ಎ ಸ್ಟೋರಿ ಎಬೌಟ್ ನಥಿಂಗ್..

“Write a story about Nothing” ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುವ ಭಾಷಾ ಪ್ರೊಫೆಸರ್ ಒಬ್ಬರು ಆ ದಿನ ತರಗತಿಗೆ ಪ್ರವೇಶಿಸುತ್ತಿದಂತೆಯೇ ಬೋರ್ಡ್ ಮೇಲೆ ಬರೆದರು. ಕ್ಲಾಸ್ ರೂಂ ನ್ನು ಒಂದು ಲ್ಯಾಬೋರೇಟರಿ ಎಂಬಂತೆ ಭಾವಿಸುವ ಅತೀ ವಿರಳ ಭಾಷಾತಜ್ಞರಲ್ಲಿ ಒಬ್ಬರಾಗಿದ್ದ ಆ ಪ್ರೊಫೆಸರ್, ಈ ಹಿಂದೆಯೂ ಇಂತಹದ್ದೇ ಅನೇಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ  ಮನಸ್ಸುಗಳನ್ನು ಜಾಗೃತವಾಗಿಟ್ಟವರು. ಹಾಗಾಗಿ ಅವರು ಈ ವಾಕ್ಯವನ್ನು ಬೋರ್ಡ್ ಮೇಲೆ ಬರೆದಾಗ ಯಾರೊಬ್ಬರೂ ಅದನ್ನು ಗೇಲಿ ಮಾಡುವುದಾಗಲೀ, ತಿರಸ್ಕಾರ ಮಾಡುವುದಾಗಲೀ‌ ಅಸಂಭವವಾಗಿತ್ತು.

ವಿದ್ಯಾರ್ಥಿಗಳಲ್ಲಿ ಕೆಲವರು ಇದೊಂದು ತಮಾಷೆಯ ಸಂಗತಿ, ಪ್ರೊಫೆಸರ್ ಇದರ ಹಿಂದೆ ಯಾವುದೇ ಗಹನವಾದ ಉದ್ದೇಶ ಹೊಂದಿರಲಾರರು ಎಂದು ಮಾತಾಡಿಕೊಂಡರು. ಮತ್ತೆ ಕೆಲವರು ಪ್ರೊಫೆಸರ್ ಈ ವಾಕ್ಯವನ್ನು ನಮ್ಮನ್ನೆಲ್ಲ ಪರೀಕ್ಷಿಸಲು, ನಮ್ಮ ಬೌದ್ದಿಕ ಮಟ್ಟ ಪರೀಕ್ಷಿಸಲು ಕೊಟ್ಟಿರಬಹುದು ಎಂದು ಗಂಭೀರವಾಗಿ ಪರಿಗಣಿಸಿದರು.ಇನ್ನೂ ಕೆಲವರು ಬಹುಶಃ ಇವತ್ತು ಪ್ರೊಫೆಸರ್ ಪೂರ್ವ ತಯಾರಿ ಮಾಡಿಕೊಂಡು ಬಂದಿಲ್ಲ ಹಾಗಾಗಿ ಏನೋ ಒಂದು ಅಸಂಬದ್ಧ ವಾಕ್ಯ ಕೊಟ್ಟು ಸಮಯ ಕಳೆಯಲೆತ್ನಿಸುತ್ತಿದ್ದಾರೆ ಎಂದೂ ಮಾತಾಡಿಕೊಂಡರು.

ವಿದ್ಯಾರ್ಥಿಗಳು ಈ ಬಗ್ಗೆ ಏನು ಬರೆದಾರೆಂಬ ಕುತೂಹಲವೇ ಇರದಂತೆ ಪ್ರೊಫೆಸರ್ ಒಂದು ಪುಸ್ತಕ ಓದುತ್ತ ಕುಳಿತರು. ಅವರ ಮೇಲಿದ್ದ ಗೌರವಕ್ಕೆ ಪ್ರತಿಯೊಬ್ಬರೂ ಏನೋ ಒಂದು ಬರೆಯಲು ಪ್ರಯತ್ನಿಸಿದರು. ಸದಾ ಸಂಕ್ಷಿಪ್ತತೆಯ ಬಗ್ಗೆ ಅವರು ಮಾತನಾಡುತ್ತಿದ್ದರಿಂದ ವಿದ್ಯಾರ್ಥಿಗಳು ಅತೀ ಚಿಕ್ಕ ಸಾಲುಗಳಲ್ಲಿ ತಮ್ಮ ಕಥೆಗಳನ್ನು ಬರೆಯಲು ಪ್ರಯತ್ನಿಸಿದರು. ತರಗತಿಯ ಸಮಯ ಮುಗಿಯುವಷ್ಟರಲ್ಲಿ ಆ ಪ್ರೊಫೆಸರ್ ಎಲ್ಲರೂ ಬರೆದಿರುವ ಹಾಳೆಗಳನ್ನು ಸಂಗ್ರಹಿಸಿ ಒಂದೊಂದೇ ಹಾಳೆಗಳನ್ನು ತೆಗೆದು ಓದಲಾರಂಭಿಸಿದರು.

*             *                *                   *                  *

“The professor is doing Nothing in the class as he had Nothing to teach today”  ಎಂಬ ಬರಹವಿದ್ದ ಹಾಳೆಯನ್ನು ಓದಿದ ಪ್ರೊಫೆಸರ್, ‌ತಾವು ನಗುತ್ತಲೇ ಎಲ್ಲರ ನಗುವನ್ನು ಆಸ್ವಾದಿಸಿದರು.

She said to him , “There’s nothing between you and me as you think” ಎಂಬ ಸಾಲುಗಳನ್ನು ಓದಿ, ಅದರಲ್ಲಿರಬಹುದಾದ ದೀರ್ಘ ಕಥೆಯೊಂದನ್ನು ನೆನೆದರು.

“Nothing comes of nothing” ಎಂಬ ಕಿಂಗ್ ಲಿಯರ್ ನಾಟಕದ ಡೈಲಾಗ್ ನ್ನೇ ಬರದುಕೊಟ್ಟಿದ್ದನೊಬ್ಬ


” There remains nothing after a war” ಎಂದು ಬರೆದವನೊಬ್ಬ ತಾನು ಓದಿದ ಎಲ್ಲಾ ವಾರ್ ಪೊಯೆಟ್ ಗಳ ಪ್ರತಿನಿಧಿಯಂತೆ ಕಂಡ.

” We are poor mortals, nothing else” ಎಂಬ ಫಿಲಾಸಫಿಕಲ್ ಸಾಲು ಬರೆದವನು ವೇದಾಂತಿಯಂತೆ ಭಾಸವಾದ.

‘ He had nothing in his pants’ ಎಂಬ ಪೋಲಿ ವಾಕ್ಯ ಓದಿದಾಗ ಎಲ್ಲರೂ ಗೊಳ್ಳೆಂದು ನಕ್ಕರು.

” There is nothing to lose in this world as nobody has won anything ” ಎಂಬ ಕನ್ ಫ್ಯೂಸಿಂಗ್ ಲೈನ್ ಬರೆದವನೊಬ್ಬ ಇದ್ದ.

” Nothing is permanent ” ಎಂಬ ಕ್ಲೀಷೆಗೊಳಗಾದ ವಾಕ್ಯವೂ ಅದರಲ್ಲಿತ್ತು.

” I can do Nothing ” ಎಂಬ ವಿರೋಧಾಭಾಸದ ಹೇಳಿಕೆ ಬರೆದವನ ಜಾಣ್ಮೆಯೂ ಪ್ರೊಫೆಸರ್ ಗೆ ನಗು ತಂದಿತು.

” It is difficult to write anything about Nothing ”  ಎಂಬ ಡಿಪ್ಲೊಮ್ಯಾಟಿಕ್ ಆದ ಸಾಲು ಕಂಡು ಇರಿಸುಮುರಿಸು ಉಂಟಾಗಿದ್ದು ನಿಜ.

” We pay taxes and the government does nothing about it ” ಎಂದು ಬರೆದವನಲ್ಲಿ ಪ್ರತಿರೋಧವಿತ್ತು.

” He understood nothing in her speech as he was trying to read her lips ” ಎಂಬ ತುಂಟ ಸಾಲೂ ಅದರಲ್ಲೊಂದು.

” In the beginning there was nothing and in the end there will be nothing ” ಎಂಬ ಸಾಲು ಓದಿದ ಪ್ರೊಫೆಸರ್, ಅಷ್ಟಕ್ಕೇ ಓದುವುದನ್ನು ನಿಲ್ಲಿಸಿ ಉಳಿದವುಗಳನ್ನು ತಾವೊಬ್ಬರೇ ಓದಿ ಅತ್ಯುತ್ತಮ ಕಥೆಯೊಂದಕ್ಕೆ ಘಟಿಕೋತ್ಸವದ ಸಂದರ್ಭದಲ್ಲಿ ಬಹುಮಾನ ಘೋಷಿಸುವುದಾಗಿಯೂ ತಿಳಿಸಿ ಹೊರಡುವುದರಲ್ಲಿದ್ದರು. ಆಗಲೇ ಒಬ್ಬ ವಿದ್ಯಾರ್ಥಿ ಎದ್ದು ನಿಂತು ‘ ನಾನು ಏನನ್ನೂ ಬರೆದುಕೊಟ್ಟಿಲ್ಲ‌ ಸರ್. ನನಗೆ ಸಮಯಾವಕಾಶ ಕೊಡಿ ಒಂದೆರೆಡು ದಿನಗಳಲ್ಲಿ ಬರೆದುಕೊಡುತ್ತೇನೆ ‘ ಎಂದು ವಿನಂತಿಸಿಕೊಂಡ. ತರಗತಿಯಲ್ಲಿರುವವರೆಲ್ಲ ನಕ್ಕರು. ಪ್ರೊಫೆಸರ್ ಮಾತ್ರ ಅವನನ್ನು ನೋಡಿ  ‘ಆಗಲಿ. ನಿಮ್ಮ ಕಥೆಗಾಗಿ ಕಾಯುತ್ತೇನೆ ‘ ಎಂದು ಹೇಳಿ ಹೊರಟುಹೋದರು.

ಇದಾಗಿ ಒಂದು ವಾರವಾದರೂ ಅವನಿಂದ ಕಥೆ ಬರಲಿಲ್ಲ. ಹದಿನೈದು ದಿನವಾದರೂ, ತಿಂಗಳಾದರೂ ಅವನಿಂದ ಯಾವುದೇ ಬರಹ ಬರಲಿಲ್ಲ. ಒಂದು ದಿನ ಕಾರಿಡಾರ್ ನಲ್ಲಿ ಹೋಗುತ್ತಿದ್ದ ಆ ವಿದ್ಯಾರ್ಥಿಯನ್ನು ಕರೆದು ಪ್ರೊಫೆಸರ್ ಕೇಳಿದರು ‘ ನಿಜ ಹೇಳು. ನೀನು ಆ ಬಗ್ಗೆ ಬರೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆಯಾ ?’ ಅದಕ್ಕಾತ ; ‘ ಹೌದು ಸರ್. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಮತ್ತು ಪ್ರತಿ ಕ್ಷಣ ಅದರ ಬಗ್ಗೆ ಯೋಚಿಸುತ್ತಲೇ ಇದ್ದೇನೆ’ ಎಂದು ಹೇಳಿದ.
*             *               *                    *

ಘಟಿಕೋತ್ಸವದ ದಿನ ವೇದಿಕೆಗೆ ಬಂದ ಆ ಪ್ರೊಫೆಸರ್ ಈ ಸ್ಪೆಷಲ್ ಪ್ರೈಸ್‌ ಯಾರಿಗೆ ಬಂದಿದೆ ಎಂಬುದನ್ನು ಘೋಷಿಸಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಕೊನೆಗೂ ಕಥೆಯನ್ನೇ ಬರೆದು ಕೊಡದ ಆ ವಿದ್ಯಾರ್ಥಿಗೆ ಬಹುಮಾನ ಸಲ್ಲುತ್ತದೆ ಎಂದು ಪ್ರೊಫೆಸರ್ ಘೋಷಿಸಿದರು. ಅವನಿಗೂ ಅದು ಆಶ್ಚರ್ಯವೇ ಆಗಿತ್ತು. ಸಭಾ ಮರ್ಯಾದೆಗೆ ಧಕ್ಕೆ ಬಾರದಂತೆ ಸುಮ್ಮನೆ ಹೋಗಿ ಬಹುಮಾನ ಪಡೆದ.

ಕಾರ್ಯಕ್ರಮ ಮುಗಿದ ಮೇಲೆ ಉಳಿದೆಲ್ಲ ವಿದ್ಯಾರ್ಥಿಗಳು ಆ ಪ್ರೊಫೆಸರ್ ಬಳಿ ಹೋಗಿ, ‘ನಾವೆಲ್ಲ ಎಂಥೆಂಥ ಕತೆಗಳನ್ನು ಒಂದೊಂದೇ ಸಾಲಿನಲ್ಲಿ ಬರೆದುಕೊಟ್ಟಿದ್ದೆವು. ಆದರೂ ನಮಗ್ಯಾರಿಗೂ ಬಹುಮಾನ ಏಕೆ ನೀಡಲಿಲ್ಲ ಎಂದು ಕೇಳಿದರು . ಅದಕ್ಕೆ ಆ ಪ್ರೊಫೆಸರ್ ಹೀಗೆ ಹೇಳಿದರು ; “Write a story about Nothing” ಎಂದರೆ Nothing ಎನ್ನುವ ಪದ ಬಳಸಿ ಬರೆಯಬೇಕೆಂದು ನೀವೆಲ್ಲ ತಪ್ಪು ತಿಳಿದುಕೊಂಡಿರಿ” ಹಾಗಾಗಿ ನಿಮ್ಮ ಕಥೆಗಳಾವೂ ನನ್ನ ಸ್ಪರ್ಧೆಯಲ್ಲಿ ಅರ್ಹತೆ ಪಡೆಯಲಿಲ್ಲ. ‘ ಹಾಗಾದರೆ, ನನಗ್ಯಾಕೆ ಬಹುಮಾನ ನೀಡಿದಿರಿ ಸರ್?’ ಅಲ್ಲಿಯೇ ಇದ್ದ ವಿಜೇತ ವಿದ್ಯಾರ್ಥಿ ಕೇಳಿದ. ಆಗ ಪ್ರೊಫೆಸರ್ ಹೇಳಿದರು ; “ಕಥೆ ಬರೆಯಲಿಕ್ಕೇನು ಅಸಂಖ್ಯ ಕಥೆಗಾರರಿದ್ದಾರೆ. ಕಥೆ ಬರೆಯಲಾಗದೆ ಆ ಕಥೆಯನ್ನು ಜೀವಿಸುವವರು ಅತೀ ವಿರಳ” ಎನ್ನುತ್ತಾ ಮುಗ್ಧ ನಗು ಬೀರಿ ಸ್ಟಾಫ್ ರೂಂನತ್ತ ನಡೆದರು.

ಆ ಬಹುಮಾನಿತ ವಿದ್ಯಾರ್ಥಿಗೆ ಇದುವರೆಗೂ ಆ ಬಗ್ಗೆ ಒಂದಕ್ಷರ ಬರೆಯಲಾಗಿಲ್ಲ ಅದೂ ಹತ್ತಾರು ವರ್ಷಗಳ ನಂತರವೂ ಅನ್ನುವುದು ಪ್ರೊಫೆಸರ್ ನ ಹೆಚ್ಚುಗಾರಿಕೆಯನ್ನು ತೋರಿಸುತ್ತೆ.

Nothing ಎಂದರೆ “ಏನೂ ಇಲ್ಲ” ಎಂಬುದನ್ನು ನಂಬುವುದಾದರೂ ಹೇಗೆ  ?

‍ಲೇಖಕರು Avadhi

December 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Dhanyakumar

    Write a story about Nothing, ಓದುತ್ತ ಹೋದಂತೆ ಕತೆ ನಮ್ಮನ್ನು ಎಲ್ಲಿಗೋ ಕೊಂಡೊಯ್ಯುತ್ತದೆ. ಈ ಕತೆ ಹೇಗಿದೆ ಎಂದರೆ ಓದುಗನೇ ತನ್ನ ಮನಸ್ಸಿನಲ್ಲಿ ತನಗೇ ತಿಳಿಯದಂತೆ ಕತೆಯೊಂದರ ಹೋಳವುಹಾಕ ತೊಡಗುತ್ತಾನೆ.‌ ಕತೆ ಮುಕ್ತಾಯ ಓದಿ ಕಕ್ಕಾಬಿಕ್ಕಿಯಾಗುತ್ತಾನೆ.‌ಓಹ್ ಅಂತ್ಯ ಇಷ್ಠೇಯೇ ! ಎನ್ನುವ ಸರದಿ ಅವನದಾಗುತ್ತದೆ.‌
    ಧನ್ಯಕುಮಾರ ಮಿಣಜಗಿ

    ಪ್ರತಿಕ್ರಿಯೆ
  2. Shivakumar mavali R M

    ಧನ್ಯವಾದಗಳು ನಿಮ್ಮ ಓದಿಗೆ ಮತ್ತು ಪ್ರತಿಕ್ರಿಯೆಗೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: