ಎಲ್ಲರನ್ನೂ ಕುದಿಸುವ ‘ಕುದಿ ಎಸರು’

ಪ್ರೊ ಸಿ. ಎನ್. ರಾಮಚಂದ್ರನ್

ಸುಮಾರು ಒಂದು ವರ್ಷದ ಹಿಂದೆ..

ನಾನು ಮಧ್ಯಾಹ್ನ ನಾಲ್ಕು ಘಂಟೆಯ ಸಮಯದಲ್ಲಿ ನನ್ನ ಫ್ಲೈಟ್ ಗೆ ಕಾಯುತ್ತಾ ಏರ್‍ಪೋರ್ಟ್ ಲೌಂಜ್‍ನಲ್ಲಿ ಕುಳಿತಿದ್ದೆ.

‘ಇದೇನು, ನೀವು ಇಲ್ಲಿ?  ಯಾಕೆ ಇಷ್ಟು ಮಂಕಾಗಿದ್ದೀರಿ?’

ತಲೆಯೆತ್ತಿ ನೋಡಿದರೆ ಎದುರಿಗೆ ವೈದೇಹಿ.

‘ತುಂಬಾ ಕಸಿವಿಸಿಯಾಗ್ತಾ ಇದೆ, ವೈದೇಹಿ.  ಈಗ ತಾನೆ ಉಮಾಶ್ರೀ ಅವರ ಆತ್ಮಕಥನವನ್ನು ಓದಿ ಮುಗಿಸಿದೆ.

ಏನು ಬದುಕು ಇದು, ವೈದೇಹಿ?  ಏನು ಹೆಣ್ಣಿನ ಜನ್ಮ!  ಇದು ಬದಲಾಗುವುದೇ ಇಲ್ಲವಾ?’ ಅಂತ ಏನೇನೋ ಬಡಬಡಿಸಲು ಪ್ರಾರಂಭಿಸಿದೆ.  ಒಂದೆರಡು ನಿಮಿಷ ನನ್ನ ಮಾತು ಕೇಳಿ, ‘ನೀವೂ ಮಂಗಳೂರಿಗೆ ಬರ್ತಾ ಇದೀರಾ? ಏನು ಕಾರ್ಯಕ್ರಮ?’ ಎಂದು ವೈದೇಹಿ ವಿಷಯಾಂತರ ಮಾಡಿದರು.

ಡಾ. ವಿಜಯಮ್ಮ ಅವರ ಆತ್ಮಕಥೆ ‘ಕುದಿ ಎಸರು’ ಓದಿ ಮುಗಿಸಿದ ಮೇಲೆ ದಿಗ್ಭ್ರಮೆಯಿಂದ ಮೂಡುವ ಇದೇ ಬಗೆಯ ಗೋಜುಗೋಜಲು ಅನಿಸಿಕೆಗಳಲ್ಲಿ ಮೇಲೆದ್ದು ಬರುವುದು, ‘ಯಾವ ಏಳೇಳು ಜನ್ಮಗಳ ಪಾಪದ ಫಲ ಈ ನರಕದ ಬದುಕು?’  ಕೂಡಲೇ ಚುಚ್ಚುವ ಮೊನೆ, ‘ಇದು ಅವರ ಪಾಪದ ಫಲವಲ್ಲ; ನಮ್ಮ ಪಾಪದ ಫಲ; ಈ ಪುಣ್ಯಭೂಮಿಯಲ್ಲಿ ಹೆಣ್ಣಿಗೆ ನಾವು, ಪುರುಷರು, ಕೊಟ್ಟಿರುವ ಸ್ಥಾನದ ಫಲ.’  ಮತ್ತೆ  ‘ಇಂತಹ ಬದುಕನ್ನು ಹೆಣ್ಣಿಗೆ ಕೊಟ್ಟಿರುವ ಪುರುಷ-ವ್ಯವಸ್ಥೆಯಲ್ಲಿ ಪುರುಷನಾಗಿರುವುದರಿಂದ ಪರೋಕ್ಷವಾಗಿ ನಾನೂ ಭಾಗಿಯೆ?’ ಎಂಬ ಗಾಢ ವಿಷಾದ. ಕಣ್ಣಿಗೆ ಕವಿಯುವ ಕತ್ತಲು, ಶೂನ್ಯ ಮನಃಸ್ಥಿತಿ.

ತಮ್ಮ ಆತ್ಮಕಥನದ ಒಂದು ಸಂದರ್ಭದಲ್ಲಿ ವಿಜಯಮ್ಮ ಹೀಗೆ ಉದ್ಗರಿಸುತ್ತಾರೆ:

“ಈ ಬಗೆಯ ಬರವಣಿಗೆ ಎಂದರೆ ಮತ್ತೊಮ್ಮೆ ಆ ಬದುಕನ್ನು ಆಹ್ವಾನಿಸಿ, ಮನಸ್ಸಿನಲ್ಲೇ ಆ ದಿನದ ಘಟನೆಯನ್ನು ತದ್ವತ್ ರೀಪ್ಲೇ ಮಾಡಿಕೊಳ್ಳುವುದು.. ಅದರ ತೀವ್ರತೆ, ನೋವು ಅಸಹನೀಯವಾಗಿದೆ. ಅದಕ್ಕೆ  ಈ ಬರಹವೇ ಬೇಡ ಅನ್ನಿಸುತ್ತದೆ’ (ಪು. 306-307).

ನಿಜ; ಅಸಹನೀಯ, ಅವರ್ಣನೀಯ ನೋವಿನ-ದುಃಖದ-ಅಪಮಾನದ ಬದುಕು ವಿಜಯಮ್ಮನವರದು.  ತೌರಿನ ಯಾವ ಆಸರೆಯೂ ಇಲ್ಲದೆ ಬದುಕಿನುದ್ದಕ್ಕೂ ಇನ್ನೊಬ್ಬರ ಮನೆಯಲ್ಲಿ ಚಾಕರಿ ಮಾಡುತ್ತಾ ಬದುಕಿದ ತಾಯಿ –ಎಲ್ಲಾ ವ್ಯಸನಗಳಿಗೂ ತುತ್ತಾಗಿ ನೆಂಟರಿಷ್ಟರ ತಿರಸ್ಕಾರಕ್ಕೆ ಪಾತ್ರವಾಗಿದ್ದ ತಂದೆ- ಗರ್ಭಕ್ಕೇ ಕೈಹಾಕಿ ಭ್ರೂಣವನ್ನು ಕಿತ್ತುಹಾಕುವ, ಹಿಂಸಾರತಿಯಲ್ಲದೆ ಬೇರೇನೂ ಗೊತ್ತಿಲ್ಲದ, ನಡು ಬೀದಿಯಲ್ಲಿಯೇ ತನ್ನ ಹೆಂಡತಿಯನ್ನು ಕಾಲಿನಿಂದ ಒದೆಯುತ್ತಾ ಉರುಳಿಸಿಕೊಂಡು ಹೋಗುವ ಗಂಡ- ದಿನಕ್ಕೆ 20 ತಾಸು ದುಡಿದರೂ ಮತ್ತೂ ಗೊಣಗಾಡುವ ಗಂಡನ ಮನೆಯವರು- ಪಾದರಸ, ಸೀಮೇಎಣ್ಣೆ, -ಹಲ್ಲಿ ಸತ್ತ ನೀರು,  ಏನು ಕುಡಿದರೂ ಬರದ ಸಾವು- ಇಂತಹ ಬದುಕು ನರಕಸದೃಶವಲ್ಲ, ಸಾಕ್ಷಾತ್ ನರಕವೇ.  ಈ ವಿವರಗಳನ್ನೆಲ್ಲಾ ಓದುತ್ತಿರುವಾಗ 20ನೆ ಶತಮಾನದಲ್ಲಿಯೂ, ಬೆಂಗಳೂರಿನಂತಹ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆಯೆ? ಇವೆಲ್ಲಾ ನಿಜವೆ? –ಎಂಬ ಭ್ರಮೆಯುಂಟಾಗುತ್ತದೆ; ಭ್ರಮೆಯಲ್ಲ ಎಂದು ಅರಿವಾದಾಗ ದುಃಖವಾಗುತ್ತದೆ.

ಆತ್ಮಕಥನದ ಒಂದು ಮುಖ್ಯ ಲಕ್ಷಣವೆಂದರೆ ಅದರ ವಿಶ್ವಸನೀಯತೆ.  ಈ ವಿಶ್ವಸನೀಯತೆಯನ್ನು ಕಥನಕ್ಕೆ ಕೊಡುವುದು ನಿರೂಪಣೆಯ ಪ್ರಾಮಾಣಿಕತೆ –ಯಾವ ಸ್ವವೈಭವೀಕರಣದ ಪ್ರಯತ್ನವೂ ಇಲ್ಲದ, ತಮ್ಮ ಅನುಭವಗಳಿಗೆ ಇನ್ನಾರನ್ನೋ ದೂಷಿಸುವ ಅಥವಾ ಅದಕ್ಕೊಂದು ನೈತಿಕ ಸಮರ್ಥನೆಯನ್ನು ಕೊಡುವ ಹಂಗಿಲ್ಲದ, ಕೇವಲ ಘಟಿಸಿದುದನ್ನು ಘಟಿಸಿದಂತೆಯೇ ದಾಖಲಿಸುವ ಪ್ರಾಮಾಣಿಕ ನಿಲುವು.

ಆ ನೆಲೆಯಲ್ಲಿ ನೋಡಿದಾಗ, ಈ ಆತ್ಮಕಥನದಂತಹ ವಸ್ತುನಿಷ್ಠ ಪ್ರಾಮಾಣಿಕ ನಿರೂಪಣೆ ವಿಜಯಮ್ಮನಂತಹವರಿಗೆ ಮಾತ್ರ ಸಾಧ್ಯ ಎಂದು ತೋರುತ್ತದೆ.  ಓದುವಾಗ, ಎಷ್ಟೋ ಬಾರಿ, ತನ್ನ ದೇಹದ ಮೇಲೆ ವಿನಾ ಕಾರಣ ಇಷ್ಟು ದೌಜನ್ಯವು ನಡೆಯುತ್ತಿದ್ದರೂ ಒಮ್ಮೆಯಾದರೂ ಇವರು ಏಕೆ ಪ್ರತಿಭಟಿಸಲಿಲ್ಲ ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಏಳುತ್ತದೆ.  ಆದರೆ ಲೇಖಕಿ ಯಾವ ಅಮೂರ್ತ ವೈಚಾರಿಕತೆಯ ಮೂಲಕವೂ ತಮ್ಮ ಬದುಕಿಗೆ  ಇಲ್ಲದ ಛವಿಯನ್ನೂ ಕೊಡಲು ಯತ್ನಿಸುವುದಿಲ್ಲ; ‘ಇದು – ಹೀಗೆ -ನಡೆಯಿತು’, ಇಷ್ಟೇ.  ಇಂತಹ ನಿರೂಪಣೆಯೇ ಅವರ ಕಥನಕ್ಕೆ ಸಂಪೂರ್ಣ ವಿಶ್ವಸನೀಯತೆಯನ್ನು ಕೊಟ್ಟು ಆ ಮೂಲಕ ಓದುಗರ ಆತ್ಮವನ್ನು ಬಡಿದೆಬ್ಬಿಸುತ್ತದೆ.

ಹಾಗೆಯೇ, ಇವರ ಬದುಕನ್ನು ಪ್ರವೇಶಿಸಿದ ಯಾವ ವ್ಯಕ್ತಿಯ ಪಾತ್ರವನ್ನೂ ಹಿಗ್ಗಿಸುವ ಅಥವಾ ಕುಗ್ಗಿಸುವ ಪ್ರಯತ್ನ ಇಲ್ಲಿಲ್ಲ.  ಈ ಕಥನದಲ್ಲಿ ಲೇಖಕಿಯನ್ನು ಹೊರತುಪಡಿಸಿದರೆ, ಮತ್ತೆ ಮತ್ತೆ ನಮ್ಮನ್ನು ಕಾಡುವ ಪಾತ್ರ ಅವರ ತಂದೆಯದು.

ಬೇರೆಯವರು ತೀರ್ಮಾನಿಸುವಂತೆ ಅವರು ಬೇಜವಾಬ್ದಾರಿಯ ಮನುಷ್ಯ; ನಾನಾ ವ್ಯಸನಗಳಿಗೆ ತುತ್ತಾದ ಮನುಷ್ಯ; ಕೊನೆಗೆ ಆ ಕಾರಣದಿಂದಲೇ ಅನೇಕ ರೋಗಗಳಿಗೆ ತುತ್ತಾಗಿ, ನರಳಿ ಸತ್ತ ಮನುಷ್ಯ.  ಆದರೂ ಮಗಳನ್ನು ತೀವ್ರವಾಗಿ ಪ್ರೀತಿಸಿದ ಮನುಷ್ಯ; ತನಗೆ ಸಾಧ್ಯವಿದ್ದಾಗ ಆದಷ್ಟು ಅವಳ ನೆರವಿಗೆ ಬಂದ ಮನುಷ್ಯ; ಕೊನೆಯಲ್ಲಿ, ಇನ್ನು ತಾಳಲಾರದೆ ಮಗಳು ಗಂಡನಿಂದ ದೂರವಿರುತ್ತೇನೆಂದು ನಿಶ್ಚಯಿಸಿದಾಗ ಆ ನಿಶ್ಚಯವನ್ನು ಅನುಮೋದಿಸಿ, ಅವಳಿಗೆ ನೈತಿಕ ಬಲವನ್ನು ತುಂಬಿದ ಮನುಷ್ಯ.  ಇಂತಹ ಸಂಕೀರ್ಣ ವ್ಯಕ್ತಿತ್ವವನ್ನು ನಾವು ಕಥೆ-ಕಾದಂಬರಿಗಳಲ್ಲಿಯೂ ಕ್ವಚಿತ್ತಾಗಿಯೇ ಕಾಣಬಹುದು.

 

ದಾರುಣ ಬದುಕನ್ನು ಮೂರು ದಶಕಗಳ ಕಾಲ ಅನುಭವಿಸಿಯೂ ಬದುಕಿದ, ಬದುಕಿ ಮತ್ತೆ ಹೊಸ ಬಾಳನ್ನು ಕಟ್ಟಿಕೊಂಡು ಇತರರಿಗೂ ಬಾಳು ಕಟ್ಟಿಕೊಟ್ಟಿರುವ ವಿಜಯಮ್ಮನವರ ಸಹನಶೀಲತೆ ಹಾಗೂ ಛಲ ಅಭಿನಂದನೀಯ ಎಂದರೆ ಏನೂ ಹೇಳಿದಂತಾಗುವುದಿಲ್ಲ.

ಈ ಲೇಖನವನ್ನು ಮುಗಿಸುವ ಮೊದಲು ಆನುಷಂಗಿಕವಾಗಿ ಈ ಕೃತಿಯನ್ನು ಕುರಿತು ಬಂದಿರುವ ಒಂದೆರಡು ಪ್ರತಿಕ್ರಿಯೆಗಳ ಬಗ್ಗೆ.

ಮೊದಲಿಗೆ ಲಕ್ಷ್ಮೀಪತಿ ಕೋಲಾರ ಅವರು ಈ ಕೃತಿಗೆ ಬರೆದಿರುವ ತುಂಬಾ ಗಂಭೀರ, ಅರ್ಥಪೂರ್ಣ ಹಾಗೂ ಭಾವಭರಿತ ಬೆನ್ನುಡಿಯಲ್ಲಿ ಒಂದು ಮಾತು ಹೇಳುತ್ತಾರೆ:

“. . . ಮತ್ತೂ ಆಘಾತದ ಸಂಗತಿಯೆಂದರೆ, ಬಹುಶಃ ಸಂಪ್ರದಾಯಗಳ ಮಿತಿಗೊಳಪಟ್ಟ ಅವರ ಸೀಮಿತ ಪ್ರಪಂಚದಲ್ಲಿ ಈ ಸಮಾಜದ ಬ್ರಾಹ್ಮಣೇತರ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವೇ ಗೈರುಹಾಜರಾಗಿರುವುದು.”

ಈ ಹೇಳಿಕೆಯನ್ನು ಎರಡು ಬಗೆಯಲ್ಲಿ ಅರ್ಥಮಾಡಿಕೊಳ್ಳಬಹುದು: ‘ಬ್ರಾಹ್ಮಣ ಸಮಾಜವು ‘ಮುಚ್ಚಿದ ಸಮಾಜ’(closed society); ಈ ಸಮಾಜದ ಸ್ತ್ರೀಯರ ಲೋಕವು ಹೊರ ಜಗತ್ತಿಗೆ ತೆರೆದುಕೊಳ್ಳುವುದೇ ಇಲ್ಲ’ ಎಂಬ ಅರ್ಥದಲ್ಲಿ ಲಕ್ಷ್ಮೀಪತಿ ಅವರ ಹೇಳಿಕೆ ಸರಿಯಾಗಿದೆ.  ಆದರೆ, ಈ ಹೇಳಿಕೆಯನ್ನು ಈ ಕೃತಿಯ ಒಂದು ಮಿತಿ ಎಂದೂ ಗ್ರಹಿಸಲಿಕ್ಕೆ ಅವಕಾಶವಿದೆ.  ಈ ಗ್ರಹಿಕೆಯ ಕಾರಣಕ್ಕಾಗಿಯೇ ‘ಅವಧಿ’ಯಲ್ಲಿ ಪ್ರಕಟವಾದ ರಾಜಾರಾಂ ತಲ್ಲೂರು ಅವರ ಪ್ರತಿಕ್ರಿಯೆ  ಲಕ್ಷ್ಮೀಪತಿಯವರ ಹೇಳಿಕೆಯನ್ನು ಉದಹರಿಸುತ್ತಾ ಈ ಕೃತಿಯಲ್ಲಿ “..ವೈವಿಧ್ಯಮಯ ಜಗತ್ತೇ ಗೈರುಹಾಜರಾಗಿರುವುದು ಎದ್ದು ಕಾಣುತ್ತದೆ” ಎಂದು ಅದು ಕೃತಿಯ ಒಂದು ದೊಡ್ಡ ಮಿತಿಯೆಂಬಂತೆ ಕಾಣುತ್ತದೆ.  ಇದನ್ನು ಒಪ್ಪುವುದು ಕಷ್ಟ.  ಆತ್ಮಕಥನದ ಸ್ವರೂಪವೇ ವ್ಯಕ್ತಿಯೊಬ್ಬನ/ ವ್ಯಕ್ತಿಯೊಬ್ಬಳ ಬದುಕಿನ ಕಥೆಯೇ ಹೊರತು ಇಡೀ ಸಮಾಜದ ಬದುಕಾಗಲು ಸಾಧ್ಯವಿಲ್ಲ; ತನ್ನ ಅನುಭವಕ್ಕೆ ಬರದ ಸಂಗತಿಗಳ ಬಗ್ಗೆ ಲೇಖಕನು/ ಲೇಖಕಿ ತನ್ನ ಆತ್ಮಕಥನದಲ್ಲಿ ಹೇಗೆ ಬರೆಯಲು ಸಾಧ್ಯ?

ಇನ್ನೂ ತೀವ್ರತರವಾದ ಟೀಕೆಯೆಂದರೆ ಕೃತಿಯಲ್ಲಿ ಬರುವ ಲೇಖಕಿಯ ಖಾಸಾ ಬದುಕಿನ ವಿವರಗಳನ್ನು ಕುರಿತದ್ದು: “ಈ ಹಸಿ ಹಸಿ ವಿವರಗಳನ್ನು ತೆರೆದ ಮನಸ್ಸಿನಿಂದ ವಿವರಿಸದೆ, ಒಂದಷ್ಟು ಪೂರ್ವ ನಿರ್ಧರಿತ ತೀರ್ಮಾನಗಳ ಕಡೆಗೆ ವಾದಗಳ ಸಹಿತ ಕೊಂಡೊಯ್ಯುವುದು, ಅದಕ್ಕಾಗಿ ಓದುಗನಿಗೆ ಅಗತ್ಯವಿರದ ರೋಚಕ ವಿವರಗಳನ್ನು ಕೊಡುವುದು ಈ ಪುಸ್ತಕಕ್ಕೆ ಮಿತಿ.”  ಇದೊಂದು ದುರದೃಷ್ಟಕರ ತೀರ್ಮಾನ.  ಈ ಹೇಳಿಕೆಯ ಹಿನ್ನೆಲೆಯಲ್ಲಿ ನಾನು ಪುಸ್ತಕವನ್ನು ಮತ್ತೊಮ್ಮೆ ಓದಿದರೂ ಎಲ್ಲಿಯೂ ‘ವಾದ’ಗಳಾಗಲಿ ‘ಪೂರ್ವನಿರ್ಧರಿತ ತೀರ್ಮಾನ’ಗಳಾಗಲಿ ನನಗೆ ಸಿಗಲೇ ಇಲ್ಲ.  (ಕೊನೆಯ ಒಂದೆರಡು ಪುಟಗಳಲ್ಲಿ ಮಾತ್ರ ಲೇಖಕಿ ತನಗೇಕೆ ಪ್ರತಿಭಟಿಸಲು ಸಾಧ್ಯವಾಗಲಿಲ್ಲ ಎಂದು ತಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಾರೆ.)  ಇನ್ನು, ಈ ‘ಹಸಿ ಹಸಿ ವಿವರಗಳು’ ಇಲ್ಲದಿದ್ದರೆ ಲೇಖಕಿಯ ಭಯಾನಕ ಬದುಕಿನ ಅನುಭವ ಓದುಗರಿಗೆ ಹೇಗೆ ಸಾಧ್ಯವಾಗುತ್ತಿತ್ತು?  ಆದರೆ, ಈ ವಿವರಗಳು ಖಂಡಿತಾ ‘ರೋಚಕ’ವಲ್ಲ; ಭೀಭತ್ಸಕರವಾಗಿವೆ, ನಮ್ಮ ಸಮಾಜದಲ್ಲಿ ಇಂದಿಗೂ ಹೆಣ್ಣಿನ ಸ್ಥಾನ ಏನು ಎಂಬುದನ್ನು ನಮ್ಮ ಕಣ್ಣಮುಂದೆ ರಾಚುತ್ತವೆ.

 

ಇನ್ನೂ ಮುಂದುವರೆದು ಹೇಳಬಹುದಾದರೆ, ಭಾರತದ ಒಳಗೆ ಮತ್ತು ಹೊರಗೆ ನಮ್ಮ ಸನಾತನ ಸಂಸ್ಕೃತಿಯ ಹೆಗ್ಗಳಿಕೆಯ ಬಗ್ಗೆ ತಾಸುಗಟ್ಟಲೆ ಮಾತನಾಡುವ ಮಹಾ ಜ್ಞಾನಿಗಳು, ಪುಟಗಟ್ಟಲೆ ಬರೆಯುವ ಮಹಾನ್ ಸಾಹಿತಿಗಳು, ಒಮ್ಮೆ ವಿಜಯಮ್ಮ, ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ಪ್ರೇಮಾ ಕಾರಂತ, ಎ. ಎಂ. ಮದರಿ, ಅರವಿಂದ ಮಾಲಗತ್ತಿ, ಮುಂತಾದವರ ಆತ್ಮಕಥನಗಳನ್ನು ಕಡ್ಡಾಯವಾಗಿ ಓದಬೇಕು; ಆಗ, ಪ್ರಾಯಃ, ಅವರುಗಳಿಗೆ ಹೇಗೆ ಈ ‘ಸನಾತನ, ಆರ್ಷೇಯ, ಭವ್ಯ’ ಹಿಂದು ಸಂಸ್ಕೃತಿ ಜಾತಿಯ/ ಧರ್ಮದ/ ಲಿಂಗದ ಆಧಾರದಲ್ಲಿ ಇಡೀ ಸಮಾಜದ 90% ಜನರನ್ನು ಸಮಾಜದ ಅಂಚಿಗೆ ಬಲವಂತವಾಗಿ ದೂಡಿದೆ ಎಂಬುದು ಮನದಟ್ಟಾಗಬಹುದು – ಬಹುದು.

ಕೊನೆಯಲ್ಲಿ, ವಿಜಯಮ್ಮನವರಲ್ಲಿ ಒಂದು ವಿನಯಪೂರ್ವಕ ಕೋರಿಕೆ: ಅತ್ಯಂತ ವಸ್ತುನಿಷ್ಠವಾಗಿ ಈ ಕೃತಿಯಲ್ಲಿ ನೀವು ನಿಮ್ಮ ಬದುಕಿನ  ‘Inferno’ ಹಾಗೂ ‘Purgatorio’ ಮುಖಗಳನ್ನು ಅನಾವರಣ ಮಾಡಿದ್ದೀರಿ; ಅಷ್ಟೇ ವಸ್ತುನಿಷ್ಠವಾಗಿ ನಿಮ್ಮ ಬದುಕಿನ   ‘Paradiso’ ಭಾಗವೂ ಆದಷ್ಟು ಬೇಗ ಅನಾವರಣಗೊಳ್ಳಲಿ.

 

‍ಲೇಖಕರು admin

May 7, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. anupama prasad

    ಸರ್, ಓದುಗರಿಗೆ ಅನಗತ್ಯ ಹಸಿ ವಿವರಗಳೆಂದು ಯಾವುದನ್ನು ಗ್ರಹಿಸಲಾಯಿತೊ ಆ ಭಾಗವನ್ನು ಮತ್ತೊಮ್ಮೆ ಓದಿದಾಗಲೂ ನನ್ನ ಓದಿಗೂ ಅದು ಹಾಗೆ ಕಾಣಿಸಲಿಲ್ಲ. ಈ ಹಿಂದೆ ಈ ಅನಿಸಿಕೆಯನ್ನ ಹಂಚಿಕೊಂಡಿರುವುದರಿಂದ ಪುನರುಕ್ತಿ ಅನಿಸಬಹುದು. ಕೆಲವೊಮ್ಮೆ ಪುನರುಕ್ತಿಯೂ ಬೇಕಲ್ಲವೆ. ಕೃತಿಯ ಒಂದು ಭಾಗವಾಗಿ ಬರುವ ದಾಂಪತ್ಯದ ಖಾಸಗೀತನದ ಸಂಗತಿಗಳನ್ನು ಓದುವಾಗ, ಅಂತಹ ಅತಿರೇಕದ ವಿಕೃತಿಗಳನ್ನ, ಅದರಲ್ಲೂ ರಾತ್ರಿಯ ಏಕಾಂತದಲ್ಲಿ, ಹೊರಗೆ ಮನೆ ಮಂದಿ ಮಲಗಿರುವಾಗ, ಪತ್ನಿಯ ಗರ್ಭಕ್ಕೇ ಕೈ ಹಾಕಿ ಗರ್ಭವನ್ನೇಳಿಸುತ್ತಿದ್ದಂತ ಕ್ರೌರ್ಯವನ್ನ ಅಸಹನೀಯ ಮೌನದಿಂದ ಆಕೆ ಹಾಗೆ ಸಹಿಸಬೇಕಿತ್ತೆ ಅನ್ನುವ ಪ್ರಶ್ನೆ ಓದುಗನಲ್ಲಿ ಏಳುವಂತೆ ಲೇಖಕಿಯಲ್ಲು ಮುಂದಿನ ದಿನಗಳಲ್ಲಿ ಏಳುತ್ತದೆ. ಅದನ್ನ ಅವರು ಹೇಳಿಕೊಳ್ಳುತ್ತಾರೆ ಮಾತ್ರವಲ್ಲ ತಮಗೆ ಅಥವಾ ತನ್ನ ಗಂಡನಿಗೆ ಆ ಸಮಯದಲ್ಲಿ ಮನೋವೈದ್ಯರ ಸಹಾಯ ಬೇಕಾಗಿತ್ತು. ಆ ತಿಳುವಳಿಕೆಯ ಕೊರತೆಯೇ ದಾಂಪತ್ಯದ ಎಲ್ಲ ಅನಾಹುತಕ್ಕು ಕಾರಣವಾಯ್ತೇನೊ ಅನ್ನುವುದನ್ನ ಅವರು ಮುಂದೆ ಯೋಚಿಸುತ್ತಾರೆ. ಪ್ರಸ್ಥಾಪಿಸಿದ್ದಾರೆ. ಆದರೆ, ಬಾಲ್ಯದಲ್ಲಿ ತಾಯಿಯನ್ನ ಕಳೆದುಕೊಳ್ಳುವುದು; ತಂದೆಯ ವಿಲಾಸದ ಬದುಕಿನಿಂದಾಗಿ ಕುಟುಂಬದಲ್ಲಿ ತಂದೆಗಿದ್ದ ಅಗೌರವ ಆಕೆಯ ಅನಾಥ ಪ್ರಜ್ಞೆಯನ್ನು ಗಾಢವಾಗಿಸುತ್ತದೆ. ಈ ಅನಾಥಭಾವವೇ ಅಷ್ಟರ ಮಟ್ಟಿಗೆ ಆಕೆಯ ಬಾಯಿಯನ್ನು ಕಟ್ಟಿಹಾಕಿಬಿಡುತ್ತದೆ ಅನ್ನುವುದು ಓದುವಾಗ ಅರ್ಥವಾಗಿಬಿಡುತ್ತದೆ. ಇಲ್ಲಿ ಮೇಲೆ ಹೇಳಿದ ಖಾಸಗೀ ವಿಚಾರಗಳನ್ನೋದುವಾಗ, “ತಿಳುವಳಿಕೆಯ ಕೊರತೆ, ಅತಿಯಾದ ಗ್ರಹಿಕೆ-ಕಲ್ಪನೆಗಳಿಂದ ಹಿಂಸಾತ್ಮಕವಾಗಿ ದಾರುಣವಾಗಬಹುದಾದ ದಾಂಪತ್ಯದ ಖಾಸಗಿ ಕ್ಷಣಗಳನ್ನ ಕಾಪಾಡಲು ಲೈಂಗಿಕ ವಿಜ್ಞಾನದ ಪಾಠ ನಮ್ಮಂತಹ ಸಮಾಜದಲ್ಲಿ ಯಾವ ರೀತಿಯಾಗಿ ಅಳವಡಿಸಿಕೊಳ್ಳಬೇಕು ಅನ್ನುವುದರ ಕುರಿತು ಯೋಚಿಸುವಂತೆ ಮಾಡುತ್ತದೆ.” ಇವತ್ತಿಗೂ ನಮ್ಮ ಸಮಾಜದಲ್ಲಿ ತಾಯಿ-ಮಗಳು, ಅಕ್ಕ-ತಂಗಿ, ತಂದೆ-ಮಗ, ಅಣ್ಣ-ತಮ್ಮ ಅಥವಾ ಆಪ್ತ ಬಳಗದಲ್ಲು ಲೈಂಗಿಕತೆಯ ಬಗ್ಗೆ ಸಹಜವಾಗಿ ಸಮಾಲೋಚಿಸುವ ವಾತಾವರಣ ಇಲ್ಲ.
    ಕೃತಿಯಲ್ಲಿ ಲೇಖಕಿ ಸ್ವ ಸಮರ್ಥನೆ ಇಲ್ಲದೆ ಬಾಲ್ಯದ ತನ್ನ ಚಾಡಿಕೋರತನವನ್ನ ನಿವೇದಿಸಿಕೊಳ್ಳುತ್ತಾರೆ. ಅಲ್ಲೂ ಯಾಕೆ ಹಾಗೆ ಮಾಡುತ್ತಿದ್ದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಸಾಮಾಜಿಕ ಬದುಕಿಗೆ ತೆರೆದುಕೊಂಡ ಮೇಲೆ ಕೆಲವೊಮ್ಮೆ ಸುದ್ದಿ ಪ್ರಕಟಿಸುವ ಆತುರದಿಂದ ಆದ ಎಡವಟ್ಟುಗಳ ಬಗ್ಗೆ, ಪತ್ರಕರ್ತೆಯಾಗಿ ತಾನು ತೋರುತ್ತಿದ್ದ ಟೊಳ್ಳು ಹಮ್ಮಿನ ಬಗ್ಗೆ ಗೇಲಿಯಾಗಿ ಹೇಳಿಕೊಳ್ಳುತ್ತಾರೆ. ಇಲ್ಲೂ ಆಕೆ ತನ್ನ ಬರವಣಿಗೆಯ ಸಾಮಾರ್ಥ್ಯಕ್ಕೆ ಸಂಬಂಧಪಟ್ಟಂತೆ ನೇರವಾಗಿಯೇ ರಾಮಾಚಾರ್ಯರ ಕುಹಕ ಮಾತಿನ ಅಗ್ನಿ ಪರೀಕ್ಷೆಗೊಳಗಾಗಿ ಸ್ಥಳದಲ್ಲೇ ಲೇಖನ ಬರೆದು ತೋರಿಸುವ ಸಂದರ್ಭ ಬರುತ್ತದೆ. ನಿಜಕ್ಕು ಕುದಿ ಎಸರು ಎಲ್ಲರನ್ನೂ ಕುದಿಸುತ್ತದೆ. ಕೃತಿ ಮಾತ್ರ ಸಮಪಾಕದಲ್ಲಿ ನಿಲ್ಲುತ್ತದೆ. ಮುಂದಿನ ಭಾಗವೂ ಹೀಗೇ ವಸ್ತುನಿಷ್ಟವಾಗಿ ಮೂಡಿಬರಲಿ. ಮಹಿಳಾ ಅಧ್ಯಯನದ ದೃಷ್ಠಿಯಿಂದಲೂ, ಈ ಪುಸ್ತಕ ಹಾಗು ಮೇಲೆ ತಾವು ಪ್ರಸ್ಥಾಪಿಸಿದ ಕೃತಿಗಳನ್ನ ಓದಿದಾಗ ಇಂತಹ ಮಹಿಳಾ ಆತ್ಮಕಥಾನಕಗಳ ಅಧ್ಯಯನದಿಂದ ಶೈಕ್ಷಣಿಕವಾಗಿ ಮಹಿಳಾ ಅಧ್ಯಯನದಲ್ಲಿ ಅಳವಡಿಸಿಕೊಳ್ಳಬೇಕಾದ ಸಂಗತಿಗಳ ಬಗ್ಗೆ ಇನ್ನಷ್ಟು ಒಳ ನೋಟಗಳು ಸಿಗುತ್ತವೆ. ಇನ್ನು ಹಸಿ ವಿವರಗಳು ಅಥವಾ ರೋಚಕ ಎಂಬ ಮಾತು ಬೇರೆ ರೀತಿಯಲ್ಲಿ `ಅನುದಿನದ ಅಂತರಗಂಗೆ’ಯ ಕುರಿತೂ ಕೆಲವೆಡೆ ಕೇಳಿ ಬಂದಿತ್ತು. ಇಂದಿಗೂ ಮಹಿಳೆಗೆ ಮನುಷ್ಯ ಸಹಜವಾದ ಅಂತರಂಗದ ಒಳತೋಟಿಗಳನ್ನೂ, ಹೆಣ್ಣು-ಗಂಡಿನ ಸಂಬಂಧದ ಕುರಿತು ಅಭಿವ್ಯಕ್ತಿಸುವಾಗ ಮನಸ್ಸಿನ ಪ್ರಾಮಾಣಿಕ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಅಥವಾ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸಲು ಸಾಧ್ಯವಾಗುವಂತಹ ಪರಿಸರ ಅದರಲ್ಲೂ ಈ ನೆಲದ ಮಟ್ಟಿಗೆ ಸಂಪೂರ್ಣವಾಗಿ ಒದಗಿಸಿಕೊಳ್ಳಲು ಸಾಧ್ಯವಾಗಿಲ್ಲವೆನ್ನುವುದನ್ನು ಹೇಳುವುದು ಅನಿವಾರ್ಯವೇ ಆಗಿದೆ. ಕಥನವಿರಲಿ, ಆತ್ಮ ಕತನವಿರಲಿ, ಹೆಣ್ಣು ನೇರವಾಗಿಯೋ, ಸ್ವಗತದಲ್ಲಿಯೊ ತನ್ನ ಒಳ ತೋಟಿಗಳ ಬಗ್ಗೆ, ತನ್ನ ಜೀವ ಕಾಮದ ನೋವು-ನಲಿವು, ಕೊರತೆ, ಅಗತ್ಯತೆ, ನಿರೀಕ್ಷೆಗಳ ಬಗ್ಗೆ ಮಾತಾಡ್ತಾಳೋ ಆಗ ಅವಳ ಅಭಿವ್ಯಕ್ತಿಯನ್ನ ಹತ್ತಿಕ್ಕುವ ಎಲ್ಗ ಹುನ್ನಾರಗಳು ನಡೆಯುತ್ತವೆ. ಅದು ಬಹು ಸಂಖ್ಯಾತ ಗುಂಪುಗಳ ವರ್ತನೆಯ ಮೂಲಕ, ಅಸಹನೀಯ ಟೀಕಾಸ್ತ್ರಗಳ ಮೂಲಕ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುವುದು ಹಾಗು ಅದನ್ನು ಕೃತಿಕಾರಳ ಗಮನಕ್ಕೆ ಬರುವಂತೆ ನೋಡಿಕೊಳ್ಳುವುದು,-ಹೀಗೆ ದಾರಿಗಳು ಹಲವಾರು. ಅದಕ್ಕಾಗಿಯೇ ಆಕೆಗೆ ರಾಧೆ, ರುಕ್ಮಿಣಿ, ಮೀರಾ, ಅಹಲ್ಯೆ ಅಥವಾ ಇನ್ನೊಂದು ವ್ಯಕ್ತಿತ್ವದ ಮುಸುಕಿಲ್ಲದ ಹೊಸ ಭಾಷೆ ಕಷ್ಟವಾಗಿದೆ. ಆದರೆ, ಈ ಸವಾಲುಗಳನ್ನ ನಿವಾರಿಸಿಕೊಂಡು ಅಂತಹ ಹೊಸ ಭಾಷೆಯನ್ನ ಪ್ರತಿಭಾ ನಂದಕುಮಾರ್ ಅವರ `ಅನುದಿನದ ಅಂತರಗಂಗೆ ಕಟ್ಟಿಕೊಟ್ಟಿದೆ’.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ
    • Anonymous

      ಪ್ರಿಯ ಅನುಪಮಾ ಪ್ರಸಾದ್ ಅವರಿಗೆ:
      ವಿಜಯಮ್ಮನವರ ಕೃತಿಯನ್ನೂ ಹಾಗೂ ನನ್ನ ಪ್ರತಿಕ್ರಿಯೆಯನ್ನೂ ತುಂಬಾ ಗಂಭೀರವಾಗಿ ಪರಿಗಣಿಸಿ, ದೀರ್ಘವಾಗಿ ನೀವು ಪ್ರತಿಕ್ರಿಯಿಸಿದ್ದೀರಿ. ಸಂತೋಷವಾಯಿತು; ಧನ್ಯವಾದಗಳು. ರಾಮಚಂದ್ರನ್

      ಪ್ರತಿಕ್ರಿಯೆ
      • anupama prasad

        ಪುಸ್ತಕಗಳು ಮಾತಾಡಿಸುವುದೆಂದರೆ ಹೀಗೇ ಇರಬೇಕು. ನಿಮಗೂ ಧನ್ಯವಾದಗಳು ಸರ್. -ಅನುಪಮಾ ಪ್ರಸಾದ್

        ಪ್ರತಿಕ್ರಿಯೆ
  2. Anonymous

    ಪ್ರಿಯ ಅನುಪಮಾ ಪ್ರಸಾದ್ ಅವರಿಗೆ: ನಿಮ್ಮ ಗಂಭೀರ ಹಾಗೂ ವಿಚಾರಪ್ರಚೋದಕ ಪ್ರತಿಕ್ರಿಯೆಗೆ ಧನ್ಯವಾದಗಳು. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: