ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡಕ್ಕೆ ನಡೆದು ಬಂದ ಭಗತ್ ಸಿಂಗ್

ಎಸ್ ದಿವಾಕರ್

ಪ್ರಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಈ ಕೃತಿ ಹಲವು ವರ್ಷಗಳ ಸಂಶೋಧನೆಯ ಫಲ. ಅವರು ಈ ಕೃತಿಗೆಂದೇ ಅನೇಕ ಐತಿಹಾಸಿಕ ದಾಖಲೆಗಳನ್ನು, ಕಾಗದ ಪತ್ರಗಳನ್ನು ಪರಿಶೋಧಿಸಿದ್ದುಂಟು, ಆ ಕಾಲದ ಹಲವರನ್ನು ಸಂದರ್ಶಿಸಿದ್ದುಂಟು. ಹಾಗಾಗಿ ಭಗತ್ ಸಿಂಗನನ್ನು ಕುರಿತು ಇದುವರೆಗೆ ಪ್ರಕಟವಾಗಿರುವ ಕೃತಿಗಳಿಗಿಂತ ತೀರ ಭಿನ್ನವಾಗಿರುವ ಈ ಕೃತಿ ಅವನ ವ್ಯಕ್ತಿತ್ವವನ್ನು ಹೊಸ ಬೆಳಕಿನಲ್ಲಿ ಶೋಧಿಸುವ ಮೂಲಕ ಸ್ವತಃ ಒಂದು ಅಪರೂಪದ ಅಧಿಕೃತ ದಾಖಲೆಯೆನಿಸಿದೆ. (ಬೆನ್ನುಡಿ)

ಈ ಪುಸ್ತಕವನ್ನು ಕನ್ನಡದ ಹಿರಿಯ ಕತೆಗಾರರೂ, ವಿಮರ್ಶಕರೂ ಆದ ಎಸ್ ದಿವಾಕರ್ ಅವರು ಕನ್ನಡಕ್ಕೆ ತಂದಿದ್ದಾರೆ.

ವಸಂತ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.

ಪುಸ್ತಕದ ಬೆಲೆ ೧೫೦/-

ಈ ಪುಸ್ತಕದ ಒಂದು ಅಧ್ಯಾಯ ನಿಮಗಾಗಿ.

ಲಾಹೋರ್ ಸೆಂಟ್ರಲ್ ಜೈಲಿನಲ್ಲಿ 1931ರ ಮಾರ್ಚ್ 23 ಪ್ರಾರಂಭವಾದದ್ದು ಬೇರೆ ಯಾವುದೇ ದಿನದಂತೆ. ಎಂದಿನಂತೆಯೇ ಅಂದು ಬೆಳಗ್ಗೆ ಕೂಡ ರಾಜಕೀಯ ಕೈದಿಗಳನ್ನು ಅವರ ಕೋಣೆಗಳಿಂದ ಹೊರಗೆ ಬಿಡಲಾಯಿತು. ಸಾಮಾನ್ಯವಾಗಿ ಹಗಲೆಲ್ಲ ಹೊರಗೆ ಬಿಟ್ಟಿರುತ್ತಿದ್ದ ಕೈದಿಗಳನ್ನು ಹೊತ್ತು ಮುಳುಗಿದ ಮೇಲೆ ಕೋಣೆಯೊಗೆ ದೂಡಿ ಬೀಗಹಾಕುವುದು ರೂಢಿ. ಹಾಗಾಗಿ ಅಂದು ವಾರ್ಡನ್ ಚರತ್ ಸಿಂಗ್ ಮಧ್ಯಾಹ್ನ ನಾಲ್ಕು ಗಂಟೆಗೆ ಕಾಣಿಸಿಕೊಂಡವನು ಎಲ್ಲರೂ ತಮ್ಮ ತಮ್ಮ ಕೋಣೆಗಳಿಗೆ ಹಿಂತಿರುಗಬೇಕೆಂದು ಹೇಳಿದಾಗ ಕೈದಿಗಳಿಗೆ ಆಶ್ಚರ್ಯ. ಅವರೆಲ್ಲ ಒಮ್ಮೊಮ್ಮೆ ವಾರ್ಡನ್ ಮೆಲ್ಲಗೆ ಗದರಿಕೊಂಡರೂ ಕಿವಿಗೊಡದೆ ಕತ್ತಲಾದ ಮೇಲೆ ಕೂಡ ಹೊರಗೇ ಸುತ್ತಾಡುತ್ತಿದ್ದುದುಂಟು. ಆದರೆ ಈ ಬಾರಿ ಮಾತ್ರ ಅವನು ಜಗ್ಗಲಿಲ್ಲ. ಯಾಕೆ ಎಂದು ಕೂಡ ಹೇಳದೆ ‘ಮೇಲಿನವರ ಆಜ್ಞೆ’ ಎಂದಷ್ಟೇ ಉಸುರಿದ.

ಕೈದಿಗಳಿಗೆ ಚರತ್ ಸಿಂಗ್ ಎಂದರೆ ಪ್ರೀತಿ. ಅವರು ಅವನನ್ನು ‘ಚರತ್ ಸಿಂಗ್ಜಿ’ ಎಂದೇ ಗೌರವದಿಂದ ಕರೆಯುತ್ತಿದ್ದದ್ದು. ಯಾಕೆಂದರೆ ಅವರ ವಿಷಯದಲ್ಲಿ ಅವನಿಗೆ ಕಾಳಜಿಯಿತ್ತು, ಒಬ್ಬ ತಂದೆಯಲ್ಲಿರಬಹುದಾದ ವಾತ್ಸಲ್ಯವಿತ್ತು. ಕೈದಿಗಳ ಜೊತೆ ಅನುಕಂಪದಿಂದ ವರ್ತಿಸುತ್ತಿದ್ದ ಅವನು ಅವರನ್ನು ಗೋಳುಹುಯ್ದುಕೊಳ್ಳುತ್ತಿರಲಿಲ್ಲ; ಲಾಹೋರ್ ಜೈಲಿನೊಳಕ್ಕೆ ಬ್ರಿಟಿಷರು ನಿಷೇಧಿಸಿದ್ದ ಪುಸ್ತಕಗಳ ಕಳ್ಳಸಾಗಣೆಯಾಗುವುದನ್ನು ನೋಡಿಯೂ ನೋಡದಂತಿರುತ್ತಿದ್ದ. ಅಂಥವನು ಇಷ್ಟು ಬೇಗ ಎಲ್ಲರೂ ಒಳಗೆ ನಡೆಯಿರಿ ಎಂದು ಹೇಳಬೇಕಾದರೆ ಅದಕ್ಕೊಂದು ನಿಜವಾದ ಕಾರಣವೇ ಇರಬೇಕೆಂದು ಪರಸ್ಪರ ಮಾತಾಡಿಕೊಂಡರು ಕೈದಿಗಳು. ಎಲ್ಲರೂ ಒಬ್ಬೊಬ್ಬರಂತೆ ಅವನ ಆಜ್ಞೆ ಪಾಲಿಸಿದರು. ಆದರೇನು, ಅವರಿಗೆ ಕಾತರ. ಮುಂದೇನು ಕಾದಿದೆಯೋ ಎಂದು ಯೋಚಿಸದೆ ಬೇರೆ ದಾರಿಯಿಲ್ಲ. ಕಡೆಗೆ ಬರ್ಕತ್ ಎಂಬ ಸೆರೆಮನೆಯ ಕ್ಷೌರಿಕ ಅಂದು ರಾತ್ರಿಯೇ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರುಗಳನ್ನು ಗಲ್ಲಿಗೇರಿಸಲಿದ್ದಾರೆಂದು ಅವರಿಗೆ ತಿಳಿಸಿದ – ಪಿಸುಮಾತಿನಲ್ಲಿ.

bhagat singhಕೈದಿಗಳು ಕ್ಷೋಭೆಗೊಂಡರು. ಅವರೆಲ್ಲರಿಗೂ ಭಗತ್ ಸಿಂಗ್ ಮತ್ತು ಅವನ ಸಹಚರರು ಸಾಯಲಿದ್ದಾರೆಂದು ಗೊತ್ತಿತ್ತು, ನಿಜ. ಆದರೆ ಆ ಅಂತಿಮ ಕ್ಷಣ ಈಗ ಸನ್ನಿಹಿತವಾಗಿದೆಯೆಂಬ ಸಂಗತಿಯೇ ಅವರನ್ನು ಅಲ್ಲಾಡಿಸಿಬಿಟ್ಟಿತ್ತು. ಅವರು ಭಗತ್ ಸಿಂಗನ ಬಾಚಣಿಗೆ, ಪೆನ್ನು, ಕೈಗಡಿಯಾರ, ಹೀಗೆ ಯಾವುದೇ ವಸ್ತುವನ್ನು – ಯಾವ ತರುಣ ತನ್ನ ಧೈರ್ಯದಿಂದ ಇಡೀ ದೇಶಕ್ಕೆ ಸ್ಫೂರ್ತಿನೀಡಿದ್ದನೋ ಆ ಉಗ್ರ ತರುಣನ ಯಾವುದೇ ವಸ್ತುವನ್ನು – ಕದ್ದು ತರಲಾದೀತೆ ಎಂದು ಬರ್ಕತ್ನನ್ನು ಕೇಳಿದರು. ಅದು ಅವರೆಲ್ಲ ಜೀವನದುದ್ದಕ್ಕೂ ನೆನಪಿಸಿಕೊಳ್ಳ ಬಹುದಾದ ಒಂದು ಅಮೂಲ್ಯ ವಸ್ತುವಾಗುವುದಷ್ಟೆ. ಬರ್ಕತ್, ಭಗತ್ ಸಿಂಗನ ಕೊಠಡಿಗೆ ಹೋಗಿ ಒಂದು ಬಾಚಣಿಗೆಯನ್ನೂ ಒಂದು ಪೆನ್ನನ್ನೂ ತೆಗೆದುಕೊಂಡು ಬಂದ. ಎಲ್ಲ ಹದಿನೇಳು ಮಂದಿ ಕೈದಿಗಳೂ ಅವು ತಮಗೆ ಸೇರಿದುವೆಂದು ಮುಗಿಬಿದ್ದಾಗ ಒಂದು ಚೀಟಿ ಎತ್ತಬೇಕಾಯಿತು. ಆಮೇಲೆ ಎಲ್ಲರೂ ಮೌನ. ಅವರ ಕಣ್ಣುಗಳು ಮಾತ್ರ ಅವರಿದ್ದ ಕೊಠಡಿಗಳ ಹೊರಗಿನ ದಾರಿಯಲ್ಲೇ ನೆಟ್ಟುಕೊಂಡಿದ್ದುವು. ಯಾಕೆಂದರೆ ಭಗತ್ ಸಿಂಗ್ ಆ ದಾರಿಯಲ್ಲೇ ಗಲ್ಲುಗಂಬಕ್ಕೆ ತೆರಳಲಿದ್ದಾನೆಂಬ ನೀರೀಕ್ಷೆ. ಒಮ್ಮೆ ಆ ಕೋಣೆಗಳ ದಾರಿಯಲ್ಲೇ ಭಗತ್ ಸಿಂಗ್ನನ್ನು ಕರೆದೊಯ್ಯುತ್ತಿದ್ದಾಗ ಕಾಂಗ್ರೆಸ್ ಮುಖಂಡ ಭೀಮಸೇನ ಸಾಚಾರ್ ಅವರು ಲಾಹೋರ್ ಪಿತೂರಿ ಕೇಸಿನಲ್ಲಿ ಯಾಕೆ ನೀನು ಮತ್ತು ನಿನ್ನ ಸಹಚರರು ಡಿಫೆಂಡ್ ಮಾಡಿಕೊಳ್ಳಲಿಲ್ಲ ಎಂದು ಕೇಳಿದ್ದುಂಟು.

ಅದಕ್ಕೆ ಭಗತ್ ಸಿಂಗ್ ‘ಕ್ರಾಂತಿಕಾರಿಗಳು ಸಾಯಲೇಬೇಕು. ಯಾಕೆಂದರೆ ಅವರು ಪ್ರತಿನಿಧಿಸುವ ಧ್ಯೇಯ ಬಲಗೊಳ್ಳುವುದಕ್ಕೆ ಅಗತ್ಯವಾದದ್ದು ಆತ್ಮಾರ್ಪಣೆಯೇ ಹೊರತು ನ್ಯಾಯಾಲಯಕ್ಕೆ ಅಪೀಲ್ ಹೋಗುವುದಲ್ಲ’ ಎಂದು ಹೇಳಿದ್ದ.

ಹೆಚ್ಚುಕಡಿಮೆ ಆರು ತಿಂಗಳ ಹಿಂದೆ, ಅಂದರೆ 1930ರ ಅಕ್ಟೋಬರ್ 7ರಂದು, ಬ್ರಿಟಿಷ್ ನ್ಯಾಯಮಂಡಲಿಯಿಂದ ಮರಣದಂಡನೆಗೊಳಗಾಗಿದ್ದ ಭಗತ್ ಸಿಂಗ್ ಲಾಹೋರ್ ಸೆಂಟ್ರಲ್ ಜೈಲಿನ ಎತ್ತರದ ಗೋಡೆಗಳ ಹಿಂದೆ ಚರತ್ ಸಿಂಗ್ಗಾಗಿ ಕಾಯುತ್ತ ಕೂತಿದ್ದ. ಅವರಿಬ್ಬರಿಗೂ ತಮ್ಮ ಸ್ನೇಹ ಅಲ್ಪಾಯು ಎಂದು ತಿಳಿದಿತ್ತು, ನಿಜ. ಆದರೂ ಅವರ ನಡುವೆ ತೀರ ಆಳವಾದ ಸ್ನೇಹವಿತ್ತು. ಒಟ್ಟಿಗಿರುವ ಸಮಯದಲ್ಲಿ ಒಮ್ಮೊಮ್ಮೆ ಇಬ್ಬರೂ ತಮ್ಮ ಮಾತೃಭಾಷೆಯಾದ ಪಂಜಾಬಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಅಂದು ಕಾಲುಗಳಿಗೆ ಸರಪಳಿ ಬಿಗಿದಿದ್ದ ಭಗತ್ ಸಿಂಗ್ ಒಬ್ಬನೇ ತನ್ನ ಕೋಣೆಯಲ್ಲಿ ಕೂತಿದ್ದಾಗ ಅವನಿಗೆ ತನ್ನ ಕಡೆ ನಿಧಾನವಾಗಿ ಬರುತ್ತಿರುವ ಹೆಜ್ಜೆಸದ್ದು ಕೇಳಿಸಿತು. ಸೈನ್ಯದಲ್ಲಿ ಸ್ವಲ್ಪ ಕಾಲ ಹಾಗೂ ಪೊಲೀಸ್ ಪಡೆಯಲ್ಲಿ ದೀರ್ಘಕಾಲ ಸಲ್ಲಿಸಿದ ಸೇವೆ ಚರತ್ ಸಿಂಗನ ಆರೋಗ್ಯದ ಮೇಲೆ ಪರಿಣಾಮ ಬೀರದಿರಲಿಲ್ಲ. ವಯಸ್ಸಿಗೆ ಮುಂಚೆಯೇ ಬೆಳ್ಳಗಾಗಿದ್ದ ಗಡ್ಡದಿಂದಾಗಿ ಅವನು ತುಂಬ ವಯಸ್ಸಾದವನಂತೆ ಕಾಣುತ್ತಿದ್ದ. ಭಗತ್ ಸಿಂಗ್ ತನ್ನಲ್ಲೇ ನಕ್ಕ. ಬದುಕು ಎಷ್ಟು ವಿಚಿತ್ರ ಎಂದುಕೊಂಡ. ಅದು ಅಲ್ಪಾಯುವಾದಷ್ಟೂ ಅದರ ಪ್ರಖರತೆ ಹೆಚ್ಚು.

ಚರತ್ ಸಿಂಗ್ ಕರುಣಾಳು. ಭಗತ್ ಸಿಂಗ್ ಓದಬಯಸಿದ ಎಲ್ಲ ಪುಸ್ತಕಗಳನ್ನೂ ಜೈಲಿನೊಳಕ್ಕೆ ಕದ್ದು ಸಾಗಿಸಲು ಅವಕಾಶಮಾಡಿಕೊಟ್ಟಿದ್ದ. ಸರಕಾರ ನಿಷೇಧಿಸಿದ್ದ, ಬಹುಮಟ್ಟಿಗೆ ಮಾರ್ಕ್ಸ್ ವಾದಿ ಸಾಹಿತ್ಯಕ್ಕೆ ಸಂಬಂಧಿಸಿದ, ಭಗತ್ ಸಿಂಗ್ ಆಸಕ್ತಿಯಿಂದ ಓದಿದ ಪುಸ್ತಕಗಳವು. ಮಾರ್ಕ್ಸ್, ಲೆನಿನ್ ಅಥವಾ ರಷ್ಯಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕ ಬಂದರೂ ಸರಿ, ಅವನು ಅದಕ್ಕಾಗಿ ಮುಗಿಬೀಳುತ್ತಿದ್ದ. ಅವನಿಗಿದ್ದ ರಹಸ್ಯ ಮೂಲ – ಪ್ರಗತಿಪರ ರಾಷ್ಟ್ರೀಯವಾದಿಗಳು ಸ್ಥಾಪಿಸಿದ್ದ ಸ್ಥಳೀಯ ದ್ವಾರಕಾ ದಾಸ್ ಲೈಬ್ರರಿ – ಅವನ ಓದುವ ಹಸಿವನ್ನು ಇಂಗಿಸುವ ಸ್ಥಿತಿಯಲ್ಲಿರಲಿಲ್ಲ. ಅವನ ಪುಸ್ತಕದಾಹ ಅದೆಷ್ಟು ಭಯಂಕರವಾಗಿತ್ತೆಂದರೆ ಒಮ್ಮೆ ತನ್ನ ಶಾಲೆಯ ಸಹಪಾಠಿ ಜಯದೇವ ಗುಪ್ತನಿಗೆ ಕಾಗದ ಬರೆದು ಕಾರ್ಲ್  ಲೀಬ್ನೆಖ್ಟ್ನ ‘ಮಿಲಿಟರಿಸಂ’, ಲೆನಿನ್ನ ‘ಲೆಫ್ಟ್-ವಿಂಗ್ ಕಮ್ಯೂನಿಸಂ’, ಬಟ್ರಂಡ್ ರಸೆಲ್ನ ‘ವೈ ಮೆನ್ ಫೈಟ್’ ಮತ್ತು ಆಪ್ಟನ್ ಸಿಂಕ್ಲೇರ್ನ ಕಾದಂಬರಿ ‘ದಿ ಸ್ಪೈ’ ಎಂಬ ಪುಸ್ತಕಗಳನ್ನು ಲೈಬ್ರರಿಯಿಂದ ಹೊರಗೆ ಕೊಟ್ಟು ತನ್ನ ಸೋದರ ಕುಲಬೀರ್ನ ಮೂಲಕ ಕಳಿಸಿಕೊಡಬೇಕೆಂದು ಕೇಳಿಕೊಂಡಿದ್ದ.

ಚಿಕ್ಕಂದಿನಿಂದಲೂ ಅವನಿಗೆ ಪುಸ್ತಕಗಳೆಂದರೆ ಪ್ರಾಣ. ‘ಅಧ್ಯಯನ ಮಾಡಬೇಕು’ ಎಂಬ ಮಾತು ಸದಾ ಅವನ ಮನಸ್ಸಿನಲ್ಲಿ ಮೊಳಗುತ್ತಿತ್ತು. ಅಧ್ಯಯನ – ವಿರೋಧಿಗಳ ವಾದವನ್ನು ಖಂಡಿಸುವುದಕ್ಕೆ. ಅಧ್ಯಯನ – ತನ್ನ ಪಂಥ ಕ್ರಾಂತಿಯ ಪರ ಯಾಕಿದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ. ಅಧ್ಯಯನ – ಭಾರತಲ್ಲಿರುವ ಅನಾದಿ ಕಾಲದ ವ್ಯವಸ್ಥೆಗಳನ್ನು ಬದಲಾಯಿಸಬಲ್ಲ ಪದ್ಧತಿಗಳನ್ನು ಹುಡುಕಿಕೊಳ್ಳುವುದಕ್ಕೆ. ಭಗತ್ ಸಿಂಗ್ ಮಾರ್ಕ್ಸ್ ವಾದ, ಕಮ್ಯೂನಿಸಂ ಮತ್ತು ಕ್ರಾಂತಿಕಾರಿ ದರ್ಶನಗಳನ್ನು ಸ್ವತಃ ಓದಿ ತಿಳಿದುಕೊಂಡ. ಈ ವ್ಯಾಪಕ ಅಧ್ಯಯನ ಅವನ ಮನಸ್ಸನ್ನು ವಿಸ್ತಾರಗೊಳಿಸಿತು. ಇದೇ ಅವನಿಗೆ ಶಕ್ತಿಯನ್ನೂ ನಂಬಿಕೆಯ ಸ್ಥೈರ್ಯವನ್ನೂ ನೀಡಿತು.

ಅವನು ತೀರ ಕಠೋರವಾದ ಬದುಕಿಗೆ ಹೊಂದಿಕೊಂಡುಬಿಟ್ಟಿದ್ದ. ಅವನಿದ್ದ ನಂ.14ನೇ ಕೋಣೆ ಒಂದು ಕೊಳಚೆಯ ಗುಂಡಿ. ನೆಲದ ಮೇಲೆ ಹುಲ್ಲು, ಒಂದು ಮೂಲೆಯಲ್ಲಿ ನಾರುವ ಕಿಂಡಿ. ಮಲಗಿದರೆ ಐದು ಅಡಿ ಹತ್ತು ಅಂಗುಲ ಉದ್ದವಿದ್ದ ಅವನ ದೇಹಕ್ಕೆ ಸಾಕಾಗದ ಜಾಗ. ಏಕಾಂತದಲ್ಲಿರುವುದನ್ನು ರೂಢಿಮಾಡಿಕೊಂಡಿದ್ದರೂ ಅವನಿಗೆ ಅಸಹನೆ. ಅದಕ್ಕೆ ಕಾರಣ ತನ್ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂಬುದಲ್ಲ, ದೀರ್ಘಕಾಲ ಯಾವುದೇ ಉದ್ದೇಶವಿಲ್ಲದೆ ಕಾಯುತ್ತಿರಬೇಕಲ್ಲ ಎಂಬುದು. ಒಮ್ಮೊಮ್ಮೆ ಬೇಗ ತನ್ನನ್ನು ಗಲ್ಲಿಗೇರಿಸಿ ಬಿಟ್ಟರೆ ಸಾಕು ಎನ್ನಿಸುತ್ತಿದ್ದುದುಂಟು. ಇನ್ನು ಕೆಲವೊಮ್ಮ ಇಪ್ಪತ್ಮೂರು ವರ್ಷಗಳ ತನ್ನ ಬದುಕು ತೀರ ಸಣ್ಣದಾಯಿತು ಎನಿಸುತ್ತಿತ್ತು. ಒಮ್ಮೆ ತಾನು ಸಾಧಿಸಬೇಕೆಂದಿದ್ದುದರಲ್ಲಿ ಸಾವಿರದೊಂದು ಭಾಗವನ್ನು ಕೂಡ ಸಾಧಿಸಲಾಗಲಿಲ್ಲ ಎಂದು ತನ್ನ ಸ್ನೇಹಿತನೊಬ್ಬನಿಗೆ ಬರೆದ. ಇನ್ನೊಮ್ಮೆ, ಅಂದರೆ ತನ್ನ ಸಾವಿಗೆ ಹದಿನೈದು ದಿನಕ್ಕೆ ಮುನ್ನ, ತನ್ನ ಸಹಚರ ಬಿಜಯ್ ಕುಮಾರ್ ಸಿನ್ಹಾಗೆ ಹೀಗೆ ಹೇಳಿದ:

ನನ್ನ ಜೀವ ಉಳಿಸಿದರೆ ಅದೊಂದು ವಿಪತ್ತಿಗೆ ಕಾರಣವಾದೀತು. ನಾನು ನಗುನಗುತ್ತಾ ಸತ್ತರೆ ಭಾರತದ ತಾಯಂದಿರು ತಮ್ಮ ಮಕ್ಕಳಿಗೆ ಭಗತ್ ಸಿಂಗ್ನ ಧ್ಯೇಯವನ್ನು ಅನುಸರಿಸಬೇಕೆಂದು ಹೇಳಬಹುದು; ಅದರ ಪರಿಣಾಮವಾಗಿ ಅದಮ್ಯ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ಅದೆಷ್ಟು ಹೆಚ್ಚಬಹುದೆಂದರೆ ಅದರಿಂದ ಸೈತಾನಿ ಶಕ್ತಿಗಳು ಕ್ರಾಂತಿಯ ಮುನ್ನಡೆಯನ್ನು ತಡೆಗಟ್ಟುವುದೇ ಅಸಾಧ್ಯ…

ಕಾಲ ಮತ್ತು ಅವಕಾಶಗಳ ಹದ್ದಿನಲ್ಲಿದ್ದ ಅವನು ಹವಾಗುಣದ ಬದಲಾವಣೆಯನ್ನು ಗಮನಿಸಲಾಗಲಿಲ್ಲ. ಮೈನಸ್ ಮೂರು ಡಿಗ್ರಿ ಸೆಂಟಿಗ್ರೇಡ್ ಹವೆಯನ್ನು ತಾಳಿಕೊಳ್ಳುವುದಕ್ಕಾಗಿ ಅವನತ್ತ ಹರಿದು ಚಿಂದಿ ಚಿಂದಿಯಾದ ಕಂಬಳಿಯೊಂದನ್ನು ಎಸೆದಾಗ ಮಾತ್ರ ಅವನು ಮಾಗಿಕಾಲ ಚಳಿಗಾಲವಾಗಿ ಮಾರ್ಪಟ್ಟಿತೆಂದು ನೋಡಿದನೆಂದಲ್ಲ, ಗ್ರಹಿಸಿದ, ಎನ್ನಬೇಕು. ಈಗ ಮಾರ್ಚ್ ತಿಂಗಳ ಆಗಮನ ಚಳಿಯನ್ನು ಕಡಿಮೆ ಮಾಡಿತ್ತು. ಗಾಳಿಯಲ್ಲಿ ವಸಂತಾಗಮನದ ಉಸಿರು. ಆದರೆ ಅವನ ಕೋಣೆಗೆ ನೀಡಲಾಗಿದ್ದ ‘ಫಾನ್ಸಿ ಕಿ ಕೋಠಿ’ (ತೂಗುತ್ತಿರುವ ಕೋಣೆ) ಎಂಬ ಹೆಸರಂತೂ ಯಾವುದೇ ಸಂತೋಷದ ವಿಚಾರವನ್ನು ಅಳಿಸಿಹಾಕುವಂತಿತ್ತು.

bhagat singh7ಭಗತ್ ಸಿಂಗ್ಗೆ ತನ್ನ ಫಾಸಿ ಶಿಕ್ಷೆ ದೇಶದ ರಾಜಕೀಯ ಬೆಳವಣಿಗೆಗಳ ಜೊತೆ ತಳಕುಹಾಕಿಕೊಂಡಿದೆ ಎಂದು ಅರಿತುಕೊಳ್ಳುವಷ್ಟು ಸಂವೇದನೆಯಿತ್ತು. 1930ರ ನವೆಂಬರ್ ನಲ್ಲಿ ಲಂಡನ್ನಿನಲ್ಲಿ ಬ್ರಿಟಿಷರು ಸಂಘಟಿಸಿದ ದುಂಡು ಮೇಜಿನ ಪರಿಷತ್ತಿನಲ್ಲಿ ಅವರಿಗೇನೂ ದಕ್ಕಲಿಲ್ಲ. ಅವರು ‘ಸ್ವಯಂ-ಆಡಳಿತ’ಕ್ಕಾಗಿ ಸೀಮಿತ ಅಧಿಕಾರಗಳನ್ನು ನೀಡಬಯಸಿದರೂ ಅದನ್ನು ಯಾರೂ ಒಪ್ಪಿಕೊಳ್ಳಲಿಲ್ಲ. ಭಾರತ ಅಸಂತೃಪ್ತಿಯಲ್ಲಿ ಬೇಯುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯ ಹೋರಾಟ ನಡೆಸಿದ ಕಾಂಗ್ರೆಸ್ ಪಕ್ಷ ಪರಿಷತ್ತನ್ನು ಬಹಿಷ್ಕರಿಸಿತ್ತು. ಇತರ ಪಕ್ಷಗಳೂ ಕಾಂಗ್ರೆಸ್ಸನ್ನು ಅನುಸರಿಸಿದ್ದವು.

ಭಗತ್ ಸಿಂಗ್ ಸಂಧಾನಕ್ಕೆ ವಿರೋಧವಾಗಿರಲಿಲ್ಲ. ಅದೇನೂ ಖಂಡನಾರ್ಹ ವಿಷಯವಲ್ಲ, ರಾಜಕೀಯ ಯುಕ್ತಿಯ ಅನನ್ಯ ಭಾಗ ಎಂದವನು ನಂಬಿದ್ದವನು. ತುಳಿಯುವವರ ವಿರುದ್ಧ ಸಿಡಿದೇಳುವ ಯಾವುದೇ ದೇಶವೂ ಮೊದಮೊದಲು ಸೋಲಲೇಬೇಕು; ಆದರೆ ಅದು ಕ್ರಮೇಣ ಸಂಧಾನದ ಮೂಲಕ ಆಂಶಿಕ ಸುಧಾರಣೆಗಳನ್ನು ಗಳಿಸಿಕೊಂಡೇ ತೀರುತ್ತದೆ. ಭಾರತದ ಕ್ರಾಂತಿಕಾರಿಗಳಿಗೆ ಸ್ಫೂರ್ತಿ ನೀಡಿದ ರಷ್ಯನ್ ಕ್ರಾಂತಿ ಇದಕ್ಕೊಂದು ನಿದರ್ಶನ. 1917ರ ಕ್ರಾಂತಿಯ ನಂತರ ಬೋಲ್ಷೆವಿಕರು ಬ್ರೆಸ್ಟ್- ಲಿತೋವ್ಸ್ಕ್ ಶಾಂತಿ ಒಡಂಬಂಡಿಕೆಗೆ ಸಹಿಮಾಡಬೇಕೆಂದು ಒತ್ತಾಯಿಸಲ್ಪಟ್ಟಾಗ ಲೆನಿನ್ ಒಬ್ಬನನ್ನು ಬಿಟ್ಟು ಎಲ್ಲರೂ ಅದನ್ನು ವಿರೋಧಿಸಿದವರೇ. ‘ಶಾಂತಿ, ಶಾಂತಿ; ಏನೇ ಬಂದರೂ ಶಾಂತಿ’; ಅದಕ್ಕಾಗಿ ಜರ್ಮನ್ ಯುದ್ಧಕೋರರಿಗೆ ಅನೇಕ ರಷ್ಯನ್ ಪ್ರಾಂತ್ಯಗಳನ್ನು ಬಿಟ್ಟುಕೊಡಬೇಕಾಗಿ ಬಂದರೂ ಚಿಂತೆಯಿಲ್ಲ ಎಂದು ಹೇಳಿದ್ದ ಲೆನಿನ್. ಆ ಮಾತು ಖಂಡನೆಗೆ ಗುರಿಯಾದಾಗ ಬೋಲ್ಷೆವಿಕರು ಜರ್ಮನ್ ಆಕ್ರಮಣವನ್ನು ಎದುರಿಸುವ ಸ್ಥಿತಿಯಲ್ಲಿಲ್ಲ ಎಂದವನು ಒಪ್ಪಿಕೊಂಡಿದ್ದ.

ಲಂಡನ್ ಇನ್ನೊಂದು ದುಂಡು ಮೇಜಿನ ಪರಿಷತ್ತಿನ ಮೂಲಕ ಭಾರತೀಯರ ಜೊತೆ ಒಂದು ಬಗೆಯ ಒಪ್ಪಂದಕ್ಕೆ ಬರಲು ಆಸಕ್ತಿ ತೋರಿಸಿದ್ದೇನೋ ಹೌದು. ಆದರೆ ಮಾತುಕತೆ ನಡೆಯುತ್ತಿರುವಾಗ ಅದು ಇಂಗ್ಲೆಂಡಿನ ಮತ್ತು ಭಾರತದ ನಡುವೆ ಭಗತ್ ಸಿಂಗ್ನ ಹೆಣ ಬಿದ್ದಿರುವುದನ್ನು ನೋಡಬಯಸಲಿಲ್ಲ. ಆದ್ದರಿಂದಲೇ ಬ್ರಿಟಿಷರು ಪ್ರಾಥಮಿಕವಾಗಿ ಕಾಂಗ್ರೆಸ್ಸಿನ ಮತ್ತು ಗಾಂಧೀಜಿಯ ಜೊತೆ ಒಂದು ಒಪ್ಪಂದಕ್ಕೆ ಬರಬಲ್ಲ ಎಲ್ಲ ಮಾರ್ಗಗಳನ್ನು ಪರೀಶೀಲಿಸುವವರೆಗೂ ಭಗತ್ ಸಿಂಗ್ನ ನೇಣನ್ನು ತಡೆಹಿಡಿದರು.

ಭಗತ್ ಸಿಂಗ್ನ ದೃಷ್ಟಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವೆಂದರೆ ಅದು ಮೂಲತಃ ಆರ್ಥಿಕ ಸುಧಾರಣೆಗಾಗಿ ನಡೆಸುವ ಹೋರಾಟ. ಸ್ವಾತಂತ್ರ್ಯ ಸುಧಾರಣೆಗೊಂದು ಅವಕಾಶ ಕಲ್ಪಿಸುತ್ತದೆ. ಬಡತನವನ್ನು ನಿರ್ಮೂಲಗೊಳಿಸದ ಸ್ವತಂತ್ರ ಭಾರತ ಕೇವಲ ಹೆಸರಿಗಷ್ಟೇ ಸ್ವತಂತ್ರ. ಭಗತ್ ಸಿಂಗ್ನ ದೃಷ್ಟಿಯಲ್ಲಿ ಒಂದು ಯಥಾಸ್ಥಿತಿ ಇನ್ನೊಂದು ಯಥಾಸ್ಥಿತಿಗೆ ಪರ್ಯಾಯವಲ್ಲ. ಸ್ವಾತಂತ್ರ್ಯ ಹೋರಾಟಗಾರರ ವಂಶಕ್ಕೆ ಸೇರಿದ ಭಗತ್ ಸಿಂಗ್ಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕೆಂಬ ಅದಮ್ಯ ಆಸೆಯಿದ್ದುದು ತೀರ ಸಹಜ. ಆದರೆ ಅವನದು ಜಮೀನುದಾರರ ಕುಟುಂಬ. ಪುಸ್ತಕಗಳ ಮೂಲಕ ಅವನು ಸಾಮಾಜಿಕ ಅಸಮಾನತೆ ಯೆನ್ನುವುದು ಮನುಷ್ಯನೇ ಸೃಷ್ಟಿಸಿದ್ದೆಂದೂ ಅದನ್ನು ಮನುಷ್ಯನೇ ಊರ್ಜಿತಗೊಳಿಸುತ್ತಾನೆಂದೂ ಅರಿತುಕೊಂಡ. ಕಾರ್ಲ್ ಮಾರ್ಕ್ಸ್ ಅವನ ಗುರು. ಆ ಜರ್ಮನ್ ಚಿಂತಕ ಆರ್ಥರ್ ಶಕ್ತಿಯ ಸಮತೋಲನದಲ್ಲಿನ ಬದಲಾವಣೆಯಿದೆಯಲ್ಲ, ಅದೇ ಒಂದು ತಾರ್ಕಿಕ ಆಧಾರವಾಗಿದ್ದು ಮಾನವ ಇತಿಹಾಸದ ಇತರ ಎಲ್ಲ ಬದಲಾವಣೆಗಳೂ ಅದನ್ನೇ ಆಧರಿಸಿವೆ ಎಂದು ಹೇಳಿದ್ದ. ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯಕ್ಕೆ ಏನು ಅರ್ಥ? ಬಡವರು ಬಡವರಾಗಿಯೇ ಉಳಿಯುವಂತಾದರೆ ಅಂಥ ಸ್ವಾತಂತ್ರ್ಯದಿಂದ ಏನು ಪ್ರಯೋಜನ? ಶ್ರೀಮಂತರ ಮತ್ತು ಬಡವರ ನಡುವಣ ಅಸಮಾನತೆ ಕೊನೆಗೊಳ್ಳುವದೆಂತು? ಭಗತ್ ಸಿಂಗ್ಗೆ ಸಮಾಜವಾದಿ ವಿಚಾರಗಳನ್ನು ಗ್ರಹಿಸುವುದೊಂದು ಹೊಸ ಅನುಭವ. ರಾಜಕೀಯ ಇತಿಹಾಸವೆನ್ನುವುದು ವಿಚಾರಗಳ, ಧರ್ಮಗಳ ಇತಿಹಾಸ; ಇತರ ಎಲ್ಲವೂ ಹುಟ್ಟಿರುವುದು ಆರ್ಥಿಕ ಸಂದರ್ಭಗಳ ಗರ್ಭದಲ್ಲೇ. ರಾಜಕೀಯ ಸಿದ್ಧಾಂತ ರಾಜಕೀಯ ವಾಸ್ತವಾಂಶಕ್ಕಿಂತ ಮೊದಲಿನದಲ್ಲ, ಆಮೇಲಿನದು ಎಂಬ ದ್ವಂದ್ವಮಾನ ಭೌತವಾದದ ವಾದವನ್ನು ಅವನು ಹಿಂದೆಂದೂ ಇಷ್ಟು ಆಳವಾಗಿ ಮೆಚ್ಚಿಕೊಂಡಿರಲಿಲ್ಲ. ರಾಜಕೀಯ ಕ್ರಿಯೆಗಳೇ ಉದ್ದೇಶವಲ್ಲ, ಅವು ರಾಜಕೀಯ ಶಕ್ತಿಗಳ ಫಲ ಎಂಬುದನ್ನು ಮಾರ್ಕ್ಸ್ ಅವನಿಗೆ ಮನದಟ್ಟುಮಾಡಿಕೊಟ್ಟಿದ್ದ.

ಒಮ್ಮೆ ಅವನು ತನ್ನ ತಾಯಿ ವಿದ್ಯಾವತಿ ಕೌರ್ಗೆ ಬರೆದದ್ದಿದು:

ಅಮ್ಮಾ, ನನ್ನ ದೇಶ ಒಂದಲ್ಲ ಒಂದು ದಿನ ಸ್ವತಂತ್ರವಾಗುವುದೆಂಬ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಬಿಳಿಯ ಸಾಹೇಬರು ಖಾಲಿ ಮಾಡಿದ ಕುರ್ಚಿಗಳಲ್ಲಿ ಕರಿಯ ಸಾಹೇಬರು ಕುಳಿತುಕೊಳ್ಳುತ್ತಾರೆಂಬ ಭಯ ನನಗೆ.

ಬ್ರಿಟಿಷ್ ಆಳ್ವಿಕೆಯ ಅಂತ್ಯದಿಂದ ಧಣಿಗಳಷ್ಟೇ ಬದಲಾಗುತ್ತಾರೆಂದರೆ ಅದರಿಂದ ಜನತೆಯ ದುರವಸ್ಥೆ ಎಂದಿನಂತೆ ಮುಂದುವರಿಯುವುದೆಂದೇ ನಂಬಿದ್ದವನು ಭಗತ್ ಸಿಂಗ್. ಭಾರತದ ಹಳೆಯ ಕಂದಾಚಾರದ ವ್ಯವಸ್ಥೆ ನಿರ್ಮೂಲಗೊಳ್ಳದಿದ್ದರೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಆ ವ್ಯವಸ್ಥೆಯೇ ಪ್ರಗತಿಯ ದಾರಿಯಲ್ಲಿ ನಿಂತುಬಿಟ್ಟಿದೆ – ಒಂದು ಗೋಡೆಯಂತೆ. ತತ್ವಶಾಸ್ತ್ರಜ್ಞರು ಜಗತ್ತನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದರೂ ಕೂಡ ಅದನ್ನು ಬದಲಾಯಿಸುವುದೇ ನಿಜವಾದ ಗುರಿ. ಕ್ರಾಂತಿಯಷ್ಟೇ ಅದನ್ನು ಸಾಧ್ಯಗೊಳಿಸಬಲ್ಲುದು.

ಭಗತ್ ಸಿಂಗ್ನ ಈ ಚಿಂತನೆ ಅವನೊಬ್ಬನದೇ ಆಗಿರಲಿಲ್ಲ. ಅವನಂತೆಯೇ ನೂರಾರು ಮಂದಿ ಕ್ರಾಂತಿಕಾರಿಗಳು ಒಟ್ಟುಗೂಡಿ ಅವಸಾನದ ಅಂಚಿನಲ್ಲಿದ್ದ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ನನ್ನು (ಎಚ್ಎಸ್ಆರ್ಎ) ಪುನಶ್ಚೇತನಗೊಳಿಸಿದ್ದರು. ಭಗತ್ ಸಿಂಗ್ ಅದಕ್ಕೆ ‘ಸೋಷಿಯಲಿಸ್ಟ್’ ಎಂಬ ಹೆಸರನ್ನು ಸೇರಿಸಿ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂದು ಪುನರ್ನಾಮಕರಣ ಮಾಡಿದ್ದ. ಎಚ್ಎಸ್ಆರ್ಎಯಲ್ಲಿ ಒಂದು ಸಶಸ್ತ್ರ ಶಾಖೆಯೂ ಸೇರಿತ್ತು. ಅದರ ನೇತೃತ್ವ ವಹಿಸಿದ್ದವನು ಹಿರಿಯ ಕ್ರಾಂತಿಕಾರಿಯೂ ಪಕ್ಷದಲ್ಲಿ ಅತ್ಯುತ್ತಮ ಗುರಿಕಾರನೆಂದು ಹೆಸರಾಗಿದ್ದವನೂ ಆದ ಚಂದ್ರಶೇಖರ ಆಜಾದ್. ಈ ಸಶಸ್ತ್ರ ಶಾಖೆಯ ಕೆಲಸ ಮದ್ದುಗುಂಡುಗಳನ್ನು ಸಂಗ್ರಹಿಸುವುದು ಮತ್ತು ಸಾಮೂಹಿಕ ಪ್ರತಿಭಟನೆ ನಡೆಸುವುದು. ಅಸೋಸಿಯೇಷನ್ನಿನ ಧ್ಯೇಯವನ್ನು ಪ್ರಚಾರಮಾಡುವ, ಹಣ ಸಂಗ್ರಹಿಸುವ ಮತ್ತು ಸಶಸ್ತ್ರ ಶಾಖೆಯ ಸದಸ್ಯರಿಗೆ ಆಶ್ರಯವನ್ನು ಕಲ್ಪಿಸುವ ಸಹಾನುಭೂತಿಯುಳ್ಳವರೂ ಜೊತೆಗಿದ್ದರು. ಸೆರೆಮನೆಯ ಪಕ್ಕಪಕ್ಕದ ಕೋಣೆಗಳಲ್ಲಿ ಬಂದಿಗಳಾಗಿದ್ದ ಭಗತ್ ಸಿಂಗ್ನ ಸಹಚರರಾದ ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಕೂಡ ಅದೇ ಕನಸನ್ನು ಕಾಣುತ್ತಿದ್ದವರು.

ಹಗಲಿನ ಬೆಳಕು ನಂ. 14ನೇ ಕೋಣೆಯನ್ನು ಪ್ರವೇಶಿಸಿ, ತುಸು ಹೊತ್ತು ಅಲ್ಲಿಯೇ ತಂಗಿದ್ದು, ನಂತರ ಮುಸ್ಸಂಜೆಯೊಳಗೆ ಕರಗಿಹೋಗುತ್ತಿದ್ದುದನ್ನು ಗಮನಿಸಿದ್ದ, ಭಗತ್ ಸಿಂಗ್. ಸೂರ್ಯ ಮುಳುಗಿದ ಮೇಲೆ ನಿಜಕ್ಕೂ ದಟ್ಟವಾಗುತ್ತಿದ್ದ ಕತ್ತಲೆ. ಅವನ ಕೋಣೆಯನ್ನು ಬೆಳಗಬಲ್ಲ ವಿದ್ಯುದ್ದೀಪವಾಗಲೀ ಲಾಟೀನಾಗಲೀ ಒಂದು ಮಣ್ಣಿನ ಹಣತೆಯಾಗಲೀ ಇರಲಿಲ್ಲ. ದೂರದಲ್ಲೆಲ್ಲೋ ಸುತ್ತುತ್ತಿದ್ದ ಸರ್ಚ್ ಲೈಟ್ ಅವನೂ ಅವನ ಸಹಚರರೂ ಮರಣದಂಡನೆಗಾಗಿ ಕಾಯುತ್ತಿದ್ದ ಸ್ಥಳವನ್ನು ಕ್ಷಣಹೊತ್ತು ಮಾತ್ರ ಬೆಳಗಿ ಮಾಯವಾಗುತ್ತಿತ್ತು. ಅವನು ಕೊನೆಯಿಲ್ಲದ ಮೌನಧ್ವನಿಯನ್ನು ಆಲಿಸುತ್ತಿದ್ದ. ಆ ಮೌನವನ್ನು ಬಾಧಿಸುತ್ತಿದ್ದುದೆಂದರೆ ಗಂಟೆಗೊಮ್ಮೆ ಮೊಳಗುತ್ತಿದ್ದ ಜೈಲಿನ ಜಾಗಟೆ; ಕಬ್ಬಿಣದ ಬಾಗಿಲು ತೆರೆದು ಮುಚ್ಚಿದಾಗ ಉಂಟಾಗುತ್ತಿದ್ದ ಖಣಖಣ ಸದ್ದು.

ಚರತ್ ಸಿಂಗ್ ಅವನ ಕೋಣೆಯ ಹೊರಗೆ ನಿಂತು ತನ್ನ ಸಮವಸ್ತ್ರದ ಕಿಸೆಯಿಂದ ಹೊರತೆಗೆದ ಬೀಗದೆಸಳಿನಲ್ಲಿ ಸರಿಯಾದ ಬೀಗದ ಕೈಗಾಗಿ ತಡಕಾಡುತ್ತಿದ್ದ.

ಭಗತ್ ಸಿಂಗ್ನ ಲಾಯರ್ ಪ್ರಾಣನಾಥ ಮೆಹ್ತಾ ಅವನ ಕೊನೆಯ ಆಸೆಯೇನೆಂದು ಕೇಳುವ ನೆಪದಲ್ಲಿ ಗಲ್ಲು ಶಿಕ್ಷೆಗೆ ಎರಡು ಗಂಟೆಗಳ ಮುಂಚೆ ಅವನನ್ನು ಭೇಟಿ ಮಾಡಿದರು. ತನ್ನ ಕೋಣೆಯೊಳಗೆ ಪಂಜರದೊಳಗಿನ ಸಿಂಹದಂತೆ ಶತಪಥ ತಿರುಗುತ್ತಿದ್ದ ಭಗತ್ ಸಿಂಗ್ ಮೆಹ್ತಾರನ್ನು ನೋಡಿದ್ದೇ ನಕ್ಕವನು ತಾನು ಬಯಸಿದ ‘ದಿ ರೆವಲ್ಯೂಷನರಿ ಲೆನಿನ್’ ಎಂಬ ಪುಸ್ತಕವನ್ನು ತಂದಿದ್ದೀರಾ ಎಂದು ಕೇಳಿದ. ಪತ್ರಿಕೆಯೊಂದರಲ್ಲಿ ಆ ಪುಸ್ತಕದ ಸಮೀಕ್ಷೆಯನ್ನು ಓದಿ ಮೆಚ್ಚಿಕೊಂಡಿದ್ದ ಅವನು ಅದನ್ನು ತಂದುಕೊಡುವಂತೆ ಮೆಹ್ತಾರಿಗೆ ಸಂದೇಶವೊಂದನ್ನು ಕಳುಹಿಸಿದ್ದ. ಮೆಹ್ತಾ ಆ ಪುಸ್ತಕ ನೀಡಿದಾಗ ತುಂಬ ಸಂತೋಷಪಟ್ಟವನು ಕೂಡಲೇ, ಇನ್ನು ತನಗೆ ಹೆಚ್ಚು ಕಾಲಾವಕಾಶ ಇಲ್ಲ ಎನ್ನುವಂತೆ, ಅದನ್ನು ಓದತೊಡಗಿದ. ಮೆಹ್ತಾ ದೇಶಕ್ಕೇನಾದರೂ ಸಂದೇಶ ಕೊಡುತ್ತೀಯಾ ಎಂದು ಕೇಳಿದರು. ಪುಸ್ತಕದಲ್ಲಿ ನೆಟ್ಟ ಕಣ್ಣನ್ನು ತೆಗೆಯದೆ ಭಗತ್ ಸಿಂಗ್ ಹೇಳಿದ್ದಿಷ್ಟೆ: ‘ಎರಡೇ ಎರಡು ಸಂದೇಶ – ಒಂದು ಸಾಮ್ರಾಜ್ಯಶಾಹಿಗೆ ಧಿಕ್ಕಾರ!, ಇನ್ನೊಂದು ಕ್ರಾಂತಿ ಚಿರಾಯುವಾಗಲಿ! ‘ಮೆಹ್ತಾ ಹೇಗಿದ್ದೀಯ ಎಂದು ಕೇಳಿದ್ದಕ್ಕೆ ‘ಎಂದಿನಂತೆ ಸಂತೋಷವಾಗಿ’ ಎಂದು ಉತ್ತರಿಸಿದ. ಮತ್ತೇನಾದರೂ ಆಸೆಯುಂಟೆ ಎಂದು ಕೇಳಿದಾಗ ‘ಹೌದು, ನಾನು ಇದೇ ದೇಶದಲ್ಲಿ ಹುಟ್ಟಿ ಈ ದೇಶಕ್ಕೆ ಮತ್ತೆ ಸೇವೆ ಸಲ್ಲಿಸಬಯಸುತ್ತೇನೆ’ ಎಂದ. ಆಮೇಲೆ ಭಗತ್ ಸಿಂಗ್ ಪಂಡಿತ್ ನೆಹರೂಗೆ ಮತ್ತು ಬಾಬು ಸುಭಾಷ್ ಚಂದ್ರ ಬೋಸರಿಗೆ ತನ್ನ ಧನ್ಯವಾದ ತಿಳಿಸಬೇಕೆಂದು ಮೆಹ್ತಾರನ್ನು ಕೇಳಿಕೊಂಡ. ಯಾಕೆಂದರೆ ಅವರಿಬ್ಬರೂ ಅವನ ಕೇಸಿನಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದರು.

ಭಗತ್ ಸಿಂಗ್ನನ್ನು ಭೇಟಿಯಾದ ನಂತರ ಮೆಹ್ತಾ ರಾಜಗುರುವನ್ನು ಭೇಟಿಮಾಡಿದರು. ‘ನಾವು ಬೇಗ ಸಂಧಿಸುತ್ತೇವೆ’ ಎಂಬುದೇ ರಾಜಗುರುವಿನ ಕೊನೆಯ ಮಾತು. ಸುಖದೇವ್ ಮಾತ್ರ ಕೆಲವು ತಿಂಗಳ ಹಿಂದೆ ಮೆಹ್ತಾ ಅವರು ಜೈಲಿನ ಅಧಿಕಾರಿಯಿಂದ ಕೊಡಿಸಿದ್ದ ಕೇರಂ ಬೋರ್ಡನ್ನು ತೆಗೆದುಕೊಂಡು ಹೋಗಿ ಎಂದಷ್ಟೇ ಹೇಳಿದ.

ಮೆಹ್ತಾ ಹೊರಟುಹೋದ ತಕ್ಷಣ ಅಧಿಕಾರಿಗಳು ಗಲ್ಲಿಗೇರಿಸುವ ಸಮಯವನ್ನು ಹನ್ನೊಂದು ಗಂಟೆಗಳಷ್ಟು ಮೊದಲೇ ನಿಗದಿಪಡಿಸಲಾಗಿದೆಯೆಂದು ಮೂವರು ಕ್ರಾತಿಕಾರಿಗಳಿಗೂ ತಿಳಿಸಿದರು. ಅಂದರೆ ಮರು ದಿನ ಬೆಳಿಗ್ಗೆ ಆರು ಗಂಟೆಗೆ ಬದಲಾಗಿ ಅದೇ ದಿನ ಸಂಜೆ ಏಳು ಗಂಟೆಗೆ.

ಭಗತ್ ಸಿಂಗ್ ಆ ಪುಸ್ತಕದ ಕೆಲವು ಪುಟಗಳನ್ನಷ್ಟೆ ಓದಿದ್ದವನು ‘ಒಂದು ಅಧ್ಯಾಯವನ್ನಾದರೂ ಮುಗಿಸುವಷ್ಟು ಅವಕಾಶ ಕೊಡಲಾರಿರಾ?’ ಎಂದು ಕೇಳಿದ್ದುಂಟು.

ಮೂವರು ಕ್ರಾಂತಿಕಾರಿಗಳನ್ನೂ ಗಲ್ಲಿಗೇರಿಸುವುದಕ್ಕಾಗಿ ಸಿದ್ಧಪಡಿಸಲು ಅವರ ಕೋಣೆಗಳಿಂದ ಹೊರಗೆ ತರಲಾಯಿತು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಪರಸ್ಪರ ತೋಳು ಹಿಡಿದುಕೊಂಡು ಸೆಂಟ್ರಿಗಳ ಹಿಂದೆ ನಡೆಯುತ್ತ ತಮ್ಮ ಮೆಚ್ಚಿನ ಹಾಡು ಹಾಡತೊಡಗಿದರು.

ನಾವು ಸ್ವತಂತ್ರರಾಗುವ ದಿನವೂ ಬರುತ್ತದೆ ಒಮ್ಮೆ

ಆಗ ಇದು ನಮ್ಮ ಭೂಮಿ ನಮ್ಮದೇ ಆಕಾಶ

ಹುತಾತ್ಮರ ಚಿತೆಗೆ ಬೆಂಕಿಹಚ್ಚಿದ ಜಾಗದಲ್ಲಿ ಸೇರುತ್ತಾರೆ ಜನ

ದೇಶಕ್ಕಾಗಿ ಆತ್ಮಾರ್ಪಣೆ ಮಾಡಿದವರೆಲ್ಲರಿಗೂ ನಮನ

ಮೂವರನ್ನೂ ಒಬ್ಬೊಬ್ಬರಂತೆ ತೂಕ ಹಾಕಿ – ಅವರೆಲ್ಲರ ತೂಕವೂ ಹೆಚ್ಚಿತ್ತು – ಕೊನೆಯ ಸ್ನಾನ ಮಾಡುವಂತೆ ಹೇಳಲಾಯಿತು. ನಂತರ ಅವರಿಗೆ ಕಪ್ಪು ನಿಲುವಂಗಿಗಳನ್ನು ತೊಡಿಸಿದರು. ಅವರ ಮುಖಗಳನ್ನು ಮಾತ್ರ ಮುಚ್ಚಲಿಲ್ಲ. ಚರತ್ ಸಿಂಗ್ ವಾಹೆ ಗುರುವನ್ನು ಪ್ರಾರ್ಥಿಸುವಂತೆ ಭಗತ್ ಸಿಂಗ್ನ ಕಿವಿಯಲ್ಲಿ ಉಸುರಿದ.

ಅದಕ್ಕೆ ಅವನು ‘ನನ್ನ ಬದುಕಿನಲ್ಲಿ ನಾನೆಂದೂ ಪ್ರಾರ್ಥಿಸಿಲ್ಲ. ಹಾಗೆ ನೋಡಿದರೆ ನಾನು ಬಡವರ ಸಂಕಷ್ಟಗಳಿಗಾಗಿ ದೇವರನ್ನು ಅನೇಕ ಬಾರಿ ಬೈದದ್ದುಂಟು. ಈಗ ಕ್ಷಮಿಸು ಎಂದು ಕೇಳಿದರೆ ಆ ದೇವರು ಸಾವು ಸನ್ನಿಹಿತವಾಗಿರುವುದರಿಂದಲೇ ಈ ಅಂಜುಬುರುಕ ಕ್ಷಮೆ ಕೇಳುತ್ತಿದ್ದಾನೆ ಎನ್ನಬಹುದು’ ಎಂದು ನಗುತ್ತ ನಿರಾಕರಿಸಿದ.

bhagat singh4ಕೈದಿಗಳು ತಮ್ಮ ಕೋಣೆಗಳ ಹೊರಗಿನ ದಾರಿಯಲ್ಲಿ ಹೆಜ್ಜೆಸದ್ದು ಕೇಳೀಸೀತೆಂದು ಕಾಯುತ್ತಿರುವಾಗ ಕತ್ತಲು ಕವಿಯಿತು. ಎರಡು ಗಂಟೆಗಿಂತಲೂ ಹೆಚ್ಚು ಸಮಯದಿಂದ ಯಾರೂ ಅತ್ತ ಸುಳಿದಿರಲಿಲ್ಲ. ಬೀಗಗಳನ್ನು ಸರಿಯಾಗಿ ಹಾಕಲಾಗಿದೆಯೇ ಇಲ್ಲವೇ ಎಂದು ನೋಡಲು ವಾರ್ಡನ್ ಕೂಡ ಬರಲಿಲ್ಲ. ಜೈಲಿನ ಜಾಗಟೆ ಆರು ಬಾರಿ ಬಾರಿಸಿದ್ದೇ ಕೈದಿಗಳಿಗೆ ದೂರದಿಂದ ಹೊಮ್ಮಿಬರುತ್ತಿದ್ದ ಮುಸುಕಿನ ದನಿಗಳೂ ಭಾರವಾದ ಬೂಟುಗಳ ಸದ್ದೂ ಕೇಳಿಸಿದುವು. ಜೊತೆಗೆ ‘ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ…’ ಎಂಬ ತೀರ ಪರಿಚಿತವಾದ ಹಾಡಿನ ಸಾಲುಗಳೂ ಹರಕುಮುರುಕಾಗಿ ಕೇಳಿಸಿದುವು. ಆಗ ‘ಇನ್ಕ್ವಿಲಾಬ್ ಜಿಂದಾಬಾದ್!’, ‘ಹಿಂದೂಸ್ತಾನ್ ಆಜಾದ್ ಹೋ!’ ಎಂಬ ಘೋಷಣೆಗಳು ಮುಗಿಲು ಮುಟ್ಟಿದುವು. ಕೈದಿಗಳು ‘ಮೈ ರಂಗ್ ದೆ ಮೇರಾ ಬಸಂತಿ ಚೋಲಾ…’ (ಅಮ್ಮಾ, ನನ್ನ ಬಟ್ಟೆಬರೆ ಸಿದ್ಧಪಡಿಸು ಹುತಾತ್ಮನಾಗುವುದಕ್ಕೆ) ಎಂದು ಹಾಡತೊಡಗಿದರು, ‘ಕ್ರಾಂತಿ ಚಿರಾಯುವಾಗಲಿ!’, ‘ಸಾಮ್ರಾಜ್ಯವಾದಕ್ಕೆ ಧಿಕ್ಕಾರ!’ ಎಂದು ಉಗ್ರವಾಗಿ ಕೂಗತೊಡಗಿದರು. ಲಾಹೋರ್ ಸೆಂಟ್ರಲ್ ಜೈಲಿನ ಮೊಗಸಾಲೆಗಳಲ್ಲಿ ಅವರ ದನಿಗಳು ಪ್ರತಿಧ್ವನಿಸಿದುವು.

ಗಲ್ಲುಗಂಬ ತುಂಬ ಹಳೆಯದು. ಆದರೆ ತುಂಬ ಕಟ್ಟುಮಸ್ತಾಗಿದ್ದ ಗಲ್ಲಿಗೇರಿಸುವ ಆಸಾಮಿ ಹಳಬನೇನಲ್ಲ. ಮರಣದಂಡನೆಗೆ ಗುರಿಯಾದ ಮೂವರೂ ಬೇರೆ ಬೇರೆ ಹಲಗೆಗಳ ಮೇಲೆ ನಿಂತಿದ್ದರು. ಅವರ ಕೆಳಗೆ ತುಂಬ ಆಳವಾದ ಗುಂಡಿ. ಭಗತ್ ಸಿಂಗ್ ಮಧ್ಯದಲ್ಲಿ ನಿಂತಿದ್ದ. ಅವನಿಗೆ ತನ್ನ ತಾಯಿಯ ಕೊನೆಯ ಆಸೆಯನ್ನು ನೆರವೇರಿಸುವ, ಗಲ್ಲುಗಂಬದಿಂದ ‘ಕ್ರಾಂತಿ ಚಿರಾಯುವಾಗಲಿ!’ ಎಂದು ಕೂಗಿಕೊಳ್ಳುವ ಆಸೆ.

ನೇಣಿನ ಕುಣಿಕೆ ಆ ಮೂವರು ಕ್ರಾಂತಿಕಾರಿಗಳ ಕತ್ತನ್ನು ಬಿಗಿದಿತ್ತು. ಅವರ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಮೂವರೂ ತಮ್ಮ ಕತ್ತಿನ ಕುಣಿಕೆಯನ್ನು ಮುದ್ದಿಸಿದರು. ಆಮೇಲೆ ಗಲ್ಲಿಗೇರಿಸುವವನು ಯಾರು ಮೊದಲು ಎಂದು ಕೇಳಿದ. ಸುಖದೇವ್ ನಾನು ಎಂದ. ಗಲ್ಲಿಗೇರಿಸುವವನು ಹಗ್ಗಗಳನ್ನು ಒಂದೊಂದಾಗಿ ಎಳೆದು ಅವರು ನಿಂತಿದ್ದ ಹಲಗೆಗಳನ್ನು ಒದ್ದುಬಿಟ್ಟ.

ಅವರ ದೇಹಗಳು ತುಂಬ ಹೊತ್ತಿನವರೆಗೆ ಗಲ್ಲುಗಂಬದಲ್ಲೇ ತೂಗಾಡುತ್ತಿದ್ದವು. ಕಡೆಗೆ ಅವುಗಳನ್ನು ಕೆಳಗಿಳಿಸಲಾಯಿತು. ವೈದ್ಯರೊಬ್ಬರು ಆ ಶವಗಳನ್ನು ಪರೀಕ್ಷಿಸಿದರು. ಭಗತ್ ಸಿಂಗ್, ಸುಖದೇವ್, ರಾಜಗುರು ಕೊನೆಯುಸಿರೆಳೆದರೆಂದು ಘೋಷಿಸಲಾಯಿತು. ಜೈಲಿನ ಒಬ್ಬ ಅಧಿಕಾರಿ ಆ ಕ್ರಾಂತಿಕಾರಿಗಳ ಶೌರ್ಯವನ್ನು ಕಂಡು ಅದೆಷ್ಟು ತಳಮಳಗೊಂಡನೆಂದರೆ ಸತ್ತವರನ್ನು ಗುರುತಿಸುವ ಆಜ್ಞೆ ಹೊರಡಿಸಲು ನಿರಾಕರಿಸಿದ. ಅವನನ್ನು ಅಲ್ಲಿಯೇ ಅಮಾನತುಗೊಳಿಸಲಾಯಿತು. ಕಿರಿಯ ಅಧಿಕಾರಿಯೊಬ್ಬ ಆ ಕೆಲಸ ಮಾಡಿದ. ಇಬ್ಬರು ಬ್ರಿಟಿಷ್ ಅಧಿಕಾರಿಗಳು – ಅವರಲ್ಲೊಬ್ಬ ಜೈಲಿನ ಸೂಪರಿಂಟೆಂಡೆಂಟ್ – ಆ ಸಾವುಗಳನ್ನು ಪ್ರಮಾಣೀಕರಿಸಿದರು.

ಸೆರೆಮನೆಯ ಗೋಡೆಗಳ ಹೊರಗೆ ನೂರಾರು ಮಂದಿ ಕಾವಲು ಕುಳಿತಿದ್ದರು. ಜೈಲಿನ ಅಧಿಕಾರಿಗಳಿಗೆ ಮೃತದೇಹಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದೇ ಸಮಸ್ಯೆಯಾಯಿತು. ಹೊರಗೆ ದೊಡ್ಡ ಪ್ರಮಾಣದಲ್ಲಿ ಗುಂಪುಗೂಡಿರುವ ಜನರು ಹೊಗೆಯನ್ನೋ ಬೆಂಕೆಯ ಜ್ವಾಲೆಯನ್ನೋ ಕಂಡದ್ದೇ ದಾಳಿಮಾಡಬಹುದೆಂದು ಬಗೆದ ಅಧಿಕಾರಿಗಳು ಜೈಲಿನ ಒಳಗಡೆಯೇ ಆ ದೇಹಗಳನ್ನು ಸುಟ್ಟುಬಿಡುವ ವಿಚಾರವನ್ನು ಕೈಬಿಟ್ಟರು. ಹಾಗಾಗಿ ಅವರು ಜೈಲಿನ ಹಿಂಬದಿಯ ಗೋಡೆಯ ಸ್ವಲ್ಪ ಭಾಗವನ್ನು ಒಡೆದುಹಾಕಿದರು. ರಾತ್ರಿ ತುಂಬ ಹೊತ್ತಾದ ಮೇಲೆ ಒಂದು ಟ್ರಕ್ಕನ್ನು ತಂದು ಅದರೊಳಕ್ಕೆ ಆ ದೇಹಗಳನ್ನು ಸಾಮಾನುಗಳಂತೆ ಎಸೆದರು. ಮೊದಲು ಆ ದೇಹಗಳನ್ನು ರಾವಿ ನದಿಯ ದಂಡೆಯ ಮೇಲೆ ಸುಡಬೇಕೆಂದಿದ್ದರೂ ಆ ನದಿಯಲ್ಲಿ ಸಾಕಷ್ಟು ನೀರಿರದ ಕಾರಣ ಸಟ್ಲೆಜ್ ನದಿಯತ್ತ ಪ್ರಯಾಣಿಸಬೇಕೆಂದು ತೀಮರ್ಾನಿಸಲಾಯಿತು. ಬ್ರಿಟಿಷ್ ಸೈನಿಕರ ಕಾವಲಿನಲ್ಲಿ ಸಟ್ಲೆಜ್ ಬಳಿಯ ಫಿರೋಜ್ಪುರಕ್ಕೆ ಹೊರಟಿತು ಟ್ರಕ್ಕು. ಸೈನಿಕರು ಅಲ್ಲಿಗೆ ತಲುಪಿ ಆ ದೇಹಗಳಿಗೆ ಅಗ್ನಿಸ್ಪರ್ಶ ಮಾಡಿದರೋ ಇಲ್ಲವೋ, ಜನರೆಲ್ಲರಿಗೂ ಅವರು ಕಂಡುಬಿಟ್ಟರು.

ಗ್ರಾಮೀಣ ಪ್ರದೇಶದ ಜನರು, ಅದರಲ್ಲೂ ಮುಖ್ಯವಾಗಿ ಗಂಧಾ ಸಿಂಗ್ವಾಲಾ ಎಂಬ ಹಳ್ಳಿಯಲ್ಲಿದ್ದವರು, ಚಿತೆ ಉರಿಯುತ್ತಿರುವುದನ್ನು ನೋಡಿ ಓಡಿಬಂದರು. ಸೈನಿಕರು ಅರೆ ಸುಟ್ಟ ದೇಹಗಳನ್ನು ಅಲ್ಲಿಯೇ ಬಿಟ್ಟು ತಮ್ಮ ವಾಹನಗಳನ್ನು ಹತ್ತಿ ಕಂಬಿಕಿತ್ತರು. ರಾತ್ರಿಯುದ್ದಕ್ಕೂ ಹಳ್ಳಿಯ ಮಂದಿ ಅತೀವ ಗೌರವದಿಂದ ಆ ಹೀರೋಗಳ ಅವಶೇಷಗಳ ಮುಂದೆ ಕುಳಿತಿದ್ದರು…

ಗಲ್ಲು ಶಿಕ್ಷೆಯ ಸುದ್ದಿ ಲಾಹೋರಿನಲ್ಲೂ ಪಂಜಾಬಿನ ಇತರ ನಗರಗಳಲ್ಲೂ ಕಾಳ್ಗಿಚ್ಚಿನಂತೆ ಹರಡಿತು. ತರುಣರು ಇಡೀ ರಾತ್ರಿ ‘ಇನ್ಕ್ವಿಲಾಬ್ ಜಿಂದಾಬಾದ್’, ‘ಭಗತ್ ಸಿಂಗ್ ಜಿಂದಾಬಾದ್’ ಎಂದು ಕೂಗುತ್ತ ಮೆರವಣಿಗೆ ಹೊರಟರು. ನಗರದಲ್ಲಿ ಒಂದು ಹರತಾಳ ಆಚರಿಸಲಾಯಿತು. ಅಂಗಡಿಗಳ ಬಾಗಿಲು ಮುಚ್ಚಿದುವು. ಭಟ್ಟಂಗಿತನದ ಸರಕಾರಿ ಕಾಲೇಜೊಂದನ್ನು ಬಿಟ್ಟು ಎಲ್ಲ ಶಾಲೆ, ಕಾಲೇಜುಗಳೂ ಮುಚ್ಚಿಬಿಟ್ಟುವು. ಸರಕಾರಿ ಕಟ್ಟಡಗಳನ್ನೂ ಬಿಳಿಯ ಅಧಿಕಾರಿಗಳು ವಾಸಿಸುತ್ತಿದ್ದ ಸಿವಿಲ್ ಲೈನ್ಸ್ ಪ್ರದೇಶವನ್ನೂ ಕಾಯುವುದಕ್ಕಾಗಿ ಪೋಲಿಸ್ ಕಾವಲು ದಳ ಬೀಡುಬಿಟ್ಟಿತು.

ನಡುಹಗಲಿನ ಹೊತ್ತಿಗೆ ಲಾಹೋರಿನ ವಿವಿಧ ಭಾಗಗಳಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಮೃತದೇಹಗಳಿಗೆ ಹಿಂದೂ ಮತ್ತು ಸಿಖ್ ಧಾಮರ್ಿಕ ವಿಧಿಗಳ ಪ್ರಕಾರ ಸಟ್ಲೆಜ್ ನದೀ ದಂಡೆಯ ಮೇಲೆ ಅಂತಿಮ ಸಂಸ್ಕಾರ ಮಾಡಲಾಯಿತೆಂದು ಸಾರುವ, ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರ ಸಹಿಯಿದ್ದ ನೋಟೀಸುಗಳನ್ನು ಹಚ್ಚಲಾಯಿತು. ಈ ಸುದ್ದಿಯನ್ನು ಪ್ರತಿಭಟಿಸಿದ ಹಲವಾರು ಸಭೆಗಳಲ್ಲಿ ಆ ಮೃತದೇಹಗಳನ್ನು ಸೂಕ್ತ ರೀತಿಯಲ್ಲಿ ಮಣ್ಣುಮಾಡಲಾಗಿಲ್ಲವೆಂದು ಸಾರಲಾಯಿತು. ಮ್ಯಾಜಿಸ್ಟ್ರೇಟ್ ಅದು ಸುಳ್ಳು ವದಂತಿ ಎಂದು ಹೇಳಿದರೂ ಯಾರೂ ನಂಬಲಿಲ್ಲ.

ಸ್ಯಾಂಡರ್ಸ್ ನನನ್ನು ಗುಂಡಿಟ್ಟು ಕೊಲ್ಲಲಾಗಿದ್ದ ಸ್ಥಳಕ್ಕೆ ಸಾಕಷ್ಟು ಹತ್ತಿರದಲ್ಲೇ ಇದ್ದ ನೀಲಗೊಂಬಾದ್ನಿಂದ ಒಂದು ಶೋಕತಪ್ತ ಮೆರವಣಿಗೆ ಹೊರಟಿತು. ಮೂರು ಮೈಲಿಗಳಿಗೂ ಹೆಚ್ಚು ಉದ್ದವಾಗಿದ್ದ ಆ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳು, ಮುಸ್ಲಿಮರು ಮತ್ತು ಸಿಕ್ಕರು ಭಾಗವಹಿಸಿದ್ದರು. ಗಂಡಸರು ಕಪ್ಪು ಪಟ್ಟಿಗಳನ್ನು ಕಟ್ಟಿಕೊಂಡಿದ್ದರೆ, ಮಹಿಳೆಯರು ಕಪ್ಪು ಸೀರೆಗಳನ್ನು ಉಟ್ಟುಕೊಂಡಿದ್ದರು. ಮೆರವಣಿಗೆ ಹೊರಟವರು ‘ಇನ್ಕ್ವಿಲಾಬ್ ಜಿಂದಾಬಾದ್’, ‘ಭಗತ್ ಸಿಂಗ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಎತ್ತ ನೋಡಿದರೂ ಕಪ್ಪು ಬಾವುಟಗಳ ಸಮುದ್ರ. ಮೆರವಣಿಗೆ ಮಾಲ್ ಮೂಲಕ ಸಾಗಿಹೋಗಿ ಅನಾರ್ಕಲಿ ಬಜಾರಿನ ಮಧ್ಯದಲ್ಲಿ ನಿಂತಿತು. ಫಿರೋಜ್ಪುರದಿಂದ ಭಗತ್ ಸಿಂಗ್ನ ಕುಟುಂಬದವರು ಮೂವರು ಹುತಾತ್ಮರ ಅವಶೇಷಗಳೊಡನೆ ನಗರವನ್ನು ತಲುಪಿದ್ದಾರೆಂಬ ಘೋಷಣೆ ಕೇಳಿಸಿದ್ದೇ ಜನರ ಗುಂಪು ನಿಶ್ಶಬ್ಬವಾಯಿತು.

ಮೂರು ಗಂಟೆಗಳ ನಂತರ ಹೂಗಳಿಂದ ಸಿಂಗರಿಸಿದ ಮೂರು ಶವಪೆಟ್ಟಿಗೆಗಳು ಭಗತ್ ಸಿಂಗ್ನ ಕುಟುಂಬದವರ ಜೊತೆ ಮೆರವಣಿಗೆಯನ್ನು ಸೇರಿಕೊಂಡುವು. ಜನರ ಆಕ್ರಂದನ ಮುಗಿಲು ಮುಟ್ಟಿತು. ಅವರು ಎಲ್ಲರಿಗೂ ಕಾಣಿಸುವಂತೆಯೇ ಧಾರಾಕಾರವಾಗಿ ಕಣ್ಣೀರು ಸುರಿಸಿದರು. ವಿಪರ್ಯಾಸವೆಂದರೆ ಅಧಿಕಾರಿಗಳು ಶವಸಂಸ್ಕಾರ ಮಾಡಲೆಂದು ಯಾವ ನದಿ ದಂಡೆಗೆ ಮೃತದೇಹಗಳನ್ನು ಸಾಗಿಸಿ ತಂದಿದ್ದರೋ ಆ ದಂಡೆಗೇ ಮೆರವಣಿಗೆ ಹಿಂತಿರುಗಿದ್ದು. ಲಾಹೋರಿನಲ್ಲಿ ನಡೆದ ಒಂದು ಬೃಹತ್ ಸಮಾವೇಶದಲ್ಲಿ ಕೊಲೆ ಎಂದು ಪರಿಗಣಿಸಲಾದ ಗಲ್ಲುಶಿಕ್ಷೆಯನ್ನು ಖಂಡಿಸಲಾಯಿತು. ಅಧಿಕಾರಿಗಳು ಮೃತದೇಹಗಳನ್ನು ವಿಲೇವಾರಿ ಮಾಡಿದ ರೀತಿಯ ಬಗ್ಗೆ ಸಾರ್ವತ್ರಿಕ ಅಸಮಾಧಾನ ವ್ಯಕ್ತವಾಯಿತು. ಉರ್ದು ಪತ್ರಿಕೆಯೊಂದರ ಪ್ರಸಿದ್ಧ ಸಂಪಾದಕ ಮೌಲಾನಾ ಜಾಫರ್ ಅಲಿ ಖಾನ್ ನೀಲಾಕಾಶದ ಕೆಳಗೆ ಅರೆ ಸುಟ್ಟ ಶವಗಳ ಅವಶೇಷಗಳನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಬಿಟ್ಟುಹೋಗಿದ್ದರೆಂದು ವರ್ಣಿಸುವ ಕವಿತೆಯೊಂದನ್ನು ಓದಿದರು.

ವಾರ್ಡನ್ ಚರತ್ ಸಿಂಗ್ ನಿಧಾನವಾಗಿ ಕಾಲೆಳೆಯುತ್ತ ತನ್ನ ಕೋಣೆಗೆ ಹೋಗಿ ಅತ್ತುಬಿಟ್ಟ. ತನ್ನ ಮೂವತ್ತು ವರ್ಷಗಳ ಸೇವೆಯಲ್ಲಿ ಅವನು ಅದೆಷ್ಟೋ ಶಿರಚ್ಫೇದನೆಗಳನ್ನು ನೋಡಿದ್ದವನು. ಆದರೆ ಭಗತ್ ಸಿಂಗ್ ಮತ್ತು ಅವನ ಸಹಚರರಂತೆ ಬೇರೆ ಯಾರೂ ಅಷ್ಟು ಧೈರ್ಯವಾಗಿ ಗಲ್ಲುಗಂಬವನ್ನು ಹತ್ತಿರಲಿಲ್ಲ. ಬ್ರಿಟಿಷ್ ಸಾಮ್ರಾಜ್ಯವಾದಿಗಳು ದೇಶದ ಅತ್ಯಂತ ಧೈರ್ಯಶಾಲಿಗಳಾದ ಮೂವರು ಅತ್ಯುತ್ತಮ ತರುಣರ ಬದುಕನ್ನು ತೀರ ಹೇಯ ರೀತಿಯಲ್ಲಿ ಮುಗಿಸಿಬಿಟ್ಟಿದ್ದರು.

ಆ ಕಾಲದಲ್ಲಿ ಅವರ ಧೈರ್ಯಸ್ಥೈರ್ಯಗಳ ಕಥನವೇ ಮುಂದೆ ಬ್ರಿಟಿಷ್ ಆಳ್ವಿಕೆಗೆ ಚರಮವಾಕ್ಯ ಬರೆಯಲಿದೆಯೆಂದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಪ್ರಾಣಾರ್ಪಣೆ ಮಾಡಿದ ಹದಿನಾರು ವರ್ಷಗಳ ನಂತರ 1947ರ ಆಗಸ್ಟ್ 15ರಂದು ಕಟ್ಟಕಡೆಯ ಇಂಗ್ಲಿಷ್ ಸೈನಿಕ ಭಾರತದ ತೀರವನ್ನು ಬಿಟ್ಟು ತನ್ನ ದೇಶಕ್ಕೆ ತೆರಳಿದ.

ಭಗತ್ ಸಿಂಗ್ ಭವಿಷ್ಯ ನುಡಿದಿದ್ದಂತೆ ಒಂದಲ್ಲ ಒಂದು ದಿನ ಅವರ ಧ್ಯೇಯಕ್ಕೆ ಜಯವಾಗಲಿತ್ತು. ಆದ್ದರಿಂದಲೇ ಸ್ವಾತಂತ್ರ್ಯದ ಪಂಜು ನಿರಂತರವಾಗಿ ಉರಿಯುತ್ತಿರುವಂತೆ ಮಾಡುವ ಪ್ರಕ್ರಿಯೆಯಲ್ಲಿ ಅವನೂ ಅವನ ಸಹಚರರೂ ಬಲಿಯಾದರೆ ತಾನೆ ಏನು?

ಅವರದು ಸ್ವಾತಂತ್ರ್ಯದ ಬಲೀಪೀಠದ ಮೇಲೆ ಮಾಡಿದ ಆತ್ಮಾರ್ಪಣ.

 

 

‍ಲೇಖಕರು g

23 March, 2016

2 Comments

  1. kumee

    Bhagathsingh krutiya halavu kantugalannu maasa patrikeyalli we hinde odidde; eega pustaka roopadalli prakatavaagiruvudu santosha; avishraanta lekhaka diwaakar avarige abhinandanegalu (kumvee)

  2. S Diwakar

    Dear Sandhya,

    Extremely thankful to you for giving publicity for my translated book on Bhagat Singh,’NirBhaya’. As there was no formal release fuction, the book has already been in the stacks of most of the leading book stalls. Thanks again for your support.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading