ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ವಿ ಪ್ರಭಾವತಿ ಅವರ ಆತ್ಮಕಥನ ‘ಎನ್ನ ಪಾಡೆನಗಿರಲಿ’

ಮಹೇಶ್ ಕುಂಚಿಗನಲ್

ಕೆಲವೊಂದು ರೀತಿಯ ಪುಸ್ತಕಗಳ ಗುಣವೇ ಅಂತಹದೇನೋ? ಓದಿ ಮುಗಿಸಿದ ನಂತರವೂ ಹಲವು ದಿನಗಳ ಕಾಲ ಅವುಗಳ ಬಿಸಿ ಸ್ವರ್ಶವೂ ಆರುವುದಿಲ್ಲ.. ಕರ್ವಾಲೋ, ಯುಗಾಂತ, ಮಲೆಗಳಲ್ಲಿ ಮದುಮಗಳು ಮೊದಲಾದವುಗಳು ಮೂಡಿಸುವ ಅನುಭೂತಿಯೇ ಬೇರೆ ತೆರನಾದದ್ದು. ಅಂತಹವುಗಳ ಸಾಲಿನಲ್ಲಿ ಇತ್ತೀಚಿಗೆ ನಾನು ಓದಿದ ಎಸ್. ವಿ ಪ್ರಭಾವತಿಯರ ‘ಎನ್ನ ಪಾಡೆನಗಿರಲಿ’ ಎಂಬ ಆತ್ಮಕಥೆ ವಿಶೇಷವಾಗಿ ಕಾಡಿತು..

125 ಪುಟಗಳ ಕೃತಿಯು ಕೇವಲ ಮೂರು ಗಂಟೆಗಳಲ್ಲಿ ಓದಿಸಿಕೊಂಡರೂ ಅದು ಅನುರಣಿಸುವ ನಿವೇದನೆಯು ಸಾವಿರ ಪುಟಗಳ ದರ್ಶನ ಮಾಡಿಸುತ್ತದೆ.. ಹಾಗೆಯೇ ಅಂತರಂಗವನ್ನು ಮೆದುಗೊಳಿಸುತ್ತದೆ..

ನೋವು, ನಲಿವು ನನಗೆ ಅಂದರೆ ಎನ್ನ ಪಾಡೆನಗಿರಲಿ ಎಂದರೂ ಸಹ ಲೇಖಕಿಯು.. ತಮ್ಮ ಭಾವನೆಗಳನ್ನು ಸಾಧರಣೀಕರಣಗೊಳಿಸಿದ್ದಾರೆ.. ಆ ಕೃತಿಯಲ್ಲಿ ನಾವು ಸಹ ಒಂದು ಪಾತ್ರವಾಗಿಬಿಡುತ್ತೇವೆ.. ಕುಗ್ರಾಮದಲ್ಲಿ, ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಹಳ್ಳಿ ಹುಡುಗಿಯೊಬ್ಬಳು ಇಂದು ಇಷ್ಟು ಎತ್ತರಕ್ಕೆ ಸಾಗಿದ ಬಗೆಯನ್ನು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಸುಮಾರು ಐವತ್ತು ಜನರಿದ್ದ ತುಂಬು ಕುಟುಂಬ..ಅಲ್ಲಿನ ಬವಣೆಗಳು, ಸ್ತ್ರೀಯರ ಕುರಿತಾದ ಧೋರಣೆಗಳು.. ಸದಾ ಜಗಳ ಕಾಯುವ ಅಜ್ಜಿ ಮತ್ತು ಅಲ್ಲಿನ ಪರಿಸರ ಅವರನ್ನು ವಿಶೇಷವಾಗಿ ಪ್ರಭಾವಿಸಿವೆ.. ಬಾಲ್ಯದಲ್ಲೇ ಇದ್ದ ತನ್ನತನ ಅವರಲ್ಲಿ ಓದುವ ಛಲ ಮೂಡಿಸಿರಬಹುದು..

ನಮ್ಮದಲ್ಲದ ಇಂಗ್ಲಿಷ್ ನಲ್ಲಿ ಫೇಲ್ ಆದ ನಂತರ ಗಮನವಿಟ್ಟು ಓದಿ ಪಾಸ್ ಆಗಿದ್ದು‌. ಕಾಡುವ ಯೌವನ ಅದು ಓದಿಗೆ ಉಂಟು ಮಾಡಿದ ತೊಡಕು.. ಓರಗೆಯವರ ಆಕರ್ಷಣೆ.. ಈ ಹಸಿ ಹಸಿ ಅಂಶಗಳನ್ನು ಕೂಡ ದಾಖಲಿಸಿದ್ದಾರೆ.. ಪುರುಷ ದಾಖಲಿಸಲು ಹಿಂದೇಟು ಹಾಕಿರುವಾಗ ಇಂತಹ ಅಂಶಗಳನ್ನು ಸಂಪ್ರದಾಯಸ್ಥ ಹೆಣ್ಣು ಮಗಳು ದಾಖಲಿಸಲು ಎದೆಗಾರಿಕೆ ಬೇಕು… ಅದು ಈ ಕೃತಿಯಲ್ಲಿ ಸಾಕಾರವಾಗಿದೆ..

ಬಹುತೇಕರ ಬಗ್ಗೆ ನಿರ್ಭಾವುಕತೆ ತೋರುವ ಲೇಖಕಿ ಪುರುಷನೇ ಆಗಿರುವ ತಮ್ಮ ತಂದೆಯನ್ನು ಮೆಚ್ಚುವುದು ಆಸರೆಯ ಆಪ್ತತೆ ಮೂಡಿಸುತ್ತವೆ.. ಇಷ್ಟು ದೊಡ್ಡ ಲೇಖಕಿ ಆಗಿ ಬೆಳೆದ ನಂತರವೂ ಲೇಖನ ತಿರಸ್ಕರಿಸುವ, ಪ್ರಕಟಿಸದ ಪತ್ರಿಕಾ ರಾಜಕಾರಣ ಬೆರಗು ಮೂಡಿಸುತ್ತದೆ..

ಪ್ರಭಾವತಿಯವರು ತಮ್ಮ ಆತ್ಮಕಥೆಯಲ್ಲಿ ಪುರಾಣದ ಅಂತೆ ಕಂತೆ ಹೇಳದೆ ಸಮಕಾಲೀನ ಸಾಹಿತ್ಯ, ರಾಜಕೀಯ.ಭಾಷಾ ಸಮಸ್ಯೆ.. ಕನ್ನಡ ಮೇಸ್ಟ್ರು ಹೇಗೆ ಪಾಠ ಮಾಡಬೇಕು ಸಲಹೆಗಳು ಹೀಗೆ ಹಲವು ಹತ್ತಾರು ಸಂಗತಿಗಳು ಇಲ್ಲಿವೆ.. ಸಂಸ್ಕ್ರತಿಯ ಅಂತಸತ್ವ ಕೆದಕುವಂತಹ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.. ವಿವೇಕ ಹೀನರ ಕಣ್ಣಿಗೆ ಬಿದ್ದಿದ್ದರೆ ಇಷ್ಟೊತ್ತಿಗೆ ಕೃತಿ ಭಾರಿ ಸದ್ದು ಮಾಡುತ್ತಿತ್ತು ನಿಷೇಧಕ್ಕೆ ಒಳಗಾಗುತಿತ್ತೇನೋ.. ಬಸವಣ್ಣ ಐಕ್ಯರಾಗಲಿಲ್ಲ..ಕೊಲೆ ಆದರೂ ಅಥವಾ ಕೈಕಾಲು ಕಟ್ಟಿ ಕಪ್ಪಡಿಗೆ ಎಸೆದಿರಬಹುದು.. ಅಕ್ಕನದೂ ಅಷ್ಟೇ ಉಪವಾಸದಿಂದ ಆತ್ಮಹತ್ಯೆ ಮಾಡಿಕೊಂಡಲೆಂದೆ ಎಂದು ಅರ್ಥ.

ಪಂಚ ಪತಿವ್ರತೆಯರಾದ ಅಹಲ್ಯೆ ಇಂದ್ರನನ್ನು ಬಯಸಿದಳು. ದ್ರೌಪದಿಗೆ ಕರ್ಣನ ಮೇಲೆ ಮೋಹ ಇತ್ತು..ತಾರ ಸುಗ್ರೀವ, ವಾಲಿ ಇಬ್ಬರ ಜೊತೆಯು ಇದ್ದಳು ಹೀಗೆ ಹತ್ತು ಹಲವು ಬಾಯಿಯ ಮೇಲೆ ಬೆರಳಿಡುವಂತಹ ವಿಚಾರಗಳಿವೆ.. ಅವುಗಳಿಗಾಗಿ ಕೃತಿ ಓದಲೆಬೇಕು.

ಈ ಕೃತಿ ಓದುವುದಕ್ಕಿಂತ ಮುಂಚೆ ಸ್ತ್ರೀವಾದ ಎಂದರೆ ಪುರುಷನ ವಿರುದ್ಧವಾದ ಪ್ರತಿಭಟನೆ..ರೋಷ ಎಂಬ ಭಾವವಿತ್ತು..ಇದು ನನ್ನ ಮನಸ್ಸಿನ ಪರಿಭಾಷೆಗೆ ಹೊಸ ವ್ಯಾಖ್ಯಾನ ನೀಡಿತು.. ಸ್ತ್ರೀವಾದವೆಂದರೆ ಪುರುಷನಂತೆ ಬಿಗುಮಾನವಿಲ್ಲದೆ,, ಧೈರ್ಯ ವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು..

ಪುಸ್ತಕ ಹಿಡಿದರೆ ಕೆಳಗಿಡಲಾಗದಂತಹ ಬಿಗಿ ಕೃತಿಯಲ್ಲಿದೆ.. ಪುಸ್ತಕ ಲೇಖಕಿಯ ಜೀವನ ಒಂದೇ ಹೇಳದೆ ಗತಿಸಿದ ಕಾಲಘಟ್ಟವೊಂದರ ಸಮೃದ್ಧವಾದ ಬದುಕನ್ನು ದಾಖಲಿಸುತ್ತದೆ.. ಸಾಹಿತ್ಯದ ಕುರಿತು ಆಸಕ್ತಿ ಇರುವ ಬಹುತೇಕರೆಲ್ಲಾ ಓದಲೇ ಬೇಕಾದ ಪುಸ್ತಕ… ಪ್ರಭಾವತಿಯಂತಯ ಪಕ್ವ ಲೇಖಕಿಯನ್ನು ವಿಮರ್ಶಾ ವಲಯ ..ಸರ್ಕಾರ..ಗೌರವ ನೀಡುವಂತಹ ಸಂಘ ಸಂಸ್ಥೆಗಳು ಗಮನಿಸದೆ ಇರುವುದು ಖೇದ ಬೇಸರ ತರಿಸುತ್ತವೆ..

ಪ್ರತಿಗಳಿಗೆ ಸಂಪರ್ಕ: 98440 48406

‍ಲೇಖಕರು Admin

28 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading