ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಾದರು ಇರು ಎಂತಾದರೂ ಇರು

-ಎಲ್ .ಸಿ. ಸುಮಿತ್ರಾ

scan0039 (1)

ಶಾಮಣ್ಣಮೇಷ್ಟ್ರು-

ಹೀಗೆ ಹೇಳಿದರೆ ಯಾರಪ್ಪಾಇವರು ಅನಿಸಬಹುದು. ನಮ್ಮೂರಿನ ಜನ ಅವರನ್ನು ಹಾಗೇ ಕರೀತಿದ್ದರು. ಈಗ ಕಡಿದಾಳ್ ಶಾಮಣ್ಣ ಅಂದರೆ ತಿಳಿಯ ಬಹುದು. ನನಗೆ ಹೈಸ್ಕೊಲ್ ನಲ್ಲಿ ಎರಡು ವರ್ಷ ಪಾಠ ಹೇಳಿದ ಮೇಷ್ಟ್ರುಗಳಲ್ಲಿ ಇವರು ವಿಶಿಷ್ಟ ವ್ಯಕ್ತಿತ್ವದವರು. ನಾವು ಮೇಷ್ಟ್ರು ಹೇಳಿದ್ದನ್ನು ವೇದವಾಕ್ಯವೆಂದು ತಿಳೀತಿದ್ದ ಕಾಲ ಅದು. ಸಮಾಜ ವಿಜ್ನಾನ ಪಾಠ ಮಾಡುತ್ತಿದ್ದ ಶಾಮಣ್ಣ ನಮ್ಮ ಇತರ ಅಧ್ಯಾಪಕರಿಗಿಂತ ಉಡಿಗೆತೊಡಿಗೆ ಆಚಾರ ವಿಚಾರಗಳಲ್ಲಿ ಭಿನ್ನರಾಗಿದ್ದರು.

ಮೈಸೂರಿನ ಮಾನಸಗಂಗೋತ್ರೀಲಿ ಸಮಾಜಶಾಸ್ತ್ರದ ಎಮ್,ಎ. ಓದಿನ ನಂತರ ಕೆಲವು ಕಾಲ ಪ್ರೆಸ್ ನಡೆಸಿ ಆಮೇಲೆ ಕಡಿದಾಳ್ ಗೆ ಮರಳಿ ನಮ್ಮ ಶಾಲೆಯಲ್ಲಿ ಅಧ್ಯಾಪಕರಾದರು.

ಜುಬ್ಬಾ,ಪೈಜಾಮ ತೊಡುತ್ತಿದ್ದ ಶಾಮಣ್ಣನವರಿಗೆ ಟ್ರಿಮ್ ಮಾಡಿದ ಗಡ್ಡವಿತ್ತು. ಅದು ಆ ಕಾಲಕ್ಕೆ ವಿಶೇಷವಾಗಿತ್ತು. ನಮ್ಮ ಮೇಷ್ಟ್ರುಗಳು ಯಾರೂ ಹಾಡು ಹೇಳುತ್ತಿರಲಿಲ್ಲ .ಆದರೆ ಶಾಮಣ್ಣನವರದು ವರ್ಣರಂಜಿತ ವ್ಯಕ್ತಿತ್ವವಾಗಿತ್ತು. ವಿದ್ಯಾರ್ಥಿಗಳ ನಡುವೆ ಕುಳಿತು ತಲೆ ಕುಣಿಸುತ್ತಾ ‘ಎಲ್ಲಾದರು ಇರು ಎಂತಾದರೂ ಇರು’ ಹಾಡುತ್ತಿದ್ದ ಅವರ ಭಂಗಿ ನೆನಪಿನ ಭಿತ್ತಿಯಲ್ಲಿ ಹಸಿರಾಗಿದೆ. ದೀಪಾವಳಿಯಲ್ಲಿ ವಿದ್ಯಾರ್ಥಿಗಳ ‘ಅಂಟಿಗೆ ಪಂಟಿಗೆ’ ತಂಡ ಕಟ್ಟಿಕೊಂಡು ರಾತ್ರಿಹೊತ್ತು ಮನೆಮನೆಗೆ ದೀಪ ತೆಗೆದುಕೊಂಡು ಹೋಗಿ ಹಾಡು ಹೇಳಿ ಹಣ ಸಂಗ್ರಹಿಸಿ , ಆ ಹಣದಿಂದ ಶಾಲೆಯ ಸುತ್ತ ತಂತಿ ಬೇಲಿ ನಿರ್ಮಿಸಿದರು ಶಾಮಣ್ಣ. ಬಾರಿಸು ಕನ್ನಡ ಡಿಂಡಿಮವ, ಎಲ್ಲಾದರೂ ಇರು ಮುಂತಾದ ಕುವೆಂಪು ಗೀತೆಗಳನ್ನು ವೃಂದ ಗಾನವಾಗಿ ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಕ್ಲಾಸ್ ನಲ್ಲಿ ಸಂಕೋಚದಿಂದ ಮುದುಡಿಕೊಳ್ಳುತ್ತಿದ್ದ ನನಗೆ ವೇದಿಕೆಯ ಮೇಲೆ ಭಾಷಣ ಮಾಡಲು ಕಲಿಸಿದವರು ಅವರೆ.

ತಮ್ಮ ಸಹ್ಯಾದ್ರಿ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕಗಳನ್ನು ಅವರು ನಮ್ಮ ತಂದೆಗೆ ತಂದುಕೊಟ್ಟಿದ್ದರು. ತೇಜಸ್ವಿಯವರ ಸ್ವರೂಪ, ಲಂಕೇಶರ ‘ಬಿಚ್ಚು’ಕವನಸಂಗ್ರಹ, ಕಂಬಾರರ ಹೇಳತೇನ ಕೇಳ, ಲೋಹಿಯಾ ವಿಚಾರಗಳ ಅನುವಾದಿತ ಪುಸ್ತಕಗಳು ಹೀಗೆ ನನಗೆ ಓದಲು ಸಿಕ್ಕಿದವು. ಒಂದು ಬಗೆಯಲ್ಲಿ ಆದರ್ಶಗಳನ್ನು ತುಂಬಿಕೊಂಡು ಅವುಗಳನ್ನು ವಿದ್ಯಾರ್ಥಿಗಳಿಗೂ ತಮ್ಮ ಪರಿಸರದ ಜನಗಳಿಗೂ ತಲುಪಿಸಲು ಪ್ರಯತ್ನಿಸುತ್ತಿದ್ದ ಶಾಮಣ್ಣ ಭಿನ್ನ ವಾಗಿಕಾಣುತ್ತಿದ್ದರು. ಅಮೆರಿಕಾದಲ್ಲಿ ಮನಶಾಸ್ತ್ರದ ಉನ್ನತ ಅಧ್ಯಯನ ನಡೆಸಿದ ಅವರ ಬಂಧುವೊಬ್ಬರು ಕಡಿದಾಳ್ ಗೆ ಬಂದಾಗ ಅವರನ್ನು ನಮ್ಮ ಸ್ಕೂಲ್ ಗೆ ಕರೆತಂದು ಅಮೆರಿಕಾದ ಶಾಲೆಗಳು, ಅಲ್ಲಿನ ವಿದ್ಯಾಭ್ಯಾಸ ಕ್ರಮ ಕುರಿತು ಭಾಷಣ, ಸಂವಾದ ಏರ್ಪಡಿಸಿದ್ದರು. ತುಂಬಾ ಉತ್ಸಾಹದಿಂದ ಹೊಸ ವಿಚಾರಗಳನ್ನು ಆ ಪರಿಸರದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದರು.

ಶಿಕ್ಷಕರು ಎಂದರೆ ಕೆಲವು ವಿದ್ಯಾರ್ಥಿಗಳು ಶಿಕ್ಷೆ ಕೊಡಲು ಇರುವವರೆಂದೇ ಭಾವಿಸಿಕೊಂಡವರಿಗೆ ಹಾಗಲ್ಲ ಎಂದು ತೋರಿಸಿಕೊಟ್ಟವರು ಶಾಮಣ್ಣ. ಆಮೇಲೆ ಅವರು ಶಿಕ್ಷಕ ವೃತ್ತಿಯನ್ನು ಬಿಟ್ಟು ಕೃಷಿಕರಾದರು. ತೀವ್ರ ಸಾಮಾಜಿಕ ಕಾಳಜಿ ಹೊಂದಿದ್ದ ಶಾಮಣ್ಣನವರಿಗೆ ನಾಲ್ಕು ಗೋಡೆಗಳ ಒಳಗಿನ ತರಗತಿಗಿಂತ ಹೊರಗಿನ ಜಗತ್ತು ಮುಖ್ಯವೆನಿಸಿರಬೇಕು. ರೈತ ಸಂಘಟನೆಯಲ್ಲಿ ಅವರು ತೊಡಗಿಕೊಂಡರು.

ಈಗ ಅವರು ಭಗವತಿಕೆರೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದೇನೆಂದು ಹೇಳಿದರು . ಆ ಮಕ್ಕಳಿಗಾಗಿ ದಶಕಗಳ ಹಿಂದಿನ ತಮ್ಮ ಹಾರ್ಮೊನಿಯಮ್ ರಿಪೇರಿ ಮಾಡಿಸಿರುವುದಾಗಿ ಹೇಳಿದಾಗ ಅವರೊಳಗಿನ ಮೇಷ್ಟ್ರು ಇನ್ನೂ ಜಾಗ್ರುತವಾಗಿರುದು ನನಗೆ ಖಚಿತವಾಯಿತು. ತುಂಬಾ ಸರಳ ಸ್ವಭಾವದ ಶಾಮಣ್ಣ ತಾವು ತೆಗೆದ ಅಪರೂಪದ ಫೊಟೊಗಳ ಪ್ರದರ್ಶನ ಮಾಡಲು ಸ್ಕೂಲು, ಕಾಲೇಜುಗಳಿಗೆ ಆಹ್ವಾನಿಸಿದರೆ ತಾವೇ ಬ್ಯಾಗ್ ಗಳನ್ನು ಹೊತ್ತುಕೊಂಡು ಬಸ್ ನಲ್ಲೇ ಪ್ರಯಾಣಿಸಿ ಬರುತ್ತಾರೆ. ಅವರು ನಿಜವಾದ ಗಾಂಧೀವಾದಿ.

ನಾಲ್ಕೈದು ವರ್ಷಗಳ ಹಿಂದೆ ನನ್ನ ಎರಡು ಪುಸ್ತಕಗಳ ಅನಾವರಣ ಕಾರ್ಯಕ್ರಮವನ್ನು ನಮ್ಮ ಮನೆಯಲ್ಲೇ ಏರ್ಪಡಿಸಿ ನನ್ನ ಅಧ್ಯಾಪಕರು ಕೆಲವರನ್ನು ಕರೆದಿದ್ದೆ. ಆಗ ಪುಸ್ತಕ ಬಿಡುಗಡೆ ಮಾಡಿದವರು ಶಾಮಣ್ಣ. ಬಕುಲದ ದಾರಿಯ ಕವಿತೆಗಳನ್ನು ಅವರು ಆನಂತರ ಶಿವಮೊಗ್ಗೆಯ ಕಾರ್ಯಕ್ರಮವೊಂದರಲ್ಲಿ ವಾಚಿಸಿದರೆಂದು ತಿಳಿಯಿತು.

‍ಲೇಖಕರು avadhi

5 September, 2009

2 Comments

  1. ರಮೇಶ್ ಹಿರೇಜಂಬೂರು

    ತುಂಬಾ ದಿನದಿಂದ ಇಂಟರ್ನೆಟ್ ಕಡೆ ಕಣ್ಣು ಹಾಯಿಸಿರಲಿಲ್ಲ… ಅವಧಿಯಲ್ಲಿ ಏನಿರಬಹುದು ಎಂದು ಕುತೂಹಲಕ್ಕೆ ಹಾಗೆ ಕಣ್ಣು ಇಳಿಸಿದಾಗ ಕಡಿದಾಳು ಶಾಮಣ್ಣರ ಬಗೆಗಿನ ಲೇಖನ ಕಂಡು ತುಂಬಾ ಖುಷಿ… ಕಾರಣ ಇಷ್ಟೇ, ಅವರು ನನ್ನ ಗುರುಗಳು ಹೌದು. ಅವರು ನನಗೆ ತರಗತಿಯಲ್ಲಿ ಕೂರಿಸಿ ಪಾಠ ಮಾಡಿಲ್ಲ ! ಆದರೂ ಗುರುವೇ… ಏಕೆಂದರೆ ಅವರು ನನಗೆ ಕಳಿಸಿದ್ದು ಬದುಕಿನ ಪಾಠ. ಹಾಗೆ ನನ್ನ ಮಾಡುವೆ ಮಾಡಿದ್ದು ಕೂಡ ಅವರೇ…ಎಂಬುದು ನನಗೆ ಹೆಮ್ಮೆ. ಸದಾ ನನ್ನ ಮನದಾಳದಲ್ಲಿ ನೆಲೆ ನಿಂತು ನನ್ನೊಳಗಿರುವ ಶಿಷ್ಯನನ್ನು ಎಚ್ಚರಿಸುವ ಆ ಗುರುವಿಗೆ ಈ ಮೂಲಕ ನನ್ನದೊಂದು ನಮನ…
    ಹಾಗೆ ಲೇಖನ ತುಂಬಾ ಚನ್ನಾಗಿದೆ. ಅವರ ಸರಳ ಹಾಗು ಶ್ರೀಮಂತಿಕೆಯ ಗುಣವನ್ನು ಇಲ್ಲಿ ವಿವರಿಸಿದ್ದಕ್ಕೆ, ಹಾಗು ಅದನ್ನು ಬಿತ್ತರಿಸಿದ ಅವಧಿಗೆ ತುಂಬು ಹೃದಯದ ಧನ್ಯವಾದ…

  2. ಡಾ.ಬಿ.ಆರ್.ಸತ್ಯನಾರಾಯಣ

    ಶಾಮಣ್ಣ-ತೇಜಸ್ವಿಯವರ ಬಗೆಗೆ ಓದಲು ಯಾವಾಗಲೂ ಖುಷಿಯೆನ್ನಿಸುತ್ತದೆ. ಆಪ್ತವೆನ್ನಿಸುವ ನಿಮ್ಮ ಬರಹ ಶಾಮಣ್ಣನವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading