ಎಲ್ಲ ಯುದ್ಧಗಳನ್ನು ಜಯಿಸಿದ ಮೇಲೂ ಹೆಣ್ಣು ಜಯಿಸಲಾಗದ ಸಮರವಿದು!

ಅವಧೇಶ್ವರಿಯರೊಳಗೂ ಕುದಿವ ಬೆಂಕಿ

ಅ-ಯೋಧ್ಯಾ ಎಂದರೆ ಯಾವ ಯೋಧನೂ ಗೆಲ್ಲಲಾಗದ ನಾಡು ಎಂದರ್ಥ. ಅದರ ಮಹಾರಾಣಿ ಅವಧೇಶ್ವರಿ. ಅದಕ್ಕೂ ಮೊದಲವಳು ಮಾಂದಾತ ಮಹಾರಾಜನ ಮುದ್ದಿನ ಕುವರಿ ನರ್ಮದಾ ಪುರುಕುತ್ಸಾನಿ. ಅವಳಿಗೊಬ್ಬ ಅಣ್ಣ ಪುರುಕುತ್ಸ. ವಿಚಿತ್ರವಾಗಿರುವ ಹೆಸರುಗಳು. ಏಕೆಂದರೆ ಅವರು ಈಜಿಪ್ಟಿನ ಪೆರೋ ವಂಶದವರು. ಅಲ್ಲಿಂದ ಇಲ್ಲಿಗೆ ವಲಸೆ ಬಂದವರು. ಆಗ ಪುರುಕುತ್ಸಾನಿಗೆ ಎಂಟು ವರ್ಷ, ಮತ್ತವಳ ಅಣ್ಣನಿಗೆ ಹನ್ನೆರಡು. ಸ್ವರ್ಗದ ನಂದನದಂತಿದ್ದ ಆಮ್ರವನದಲ್ಲಿ ಮಾಂದಾತ ಮಹಾರಾಜ ತನ್ನ ಮನದಿಂಗಿತವನ್ನು ಮಹಾರಾಣಿಗೆ ಹೇಳುತ್ತಾನೆ.

“ಮಹಾರಾಣಿ, ನಮ್ಮ ಮಗ ಪುರುವಿನ ವಿವಾಹದ ಬಗ್ಗೆ ನಾನಿಂದು ತೀರ್ಮಾನಿಸಿದ್ದೇನೆ”
“ಹಾಗೆಯೇ ನಮ್ಮ ಮಗಳ ಬಗೆಗೂ ಯೋಚಿಸಿ ಮತ್ತೆ”
“ಅವರಿಬ್ಬರಿಗೂ ವಿವಾಹ ಮಾಡೋಣವೆಂದಿರುವೆ”
“ಇಬ್ಬರಿಗೂ! ಅಂದರೆ ವರ ಮತ್ತು ವಧು ಎರಡಕ್ಕೂ ಬಲೆಬೀಸಿರುವಿರಿ ಎಂದಾಯ್ತು”
“ರಾಜವಂಶದ ರಕ್ತ ಶುದ್ಧವಾಗಿರಬೇಕೆಂದರೆ ಅವರಿಬ್ಬರೂ ಸತಿಪತಿಯಾಗಬೇಕಾದ್ದು ಅನಿವಾರ್ಯ”
ಮಹಾರಾಜನ ಮಾತನ್ನು ಕೇಳಿ ಕುಸಿದುಬಿದ್ದಳು ಬಿಂದುಮತಿ. ಅವಳು ನಾಗವಂಶದವಳು. ಅವರ ಆಚರಣೆಯ ಪ್ರಕಾರ ಸಹೋದರ ಸಂಬಂಧಿಗಳ ವಿವಾಹ ನಿಷಿದ್ಧ. ಅಯೋಧ್ಯೆಯ ರಾಜರಿಗೂ ಇದು ಪಥ್ಯವಲ್ಲ. ಅದರೆ ಮಹಾರಾಜ ಹಠ ಹಿಡಿದಿದ್ದಾನೆ. ಅವನಿಗೀಗ ರಕ್ತಶುದ್ಧಿ ಪ್ರಮುಖ ವಿಷಯವಾಗಿ ಕಾಣುತ್ತಿದೆ.

ಆದರೆ ಮಹಾರಾಣಿಯ ಚಿಂತೆಯೇ ಬೇರೆ. ಮಗ ಪುರುಕುತ್ಸ ತುಂಬಾ ಸೌಮ್ಯ ಸ್ವಭಾವದವನು. ಮಗಳು ಹಾಗಲ್ಲ. ಚಿಮ್ಮುವ ಉತ್ಸಾಹದ ಬುಗ್ಗೆ. ಅವಳನ್ನು ಸಂಭಾಳಿಸಲು ವೀರ ಪುರುಷನೇ ಬೇಕು. ಅದನ್ನವಳು ಸೂಚ್ಯವಾಗಿ ಮಹಾರಾಜನಿಗೂ ಹೇಳಿದಳು. ಆದರವನ ತಲೆಯೊಳಗೆ ರಕ್ತಶುದ್ಧಿಯ ಭೂತ ಭದ್ರವಾಗಿ ಕುಳಿತುಬಿಟ್ಟಿತ್ತು. ಮಾತಿನ ಭರದಲ್ಲಿ ಹೇಳಿಯೇಬಿಟ್ಟ, “ನನ್ನಂತೆ ನಾಗಕನ್ಯೆಯೊಬ್ಬಳನ್ನು ವರಿಸುವ ಸ್ಥಿತಿ ಅವನಿಗೆ ಬಾರದಿರಲಿ” ಮಹಾರಾಣಿಗೂ ಸಿಟ್ಟೇರಿತು. “ರಕ್ತಶುದ್ಧಿಯಿಂದ ನಿಮ್ಮ ವಂಶದವರು ಸಾಧಿಸಿದ್ದು ಅಷ್ಟರಲ್ಲೇ ಇದೆ” ಎಂದುಬಿಟ್ಟಳು. ರಾಜನ ಬಾಯಿಂದ ಅವನಿಗರಿವಿಲ್ಲದೇ ಬಂತು ಶಬ್ದ, “ಬಾಯಿ ಮುಚ್ಚು ಗದ್ದಾವಿ!”

ಆ ಒಂದೇ ಪದ ಮಹಾರಾಣಿಯ ಸದ್ದಡಗಿಸಿತು. ಪುಕುತ್ಸಾನಿಯ ಮದುವೆಯನ್ನು ಪುರುಕುತ್ಸನೊಡನೆ ಆಗುಮಾಡಿತು. ಅಷ್ಟರಲ್ಲಾಗಲೇ ಮಹಾರಾಣಿ ಅಸುನೀಗಿದ್ದಳು. ಪ್ರೀತಿಯ ಮಗಳಿಗೆ ದಾಂಪತ್ಯದ ಪ್ರಾಥಮಿಕ ಪಾಠವನ್ನು ಹೇಳಿಕೊಡಲು ಅವಳಿರಲಿಲ್ಲ. ಒಲವಿನ ಭಾವಗಳು ಕೂಡಾ ಪಹರೆಯವರ ಕಣ್ಣುತಪ್ಪಿಸಿ ಸುಳಿಯದ ಅಂತಃಪುರದೊಳಗೆ ಪ್ರಕೃತಿ ಸಹಜ ಪಾಠಗಳ ಗಾಳಿ ಸುಳಿಯಲಿಲ್ಲ.

ಆದ್ದರಿಂದಲೇ ಅವರಿಬ್ಬರ ನಿಷೇಕ ಪ್ರಸ್ತದ ದಿನ ಏನಾಗಬಾರದಿತ್ತೋ ಅದು ಆಗಿಹೋಯ್ತು. ಪ್ರಥಮ ರಾತ್ರಿಯ ಕನಸು ಕಾಣುತ್ತ ಪಲ್ಲಂಗದ ಮೇಲಿದ್ದ ಪುರುಕುತ್ಸನನ್ನು ಎಳೆದು ಗುದುಮುರುಗೆಯಿಟ್ಟು, ಕಚ್ಚಿ, ಹೊಡೆದು ಮೂಲೆಗೊರಗಿಸಿದ್ದಳು ಪುರುಕುತ್ಸಾನಿ. ದಿನವೂ ಆಟವಾಡುವಾಗ ನಡೆಯುವ ಸಹಜಕ್ರಿಯೆಯಿದಾಗಿತ್ತು. ಆದರೆ ಅಂಗಸಂಗದ ಬಗ್ಗೆ ತಂದೆಯಿಂದ ಅಲ್ಪಸ್ವಲ್ಪ ಅರಿತಿದ್ದ ಪುರುಕುತ್ಸನಿಗೆ ಇದರಿಂದ ತೀರ ಅವಮಾನವಾಗಿತ್ತು. ಅವನು ಪುರಕುತ್ಸಾನಿಯೊಂದಿಗಿನ ದಾಂಪತ್ಯದ ಬಂಧವನ್ನು ಅಲ್ಲಿಗೇ ಮುಕ್ತಾಯಗೊಳಿಸಿಕೊಂಡಿದ್ದ.

ತಿರಸ್ಕೃತನಾದ ಪುರುಷನಿಗೆ ಯಾವಾಗಲೂ ತನ್ನ ಪೌರುಷತ್ವವನ್ನು ಸಾಬೀತುಪಡಿಸುವ ತವಕ. ಪುರುಕುತ್ಸನೂ ಅದನ್ನೇ ಮಾಡಿದ. ರಾಜಗಣಿಕೆಯರೊಂದಿಗೆ ವಿಲಾಸ, ವಿನೋದಗಳಲ್ಲಿ ಕಳೆದುಹೋದ. ಗೆಳತಿ ಸುಂದರಿಯಿಂದ ಹೆಣ್ಣಾಗುವ ಪಾಠ ಕಲಿತ ಪುರುಕುತ್ಸಾನಿ ಪತಿಯನ್ನು ಸಂಧಿಸಿದರೂ ಅವನು ಇವಳನ್ನು ತಿರುಗಿಯೂ ನೋಡಲಿಲ್ಲ. ಇತ್ತ ಮಾಂಧಾತ ಮಹಾರಾಜ ರಾಜಯಕ್ಷ್ಮದಿಂದ ಮರಣಹೊಂದಿದ. ಇಡೀರಾಜ್ಯ ಅರಾಜಕತೆಯಲ್ಲಿ ಮುಳುಗಿಹೋಗುವ ಹೊತ್ತು ಪುರುಕುತ್ಸಾನಿಯೊಳಗಿನ ರಾಜ ಎಚ್ಚೆತ್ತುಕೊಂಡಿದ್ದ.

ಬದುಕಿನ ಎಳೆಗಳು ಅಂಗೈಯಿಂದ ತಪ್ಪಿಸಿಕೊಂಡು ಹಾರಿಹೋದ ಗಳಿಗೆಯಲ್ಲಿ ಅವಳು ರಾಜ್ಯಾಡಳಿತದ ಲಗಾಮನ್ನು ಬಿಗಿಯಾಗಿ ಹಿಡಿದಳು. ಮದಿರೆ, ಮಾನಿನಿಯರ ಸಂಗದಲ್ಲಿ ಕಳೆದುಹೋದ ಮಹಾರಾಜನನ್ನು ರಾಜವರ್ಗದವರ ಆಮೋದಪ್ರಮೋದಕ್ಕೆಂದೇ ಮೀಸಲಾದ ಆಮ್ರವನಕ್ಕೆ ಕಳಿಸಿದಳು. ಅವನು ಅಲ್ಲಿ ಇನ್ನೂ ಪೂರ್ತಿಯಾಗಿ ಹೆಣ್ಣಾಗದ ಕನ್ಯೆಯರ ಮೀಸಲು ಮುರಿಯುತ್ತಾ, ತನ್ನೊಳಗಿನ ಪೌರುಷತ್ವಕ್ಕೆ ಹೆಮ್ಮೆಪಡುತ್ತಿರುವಾಗ ಇವಳು ರಾಜ್ಯದ ಜನತೆಯ ಕಷ್ಟ, ಸುಖಗಳಿಗೆ ಸ್ಪಂದಿಸುತ್ತ ಎಲ್ಲರ ಕಣ್ಮಣಿಯಾದಳು.

ದಶಾರ್ಣದ ರಾಜ ಭದ್ರಾಯು ಅಯೋಧ್ಯೆಯ ಮೇಲೆ ದಾಳಿ ಮಾಡಿದಾಗ ತನ್ನ ಸೈನ್ಯದೊಡನೆ ಮುನ್ನುಗ್ಗಿ ಅಯೋಧ್ಯೆ ಯಾವ ಯೋಧನೂ ಗೆಲ್ಲಲಾರದ ನಾಡೆಂದು ಮತ್ತೊಮ್ಮೆ ಪುರುಕುತ್ಸಾನಿ ಸಾಬೀತುಮಾಡಿದಳು. ಸಗರನೆಂಬ ನಾಮದಿಂದ ಖ್ಯಾತನಾದ ಅವನು ಸೋಲಿನ ನಿರಾಶೆಯನ್ನು ತಡೆಯಲಾರದೇ ಆಮ್ರವನಕ್ಕೆ ನುಗ್ಗಿ ಪುರುಕುತ್ಸನನ್ನು ಸೆರೆಹಿಡಿದು ಓಡಿಬಿಟ್ಟ. ಅಷ್ಟಕ್ಕೇ ನಿಲ್ಲದೇ ಅವಧೇಶ್ವರಿಯ ಒಡಲಿನಲ್ಲಿ ಮತ್ತೆ ಮದುವೆಯಾಗುವ ಆಸೆಯನ್ನು ಚಿಗುರಿಸಿದ. ಸ್ವತಃ ಪುರುಕುತ್ಸ ಮಹಾರಾಜನೇ ಮುಂದೆನಿಂತು ಅವಳನ್ನು ತನಗೆ ಧಾರೆ ಎರೆದುಕೊಡಲು ಒಪ್ಪಿರುವುದಾಗಿ ಓಲೆ ಕಳಿಸಿದ. ಆ ಕ್ಷಣಕ್ಕೆ ಪುರುಕುತ್ಸಾನಿ ವಿಚಲಿತಳಾದಳೇನೊ ನಿಜ. ಮತ್ತೆ ಸಾವರಿಸಿಕೊಂಡು ಕರ್ತವ್ಯದ ಕರೆಗೆ ಓಗೊಟ್ಟಳು. ಮದುವೆಯ ಪ್ರಸ್ತಾಪವನ್ನು ತಿರಸ್ಕಾರದಿಂದ ಬದಿಗೊತ್ತಿದಳು.

ವಿಕ್ಷಿಪ್ತ ಸಗರ! ಕೈಕಾಲು ಕುತ್ತಿಗೆಗಳಿಲ್ಲದ ತನ್ನ ಕುರೂಪದಿಂದಾಗಿಯೇ ಅವಳು ತನ್ನನ್ನು ತಿರಸ್ಕರಿಸಿದಳೆಂದುಕೊಂಡ. ಅದೇ ಕಿಚ್ಚಿನಲ್ಲಿ ಸುತ್ತಮುತ್ತಲ ರಾಜ್ಯಗಳನ್ನೆಲ್ಲ ಜಯಿಸಿ ನೂರು ಕನ್ಯೆಯರನ್ನು ವರಿಸಿ ನೂರಾರು ಮಕ್ಕಳನ್ನು ಪಡೆಯುವುದರಲ್ಲಿ ಮುಳುಗಿಹೋದ. ಅವಧೇಶ್ವರಿಯ ಎದುರು ಈಗ ಸಂತಾನದ ಪ್ರಶ್ನೆ ದೊಡ್ಡ ಸವಾಲಾಗಿ ನಿಂತಿತ್ತು. ಗಂಡನನ್ನು ಸೆರೆಯಲ್ಲಿಟ್ಟ ಸಗರನನ್ನವಳು ಬಿಡುಗಡೆಗಾಗಿ ಬೇಡಲಾರಳು. ಹಾಗೆಂದು ಇನ್ನೊಂದು ಮದುವೆಯಾಗುವುದೂ ಪ್ರಜೆಗಳ ದೃಷ್ಟಿಯಲ್ಲಿ ಪಾಪಕಾರ್ಯ. ಜೀವನದ ಎಲ್ಲ ಯುದ್ಧಗಳನ್ನು ಜಯಿಸಿದ ಮೇಲೂ ಹೆಣ್ಣು ಜಯಿಸಲಾಗದ ಸಮರವಿದು!

ತಾಕ್ರ್ಷ, ಅವಳ ಇಡಿಯ ಬದುಕಿನಲ್ಲಿ ಜೊತೆಯಾದ ಗೆಳೆಯ. ಸಾಮಾನ್ಯ ಯೋಧನಾದರೂ ರಾಜಕಾರ್ಯದಲ್ಲಿ ನಿಪುಣ. ಇಬ್ಬರೂ ಸೇರಿ ದೇಮಮಹರ್ಷಿಗಳ ನೆರವಿನಿಂದ ಸಿಂಹಭಟ್ಟನ ಮೂಲಕ ನಿಯೋಗ ಪದ್ಧತಿಯಲ್ಲಿ ಮಗುವನ್ನು ಪಡೆಯುವ ಸಿದ್ಧತೆ ಮಾಡುತ್ತಾರೆ. ಆದರೆ ಪ್ರಜೆಗಳಿಗೆಲ್ಲ ಮಹಾರಾಜನೇ ನಿಯೋಗಕ್ಕೆ ಬರುತ್ತಿದ್ದಾನೆಂದು ಸುದ್ಧಿ ಹಬ್ಬಿಸುತ್ತಾರೆ. ಎಲ್ಲವೂ ಯೋಜನೆಯಂತೆ ನಡೆದು ತೃಸದಸ್ಯು ರಾಜ್ಯದ ಮುಂದಿನ ಉತ್ತರಾಧಿಕಾರಿಯಾಗುತ್ತಾನೆ. ಆದರೆ ಹೆಣ್ಣಿನ ಶೀಲಕ್ಕೆ ಎಂತಹ ಕತ್ತಲೆಯಲ್ಲೂ ಕನ್ನಡಿಯೊಂದು ಇದ್ದೇ ಇರುತ್ತದೆ. ಅಂತಹ ಕನ್ನಡಿಯಾಗಿ ಭೀಮಭಟ್ಟ ಅವಳ ಜೀವನನುದ್ದಕ್ಕೂ ಕಾಡುತ್ತಾನೆ. ಮುದ್ದಿನ ಮಗ ತ್ರಸದಸ್ಯು ಅಮ್ಮನೆದುರು ನಿಂತು ಪ್ರಶ್ನಿಸುತ್ತಾನೆ,

“ಅಮ್ಮಾ, ನಾನು ಯಾರ ಮಗ?”
“ಯಾರ ಹೆಸರಲ್ಲಿ ನೀನು ಪಟ್ಟಕ್ಕೆ ಬಂದೆಯೋ ಅವರ ಮಗ ನೀನು.”
“ಮತ್ತೆ ಜನರೆಲ್ಲ ಆ ಹುಚ್ಚು ಸಿಂಹಭಟ್ಟನ ಮಗ ನಾನು ಎನ್ನುತ್ತಾರೆ”
ಅವನ ಉತ್ತರ ಅವಳ ಎದೆಯನ್ನು ಘಾಸಿಗೊಳಿಸಿತು. ಗುರುದೇಮರು ತ್ರಸದಸ್ಯುವನ್ನು ಸಮಾಧಾನಗೊಳಿಸಲು ಹೇಳಿದರು, “ಮಗು, ಎಲ್ಲರೂ ಇಲ್ಲಿ ಈಶ್ವರನ ಮಕ್ಕಳು”
ಅವನ ಸಿಟ್ಟು ಶಾಂತವಾಗಲಿಲ್ಲ.
“ಸಾಕು ಒಣ ವೇದಾಂತ. ಹೇಳು ನಾನು ಯಾರ ಮಗ?”
ಪುರುಕುತ್ಸಾನಿಯ ಸಂಯಮದ ಕಟ್ಟೆ ಒಡೆದಿತ್ತು. ಅವಳೂ ನಿರ್ಧಾರದ ಧ್ವನಿಯಲ್ಲಿ ಹೇಳಿದಳು,
“ನಾನು ಇಲ್ಲಿಯವರೆಗೆ ಪುರುಕುತ್ಸನ ವಿಧವೆಯಷ್ಟೇ ಆಗಿದ್ದೆ. ನಿನ್ನ ಮಾತುಗಳಿಂದ ನಾನಿನ್ನು ಈ ಹುಚ್ಚು ಬ್ರಾಹ್ಮಣನ ಸೂಳೆ.” ಮತ್ತೆ ಮುತ್ತೈದೆಯ ಪೋಷಾಕು ಧರಿಸಿದ ಪುರುಕುತ್ಸಾನಿ ಸಿಂಹಭಟ್ಟನೊಂದಿಗೆ ದಾಂಪತ್ಯಧರ್ಮವನ್ನು ಪಾಲಿಸುತ್ತಾಳೆ.

ಎಲ್ಲ ಮುಗಿದು ಮತ್ತೆ ತಾಕ್ರ್ಷನೊಂದಿಗೆ ಆಮ್ರವನಕ್ಕೆ ಬಂದ ಪುರುಕುತ್ಸಾನಿಯ ಮನಸ್ಸಿನಲ್ಲಿ ಭಾವನೆಗಳ ತಾಕಲಾಟ. ಸುತ್ತ ಹಸಿರಿನ ನಡುವೆ ಬೆಳ್ಳಗೆ ಅರಳಿನಿಂತ ಆಮ್ರಪುಷ್ಪಗಳನ್ನು ನೋಡುತ್ತಾ ಕೇಳುತ್ತಾಳೆ, “ ಈ ಪುಷ್ಪಗಳ ಮೇಲೆ ಹಾರಾಡುವ ಹುಳುಗಳು ಯಾವುವು?”
“ಅವು ಜೇನ್ನೊಣಗಳು, ಮಹಾರಾಣಿ”
“ಅವುಗಳ ಕಾಲ ಮೇಲಿನ ಹುಡಿ?”
“ಇನ್ಯಾವುದೋ ಆಮ್ರಪುಷ್ಪದ ಕೇಸರ”
“ಯಾವ ಭೃಂಗದ ಮೇಲಿನ ಯಾವ ಹೂವಿನ ಹುಡಿ ಆಮ್ರಫಲಕ್ಕೆ ಕಾರಣವಾಯಿತೆಂದು ಯಾರಿಗಾದರೂ ತಿಳಿದಿದಿಯೆ?”
“ಆ ಹೂವಿಗೆ ಮಾತ್ರ ತಿಳಿದಿರಬಹುದು”
“ಪ್ರಕೃತಿಗಿರುವ ಔದಾರ್ಯ ಮನುಷ್ಯನಿಗಿಲ್ಲ ಒಪ್ಪುತ್ತೀಯಾ?”
“……….”
“ಇದ್ದಕ್ಕಿದ್ದಂತೇ ಅವಳು ಹಾಡತೊಡಗುತ್ತಾಳೆ,

ನಂದನವನದಲಿ | ಹಾರುವ ದುಂಬಿಯು|
ತಂದೆಯ ಹೆಸರನು ಕೇಳುವುದಿಲ್ಲ|
ಚೆಂದದ ವನದಲಿ| ಉಲಿಯುವ ಕೋಗಿಲೆ|
ತಂದೆಯ ಬರವಿಗೆ ಕಾಯುವುದಿಲ್ಲ|”

ತಾಕ್ರ್ಷ ಮೌನವಾಗಿ ಅವಳ ಹಾಡನ್ನು ಕೇಳುವನು. ಸಗರನ ಮರಣದಿಂದಾಗಿ ಬಿಡುಗಡೆಗೊಂಡ ಪುರುಕುತ್ಸನನ್ನು ಕರೆತರಲು ತಾನು ಹೋದಾಗ ಅವನಾಡಿದ ಮಾತುಗಳು ತಾಕ್ರ್ಷನಿಗೆ ನೆನಪಾದವು.

“ಮಹಾರಾಜ, ಮರಳಿ ಹೋಗೋಣ, ಬಾ”
“ಎಲ್ಲಿಗೆ?”
“ಅಯೋಧ್ಯೆಗೆ”
“ಯಾರಿಗಾಗಿ?”
“ಪುರುಕುತ್ಸಾನಿ ಕಾಯುತ್ತಿದ್ದಾಳೆ ನಿಮ್ಮ ಬರವಿಗೆ”
“ಯಾರವಳು?”
“ನರ್ಮದಾ ಪುರುಕುತ್ಸಾನಿ, ನಿಮ್ಮ ಮಡದಿ”
“ಅವಳ ಹೆಸರೆತ್ತಬೇಡ. ಪ್ರಜೆಗಳ ಕಣ್ಣಿಗೆ ಮಣ್ಣೆರಚಿ ನನ್ನ ಅನುಪಸ್ಥಿತಿಯಲ್ಲಿ ಮಗನನ್ನು ಹೆತ್ತು ನನ್ನನ್ನು ಅಪ್ಪನ ಪಟ್ಟಕ್ಕೇರಿಸಿದ ದ್ರೋಹಿ ಅವಳು. ಮೋಸಗಾರ್ತಿ, ಮಾಟಗಾತಿ, ಗದ್ದಾವಿ. ಯುದ್ಧ ಮಾಡಿಯಾದರೂ ಸರಿಯೆ. ಅವಳಿಂದ ನನ್ನ ರಾಜ್ಯವನ್ನು ಮರಳಿ ಪಡೆಯುತ್ತೇನೆ.”
ಸರಿರಾತ್ರಿಯಲಿ ತಾಕ್ರ್ಷನ ಖಡ್ಗ ದೊರೆಯ ಕೊರಳನ್ನು ಅರಿದದ್ದು ಯಾರಿಗೂ ಗೊತ್ತಿರಲಿಲ್ಲ! ಜೀವನದುದ್ದಕ್ಕೂ ನೊಂದ ರಾಣಿ ಇನ್ನೂ ನೋಯುವುದು ಅವನಿಗೆ ಬೇಕಿರಲಿಲ್ಲ.
ಈ ಎಲ್ಲ ಪಾತ್ರಗಳ ಎದೆಯಾಳದ ಕೂಗು ಋಗ್ವೇದದ ಋಚೆಯಾಗಿ ಹೊರಹೊಮ್ಮಿತು ಎಂಬುದು ಕೂಡ ಇತಿಹಾಸ ತೆರೆದು ತೋರಿಸದ ಸತ್ಯ!

ಪುರುಕುತ್ಸಾನಿ ಮಾತನಾಡುತ್ತಿದ್ದಾಳೆ,
“ಇದೀಗ ಬೆಳಕು ಹರಿಯುತ್ತಿದೆ. ಸುದೀರ್ಘ ಕತ್ತಲ ಪಯಣದ ನಂತರ ಕೊನೆಗೆ ಹೊಚ್ಚಹೊಸ ಬೆಳಗಿನೊಂದಿಗೆ ಮುಖಾಮುಖಿಯಾಗಿರುವೆ. ಬಾ ತಾಕ್ರ್ಷ, ಯಾಕೆ ಕತ್ತಲೆಯೆಡೆಗೆ ಮುಖಮಾಡಿ ನಿಂತಿರುವೆ. ಬೆಳಕಿನ ಲೋಕಕ್ಕೆ ಹೋಗಲು ನೀನೂ ಜೊತೆಯಾಗು ಬಾ. ನೀನೇ ಜೊತೆಯಾಗು ಬಾ”
ತಾಕ್ರ್ಷ ವಿಷಣ್ಣನಾಗಿ ನುಡಿಯುತ್ತಾನೆ,
“ಇತಿಹಾಸ ರಾಜ-ರಾಣಿಯರ ಕಥೆಯನ್ನು ಮಾತ್ರ ಹೇಳುತ್ತದೆಯೇ ಹೊರತು, ಗುಲಾಮನದಲ್ಲ.”
“ಇತಿಹಾಸದಾಚೆಯಿಂದ ನನ್ನನ್ನು ಎಳೆದುತಂದು ಹೆಣ್ಣಾಗಿಸು, ಕೇವಲ ಹೆಣ್ಣಾಗಿಸು”
ಅವಧೇಶ್ವರಿಯ ಕರೆಗೆ ತಾಕ್ರ್ಷ ಕರಗಿಹೋದ.

ರಾಣಿಯಾಗಲೀ, ಸಾಮಾನ್ಯಳಾಗಲಿ ಎಲ್ಲರನ್ನೂ ಸುಡುವ ಬೆಂಕಿಯಿದು ಸಂತಾನ ಮತ್ತು ಸಂಸಾರವೆಮಬ ಬಂಧ. ಬಿಚ್ಚಿ ಹೇಳಲಾಗದು, ಮುಚ್ಚಿಡಲೂ ಬಾರದು. ಬಯಲಾದರೆ ಜಗವೆಲ್ಲ ಗಹಗಹಿಸುವ ಭಯ!

ಋಗ್ವೇದದ ಋಚೆಗಳಾಗಲೀ, ಜಾನಪದದ ಕಾವ್ಯಗಳಾಗಲೀ ಇದಕ್ಕಿಂತ ಬೇರೇನನ್ನು ಹೇಳಲು ಸಾಧ್ಯ. ಇತಿಹಾಸವೆಂಬ ಹೆದ್ದಾರಿ ಇವುಗಳನ್ನೆಲ್ಲ ತನ್ನೊಳಗೆ ಬಿಟ್ಟುಕೊಡದಾದಾಗ ಒಡಲ ಹಾಡುಗಳು ಕಾಲುದಾರಿಯನು ಹಿಡಿಯುತ್ತವೆ, ಮತ್ತು ಆ ಕಿರುದಾರಿಯಲಿ ಸತ್ಯದ ಗೆರೆಗಳಿವೆ!

‍ಲೇಖಕರು Avadhi Admin

August 24, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. Ahalya Ballal

    ಅಬ್ಬಾ ಎಂಥೆಂಥಾ ಅನುಭವಗಳ ಪಾಕ ಇದು..

    ಪ್ರತಿಕ್ರಿಯೆ
  2. Sudha Hegde

    ಅಲ್ವಾ? ಅದಕ್ಕೇ ವೈದೇಹಿ ಹೇಳಿದ್ದು, ಹೆಣ್ಣಿನೊಳಗನ್ನು ನೋಡು ಅಲ್ಲಿ ವಿಶ್ವವೇ ಇದೆಯೆಂದು.

    ಪ್ರತಿಕ್ರಿಯೆ
  3. ರಘುನಾಥ

    ಆಹಾ ಚಂದದ ಗ್ರಹಿಕೆಯ ಅಭಿವ್ಯಕ್ತಿ. ಅಭಿನಂದನ

    ಪ್ರತಿಕ್ರಿಯೆ
  4. Arehole Sadashiva Rao

    ನಿಮ್ಮ ಬರಹದ ತಾಕತ್ತು…ಅದ್ಭುತ ಮೇಡಂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: