ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕ್ಧಮ್ ಇಷ್ಟವಾಗಿಬಿಡುತ್ತದೆ..

ದಾದಾಪೀರ್ ಜೈಮನ್

ರೇಣುಕಾ ರಮಾನಂದರ ‘ಮೀನುಪೇಟೆಯ ತಿರುವು’ ಓದಿದೆ.

ಪ್ರವಾಸಗಳಲ್ಲಿ ಮಾತ್ರ ಸಮುದ್ರವನ್ನು ನೋಡಿರುವ ಉತ್ತರ ಕರ್ನಾಟಕದ ಬಿಸಿಲು ನಾಡಿನ ನನಗೆ ಅವರ ಕವಿತೆಗಳು ಮುಂದೆಂದಾರೊಮ್ಮೆ ಆಕಡೆ ಹೋದಾಗ ಇನ್ನೊಂಚೂರು ನಿಧಾನವಾಗಿ, ಸಮಾಧಾನವಾಗಿ ಆ ಕಡೆಯ ಭೂಭಾಗ, ಜನ ಮತ್ತು ಬದುಕನ್ನು ಒಳಗೆಬಿಟ್ಟುಕೊಳ್ಳುವ ಲೆನ್ಸ್ ಕೊಟ್ಟುಬಿಡುತ್ತವೆ.

ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸದಲ್ಲಿ ನನಗಿದ್ದ ಬಹುಪಾಲು ಬೆಸ್ಟಿ ಸ್ನೇಹಿತರೆಲ್ಲರೂ ಉತ್ತರ ಕನ್ನಡ ಜಿಲ್ಲೆಯವರೆ. ಕವಿತೆಗಳ ಜಾನಪದ ಸೊಗಡಿನ ಕಾವ್ಯಭಾಷೆ ಮತ್ತೊಮ್ಮೆ ತುಸುವಾದರೂ ನಮ್ಮ ಸ್ನೇಹಿತರೊಂದಿಗಿನ ಒಡನಾಟದ ದಿನಗಳನ್ನು ನೆನಪಿಸಿದವು.

ಪ್ರೀತಿಯ ಕುರಿತಾದ ಕವಿತೆಗಳು ಸಹಜವಾಗಿ ನಮ್ಮನ್ನು ಆವರಿಸುತ್ತವೆ. ಉದಾಹರಣೆಗೆ ಇದೋ ಈ ಸಾಲುಗಳನ್ನೇ ನೋಡಿ ‘ಹೇಳಿದೆನಲ್ಲ/ ಹೇಳುವುದು ಬೇಡ/ ನಿನ್ನೂರಿನ ಶಂಖದ ಹುಳ/ ಇದನ್ನೆಲ್ಲಾ ನಂಬಲಿಕ್ಕಿಲ್ಲ’

ನೆಟ್ವರ್ಕ್ ಸಿಗದ ಊರಲ್ಲಿ/ ಗುಡ್ಡವೇರಿದರೆ ಮಾತ್ರ ಬರುವ
‘ಟಿವ್’ ಎನ್ನುವ ಒಂದೇ ನೋಟಿಫಿಕೇಶನ್ –
ತುಸು ಹೆಚ್ಚೇ ನಾಚಿಕೊಳ್ಳುತ್ತೇನೆ ನಾನು
ಪ್ರೇಮಿಸಿಯುವರಾದರೆ ಕಲ್ಪಿಸಿಕೊಳ್ಳಿ
ಎಂಥ ಸುಖವಿದೆ ಇದರಲ್ಲಿ
ಪ್ರಾಕ್ಟಿಕಲ್ ಅಲ್ಲದ ಮೈ ಜುಂ ಎನ್ನಿಸುವ
ತಾಜಾ ಹಸಿ ಸುಳ್ಳಿನಂತಹದುರಲ್ಲಿ [ಬಹಳಷ್ಟು ಸಲ ಹೀಗಾಗುತ್ತದೆ]

ಆಗಾಗ
ಮುಟ್ಟಿ ಮುದ್ದಿಸಿ
ನವಿರಾಗಿ ಎದೆಗೊತ್ತಿಕೊಳ್ಳುವ
ಸುಖ ಬೇಕೆನಿಸಿದರೆ
ಮುಗಿಸಬೇಡಿ
ಅರ್ಧ ಬರೆದಿಟ್ಟ ಪ್ರೇಮಕವಿತೆಯನ್ನು [ಮುಗಿಸಬೇಡಿ]

ಇವರ ಕವಿತೆಗಳಲ್ಲಿ ಸ್ತ್ರೀವಾದ ಅವರದೇ ಆದ ರೀತಿಯಲ್ಲಿ; ಅವರೇ ಹೇಳುವಂತೆ ಒಮ್ಮೊಮ್ಮೆ ‘ಹೊಯ್ದಾಡುತ್ತಾ ಅಸಮ್ಮತಿ ಸೂಚಿಸುತ್ತಿವೆ/ ಮೌನವಾಗಿ’ ಒಮ್ಮೊಮ್ಮೆ ಆಕ್ರೋಶಭರಿತವಾಗಿ…

ಅಲ್ಲಿನ ಬಾತ್ರೂಮಿನ ಬಿಳಿ
ಗೋಡೆಗಳು ಅಂಟಿಸಿಕೊಂಡಿವೆ
ತರಹೇವಾರಿ ಹಣೆಯ
ಕೆಂಪು ಬೊಟ್ಟುಗಳನ್ನು
ಅವು ಅವರದ್ದಲ್ಲ; ನನ್ನಂತೆ
ಬಂದು ಹೋದವರು
ಬಿಟ್ಟು ಹೋದವುಗಳು
ಮುಖ ತೊಳೆದಾದ ಮೇಲೆ ಮತ್ತೆ
ಅಂಟಿಸಿಕೊಳ್ಳಬೇಕೆಂಬ ಇರಾದೆಗೆ
ಧಿಕ್ಕಾರ ಕೂಗಿ ಹೇಲುಚ್ಚೆಯ ಕೋಣೆಯೊಳಗೆ
ತೊರೆದು ಹೋದವುಗಳು [ಮೀನುಪೇಟೆಯ ತಿರುವು]

ಕಣ್ಣಲ್ಲಿ ನೀರು
………
ಇವನಿಗೆ ಒಮ್ಮೆಯೂ ಕಾಣದ
ನೀಳ ಬೆರಳಿನ ಉಗುರು ಬಣ್ಣ
ಖಾಯಂ ಮಸುಕಾಗುತ್ತದೆ
ಎಂದು [ಮೀನು ಫ್ರೈ]

ಮಳೆಬಿದ್ದ ಅಂಗಳದಲ್ಲಿ ಪಚಾಪಚಾ /ಕುಣಿದು ಕುಪ್ಪಳಿಸುತ್ತಿದ್ದ /ಅವಳ ಅಂಗಾಲ ಸದ್ದು /ಮುಗ್ಗರಿಸುವ ಸಿಗ್ನಲ್ಗಳಲ್ಲಿ
ನಿತ್ಯ ಪ್ರಯಾಣಿಸುವ ಈ ಬೋಗಿಗಳ/ ಧಡಲ್- ಧಿಡೀಲ್ ಗಳಲ್ಲಿ/ ಇನ್ನೂ ಬದುಕಿರುವುದನ್ನೂ/ ಮರೆಯದೇ ಪ್ರಸ್ತಾಪಿಸಬೇಕು
[ನನಗಾಗಿ ಕಾದಿರುವಂತೆ ಹೇಳಬೇಕು ನೀನು]

ನೆನಪುಗಳ ಮತ್ತೆ ಮತ್ತೆ ಭೇಟಿಯಾಗುವ, ಸಾಕುವ, ಸಿಹಿಕಹಿಗಳನ್ನೆಲ್ಲ ಹದಗೊಳಿಸಿ ಗಿಡನೆಟ್ಟು ಅದನ್ನ ಸಾರ್ಥಕವಾಗಿಸಿ ಅದರ ಹಸಿರಿನೊಂದಿಗೆ ಇವರ ಕವಿತೆಗಳು ಉಸಿರಾಡುತ್ತವೆ. ವರ್ತಮಾನದ ಪಲ್ಲಟಗಳಿಗೆ ತಮ್ಮದೇ ಆದ ರೀತಿಯಲ್ಲಿ ಎದುರುಗೊಳ್ಳುತ್ತೀರಿ. ಅವ್ವ ಮತ್ತು ಬೆಕ್ಕು, ಅವಳ ಗಂಡ, ಭತ್ತದ ಹೊಲ ಇತ್ಯಾದಿ.

ಪ್ರತಿಬಾರಿಯೂ
ಮೊಣಕಾಲುಮಟ ನೀರಿಗಿಳಿದು
ಕುಪ್ಪಳಿಸಿ ಒದ್ದೆಯಾದ ಮೇಲೆ
ಸುಖಾಸುಮ್ಮನೆ ಆಗಾಗ ಬೆವರುವ
ಶರಧಿಯ
ಬೊಗಸೆಯ ಉಪ್ಪುನೀರು ಕುಡಿವ ನನ್ನ ಚಟ
ವ್ಯಾಪಕವಾದದ್ದು ಮತ್ತು
ಅನಾದಿ ಕಾಲದ್ದು [ಹಚ್ಚಿಕೊಂಡ ಸಮುದ್ರ]

ಒಂದು ಬಂಗುಡೆಯದೋ
ಭೂತಾಯಿಯದೋ
ಪಾಪ್ಲೇಟಿನದೋ
ಪ್ರಶ್ನೆ ಅಲ್ಲ ಇದು
ಸಾವಿಗಾಗಿ ಸ್ವಲ್ಪ ವೇಳೆ ಕೇಳುವ
ಒಂದೆರಡು ಪಾಪದ
ಹಸಿಹಸಿ ಮೀನುಗಳ
ಪ್ರಸ್ತುತ ಜೀವದ ಪ್ರಶ್ನೆ
ಅಷ್ಟೇ … [ಪ್ರಸ್ತುತ ಜೀವದ ಪ್ರಶ್ನೆ ಅಷ್ಟೇ … ]

ಛೆ… ಈ ರೆಸ್ಟುರಾಗಳೇಕೆ ಮಾರುತ್ತವೆ
ತಿಂದ ಮೇಲಷ್ಟೇ ರುಚಿ ಬಯಲು ಮಾಡುವ
ಈ ಕೆಟ್ಟ ತಿನಿಸುಗಳನ್ನು… [ನೂರಕ್ಕೆ ನೂರು]

ಮತ್ತೊಂದಿಷ್ಟು ಸಾಲುಗಳು ಯಾವುದೇ ಕಾರಣಗಳಿಲ್ಲದೆ, ಕಾರಣ ಹುಡುಕುವ ಪ್ರಮೇಯವನ್ನೇ ಸೃಷ್ಟಿಸದೆ ಏಕ್ಧಮ್ ಇಷ್ಟವಾಗಿಬಿಡುತ್ತವೆ.

ಲೋಕಲ್ ಟ್ರೇನುಗಳು
ಹರಿದಾಡುವುದಿಲ್ಲ
‘ಚಾಯಾ’ ‘ಚಾಯಾ’ ಉಸುರುವ
ಬಾರೀಕು ಹುಡುಗರು
ಹತ್ತದ ಹೊರತು ಅವಕ್ಕೆ
ಕೂ… ಎನ್ನುವ ಶಕ್ತಿ ಬರುವುದಿಲ್ಲ. [ನನಗಾಗಿ ಕಾದಿರುವಂತೆ ಹೇಳಬೇಕು ನೀನು]

ನಾಳೆ ಬರುವೆನೆಂದು/ ಮೈದಡವಿ ಸಮಾಧಾನಿಸುತ್ತಿದ್ದರೂ/ ತಬ್ಬಿಕೊಂಡು/ ಗೋಗರೆಯುತ್ತಲೇ ಇದೆ/ ಹಚ್ಚಿಕೊಂಡ ಸಮುದ್ರ

ಹೀಗೆ ಹೇಳುತ್ತಲೇ ಹೋಗಬಹುದು… ಇವರ ಕವಿತೆಗಳಲ್ಲಿ ನನಗೆ ಅತಿಪ್ರಿಯವಾದ ಅಂಶವೆಂದರೆ ಮುನ್ನುಡಿಯಲ್ಲೇ ಹೇಳಿದಂತೆ ನೀವು ರೂಪಕಗಳನ್ನು ಮತ್ತು ಪ್ರತಿಮೆಗಳನ್ನು ನಿಮ್ಮ ಸುತ್ತಲ ಬದುಕಿನೊಳಗಿನಿಂದಲೇ ಆರಿಸಿ ಬರೆದು ಆಪ್ತವಾಗಿಸಿಬಿಡುತ್ತಾರೆ.
ಅವರೇ ಹೇಳುವಂತೆ
ಬದುಕಲು ಇನ್ನೇನು ಬೇಕು
ಅಪರೂಪಕ್ಕೆ ಬರೆದ
ಕವಿತೆಯೊಂದು
ವಿಳಾಸವೇ ಗೊತ್ತಿಲ್ಲದ
ಯಾವುದೋ ಹೃದಯದ
ಕರೆಗಂಟೆ ಒತ್ತಿದರೆ
ಅಷ್ಟೇ ಸಾಕು [‘ಸಾಕು’ ಕವಿತೆ ]…

ಆ ಎಲ್ಲಾ ಶಕ್ತಿ ಅವರ ಕವಿತೆಗಳಿಗಿವೆ. ನೀವೂ ಓದಿ.

‍ಲೇಖಕರು avadhi

21 April, 2019

2 Comments

  1. Sangeeta Kalmane

    ಓಹ್! ನಾನೆಂತೂ ಅದೆಷ್ಟು ಸಲ ಓದಿದೆನೋ ಗೊತ್ತಿಲ್ಲ. ಇನ್ನೂ ಆಗಾಗ ಓದುತ್ತಲೇ ಇರುತ್ತೇನೆ. ಬರೆಯಲು ನಂಗೊಂಥರಾ ಸ್ಪೂರ್ತಿ. ನನ್ನಮ್ಮನಷ್ಟೇ ಪ್ರೀತಿಯಾಗಿಬಿಟ್ಟಿವೆ ಅವರ ಕವಿತೆಗಳು.

    • ರೇಣುಕಾ ರಮಾನಂದ

      ಗೀತಕ್ಕ..ಏನು ಹೇಳಲಿ ನಿಮ್ಮ ಪ್ರೀತಿಗೆ..ನೀವು ನನ್ನಮ್ಮ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading