ಎಲ್ಲ ಮುಗಿದ ಮೇಲೆ..

ಒಂದಾದರೂ ಮಸೆದ ಕೊಡಲಿ ನನಗಾಗಿ ಇರಿಸಿದವನೇ..

ರೇಣುಕಾ ರಮಾನಂದ/ ಅಂಕೋಲಾ

ಎಲ್ಲ ಮುಗಿದ ಮೇಲೆ
ಜೊತೆಗೂಡಿ ಪ್ರಲಾಪಿಸಲು
ನಾನು ಬದುಕಿರುವುದಿಲ್ಲ
ಆ ನಂತರ ನಿಧಾನಕ್ಕೆ
ಒಬ್ಬೊಂಟಿಯಾಗಿ ಗೋಳಿಡುವೆಯಂತೆ
ಕಡಿದ ಗೆಲ್ಲುಗಳಿಗೊರಗಿ ಬೆವರೊರೆಸಿಕೊಳ್ಳುತ್ತ
ಬೇಕಿದ್ದರೆ ಊಳಿಡುತ್ತ
ಸುಧಾರಿಸಿಕೊಳ್ಳುವಿಯಂತೆ..
ಈಗ
ಇದೋ ಈ ಎರಡು ರಸಭರಿತ ಹಣ್ಣುಗಳ
ಮನದಣಿಯೆ ತಿಂದುಕೊಂಡು
ತುಸು ಹೆಚ್ಚೇ ಶಕ್ತಿ ತಂದುಕೊಂಡು
ತಯಾರಾಗಬೇಕು ನೀನು
ಮುಂದಿನ ಕೆಲಸಕ್ಕೆ….

ಎಲ್ಲ ಮುಗಿದ ಮೇಲೂ ಒಂದಾದರೂ
ಮಸೆದ ಕೊಡಲಿ ನನಗಾಗಿ ಇರಿಸಿದವನೇ…
ನೀನೂ ಬಲ್ಲೆ ಹೊಸದೇನಿಲ್ಲ ಇದರಲ್ಲಿ
ನನ್ನ ಹಿಂದಿರುವ ನಂಬುಗೆಯ ಗುಟ್ಟು,
ನಿನ್ನ ಹಿಂದಿರುವ ಅದೇ ಹಳೆಯ ಕಾರವಾನಿನ
ಮುರುಕು ತಟ್ಟು,
ಇಬ್ಬರಿಗೂ ಈ ಮುಂಚಿನಿಂದಲೂ ಗೊತ್ತಿರುವಂತಹುದ್ದೇ…
ಈ ನಗುವಿನದೇ ಭಾರೀ ಸಮಸ್ಯೆ ನೋಡು
ಗುಟ್ಟು ಬಿಟ್ಟುಕೊಡದು ಅದು
ಕೊನೆಯವರೆಗೂ
ಇಬ್ಬರಲ್ಲೊಬ್ಬರು ಸತ್ತು ಹುಡಿಯಾಗಿ
ಆ ಇನ್ನೊಬ್ಬರ ಕೊಡಲಿಯ ಕಾವನ್ನು
ಮತ್ತದರ ಜೊತೆ ನಿನ್ನನ್ನೂ
ತನ್ನದೇ ಬಂಧುವೆಂದು ಥೇಟ್ ನನ್ನಂತಹುದೇ
ಪಾಪದ ಮರ ನಂಬುವವರೆಗೂ…

ಚಿಂತಿಸಬೇಡ-
ಸಾವಿರ ನನ್ನಂತಹುಗಳು  ಬಲಿಯಾದರೂ
ನಿನ್ನ ತೀಟೆ ತೀರಿಸಲು
ಕೆಲವು ನೂರರಷ್ಟಾದರೂ ಬಾಕಿ ಇವೆ ಈ ಲೋಕದಲ್ಲಿ
‘ಅಲ್ಲೂ ನಿನಗೆ ಪ್ರಲಾಪವೇ ಗತಿ’
ಬರೆದುಕೊಡುವೆ ಹಣೆಗೆ ಹಚ್ಚಿಕೋ
ನಿನ್ನ ಮಕ್ಕಳು ಮರಿಗಾದರೂ ಬುದ್ದಿ ಬರಲಿ

ಮತ್ತೂ ಮತ್ತೂ ಸೋಗು ಹಾಕಬೇಡ
ತಾನೇನೋ ಮಹಾ
ಒಳ್ಳೆಯವನು ಎಂಬಂತೆ…
ಎಲ್ಲ ಮುಗಿದ ಮೇಲೆ ಹತಾಶೆಯ ಹೊದ್ದುಕೊಂಡು ಅಳುಕೊಂದನ್ನು ತಳ್ಳಲೆಂದೇ ನಗುತ್ತಿರುವವನಂತೆ…
ಮರುಕ ಉಕ್ಕುಕ್ಕಿ ಬರುತ್ತಿದೆ ನಿನ್ನ
ವಿವಿಧವಿನೋದಾವಳಿಯ ನಾಟಕಕ್ಕೆ

ಕಡಿವ ಮೊದಲು
ಮಸೆದ ಕೊಡಲಿ ಬಿಕ್ಕಿ ಬಿಕ್ಕಿ ಅಳದಿದ್ದರೇನಾಯಿತು
ಸದ್ಯ ನಗುವುದಿಲ್ಲ ಅದು ನಿನ್ನಂತೆ
ನಿನ್ನೆ ಇದೇ ಸಮಯಕ್ಕೆ
ಇನ್ಯಾರನ್ನೋ ತುಂಡರಿಸಿ ರಕ್ತ ಚಲ್ಲಾಡಿ ಬಂದಿರುವ
ಕಷ್ಟ ಗೊತ್ತಿದೆ ಅದಕ್ಕೆ..

ಈಗಲೂ ನೀನು ಬೇಸರಗೊಳ್ಳಬಾರದೆಂದು
ನಗುತ್ತಲೇ
ದುಃಖಿಸುತ್ತಿರುವೆ.
ಮರುಕಪಡುತ್ತಲೂ ಇದ್ದೇನೆ
ನಿನ್ನ ಅನಾಚಾರಕ್ಕೆ ಕುತ್ತಿಗೆಯೊಡ್ಡಲೇನೂ
ಬೇಸರವಿಲ್ಲ ನನಗೆ
ಸಾವಿನಲ್ಲಿರುವ ನೆಮ್ಮದಿ ನಿನ್ನ
ವಂಚನೆಯಲ್ಲಿಲ್ಲವಲ್ಲ..

ಎಚ್ಚರಿಸಬೇಕೆಂದುಕೊಂಡಿದ್ದೆ ನಿನ್ನ ಕುರಿತು
ಕೆಲವಷ್ಟು ಮುಗ್ಧ ನೆಮ್ಮದಿಗಳಿಗೆ
ಆದರೇನು ಮಾಡಲಿ
ನಯವಂಚನೆಗಳಿಗೆ
ಬಾಯಿ ಕೊಡುವ ಸಂಭ್ರಮದಲ್ಲಿ
ಸೃಷ್ಟಿಕರ್ತ ನನ್ನಂತಹ ಅದೆಷ್ಟೋ
ಪ್ರಾಮಾಣಿಕತೆಗಳ
ಧ್ವನಿಪೆಟ್ಟಿಗೆ ಕಿತ್ತುಬಿಟ್ಟನಲ್ಲ…

‍ಲೇಖಕರು sakshi

July 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. hema sadanand amin

    ಹೃದಯಸ್ಪರ್ಶಿ ಕವನ . ಒಂದೊಂದು ಸಾಲು ವಾಸ್ತವವನ್ನು ಎತ್ತಿಹಿಡಿದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: