‘ಏನಾದ್ರೂ ತಿಂದ್ರಾ..?’

Hi Shri , Do you know how to cook for BBQ ? ನನ್ನ ಫ್ರೆಂಡ್ ಒಬ್ರು ಫೋನ್ ಮಾಡಿ ಈ ಪ್ರಶ್ನೆ ಕೇಳಿದಾಗ, ಎಲ್ಲ ಅರ್ಥ ಆದ್ರೂ, ಮತ್ತೆ “What” ಅಂದೆ. ಅದಿಕ್ಕೆ ಅವರು, “Actaully, we are planning for BBQ dinner party. There are two groups, veg and non – veg. Would you like to join. Do you have experience ? ಅಂದ್ರು. ಗ್ಯಾಸ್ ಸ್ಟೋವ್ ನಲ್ಲೇ ಸರಿಯಾಗಿ ಬರೋದಿಲ್ಲ ಅಡುಗೆ ಮಾಡೋಕೆ . ಇನ್ನೂ BBQ ನಲ್ಲಾ ಅನ್ನಿಸಿತು. ಎಲ್ಲಾ ಅಡುಗೆ ಭಾರವನ್ನು “ಯೂ ಟ್ಯೂಬ್ ” ಮೇಲೆ ಹಾಕಿ, “What should I prepare “ಅಂದೆ. Ok, I will let you know” ಹೇಳ್ತಾ ಫೋನ್ ಕಟ್ ಮಾಡಿದ್ರು.

ನಾವು ಶುದ್ಧಾ ಸಸ್ಯಾಹಾರಿಗಳು. ಕೇವಲ ಸೊಪ್ಪು – ತರಕಾರಿಗಳು ಅಷ್ಟೇ. ಅದರಲ್ಲೂ ಒಂದಿಷ್ಟು ತರಕಾರಿಗಳು ಇನ್ನೂ ಮನೆಯ ಮೆಟ್ಟಿಲೇ ಹತ್ತಿಲ್ಲ. ಕಾರಣ ಸಂಪ್ರದಾಯ. ಅಳೆದು ತೂಗಿ, ಭಟ್ಟಿ ಇಳಿಸಿ ಹೊಟ್ಟೆಗೆ ಪ್ರವೇಶ ಆಗೋ ತರಕಾರಿಗಳು ಬೆರಳೆಣಿಕೆಯಷ್ಟು ಮಾತ್ರ. ಮಾಡೋ ಅಡುಗೆಯಲ್ಲೂ ಮತ್ತೆ ಆಯ್ಕೆಗಳಿದ್ದರಂತೂ ಮುಗಿದೇ ಹೋಯಿತು ಕಥೆ. ಎಷ್ಟೋ ಹೋಟೆಲ್ ಸಾಂಬರುಗಳನ್ನು ತಿನ್ನೋವಾಗ, “ಅರೆ ಇದ್ರಲ್ಲೂ ಇಷ್ಟು ಚೆನ್ನಾಗಿ ಅಡುಗೆ ಆಗುತ್ತಲ್ಲಾ ಅಂತ ತಲೆ ಚಚ್ಚಿಕೊಂಡಿದ್ದು ಇದೆ. ಊರಲ್ಲೇ ಹೀಗೆ ಆದ್ರೆ, ವಿದೇಶದಲ್ಲಿ ಸಸ್ಯಾಹಾರಿಗಳ ಪಾಡು, ದೇವರಿಗೆ ಪ್ರೀತಿ.

ಬ್ರೆಡ್, ಬನ್ನ್, ಹಣ್ಣುಗಳು, ಜೂಸ್ ಗಳು ಬಿಟ್ರೆ ಬೇರೆ ಯಾವುದೇ ರೀತಿಯ ತಿನಿಸುಗಳು ದಾರಿ ಬದಿಯ ಅಂಗಡಿಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಸಿಗೋದಿಲ್ಲ. ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ತಮಿಳುನಾಡಿನ  ಸಸ್ಯಾಹಾರಿ ರೆಸ್ಟೋರೆಂಟ್ ಗಳು ಲಭ್ಯ. ತಿನ್ನಬೇಕಾದ್ರೂ. ಟ್ರೈನ್, ಬಸ್ , ಟ್ಯಾಕ್ಸೀ ಮಾಡಿಕೊಂಡು ಹೋಗಿ ತಿಂದು ಬರುವ ಪರಿಸ್ಥಿತಿ ನಮ್ಮದು.

ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಸಿಗೋ ಚಾಟ್ ಅಂಗಡಿಗಳು, ಕಡ್ಲೆಕಾಯಿ ಗಾಡಿಗಳು, ಮೆಸ್ ಗಳು, ಮಧ್ಯಾಹ್ನದ ಹೊತ್ತಿಗೆ ಹೈಕೋರ್ಟ್, ವಿಧಾನಸೌಧ, ಪ್ರೆಸ್ ಕ್ಲಬ್ ಬಳಿ ಹಾಜರಾಗುವ  ಲಂಚ್ ಗಾಡಿಗಳು, ಕಟ್ ಫ್ರೂಟ್ಸ್ ಗಾಡಿಗಳು…. ಪಟ್ಟಿ ಸಾಗ್ತಾನೆ ಹೋಗುತ್ತೆ.  ಸಿಂಗಾಪುರದಲ್ಲಿ ತಿನ್ನೋರು ಇಲ್ಲ ಅಂತೇನಿಲ್ಲಾ. ಯಾವುದೇ ಫುಡ್ ಕೋರ್ಟ್, ರೆಸ್ಟೋರೆಂಟ್ ಗೆ ಹೋಗಿ ಮುಂಜಾನೆಯಿಂದ ರಾತ್ರಿಯವರೆಗೂ ಜನ ಜಂಗುಳಿ ಸಾಮಾನ್ಯ. ಸಸ್ಯಾಹಾರಿ ತಿನಿಸುಗಳು ಬಿಟ್ಟು ಮತ್ತೆ ಎಲ್ಲಾ ಐಟಮ್ ಗಳೂ ಎಲ್ಲ ಕಡೆಯೂ ಲಭ್ಯ.

ಚೀನಿಯರ ಫುಡ್ ಕೋರ್ಟ್ ಗೆ “ಹಾಕರ್ ಸೆಂಟರ್”  ಅಂತ ಕರೀತಾರೆ. ಇದಕ್ಕಿರುವ ಇನ್ನೊಂದು ಹೆಸರು ಕುಕ್ಡ್ ಫುಡ್ ಸೆಂಟರ್. ಇವುಗಳು ಓಪನ್ ಏರ್ ಕಾಂಪ್ಲೆಕ್ಸ್ ಗಳಲ್ಲಿ ಕಾಣಸಿಗುತ್ತವೆ. ವಸತಿ ಪ್ರದೇಶಗಳು, ಸಾರಿಗೆ ಕೇಂದ್ರಗಳು, ಮಳಿಗೆಗಳ ಸಮೀಪದಲ್ಲಿ ಬೀಡುಬಿಟ್ಟಿರುತ್ತವೆ. ತಮಗೆ ಮೀಸಲಾದ ಸ್ಟಾಲ್ ಗಳ ಬಳಿಯಲ್ಲಿಯೇ ಟೇಬಲ್ ಹಾಗೂ ಕುರ್ಚಿಗಳನ್ನು ಒದಗಿಸಲಾಗುತ್ತದೆ. ಬೀದಿ – ಬೀದಿಗಳಲ್ಲಿ ಆಹಾರದ ಗಾಡಿಗಳನ್ನು ತಪ್ಪಿಸುವ ಸಲುವಾಗಿ ಒಂದೇ ನಿಲ್ದಾಣದಲ್ಲಿ ಎಲ್ಲ ಬಗೆಯ ತಿಂಡಿ – ತಿನಿಸುಗಳನ್ನು ದೊರೆಯುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕಾನೂನು ಕೂಡ ಹೌದು. ಉತ್ತಮ ಗುಣಮಟ್ಟದ ಆಹಾರ, ಸ್ವಚ್ಛತೆ, ಜನರ ಮೆಚ್ಚುಗೆ ಗಳಿಸಿದ ಸ್ಟಾಲ್ ಗಳಿಗೆ ಪ್ರಶಸ್ತಿಗಳನ್ನು ನೀಡುವ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಮಾಣ ಹಾಗೂ ರುಚಿ ರುಚಿಯಾದ ಆಹಾರಗಳು ಸಿಗೋದು ಈ ಹಾಕರ್ ಸೆಂಟರ್ ಗಳಲ್ಲಿ. ವೆಜ್ ಐಟಮ್ ಕೇಳಿದ್ರೆ ಇವರ ಪ್ರಕಾರ ಬೇಯಿಸಿದ ತರಕಾರಿ ಮಾತ್ರ. ಫೋರ್ಕ್ ಹಿಡಿದು ಬಗೆಯ ಬಗೆಯ  ತಿನಿಸುಗಳ ಸೇವನೆಯನ್ನು ನೋಡಿದ್ದು ಬಿಟ್ರೆ, ನಮಗಂತೂ ಈ ಸೆಂಟರ್ ಗಳಲ್ಲಿ ಕೂತು ತಿನ್ನುವ  ಭಾಗ್ಯನೇ ಒದಗಿಲ್ಲ.

ನಮ್ಮಲ್ಲಿ ಅನ್ನದ ಬಳಕೆ ಹೆಚ್ಚು, ಸಾಂಬರು – ಪಲ್ಯಗಳು ಬೌಲ್ ಗಳಿಗೆ ಸೀಮಿತ.  ಚೀನೀಯರು ಇದಕ್ಕೆ ತದ್ವಿರುದ್ಧ. ನಾವು ಬಳಸುವ ಸಾಂಬಾರಿನ ಪ್ರಮಾಣ, ಅವರು ತಿನ್ನುವ ಅನ್ನಕ್ಕೆ ಸಮ. ಉಳಿದಿದ್ದು ಸೂಪ್ ಗಳು, ಅರೆಬೆಂದ ಪದಾರ್ಥಗಳು ಅವರ ಮೈನ್ ಡಿಶ್. ಭಾರತೀಯರಿಗಿಂತಲೂ ಹೆಚ್ಚು ಫ್ಯಾಟ್ ಫುಡ್ ತಿನ್ನೋರು ಇವರು. ಆದರೆ ಇವರ ದೇಹದ ಆಕೃತಿ ಮಾತ್ರ ಜ಼ಿರೋ ಸೈಜ಼್. ಸ್ಲಿಮ್ ಅಂಡ್ ಟ್ರಿಮ್. ಇವರ ಸೀಕ್ರೆಟ್ ಏನಪ್ಪಾ ಅಂದ್ರೆ, ಬೆಳಿಗ್ಗೆ ೮ ಗಂಟೆಗೆ ಉಪಾಹಾರ, ಮಧ್ಯಾಹ್ನ ೧೨ ಗಂಟೆಗೆ ಊಟ, ಸಂಜೆ ೫ ಗಂಟೆಗೆ ಡಿನ್ನರ್ , ರಾತ್ರಿಯ ವೇಳೆ ಸರಳವಾದ ಸಪ್ಪರ್.  ತುಂಬಾ ಕ್ರಮಬದ್ಧವಾದ  ಆಹಾರ ಪದ್ಧತಿ. ನಾನು ತುಂಬಾ ಇಷ್ಟ ಪಡುವ ವಿಚಾರಗಳಲ್ಲಿ ಇದು ಒಂದು.  ೯೦ ವಯಸ್ಸಿನವರು ಕೂಡ ತಮ್ಮ ಕೆಲಸವನ್ನು ತಾವೇ ಮಾಡುವಷ್ಟು ಸಮರ್ಥರಾಗಿರುತ್ತಾರೆ. ಇಲ್ಲಿನ ಜನರ ಜೀವಿತಾವಧಿಯೂ ಹೆಚ್ಚು.

ಸಿಂಗಾಪುರದ ಪಾಕಪದ್ಧತಿಯು ವೈವಿಧ್ಯತೆಯಿಂದ ಕೂಡಿದೆ. ಹಲವಾರು ಜನಾಂಗೀಯ ಗುಂಪುಗಳ ಆಹಾರದ ಶೈಲಿಯ ಮಿಶ್ರಣ ಇಲ್ಲಿ ಕಾಣಬಹುದು. ಮಲಯ್, ಇಂಡೊನೇಷಿಯಾ, ಭಾರತೀಯರು, ಚೀನಿಯರ ಅಡುಗೆಗಳ ರುಚಿ ಪ್ರಮುಖವಾದುದು. ಇಲ್ಲಿ ಆಹಾರ ಸೇವನೆ ಎಂಬುದು ವಿನೋದಕ್ಕಾಗಿಯೂ ಹಾಗೂ ಗೀಳು ಎಂಬ ಅರ್ಥದ ಮೂಲಕ ಸಿಂಗಾಪುರದ ಸಾಹಿತ್ಯದಲ್ಲಿ ಪರಿಗಣಿಸಲಾಗಿದೆ. ಅಲ್ಲದೆ ಆಹಾರಕ್ಕೆ ಸಂಬಂಧಿಸಿದ ವಿಚಾರವೂ ಕೂಡ ಇವರ ಪ್ರಮುಖ ಸಂಭಾಷಣೆಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ.

ಹೊಸ  ವ್ಯಕ್ತಿಗಳನ್ನು ಭೇಟಿ ಆಗೋ ಇಲ್ಲಿನ ಬಹುತೇಕ ಜನರು, ” ಏನಾದ್ರೂ ತಿಂದ್ರಾ..? ” ಅನ್ನೋ ವಾಕ್ಯ ಕೇಳಲು ಮಾತ್ರ ಮರೆಯೋದಿಲ್ಲ.

ಸಿಂಗಾಪುರ “ಸೀ ಫು ಡ್ ಗೆ ಫೇಮಸ್.  ಚಿಲ್ಲಿ ಕ್ರ್ಯಾಬ್, ಮತ್ತು ಬ್ಲ್ಯಾಕ್ ಪೆಪರ್ ಕ್ರ್ಯಾಬ್ಸ್ ಸಾಂಬಲ್ ಸ್ಟಿಂಗ್ರೇ ಇಲ್ಲಿನ ಪ್ರಮುಖ ಭಕ್ಷ್ಯಗಳಾಗಿವೆ. ಅದರಲ್ಲೂ ನೂಡಲ್ಸ್ ಗಳು , ಹೈನಾನೀಸ್ ಚಿಕನ್ ರೈಸ್ ಅತ್ಯಂತ ಜನಪ್ರಿಯ.

ಸಿಎನ್ಎನ್ ಇಂಟರ್ನ್ಯಾಷನಲ್ ನಡೆಸಿದ  ಸಮೀಕ್ಷೆಯಲ್ಲಿ ಇಲ್ಲಿ ತಯಾರಿಸುವ ನಾಲ್ಕು ಭಕ್ಷ್ಯಗಳು ವಿಶ್ವದ 50 ಅತ್ಯಂತ ರುಚಿಯಾದ ಆಹಾರಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಹೈನಾನೀಸ್ ಚಿಕನ್ ರೈಸ್, ಚಿಲಿ ಕ್ರ್ಯಾಬ್, ಕಟಾಂಗ್ ಲಕ್ಷಾ, ಮತ್ತು ರೋಟಿ ಪರಾಟ. ಸಿಂಗಪುರ್ ಪ್ರವಾಸೋದ್ಯಮ ಮಂಡಳಿಯ ಕೂಡ ಇಲ್ಲಿನ ಪಾಕಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾ ಬಂದಿದೆ.  ಪ್ರತಿ ವರ್ಷ ಜುಲೈನಲ್ಲಿ ಆಹಾರ ಉತ್ಸವ  ನಡೆಯುತ್ತದೆ. ವಿದೇಶಗಳಲ್ಲೂ ಆಹಾರದ ನಿಮಿತ್ತ “ಸಿಂಗಪುರ ದಿನವನ್ನು” ಆಯೋಜಿಸಲಾಗುತ್ತದೆ.

ಹೀಗೆ ಇವನ್ನೆಲ್ಲಾ ತಿನ್ನುವ ಅವಕಾಶ ವಂತೂ ನಮಗೆ ಇಲ್ಲ. ಸಸ್ಯಾಹಾರಿ ರೆಸ್ಟೋರೆಂಟ್ ಮೇಲೆ ಕಣ್ಣಿಡುವ ನಮಗೆ, ಮೊದಲ ಬಾರಿಗೆ  ಸಿಕ್ಕ BBQ ಅವಕಾಶವನ್ನು ಮಿಸ್ ಮಾಡದೇ ಭಾಗಿಯಾಗಿದ್ದು ಆಯಿತು. ಅಂಗಡಿಯಲ್ಲಿ ಸಿಕ್ಕ ಕಲ್ಲಿದ್ದಲು ತಂದು ಬೆಂಕಿ ಮಾಡಿ, ತಯಾರು ಮಾಡಿದ ಎಲ್ಲ ತರಕಾರಿಗಳನ್ನು ಕಡ್ಡಿಗೆ ತೂರಿಸಿ ಬೇಯಿಸಿ ತಿಂದು ಮುಗಿಸುವಷ್ಟೊತ್ತಿಗೆ ರಾತ್ರಿ ೧೧ ಗಂಟೆ. ಒಂದು ಕಡೆ ನಾನ್ ವೆಜ್ ಗ್ರೂಪ್, ಇನ್ನೊಂದು ಕಡೆ ವೆಜ್, ನಳಪಾಕ ಮಾಡಿದ್ದೇ ಮಾಡಿದ್ದು. ತುಂಬಾ ಸುಂದರವಾಗಿ ಡ್ರೆಸ್, ಮೇಕಪ್ ಮಾಡಿ ಬಂದು, ಕೆಂಡ ಊದಿ ಬೆಂಕಿ ಉರಿದಾಗ, ನಮ್ಮೆಲ್ಲರ ಮುಖಗಳು ಮಾತ್ರ ಅದಾಗಲೇ ಕಲ್ಲಿದ್ದಲಿನ ಬಣ್ಣಕ್ಕೆ ತಿರುಗಿತ್ತು..

‍ಲೇಖಕರು avadhi

October 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: