ಆದರೆ ಅವುಗಳನ್ನು ನೋಡುವ ಕಣ್ಣುಗಳು..

ದಾದಾಪೀರ್ ಜೈಮನ್.

ಹ್ಯಾರಿಸ್ ಒಬ್ಬ ತೆರೆದ ಮನಸ್ಸಿನ ಚಿತ್ರಕಲಾವಿದ. ಅವನು ನೋಡುವ ಜಗತ್ತಿನ ಪ್ರತಿಯೊಂದೂ ಅವನ ಸೃಜನಶೀಲತೆಗೆ ವಸ್ತುವಾಗುತ್ತದೆ. ಇದರಿಂದ ವ್ಯಕ್ತಿ, ಧರ್ಮ ಮತ್ತು ದೇವರುಗಳು ಯಾವುದೂ ಹೊರತಾಗಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಅವನ ಇತ್ತೀಚಿನ ರಚನೆಗಳ ಏಕವ್ಯಕ್ತಿ ಪ್ರದರ್ಶನವಿದೆ. ಮನುಷ್ಯ ದೇಹದ ಮೇಲಿನ ಅವನ ಚಿತ್ರಗಳು ಬಹಳ ಕಡೆಗಳಲ್ಲಿ ‘ಗೇ’ ಎಂದು ಘಂಟಾಘೋಷವಾಗಿ ಬರೆದುಕೊಂಡಿವೆ. ಇನ್ನು ಕೆಲವುಗಳು ಸಲಿಂಗಕಾಮದ ಕುರಿತಾಗಿವೆ. ಇಲ್ಲಿನ  ಮನುಷ್ಯ ದೇಹದ ಪ್ರತಿಯೊಂದು ರಚನೆಯ ಚಿತ್ರಗಳೂ  ಅದನ್ನು ದೇಗುಲವಾಗಿ ಪರಿವರ್ತಿಸುವ ಶಕ್ತಿ ಹೊಂದಿವೆ.

ಆದರೆ ಅವುಗಳನ್ನು ನೋಡುವ  ಕೆಲವು ಕಣ್ಣುಗಳು ಮಾತ್ರ ಅವುಗಳಲ್ಲಿ ಕೆಟ್ಟದ್ದನ್ನ ಮತ್ತು ಅಸಹ್ಯವನ್ನೇ ಹುಡುಕುತ್ತವೆ. ಇದರಿಂದ ಚಿತ್ರ ಪ್ರಮಾಣೀಕರಿಸುವ ಸಮಿತಿಯೂ ಹೊರತಾಗಿಲ್ಲ ಎಂಬುದೇ ಬೇಸರದ ಸಂಗತಿ.

ಚಿತ್ರದ ಮತ್ತೊಂದು ಮುಖ್ಯ ಪಾತ್ರ ವಿಷ್ಣು. ಕಬಡ್ಡಿ ಆಟಗಾರ.  ಹನುಮಂತನ ಪರಮಭಕ್ತ.   ಹ್ಯಾರಿಸ್  ಇವನ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾನೆ.  ಹ್ಯಾರಿಸ್ ಕಟ್ಟುಮಸ್ತಾದ ದೇಹವುಳ್ಳ ವಿಷ್ಣುವನ್ನೇ ತನ್ನ ಮುಂದಿನ ಚಿತ್ರಗಳ ರೂಪದರ್ಶಿಯಾಗಿ ಮಾಡ್ಕೊಂಡಿದ್ದಾನೆ. ವಿಷ್ಣುವಿಗೆ ಹ್ಯಾರಿಸ್ನ ಮೇಲೆ ಮನಸ್ಸಿದ್ದರೂ ಅವನು ಬೆಳೆದು ಬಂದ ಪರಿಸರ ಅವನಾಳದಲ್ಲಿ ಹುಟ್ಟಿದ ಪ್ರೇಮವನ್ನು ಒಪ್ಪಿಕೊಳ್ಳುವುದಕ್ಕೆ ಬಿಡುತ್ತಿಲ್ಲ. ಗೊಂದಲದಲ್ಲಿದ್ದಾನೆ. ತಪ್ಪು ಮತ್ತು ಸರಿ, ಒಳಗಿನ ಹೃದಯ ಮತ್ತು ಹೊರಗಿನ ಮೆದುಳುಗಳು  ಇವುಗಳ ನಿಯಂತ್ರಣಗಳಲ್ಲಿ ತನ್ನಾಳದ ದನಿಗೆ ಕಿವಿಗೊಡಲು ಪ್ರಯತ್ನಿಸುವ ಸಂಕೀರ್ಣ ಪಾತ್ರ.

ಮುಸ್ಲಿಂ ಕುಟುಂಬಕ್ಕೆ ಸೇರಿದ ಸಿಯಾ ಇವರಿಬ್ಬರ ಸ್ನೇಹಿತೆ. ಎಲ್ಲ ಹೆಣ್ಣುಮಕ್ಕಳಂತೆ ಮನೆ, ಕೆಲಸ ಎಲ್ಲ ಕಡೆಗಳಲ್ಲೂ ಉಸಿರು ಕಟ್ಟುವಷ್ಟು ನಿರ್ಬಂಧಗಳನ್ನು ಎದುರಿಸುತ್ತಿರುವಾಕೆ.  ಇವಳಾಳದ ಬಿಡುಗಡೆಗೋ, ಪ್ರತಿಭಟನೆಯ ಮೊದಲ ಅಸ್ತ್ರವೇನೋ  ಎಂಬಂತೆ ಫೇಸ್ಬುಕ್ನಲ್ಲಿ ‘ಸಿಯಾ ರಾಷನಲ್’ ಎಂದು ಅವಳ ಪ್ರೊಫೈಲ್ ಇದೆ. ಸಿಯಾ ತನ್ನ ಋತುಚಕ್ರ ಮತ್ತು ಸ್ಯಾನಿಟರಿ ನಾಪ್ಕಿನ್ನ ವಿಷಯದ ಸಲುವಾಗಿ ಕಚೇರಿಯಲ್ಲಿ ಮಾಲೀಕನಿಂದ  ತನಗಾದ ಅವಮಾನದ ವಿರುದ್ಧ ತಿರುಗಿ ಬೀಳುತ್ತಾಳೆ. ಪೊಲೀಸ್ ಸ್ಟೇಷನ್ನಿನಲ್ಲಿ ಅದು ಗಂಭೀರವಾಗಿ ತೆಗೆದುಕೊಳ್ಳುವ ವಿಷಯವೇ ಅಲ್ಲವೆಂದು ಅಧಿಕಾರಿ ಮುಗುಳ್ನಗುತ್ತಾನೆ. ಅವಳು ಒಂದು ಅಭಿಯಾನವನ್ನೇ ಆರಂಭಿಸುತ್ತಾಳೆ. ‘ನನ್ನ ದೇಹ ನನ್ನ ಹಕ್ಕು’ ‘ನನ್ನ ರಕ್ತ ನಿನ್ನ ಹುಟ್ಟು’ ‘ಮುಟ್ಟಿನ ರಕ್ತ ಅಶುದ್ಧವಲ್ಲ’ ಘೋಷಣೆಗಳು ಮೊಳಗುತ್ತವೆ. ಅದರಿಂದ ಪೊಲೀಸ್ ಅವರನ್ನು ಬಂಧಿಸುತ್ತಾರೆ.

ಇನ್ನೊಂದು ಕಡೆ ಹಾರಿಸ್ನ ಏಕವ್ಯಕ್ತಿ ಪ್ರದರ್ಶನದ ಎಲ್ಲ ಚಿತ್ರಗಳನ್ನು ಸಮಾಜದ ಒಂದು ವರ್ಗ ಸುಟ್ಟು ಹಾಕುತ್ತಾರೆ. ವಿಷ್ಣುವನ್ನು ಸಲಿಂಗಕಾಮಕ್ಕೆ ಮದ್ದು ಕೊಡಿಸಲು ಚಿಕಿತ್ಸಾ ಘಟಕಕ್ಕೆ ಅವರ ಮನೆಯವರು ಕರೆದೊಯ್ಯುತ್ತಾರೆ. ಚಿತ್ರದ ಕೊನೆಯ ದೃಶ್ಯದಲ್ಲಿ ಹ್ಯಾರಿಸ್ ಪ್ರತಿಭಟನೆಗೆ ಆಯ್ದುಕೊಳ್ಳುವುದೂ ಕಲೆಯನ್ನೇ.

ಅವನು ಬಿಡಿಸಿರುವ ಆ ಚಿತ್ರದಲ್ಲಿ ತನ್ನ ಗೆಳೆಯ ವಿಷ್ಣುವಿನ ದೇವರಾದ ಹನುಮಂತ ಬೆತ್ತಲು ಮತ್ತು  ‘ಸೆಕ್ಷನ್ ೩೭೭’ ರನ್ನೊಳಗೊಂಡ ಹಲವಾರು ಪುಸ್ತಕಗಳ ಪರ್ವತವನ್ನು ಎತ್ತಿಕೊಂಡಿದ್ದಾನೆ. ತನ್ನಿಂದ ತನ್ನ ವಾಸವಿರುವ ಮನೆ, ವೃತ್ತಿ ಬದುಕು ಕೊನೆಗೆ ತನ್ನ ಪ್ರೇಮಿಯನ್ನು ಕಿತ್ತುಕೊಂಡಿರುವ ಸಮಾಜದ ಮೇಲಿನ ಅವನ ಆಕ್ರೋಶವು ಚಿತ್ರದ ಮೂಲಕ ಹೇಳಿದ್ದಾನೆ. ಕೊನೆಯ ದೃಶ್ಯವಂತೂ ಮಹಾಶ್ವೇತಾದೇವಿಯವರ ‘ದೊಪ್ಡಿ’ ಕಥೆಯನ್ನು ನೆನಪಿಸಿಬಿಡುತ್ತದೆ. ಹ್ಯಾರಿಸ್ ಇಲ್ಲಿ ತನ್ನ ಮೇಲೆ ಹಲ್ಲೆ ಮಾಡಿದವರ ಮುಂದೆ ಬೆತ್ತಲಾಗಿ ಸಮುದ್ರದ ಅನಂತ ಬಯಲಿನಲ್ಲಿ ನಡೆಯುತ್ತಾ ಹೋಗುತ್ತಾನೆ. ( ಈ ದೃಶ್ಯವಂತೂ ಸೆನ್ಸಾರ್ ಮಂಡಳಿ ಚಿತ್ರವನ್ನು ನಿಷೇಧಿಸಿರುವುಕ್ಕೆ ಕೊಟ್ಟಿರುವ ಕಾರಣಗಳಲ್ಲಿ ಮೊದಲನೆಯದು ಎಂಬುದನ್ನು ವಿವರಿಸಬೇಕಾಗಿಲ್ಲ).   ಹೋರಾಟ ಜಾರಿಯಲ್ಲಿದೆ ಎನ್ನುವಲ್ಲಿಗೆ ಚಿತ್ರ ಮುಗಿಯುತ್ತದೆ.

ಚಿತ್ರದಲ್ಲಿ ಮಹಿಳೆ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯವಿದೆ. ಈ ದೃಶ್ಯ ಚಿತ್ರ ಪ್ರಮಾಣೀಕರಿಸುವ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದೆ. ಆ ದೃಶ್ಯ  ಯಾವ ಪ್ರೇಕ್ಷಕನನ್ನೂ ಕಾಮಕೇಳಿಗೆ ಪ್ರಚೋದಿಸುವ ದೃಶ್ಯವಂತೂ ಅಲ್ಲವೇ ಅಲ್ಲ. ಅಷ್ಟೇ ಯಾಕೆ ಚಿತ್ರದ ಎಲ್ಲ  ದೃಶ್ಯಗಳೂ  ಕೂಡ ತನ್ನೆಲ್ಲ ಘನತೆಯಿಂದ ಅದು ನೋಡಿಸಿಕೊಳ್ಳುತ್ತದೆ ಅದರಿಂದಲೇ ಅದಕ್ಕೊಂದು ಆಧ್ಯಾತ್ಮಿಕ ಆಯಾಮವೂ ಸೇರಿಕೊಂಡಿದೆ.

ಚಿತ್ರದಲ್ಲಿ ಮತ್ತೊಂದು ಪರಿಣಾಮಕಾರಿಯಾದ ದೃಶ್ಯವಿದೆ. ಸಿಯಾ ಮನೆಯಿಂದ ಆಚೆ ಬಂದಿದ್ದಾಳೆ. ಇನ್ನು ಮೇಲೆ ಹ್ಯಾರಿಸ್ನ ಮನೆಯಲ್ಲೇ ವಾಸ. ಆಂತರಿಕವಾಗಿ ನೊಂದ ಅವಳು ಹ್ಯಾರಿಸ್ ಮತ್ತು ವಿಷ್ಣುವಿನ ಮಧ್ಯೆ ಆರಾಮಾಗಿ ಪುಟ್ಟ ಮಗುವಿನಂತೆ ಮಲಗಿದ್ದಾಳೆ. ಮೂವರದ್ದೂ  ಗಂಭೀರ ನಿದ್ರೆ. ಜಗತ್ತಿನ ಯಾವ ನಿಯಾಮಗಳು, ಲಿಂಗಭೇದಗಳೂ ಬಾಧಿಸದ ಜಗತ್ತಿನಲ್ಲಿ ಅವರು ನಿದ್ರೆ ಹೋಗಿದ್ದಾರೆ. ಆ ಪುಟ್ಟ ದೃಶ್ಯ ಒಂದು ಕವಿತೆಯೇ ಹೌದು.

ಇಂತಹವುಗಳನ್ನು ಬಹಳ ಚೆಂದಾಗಿ ಕಟ್ಟಿಕೊಡುತ್ತಾರೆ ನಿರ್ದೇಶಕ ಜಯನ್ ಚೇರಿಯನ್. ಇನ್ನೊಂದು ದೃಶ್ಯದಲ್ಲಿ ಒಂದು ಪುಟ್ಟ ಮಗು ಮನೆಯ ಪ್ರಾಂಗಣದಲ್ಲಿ ಆಟವಾಡುತ್ತಿದೆ. ಅವಳ ಅಜ್ಜಿ ಅವಳನ್ನು ನಿರಂತರವಾಗಿ ಬೈಯುತ್ತ , ಗೇಟಿನಾಚೆ ಹೋಗದಂತೆ ನೆನಪಿಸುತ್ತ ಇದ್ದಾಳೆ. ಆ ಮಗು ಇವ್ಯಾವುಗಳನ್ನೂ ಕಿವಿಗೆ ಹಾಕಿಕೊಳ್ಳದೆಯೇ ಚೆಂಡನ್ನು ಆಡುತ್ತಿದ್ದಾಳೆ. ಆ ಹುಡುಗಿಯ ಚಿಕ್ಕಮ್ಮ ಸಿಯಾ ಅವಳ ಪುಸ್ತಕದ ಓದಿನಲ್ಲಿ ತಲ್ಲೀನಳಾಗಿದ್ದಾಳೆ.

ಸಿಯಾ ಮತ್ತು ಆ ಹುಡುಗಿಯ ಸಾತ್ವಿಕ ಪ್ರತಿಭಟನೆಗೆ ಆ ಹೆಂಗಸು ಇರುಸು ಮುರುಸಾಗಿದ್ದಾಳೆ. ಚಿತ್ರ ಇಂತಹ ಹಲವಾರು ದೃಶ್ಯಗಳ ಕೊಲಾಜ್. ಚಿತ್ರದ ಹಲವಾರು ದೃಶ್ಯಗಳು ಒಂದೊಂದು ಕವಿತೆಯಂತೆಯೇ ಇವೆ. ಚಿತ್ರ ಹ್ಯಾರಿಸ್, ವಿಷ್ಣು ಮತ್ತು ಸಿಯಾರಂತಹ ಹಲವಾರು ಜನರು ತಮ್ಮ ಅಸ್ಮಿತೆಗಾಗಿ , ಬದುಕಿನ ಘನತೆಗಾಗಿ ಮಾಡುತ್ತಿರುವ ಹೋರಾಟ – ಹೆಣಗಾಟಗಳ ಕಥೆಯನ್ನೇ ಹೇಳುತ್ತದೆ.

ಸ್ಯಾನಿಟರಿ ನಾಪ್ಕಿನ್ಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿರುವ ಈ ಕಾಲದಲ್ಲಿ, ಕಲೆಯ ಮೇಲಿನ ಹೆಚ್ಚುತ್ತಿರುವ ನಿರ್ಬಂಧಗಳು, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಳು ಹೀಗೆ ಹತ್ತು ಹಲವಾರು ಕಾರಣಗಳಿಂದ Ka bodyscapes ಸಿನಿಮಾ ಪ್ರಸ್ತುತವಾಗಿಬಿಡುತ್ತದೆ. ಯಾವುದೇ ಒಂದು ಸಿನಿಮಾ ಅದರ ಕಥೆ ಹೇಳುತ್ತಲೇ ಕಥನವಾಗಿಬಿಡುವ ಗುಣ ಹೊಂದಿದ್ದರೆ ಅದು ಹೆಚ್ಚಾಗಿ ಪ್ರೇಕ್ಷಕನಿಗೆ ಅದರ ಎಲ್ಲ ಕೊರತೆಗಳಾಚೆಗೂ ದಕ್ಕುತ್ತದೆ.  ಈ ಸಿನಿಮಾ ಕೂಡ ಆಳವಾಗಿ ತಟ್ಟುವ ಗುಣ ಹೊಂದಿದೆ.

 

 

 

 

 

‍ಲೇಖಕರು sakshi

July 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: