ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಎಲ್ಲರನ್ನೂ ಸಂಶಯದಿಂದ ನೋಡುತ್ತಿದ್ದ ನಿಮಿತ್ತ….' – ಪ್ರಜ್ಞಾ ಮತ್ತಿಹಳ್ಳಿ

ತಕರಾರು ಹಾಸುಂಡು ಬೀಸಿ ಒಗೆದ್ಹಾಂಗೆ

ಪ್ರಜ್ಞಾ ಮತ್ತಿಹಳ್ಳಿ

ಫಕ್ಕನೆ ಕರೆಂಟು ಹೋದದ್ದೇ ಎಲ್ಲರೂ ಅಯ್ಯೋ ಎನ್ನುತ್ತಾ ಮೇಣಬತ್ತಿಗಾಗಿ ತಡಕಾಡತೊಡಗಿದರೆ ಸುಗುಣಾಬಾಯಿ ಕತ್ತಲಲ್ಲೇ ದುಡುದುಡು ಮಾಳಿಗೆ ಏರಿ ಕಾತರದಿಂದ ಕಾಲೆತ್ತಿ ಎತ್ತಿ ದೂರ ದೂರದವರೆಗಿನ ಕತ್ತಲನ್ನು ಬಗೆಯುವಂತೆ ನೋಡುತ್ತಿದ್ದಳು. ಅವಳ ಕಣ್ಣು ಆ ಕಾವಳದ ರಾಶಿಯಲ್ಲಿ ಎಲ್ಲಾದರೂ ಒಂದು ಮಿಣುಕು ಕಾಣಿಸುತ್ತದೆಯೇ ಎಂದು ಹುಡುಕುತ್ತಿತ್ತು. ಹಾಗೇನಾದರೂ ಕಂಡರೆ ದುಡು ದುಡು ಕೆಳಗೆ ಓಡಿ ಬಂದು ಫೋನು ಎತ್ತಿಕೊಂಡು ಕೆ.ಇ.ಬಿಗೆ ಹಚ್ಚುತ್ತಿದ್ದಳು. ಆ ಕಡೆಗೆ ಅವರು ಫೊನು ಎತ್ತಿದ ಕೂಡಲೇ ತಾರಕ ಸ್ವರದಲ್ಲಿ ಕಿರುಚುತ್ತಿದ್ದಳು ಏನ್ರೀ ನಿಮಗೆ ಅಪೂಟೂ ಬುದ್ದಿ ಇಲ್ಲೇನ್ರೀ? ಆ ಕಡೆ ಏರಿಯಾದವರಿಗೆ ಕರೆಂಟು ಇಟ್ಟಿದ್ದೀರಿ. ನಮ್ಗೆಲ್ಲ ಕತ್ತಲೆ . ಅವರೆಲ್ಲ ಮಜಾ ಮಾಡಬೇಕು. ಇದ್ಯಾವ ನ್ಯಾಯ? ಮೊದಲು ಅವರ ಕಡೆ ಕರೆಂಟು ತೆಗಿರಿ.

ಆ ಕಡೆಯವರಿಗೆ ನಗಬೇಕೋ ಅಳಬೇಕೋ ತಿಳಿಯುತ್ತಿರಲಿಲ್ಲ. ಎಲ್ಲರೂ ಕರೆಂಟು ಹಾಕ್ರಿ ಅಂತ ಫೋನು ಮಾಡಿದ್ರೆ ಈ ಮಹಾತಾಯಿ ಕರೆಂಟು ತೆಗಿರಿ ಅಂತ ಫೋನಾಯಿಸುತ್ತಿದ್ದಳು. ಹೌದು ಅವಳು ಕರೆಂಟು ಅಂತಲ್ಲ ಪ್ರತಿ ವಿಷಯದಲ್ಲೂ ಜಗತ್ತಿನ ಸಂತೋಷವನ್ನು ಗೇಜು ಹಚ್ಚಿ ಅಳೆಯುತ್ತಿದ್ದಳು. ಮೈಕ್ರೋಸ್ಕೋಪು ಇಟ್ಟು ಹುಡುಕುತ್ತಿದ್ದಳು. ಎಲ್ಲಾದರೂ ಅವಳಿಗಿಲ್ಲದ ಸುಖ ಬೇರೆಯವರಿಗಿದೆ ಅಂತ ತಿಳಿದದ್ದೇ ಕೆರಳಿಬಿಡುತ್ತಿದ್ದಳು. ಕಾಲು ಕೆರೆದು ರಂಪ ಎಬ್ಬಿಸಿ ಅದನ್ನು ಹಾಳು ಮಾಡಲು ತನ್ನ ಕಾಯಾ ವಾಚಾ ಮನಸಾ ಪ್ರಯತ್ನಿಸುತ್ತಿದ್ದಳು. ಏನು ಮಾಡುವುದು? ಒಳ್ಳೆಯತನ ಅವಳ ಹೆಸರಲ್ಲಿ ಮಾತ್ರ ನಿರುಪದ್ರವದಿಂದ ಕೂತಿತ್ತು. ಹೆಸರಲ್ಲಿ ಇದ್ಯಲ್ಲ ಇನ್ನು ಬದುಕಲ್ಲಿ ಯಾಕೆ ಸುಮ್ಮನೆ ಅಂತಲೋ ಏನೋ ಆಕೆ ಶುದ್ಧ ಕಿರಿಕ್ಕಾಗೇ ಉಳಿದು ಬಿಟ್ಟಿದ್ದಳು.

ಎತ್ತರದ ಮಣ್ಣು ದಿಬ್ಬದ ಮೇಲೆ ಕಟ್ಟಿದ ಮನೆಯಲ್ಲಿ ವಾಸಿಸುತ್ತಿದ್ದಳು. ಮನೆಯ ಸುತ್ತಲೂ ತೆಂಗಿನ ಮರ, ಬೇರು ಹಲಸಿನ ಮರ, ದಾಸಾಳ ಮಲ್ಲಿಗೆಯ ಪೊದೆಗಳನ್ನು ಬೆಳೆಸಿಕೊಂಡಿದ್ದಳು. ಮನೆಗೆ ತಾಗಿಯೇ ಇಳಿ ಮಾಡಿನ ಕೊಟ್ಟಿಗೆ ಕಟ್ಟಿಕೊಂಡು ಹಲವು ವರ್ಷ ಎಮ್ಮೆ ಕೂಡ ಸಾಕಿದ್ದಳು. ಹೆಸರು ಸುಗುಣಾಬಾಯಿ. ಆದರೆ ಅದೇಕೋ ಏನೋ ಅವಳ ಸ್ವಭಾವದಲ್ಲೇ ಒಂದು ಭಯಂಕರವಾದ ತಕರಾರಿತ್ತು. ಇಡೀ ಜಗತ್ತಿನ ಕುರಿತಾದ ತಕರಾರು. ತನಗೆ ಅನ್ಯಾಯವಾಗಿದೆ ಎಂಬ ತಕರಾರು. ಅದಕ್ಕಿಂತಲೂ ಹೆಚ್ಚಾಗಿ ಜಗತ್ತಿನಲ್ಲಿ ತನ್ನನ್ನು ಬಿಟ್ಟು ಉಳಿದೆಲ್ಲರೂ ಸುಖವಾಗಿದ್ದಾರೆಂದು ಬಲವಾಗಿ ನಂಬಿಕೊಂಡಿದ್ದರಿಂದ ಹುಟ್ಟಿದ ಸ್ವಮರುಕ ತುಂಬಿದ ಸಂಕಟದ ತಕರಾರು. ಹಾಗೆ ನೋಡಿದರೆ ಅವಳ ಬದುಕು ತುಂಬಾ ಚೆನ್ನಾಗಿತ್ತು.

ಲೆಕ್ಚರರಾಗಿದ್ದ ಗಂಡ, ಬುದ್ದಿವಂತ ಮಕ್ಕಳು, ಸ್ವಂತ ಮನೆ, ಎಲ್ಲಕ್ಕಿಂತ ಹೆಚ್ಚಾಗಿ ಸಂಭಾವಿತತನವನ್ನು ತುಂಡು ತುಂಡು ಮಾಡಿ ಗುಪ್ಪೆ ಹಾಕಿದಂತೆ ಒಬ್ಬರನ್ನು ಮೀರಿಸಿ ಮತ್ತೊಬ್ಬ ಮನೆಯ ಸದಸ್ಯರು. ಸಭ್ಯತನದ ಸ್ಪರ್ಧೆಗಿಳಿದಂತಿದ್ದ ಅವರೆಲ್ಲರ ಸ್ವಭಾವ. ಅವಳ ಮನೆಗೆ ಅವಳೇ ಅನಭಿಷಕ್ತ ಸಾಮ್ರಾಜ್ಞಿ . ಅವಳು ಹಾಕಿದ ಗೆರೆಯನ್ನು ದಾಟುವ ಧೈರ್ಯವನ್ನು ಅವರ್ಯಾರೂ ಮಾಡುತ್ತಿರಲಿಲ್ಲ. ಮೂರು ಮೈಲಿ ದೂರದ ಸಂತೆ ಪೇಟೆಗೆ ನಡೆದುಕೊಂಡು ಹೋಗಿ ಒಪ್ಪತ್ತುಗಟ್ಟಲೆ ಖರೀದಿ ಮಾಡಿಕೊಂಡು ಹಿಂತಿರುಗಿ ಬರುವ ತನಕ ಮಗಳನ್ನು ಒಳಗೆ ಕೂರಿಸಿ ಎದುರಿಗೆ ಸಾಲಾಗಿ ನಾಕು ಬಿಸ್ಕೀಟು ಇಟ್ಟು ಬೀಗ ಹಾಕಿಕೊಂಡು ಹೋದರೆ ಆ ಮಗು ಮಿಕಿ ಮಿಕಿ ಬಿಸ್ಕೀಟು ನೋಡುತ್ತ ಕೂತಿರುತ್ತಿತ್ತು.

ಯಾರಾದರೂ ಬಂದು ಕಿಡಕಿಯಲ್ಲಿ ಕೂಗಿದರೆ ಸಣ್ಣ ಧ್ವನಿಯಲ್ಲಿ ತಾಯಿ ಸಂತೆಗೆ ಹೋಗಿದ್ದಾಳೆಂದು ಹೇಳುತ್ತಿತ್ತು. ಗಂಡನೋ ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಹರಿಹರಿ ಗೋವಿನಂತಿದ್ದ. ಸಾಲ-ಸೋಲ ಎಂತದ್ದೂ ಇಲ್ಲ. ನಸುಕಿನಲ್ಲೆದ್ದು ಸುತ್ತಲೂ ಕಸ ಗುಡಿಸಿ ಸ್ನಾನ ದೇವರಪೂಜೆ ಮಾಡಿಕೊಂಡು ತಾನಾಯಿತು ತನ್ನ ಅದ್ಯಾಪನ ಕೆಲಸವಾಯಿತು ಅಂತ ತಣ್ಣಗಿದ್ದ. ಯಾರ ಉಸಾಬರಿಗೂ ಹೋಗಿ ಗೊತ್ತಿಲ್ಲದ ಪಾಪದ ಜೀವಿ. ಯಾವುದೇ ಚಟ ಗಿಟ ಇಲ್ಲದೆ ಹಾಕಿದ ಮೇವು ಕಟ್ಟಿದ ಗೂಟ ಅಂತಿದ್ದ ಗಂಡನ ಬಗ್ಗೆಯು ಆಕೆಗೆ ತಕರಾರಿತ್ತು. ಅದು ಅವನು ಅವಳ ತಂಗಿಯರ ಗಂಡಂದಿರಂತೆ ದುಡ್ಡು ಬಾಚುವುದಿಲ್ಲ ಎಂಬ ಜನ್ಮೇಪಿ ಅವಳು ಹೊತ್ತು ಓಡಾಡಿದ ತಕರಾರು.

ಹೌದು ಆ ತಕರಾರರನ್ನು ಅವಳು ಸರಿಯಾಗಿ ಮೊದಲ ತಂಗಿಯ ಮದುವೆಯ ದಿನ ತಲೆಗೇರಿಸಿಕೊಂಡಳು. ಏಕೆಂದರೆ ಅವಳ ತಂಗಿಯ ಗಂಡ ಡಾಕ್ಟರ್ ಆಗಿದ್ದ. ಸಿಕ್ಕಾಪಟ್ಟೆ ಗಳಿಸುತ್ತಿದ್ದ. ಬೇರೆ ರಾಜ್ಯದಲ್ಲಿದ್ದರೂ ಊರಿಗೆ ಬಂದಾಗಲೆಲ್ಲ ತಂಗಿಯ ವೈಭವೋಪೇತ ಜೀವನ, ಡೌಲು ಕಣ್ಣು ಕುಕ್ಕಿ ಕುಕ್ಕಿ ಮುಂದೆ ವರ್ಷಗಟ್ಟಲೆ ಅವಳ ನಿದ್ದೆ ಕೆಡಿಸುತ್ತಿತ್ತು. ಆಮೇಲೆ ಅವಳ ಎರಡನೆಯ ತಂಗಿಯ ಮದುವೆಯಾಯಿತು. ಆಕೆಯ ಗಂಡ ಪಿ.ಡಬ್ಲ್ಯೂಡಿ ಇಂಜಿನಿಯರ ಆಗಿದ್ದ. ಹೆಸರುವಾಸಿ ಮನೆತನದವನಾಗಿದ್ದು ದರ್ಪ, ಡೌಲುಗಳಲ್ಲಿ ಮಹಾರಾಜರನ್ನು ನಾಚಿಸುವಂತಿದ್ದ. ಸಾಲದ್ದಕ್ಕೆ ಇವರು ಮನೆ ಕಟ್ಟಿಕೊಂಡ ಸೈಟಿನ ಹಿಂದಿನ ಸೈಟಲ್ಲೇ ದೊಡ್ಡ ಬಂಗಲೆ ಕಟ್ಟಿಸಿ ಬಿಟ್ಟ.

ದೊಡ್ಡ ಶೋಕಿಲಾಲನಾದ ಅವನ ಕಾರೇನು, ಹೆಂಡತಿಗೆ ತೊಡಿಸುವ ಒಡವೆಗಳೇನು, ಮನೆ ತುಂಬಿದ ಪೀಠೋಪಕರಣಗಳೇನು ಒಂದೇ ಎರಡೇ. ಈಗ ಸುಗುಣಾಬಾಯಿಯ ನಿದ್ದೆ ಖಾಯಮ್ಮಾಗಿ ಹಾರಿಯೇ ಹೋಯಿತು. ತೌರು ಮನೆಯಲ್ಲಿ ತಾಯಿ ತಂದೆಯರು ಮೊದಲೇ ತೀರಿಕೊಂಡಿದ್ದು ಅಣ್ಣ ಅತ್ತಿಗೆಯರು ಇರುತ್ತಿದ್ದರು. ಅಲ್ಲಿಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಸೇರಿದಾಗ ತಂಗಿಯರು ಪರಸ್ಪರ ಪೈಪೋಟಿಯಿಂದ ಅಲಂಕರಿಸಿಕೊಂಡು ರೇಶ್ಮೆ-ಚಿನ್ನಗಳ ಮೆರವಣಿಗೆ ಮಾಡಿ ಸುಗುಣಾಬಾಯಿಯ ಎದೆಯ ಅಗ್ಗಿಷ್ಟಿಕೆಗೆ ತುಪ್ಪ ಸುರಿಯುತ್ತಿದ್ದರು. ಅಣ್ಣ-ಅತ್ತಿಗೆಯರಾದಿ ನೆಂಟರೆಲ್ಲ ಅವರನ್ನೇ ಉಪಚರಿಸುತ್ತಾರೆ ತನ್ನನ್ನು ಕಡೆಗಣಿಸುತ್ತಾರೆ ಅಂತ ಅವಳಿಗೆ ಸಂಶಯ.

ಅದಕ್ಕೆ ಪುಷ್ಟಿಯೆಂಬಂತೆ ಕೆಲ ಘಟನೆಗಳೂ ಆಗಿ ಬಿಡುತ್ತಿದ್ದವು. ಹೊಟ್ಟೆಯ ಸಿಟ್ಟನ್ನು ಹಾಗೆಲ್ಲ ಸುಮ್ಮನೆ ಇಟ್ಟುಕೊಳ್ಳುವ ಸ್ವಭಾವದವಳಲ್ಲ ಸುಗುಣಾಬಾಯಿ. ಚೆನ್ನಾಗಿ ಕೂಗಾಡಿ ರೇಗಾಡಿ ಕೊನೆಯಲ್ಲಿ ಅತ್ತು ರಂಪಾಟ ಎಬ್ಬಿಸಿಬಿಡುತ್ತಿದ್ದಳು. ಯಾರಿಗೂ ಅವಳ ನೋವಿನ ಮೂಲ ತಿಳಿಯುತ್ತಿರಲಿಲ್ಲ. ಒಂದು ರೀತಿಯ ಹೆದರಿಕೆಯಿಂದ ಅವಳನ್ನು ದೂರವಿಡುತ್ತಿದ್ದರು. ಹಾಗೆ ದೂರ ಮಾಡಿದ್ದಕ್ಕೆ ಮತ್ತೆ ಅವಳಿಗೆ ರೇಗಿ ರಂಪ ಎಬ್ಬಿಸುತ್ತಿದ್ದಳು. ಹೀಗೆ ಹುಣ್ಣಿನ ಪಕ್ಕವೇ ಹುಟ್ಟುವ ಹುಣ್ಣಿನ ಹಾಗೆ ಕೆರೆಕರೆದು ಆಳವಾಗುವ ಗಾಯದ ಹಾಗೆ ಅವಳು ಅವರ ಕುಟುಂಬಕ್ಕೆ ಗುಣವಾಗದ ಒಳಗಾಯವಾಗಿಬಿಟ್ಟಳು. ಇವಳು ರಂಪ ಎಬ್ಬಿಸುತ್ತಾಳೆಂದು ಅವರೆಲ್ಲ ಇವಳನ್ನು ಪ್ರತ್ಯೇಕವಾಗಿಸಿ ಮತ್ತಷ್ಟು ರಂಪ ಎಬ್ಬಿಸಿಕೊಂಡಿದ್ದರು. ಇದರಿಂದ ಅವಳ ಸ್ವಭಾವದಲ್ಲೊಂದು ಶಾಶ್ವತ ಜಗಳಗಂಟತನ ಕೂತುಬಿಟ್ಟಿತು.

ಎಲ್ಲರನ್ನೂ ಸಂಶಯದಿಂದ ನೋಡುತ್ತಿದ್ದ ನಿಮಿತ್ತ ಅವಳಲ್ಲಿ ಅಭದ್ರತನವೊಂದು ಮನೆ ಮಾಡಿಕೊಂಡಿತ್ತು. ಕಡೆ ಕಡೆಗೆ ಆ ಸಂಶಯವೆಂಬುದು ಎಷ್ಟು ತಲೆಗೇರಿತ್ತೆಂದರೆ ಹಾಲಿನವನು ಅಕ್ಕ ಪಕ್ಕದ ಮನೆಗೆ ದಪ್ಪ ಹಾಲು ಕೊಡುತ್ತಾನೆ ತನಗಷ್ಟೇ ನೀರು ಹಾಕಿಕೊಂಡು ಬಂದು ತೆಳ್ಳನೆಯ ಹಾಲು ಕೊಡುತ್ತಾನೆಂದು ಜಗಳವಾಡಿ ಆಡಿ ತಾನೇ ಎಮ್ಮೆ ಕಟ್ಟಿಕೊಂಡಳು. ನಳದ ನೀರು ಬಿಡುವವನಿಗೆ ನಮ್ಮ ಮನೆಗೆ ಉಳಿದವರಿಗಿಂತ ಕಡಿಮೆ ನೀರು ಬರುತ್ತದೆ ಎಂದು ರಂಪ ಎಬ್ಬಿಸಿ ಪದೇ ಪದೇ ಪೈಪನ್ನು ಅಗೆಸುತ್ತಿದ್ದಳು. ಅವನಿಗಂತೂ ಬೇಜಾರಾಗಿ ಎಲ್ಲರ ಮನೆಗೂ ಬಂದು ಸಣ್ಣ ಧ್ವನಿಯಲ್ಲಿ ಬೇಡಿಕೊಳ್ಳುತ್ತಿದ್ದ ನಿಮ್ಮ ಮನೆಗೆ ನೀರು ಸರಿಯಾಗಿ ಬರುತ್ತಿಲ್ಲ ಅಂತ ಆಗಾಗ ಸುಗುಣಬಾಯಿ ಎದುರು ಗೊಣಗ್ರೀ ಅಂದ್ರೆ ಅವರು ಸಮಾಧಾನವಾಗಿರ್ತಾರೆ ಇಲ್ಲದಿದ್ದರೆ ನನ್ನ ಜೀಂವ ತಿಂತಾರೆ ಅಂತ.

ಕೆಲಸದ ಹೆಂಗಸಿಗೂ ಅದೇ ಗತಿ. ನಮ್ಮ ಮನೆಯಲ್ಲಿ ಚೊಕ್ಕ ಮಾಡುದಿಲ್ಲ ನೀನು ಪಕ್ಕದ ಮನೆಲೆ ಭಾಳ ಹೊತ್ತು ಇರ್ತಿ ಅಂದ್ರೆ ಅವರ ಕೆಲಸ ಚೊಕ್ಕ ಮಾಡ್ತಿ ಅಂತ ಜಗಳ. ಇದರಿಂದ ರೋಸಿ ಹೋಗಿ ಅಕ್ಕಪಕ್ಕದವರು ಇವಳ ಮನೆಯ ಕೆಲಸದವಳನ್ನು ತಾವು ಇಟ್ಟುಕೊಳ್ಳುತ್ತಲೇ ಇರಲಿಲ್ಲ. ಅಷ್ಟಾದರೂ ಅವಳು ಬಿಡುತ್ತಿರಲಿಲ್ಲ. ಎಲ್ಲರೂ ಸಂಚು ಮಾಡಿ ತನಗೆ ಕೆಲಸದವರು ಸಿಗದಂತೆ ಮಾಡಿದ್ದಾರೆ ಎಂದು ರಂಪ ಎಬ್ಬಿಸುತ್ತಿದ್ದಳು. ಕಿರಾಣಿ ಅಂಗಡಿಯವನ ಹತ್ತಿರವೂ ಹಾಗೇ ತಕರಾರು ಮಾಡುತ್ತಿದ್ದಳು. ನಾನು ಮೊದಲು ಬಂದವಳು. ಅವರಿಗ್ಯಾಕೆ ಮುಂಚೆ ಕೊಟ್ರಿ ಅಂತ. ಅಥವಾ ನಂಗೆ ಚೀಲದ ಅಡಿಗಿನ ಅವಲಕ್ಕಿ ಕೊಟ್ರಿ ಜಾಸ್ತಿ ತೌಡು ಬಂತು ಅಂತ ಕೆಲವು ಸಲ ಒಯ್ದ ಸಾಮಾನು ವಾಪಸು ತಂದು ಕೊಡುತ್ತಿದ್ದಳು.

ಕೆಲವರು ಅವಳ ಬಾಯಿಗೆ ಹೆದರಿ ಸಾಯ್ಲಿ ಎಂದು ಸುಮ್ಮನಾಗುತ್ತಿದ್ದರು. ಆ ಹೆಂಗಸಿಗೆ ಎರಡು ಸುತ್ತು ಬಿದ್ದದೇನರಿ ಅಂತ ಬೇರೆಯವ್ರ ಹತ್ರ ಕೇಳುತ್ತಿದ್ದರು. ಕೆಲವರಿಗೆ ಮಾತ್ರ ರೇಗಿ ಹೋಗುತ್ತಿತ್ತು. ಸೇರಿಗೆ ಸವ್ವಾ ಸೇರು ಅಂತ ಜಗಳವಾಡುತ್ತಿದ್ದರು. ಹಾಗೆ ಜಗಳವಾಡಿದ ಅಂಗಡಿಯವನನ್ನು ಅವಳು ಬಿಡುತ್ತಿರಲಿಲ್ಲ. ಊರು ತುಂಬಾ ತಿರುಗಾಡಿ ಆ ಅಂಗಡಿಯವ ಮೋಸಗಾರ ಹಾಗೆ ಹೀಗೆ ಅಂತ ನೂರಾರು ಕತೆ ಕಟ್ಟಿ ಅಪಪ್ರಚಾರ ಮಾಡುತ್ತಿದ್ದಳು. ಯಾರೂ ಅವನ ಅಂಗಡಿಗೆ ಹೋಗಬೇಡಿ ಅಂತ ಕಿವಿ ಮಾತು ಹೇಳುತ್ತಿದ್ದಳು. ಅವಳ ಬುದ್ಧಿ ಗೊತ್ತಿಲ್ಲದವರು ಹೌದೆಂದು ನಂಬುತ್ತಿದ್ದರು.

ಅವಳ ಮಕ್ಕಳಿಗಂತೂ ತುಂಬಾ ಒಳ್ಳೊಳ್ಳೆ ಕಡೆ ಮದುವೆ ಆಯಿತು. ಮಗ ಚೆನ್ನಾಗಿ ಕಲಿತು ವಿದೇಶಕ್ಕೆ ಹೋದ. ಆದರೆ ಬದುಕಿಡೀ ಅವರಿವರ ಸಂತೋಷಕ್ಕೆ ಕರುಬಿ ತಲೆ ಕೆಡಿಸಿಕೊಂಡು ಒದ್ದಾಡಿದ ಸುಗುಣಾಬಾಯಿಗೆ ಒಳ್ಳೆಯದನ್ನು ಅನುಭವಿಸುವ ಯೋಗವೆಲ್ಲಿಂದ ಬರಬೇಕು. ಒಂದು ದಿನ ಹಾಗೇ ಕುಸಿದು ಸತ್ತೇ ಹೋದಳು. ತಂಗಿಯರಿಗೆ ತನಗಿಂತ ಹೆಚ್ಚಿನ ಸುಖವೇಕೆ ಕೊಟ್ಟಿ ಅಂತ ದೇವರ ಜೊತೆ ಖುದ್ದಾಗಿ ಜಗಳವಾಡಲು ಅವಸರವಾಗಿರುವಂತೆ ಬದುಕಿನ ಸುಖ ಉಣ್ಣುವ ನಸೀಬು ಬೇಡವೇ ಬೇಡವೆಂಬಂತೆ ಹೋಗೇ ಬಿಟ್ಟಳು. ಆಮೇಲೆ ಆ ದೊಡ್ಡ ಮನೆಯಲ್ಲಿ ಅವಳ ಗಂಡ ಒಂಟಿಯಾಗಿ ಬಿಟ್ಟ. ಹೆಂಡತಿಯ ಕಾಟ ತಪ್ಪಿದ್ದೇ ತಡ ನಿರುಂಬಳನಾಗಿ ಹೋದ.

ಕೇವಲ ಅವನ ಹೆಂಡತಿಯ ಒದರಾಟ ಕೇಳಲಿಕ್ಕೇ ಇದ್ದವೋ ಏನೋ ಎಂಬಂತೆ ಅವನ ಕಿವಿ ಬಿದ್ದು ಹೋಯಿತು. ಕೆಪ್ಪನಾದದ್ದೇ ಮತ್ತಷ್ಟು ನಿರುಂಬಳನಾದ. ಬೆಳಗಿನ ಝಾವ ದಾಸಾಳ ಗಿಡದ ನಡುವೆ ಇದೀಗ ಕೊಯ್ದ ಹೂವಿನಷ್ಟೇ ಮುಗ್ದ ಮುಖ ಹೊತ್ತು ಮಂತ್ರ ಪಠಿಸುತ್ತ ಅಡ್ಡಾಡುತ್ತಾನೆ. ಖಾಯಿಲೆ ಇಲ್ಲ ಕಸಾಲೆ ಇಲ್ಲ. ಯಾರ ಗಲಾಟೆಯೂ ಅವನಿಗೆ ಕೇಳುವುದಿಲ್ಲ. ಕಣ್ಣಿಗೆ ಜನ ಬಿದ್ದರೆ ಮಾತ್ರ ನಗುತ್ತಾನೆ. ಅವರು ಕೇಳುವುದನ್ನು ತನ್ನ ಊಹೆಯಿಂದ ಉತ್ತರಿಸುತ್ತಾನೆ. ಅಥವಾ ಅವನಿಗೆ ಹೇಳಬೇಕು ಅನ್ನಿಸಿದ್ದನ್ನು ಕೇಳಿರಬಹುದು ಅಂದುಕೊಂಡು ಹೇಳುತ್ತಾನೆ. ಹೀಗೊಂದು ಹೆಣ್ನು ಜೀವ ಅವರಿವರ ಸುಖಕ್ಕೆ ತಕರಾರು ತೆಗೆಯುತ್ತ ಆ ಮನೆಯಲ್ಲಿತ್ತು ಎಂಬುದಕ್ಕೆ ಪುರಾವೆಯೇ ಉಳಿಯಬಾರದೆಂಬಂತೆ ದೊಡ್ಡ ಬೇರು ಹಲಸಿನ ಮರ ಬಿದ್ದು ಹೋಗಿದೆ.

ಕೊಟ್ಟಿಗೆ ರೂಪಾಂತರಗೊಂಡು ಬಾಡಿಗೆ ಮನೆಯಾಗಿದೆ. ಮನೆಯ ಮೇಲೆ ಬಾಡಿಗೆಗೆ ಸಂಸಾರ ಬಂದಿದೆ. ಈಗೀಗ ಬಂದ ಅವರಿಗೆ ಅವಳ ಬಗ್ಗೆ ಗೊತ್ತೇ ಇಲ್ಲ. ಅವಳ ಗಂಡ ಹುಟ್ಟಾ ಅವನೊಬ್ಬನೇ ಹೀಗೆ ತಣ್ಣಗೆ ಖುಷಿಯಿಂದ ಗಿಲಿಗಿಲಿ ಇದ್ದವರಂತೆ ದೊಡ್ಡ ದೊಡ್ಡ ದಾಸಾಳ ಕೊಯ್ದು ದೊಡ್ಡಕೆ ಮಂತ್ರ ಹೇಳುತ್ತ ಜಗತ್ತಿನ ಧ್ವನಿಗೆ ಕಿವುಡಾಗಿ ಇದ್ದುಬಿಟ್ಟಿದ್ದಾನೆ. ನಮಗೆ ಸುತ್ತ ಮುತ್ತಲಿನ ಮನೆಯ ಹಳಬರಿಗೆ ಮಾತ್ರ ಕರೆಂಟು ಹೋದ ಕೂಡಲೇ ಕಿವಿ ನಿಮಿರುತ್ತದೆ ಕತ್ತಲಲ್ಲಿ ಕಿಡಕಿಯ ಹತ್ತಿರ ಹೋಗಿ ನಿಲ್ಲುತ್ತೇವೆ. ಹಲೋ ಆ ಬದಿಯವ್ರ ಕರೆಂಟು ತೆಗೀರಿ ಅಂತ ಯಾರೋ ದಬಾಯಿಸಿದ ಹಾಗೆ ಕೇಳುತ್ತದೆ.

 
 

‍ಲೇಖಕರು avadhi

16 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading