’ಎಲ್ಲಿ ಹೋಯಿತು ನಮ್ಮ ಕಾಯಕ ತತ್ವ’ – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಮಂಗಳೂರಿನಿಂದ ಕಾರವಾರದ ವರೆಗಿನ ಕರಾವಳಿಯಲ್ಲಿ ಈ ಬಾರಿ ಮಳೆಯ ಚಿತ್ರ ಒಂದಿಷ್ಟು ಬದಲಾಗಿದೆ. ಜುಲೈನಲ್ಲಿ ಅಬ್ಬರಿಸಬೇಕಾಗಿದ್ದ ಮಳೆ ಕಳೆದ ಹತ್ತು ದಿನಗಳಿಂದ ಇಲ್ಲಿ ಸ್ತಬ್ಧವಾಗಿದೆ. ಮುಂಗಾರು ಪ್ರವೇಶವೇನೋ ಜೋರಾಗಿಯೇ ಇತ್ತು. ನಂತರ ಒಂದಿಷ್ಟು ಕಳಾಹೀನವಾದ ಮುಂಗಾರು ಈಗಂತೂ ಮೌನವಾಗಿದೆ. ಮೋಡಗಳು ಗೂಡುಕಟ್ಟುವುದು, ತಲೆಯ ಮೇಲೇ ತೇಲುತ್ತ ಹೋಗುವ ಚಿತ್ರವಷ್ಟೇ ಮೋಹಕ. ಆದರೆ ಮಳೆ ಸುರಿಸದೆ ಬರಿದೆ ಸಾಗಿ ಹೋಗುವ ಮೋಡಗಳಿಂದ ಏನು ಪ್ರಯೋಜನ?
ಒಂದು ಬದಿಗೆ ಕಡಲು; ಇನ್ನೊಂದು ಬದಿಗೆ ಹಸಿರು ಚಿಮ್ಮಿಸುವ ಸಹ್ಯಾದ್ರಿಯ ಗಿರಿಶ್ರೇಣಿ. ಕರಾವಳಿಯ ಅಂಚಿನಲ್ಲಿ ನಿರಾತಂಕವಾಗಿ ಸಾಗುವ ರೈಲಿನಲ್ಲಿ ಈ ಹಸಿರಿಗೆ ಕಣ್ಣುನೆಟ್ಟು ಕುಳಿತರೆ ಇದೇ ಸ್ವರ್ಗವಿರಬಹುದೇ ಎನ್ನುವ ಅನುಮಾನ. ಸಹ್ಯಾದ್ರಿಯ ಹಸಿರು ಎಷ್ಟೊಂದು ಮೋಹಕ. ಈ ಸಹ್ಯಾದ್ರಿ ಸಾಲಿನಿಂದ ಕೆಳಗಿಳಿದರೆ ಮಾನವರು ಕಟ್ಟುವ ಬದುಕಿನ ಕಷ್ಟಸುಖಗಳು ಬಿಚ್ಚಿಕೊಳ್ಳುತ್ತವೆ. ಹಸಿರು ಗದ್ದೆಗಳು ನೋಡಲು ಚಂದ. ಆದರೆ ಈ ಗದ್ದೆಗಳನ್ನು ನಗುವಂತೆ ಮಾಡುವ ರೈತರ ಬೆವರು ಹರಿಯಲೇ ಬೇಕು. ಅಲ್ಲಲ್ಲಿ ನೇಜಿ ಕಾರ್ಯ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯವರು ‘ನೇಜಿ’ ಎಂದು ಕರೆಯುವುದನ್ನು ಬಯಲಸೀಮೆಯಲ್ಲಿ ‘ನಾಟಿ’ ಎಂದು ಕರೆಯುತ್ತಾರೆ. ನಾಟಿ ಎಂದರೆ, ಉತ್ತು ಹಸನು ಮಾಡಿದ ಗದ್ದೆಯಲ್ಲಿ ಬತ್ತದ ಸಸಿಗಳನ್ನು ನೆಡುತ್ತ ಹೋಗುವುದು. ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆರಡರಲ್ಲೂ ವಿಸ್ತಾರವಾದ ಗದ್ದೆಗಳು ಕಡಿಮೆಯಾಗಿವೆ. ನೋಡುವುದಕ್ಕೇನೋ ವಿಸ್ತಾರವಾದ ಗದ್ದೆ ಬಯಲು ಸಿಕ್ಕುತ್ತದೆ. ಆದರೆ ಒಡೆತನದ ಪ್ರಶ್ನೆ ಬಂದಾಗ ಭೂಮಿ ತುಂಡಾಗಿದೆ. ತುಂಡುತುಂಡು ಗದ್ದೆಗಳು. ಈ ತುಂಡುಗದ್ದೆಗಳಲ್ಲೂ ಗೇಯುವವರ ಸಂಖ್ಯೆ ಇಳಿಮುಖವಾಗಿದೆ. ಅವರವರ ಭೂಮಿಯನ್ನು ಅವರೇ ಸಾಗುವಳಿ ಮಾಡಿಕೊಳ್ಳಬೇಕು; ಇಲ್ಲವೇ ಬೀಳುಬಿಡಬೇಕು. ದುಡಿಯಲು ಜನ ಸಿಕ್ಕುತ್ತಿಲ್ಲ ಎಂಬುದು ಕೃಷಿಕರ ಕೊರಗು. ದಿನಕ್ಕೆ 200 ರಿಂದ 300 ರೂಪಾಯಿ, ಕೆಲವೊಮ್ಮೆ ಇದಕ್ಕೂ ಹೆಚ್ಚಿನ ಮಜೂರಿ ಕೊಟ್ಟರೂ ದುಡಿಮೆಯವರು ಸಿಕ್ಕುವುದಿಲ್ಲ. ಈ ಕಾರಣದಿಂದಾಗಿಯೇ ಹಲವೆಡೆ ಭೂಮಿ ಬೀಳುಬಿದ್ದಿದೆ. ಸಮೃದ್ಧ ನೀರು, ಫಲವತ್ತಾದ ಗದ್ದೆ. ಆದರೂ ಕಣಜ ತುಂಬುವುದಿಲ್ಲ. ಎಲ್ಲಿ ಹೋದರು ಈ ದುಡಿಮೆಗಾರರು?

ದುಡಿಮೆಗೆ ಅನೇಕ ಹೆಸರುಗಳಿವೆ. ಶ್ರಮಸಂಸ್ಕೃತಿ, ಕಾಯಕ ಇತ್ಯಾದಿಯಾಗಿ ಕರೆಯಲಾಗುತ್ತಿರುವ ಈ ಸಂಸ್ಕೃತಿ ಮಾಯವಾಗುತ್ತಿದೆಯೇ? ದುಡಿಯದೆ ತಿನ್ನುವುದನ್ನು ಗಾಂಧೀಜಿ, ‘ಪಾಪ’ ಎಂದು ನಂಬಿದ್ದರು. ಹನ್ನೆರಡನೇ ಶತಮಾನದ ವಚನಕಾರರು ಸಾರಿದ್ದು ‘ಕಾಯಕ ತತ್ವ’ವನ್ನೇ. ಬಿಜ್ಜಳನ ಕಲ್ಯಾಣದಲ್ಲಿ ಲಕ್ಷಾಂತರ ಶರಣರು ಬಿಟ್ಟಿಯಾಗಿ ಊಟಮಾಡಿ ಬಿಜ್ಜಳನ ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆಂಬ ಆರೋಪ ಬಂದಾಗ ಬಸವಣ್ಣ ಬಿಜ್ಜಳನಿಗೆ ಹೇಳುವ ಮಾತುಗಳೂ ಮುಖ್ಯವಾಗಿವೆ. ಕಾಯಕ ತತ್ವದಲ್ಲಿ ನಂಬಿಕೆ ಇಟ್ಟಿರುವ ಶರಣರು, ಕೆಲಸ ಮಾಡದೆ ಉಣ್ಣುವವರಲ್ಲ. ಅವರು ಯಾವುದೇ ಕೆಲಸವನ್ನು ಮಾಡಿದರೂ ಅದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮ ಸ್ಥಿತಿಗೇ ಕೊಂಡೊಯ್ಯುತ್ತದೆ ಎಂಬುದು ಬಸವಣ್ಣನ ಅಭಿಪ್ರಾಯ. ಕಾಯಕದ ಜೊತೆಗಿನ ಸಂಬಂಧ ಹಾಗಿತ್ತು.
ಬುದ್ಧನ ಕಾಲದಿಂದಲೂ ಕಾಯಕ ತತ್ವದಲ್ಲಿ ಇದ್ದ ನಂಬಿಕೆ ಬಲವಾದದ್ದು. ನಮ್ಮ ಇತಿಹಾಸದ ಉದ್ದಕ್ಕೂ ಈ ಕಾಯಕ ಗೌರವವನ್ನು ಕಾಣಬಹುದು. ದುಡಿಮೆಗಾರರು, ಕುಶಲ ಕರ್ಮಿಗಳು, ಕುಂಬಾರರು, ನೇಕಾರರು, ಚಮ್ಮಾರರು, ಪಶು ಸಂಗೋಪನೆಯಲ್ಲಿ ತೊಡಗಿದವರು ಹೀಗೆ ಎಲ್ಲ ರೀತಿಯ ಕಾಯಕವೂ ತನ್ನ ಘನತೆಯನ್ನು ಕಾಯ್ದುಕೊಂಡಿತ್ತು. ದುಡಿಮೆ ಎನ್ನುವುದು ಮನುಷ್ಯನ ಗೌರವವನ್ನು ಹೆಚ್ಚಿಸುವುದೇ ಆಗಿತ್ತು. ಇವತ್ತಿನ ಕಾಲಸಂದರ್ಭವು ಮಾತ್ರ ಈ ಮೌಲ್ಯವನ್ನು ತಲೆಕೆಳಗೆ ಮಾಡಿದೆ. ಶ್ರಮವಹಿಸಿ ದುಡಿಯುವವನು ಮೂರ್ಖನಂತೆ ಕಾಣಿಸುತ್ತಾನೆ; ದುಡಿಯದೆ ತಿನ್ನುವವನು ಬುದ್ಧಿವಂತನಂತೆ ಗೌರವ ಪಡೆಯುವ ಪರಿಸರವನ್ನು ನಾವೆಲ್ಲ ಸೃಷ್ಟಿಮಾಡಿದ್ದೇವೆ. ದುಡಿಯದೆ ತಿನ್ನುವುದು ‘ಪಾಪ’ ಎಂಬ ಪ್ರಜ್ಞೆಯನ್ನೇ ನಾವು ಕಳೆದುಕೊಂಡಿದ್ದೇನೆ. ಐಷಾರಾಮಿ ಜೀವನವೆಂದರೆ ದುಡಿಯದೆ ತಿನ್ನುವುದು ಮತ್ತು ಮೋಜು ಮಾಡುವುದು. ಇದಕ್ಕೆ ಅಗತ್ಯವಾದ ಹಣವನ್ನು ಗಳಿಸುವುದು ಹೇಗೆ? ಮೋಸಕ್ಕೆ, ಭ್ರಷ್ಟಾಚಾರಕ್ಕೆ ಎಡೆ ಇರುವುದೇ ಇಲ್ಲಿ. ದುಡಿಮೆಯನ್ನು ಗೌರವಿಸದ ಸಮಾಜ, ಮೋಸ, ಭ್ರಷ್ಟತೆಗಳನ್ನು ಬದುಕುವ ವಿಧಾನಗಳಾಗಿ ಮಾನ್ಯ ಮಾಡುತ್ತದೆ. ಇದು ಒಂದು ಸಮಾಜ ಅಧೋಗತಿಗಿಳಿದ ಸ್ಥಿತಿಯನ್ನೂ ತೋರಿಸುತ್ತದೆ. ಇವತ್ತು ನಮ್ಮ ಕಣ್ಮುಂದಿರುವುದು ಇಂಥ ಸಮಾಜವೇ. ಭಾರತದಲ್ಲಿ ಮಾತ್ರ ಇಂಥ ಸಮಾಜ ನಿಮರ್ಾಣವಾಗಿದೆ ಎಂದು ಹೇಳುವಂತಿಲ್ಲ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಂಥ ಮೌಲ್ಯವೇ ಪ್ರಧಾನವಾಗಿದೆ. ಆದರೂ ದುಡಿಮೆಯನ್ನು ಗೌರವಿಸುವ, ಕಾಯಕತತ್ವವನ್ನು ಒಂದು ಮೌಲ್ಯ ಎಂದು ಭಾವಿಸಿರುವ ಸಮಾಜಗಳು ಅನೇಕ ರಾಷ್ಟ್ರಗಳಲ್ಲಿವೆ. ಇದು ನಮ್ಮ ಭರವಸೆಗಳನ್ನು ಬತ್ತದಂತೆ ನೋಡಿಕೊಳ್ಳುತ್ತಿದೆ.
ದುಡಿಮೆ ಎನ್ನುವುದು ನಿಸರ್ಗದಲ್ಲಿ ಜೀವಂತವಾಗಿರುವ ಪ್ರಾಥಮಿಕ ತತ್ವ. ನಿಸರ್ಗದಲ್ಲಿನ ಪ್ರತಿಯೊಂದು ಜೀವಿಯೂ ತಮ್ಮ ಆಹಾರವನ್ನು ತಾವೇ ಹುಡುಕಿಕೊಳ್ಳಬೇಕು. ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಮಾಡುವ ಪಕ್ಷಿ ಜೋಡಿ ಮರಿಗಳಿಗೆ ತುತ್ತುಣಿಸುತ್ತವೆ. ಮರಿಗಳಿಗೆ ಹಾರುವುದನ್ನೂ ಕಲಿಸುತ್ತವೆ. ಹಾಗೆಯೇ ತಮ್ಮ ರಕ್ಷಣೆಯ ವಿಧಾನಗಳನ್ನು, ಬೇಟೆಯಾಡುವ ವಿದ್ಯೆಯನ್ನು ಹೇಳಿಕೊಡುತ್ತವೆ. ಇದೆಲ್ಲ ಬಂದನಂತರ ಯಾವ ತಾಯಿ ಹಕ್ಕಿಯೂ ತನ್ನ ಮರಿಗಳಿಗೆ ತುತ್ತುಣಿಸುವುದಿಲ್ಲ. ಅವುಗಳ ಆಹಾರವನ್ನು ಅವೇ ಪಡೆಯಬೇಕು. ಈ ತತ್ವ ಎಲ್ಲ ಪ್ರಾಣಿಗಳಲ್ಲಿಯೂ ಇದೆ. ಸಿಂಹ ಕಾಡಿನ ರಾಜನಾದರೂ ತನ್ನ ಆಹಾರವನ್ನು ತಾನೇ ಸಂಪಾದಿಸಬೇಕು. ತನ್ನ ಬೇಟೆಯನ್ನು ತಾನೇ ಹಿಡಿಯಬೇಕು. ಕಾಲು ಮುರಿದುಕೊಂಡೊ, ಗಾಯಗೊಂಡೊ ಓಡಲು ಸಾಧ್ಯವಾಗದ ಪ್ರಾಣಿ ಕೆಲವು ಉಪಾಯಗಳನ್ನು ಬಳಸಿ ಹಗುರವಾಗಿ ಬೇಟೆಯಾಡಿ ತನ್ನ ಹೊಟ್ಟೆಯನ್ನು ತಾನೇ ತುಂಬಿಸಿಕೊಳ್ಳುತ್ತದೆ. ಯಾವ ಪ್ರಾಣಿಯೂ ಇನ್ನೊಂದು ಪ್ರಾಣಿಗೆ ಆಹಾರವನ್ನು ತಂದು ಹಾಕುವ ಸಂಪ್ರದಾಯ ಪ್ರಾಣಿಪ್ರಪಂಚದಲ್ಲಿ ಇಲ್ಲವೇ ಇಲ್ಲ. ಮನುಷ್ಯ ಮಾತ್ರ ಇದಕ್ಕೆ ಅಪವಾದ.
ಬೇಟೆಯಾಡುವ ಶಕ್ತಯನ್ನು ಕಳೆದುಕೊಂಡ ಹುಲಿ, ಚಿರಚಿತಜ, ಸಿಂಹ ಮೊದಲಾದ ಪ್ರಾಣಿಗಳು ಆಹಾರ ಸಂಪಾದಿಸಲು ಸಾಧ್ಯವಾಗದೆ, ಹಸಿವಿನಿಂದ ಸಾಯುವುದೂ ಉಂಟು. ಹಾರಲಾಗದ ಹಕ್ಕಿಗಳು ಹಸಿವಿನಿಂದ ನರಳಿ ಸಾಯುವುದೂ ಇದೆ. ಇದು ನಿಸರ್ಗ ತತ್ವ. ಇದು ಯುಗಯುಗಳಿಂದ ಉಳಿದುಕೊಂಡು ಬಂದಿರುವ ತತ್ವ. ಮನುಷ್ಯ ಕೂಡಾ ಇದನ್ನೇ ಅನುಸರಿಸಿಕೊಂಡು ಬಂದ. ಆದರೆ ನಾಗರಿಕತೆ ಬೆಳೆದಂತೆಲ್ಲ, ಈ ತತ್ವ ನಿಧಾನಕ್ಕೆ ಮರೆಯಾಗಿ, ಮನುಷ್ಯ ದುಡಿಯದೆ ತಿನ್ನುವ ‘ಚಾಲೂಕು ವಿದ್ಯೆ’ಯನ್ನು ಕಲಿತುಕೊಂಡದ್ದು, ಅದು ಮೋಸಕ್ಕೆ, ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟದ್ದು ಮನುಷ್ಯ ಜೀವಿಯ ಅವನತಿಯನ್ನೇ ತೋರಿಸುತ್ತದೆ. ಇಷ್ಟಾದರೂ ಪ್ರಾಣಿಪ್ರಪಂಚದಲ್ಲಿ ನಮ್ಮನ್ನು ನಾವು ಸರಿಯಾಗಿ ನೋಡಿಕೊಂಡೇ ಇಲ್ಲ; ಬೀಳುವ ನಮ್ಮ ಹೆಜ್ಜೆಗಳನ್ನು ಸರಿಪಡಿಸಿಕೊಂಡೇ ಇಲ್ಲ; ನಮ್ಮ ಈ ದಾರಿ ನಮ್ಮನ್ನು ಪ್ರಪಾತಕ್ಕೆ ಬೀಳಿಸುತ್ತದೆಂಬ ಅರಿವೂ ನಮಗಿಲ್ಲ. ಅಷ್ಟೊಂದು ಮೈಮರೆತು ಜೀವಿಸುವುದನ್ನು ನಾವು ರೂಢಿಮಾಡಿಕೊಂಡಿದ್ದೇವೆ.
ಇವತ್ತು ನಮಗೆ ದುಡಿಮೆಗಾರರು ಸಿಕ್ಕದೆ ಇರುವುದು, ಅನೇಕ ಕ್ಷೇತ್ರಗಳು ನೆಲಕಚ್ಚುತ್ತಿರುವುದು ಈ ಹಿನ್ನೆಲೆಯಲ್ಲಿ. ಕಾಯಕತತ್ವವನ್ನು ಒಂದು ಮೌಲ್ಯವಾಗಿ ಪರಿಗಣಿಸಲಾಗದ ಸಮಾಜ ಇಂಥ ಬಿಕ್ಕಟ್ಟುಗಳನ್ನು ಎದುರಿಸುವುದು ಅನಿವಾರ್ಯ. ನಾವು ಮೇಲೇಳಬೇಕೆಂದರೆ ಮೊದಲು ನಮ್ಮ ಮೌಲ್ಯಗಳನ್ನು ಮತ್ತೆ ಕಟ್ಟಿಕೊಳ್ಳಬೇಕು. ‘ಮೌಲ್ಯಮಾರ್ಗ’ವೇ ನಮ್ಮ ಬದುಕಿನ ಮಾರ್ಗವಾಗಬೇಕು. ಅದು ವ್ಯಕ್ತಿಯ ಘನತೆಗೆ, ಸಮಾಜದ ಮುನ್ನಡೆಗೆ ದಾರಿಯಾಗಬಲ್ಲದು. ಈ ಮಾರ್ಗವನ್ನು ಆಯ್ಕೆಮಾಡಿಕೊಂಡ ಸಮಾಜಕ್ಕೆ ಬೀಳುವ ಭಯವಿರುವುದಿಲ್ಲ.
 

‍ಲೇಖಕರು G

July 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: