ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಎಲ್ಲಾ ಓಕೆ, ತೊಳೆದುಕೊಳ್ಳಲು ನೀರಿಲ್ಲ ಏಕೆ?" – ಶಿವು ಪಿ ಕಾಳಯ್ಯ ಕೇಳ್ತಾರೆ

ಇವತ್ತಿನ ಎರಡು ವಿಭಿನ್ನ ಅನುಭವಗಳು

ಶಿವು ಕಾಳಯ್ಯ

ಮೊದಲ ಅನುಭವ
ಮಾಂಸ ಸಾರು, ಕೋಳಿ ಸಾರು, ತರಕಾರಿ ಸಾರು, ತರಕಾರಿ ಕೂಟು, ಬದನೆಕಾಯಿ ಮಸಾಲೆ ಪಲ್ಯ, ಸೊಪ್ಪಿನ ಸಾರು….ಹೀಗೆ ಅನೇಕ ಹೆಸರುಗಳನ್ನು ಕೇಳಿದಾಗ ನಮಗೆ ಮಂಡ್ಯ ಅಥವ ನಮ್ಮ ಹಳೇ ಮೈಸೂರು ವಲಯದ ಮನೆಗಳು, ನಮ್ಮ ಹಳ್ಳಿಗಳಲ್ಲಿನ ಮನೆ ಸಾಂಬಾರುಗಳ ನೆನಪಾಗುತ್ತದೆಯಲ್ಲವೇ…[ಈಗ ನಮ್ಮ ಯಾವುದೇ ದರ್ಶಿನಿ ಅಥವ ಉಪಹಾರ ಹೋಟಲ್ಲುಗಳಲ್ಲಿ ಇಂಥ ಹೆಸರುಗಳನ್ನು ಕೇಳಲು ಸಾಧ್ಯವೇ ಇಲ್ಲ. ಅಲ್ಲೇನಿದ್ದರೂ ರಸಂ, ರೋಟಿ ಕರಿ, ನವರತ್ನ ಕುರ್ಮ, ವೆಜ್ ಪಲಾವ್,…….ಇನ್ನೂ ತರಾವರಿ ನಮ್ಮದಲ್ಲದ ಹೆಸರುಗಳು] ಇವೆಲ್ಲವೂ ನಮ್ಮ ಹಳ್ಳಿಗಳ ಹೋಟಲ್ಲುಗಳಲ್ಲಿ ಅಥವ ಬೆಂಗಳೂರು ಅಥವ ಮೈಸೂರಿನ ರಸ್ತೆ ಬದಿಯ ಪುಟ್ಟ ಕೈಗಾಡಿ ಅಥವ ಪುಟ್‍ಪಾತ್ ಹೋಟಲ್ಲುಗಳಲ್ಲಿ ಸಿಗಬಹುದು. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಪಂಚತಾರ ಹೋಟಲ್‍ನಲ್ಲಿ ನಮ್ಮ ಪಕ್ಕಾ ಹಳ್ಳಿಯ ಹೆಸರಿನ ಮಾಂಸ ಸಾರು, ಕೋಳಿ ಸಾರು, ತರಕಾರಿ ಸಾರು, ತರಕಾರಿ ಕೂಟು, ಬದನೆಕಾಯಿ ಮಸಾಲೆ ಪಲ್ಯ, ಸೊಪ್ಪಿನ ಸಾರು….ಇನ್ನೂ ಅನೇಕ ಕನ್ನಡ ಪದಗಳ ಹೆಸರುಗಳನ್ನು ಆಂಗ್ಲಭಾಷೆಯಲ್ಲಿ ನೋಡಿದೆ. ಅವುಗಳ ಕೆಳಗೆ ಅವುಗಳಿಗೆ ಬಳಸುವ ತರಕಾರಿ, ಮಸಾಲೆ ಮತ್ತು ಅದರ ವಿಶೇಷಗಳನ್ನು ಆಂಗ್ಲ ಭಾಷೆಯಲ್ಲಿ ವಿವರಿಸಲಾಗಿತ್ತು. ಅಲ್ಲಿಗೆ ಬರುವ ವಿದೇಶಿ ಅಥವ ನಮ್ಮವರೇ ಸೆಲೆಬ್ರಿಟಿ ಅಥವ ಶ್ರೀಮಂತರಿಗಾಗಿ ಇದು ಅರ್ಥವಾಗಲು ಆಂಗ್ಲಭಾಷೆಯಲ್ಲಿ ಇರಬಹುದು ಅಂದುಕೊಂಡೆ…ಆದ್ರೆ ನಮ್ಮ ಪಕ್ಕಾ ಕನ್ನಡ ಸಾರು, ಪಲ್ಯ, ಕೂಟುಗಳ…ಸೊಗಡು ಕಂಡು ಸಂತೋಷವಾಯ್ತು..ಫೋಟೊಗ್ರಫಿ ಆಸೈನ್‍ಮೆಂಟ್ ನಿಮಿತ್ತ ಇವತ್ತು ಅಲ್ಲಿದ್ದಾಗ ರೇಶ್ಮೆಯಂತ ಕಾಗದದ ಮೇಲೆ ಮುದ್ರಿತವಾಗಿದ್ದ ಈ ಊಟದ ಮೆನು ನನ್ನ ಗಮನವನ್ನು ಸೆಳೆದಿತ್ತು.
ಎರಡನೇ ಅನುಭವ
ಎಲ್ಲಾ three star ಅಥವ Five star ಹೋಟಲ್ಲುಗಳಲ್ಲಿ ಮುಖ, ಕೈ ತೊಳೆಯಲು, ನಂಬರ್ ಒನ್,ಟು….ಗಾಗಿ ವ್ಯವಸ್ಥೆಯಿರುವ ಸ್ಥಳಗಳಿಗೆ ವಾಶ್ ರೂಮ್ ಅಂತ ನಮಪಲಕವಿರುತ್ತದೆ. ಆದ್ರೆ ವಿಂಡ್ಸರ್ ಮ್ಯಾನರ್‍ನಲ್ಲಿ ಗಂಡಸರಿಗೆ ಮಿಲಾರ್ಡ್ ಅಂತಿದೆ. ನಮ್ಮ ವಿಡಿಯೋಗ್ರಾಫರ್ ಅಭಿಪ್ರಾಯದ ಪ್ರಕಾರ “ನಮ್ಮ ಆರೋಗ್ಯವನ್ನು improve ಮಾಡಿಕೊಳ್ಳಲು, ಪಂಚತಾರ ಹೋಟಲ್ಲುಗಳಲ್ಲಿ ಅವರು ಕೊಡುವ ಮಿನರಲ್ ವಾಟರ್ ಹೊಟ್ಟೆತುಂಬ ಕುಡಿಯಬೇಕು. ನಂತರ ಸುವಾಸನೆ ಬರುವ ಅಲ್ಲಿನ ವಾಶ್‍ರೂಮ್‍ಗೆ ಹೋಗಿ ನಂಬರ್ ಒನ್ ಮಾಡಿ ಅಲ್ಲಿಟ್ಟಿರುವ ಸುವಾಸನೆಬರಿತ ಸೋಪಿನ ಜೆಲ್‍ನಲ್ಲಿ ಕೈತೊಳೆದು, ಇಸ್ತ್ರಿಮಾಡಿ ಜೋಡಿಸಿಟ್ಟಿರುವ ಬಿಳಿ ಕರವಸ್ತ್ರಗಳಲ್ಲಿ ಕೈವರೆಸಿಕೊಂಡು, ಕೆಳಗೆ ಕ್ಲೀನ್ ಆಗಿಟ್ಟಿರುವ ಡಸ್ಟ್‍ಬಿನ್‌ಗೆ ಹಾಕಿ, ಪಕ್ಕದಲ್ಲಿಯೇ ಶೂಗಳಿಗೆ ಮಾಲೀಶ್ ಮತ್ತು ಕೊಳೆಯನ್ನು ಕ್ಲೀನ್ ಮಾಡುವ ನಯವಾದ ನಾರಿನಂತ ಬ್ರಶ್ಶುಗಳಿಂದ ಕ್ಲೀನ್ ಮಾಡಿಕೊಂಡು ಬರುತ್ತಿರಬೇಕು” ಎನ್ನುವುದು ಆತನ ಅಭಿಪ್ರಾಯ. ಬೆಳಿಗ್ಗೆ ಎಂಟುಗಂಟೆಯಿಂದ ಆತ ಲೀಟರ್‌ಗಟ್ಟಲೆ ಮಿನರಲ್ ನೀರು ಕುಡಿದು ಗಂಟೆಗೊಮ್ಮೆ ಮಿಲಾರ್ಡ್‍ಗೆ ಹೋಗಿಬರುತ್ತಿದ್ದ. ನಾನು ಅವನಂತೆ ಹೆಚ್ಚು ನೀರು ಕುಡಿಯದಿದ್ದರೂ ಆಗಾಗ ಹೋಗಿಬರುತ್ತಿದ್ದೆ. ಸಂಜೆ ಐದುಗಂಟೆಗೆ ಕಾರ್ಯಕ್ರಮ ಮುಗಿಯವ ಹೊತ್ತಿಗೆ ನನಗೆ “ನಂಬರ್ ಟು”ಗೆ ಹೋಗಬೇಕೆನ್ನುವ ದೇಹಭಾದೆಯಾಯ್ತು. ಅದೇ ಸುವಾಸನೆಯುಕ್ತ “ಮಿಲಾರ್ಡ್” ಒಳಗೆ ಹೋಗಿ ಯುರೋಪಿಯನ್ ಶೈಲಿಯ ಕಮೋಡ್ ನೋಡಿದೆ. ಅದೆಷ್ಟು ಕ್ಲೀನ್ ಆಗಿತ್ತೆಂದರೆ ಅಲ್ಲಿ ನಂಬರ್ ಟು ಮಾಡಲು ಇಷ್ಟವಾಗದಷ್ಟು. ನೀರಿನ ನಲ್ಲಿ ಅಥವ ಯುರೋಪಿಯನ್ ಶೈಲಿ ಟಾಯ್ಲೆಟ್ ಜೊತೆಯಲ್ಲಿಯೇ ಈಗ ಹೊಸದಾಗಿ ಬಂದಿರುವ ಪೈಪ್ ಮೂಲಕ ಪ್ರೆಸ್ ಮಾಡಿಕೊಂಡರೆ ನೀರು ಬರುವ ಒಂದಿಂಚಿನ ಕಾರಂಜಿ[ಸದ್ಯ ನನ್ನ ಅಕ್ಕನ ಮನೆಯಲ್ಲಿರುವುದು ಅದೇ]ಅಲ್ಲೆಲ್ಲೂ ಕಾಣಲಿಲ್ಲ. ಅದರ ಬದಲಾಗಿ ಟಿಶ್ಯು ಪೇಪರ್ ದೊಡ್ಡ ಸುರಳಿ, ಅದರ ಪಕ್ಕದಲ್ಲಿಯೇ ಟಿಶ್ಯೂ ಪೇಪರ್ ಹಾಕಲು ಸ್ಟೀಲ್ ಪಾತ್ರೆ ಕಾಣಿಸಿತು. ಟೂ ಮಾಡಿದ ಮೇಲೆ ಅದ್ಯಾಕೋ ಟಿಶ್ಯೂ ಪೇಪರಿನಲ್ಲಿ ಒರೆಸಿಕೊಂಡು ಅದನ್ನು ಅಲ್ಲಿಟ್ಟಿರುವ ಸ್ಟೀಲ್ ಕಸದ ಡಬ್ಬಿಗೆ ಹಾಕಿ ಕೆಳಬಟ್ಟೆಗಳನ್ನು ಹಾಗೆ ಹಾಕಿಕೊಂಡು ನಂತರ ವಾಸ್ ಬೇಸನ್ನಿನಲ್ಲಿ ಸೋಪ್ ಹಾಕಿ ಚೆನ್ನಾಗಿ ಕೈತೊಳೆದುಕೊಂಡು…ಪಂಚತಾರ ಹೋಟಲ್ಲಿನ ವಿ.ಐ.ಪಿಗಳಂತೆ ಮುಖದಲ್ಲಿ ಕಿರುನಗೆ ಚೆಲ್ಲುವುದು, ಅದೇ ಸ್ಥಿತಿಯಲ್ಲಿ ಇನ್ನಷ್ಟು ಫೋಟೊಗ್ರಫಿ ಮಾಡುವುದು…ನನ್ನ ಮನಸ್ಸು ಒಪ್ಪಲಿಲ್ಲ. [ಇದು ವಿದೇಶಿಯರಿಗೆ ಇಷ್ಟವಾಗಬಹುದು. ಎಷ್ಟೆಲ್ಲ ಮುಂದುವರಿದಿದ್ದರೂ ಇದನ್ನು ಮಾತ್ರ ಅವರು ಹೇಗೆ ಇಷ್ಟಪಟ್ಟಿದ್ದಾರೆ ಎನ್ನುವುದು ನನಗೆ ಸದಾ ಅಚ್ಚರಿ ಮತ್ತು ಕುತೂಹಲ.[ನಾಗೇಶ್ ಹೆಗಡೆಯವರು ಬರೆದ “ಸುನಿತಾ ವಿಲಿಯಮ್ಸ್ ಅಲ್ಲಿ ಏನು ಮಾಡುತ್ತಿದ್ದರು” ಲೇಖನವನ್ನು ಓದಿದ್ದೆ. ಈ ವಿಚಾರವಾಗಿ ಸುನಿತಾ ವಿಲಿಯಮ್ಸ್ ಮತ್ತು ಅವರ ಜೊತೆಯಲ್ಲಿರುವವರು ಏನು ಮಾಡುತ್ತಿರಬಹುದು? ಎನ್ನುವುದು ನನಗೆ ದೊಡ್ಡ ಕುತೂಹಲದ ಪ್ರಶ್ನೆಯಾಗಿದೆ] ಈಗಿನ ಒಂದು ವರ್ಷದ ಪುಟ್ಟ ಮಗು ಕಕ್ಕ ಮಾಡಿದ ತಕ್ಷಣ ಅವನಮ್ಮ ಅವನ ಕುಂಡಿ ತೊಳೆಯದಿದ್ದರೆ ಮುಖ ಸಿಂಡರಿಸಿಕೊಳ್ಳುತ್ತದೆ. ಹೀಗಿರುವಾಗ ನಾನು ಹೇಗೆ ಅದೇ ಸ್ಥಿತಿಯಲ್ಲಿರಲಿ… ಹೇಗೂ ಕಾರ್ಯಕ್ರಮ ಮುಗಿದಿತ್ತು. ಸ್ವಲ್ಪ ತಡೆದುಕೊಂಡರೆ ಹದಿನೈದು ನಿಮಿಷದಲ್ಲಿ ಮನೆಗೆ ಹೋಗಿಬಿಡಬಹುದು. ನಮ್ಮ ಮನೆಯ ಟಾಯ್ಲೆಟ್‍ನಲ್ಲಿ ಸುಖವಾಗಿ ಭಾರ ಕೆಳಗಿಳಿಸುವಲ್ಲಿನ ಸ್ವರ್ಗಸುಖವನ್ನು ಅನುಭವಿಸುವುದು ಮೇಲು ಎಂದು ನೇರವಾಗಿ ಮನೆಗೆ ಬಂದು ಎಲ್ಲವನ್ನು ಮುಗಿಸಿದ್ದೆ. ಕೊನೆಗೂ ನನ್ನಲ್ಲಿ ಉಳಿದ ಪ್ರಶ್ನೆ..
“ಎಲ್ಲಾ ಓಕೆ ನಂಬರ್ ಟು ಮಾಡಿದ ಮೇಲೆ ತೊಳೆದುಕೊಳ್ಳಲು ನೀರಿಲ್ಲ ಏಕೆ?”

‍ಲೇಖಕರು avadhi

23 April, 2013

3 Comments

  1. Chayapathi

    This is the contradiction!
    For washing hands, tens of litres of water is used in star hotel. To clean wash basins, towels and footrugs hundreds of litre water will be used. Huge wastage for small works.
    But…. for this, no water will be used.!!

  2. Chitra Santhosh

    3 yrs hinde ondu programge nangu hage anisthu…karma…
    ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಪಂಚತಾರ ಹೋಟಲ್‍ನಲ್ಲಿ ನಮ್ಮ ಪಕ್ಕಾ ಹಳ್ಳಿಯ ಹೆಸರಿನ ಮಾಂಸ ಸಾರು, ಕೋಳಿ ಸಾರು, ತರಕಾರಿ ಸಾರು, ತರಕಾರಿ ಕೂಟು, ಬದನೆಕಾಯಿ ಮಸಾಲೆ ಪಲ್ಯ, ಸೊಪ್ಪಿನ ಸಾರು….ಇನ್ನೂ ಅನೇಕ ಕನ್ನಡ ಪದಗಳ ಹೆಸರುಗಳನ್ನು ಆಂಗ್ಲಭಾಷೆಯಲ್ಲಿ ನೋಡಿದೆ…..
    adre adra hesru nodi mathra samadhana patkobeku…taste halli saaru tharane iralla…gotha?

  3. ಅಜಯ

    ಟೂ ಮಾಡಿದ ಮೇಲೆ ಟಿಶ್ಯೂ ಪೇಪರಿನಲ್ಲಿ ಒರೆಸಿಕೊಂಡು ಅದನ್ನು ಅಲ್ಲಿಟ್ಟಿರುವ ಸ್ಟೀಲ್ ಕಸದ ಡಬ್ಬಿಗೆ ಹಾಕಬಾರದು. ಅದನ್ನು ಕಮೋಡಿಗೆ ಹಾಕಿ ಜೊತೆಗೇ ಫ್ಲಶ್ ಮಾಡಬೇಕು. ಟಿಶ್ಯೂ ಪೇಪರನ್ನು ಕರಗಿಹೋಗುವಂತಹ ಕಾಗದದಿಂದ ಮಾಡಿರ್ತಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading