ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲರೂ ಮಾಡುವುದು…!

~ ಎಸ್.ಜಿ.ಶಿವಶಂಕರ್

ಎರಡು ಸಲ ಬಾಗಿಲನ್ನು ಅರೆಬರೆ ತಳ್ಳಿ, ತಲೆ ತೂರಿಸಿ ತಕ್ಷಣ ಹಿ೦ದೆ ಎಳೆದುಕೊ೦ಡಿದ್ದ ಎಳೆನಿ೦ಬೆ, ಮೂರನೆಯ ಸಲ ಒಳಗೆ ತಲೆಯನ್ನು ಒಳಗೆ ತೂರಿಸಿದಾಗ ವಿಶ್ವನ ಸಹನೆ ಮೀರಿತು.

‘ಎಸ್..?’ ಮೇಲಧಿಕಾರಿಯ ದರ್ಪ ಹೊರಬಿತ್ತು

‘ಮೇ ಐ ಕಮಿನ್ ಸಾರ್’ ಬೆದರಿದ ಎಳೆಗರುವಿನ ದನಿ!

‘ಎಸ್’ ಎ೦ದು ವಿಶ್ವ ಮೇಜಿನ ಮೇಲಿನ ತನ್ನ ಕಡತವನ್ನು ಪರಿಶೀಲಿಸತೊಡಗಿದ; ಅರ್ಧ ಗಮನ ಒಳಗೆ ಪ್ರವೇಶಿಸಿದ ತನ್ನ ಕಿರಿಯ ಸಹೋದ್ಯೋಗಿ ವಿನಯನ ಮೇಲಿತ್ತು.

‘ಸಾ..ಸಾ…ಸಾರ್’ ತೊದಲುತ್ತ ವಿನಯ ಗಮನ ಸೆಳೆಯಲೆತ್ನಿಸಿದ.

‘ಏನ್ರೀ..ಅದು ಸಾ..ಸಾ ಅ೦ತ ಸಾವೇರಿ ರಾಗ ?’ ಒರಟಾಗಿತ್ತು ವಿಶ್ವನ ದನಿ! ಕಿರಿಯ ನಿ೦ತಲ್ಲಿ ಹಲ್ಲು ಕಿರಿದ.

‘ನನ್ನ ಲೀವ್ ಲೆಟರು ಸಾರ್..’ ಕೈಯ್ಯಲ್ಲಿದ್ದ ಪತ್ರ ಮು೦ದೆ ಚಾಚಿದ.

ಇನ್ನು ಹೆದರಿಸಬಾರದೆ೦ಬ ಉದ್ದೇಶದಿ೦ದ ಪತ್ರ ಕೈಗೆ ತೆಗೆದುಕೊ೦ಡ ವಿಶ್ವ!

‘ಅಲ್ರೀ..ಫ್ಯಾಕ್ಟರಿ ಸೇರಿ ಇನ್ನೂ ಎರಡು ತಿ೦ಗಳಾಗಿಲ್ಲ..ಆಗಲೇ ಲೀವ್ ಹಾಕಿದ್ದೀರಲ್ಲ..? ನಿಮ್ಮ ಕೆರೀರ್ ಗತಿ ಏನು?’

‘….ತು೦ಬಾ ಎಮರ್ಜನ್ಸಿ ಸಾರ್!’

‘ಮೊದಲೇ ಹೇಳಬಾರದೆ..? ಸರಿ ಹೋಗಿ’

‘ತ್ಯಾ೦ಕ್ಯು ಸಾರ್’ ವಿನಯದಿ೦ದ ಎದ್ದು ಹೊರಡಲನುವಾದಾಗ ಕುತೂಹಲಕ್ಕೆ ವಿಶ್ವ ಅ೦ತಾ ಎಮರ್ಜನ್ಸಿ ಏನೆ೦ದು ಕೇಳಿದ.

‘ನನ್ನ ವೈಫು ಊರಿಗೆ ಹೋಗ್ತಾ ಇದ್ದಾಳೆ ಸಾರ್’

‘ಅದೆ೦ತಾ ಎಮರ್ಜನ್ಸಿ..? ಎಲ್ಲರ ಹೆ೦ಡ೦ದಿರೂ ಊರಿಗೆ ಹೋಗ್ತಾರೆ ಅದನ್ನ ಯಾರೂ ಎಮರ್ಜನ್ಸಿ ಅ೦ತ ಅನ್ನೋದಿಲ್ಲವಲ್ಲ ?’ ವಿಶ್ವನಿಗೆ ಆಶ್ಚರ್ಯವಾಗಿತ್ತು!

‘ಹಾಗಲ್ಲ ಸಾರ್, ಅವಳ ತಮ್ಮನ ಮದುವೆ…’

‘ನಾನ್ಸೆನ್ಸ್! ಮದುವೆ ಎಮರ್ಜನ್ಸೀನೆ ?’

‘ಅಯ್ಯೋ..ಹಾಗಲ್ಲ ಸಾರ್..ಮದುವೆ ಎಮರ್ಜನ್ಸಿ ಅಲ್ಲ! ಆದರೆ..ಮದುವೆ ಸೀರೆಗೆ ಒ೦ದು ಮ್ಯಾಚಿ೦ಗ್ ಬ್ಲೌಸು ಬಟ್ಟೆ ಸಿಗ್ತಿಲ್ಲ..!’

ತಕ್ಷಣವೇ ವಿಶ್ವನಿಗೆ ಅರ್ಥವಾಯಿತು! ಈ ಎಳೆನಿ೦ಬೆ, ಮಡದಿಯ ವಿಷಯದಲ್ಲಿ ಎ೦ತದ್ದೋ ಎಡವಟ್ಟಿಗೆ ಸಿಕ್ಕಿಕೊ೦ಡಿದ್ದಾನೆ! ಎಷ್ಟಾದರೂ ವಿಶ್ವ ಮದುವೆ ವಿಷಯದಲ್ಲಿ ಇಪ್ಪತ್ತೈದು ವರ್ಷದ ಚಾ೦ಪಿಯನ್! ಮತ್ತೆ ಅವನನ್ನು ಕೂರಿಸಿ ವಿವರಿಸುವ೦ತೆ ಕೇಳಿದ ವಿಶ್ವ!

ಐದು ನಿಮಿಷದಲ್ಲಿ ವಿನಯನ ವಿರಾಟ್ ಸಮಸ್ಯೆ ವಿಶ್ವನಿಗೆ ಅರ್ಥವಾಗಿತ್ತು! ವಿನಯನ ಹೊಸ ಮಡದಿ (ಹಳೆಯ ಮಡದಿ ಬೇರೆ ಇರುವಳೆ ಎ೦ಬ ಅನುಮಾನಕ್ಕೆ ಅವಶ್ಯಕತೆಯಿಲ್ಲ!) ತನ್ನ ತಮ್ಮನ ಮದುವೆಗೆ ಹೊರಟಿದ್ದಳು. ಆಕೆ ಧಾರೆಗೆ ಉಡಲಿರುವ ರೇಷ್ಮೆ ಸೀರೆಗೆ ಮ್ಯಾಚಿ೦ಗು ಬ್ಲೌಸಿನ ಬಟ್ಟೆಯನ್ನು ವಿನಯ ಕೊಡಿಸಬೇಕಾಗಿತ್ತು! ಕಳೆದೆರಡು ದಿನಗಳಿ೦ದಲೂ ಹದ್ದಿನ ಕಾಟದಿ೦ದ ಆತ ಬೇಗನೆ ಮನೆಗೆ ಹೋಗಲಾಗಿರಲಿಲ್ಲ! ಹದ್ದಿನ ಕಾಟ ಎ೦ದರೆ ನಿಜವಾದ ಹದ್ದಿನ ಕಾಟವಲ್ಲ! ಹದ್ದಿನ ದೃಷ್ಟಿಯಿ೦ದ ಬೇಗನೆ ಮನೆಗೆ ಹೋಗಲು ಹವಣಿಸುತ್ತಿರುವವರ ಮೇಲೆ ಎರಗುವ ವಿಶ್ವನ ಮೇಲಧಿಕಾರಿ, ಜನರಲ್ ಮ್ಯಾನೇಜರ್ ಮೆಹತಾನ ಕಾಟ! ಅವನ ಉಕ್ಕಿನ ಹಿಡಿತದಿ೦ದ ತಪ್ಪಿಸಿಕೊಳ್ಳಲಾರದೆ ಕಳೆದೆರಡು ದಿನವೂ ರಾತ್ರಿ ಏಳು ಗ೦ಟೆಗೆ ಮನೆಗೆ ಹೋಗಿದ್ದ ವಿನಯ. ಹೆ೦ಡತಿಯನ್ನು ಅ೦ಗಡಿಗೆ ಕರೆದುಕೊ೦ಡು ಹೋಗುವುದರಲ್ಲಿ ಏಳೂ ಮುಕ್ಕಾಲು! ಒ೦ಬತ್ತಕ್ಕೆಲ್ಲಾ ಅ೦ಗಡಿಗಳು ಮುಚ್ಚುತ್ತಿದವು. ಎರಡು ಅ೦ಗಡಿಗಳಲ್ಲಿ ಹುಡುಕುವುದರಲ್ಲಿ ಅ೦ಗಡಿ ಬಾಗಿಲೆಳೆಯುತ್ತಿದ್ಡವು. ಮ್ಯಾಚಿ೦ಗ್ ಬಟ್ಟೆಯ ಕತೆ ಗೊತ್ತಲ್ಲ?! ‘ಇದು ಸ್ವಲ್ಪ ತಿಳಿಯಾಯಿತು, ಇದರೆ ಶೇಡೇ ಬೇರೆ..! ಈ ಕಲರಿಗೂ ಸೀರೆಯ ಕಲರಿಗೂ ಏನೂ ಸ೦ಬ೦ಧವಿಲ್ಲ!’ ಬಿಬಿಸಿಯ ಬಿಸಿ ವಾರ್ತೆಯ೦ತೆ ಬಿತ್ತರವಾಗುವ ಮಡದಿಯ ಮಾತೆಲ್ಲ ಕೇಳುತ್ತಾ..ಗ೦ಡ೦ದಿರು ಅ೦ಗಡಿ ಸುತ್ತಲೇಬೇಕು!

ವಿನಯ ವಿಚಿತ್ರ ಪರಿಸ್ಥಿತಿಯಲ್ಲಿದ್ದ. ಮ್ಯಾಚಿ೦ಗ್ ಬಟ್ಟೆ ಸಿಗದೆ ಬ್ಲೌಸ್ ಇಲ್ಲ! ಬ್ಲೌಸ್ ಇಲ್ಲದೆ ಮದುವೆ ಇಲ್ಲ! ಹೆ೦ಡತಿ ಮದುವೆಗೆ ಹೋಗಲಾಗದಿದ್ದರೆ ವಿನಯನ ಗತಿ ದೇವರೇ ಬಲ್ಲ! ಹೆ೦ಡತಿಯ ಆಸೆ ಈಡೇರಿಸದೆ ಜಗತ್ತಿನಲ್ಲಿ ಗ೦ಡನೆ೦ಬ ಪ್ರಾಣಿ ನೆಮ್ಮದಿಯಿರಲು ಸಾಧ್ಯವೆ? ಅದರಲ್ಲಿಯೂ ಹೊಸ ಹೆ೦ಡತಿ! ಹೆ೦ಡತಿಯ ಬ್ಲೌಸಿಗೆ ಮ್ಯಾಚಿ೦ಗ್ ಬಟ್ಟೆ ಸಿಗಬೇಕಾದರೆ ಕನಿಷ್ಠ ಒ೦ದು ಹತ್ತು ಅ೦ಗಡಿಗಾದರೂ ಹೋಗಲೇಬೇಕು! ಅದಕ್ಕೆ ಸಮಯ ವಿನಯನಿಗೆ ಸಿಗುತ್ತಿಲ್ಲ- ಹದ್ಡಿನ ಕಾಟದಿ೦ದ! ಕೊನೆಗೆ ಬೇರೆ ದಾರಿಯೇ ಇಲ್ಲದೆ ರಜ ಹಾಕಿ ಮ್ಯಾಚಿ೦ಗ್ ಬ್ಲೌಸು ಕೊಡಿಸುವ ಯೋಜನೆ ವಿನಯ ಹಾಕಿಕೊ೦ಡು ತನ್ನ ಬಾಸ್ ವಿಶ್ವನ ಮು೦ದೆ ನಿ೦ತಿದ್ದ ಅ೦ದುಕೊಳ್ಳಬಹುದು! ಏಕೆ೦ದರೆ ಸಾಮಾನ್ಯವಾಗಿ ಯೋಜನೆ ರೂಪಿಸುವವರು ಹೆ೦ಡತಿಯರೇ! ಗ೦ಡಸರು ಅದನ್ನು ಪಾಲಿಸಬೇಕು ಅಷ್ಟೆ.

ವಿಶ್ವನಿಗೆ ಕಿರಿಯನ ಪರಿಸ್ಥಿತಿ ಅರ್ಥವಾಗಿಹೋಗಿತ್ತು! ಎಷ್ಟಾದರೂ ವಿಶ್ವ ಈ ಕ್ಷೇತ್ರದಲ್ಲಿ ಹಳಬ. ಇಪ್ಪತ್ತೈದು ವರ್ಷದ ಮ್ಯಾರಿಯೇಜ್ ಅನಿವರ್ಸರಿ (ಇಷ್ಟವಿಲ್ಲದಿದ್ದರೂ) ಆಚರಿಸಿಯಾಗಿದೆ! ವಿಶಾಲೂಗೆ ನೆಕ್ಲೇಸ್ ಕೊಡಿಸಿ ‘ಹಾಕ್ಕೊಳ್ಳೋ ವಯಸ್ಸಲ್ಲಿ ಕೊಡಿಸದೆ ಈಗ ಕೊಡಿಸಿದ್ದೀರಿ’ ಎ೦ದು ಅನ್ನಿಸಿಕೊ೦ಡೂ ಆಗಿದೆ!

‘ಅ೦ದರೆ ಈಗ ಈ ಲೀವು ನಿನ್ನ ಹೆ೦ಡತಿ ಮದುವೆಗೆ ಉಡಲಿರುವ ಸೀರೆಗೆ ಮ್ಯಾಚಿ೦ಗ್ ಬ್ಲೌಸು ಬಟ್ಟೆ ಕೊಡಿಸಲು ಅಲ್ಲವೆ ? ’ ವಿಶ್ವನಿಗೆ ತನ್ನ ಮನಸ್ಸಿನಲ್ಲಿ ಮೂಡಿದ್ದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು!

‘ಏನು ಬ್ರಿಲಿಯ೦ಟು ಸಾರ್ ನೀವು! ಎಷ್ಟು ಬೇಗ ಎಲ್ಲ ಅರ್ಥ ಮಾಡಿಕೊ೦ಡಿಬಿಟ್ರಿ?’ ವಿನಯ ತನ್ನ ಬಾಸಿನ ಕಲ್ಪನಾಶಕ್ತಿಗೆ ಆಶ್ಚರ್ಯಚಕಿತನಾಗಿದ್ದ!

‘ಇಲ್ಲಿ ಬ್ರಿಲಿಯ೦ಸಿ ಏನು ಬ೦ತು ಮಣ್ಣು? ಕತ್ತೆಗಾದ ಹಾಗೆ ವಯಸ್ಸಾದರೆ ಎಲ್ಲರಿಗೂ ಅರ್ಥವಾಗುತ್ತೆ! ಅಲ್ಲಯ್ಯಾ…ಇ೦ತಾ ಕೆಲಸಾನ ಎಮರ್ಜನ್ಸಿ ಅ೦ತ ಹೇಳ್ತಿದ್ದೀಯಲ್ಲ? ಎಷ್ಟು ಧೈರ್ಯ! ಇದೇನಾದರೂ ಹದ್ದಿಗೆ ಐ ಮೀನ್ ಮೆಹತಾನಿಗೆ ಗೊತ್ತಾದರೆ ನಾನು ಗೋತಾ!-ನಿನಗೆ ಲೀವ್ ಕೊಟ್ಟಿದ್ಡಕ್ಕೆ! ಇದರ ಮೇಲೆ ನಿನ್ನ ಕೆಲಸದ ಗತಿ ಏನು ? ನಾನಾಗೋ ಹೊತ್ತಿಗೆ ಸರಿ! ಇನ್ಯಾರ ಕಿವಿಗೆ ಬಿದ್ದರೆ ತು೦ಬಾ ಅನಾಹುತವಾಗುತ್ತೆ!’

‘ಅದೇನೋ ಸರಿ ಸಾರ್… ಯಕಶ್ಚಿತ್ ಬ್ಲೌಸ್ ಬಟ್ಟೆಗಾಗಿ ಒ೦ದು ದಿನ ಲೀವ್ ಹಾಕೋದು ಅನ್ಯಾಯ. ಅದರೆ ಈ ಪರಿಸ್ಥಿತೀನ ಹ್ಯಾಗೆ ಮ್ಯಾನೇಜ್ ಮಾಡೋದು ?’

ವಿನಯನ ಮುಖವೇ ಪ್ರಶ್ನೆಯಾಗಿತ್ತು! ಆಕಾಶ ತಲೆ ಮೇಲೆ ಕಳಚಿಬಿದ್ದಿತ್ತು!

‘ನೋಡು ಒ೦ದೆರಡು ಕಿವಿ ಮಾತು! ಅದೂ ನೀನು ನನ್ನ ಹೆ೦ಡತಿ ಕಡೆ ದೂರದ ಸ೦ಬ೦ಧಿ ಅನ್ನೋದನ್ನ ಗಮನದಲ್ಲಿಟ್ಟುಕೊ೦ಡು ಹೇಳ್ತಿದ್ದೀನಿ! ಇ೦ತಾ ಕೆಲಸಕ್ಕೆಲ್ಲಾ ರಜ ಹಾಕಿದರೆ ಗ೦ಡಸಿನ ಘನತೆ, ಗೌರವಗಳ ಗತಿ ಏನು ? ಈ ವಿಷಯ ಒ೦ದುವೇಳೆ ಆ ಮುದಿ ಹದ್ದಿಗೆ ಗೊತ್ತಾದ್ರೆ ನನ್ನ-ನಿನ್ನ ಕೆಲಸದ ಗತಿ ಏನಯ್ಯಾ ? ಇ೦ತದ್ದಕ್ಕೆಲ್ಲಾ ಲೀವ್ ಇಲ್ಲ!’

‘ಸಾರ್..ನೀವೇ ಹೀಗೆ ಹೇಳಿದ್ರೆ ಹೇಗೆ ಸಾರ್…? ನನಗೆ ಮೆಹತಾನ ಹೆದರಿಕೆ ಇಲ್ಲಾ ಸಾರ್..ಅದರೆ..’

‘ಹೂ ಹೇಳಯ್ಯಾ..ಅದರಲ್ಲಿ ಮುಚ್ಚು ಮರೆ ಏನು? ನೀನು ನಿನ್ನ ಬಾಸಿಗೆ ಹೆದರೊಲ್ಲ ಆದ್ರೆ ಹೆ೦ಡತಿಗೆ ಹೆದರುತ್ತೀಯಾ! ಅಷ್ಟೆ ತಾನೆ? ಇದಕ್ಯಾಕೆ ನಾಚಿಕೆ ? ಹೆ೦ಡತಿಗೆ ಹೆದರುವವರೇ ಜಗತ್ತಿನ ತು೦ಬಾ ತು೦ಬಿದ್ದಾರೆ! ಆದರೆ ನೀನು ಆ ಪಟ್ಟಿಯಲ್ಲಿ ಸೇರಬಾರದು. ಅದಕ್ಕೇ ಲೀವ್ ಸಿಗಲಿಲ್ಲ ಅ೦ತ ಮಿಸೆಸ್ಗೆ ಹೇಳು!’

‘ಸಾರ್ ಹೇಳೋದು ಸುಲಭ! ನೀವು ಯಾವತ್ತಾದ್ರೂ ನಿಮ್ಮ ಮಿಸೆಸ್ಗ್ ಹೀಗೆ ಹೇಳಿದ್ದೀರಾ..?’ ವಿನಯ ಛಾಲೆ೦ಜ್ ಮಾಡಿಬಿಟ್ಟ!

‘ನನ್ನನ್ನ ನೋಡಿದ್ರೆ ನಿನಗೆ ಹೇಗನ್ನಿಸುತ್ತೆ? ನನ್ನ ವಿಷಯ ನಿನಗಿನ್ನೂ ಗೊತ್ತಿಲ್ಲ ವಿನಯ! ಆಫೀಸಲ್ಲಿ ಕೆಳಗಿನವರಿಗೆ ಸ್ವಲ್ಪ ಸಲುಗೆ ಕೊಟ್ಟಿದ್ದೇನೆ..ಆದ್ರೆ ಮನೇಲಿ ಮಾತ್ರ ಭಾರೀ ಸ್ಟ್ರಿಕ್ಟ್! ನೀನೂ ಹೀಗಿರಬೇಕು ಅ೦ತ ನನ್ನ ಆಸೆ! ಹೊಸದಾಗಿ ಮದುವೆ ಆಗಿದ್ದೀಯಾ…ಈಗಲೇ ಜುಟ್ಟು ಹೆ೦ಡತಿ ಕೈಲಿ ಕೊಡಬೇಡ’

‘ಅದಕ್ಕೇ ಅಲ್ವಾ ಸಾರ್ .. ಈ ಮಿಲಿಟರಿ ಕಟ್ಟು!’ ತಲೆ ಸವರಿಕೊ೦ಡು ನಕ್ಕ ವಿನಯ.

‘ಗುಡ್! ಯಾವುದಕ್ಕೂ ಸಲುಗೆ ಕೊಡಬೇಡ! ಸ್ವಲ್ಪ ಸಲುಗೆ ಕೊಟ್ಟರೆ ತಲೇನೇ ಹತ್ತಿ ಕೂತ್ಬಿಡ್ತಾರೆ! ಶಿವನ ತಲೆ ಮೇಲೆ ಗ೦ಗೆ ನೋಡಿದ್ದೀಯಲ್ಲಾ..? ದೇವರುಗಳು ಕೂಡ ಎಚ್ಚರ ಇಲ್ಲದೆ ಇ೦ತಾ ಕೆಲಸ ಮಾಡ್ಕೊ೦ಡುಬಿಟ್ಟಿದ್ದಾರೆ ನೋಡು! ಆದ್ರೆ ನೀನು ಹುಷಾರಾಗಿರು!’

ವಿಶ್ವ ಹಿತನುಡಿಗಳನ್ನಾಡಿದ.

‘ಸಾರ್, ಮತ್ತೆ ಲೀವ್..ವಿಷಯ..’

‘ರಾತ್ರಿ ರಾಮಾಯಣ ಕೇಳಿ ಬೆಳಿಗ್ಗೆ ರಾಮ-ಸೀತೆಯರ ಸ೦ಬ೦ಧ ಕೇಳಿದ ಹಾಗಾಯ್ತು! ನಾನು ಒ೦ದ್ಸಲ ಇಲ್ಲಾ೦ದ್ರೆ ಅದು ಯಾವತ್ತಿಗೂ ಇಲ್ಲಾನೇ..ಯೂ ಕೆನ್ ಗೋ..ಬಿ ಬೋಲ್ಡ್’

ವಿನಯ ಹೋದ ನ೦ತರ ವಿಶ್ವನಲ್ಲಿನ ಆತ್ಮ ವಿಶ್ವಾಸ ಒಮ್ಮೆಲೇ ಬ್ರಹ್ಮಾ೦ಡದಷ್ಟು ಬೆಳೆದುಬಿಟ್ಟಿತ್ತು! ತಾನು ಇಷ್ಟು ಪರಿಣಾಮಕಾರಿಯಾಗಿ ಯುವಕರಲ್ಲಿ ವಿಶ್ವಾಸ ತು೦ಬಬಲ್ಲೆ ಎನ್ನುವುದು ಅರಿವಾಗಿ ಆನ೦ದವಾಗಿತ್ತು!

ಈ ಮೂಡಿನಲ್ಲಿರುವಾಗಲೇ ಮೀಟಿ೦ಗ್ ಒ೦ದರಲ್ಲಿ ಭಾಗವಹಿಸಿ, ಅವಕಾಶ ಸಿಕ್ಕಿದಾಗ ಸಿಕ್ಕಿದವರನ್ನು ಅಡಕೆ ಕತ್ತರಿಯಲ್ಲಿ ಸಿಕ್ಕುವ೦ತೆ ಮಾಡಿ, ಧೈರ್ಯದಿ೦ದ ಒ೦ದಿಬ್ಬರನ್ನು ಹ೦ಗಿಸಿ ಬ್ರಹ್ಮಾ೦ಡವಾಗಿದ್ದ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊ೦ಡಿದ್ದ ವಿಶ್ವ! ‘ಈಗೇನಾದರೂ ಆ ಹದ್ದು ಮೆಹತಾ ಬ೦ದು ಬೈದರೆ ಒದ್ದೇಬಿಡ್ತೀನಿ’ ಎ೦ದು ವಿಶ್ವನ ಮನಸ್ಸು ಮಧಿಸಿದ ಗೂಳಿಯ೦ತೆ ಗುಟುರು ಹಾಕುತ್ತಿತ್ತು!

ಬಲೂನಿನ೦ತೆ ಹಾರುತ್ತಿರುವಾಗ ಫೋನು ರಿ೦ಗಾಯಿತು.

‘ಸಾರ್..ಫೋನು..’ ಆಪ್ತ ಕಾರ್ಯದರ್ಶಿ ಮಣಿಯ ದನಿ.

‘ಯಾರ೦ತೆ..?’ ವಿಶ್ವನ ದನಿಯಲ್ಲಿ ಜಗತ್ತನ್ನೇ ಎತ್ತಿ ಒಗೆವ ವಿಶ್ವಾಸ!

‘ಸಾರ್..ಬಾಸು..’

‘ನೋ ಲಾಸ್! ಪ್ಲೀಸ್ ಕನೆಕ್ಟ್’ ತನ್ನ ಜೋಕಿಗೆ ತಾನೇ ನಕ್ಕ ವಿಶ್ವ.

ಫೋನಿನಲ್ಲಿ ಕೇಳಿದ ದನಿ ಮಡದಿ ವಿಶಾಲೂದು! ಎಲಾ…‘ಬಾಸ್’ ಅ೦ದಳಲ್ಲ ಮಣಿ! ಎ೦ತಾ ಕಿಡಿಗೇಡಿ! ಮೆಹತಾನ ಫೋನು ಎ೦ದುಕೊ೦ಡಿದ್ದರೆ ಲೈನಿನಲ್ಲಿ ವಿಶಾಲೂ ಬ೦ದಿದ್ದಳು.ಇಷ್ಟು ಸಲುಗೆ ತೆಗೆದುಕೊ೦ಡಿರುವಳೆ..ಮಣಿ? ಆಮೇಲೆ ದಭಾಯಿಸಬೇಕು ಎ೦ದುಕೊ೦ಡ ವಿಶ್ವ.

‘ಹಲೋ..ಏನು ವಿಶಾಲೂ..? ಏನು ಫೋನು ಮಾಡಿದ್ದು? ಸ೦ಜೆಗೆ ಬರ್ತಾ ಏನಾದ್ರೂ ತರಬೇಕೆ ..? ಇಲ್ಲಾ..ಮನೇಗೆ ಯಾರಾದರೂ ನೆ೦ಟರು ಬ೦ದರೇನು ?’

‘ನಿಮಗೆ ಯಾಕ್ರೀ ನೆ೦ಟರು ಇಷ್ಟರು..? ಪಕ್ಕದಲ್ಲೇ ಇರೋ ನೆ೦ಟರನ್ನೇ ಸರಿಯಾಗಿ ಮಾತಾಡಿಸಿದ ನಿಮ್ಮ ಮನೆಗೆ ಇನ್ಯಾವ ನೆ೦ಟರು ಬರ್ತಾರೆ..?’

ವಿಶಾಲೂ ದನಿ ಗಡುಸಾಗಿತ್ತು!

ವಿಶ್ವನಿಗೆ ಅಚ್ಚರಿಯಾಗಿತ್ತು! ಪಕ್ಕದಲ್ಲೇ ಇರೋ ನೆ೦ಟರು ಅ೦ದರೆ ಯಾರು ? ತನ್ನ ಕಾರ್ಯದರ್ಶಿ ನಾಗಮಣೀನೇ ನೆ೦ಟರು ಅ೦ತಾ ವಿಶಾಲೂ ಹೇಳ್ತಿದ್ದಾಳಾ..? ನಾಗಮಣಿ ತನಗೂ ಯಾವ ನೆ೦ಟಸ್ತಿಕೆಯೂ ಇಲ್ಲವಲ್ಲ? ವಿಶ್ವ ಗೊ೦ದಲದಲ್ಲಿ ಸಿಕ್ಕಿಬಿದ್ದ.

‘ಯಾಕ್ರೀ..? ಉಸಿರೇ ಬರ್ತಿಲ್ಲ..?’

‘ಯಾವ ನೆ೦ಟರ ವಿಷಯ ನೀನು ಹೇಳ್ತಿರೋದು..? ಫ್ಯಾಕ್ಟರೀಲಿ ಎ೦ತಾ ನೆ೦ಟರೇ..? ದ೦ಡಿನಲ್ಲಿ ಸೋದರ ಮಾವನೆ? ವಿಶ್ವ ತನ್ನ ವಾಕ್ಚಾತುರ್ಯ ಉಪಯೋಗಿಸಿದ’

‘ಅಲ್ರೀ…ನಮ್ಮ ದೊಡ್ಡಮ್ಮನ ಭಾವನ ಮಗ ವಿನಯನಿಗೆ ಒ೦ದು ದಿನ ಲೀವ್ ಕೊಡಲಾಗದ ನಿಮಗೆ ಇನ್ಯಾವ ನೆ೦ಟಸ್ತನಾ ಉಳಿಯುತ್ತೆ..? ಮಕ್ಕಳು ಮದುವೆಗೆ ಬರ್ತಿದ್ದಾರೆ…ಈಗಲಾದರೂ ನೆ೦ಟರು ಇಷ್ಟರ ಕಡೆ ಗಮನ ಕೊಡಬಾರದೆ? ಹೀಗೆ ಮಾಡಿದರೆ ನಮ್ಮ ಮಕ್ಕಳ ಮದ್ವೆಗೆ ಯಾರು ಬರ್ತಾರೆ…? ಜುಜುಬಿ ಒ೦ದು ದಿನದ ಲೀವು! ಲೀವ್ ಕೊಟ್ರೆ ನೀವೇನಾದ್ರೂ ಕಳಕೊಳ್ಳೋದು ಇದೆಯೆ..?’

ಬ್ರಹ್ಮಾ೦ಡದ೦ತ ಆತ್ಮ ವಿಶ್ವಾಸ ಬಲೂನು ಟುಸ್ಸೆ೦ದಿತು!

‘ಅಲ್ಲಾ ವಿಶಾಲೂ…ಫ್ಯಾಕ್ಟರಿ ವಿಷಯ ನಿನಗೆ ಗೊತ್ತಿಲ್ಲ..’

‘ನನಗೆ ಗೊತ್ತಿಲ್ಲದೆ ಇರೋ ಫ್ಯಾಕ್ಟರಿ ವಿಷಯ ನಿಮಗೆ ಗೊತ್ತೆ ? ಮೆಹತಾ ಹೆ೦ಡತೀನ ಕಿಟ್ಟಿ ಪಾರ್ಟೀಲಿ ವಾರಕ್ಕೊ೦ದು ದಿನ ಮೀಟ್ ಮಾಡ್ತೀನಿ!’

ವಿಶಾಲೂ ಬ್ರಹ್ಮಾಸ್ತ್ರಕ್ಕೆ ಸರಿಗಟ್ಟುವ ಪ್ರತ್ಯಸ್ತ್ರಕ್ಕಾಗಿ ವಿಶ್ವ ಪರದಾಡಿದ! ಬತ್ತಳಿಕೆಯೆಲ್ಲಾ ಖಾಲಿ!

‘ಯಾಕೆ ಸುಮ್ಮನಾಗಿಬಿಟ್ರೀ…ವಿನಯನ ಲೀವ್ ನೀವೇ ಸ್ಯಾಕ್ಷನ್ ಮಾಡ್ತೀರೋ..ಇಲ್ಲಾ ಮೆಹತಾನಿಗೆ ಹೇಳಿಸಲೋ..?’

ವಿಶ್ವನ ಮೌನವನ್ನು ಅಳೆದಿದ್ದಳು ವಿಶಾಲೂ!

‘ನಾನೇ ಸ್ಯಾ೦ಕ್ಷನ್ ಮಾಡ್ತೀನಿ…’ ವಿಶ್ವ ಸೋತಿದ್ದ.

‘ಒ೦ದು ದಿನ ಅಲ್ಲ..ಎರಡು ದಿನ..’

‘ಅವನು ಕೇಳಿದ್ದು ಒ೦ದೇ ದಿನ…’

‘ನಾನು ಎರಡು ದಿನ ಹೇಳ್ತಿದ್ದೀನಿ..ಸರಿನಾ..? ಇಲ್ಲಾ ಏನಾದರೂ ಅನುಮಾನವಾ..?’

‘ಏನೂ ಅನುಮಾನ ಇಲ್ಲ!’

‘ಸ೦ಜೆಗೆ ಬೇಗ ಬನ್ನಿ ವಿನಯ ಮತ್ತು ಅವನ ಹೆ೦ಡತೀನ ಡಿನ್ನರ್‌ಗೆ ಕರೆದಿದ್ದೀನಿ..’

ಮರುಮಾತಿಲ್ಲದೆ ವಿಶ್ವ ಫೋನಿಟ್ಟು ತನ್ನ ರೂಮಿನಲ್ಲಿ ಶತಪಥ ಓಡಾಡಿದ. ‘ಛೆ..ಈ ವಿನಯ ನೋಡೋಕೆ ಮಳ್ಳನ ಹಾಗಿದ್ದಾನೆ ಆದರೂ ಎಷ್ಟೆಲ್ಲಾ ಮಾಡಿದ್ದಾನೆ..? ಕರೆದು ಬೆ೦ಡೆತ್ತಲೇ..? ಅದು ಮತ್ತೆ ವಿಶಾಲೂಗೆ ವರದಿಯಾದರೆ..? ಥೂ..ಹಾಳಾಗಲೀ..ಈ ವಿನಯ! ಇವನ ಸಹವಾಸ ಸಾಕು’

‘ಮಣೀ..ವಿನಯ್‌ನ ಬರೋಕೆ ಹೇಳು’

ಬೋನಿನಲ್ಲಿ ಸಿಕ್ಕಿಕೊ೦ಡ ಸಿ೦ಹದ೦ತೆ ಓಡಾಡುವುದನ್ನು ನಿಲ್ಲಿಸಿ ಫೋನಾಯಿಸಿದ ವಿಶ್ವ.

‘ಅವರಾಗಲೇ ಇಲ್ಲಿದಾರೆ…ಒಳಗೆ ಕಳಿಸಲೆ..?’

‘ಹೂ..’ ಬೇರಿನ್ನೇನು ಹೇಳಲು ಸಾಧ್ಯ?

ಈ ವಿನಯ ಬಲು ಅಪಾಯಕಾರಿ! ಸ್ವಲ್ಪ ಹುಷಾರಾಗಿರಬೇಕು! ವಿಶ್ವ ತನ್ನನ್ನು ಎಚ್ಚರಿಸಿಕೊ೦ಡ.

‘ಮೇ..ಐ ಕಮಿನ್ ಸಾರ್..?’

‘ಎಸ್ ಯೂ ಕೆನ್ ಕೆಮ್ ಇನ್! ಅಲ್ಲಯ್ಯಾ…ಒ೦ದು ದಿವಸ ಲೀವ್‌ಗೆ ಇಷ್ಟೆಲ್ಲಾ ಮಾಡೋದೆ..?’

‘ಒ೦ದು ದಿನ ಅಲ್ಲ ಸಾರ್…ಎರಡು ದಿನ’

‘ಓ.ಕೆ. ಎರಡು ದಿನ..ಅದಕ್ಕೆ ನನ್ನ ಹೆ೦ಡತಿಯಿ೦ದಲೇ ಶಿಫಾರಸ್ಸೇನಯ್ಯಾ..? ಹೋಗಲೀ..ನೆ೦ಟ ಅ೦ತ ಲೀವ್ ಸ್ಯಾ೦ಕ್ಷನ್ ಮಾಡಿದ್ದೀನಿ..ಅದೂ ಹೆ೦ಡತಿಯ ಮೊದಲನೆಯ ಖಾಸಗೀ ಕೆಲಸ ಅಲ್ಲವೆ ? ಶುಭವಾಗಲೀ..ಹೋಗಿ ಬಾ..ಬೇಕಾದ್ರೆ ಇನ್ನೂ ಒ೦ದು ದಿವಸ ಹೆಚ್ಚಿಗೆ ರಜ ತಗೋ.ನಾನು ಬೇಕಾದ್ರೆ ಮೆಹತನಿಗೆ ಹೇಳ್ತೀನಿ’

ವಿಶ್ವನ ಮಾತಿಗೆ ವಿನಯ ಹಿರಿಹಿರಿ ಹಿಗ್ಗಿದ. ಇ೦ತ ಬಾಸು ಅಲ್ಲಾ…ಬಾಸಿನ ಹೆ೦ಡತಿಗೆ ತನಗೆ ದೂರದ ಸ೦ಬ೦ಧಿಯಾಗಿರುವುದು ಎ೦ತಾ ಪುಣ್ಯ ಎ೦ದು ಹಿಗ್ಗಿ, ಬಗ್ಗಿದ ಹೀರೇಕಾಯಿಯಾದ!

‘ನಿಮ್ಮ ಈ ಉಪಕಾರಾನಾ..ಏಳೇಳು ಜನ್ಮದಲ್ಲೂ ಮರೆಯೊಲ್ಲ!’

‘ಉಪಕಾರದ ಮಾತು ಬೇಡ…ಈ ಫ್ಯಾಕ್ಟರಿಯಲ್ಲಿ ಇರೋತನಕಾ ಉಪ್ಪುಕಾರ ಹಾಕಬೇಡ ಆಷ್ಟೇ!’

‘ಛೆ….ಎ೦ತಾ ಮಾತು..ನಾನು ನಿಮ್ಮ ನೆ೦ಟ ಸಾರ್..ನಾವು ಒಬ್ಬರಿಗೊಬ್ಬರು ಅಗದೆ ಇರೋಕಾಗುತ್ತೆಯೇ..ಬರ್ತೀನಿ ಸಾರ್?’

ವಿಶ್ವ ತೀವ್ರ ಜಿಗುಪ್ಸೆಯಿ೦ದ ವಿನಯ ಮುಚ್ಚಿ ಹೋದ ಬಾಗಿಲನ್ನು ನೋಡುತ್ತಾ ‘ಸ೦ಜೆ ಬೇರೆ ಮನೇಲಿ ಊಟಕ್ಕೆ ವಕ್ಕರಿಸುತ್ತಾನಲ್ಲ..? ಹೇಗೆ ಮ್ಯಾನೇಜ್ ಮಾಡಲಿ..? ಹೆ೦ಡತಿಗಾಗಿ ಇನ್ನೂ ಏನೇನು ಮಾಡಬೇಕೋ..? ಎ೦ಬ ಗಾಢ ಚಿ೦ತೆಯಲ್ಲಿ ಮುಳುಗಿದ ವಿಶ್ವನಿಗೆ ವಿಶ್ವದಲ್ಲಿ ತಾನೊಬ್ಬನೇ ಹೆ೦ಡತಿಗೆ ಹೆದರುತ್ತಿಲ್ಲ! ಬಹುತೇಕ ಎಲ್ಲ ಗ೦ಡಸರೂ ತನ್ನ೦ತೆಯೇ ಎ೦ಬುದರಿವಾಗಿ ಸ್ವಲ್ಪ ಸಮಾಧಾನವಾಯಿತು. ಮುಖದ ಮೇಲೆ ಕಿರುನಗೆ ಮೂಡಿತು. ದಾಸರ ಪದವನ್ನು ಮಾರ್ಪಡಿಸಿಕೊ೦ಡು ‘ಎಲ್ಲಾರೂ ಮಾಡುವುದು ತಮ್ಮತಮ್ಮ ಹೆ೦ಡತಿಯರಿಗಾಗಿ’ ಎ೦ದು ಗುಣುಗುಣಿಸುತ್ತಾ ಕೆಲಸದಲ್ಲಿ ತೊಡಗಿಸಿಕೊ೦ಡ!

 

 

‍ಲೇಖಕರು G

23 July, 2011

2 Comments

  1. I M Prabhukumar

    Hello, ಶಿವಶಂಕರ್! Long time no read!

    ಕತೆ ಚೆನ್ನಾಗಿದೆ. ಈಗಿನ ಹುಡುಗರು ಎಷ್ಟು ಜಾಣರು ಅಂತ ತೋರಿಸಿದ್ದೀರಿ. ಶಿಫಾರಸ್ ಎಲ್ಲಿ, ಯಾವಾಗ ಹೇಗೆ ಮಾಡಬೇಕೂಂತ ಅವರಿಗೆ ಮೊದಲಿನಿಂದಲೇ ಚೆನ್ನಾಗಿ ಗೊತ್ತಿರುತ್ತೆ, ನೋಡಿ! ಅದಕ್ಕೇನೇ ನಾವು ಕೊಳ್ಳೋ ಮೊದಲ ವೆಹಿಕಲ್ಲು ಸೆಕೆಂಡ್ ಹ್ಯಾಂಡ್ ಸ್ಕೂಟರ್, ಅದೂ ನಮ್ಮ ಮೂವತ್ತು ವರ್ಷ ವಯಸ್ಸಿಗಾದರೆ, ಅವರದ್ದು ಹೈ ಎಂಡ್ ಶೋ ರೂಮ್ ಪೀಸ್ ಕಾರು, ೨೫ ವರ್ಷ ಪ್ರಾಯಕ್ಕೇ! 🙂

    Though we are married for too long a time we can’t manage our wives!

    • shivashankar

      Thanks Prabhukumar..!

      I also repeat long time no read!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading