ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ಗ್ರಹಿಕೆಯೂ ಅನುವಾದವೇ…

ಕಂಡ ಲೋಕವನ್ನು ಮನಸ್ಸು ತನಗೆ ಅರ್ಥವಾಗುವಂತೆ ಅನುವಾದಿಸಿಕೊಳ್ಳುವ ಕ್ಷಣದಿಂದಲೇ ಅನುವಾದದ ಜೊತೆಗೆ ಬದುಕು ಕೈಕೈ ಹಿಡಿದು ಹೆಜ್ಜೆ ಹಾಕಲು ಶುರುಮಾಡುತ್ತದೆ. ಅದಕ್ಕೆ ಸ್ಪಿನ್ನರ್‌ನ ʼಎಲ್ಲ ಗ್ರಹಿಕೆಯೂ ಅನುವಾದವೆʼ ಎನ್ನುವ ಮಾತು ಎಷ್ಟು ಅರ್ಥಪೂರ್ಣವಾದದ್ದು.

ಸಾಹಿತ್ಯವಿರಲಿ, ಬದುಕಿರಲಿ ಅನುವಾದವೆನ್ನುವುದು ಹೊಸತನ್ನು ತಂದುಕೂಡಿಸುವಂತಹದ್ದು. ಅಂತರ್ಜಾಲ, ಜಾಹಿರಾತು, ತಂತ್ರಾಂಶಗಳ ಸುಳಿಯಲ್ಲಿ ಸಿಲುಕಿರುವ ಈ ಕಾಲದಲ್ಲಿ ಅನುವಾದವೆನ್ನುವುದು ಅನುದಿನದ ಅಂತರಗಂಗೆಯಂತೆ ನಮ್ಮ ಬದುಕಿನ ಎಲ್ಲ ವಲಯಗಳಲ್ಲೂ ಹರಿಯುತ್ತಿದೆ. ʼನಿಮ್ಮ ಪೇಸ್ಟನಲ್ಲಿ ಉಪ್ಪಿದೆಯೇ?ʼ ಎನ್ನುವುದರಿಂದ ಹಿಡಿದು ಸಿನಿಮಾ, ಧಾರವಾಹಿಗಳವರೆಗೆ ಹಲವು ಪರಭಾಷೆಯಿಂದ ಅನುವಾದಗೊಂಡೇ ನಮ್ಮ ಮನೆಬಾಗಿಲಿಗೆ ಬರುತ್ತಿವೆ. ಹೀಗೆ ಸರ್ವ ವ್ಯಾಪಿಯಾಗಿರೋ ಅನುವಾದ ಕ್ಷೇತ್ರದ ಹರಿವು ದೊಡ್ಡದಾಗಿದೆ. 

ಅನುವಾದದ ಅಗತ್ಯಗಳು ದೊಡ್ಡದಾಗುತ್ತಿದ್ದಂತೆ ಅನುವಾದಿಸಿ ಕೊಡಬಲ್ಲ ತಂತ್ರಾಂಶಗಳು ಹುಟ್ಟುತ್ತಿವೆ. ನಿಮ್ಮ ಅನುವಾದದ ಅಗತ್ಯಗಳನ್ನು ನಾವು ಪೂರೈಸುತ್ತೇವೆ ಎಂದು ಹಲವು ಯಂತ್ರ ಆಧಾರಿತ ಅನುವಾದ ಸೇವಾ ಸಂಸ್ಥೆಗಳು ತಲೆಯೆತ್ತಿವೆ. ಒಂದು ಹಂತಕ್ಕೆ ತಾಂತ್ರಿಕ ಅನುವಾದಗಳ ಅಗತ್ಯ ಪೂರೈಕೆಯಲ್ಲಿ ಇವು ಯಶಸ್ವಿಯಾಗುತ್ತಿವೆ. ಅನುವಾದದ ಟೂಲ್ಸ್‌ಗಳ ಅನ್ವೇಷಣೆ ಈ ನಿಟ್ಟಿನಲ್ಲಿ ದಾಪುಗಾಲಿಡುತ್ತಾ ಸಾಗುತ್ತಿದೆ. 

ಮತ್ತೊಂದೆಡೆ ಸೃಜನಶೀಲ ಅನುವಾದಗಳು ಅಗಣಿತವಾಗಿ ನಡೆದಿವೆ. ಪಂಪನ ಕಾಲದಿಂದ ನೋಡುತ್ತಾ ಬಂದರೂ ಕಾಲಕಾಲಕ್ಕೆ ಬೇರೆ ಭಾಷೆಗಳ ಪಠ್ಯಗಳನ್ನು ಹೊಸ ರೀತಿಯಲ್ಲಿ ರೂಪಾಂತರಗೊಳಿಸಿಕೊಳ್ಳುತ್ತಾ ಭಾಷೆಯು ಹೊಸ ನುಡಿಗಟ್ಟು, ಲಯ, ಕಸುವನ್ನು ಪಡೆಯುತ್ತಾ ಹೊಸ ಸಾಹಿತ್ಯ ರೂಪಗಳೊಂದಿಗೆ ಮುಂದುವರೆಯುತ್ತಿದೆ. ಹೊಸಗನ್ನಡ ಸಾಹಿತ್ಯದ ಆರಂಭದ ಘಟ್ಟವನ್ನು ನೋಡಿದಾಗ ಅನುವಾದವು ಭಾಷೆ, ಸಾಹಿತ್ಯ ರೂಪಗಳ ದೃಷ್ಟಿಯಿಂದ ಹೊಸ ದಿಕ್ಕಿನತ್ತ ಹೊರಳಲು ಕಾರಣವಾದದ್ದನ್ನು ಕಾಣಬಹುದು. ಕಾವ್ಯ, ಕಾದಂಬರಿ, ನಾಟಕಗಳ ಅನುವಾದಗಳು ಹೊಸ ದಾರಿಯನ್ನು ತೆರೆದವು.

ಎಲ್ಲ ಕಾಲದಲ್ಲೂ ಆಗುವಂತೆ ಇಲ್ಲೂ ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಆಯ್ಕೆಗಳು ಅನುವಾದ ಪಠ್ಯದ ಆಯ್ಕೆಯ ಹಿಂದೆ ಕೆಲಸಮಾಡುತ್ತಿತ್ತು. ಒಂದೆಡೆ ಮಿಷನರಿಗಳಿಂದ, ವಿದೇಶಿ ವಿದ್ವಾಂಸರಿಂದ ಪ್ರಾರ್ಥನೆಗಳೇ ಮೊದಲಾದ ಧಾರ್ಮಿಕ ಸಾಹಿತ್ಯವು ಕನ್ನಡಕ್ಕೆ ಅನುವಾದಗೊಂಡರೆ ಮತ್ತೊಂದೆಡೆ ಇಂಗ್ಲೀಷ್‌ ಓದಿಗೆ ತೆರೆದುಕೊಂಡ ಮನಸ್ಸುಗಳು ಸಾಹಿತ್ಯದ ಹೊಸ ಪ್ರಕಾರಗಳನ್ನು ತಮ್ಮ ಭಾಷೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿ ಹೊಸ ಹಾದಿಗಳನ್ನು ತೆರೆದುಕೊಂಡಿದ್ದನ್ನು ಕಾಣಬಹುದು. ಇಂಗ್ಲೀಷ್‌ ಗೀತೆಗಳಾಗಿರಬಹುದು, ಷೇಕ್ಸ್‌ಪಿಯರ್‌ನ ನಾಟಕಗಳ ಅವತರಣಿಕೆಗಳಾಗಿರಬಹುದು, ಕಾದಂಬರಿಗಳ ರೂಪಾಂತರವಾಗಿರಬಹುದು ಇವೆಲ್ಲವೂ ಈ ಬಗೆಯ ಪ್ರಯತ್ನಗಳಿಗೆ ಉದಾಹರಣೆಗಳು. ಇದರೊಟ್ಟಿಗೆ ಭಾರತೀಯ ಭಾಷೆಗಳ ನಡುವೆಯೇ ನಡೆದ ಅನುವಾದಗಳು ಮಹತ್ವದ್ದಾಗಿವೆ. 

ಇಂದಿನ ಕಾಲಘಟ್ಟದಲ್ಲಿ ಸೃಜನಶೀಲ ಅನುವಾದವು ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಹಲವು ಅನುವಾದಕರು ವಿವಿಧ ಭಾಷೆಗಳ, ವಿವಿಧ ಹಿನ್ನಲೆಗಳ ಸಾಹಿತ್ಯವನ್ನು ಕನ್ನಡದ ನೆಲಕ್ಕೆ ಪರಿಚಯಿಸುತ್ತಿದ್ದಾರೆ. ಮಹಾಶ್ವೇತ ದೇವಿ, ವಾಸುದೇವ ನಾಯರ್‌, ಪ್ರತಿಭಾ ನಾಯರ್‌, ವೋಲ್ಗಾ, ದಾಮೋದರ ಮಾವಜೊ, ಸಾರಾ ಜೋಸಫ್‌, ಕಮಲಾದಾಸ್‌, ಮಾಂಟೋ ಇನ್ನೂ ಮುಂತಾದ ಭಾರತೀಯ ಬರಹಗಾರರೊಂದಿಗೆ ಟಾಲ್ಸ್ರಾಯ್‌, ಸಿಂಗರ್‌, ಆಕ್ಟೋವಿಯಾ ಪಾಜ್‌, ಒರ್ಹಾನ್‌ ಪಾಮುಕ್‌, ನೆರೂದ, ರಿಲ್ಕ್‌, ಆನಾ ಅಹ್ಮತೋವ, ಮುರಕಮಿ ಮೊದಲಾದವರ ಸಾಹಿತ್ಯವು ನಿರಂತರವಾಗಿ ಅನುವಾದಗೊಳ್ಳುತ್ತಿವೆ. ಡಿಜಿಟಲ್‌ ಪತ್ರಿಕೆಗಳು, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳು ಹೊಸ ಅನುವಾದಕರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿವೆ.

ʼವಿಶ್ವ ಅನುವಾದ ದಿನʼದ ಅಂಗವಾಗಿ ʼಅವಧಿʼಯು ʼಅನುವಾದ ಸ್ಪೆಷಲ್‌ʼ ಸಂಚಿಕೆಯನ್ನು ಹೊರತರುತ್ತಿದೆ. ಈ ಸಂಚಿಕೆಯು ಭಾರತೀಯ ಭಾಷೆಗಳೊಂದಿಗೆ ವಿದೇಶಿ ಭಾಷೆಗಳ ಕತೆ, ಕವನ, ಲೇಖನಗಳ ಅನುವಾದಗಳನ್ನು  ಒಳಗೊಂಡಿದೆ. ಹಿರಿಯ ಹಾಗೂ ಹೊಸ ಪೀಳಿಗೆಯ ಅನುವಾದಕರು ನಮಗೆ ಬರಹ ಕಳುಹಿಸಿಕೊಟ್ಟು ಸಹಕರಿಸಿದ್ದಾರೆ. ಅವಧಿ ಅನುವಾದ ಸ್ಪೆಷಲ್‌ನಲ್ಲಿ ತಮಿಳು, ಮಲೆಯಾಳಂ, ತೆಲುಗು, ಒಡಿಯಾ ಬರಹಗಾರರ ಕತೆಗಳು, ಪ್ಯಾಲೆಸ್ತೇನಿಯನ್‌, ಮರಾಠಿ, ಇಂಗ್ಲೀಷ್, ಲಿಥುವೇನಿಯಾ, ಉಕ್ರೇನ್‌ ಕವನಗಳು, ಅರೆಬಿಕ್‌, ಕೊಂಕಣಿ, ಇಂಗ್ಲೀಷ್‌ ಲೇಖನಗಳ ಅನುವಾದ ಇದೆ. ಈ ಸಂಚಿಕೆಗಾಗಿ ಸಂದರ್ಶನ ಮಾಡಲು ಕೇಳಿದ ಕೂಡಲೇ ಅನುವಾದಕರಾದ ಓಎಲ್‌ಎನ್‌ ಮತ್ತು ಶ್ರೀರಾಂ ಒಪ್ಪಿಕೊಂಡರು. ಇವರೆಲ್ಲರಿಗೂ ಅವಧಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಈ ಸಂಚಿಕೆಯು ಓದಿನ ಸುಖವನ್ನು ನೀಡುವುದೆಂಬ ಆಶಯದೊಂದಿಗೆ..

‍ಲೇಖಕರು Admin

29 September, 2022

2 Comments

  1. KUSUMA PATEL

    ಇದು ಅನುವಾದ ಕುರಿತಾದ ನನ್ನ ಕವನ :

    ಅನುವಾದ…
    ಯಾವ ಪದಗಳೋ,
    ಯಾರ ಪದ್ಯಗಳೋ.
    ಯಾರ ವಾಕ್ಯಗಳೋ,
    ಯಾವ ದಸ್ತಾವೇಜೋ,
    ಯಾರ ಅರ್ಜಿಯೋ…

    ಯಾವುದೋ ಒಂದು
    ಒಂದರ ಮೇಲೊಂದು
    ಭಾಷೆಯ ಅಂತರ ಕಳೆದು
    ತರ್ಜುಮೆಯ ಹೊಸ
    ರೂಪ ಹೊತ್ತು
    ಮೂಡುತ್ತಿವೆ ಸಾಲುಸಾಲಾಗಿ
    ಹೊಸ ರೂಪದಲಿ.

    ಮುದ್ದು ಮಗನಿಗೆ ಕೊಡಿಸಲಾಗದ
    ಆ ಒಂದು ಜಿಲೇಬಿ,
    ಆಟಿಗೆಗೆ ಸುರಿದ ಆ ಕಂಬನಿ
    ಸದ್ದಿಲ್ಲದೇ ಬೆಳೆದ ಮಗಳು
    ಆತನ ಅಸೀಮ ಜಡತ್ವ
    ಮಾತು ಮರೆತವಳ ಪದಗಳೇ
    ಪದ್ಯವಾದದ್ದು….

    ಬದುಕ ಬೆಚ್ಚನೆಯ ಹೊತ್ತಿಗೆಯ
    ಅರ್ಥವಾಗದ ಆ ಪುಟಗಳು
    ಬಟ್ರಂಡ್ ರಸ್ಸಲನ ಪ್ರಭಂಧಗಳಂತೆ
    ಅರ್ಥವಾಗದ
    ಕಬ್ಬಿಣದ ಕಡಲೆಗಳು..

    ಎದ್ದು ಕುಳಿತಿವೆ
    ಅನುವಾದ ಕೇಳುತ್ತಾ…

    ಪುಟ ತಿರುವು ತಿರುವಿ
    ಅರ್ಥ ಹುಡುಕಿ ಹುಡುಕಿ
    ಉತ್ತರಿಸದೆ ತತ್ತರಿಸಿದ
    ಮೇಜ ಮೇಗಣ
    ಆ ನಿಘಂಟುಗಳು
    ಸೋತು ಪಿಸುಗುಟ್ಟುತ್ತಿವೆ…

    ಭಾ..ವಾ..ನು..ವಾದ ..
    ಬ..ದು..ಕ.. ಅನುವಾದ ..
    ಸುಲಭದ ಮಾತಲ್ಲ ಬಿಡು …ಎಂದೇ
    ಕೈ ಚೆಲ್ಲಿ
    ಪುಟ ಮುಚ್ಚಿವೆ.

    ಬದುಕ ಬೆಚ್ಚಗಿನ ಹೊತ್ತಿಗೆಯ
    ಆ..
    ಅರ್ಥವಾಗದ ಪುಟಗಳ..
    ಅ..ನು..ವಾ..ದ ..ಆಗಬಹುದೇ
    ಮುಂದೆ.. ಮತ್ತೆ…ಯಾವಾಗಲೋ!?…

    ಕುಸುಮ ಪಟೇಲ್

  2. KUSUMA PATEL

    ಅನುವಾದ…
    ಯಾವ ಪದಗಳೋ,
    ಯಾರ ಪದ್ಯಗಳೋ.
    ಯಾರ ವಾಕ್ಯಗಳೋ,
    ಯಾವ ದಸ್ತಾವೇಜೋ,
    ಯಾರ ಅರ್ಜಿಯೋ…

    ಯಾವುದೋ ಒಂದು
    ಒಂದರ ಮೇಲೊಂದು
    ಭಾಷೆಯ ಅಂತರ ಕಳೆದು
    ತರ್ಜುಮೆಯ ಹೊಸ
    ರೂಪ ಹೊತ್ತು
    ಮೂಡುತ್ತಿವೆ ಸಾಲುಸಾಲಾಗಿ
    ಹೊಸ ರೂಪದಲಿ.

    ಮುದ್ದು ಮಗನಿಗೆ ಕೊಡಿಸಲಾಗದ
    ಆ ಒಂದು ಜಿಲೇಬಿ,
    ಆಟಿಗೆಗೆ ಸುರಿದ ಆ ಕಂಬನಿ
    ಸದ್ದಿಲ್ಲದೇ ಬೆಳೆದ ಮಗಳು
    ಆತನ ಅಸೀಮ ಜಡತ್ವ
    ಮಾತು ಮರೆತವಳ ಪದಗಳೇ
    ಪದ್ಯವಾದದ್ದು….

    ಬದುಕ ಬೆಚ್ಚನೆಯ ಹೊತ್ತಿಗೆಯ
    ಅರ್ಥವಾಗದ ಆ ಪುಟಗಳು
    ಬಟ್ರಂಡ್ ರಸ್ಸಲನ ಪ್ರಭಂಧಗಳಂತೆ
    ಅರ್ಥವಾಗದ
    ಕಬ್ಬಿಣದ ಕಡಲೆಗಳು..

    ಎದ್ದು ಕುಳಿತಿವೆ
    ಅನುವಾದ ಕೇಳುತ್ತಾ…

    ಪುಟ ತಿರುವು ತಿರುವಿ
    ಅರ್ಥ ಹುಡುಕಿ ಹುಡುಕಿ
    ಉತ್ತರಿಸದೆ ತತ್ತರಿಸಿದ
    ಮೇಜ ಮೇಗಣ
    ಆ ನಿಘಂಟುಗಳು
    ಸೋತು ಪಿಸುಗುಟ್ಟುತ್ತಿವೆ…

    ಭಾ..ವಾ..ನು..ವಾದ ..
    ಬ..ದು..ಕ.. ಅನುವಾದ ..
    ಸುಲಭದ ಮಾತಲ್ಲ ಬಿಡು …ಎಂದೇ
    ಕೈ ಚೆಲ್ಲಿ
    ಪುಟ ಮುಚ್ಚಿವೆ.

    ಬದುಕ ಬೆಚ್ಚಗಿನ ಹೊತ್ತಿಗೆಯ
    ಆ..
    ಅರ್ಥವಾಗದ ಪುಟಗಳ..
    ಅ..ನು..ವಾ..ದ ..ಆಗಬಹುದೇ
    ಮುಂದೆ.. ಮತ್ತೆ…ಯಾವಾಗಲೋ!?…

    ಕುಸುಮ ಪಟೇಲ್

    ಸರ್, ಅನುವಾದದ ಕುರಿತು ಎಂದೋ ನಾನು ಬರೆದ ಒಂದು ಕವನವನ್ನು ನಿಮಗೆ ಕಳುಹಿಸಿತ್ತಿದ್ದೇನೆ.
    ವಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading