ಎರಡು ಪ್ರಣಯ ಪ್ರಸಂಗಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಪ್ರಣಯಿ ಅಲ್ಲಿಂದ ಹೊರಟಳು. ಪ್ರವರ ಇಲ್ಲಿಂದ ಹೊರಟ. ಇಬ್ಬರ ನಡುವೆ ಇದ್ದ ಅಂತರ ಬರೋಬ್ಬರಿ ಐದುನೂರು ಕಿ.ಮೀ.ಗಳು. ಅವರ ನಡುವೆ ಆದ ಒಪ್ಪಂದ ಇಷ್ಟೆ.‌ ಇಬ್ಬರಿಗೂ ಸಮಾನ ದೂರದಲ್ಲಿರುವ ಸ್ಥಳದಲ್ಲಿ ಭೇಟಿಯಾಗುವುದು ಮತ್ತು ಆ ದಾರಿಯಲ್ಲಿ ತಾವು ಕಂಡಿದ್ದ ಒಂದು ಅಪರೂಪದ ಘಟನೆಯನ್ನು ಇಬ್ಬರೂ ಪರಸ್ಪರರಿಗೆ ಹೇಳಿಕೊಳ್ಳುವುದು.‌ ಹೇಗೂ ಬಹಳ ದಿನಗಳ ನಂತರ ತಾವು ಭೇಟಿಯಾಗುತ್ತಿದ್ದೇವೆ.‌ ಸುಮ್ಮನೆ ಕಾರಿನ‌ ಡ್ರೈವಿಂಗ್ ಸೀಟನ್ನು ಬಿಸಿ ಮಾಡುತ್ತ ಬರುವ ಬದಲು ದಾರಿಯ ಮಧ್ಯೆ ಅಲ್ಲಲ್ಲಿ ನಿಲ್ಲಿಸಿ ಏನಾದರು ವ್ಯವಹರಿಸಿಕೊಂಡು ಬರಬೇಕು ಆಗ ಪ್ರವರನಿಗಿಂತ ತನಗೆ ಒಳ್ಳೆಯ ಅನುಭವ ಸಿಗಬಹುದು ಎಂದು ಪ್ರಣಯಿ ಭಾವಿಸಿದ್ದಳು.

ಪ್ರವರನಿಗೋ ಇದರ ಚಿಂತೆಯಿರಲಿಲ್ಲ. ಅವನು ಪ್ರಯಾಣವನ್ನು ಒಂದು ಪ್ರಯೋಗ ಎಂದೇ ಭಾವಿಸಿರುವವನು. ಇದಕ್ಕಾಗಿ ಅವನೇನು ವಿಶೇಷವಾದ ತಯಾರಿ ಏನೂ ಮಾಡಬೇಕಿರಲಿಲ್ಲ. ಇಬ್ಬರೂ ಒಂದೇ ಸಮಯದಲ್ಲಿ ತಂತಮ್ಮ ಪ್ರಯಾಣ ಆರಂಭಿಸಿದರು. ಅವರು ಭೇಟಿಯಾಗಬೇಕಾದ ಊರು ಮತ್ತು ಸ್ಥಳ ಮೊದಲೇ ನಿರ್ಧಾರವಾಗಿತ್ತು. 

*         *       *       *

‘I have reached here. Where are you man ?’ ಎಂದು ಪ್ರವರನ ಮೊಬೈಲ್ ಗೆ ಮೆಸೇಜ್ ಬಂತು. ಅದಕ್ಕೆ‌ ಅವನು ಏನೂ ರಿಪ್ಲೈ ಮಾಡಲಿಲ್ಲ.‌ ಪ್ರಣಯಿ ಅನೇಕ ಬಾರಿ ಮೊಬೈಲ್ ನೋಡಿ ಸುಮ್ಮನಾದಳು. ಡ್ರೈವಿಂಗ್ ಮಾಡುತ್ತಿರಬೇಕು ಇನ್ನೇನು ಬಂದಾನು ಎಂದುಕೊಂಡು ಅವಳು ಸುಮ್ಮನಾದಳು. ತಾನು ಬಂದ ಸ್ಥಳದಲ್ಲಿದ್ದ ನದಿಯ ದಡದಲ್ಲಿ ಹೋಗಿ ಕುಳಿತು ತನ್ನ ಮೊಬೈಲ್ ನಲ್ಲಿ ಯಾವುದೋ‌ ಸಿನಿಮಾ ನೋಡ ತೊಡಗಿದಳು.‌

‘Will be there in half an hour ‘ ಎಂದು ಅವಳಿಗೆ‌ ಮೆಸೇಜ್ ಬಂದಾಗ ಸಮಾಧಾನ ಆಯ್ತು. ಅವನು ತನಗಾಗಿ ಪ್ರತೀ ಬಾರಿ ಭೇಟಿಯಾದಾಗಲೂ ಏನಾದರೂ ವಿಶೇಷವಾದ ಉಡುಗೊರೆ ತರುತ್ತಾನೆಂದು ಪ್ರಣತಿಗೆ ಗೊತ್ತಿತ್ತಲ್ಲವೆ ? ಹಾಗಾಗಿ ಏನೋ‌ ಹುಡುಕಿಕೊಂಡು ಹೋಗಿರುತ್ತಾನೆ ತಡವಾಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ಊಹಿಸಿದಳು.’ ʼwaiting is not a word ; it is an emotion’ ಎಂದಷ್ಟೆ ರಿಪ್ಲೈ ಮಾಡಿದಳು. ಅದಕ್ಕೆ‌ ಪ್ರವರ, ‘ಹಾಗಾದರೆ‌ ಒಂದು ಕೆಲಸ ಮಾಡು. ‌ನಮ್ಮ ಒಪ್ಪಂದದಂತೆ ದಾರಿಯಲ್ಲಿ ನೀನು ಕಂಡ ಅಪರೂಪದ ಘಟನೆಯನ್ನು ಈಗಲೇ ಹೇಳುತ್ತಾ ಹೋಗು‌. ನಾನು ಕೇಳುತ್ತೇನೆ. ನೀನು ಹೇಳಿ ಮುಗಿಸುವಷ್ಟರಲ್ಲಿ ನಾನಲ್ಲಿರುತ್ತೇನೆ.‌ ಆಮೇಲೆ ನಾನು ನೋಡಿದ ಘಟನೆಯನ್ನು ಹೇಳುತ್ತೇನೆ. ನೀನು ವಾಯ್ಸ್ ಮೆಸೇಜ್ ಕಳಿಸು’ ಎಂದು ಮೆಸೇಜ್ ಕಳಿಸಿದನು.

ಪ್ರಣಯಿಗೆ ಕೋಪ ಬಂತು. ಹಾಗೆ ನೋಡಿದರೆ ಅವನು ಬರಬೇಕಿದ್ದ ರಸ್ತೆ ಹೈವೇ ಆಗಿತ್ತು. ತಾನು ಕಚ್ಚಾ ರಸ್ತೆಗಳೆಲ್ಲ ಪ್ರಯಾಣ ಮಾಡಿ ಬೇಗ ಬಂದಿದ್ದೇನೆ. ಇವನು ಆರಾಮಾಗಿ ಹೈವೇ ನಲ್ಲಿ ಬರುವ ಹಾಗಿದ್ದರೂ ತಡ ಮಾಡುತ್ತಿರುವುದರ ಬಗ್ಗೆ ಆಕೆಗೆ ಅಸಹನೆ ಉಂಟಾಯಿತು. ಆದರೂ ಅವನು ತರುವ ಆ ವಿಶೇಷ ಉಡುಗೊರೆ ನೆನೆದು ಕೋಪ ಶಮನ ಮಾಡಿಕೊಂಡಳು. ತಾನಾದರೂ ನದಿ ದಂಡೆಯಲ್ಲಿ ಒಬ್ಬಳೇ ಕೂತು ಮಾಡುವುದೇನು ಅವನಿಗೆ ವಾಯ್ಸ್ ಮೆಸೇಜ್ ಕಳಿಸೋಣ ಎಂದು ತಾನು ಕಂಡ ಅಪರೂಪದ ಘಟನೆಯನ್ನು ರೆಕಾರ್ಡ್ ಮಾಡ ತೊಡಗಿದಳು…

*         *          *

‘ನಾನು ಮನೆಯಿಂದ ಹೊರಟು ಸುಮಾರು ನೂರು ಕಿ.ಮಿ. ದೂರ ಬಂದ ನಂತರ ಒಂದು ಬೆಟ್ಟದ ಬಳಿ ಸಾಕಷ್ಟು ಜನ ಸೇರಿದ್ದನ್ನು ನೋಡಿ ಕಾರು ನಿಲ್ಲಿಸಿದೆ. ರಸ್ತೆಯ ಪಕ್ಕದಲ್ಲೇ ಇದ್ದ ಬೆಟ್ಟದಿಂದ ಹತ್ತಾರು ಜನ ಇಳಿದು ಹೋಗುತ್ತಿದ್ದರು. ಅವರಲ್ಲಿ ಕೆಲವರು ‘ಏನೇ ಹೇಳ್ರಿ ಇಂಥ ವಿಷಯನ್ನೆಲ್ಲ ಯಾರಾದರೂ ಪಬ್ಲಿಕ್ ಲ್ಲಿ ಕೂತು ಮಾತಾಡ್ತಾರಾ ? ಅವರಿಬ್ಬರಿಗೂ ಸುತ್ತ ಜನ ಇರೋದ್ರ ಬಗ್ಗೆ ಕ್ಯಾರೆ ಇಲ್ಲ. ಏನ್ ಕಾಲ ಬಂತಪ್ಪ’ ಎಂದು ಗೊಣಗಿಕೊಂಡು ಹೋಗುತ್ತಿದ್ದರು. ನಾನು ಕುತೂಹಲದಿಂದ ಬೆಟ್ಟದ ಮೇಲೆ ಹೋದೆ. ಅಲ್ಲಿ ಓರ್ವ ಗಂಡಸು ಮತ್ತು ಹೆಂಗಸು ಬೆಟ್ಟದ ತುದಿಯ ಬಂಡೆಯ ಮೇಲೆ ಕೂತಿದ್ದರು.‌ ಅವರನ್ನು ನೋಡಿದರೆ ಗೊತ್ತಾಗುತ್ತಿತ್ತು ಅವರಿಬ್ಬರು ಗಂಡ ಹೆಂಡತಿ ಎಂದು. 

‘ಇದನ್ನೇ ನೂರು ಸಾರಿ ಹೇಳಿದ್ದೀನಿ. ಇನ್ನೂ ನೂರು ಸಾರಿ ಬೇಕಾದರೆ ಹೇಳ್ತೀನಿ ಆದರೆ ಪಕ್ಕದ ಮನೆಯವನ ಥರ ಇರೋಕಾಗ್ಲಿ, ಅವರು ಮಾಡಿದ ರೀತಿಯಲ್ಲೇ ಪ್ರೇಮ‌ಸಲ್ಲಾಪಗಳನ್ನ ಮಾಡೋದಾಗ್ಲಿ ನನ್ನಿಂದ ಸಾಧ್ಯವಿಲ್ಲ’ ಎನ್ನುತ್ತಿದ್ದ ಅವನು. 

‘ಅದೇ ಯಾಕೆ ಸಾಧ್ಯವಿಲ್ಲ ? ನಿನಗೆ ನನ್ನ ಮೇಲೆ ಇಂಟರೆಸ್ಟ್  ಇಲ್ಲ ಅದ್ಕೆ ಹೀಗೆ ಮಾಡ್ತೀಯ. ನೋಡು ಅವರು‌ ದಿನ ಸಂಜೆ ಮನೆಯೆದುರಿನ ಅಂಗಳದಲ್ಲಿ ಛೇರ್ ಹಾಕಿಕೊಂಡ್ ಕೂತ್ಕೊಂಡ್ ಕಾಫಿ ಕುಡಿತಾರೆ. ಅವಳ ಗಂಡ ಆಫೀಸಿಂದ ಬರೋವಾಗ ಅವಳಿಗೆ‌ ಇಷ್ಟವಾದ ಏನೋ ಒಂದು ತಿನ್ನೋಕೆ ತಂದಿರ್ತಾನೆ. ಇಬ್ಬರೂ ಕೂತು ಮಾತಾಡ್ತಾ ಇರೋವಾಗ ಅವನು ಆ ತಿಂಡಿಯ ಪೊಟ್ಟಣವನ್ನು ಮೆಲ್ಲಗೆ ಕದ್ದು ತೆಗೆಯುತ್ತಾನೆ. ಅವಳು ಅದು ಗೊತ್ತಿರುವಂತೆಯೂ,ಗೊತ್ತಿಲ್ಲದಂತೆಯೂ ಅದನ್ನು ತೆಗೆದುಕೊಳ್ಳುತ್ತಾಳೆ.‌ ಅದರ ಮೊದಲ ತುತ್ತನ್ನು ಅವನು ಅವಳಿಗೆ ತಿನ್ನಿಸುತ್ತಾನೆ. ಅವಳೂ ಅದನ್ನು ಅನುಕರಿಸುತ್ತಾಳೆ. ಆಮೇಲೆ ಇಬ್ಬರೂ ಕನಿಷ್ಠ ಅರ್ಧ ತಾಸು ಹರಟುತ್ತಾರೆ, ನಗುತ್ತಾರೆ. ಆಮೇಲೆ ಕೈ ಕೈ ಹಿಡಿದು ಮನೆಯೊಳಗೆ ಹೋಗುತ್ತಾರೆ. ಇಬ್ಬರು ಮಕ್ಕಳು ಆಟ ಆಡಿ ಮನೆಗೆ ಬರುಷ್ಟರಲ್ಲಿ ಇವರು ತಮ್ಮ ಸಂಜೆಯನ್ನು ಮುದಗೊಳಿಸಿಕೊಂಡಿರುತ್ತಾರೆ. ನೀನು ಮಾತ್ರ ಯಾಕೆ ಹೀಗೆ ಮಾಡಲ್ಲ?’ 

‘ಹಿಂಗೆಲ್ಲ ಮಾಡದಿದ್ದರೂ ನಮಗೂ ಎರಡು ಮಕ್ಕಳಾಗಿದೆಯಲ್ಲ. ಇನ್ನೇನು ಸಮಸ್ಯೆ?’  ಎಂದು ಬ್ಲಂಟ್ ಆಗಿ ಹೇಳಿದ ಆತ…

‘ನಿನ್ನಂಥವನಿಗೆ ಹೇಳ್ತೀನಲ್ಲ‌‌ ನಾನು. ಅವರು ಅಂಗಳದಲ್ಲಿ‌ ಸಂಜೆ‌ ಕೂತು ಮಾತಾಡೋದು ಮಕ್ಕಳನ್ನು ಹುಟ್ಟಿಸಲಿಕ್ಕಾಗಿಯೆ ?  ಹೋಗ್ಲಿ ಬಿಡು. ಅವರು ಆಗಾಗ ಮನೆಯಲ್ಲಿ ಜೋರಾಗಿ‌ ಹಾಡು ಪ್ಲೇ ಮಾಡ್ಕೊಂಡ್ ಡ್ಯಾನ್ಸ್ ಮಾಡೋ ಸೌಂಡ್ ಕೂಡ ಕೇಳ್ತಾ ಇರುತ್ತೆ.‌ ಅದೂ ಮಕ್ಳನ್ನ ಹುಟ್ಟಿಸೋಕಾಗಿ ಅನ್ನೋಕಾಗುತ್ತ ?’ 

‘ನೋಡು, ಇದೆಲ್ಲ ನನ್ನಿಂದ ಆಗಲ್ಲ. ನಾವು ನಮ್ ಥರಾನೆ ಇರೋಣ. ಬಾ ಈಗ ಮನೆಗೆ ಹೋಗೋಣ. ಕೆಳಗಡೆ ಕಾಯ್ತಾ ಇರ್ತೀನಿ’ ಎಂದು ನಿರ್ದಯಿಯಾಗಿ ಹೇಳಿ ಹೊರಟು ಹೋದ. 

ಇವರಿಬ್ಬರ ಸಂಭಾಷಣೆಯನ್ನು ಅನೇಕರು ಕೇಳಿಸಿಕೊಳ್ಳುತ್ತಿದ್ದರು.‌ ನಾನು ಹೋದಾಗ ನಡೆದದ್ದಿಷ್ಟು. ಇದೇ ರೀತಿ ಅವರು ಅದೇನೇನು ಮಾತಾಡಿಕೊಂಡಿದ್ದರೋ ತಿಳಿಯದು. ಇದನ್ನು ಬಿಟ್ಟು ಇನ್ಯಾವ ಅಪರೂಪದ ಘಟನೆಯೂ ನನಗೆ ಕಾಣಸಿಗಲಿಲ್ಲ.‌ ದಾರಿಯಲ್ಲಿ ಎರಡು ಬಾರಿ ಕಾರು ನಿಲ್ಲಿಸಿದ್ದೆ. ಒಮ್ಮೆ ಜ್ಯೂಸ್ ಕುಡಿಯಲು ಮತ್ತೊಮ್ಮೆ ವಾಷ್ ರೂಂ ಗೆ ಹೋಗಲು. ಇಷ್ಟೆ ಆಗಿದ್ದು. ಈಗ ನೀನೇನು ಹೇಳಬಹುದು ಎಂಬ ಕುತೂಹಲ ನನಗೆ ಕಾಯುತ್ತಿದ್ದೇನೆ. ಎಲ್ಲಿದ್ದೀಯಾ ? ಬೇಗ ಬಾ 

ಎಂಬ ರೆಕಾರ್ಡೆಡ್ ಮೆಸೇಜನ್ನು ಪ್ರವರನಿಗೆ ಕಳಿಸಿದಳು. 

*        *        *        *

‘I am sorry I didn’t start from here’ ಎಂಬ ಮೆಸೇಜ್ ಕಳಿಸಿದ್ದ ಪ್ರವರ. ಪ್ರಣಯಿ ಅದನ್ನು ನೋಡಿ ಒಮ್ಮೆ ಶಾಕ್ ಆಗಿ ಹೋದಳು. 

‘What the hell are you saying ? Don’t be silly. Come soon’ ಎಂದು ನಾರ್ಮಲ್ ಆಗಿಯೇ‌‌ ರಿಪ್ಲೈ ಮಾಡಿದವಳು, ಪ್ರವರನ ನಂಬರ್ ಗೆ ಕಾಲ್ ಮಾಡಿದಳು. ಕಾಲ್ ಕಟ್ ಮಾಡಿದವನು , ‘In a meeting, Can I call you later ?’ ಎಂದು ಮೆಸೇಜ್ ಮಾಡಿದ್ದ.‌

‘Okay nothing urgent’ ಎಂದು ಅವನಿಗೆ ಉತ್ತರಿಸಿದಾಗಲೇ ಅವಳಿಗೆ ಅರಿವಾದದ್ದು ಪ್ರವರನಿಗೆ ಈ ಜರ್ನಿಯ ಬಗ್ಗೆ ಹೇಳಿ, ಇಂಥದ್ದೊಂದು ಅನುಭವಕ್ಕೆ ಇಬ್ಬರೂ ತಮ್ಮನ್ನು ಒಡ್ಡಿಕೊಳ್ಳೋಣ ಎಂದು ಒಪ್ಪಿಸಬೇಕು ಎಂದು ತಾನು ಬಯಸಿದ್ದು ನಿಜ. ಆದರೆ ಅವನಿಗೆ ಇನ್ನೂ ಅದನ್ನು ಹೇಳಿಯೇ ಇರಲಿಲ್ಲ.‌ ಆದರೂ ತಾನು ಮಾತ್ರ ಅದು ನಡೆದೇ ನಡೆಯುತ್ತದೆ ಎಂದುಕೊಂಡು ಹೊರಟು ಬಂದಿದ್ದೇನೆ ಎಂಬುದು ಆಗ ಅವಳಿಗೆ ಅರಿವಾಯಿತು. ತನ್ನ ಬಗ್ಗೆ ಗೌರವವೂ, ಅವಮಾನವೂ ಒಟ್ಟೊಟ್ಟಿಗೇ ಆದವು. 

ನದಿ ದಡದಲ್ಲಿ ನಿಂತು ಹರಿಯುವ ನೀರನ್ನೊಮ್ಮೆ ನೋಡಿದಳು. ಅದು ಏನನ್ನೂ ತನಗೆ ಅಂಟಿಸಿಕೊಂಡಿರಲಿಲ್ಲ. ವಾಪಸ್ ತನ್ನ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಳು. ಮೊಬೈಲ್ ರಿಂಗಾಯಿತು. 

Pravara Calling ಎಂಬುದನ್ನು ನೋಡಿ ‘Pravara coming’ ಎಂದು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಲೇ ಕಾಲ್ ಕಟ್ ಮಾಡಿದಳು. 

‘Have some work , let’s talk some time later’ ಎಂದು ಮೆಸೇಜ್ ಕಳಿಸಿದಳು. 

‘Anytime you wish’ ಎಂದು ಉತ್ತರ ಬಂತು. 

ಕಾರ್ ಸ್ಟಾರ್ಟ್ ಮಾಡುತ್ತ ಮೆಸೇಜನ್ನು ಮತ್ತೊಮ್ಮೆ ಓದಿದಳು.

‘Anytime you wish …ಹ್ಹ ..ಹ್ಹ ..ಹ್ಹ… I wish this moment . This comes under anytime . ಈಗ ಇಲ್ಲಿಗೆ ಬಂದು ಬಿಡ್ತೀಯೇನೋ ಪ್ರವರ’ ಎಂದು ಜೋರಾಗಿ ಹೇಳುತ್ತ ಎರಡು, ಮೂರು, ನಾಲ್ಕು, ಐದನೇ ಗೇರ್ ಗೆ ತನ್ನ ಕಾರಿನ ವೇಗ ಹೆಚ್ಚಿಸಿಕೊಂಡಳು. 

ಊರು ಹತ್ತಿರ ಬರುತ್ತಿದ್ದಂತೆ ತನಗೆ ತಾನೇ ಹೇಳಿಕೊಂಡಳು; ‘ಪಾಪ, ಪ್ರವರನದ್ದು‌ ಏನೂ ತಪ್ಪಿಲ್ಲ. ನಾನೇ‌ ಸುಮ್ನೆ ಏನೇನೋ ಯೋಚಿಸಿಬಿಟ್ಟೆ’ ಹಾಗೆ ಅವಳಿಗೆ ಅವಳೇ ಸಮಾಧಾನ ಮಾಡಿಕೊಂಡರೂ‌,

ಅವಳಿಗೆ ಅದೇಕೋ ಬೆಟ್ಟದ ತುದಿಯಲ್ಲಿ ತಾನು ನೋಡಿದ ಗಂಡಸಿನಲ್ಲಿ ಪ್ರವರನೂ, ಹೆಂಗಸಿನಲ್ಲಿ ಪ್ರಣಯಿಯೂ ಇದ್ದಾರೇನೋ ಎಂಬ ಚಿಂತೆ ಅಂದಿನಿಂದ ಶುರುವಾಗಿಬಿಟ್ಟಿತು… ಇತ್ತ ಇದ್ಯಾವುದರ ಗೊಡವೆಯೂ ಇಲ್ಲದ ಪ್ರವರ ಮೀಟಿಂಗ್ ಮುಗಿಸಿದ್ದವನು ಫುಡ್ ಕೋರ್ಟಿನಲ್ಲಿ ಸ್ಯಾಂಡ್ ವಿಚ್ ತಿನ್ನುತ್ತಾ ಕೂತಿದ್ದ … 

February 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಡಿಫರೆಂಟ್ ಆಗಿದೆ ರಾಗದ ವಿವರ. ಎಲ್ಲಾ ದಾಂಪತ್ಯಗಳಲ್ಲು ಮತ್ತು ಪ್ರೇಮಚರಿತೆಗಳಲ್ಲು ಭಿನ್ನವಾದದ್ದೊಂದು ಒಣಗುತ್ತದೆ ಇಲ್ಲವೇ ಚಿಗುರುತ್ತಲೇ ಇರುತ್ತದೆ.
    ನಿಮ್ಮ ಬರಹದ ಪಾತ್ರಗಳು ವಿಶೇಷವಾಗಲು ಹೋಗಿ ಸಾಮಾನ್ಯವಾಗಿ ಸರಳವಾದಂತೆ ಕಂಡವು…..

    ಪ್ರತಿಕ್ರಿಯೆ
  2. ಶಿವಕುಮಾರ ಮಾವಲಿ

    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: