ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟರಾಜ್ ಹುಳಿಯಾರ್ ವಿಶೇಷ ಲೇಖನ-'ಎಲೆಕ್ಷನ್ ಸಾರ್, ಎಲೆಕ್ಷನ್!' –

ನಮ್ಮ ಕಾರು ತುಮಕೂರು ರಸ್ತೆಯ ಟೋಲ್ಗೇಟ್ ದಾಟುತ್ತಿದ್ದಂತೆ ಪ್ಯಾರಾ ಮಿಲಿಟರಿ ಜವಾನ್ಗಳು ಕಾರಿಗೆ ಕೈ ಅಡ್ಡ ಹಾಕಿದರು. ನಮ್ಮ ಬ್ಯಾಗು, ಡಿಕ್ಕಿ ಎಲ್ಲವನ್ನೂ ಹುಡುಕಿದರು. ಏನೂ ಕಾಣದೆ ‘ಚಲೋ’ ಎಂದರು. ಮತ್ತೊಂದು ಕಾರು ಬಂತು. ಅದನ್ನೂ ತಡಕಿ ಕಳಿಸಿದರು.

‘ ಲಾರಿ, ಬಸ್ಸುಗಳಲ್ಲಿ ಬಾಂಬ್ ಸಾಗಿಸಲ್ವಾ ?’
ಎರಡು ಮೂರು ದಿನಗಳ ಕೆಳಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟವಾಗಿತ್ತು. ಬಾಂಬ್ಗಾಗಿ ಈ ಹುಡುಕಾಟ ನಡೆದಿರಬಹುದು ಎಂದುಕೊಂಡೆವು. ಅದೇ ಗೇಟಿನಲ್ಲಿ ಲಾರಿಗಳು, ಬಸ್ಸುಗಳು ಆರಾಮಾಗಿ ಹೋಗುತ್ತಿದ್ದವು; ಜವಾನ್ಗಳು ಅವರತ್ತ ಚಲೋ ಎಂದು ಕೈ ಬೀಸುತ್ತಿದ್ದರು. ‘ಹಾಗಾದರೆ ಲಾರಿ, ಬಸ್ಸುಗಳಲ್ಲಿ ಬಾಂಬ್ ಸಾಗಿಸಲ್ವಾ ?’ ಎಂದು ಬಾಲಕ ಶೋಯಿಂಕಾ ನಕ್ಕ.
ಮುಂದೆ ಇನ್ನೂ ಒಂದೆರಡು ಕಡೆ ಈ ಚೆಕಿಂಗ್ ನಡೆದ ಮೇಲೆ ಯಾರೋ ಹೇಳಿದರು: ‘ಎಲೆಕ್ಷನ್ನಲ್ಲಿ ಹಂಚೋಕೆ ಕಾರಿನಲ್ಲಿ ಹಣ ಸಾಗಿಸುತ್ತಿರಬಹುದು ಎಂದು ಚೆಕ್ ಮಾಡ್ತಿದಾರೆ.’ ಅದೇ ಆಗ ದಾರಿಯಲ್ಲಿ ಸಿಕ್ಕ ಒಬ್ಬರು ‘ಈ ಸಲ ಒಂದು ವೋಟಿಗೆ ಒಂದು ಸಾವಿರದಿಂದ ಎರಡು ಸಾವಿರ ರೇಟಿದೆ’ ಎಂದಿದ್ದರು. ಸದ್ಯ! ನನ್ನ ಜೇಬಲ್ಲಿ ಮೂರು ವೋಟು ಅಥವಾ ಒಂದೂವರೆ ವೋಟು ಖರೀದಿ ಮಾಡಬಲ್ಲಷ್ಟು ಮಾತ್ರ ಹಣವಿತ್ತು!
‘ಇಲ್ಯಾರು ದುಡ್ಡು ಸಾಗಿಸ್ತಾರೆ ಸಾರ್!’
‘ಈ ಚೆಕಿಂಗ್ಗಳಿಂದ ಏನಾದರೂ ಹೆಚ್ಚಿನ ಬದಲಾವಣೆ ಆಗಿದೆಯಾ?’ ಎಂದು ಪಕ್ಷವೊಂದರ ಕಾರ್ಯಕರ್ತನನ್ನು ಕೇಳಿದೆ. ‘ಅಯ್ಯೋ! ಹೈವೇನಲ್ಲಿ ಯಾರು ತಾನೇ ದುಡ್ಡು ಸಾಗಿಸ್ತಾರೆ ಸಾರ್! ಅದೆಲ್ಲ ಎಲ್ಲೋ ಕಳ್ಳ ದಾರೀಲಿ ತಗೊಂಡು ಹೋಗ್ತಾರೆ! ಈ ಚೆಕಿಂಗ್ ಶುರುವಾಗೋದಕ್ಕೆ ಮೊದಲೇ ಎಷ್ಟೋ ಜನ ಆಗಲೇ ದುಡ್ಡು ಹಂಚಿ ಮುಗಿಸಿದಾರೆ’ ಎಂದ. ಮತ್ತೊಂದು ಜಿಲ್ಲೆಯಲ್ಲಿ ಅಭ್ಯರ್ಥಿಯೊಬ್ಬ ಎರಡು ವರ್ಷ ಮೊದಲೇ ಮುನ್ನೂರು ಕುಟುಂಬಗಳಿಗೆ ರೇಷನ್ ಸಪ್ಲೈ ಮಾಡಿದ್ದನಂತೆ. ಅವನೀಗ ಹಣ ಹಂಚಬೇಕಾಗೇ ಇಲ್ಲ.
ಎಲೆಕ್ಷನ್ ಭಯೋತ್ಪಾದನೆ!
ಈ ತಪಾಸಣೆಯಿಂದ ಚುನಾವಣೆಯಲ್ಲಿ ಭಾಗಿಯಾದ ನಾಯಕರುಗಳಲ್ಲಿ, ಜನರಲ್ಲಿ ಅಷ್ಟಿಷ್ಟು ಭಯ ಹುಟ್ಟಿರಬಹುದು ಅನ್ನಿಸಿದರೂ ಯಾಕೋ ಈ ಜವಾನರು ಮತ್ತವರ ರೈಫಲ್ಲುಗಳು ಚುನಾವಣೆಯನ್ನು ಒಂದು ಟೆರರಿಸ್ಟ್ ಚಟುವಟಿಕೆಯಂತೆ ಮಾಡಿರುವಂತೆ ಕಾಣತೊಡಗಿತು. ಚುನಾವಣೆಯ ಜಿದ್ದಿನ ಹುರುಪು, ಹಬ್ಬದ ವಾತಾವರಣ ಕಾಣೆಯಾಗಿ ಹೆದ್ದಾರಿ ತಪಾಸಣೆಯ ಭಯ ಮತದಾರರಲ್ಲಿ ಉಸಿರು ಕಟ್ಟಿಸುವ ವಾತಾವರಣವನ್ನು ಸೃಷ್ಟಿ ಮಾಡಿದಂತೆ ಕಾಣತೊಡಗಿತು.
‘ಹಾಕಿದ ಹಣ ಎಲ್ಲಿ ಹೋಯಿತಣ್ಣಾ!’
ಅಲ್ಲಿಂದ ಮತ್ತೊಂದು ಊರಿಗೆ ಬಂದರೆ, ಅಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬನ ವಿಚಿತ್ರ ಪರದಾಟದ ಕತೆಯೊಂದನ್ನು ಮಿತ್ತರೊಬ್ಬರು ಹೇಳತೊಡಗಿದರು. ಈ ಟಿಕೆಟ್ ಆಕಾಂಕ್ಷಿ ಚುನಾವಣಾ ಟಿಕೆಟ್ಟಿಗಾಗಿ ಸಣ್ಣ ಪಕ್ಷವೊಂದರ ಹಿಂದೆ ಬಿದ್ದ. ‘ಮೊದಲು ನಿನ್ನ ಬಳಿ ಇಪ್ಪತ್ತೈದು ಲಕ್ಷ ಇದ್ದರೆ ನಮ್ಮ ಬಳಿ ಬಾ. ಆಮೇಲೆ ಚುನಾವಣೆ ಖರ್ಚಿಗೆ ಮೂರು ಕೋಟಿ ಕೊಡೋಣ’ ಎಂದು ಆ ಪಾರ್ಟಿಯ ನಾಯಕರು ಮಾತು ಕೊಟ್ಟರು. ಸರಿ, ಈತ ತೋಟ, ಹೊಲ ಅಡವಿಟ್ಟು ನಾಯಕರಿಗೆ ಹಣ ಕೊಟ್ಟ. ಪಕ್ಷದ ಟಿಕೆಟ್ ಸಿಕ್ಕಲಿಲ್ಲ. ಆದರೆ ಈ ಆಸಾಮಿಯೇನೂ ಚುನಾವಣೆ ಗೆಲ್ಲಲು ಹೊರಟವನಲ್ಲ. ಬದಲಿಗೆ, ಪಕ್ಷ ಕೊಡಬಹುದಾದ ಮೂರು ಕೋಟಿಯಲ್ಲಿ ಎರಡು ಕೋಟಿ ಉಳಿಸಿ, ಆಮೇಲೆ ಉಳಿದ ಹಣ ಖರ್ಚು ಮಾಡಿ ಎದುರಾಳಿಗೆ ಒಂಚೂರು ಫೈಟ್ ಕೊಡಬೇಕೆಂದುಕೊಂಡಿದ್ದ. ಆದರೆ ಈಗ ಪಾರ್ಟಿಗೆ ಕೊಟ್ಟ ಹಣ ವಸೂಲಿಗಾಗಿ ಅವನ ಎಡೆಬಿಡದ ಫೈಟ್ ನಡೆಯುತ್ತಿದೆ!
‘ಚುನಾವಣೆಗೆ ಮೊದಲೇ ರಿಸಲ್ಟ್!’

ಇವನದು ಈ ಕತೆಯಾದರೆ, ಇನ್ನೊಂದು ರಾಷ್ತ್ರೀಯ ಪಕ್ಷದ ಅಭ್ಯರ್ಥಿ ಎಲ್ಲೂ ಯಾರ ಕೈಗೂ ಸಿಗದೆ ಅದೃಶ್ಯನಾಗಿದ್ದ. ಆ ಪಕ್ಷದ ಕಾರ್ಯಕರ್ತರು ಅಲ್ಲೇ ಅಡ್ಡಾಡುತ್ತಿದ್ದ ನಮ್ಮ ಹತ್ತಿರ ಬಂದು ‘ಸಾರ್! ಸ್ವಲ್ಪ ಟ್ರೈ ಮಾಡಿದರೆ ನಮ್ಮ ಪಾರ್ಟೀನೇ ಗೆಲ್ಲುತ್ತೆ. ಆದರೆ ನಮ್ಮ ಕ್ಯಾಂಡಿಡೇಟು ಯಾಕೋ ಸರಿಯಾಗಿ ಸ್ಪಂದಿಸ್ತಾ ಇಲ್ಲ ಸಾರ್!’ ಎಂದರು. ಅವರು ಮತ್ತೆ ಮತ್ತೆ ‘ಸ್ಪಂದನ’ ಎಂದಾಗ ‘ಅವನು ಹಣ ಬಿಚ್ಚುತ್ತಿಲ್ಲ’ ಎಂಬುದು ಸ್ಪಂದನದ ಹೊಸ ಅರ್ಥ ಎಂದು ತಿಳಿಯಿತು. ಆ ಅಭ್ಯರ್ಥಿಗೆ ಏನಾಯಿತು ಎಂದು ನಾವು ವಿಚಾರಿಸಿದರೆ, ಆ ಅಭ್ಯರ್ಥಿ ಚುನಾವಣೆಗೆ ಮೊದಲೇ ರಿಸಲ್ಟ್ ಡಿಕ್ಲೇರ್ ಮಾಡಿಕೊಂಡು, ಪಕ್ಷ ಕೊಟ್ಟ ಹಣವನ್ನು ತಾನೇ ಉಳಿಸಿಕೊಳ್ಳಲು ಹುಷಾರಾಗಿ ಅಡ್ಡಾಡುತ್ತಿದ್ದುದು ತಿಳಿಯಿತು.
‘ ಏ! ಒಂದು ಫೋನ್ ಬಿಲ್ ಮೇಡಂ!’
ಮೊದಲೆಲ್ಲ ಎಲೆಕ್ಷನ್ನಲ್ಲಿ ಅನಕ್ಷರಸ್ಥರು, ಸ್ಲಮ್ಮಿನವರು, ಹಳ್ಳಿಗರು ಹಣ ಪಡೆದು ವೋಟು ಹಾಕುತ್ತಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆದರೆ ಹೋದ ಸಲದ ಬಳ್ಳಾರಿ ರಾಜಕೀಯದ ನಂತರ ಹಣ ಮಧ್ಯಮವರ್ಗ ಹಾಗೂ ಸರ್ಕಾರಿ ಸಂಬಳದಾರರ ಮನೆಯನ್ನೂ ತಲುಪತೊಡಗಿದಂತೆ ಕಾಣುತ್ತದೆ. ‘ಇದೇನೂ ಅಂಥ ದೊಡ್ಡ ಅಮೌಂಟ್ ಅಲ್ಲ ಮೇಡಂ. ನಿಮ್ಮ ಒಂದು ತಿಂಗಳ ಎಲೆಕ್ಟ್ರಿಸಿಟಿ ಬಿಲ್ಲು, ಒಂದು ಫೋನ್ ಬಿಲ್ಲು ಅಷ್ಟೇ!’ ಎಂದು ಮನೆಯೊಡತಿಗೆ ವಿನಯದಿಂದ ಎರಡು ಸಾವಿರ ಅರ್ಪಿಸುವ ಏಜೆಂಟರೂ ಇದ್ದಾರೆ; ಅಥವಾ ಮನೆಯಲ್ಲಿ ವಯಸ್ಸಾದ ಹಿರಿಯ ಮಹಿಳೆಯರಿದ್ದರೆ, ಅವರ ಕಾಲ ಬಳಿ ಹಣ ಇಟ್ಟು ‘ಆಶೀರ್ವಾದ ಮಾಡಿ ತಾಯೀ’ ಎಂದು ಅಡ್ಡ ಬೀಳುವ ಅಭ್ಯರ್ಥಿಗಳೂ ಇದ್ದಾರೆ! ಇಂಡಿಯಾದಲ್ಲಿ ಆಶೀರ್ವಾದ ಎಂದ ತಕ್ಷಣ ಎಲ್ಲವೂ ಮಾಫಿ!
‘ನಿಯತ್ತಿಲ್ಲ ಬಿಡಿ ಸಾರ್!’
ಇಷ್ಟೆಲ್ಲ ಮಾರ್ಗಗಳಲ್ಲಿ ಹಣ ಹಂಚಿದ ಮೇಲೂ ‘ನೀವು ಏನೇ ಹೇಳಿ ಸಾರ್! ಈ ಕಾಲದಲ್ಲಿ ನಿಯತ್ತಿಲ್ಲ ಬಿಡಿ ಸಾರ್!’ ಎಂದು ಹಲವು ಮೂಲಗಳಿಂದ ಹಣ ಕಬಳಿಸಿರುವ ರಿಯಲ್ ಎಸ್ಟೇಟ್ ಡಾನ್ ಕೊರಗುತ್ತಾನೆ: ‘ಈಗ ಜನ ಎಲ್ಲ ಪಾರ್ಟಿಯಿಂದಲೂ ದುಡ್ಡು ತಗೊಂತಾರೆ. ಆದರೆ ಯಾರಿಗೆ ವೋಟು ಹಾಕ್ತಾರೆ ಅಂತ ಗೊತ್ತಾಗಲ್ಲ. ಅದಕ್ಕೇ ನಮ್ಮಂಥೋರು ಇಷ್ಟು ದುಡ್ಡು ಖರ್ಚು ಮಾಡಿದರೂ ಸೋಲ್ತೀವಿ. ಈಗಿನ ಜನಕ್ಕೆ ನಿಯತ್ತಿಲ್ಲ ಸಾರ್, ನಿಯತ್ತಿಲ್ಲ.’ ಪಾಪ! ಕಂಡಕಂಡವರಿಗೆ ಟೋಪಿ ಹಾಕುತ್ತಲೇ ಬದುಕಿರುವ ಈತನ ನಿಯತ್ತಿನ ಹರಿಕತೆ ಕರುಣಾಜನಕವಾಗಿತ್ತು.
ಸೀಕ್ರೆಟ್ ಪ್ಯಾಂಟ್! ತಾಳಿಯ ಭಾಗ್ಯ!

ಈ ಅಡ್ಡಾಟದಲ್ಲಿ ಪತ್ರಕರ್ತ ಮಿತ್ರರೊಬ್ಬರು ಮಹಿಳೆಯರು ಹಣ ಹಂಚುವ ಬಗ್ಗೆ ಹೇಳಿದ ಕತೆಗಳಲ್ಲಿ ಒಂದು ಅತ್ಯಂತ ಕುತೂಹಲಕರವಾಗಿದೆ. ಅಭ್ಯರ್ಥಿಯೊಬ್ಬನ ಹೆಂಡತಿ ಕೊಂಚ ಮಾಡರ್ನ್ ಮಹಿಳೆ. ಒಮ್ಮೆ ಹಣ ಹಂಚಲು ಸಜ್ಜಾದ ಈಕೆ ಮೊದಲು ಪ್ಯಾಂಟ್ ಹಾಕಿಕೊಂಡಳು. ಹಣವನ್ನೆಲ್ಲ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಳು. ನಂತರ ಸೀರೆ ಉಟ್ಟುಕೊಂಡಳು. ಹಣ ಸುರಕ್ಷಿತವಾಗಿ ಮತದಾರರ ಕೈ ಸೇರಿತು. ಕಳೆದ ಸಲ ಬೆಂಗಳೂರಿನಲ್ಲಿ ಅಭ್ಯರ್ಥಿಯೊಬ್ಬನ ಹೆಂಡತಿ ಇನ್ನಷ್ಟು ಮುಂದೆ ಹೋದಳು. ಈಕೆ ಮನೆಮನೆಗೆ ಹೋಗಿ ವೀಳೆಯದೆಲೆ, ಕುಂಕುಮ ಹಾಗೂ ದಕ್ಷಿಣೆ ಕೊಡುವಳು; ‘ನಿಮ್ಮ ತಾಳಿಗೆ ಈ ಕುಂಕುಮ ಇಟ್ಟುಕೊಂಡು, ನಮ್ಮೆಜಮಾನ್ರಿಗೆ ಓಟು ಕೊಡ್ತೀವಿ ಅಂತ ಆಣೆ ಮಾಡಿ ಹೇಳ್ರಮ್ಮಾ’ ಎನ್ನುವಳು. ಕೊನೆಗೆ, ಈಕೆಯ ಪತಿಯ ಇನ್ನಿತರ ಕರಾಮತ್ತುಗಳ ಜೊತೆ ಈಕೆಯ ತಾಳಿಯ ಭಾಗ್ಯವೂ ಸೇರಿ ಚುನಾವಣೆಯನ್ನೇನೋ ಗೆದ್ದ; ಆದರೆ ಆತ ಜೈಲಿಗೆ ಹೋಗುವುದನ್ನು ಮಾತ್ರ ಈಕೆಯ ತಾಳಿಯ ಶಕ್ತಿ ತಪ್ಪಿಸಲಾಗಲಿಲ್ಲ. ಆ ಮಾತು ಬೇರೆ.
ವೈನ್ ಟ್ಯಾಂಕರ್, ಲಿಕ್ಕರ್ ಕೂಪನ್!
ಈ ಅಡ್ಡಾಟದಲ್ಲಿ ನಮಗೆ ನಿಜವಾಗಲೂ ಶಾಕ್ ಆದದ್ದು ಚುನಾವಣೆಗಳ ಸಂದರ್ಭದಲ್ಲಿ ಹರಿಯುವ ಅಗ್ಗದ ಹೆಂಡದ ಕತೆ ಕೇಳಿ. ಚುನಾವಣೆಯ ಹೆಂಡ ಕುಡಿದ ಅನೇಕರು ಇನ್ನು ಮೇಲೇಳದಂತೆ ಮಲಗಿದ ಪ್ರಸಂಗಗಳಿವೆ; ಎಷ್ಟೋ ದಿನಗಳ ಕಾಲ ಕಾಯಿಲೆ ಬಿದ್ದು ನರಳಿದ ಉದಾಹರಣೆಗಳಿವೆ. ಈ ಸಲ ತುಮಕೂರಿನಲ್ಲಿ ದುಷ್ಟನೊಬ್ಬ ನೀರಿನ ಟ್ಯಾಂಕರಿನಲ್ಲೇ ಮದ್ಯ ತುಂಬಿ ಬೀದಿಬೀದಿಗಳ ಮೇಲೆ ಕಳಿಸಲು ಯತ್ನಿಸಿದ. ಮತ್ತೊಂದೆಡೆ, ಮಿತ್ರರು ವರ್ಣಿಸಿದಂತೆ, ಯಾರೋ ಸಪ್ಲೈ ಮಾಡಿದ ಮದ್ಯದ ಕೂಪನ್ ಹಿಡಿದು ವೈನ್ ಶಾಪಿನ ಎದುರು ಮತದಾರರು ನಿಂತಿದ್ದರು.
ನೋಟಿನ ಹೊಲ!
ಮುಂದಿನ ಊರೊಂದರಲ್ಲಿ, ಕಳೆದ ಸಲ ಅಭ್ಯರ್ಥಿಯೊಬ್ಬ ಚುನಾವಣಾ ವೀಕ್ಷಕರ ಜೀಪು ಬಂತೆಂದು ಹೆದರಿ, ಐನೂರು ನೋಟುಗಳ ಬಂಡಲ್ಗಳನ್ನು ಕಿತ್ತೆಸೆದು ತೂರಿ ಹೋದ ಕತೆಯನ್ನು ಜನ ಮೊನ್ನೆ ಮೊನ್ನೆ ನಡೆದಂತೆ ಜಗಿಯುತ್ತಿದ್ದರು. ಅದಕ್ಕೇ ಈಗಲೂ ಬೆಳಗಾಗೆದ್ದು ಹಾದಿಬದಿ ನೋಟು ಬಿದ್ದಿರಬಹುದೆಂದು ಹುಡುಕುವವರೂ ಅಲ್ಲಿದ್ದರು. ಕಳೆದೆರಡು ವರ್ಷಗಳ ಕೆಳಗೆ ಬಳ್ಳಾರಿ ಜಿಲ್ಲೆಯಲ್ಲಿ ಅಭ್ಯರ್ಥಿಯ ಕಡೆಯವನೊಬ್ಬ ಗದ್ದೆಯಲ್ಲಿ ಹಣದ ಕಂತೆಗಳನ್ನು ಎಸೆದಿದ್ದ ಕತೆ ಹಬ್ಬಿತ್ತು; ಆ ಕಂತೆಗಳು ಕೆಲವರಿಗೆ ಸಿಕ್ಕ ಕತೆಗೆ ರೆಕ್ಕೆ ಪುಕ್ಕ ಬೆಳೆದು, ಅದಾದ ಹಲವು ದಿನ ಅನೇಕರು ಹತ್ತಾರು ದಿನ ಆ ಸುತ್ತಮುತ್ತ ಅಲೆದದ್ದು ನೆನಪಾಗುತ್ತದೆ.
ನಗುವ ನಗರಿಗರ ಮತದಾನದ ಶೈಲಿ
ಹಾಗಾದರೆ, ಇವನ್ನೆಲ್ಲ ಸಿನಿಕತನದಿಂದ ನೋಡಿ ನಗುವ ನಗರಗಳ ‘ವಿದ್ಯಾವಂತ’ ಮತದಾರರು ಇವರಿಗಿಂತ ತೀರಾ ಭಿನ್ನವಾಗಿ ಮತ ಹಾಕುತ್ತಾರೆಯೆ? ಇವರಲ್ಲೂ ಜಾತಿ, ಧರ್ಮ, ಮತೀಯತೆ, ವರ್ಗ ಇತ್ಯಾದಿಗಳನ್ನು ನೋಡಿ ಮತ ಹಾಕುವವರು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಹಣ, ಹೆಂಡಗಳಿಗೆ ವೋಟು ಮಾರಿಕೊಳ್ಳುವ ಜನರ ಬಗ್ಗೆ ಸದಾ ಮೂಗು ಮುರಿದು ಮಾತಾಡುತ್ತಲೇ ಕುರುಡಾಗಿ ಜಾತಿ, ಧರ್ಮಗಳಿಗೆ ಜೋತು ಬೀಳುವವರಿದ್ದಾರೆ. ಇವರು ಇನ್ನೂ ಹೆಚ್ಚು ಅಪಾಯಕಾರಿ. ತಂತಮ್ಮ ಜಾತಿಯ ಭ್ರಷ್ಟರನ್ನು ವಹಿಸಿಕೊಂಡು ಮಾತಾಡುವ ಭಂಡತನ ನಗರಗಳ ವಾಚಾಳಿಗಳಲ್ಲೇ ಹೆಚ್ಚು ಇದೆ. ಆದ್ದರಿಂದ ಇಂಥವರು ಕೂಡ ಈ ಚುನಾವಣೆಯ ಭ್ರಷ್ಟತೆಯಲ್ಲಿ ಮತ್ತೊಂದು ರೀತಿಯ ಪಾಲುದಾರರೇ ಎಂಬುದನ್ನು ನಾವು ಮರೆಯಬಾರದು.
ಕಾಣುತ್ತಿವೆ ಹೊಸ ಮಾದರಿಗಳು…

ಇಷ್ಟೆಲ್ಲದರ ನಡುವೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರಗಳಲ್ಲಿ ಎಲ್ಲೆಡೆ ಹಸಿರು ಟವಲ್ ಹೊದ್ದ ರೈತ ಕಾರ್ಯಕರ್ತರು ‘ನಾವು ಹಣ ತೆಗೆದುಕೊಳ್ಳುವವರೂ ಅಲ್ಲ; ಹಂಚುವವರೂ ಅಲ್ಲ’ ಎಂದು ನಂಬಿಕೆ, ಆತ್ಮವಿಶ್ವಾಸಗಳಿಂದ ಹೇಳುತ್ತಿದ್ದರು. ಈ ಕಾಲದಲ್ಲಿ ಎಲ್ಲ ಕಡೆ ಹಬ್ಬಿರುವ ಸಿನಿಕ ಹಾಗೂ ಹತಾಶ ವಾತಾವರಣದ ನಡುವೆ ಕೂಡ, ಈ ತರುಣರು ಅನೇಕ ಕಡೆ ತಂತಮ್ಮ ಬೈಕುಗಳಲ್ಲಿ ಊರೂರು ಸುತ್ತುತ್ತಾ, ಸರ್ವೋದಯ ಕರ್ನಾಟಕ ಪಕ್ಷದ ಪುಟ್ಟಣ್ಣಯ್ಯ ಹಾಗೂ ನಂಜುಂಡೇಗೌಡರ ಪರವಾಗಿ ಮತ ಕೇಳುವುದನ್ನು ಕಂಡಾಗ ಒಂಥರಾ ಸಮಾಧಾನವಾಗತೊಡಗಿತು.
ಅದೇ ಆಗ, ಬೆವರೊರೆಸಿಕೊಳ್ಳುತ್ತಾ, ಸರ್ವೋದಯ ಪಕ್ಷದ ನಾಯಕರಾದ ದೇವನೂರ ಮಹಾದೇವ ಅವರು ಪಕ್ಷದ ಅಧ್ಯಕ್ಷರ ಗತ್ತಿನ ಲವಲೇಶವೂ ಇಲ್ಲದೆ ಎದುರಾದರು. ಅವರು ಈವರೆಗೆ ಪ್ರತಿಪಾದಿಸಿದ ಪರ್ಯಾಯ ರಾಜಕಾರಣ ಶ್ರೀರಂಗಪಟ್ಟಣ ಹಾಗೂ ಪಾಂಡವಪುರದ ಸುತ್ತಮುತ್ತ ಉತ್ಸಾಹದಿಂದ ಹಬ್ಬುತ್ತಾ, ಕರ್ನಾಟಕದಲ್ಲಿ ತಳವೂರುವಂತೆ ಕಂಡಿತು. ಮತಗಳು ವಿಭಜನೆಯಾಗಿ, ತಮ್ಮ ಕ್ಯಾಂಡಿಡೇಟುಗಳು ಮುನ್ನಡೆಯುವ ಸಾಧ್ಯತೆಯ ಬಗೆಗಿನ ಲೆಕ್ಕಾಚಾರದಲ್ಲಿ ದೇವನೂರು ತೊಡಗಿದ್ದರು. ದೇವನೂರು ತೋರುತ್ತಿದ್ದ ಕಾಳಜಿ, ಉತ್ಸಾಹ ಕಂಡು ಈ ನಾಡಿನಲ್ಲಿ ಎಲ್ಲವೂ ಕೆಟ್ಟಿಲ್ಲ, ಈ ಚುನಾವಣಾ ರಾಜಕಾರಣವನ್ನು ಕ್ರಮೇಣ ಜನರೇ ರಿಪೇರಿ ಮಾಡಬಹುದು ಎಂಬ ಆಶಾವಾದ ಮೂಡತೊಡಗಿತು. ಕರ್ನಾಟಕದ ಶ್ರೇಷ್ಠ ಚಿಂತಕ-ನಾಯಕರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರನ್ನು ಕುರಿತು ನಾನು ಸಂಪಾದಿಸಿದ ‘ಹಸಿರು ಸೇನಾನಿ’ ಪುಸ್ತಕವನ್ನು ನೋಡಿದ ತಕ್ಷಣ ಪುಳಕಗೊಂಡು ‘ಸಾರ್, ಈ ಪುಸ್ತಕಾನ ರಾತ್ರಿ ಓದಿ ನಾಳೆ ಕೊಡ್ಲಾ ಸಾರ್?’ ಎಂದು ಆಸೆಗಣ್ಣಿನಿಂದ ಕೇಳಿದ ಪಾಂಡವಪುರದ ತರುಣ ರೈತನಾಯಕರೊಬ್ಬರನ್ನು ಕಂಡಾಗ ಈ ನಾಡಿನಲ್ಲಿ ಚಳುವಳಿಯ ಸ್ಪಿರಿಟ್ ಜೀವಂತವಾಗಿರುವುದನ್ನು ಕಂಡು ನನ್ನೊಳಗೆ ಹೊಸ ಹುರುಪು ಉಕ್ಕತೊಡಗಿತು.
ಈ ಮಾತು ಬರೆಯುತ್ತಿರುವಾಗ, ಬಾಗೇಪಲ್ಲಿಯ ಮೇಷ್ಟರೊಬ್ಬರು ಅಲ್ಲಿ ಕಮ್ಯುನಿಸ್ಟ್ ಪಕ್ಷದ ಶ್ರೀರಾಮರೆಡ್ಡಿಯವರು ಕೂಡ ಶುದ್ಧವಾಗಿ ಎಲೆಕ್ಷನ್ ನಡೆಸಿದ್ದಾರೆಂದು, ದುಡ್ಡು, ಸಾರಾಯಿ ಹಂಚಿಲ್ಲವೆಂದು ಖಚಿತ ನಂಬಿಕೆಯಿಂದ ಹೇಳತೊಡಗಿದರು. ಈ ಕ್ಷೇತ್ರದಲ್ಲಿ ಕೂಡ ಪಕ್ಷದ ಕಾರ್ಯಕರ್ತರು, ನಾಯಕರು ತಂತಾವೇ ಮುಂದೆ ಬಂದು ಸಭೆಗಳನ್ನು ಏರ್ಪಡಿಸುವ ಉತ್ಸಾಹ ತೋರಿದ್ದರು.
ಚುನಾವಣೆಗಳನ್ನು ನಿಜಕ್ಕೂ ಸುಧಾರಿಸಬಯಸುವ ಚಿಂತಕ, ಚಿಂತಕಿಯರು ಜನಪರ ಚಳುವಳಿಗಳ ಹಿನ್ನೆಲೆಯಿಂದ ಬಂದು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಬೆಂಬಲಿಸುವ ಬಗೆಗೆ, ಅವರ ಪರವಾಗಿ ಕೆಲಸ ಮಾಡುವ ಬಗೆಗೆ ಇನ್ನು ಮುಂದಾದರೂ ಗಂಭೀರವಾಗಿ ಗಮನ ಕೊಡಬೇಕೆನ್ನಿಸಿತು.
ಪರ್ಯಾಯ ರಾಜಕಾರಣ ಸದಾ ಚಾಲ್ತಿಯಲ್ಲಿರಬೇಕು…
ಹಾಲಿ ರಾಜಕಾರಣ ಹಾಗೂ ಪರಿಚಿತವಾದ ಚುನಾವಣೆಯ ಶೈಲಿಗಳಿಗಿಂತ ಭಿನ್ನವಾದ ರಾಜಕಾರಣ ಮಾಡ ಬಯಸುವವರು ಈ ಸಲ ಯಾವ ಯಾವ ಪಕ್ಷಗಳು ಕಡಿಮೆ ಖರ್ಚಿನಲ್ಲಿ ಚುನಾವಣೆ ನಡೆಸಿವೆ ಹಾಗೂ ಹಣ ಹಂಚದೆ ಚುನಾವಣೆ ಎದುರಿಸಿ ಎಷ್ಟು ಸಂಖ್ಯೆಯ ವೋಟು ಗಳಿಸಿವೆ ಎಂಬುದರ ಬಗ್ಗೆ ಸರಿಯಾಗಿ ಅಧ್ಯಯನ ಮಾಡಬೇಕಾದ ಜರೂರು ಇವತ್ತು ಇದೆ. ನಗರಗಳಲ್ಲಿ ಕೇವಲ ಸಾಂಕೇತಿಕ ಸ್ಪರ್ಧೆಯಲ್ಲಿರುವ ಸಜ್ಜನ ಅಭ್ಯರ್ಥಿಗಳ ಸೋಲಿನಿಂದ ನಾವು ಸಿನಿಕರಾಗಬಾರದು. ಬದಲಿಗೆ, ಜನರೇ ಚುನಾವಣೆಯ ನಾಯಕತ್ವ ವಹಿಸಿರುವ ಹಾಗೂ ಗೆಲ್ಲುವ ಛಲದಿಂದಲೇ ಹೊರಟ ಸಂಘಟಿತ ಮಾದರಿಗಳಿಂದ ನಾವು ಹೊಸ ಸ್ಫೂರ್ತಿ ಪಡೆಯಬೇಕು; ಬಾಡಿಗೆ ಬೆಂಬಲಿಗರನ್ನು ತಂದು ಚುನಾವಣಾ ಸಭೆ ನಡೆಸುವ ಪಕ್ಷಗಳಿಗಿಂತ ಭಿನ್ನವಾಗಿ, ಜನರು ತಂತಾವೇ ಉತ್ಸಾಹದಿಂದ ಬಂದು ಸಭೆಯಲ್ಲಿ ಭಾಗವಹಿಸುವ ರಾಜಕಾರಣದ ಸ್ವರೂಪವನ್ನು ಸರಿಯಾಗಿ ಅರಿಯಬೇಕು. ಇಂಥ ಜನಬೆಂಬಲವುಳ್ಳ ಪಕ್ಷಗಳ ಶಕ್ತಿಯನ್ನು ಗ್ರಹಿಸಿ ಅಂಥ ಮಾರ್ಗಗಳನ್ನು ಜನಪ್ರಿಯಗೊಳಿಸಬೇಕು. ಪರ್ಯಾಯ ರಾಜಕಾರಣವೆಂದರೆ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಚುರುಕಾಗುವ ರಾಜಕಾರಣವಲ್ಲ; ಅದು ಚುನಾವಣೆಯ ಮೊದಲೂ ಆನಂತರವೂ ನಿರಂತರ ಸಂವಾದ ಹಾಗೂ ಕಾರ್ಯಕ್ರಮಗಳ ಮೂಲಕ ಚಾಲ್ತಿಯಲ್ಲಿರಬೇಕು.
 

‍ಲೇಖಕರು avadhi

8 May, 2013

4 Comments

  1. deepaG

    ಸರ್ ನೀವು ಕಂಡಂತೆ ರೋಡ್ ನ ಚೆಕ್ ಪೋಸ್ಟಗಳಲ್ಲಿ ಮಿಲಿಟರೀ ಪಡೆ ನಿಂತು ಹಣದ ಚೀಲಗಳಿಗಾಗಿ ಹುಡುಕಾಟ ನಡೆಸುತ್ತಿರುವುದು ಸದ್ಯದ ಸಹಜತೆಗಳಲ್ಲೊಂದು. ಕಾರಣ ಹಣ ಹೆಂಡ ಸೀರೆ ರವಿಕೆಗಳ ಹೊಳೆ ಹರಿಸುವ ಮಹಾನ್ ಪ್ರಭು ಮಾತ್ರ ಇಂದು ಪ್ರಜಾಪ್ರಭುತ್ವದ ಜನನಾಯಕನಾಗಲು ಸಾದ್ಯ ಎಂಬಂತಹ ವಾತಾವರಣವನ್ನ ಸೃಷ್ಟಿಸಿದ್ದಾರೆ. ಹಾಗೂ ಇದು ಚುನಾವಣಾ ಮೊದಲು ೧ ತಿಂಗಳು ನಡೆಯಲೇಬೇಕಾದ ಪ್ರಕ್ರಿಯೆಯಾಗಿದೆ. ಊರಿಗೆ ನೀರು ರಸ್ತೆ ಚರಂಡಿ ವ್ಯವಸ್ಥೆ ಬಯಸದೆ ನಮ್ಮ ಪ್ರಬುಧ್ದ ಪ್ರಜೆಗಳು ನಾಲ್ಕು ದಿನ ಚುನಾವಣಾ ಅಬ್ಯರ್ಥಿಗಳು ಕೊಡುವ ಹೆಂಡದ ಹನಿಗೆ ನಾಲಿಗೆ ಚಾಚುತ್ತಿರುವುದನ್ನ ಕಂಡರೆ ಇವರ ಮುಂದಿನ ಐದು ವರ್ಷಗಳ ಹೀನ ಸ್ಥಿತಿಯನ್ನ ಕೂತಲ್ಲಿಯೇ ಉಹಿಸಬಹುದು.. ಹಾಗೂ ನೀವು ಹೇಳಿದಂತೆ ಸ್ಪಂದನ ಪದದ ಅರ್ಥ ಕೂಡ ತುಂಬ `ಅರ್ಥ`ಗರ್ಭಿತವಾಗಿದೆ.
    ಇದಕ್ಕಿಂತ ವಿಭಿನ್ನವಾಗಿ ಚುನಾವಣೆಯನ್ನು ನೋಡಲು ಸಾದ್ಯವೇ ಇಲ್ಲ. ನೀವು ಕಂಡಂತೆ ಚುನಾವಣೆ ಬರಹ ಚೆನ್ನಾಗಿದೆ ಓದುತ್ತಿದ್ದಂತೆ ತಲೆ ತಾನೇ ತಾನಾಗಿ ಅಹುದಹುದು ಎಂದು ತಲೆ ಬಾಗುತ್ತಿದೆ.. ಧನ್ಯವಾದಗಳು.

  2. chalapthy

    ಚನ್ನಾಗಿದೆ ಸಾರ್ ನಿಮ್ಮ ಎಲೆಕ್ಶನ್ ಕಾಮೆಂಟು

  3. t.n. vasudevamurthy

    ಸರ್, ನಿಮ್ಮ ಲಘು ಬರಹ ತುಂಬ ಪರಿಣಾಮಕಾರಿಯಾಗಿದೆ. ರಾಜಕಾರಿಣಿಗಳು ವೋಟನ್ನು ಖರೀದಿಸುವ ನೆವದಲ್ಲಿ ಹಣ ವಿತರಿಸುವುದನ್ನು ಏನೆಂದು ಅಥರ್ೈಸಬೇಕು? ಹಾಗೆ ನೋಟನ್ನು ನೀಡಿ ನಮ್ಮ ತೆರಿಗೆಯ ಹಣವನ್ನು ಹೇಗೆ ಬಳಸಬೇಕು ಎಂದು ತಿಳಿಯದೇ ಅದನ್ನು ನಮಗೇ ಹಿಂದಿರುಗಿಸಿದಂತಾಗುವುದಿಲ್ಲವೇ? ತಾವು ಅಪಾರ ಮೊತ್ತದ ಹಣವನ್ನು ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಲು ಅಸಮರ್ಥರು ಎಂದು ತಮಗೆ ತಾವೇ ಸಾಬೀತು ಮಾಡಿಕೊಳ್ಳುವಂತೆ ಅಲ್ಲವೇ

  4. bharathi

    i love my india!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading