಘಂಟೆಯ ಸಮಯ. ಹನ್ನೊಂದಕ್ಕೆ ಬರುವ ಅಳಿಯನಿಗೆ ಅಡುಗೆ ಸಿದ್ದ ಮಾಡಿಡಲು ಇನ್ನೂ ಹನ್ನೆರಡು ಘಂಟೆಗಳ ಕಾಲ ಇದೆ …ಕೆಲವೊಮ್ಮೆ ಅದರ ಅವಶ್ಯಕತೆಯೂ ಇಲ್ಲ. “ಅಲ್ಲೇ ಊಟ ಆಯ್ತು” ಅನ್ನೋದು ಸಾಮಾನ್ಯ ಉತ್ತರ. ಅಡುಗೆ ಆಗಬೇಕಿರುವುದು ತಮಗೆ ಮತ್ತು ತಮ್ಮ ಮಗಳಿಗೆ ಮಾತ್ರ.
ಅಂಗಡಿಯಲ್ಲಿ ಮತ್ತೊಬ್ಬ ಹೆಂಗಸು ಬಿಟ್ಟರೆ ಅದು ಖಾಲಿ ಹೊಡೀತಿತ್ತು. ಆ ಮತ್ತೊಬ್ಬಾಕೆ ಏನೋ ತರಕಾರಿ ತೋರಿಸಿ “ಎಷ್ಟು” ಅಂದರು. ಕನ್ನಡದವರೊಬ್ಬರು ಸಿಕ್ಕರು ಅಂತ ಇವರಿಗೆ ಖುಷಿಯೋ ಖುಷಿ !!
“ನೀವು ಕನ್ನಡದವರೇ?”
“ಹಾ! ಎಸ್”
“ಯಾವ ಫ್ಲೋರು?”
“16th floor north side …”
“ಓ! ಓಕೆ .. ಓಕೆ .. ಅಡಿಗೆ ಆಯ್ತಾ”
“ಹಾ! ಯಾ …ರೆಡಿ …ಬೀನ್ಸ್ ಕರಿ, ರಸಂ, ವೈಟ್ ರೈಸ್, ನಾನ್”
“ಓ! ನೈಸ್, ನೈಸ್ !! ನಾನು ಮೈಸೂರು ಕಡೆ …ನಿಮ್ದು ಯಾವ ಕಡೆ?”
“by birth Bangalore … my sis is in Mysore … my Bro is in UK” ಅಂತ ತಮ್ಮ ಖಾಂದಾನ್ ವಿಷಯ ಚಿಕ್ಕದಾಗಿ ಚೊಕ್ಕವಾಗಿ ತಿಳಿಸಿದರು
“ಓ! ನನ್ನ ಮಗ ಯು.ಕೆ.ನಲ್ಲೇ ಇರೋದು. ನಿಮ್ಮ ಬ್ರದರ್ ಎಷ್ಟು ವರ್ಷದಿಂದ ಯು.ಕೆ.ನಲ್ಲಿ ಅಲ್ಲಿದ್ದಾರೆ?”
“he is in Sirsi … {ring} O! sorry ! need to take this call” ಅಂದವರು ತಮ್ಮ ಮೊಬೈಲನ್ನು ಕಿವಿಗೆ ಒತ್ತಿಕೊಂಡು “ಹಲೋ? ” ಎನ್ನುತ್ತ ಸಾಗಿ ಹೊರಟು ಹೋದರು.
“ಅಲ್ಲಾ …ಮೊದಲು ಯು.ಕೆ ಅಂದರು …ಈಗ ಸಿರ್ಸಿ ಅಂದರು ಅರ್ಥವೇ ಆಗ್ತಿಲ್ಲವಲ್ಲ? ಹೋಗ್ಲಿ ಸದ್ಯ ಒಬ್ಬರು ಕನ್ನಡದವರು ಅಂತ ಇದ್ದಾರಲ್ಲ ಸದ್ಯ”
ಇಲ್ಲಿ ಆಡಿದ ಇಷ್ಟೇ ಮಾತಿನಲ್ಲಿ ಕನ್ನಡ ಎಷ್ಟಿತ್ತು? ಇದು ಮಹಾನಗರದ ಮಹಾರೋಗ.
ಇದು ಭಾಷಾ ಮಾಲಿನ್ಯ …

ಘನ ಬೆಂಗಳೂರಿನ ಮತ್ತೊಂದು ದುರಂತ. ಘನ ಸರಕಾರ ಯಾವುದೋ ಘನಂಧಾರಿ ಗುಂಪಿನ ಒತ್ತಾಸೆಯನ್ನು ಪೂರೈಸುವ ಸಲುವಾಗಿ ರಾತ್ರಿ ಒಂದು ಘಂಟೆಯವರೆಗೂ ಮದ್ಯದಂಗಡಿಯನ್ನು ತೆರೆದಿಡುವಂತೆ ಆಜ್ಞ್ನೆ ಹೊರಡಿಸಿದೆ. ಎರಡನೇ ಶಿಫ್ಟೋ ಮತ್ತಿನ್ಯಾವುದೋ ಕಾರ್ಯದಿಂದಲೋ ರಸ್ತೆಯಲ್ಲಿ ಹೋಗುವವರಿಗೆ ಕುಡಿದು ಅಮಲೇರಿದವರ ವಾಹನಗಳ ಕಾಟ. ಖಾಲೀ ರಸ್ತೆಗಳಲ್ಲಿ ಭರ್ರೋ ಎಂದು ಸಾಗುವ ಇವರಿಂದ ಜನರ ನಿದ್ದೆ, ನೆಮ್ಮದಿ ಹಾಳು. ಪಾನಮತ್ತರಾದ ಈ ಮದಾಂಧರ ಗಲಭೆಯಿಂದ ನಿದ್ದೆ ಕೆಡಿಸಿದ್ದರಷ್ಟೆ ಸಾಕಾಗಿತ್ತು, ಆದರೆ ಕುಡಿದ ಅಮಲಿನಲ್ಲಿ ಕೀಚಕರು, ದುಶ್ಯಾಸನರೂ ಆಗಿರುವುದು ಖೇದಕರ ಮತ್ತು ಅಸಹ್ಯಕರ.
ಪ್ರಭಾವಿ ವ್ಯಕ್ತಿಗಳೋ ಅಥವಾ ಅವರ ವಂಶೋದ್ದಾರಕರೋ ಇಂತಹ ನಾಚಿಕೆಗೆಟ್ಟ ಕೆಲಸಗಳನ್ನು ಎಸಗಿ ಕಾನೂನಿನ ಕೈಯಿಂದಲೂ ಸಲೀಸಾಗಿ ತಪ್ಪಿಸಿಕೊಳ್ಳುತ್ತಾರೆ. ಈಚೆಗಿನ ವಿದ್ಯಮಾನ ನೋಡಿದರೆ, ಅತ್ಯಾಚರವೆಂಬುದು ಶೋಕಿ ಆಗಿದೆಯೇನೋ ಅನ್ನಿಸುತ್ತಿದೆ. ಇಂತಹ ನೀಚರಿಗೆ ಪೂರಕವಾಗಿ ಮಾಧ್ಯಮದವರು ಕೂಡ. ನೋವುಂಡ ಮಗುವನ್ನೋ, ಹೆಣ್ಣನ್ನೋ ಪದೇ ಪದೇ ತೋರಿಸಿ ಪ್ರಚಾರ ಕೊಡುವುದೇ ಅಲ್ಲದೇ ಅವರ ಮಾತಾಪಿತೃಗಳನ್ನು ಸಂದರ್ಶನ ಬೇರೆ ಮಾಡುತ್ತಾರೆ. ಅನ್ಯಾಯಕ್ಕೊಳಗಾದವರನ್ನು ಇನ್ನಷ್ಟು ಸಂಕಟದ ಕೂಪಕ್ಕೆ ತಳ್ಳಿ ಮೇಲೇರದಂತೆ ಮಾಡಿ ತಮ್ಮ ವಾಹಿನಿಯ ಘನತೆ ಹೆಚ್ಚಿಸಿಕೊಳ್ಳುತ್ತಿದೆ. ವಾಹಿನಿ ಎಂಬ ಮದವೇರಿರುವ ಆನೆಗೆ ಅಂಕುಶ ಹಾಕಬೇಕಿದೆ.
ಇತ್ತೀಚೆಗೆ ನೆಡೆದ ಘಟನೆಯಂತೂ ಇನ್ನೂ ಖೇದಕರ. ನೀಚತನದ ಪರಮಾವಧಿ. ಶಾಲೆಯನ್ನು ದೇಗುಲ ಎಂದುಕೊಂಡವರಿಗೆ ಮಕ್ಕಳನ್ನು ಶಾಲೆಗೆ ಕಳಿಸಲೇ ಹೆದರಿಕೆಯುಂಟು ಮಾಡುವಂತಹ ಪ್ರಸಂಗ. ಹೆಂಗಳ ಜೀವನ ಹಾಳು ಮಾಡುವುದು ಒಂದು ಫ್ಯಾಷನ್ ಎಂದುಕೊಂಡ ಹಾಗಿದೆ.
ಮನಸ್ಸಿನ ಸ್ಥಿತಿ ಏಕಾಏಕಿ ಇಷ್ಟು ಕೀಳುಮಟ್ಟಕ್ಕೆ ಇಳಿಯಲು ಕಾರಣವೇನು? ಪುಕ್ಕಟೆ ಪ್ರಚಾರ ಸಿಗುತ್ತದೆ ಎಂತಲೋ? ಹಣ ಬಲ, ಅಧಿಕಾರ ಬೆಂಬಲ ಇದೆಯಂತಲೋ?
ಭಾಷಾ ಮಾಲಿನ್ಯ ತಡೆದುಕೊಳ್ಳಬಹುದು …ಮಲಿನದ ಮಾಲಿನ್ಯ, ಶಬ್ದ ಮಾಲಿನ್ಯಗಳನ್ನು ಪರಿಹರಿಸಲೂಬಹುದು …
ಆದರೆ, ಮನದ ಮಾಲಿನ್ಯ ತಡೆಯುವುದೆಂತು? ದಾರಿ ಯಾವುದು ?
 

‍ಲೇಖಕರು G

16 August, 2014

4 Comments

  1. Kiran

    Seen everyday, but your write up touched the right chords. Needs to ponder.
    Deaf can be treated but not the one who intentionally behaves deaf.
    The light at the end of tunnel is actually a train which is ready to decimate the people standing at the other end.
    This is pollution of despair, helplessness and frustration.
    Thank you for rejuvenating the suppressed pain!

  2. Bhalle

    Kiran,
    You nailed it. Thank you very much for your comment. The one that we see as “aashakirana” happens to be the headlight of the ‘yamana vaahana” 🙁

  3. Raj

    Nice observations of not so nice things!
    Please keep writing about life in namma Bengaluru how you see it..

  4. Bhalle

    Thank you Raj. Thanks for the comments … Will certainly pen more on namma Bengalooru. Thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading