ಹಲೋ, ಪುಟ್ಟ ‘ವೀಕ್ಲಿಂಕಗ್’ ಮರಿಯೇ, ನಿನಗೂ ಬದುಕುವ ಹಕ್ಕಿದೆ!
ಇಂದು ಮುಂಜಾನೆ ಸಮಯ ಬಲು ವಿಶೇಷವಾಗಿತ್ತು, ಕಾರಣ? ಮನೆಯಲ್ಲಿ ಒಂದು ವಿಶೇಷ ಅತಿಥಿ ಇತ್ತು. ನೆನ್ನೆ ಮನೆಯ ಹೊರಗೆ ರಸ್ತೆಯ ಮೇಲೆಯೇ ಒಂದು ಹಕ್ಕಿಯ ಗೂಡು ಚಲ್ಲಾ ಪಿಲ್ಲಿಯಾಗಿ ಬಿದ್ದಿತ್ತು, ಮನೆಯ ಹೊರಗಿನ ರಸ್ತೆಯಲ್ಲಿ ‘ಚಿಂವು ಚಿಂವ್’ ಧ್ವನಿ ಆಲಿಸಿದ ಪೂರ್ಣಿಮಾ ಕುತೂಹಲದಿಂದ ರಸ್ತೆಯಲ್ಲಿ ಒಂದು ಪುಟ್ಟ ಮರಿ ಹಾರಲಾರದೇ ಒದ್ದಾಡುತ್ತಿದ್ದುದನ್ನು ಗಮನಿಸಿ, ಬೆಕ್ಕಿಗೆ ಆಹಾರವಾಗಬಾರದೆಂದು, ಅದನ್ನು ಎತ್ತಿಕೊಂಡು ಮನೆಯಲ್ಲಿ ಬೆಚ್ಚನೆ ಇಟ್ಟುಕೊಂಡಿದ್ದಳು. ಇವಳು ಕೈಗೆತ್ತಿಕೊಂಡಾಗ ಸತ್ತಂತೆ ನಾಟಕವಾಡಿತ್ತಂತೆ. ನನಗೆ ವಿಷಯ ತಿಳಿಸಿದಾಗ ಮರುದಿನ ಏನಾದರೂ ವ್ಯವಸ್ಥೆ ಮಾಡಲು ನಿರ್ಧರಿಸಿದೆವು. ರಾತ್ರಿ ಒಂದೆರಡು ಸಲ ಅದನ್ನು ಜೋಪಾನವಿರುವುದನ್ನು ಖಚಿತಪಡಿಸಿಕೊಂಡಳಂತೆ. ಅಮ್ಮನಲ್ಲವೇ!

ಇಂದು ಬೆಳಗಿನ ಜಾವದಿಂದಲೇ ‘ಚಿಂವು ಚಿಂವ್’ ಶುರುವಿಟ್ಟುಕೊಂಡಿತು, ನಾವೂ ಎದ್ದು ಅದರ ಪೇರೆಂಟ್ಸ್ಗೆಲ ಮರಳಿಸುವಾ ಎಂದು ಅದನ್ನು ಹ್ಯಾಂಗಿಂಗ್ ಪಾಟ್ಗೆಂ ಕಟ್ಟಿ ಮನೆಯ ಹೊರಗೆ ಎತ್ತರದಲ್ಲಿ ನೇತು ಹಾಕಿ ಅದರಲ್ಲಿ ಜೋಪಾನವಾಗಿ ಆ ಮರಿ ಇಟ್ಟೆವು. ಊಹೂಂ! ಯಾವ ಪೇರೆಂಟ್ಸ್ಗಕಳೂ ಬರಲಿಲ್ಲ, ಆ ಮೇಲೆ ಮನೆಯ ಅಂಗಳದಲ್ಲಿರುವ ಮಾವಿನ ಮರದಲ್ಲಿ ಎತ್ತರದಲ್ಲಿ ಕಟ್ಟಿ ಇಟ್ಟೆವು, ಊಹೂಂ! ಏನೂ ಪ್ರಯೋಜನವಾಗಲಿಲ್ಲ. ಬಾಳೆಹಣ್ಣಿನ ತುಣುಕೊಂದನ್ನು ಪಾಟ್ನವಲ್ಲಿ ಹಾಕಿದೆ. ಅದು ತಿನ್ನಲಿಲ್ಲ. ಏನು ಮಾಡುವುದಪ್ಪಾ ಇನ್ನು ಎಂದು ತಲೆ ತುರಿಸಿಕೊಂಡೆ. ಕೂಡಲೇ ನೆನಪಾದವರು, ಪಕ್ಷಿಪ್ರೇಮಿ ಗಂಗಾಧರ ಕಲ್ಲೂರ, ಹಾಗೂ ಪಕ್ಷಿ ಪ್ರೇಮಿ ತಿಮ್ಮಾಪೂರ. ಇಬ್ಬರ ನಂಬರುಗಳೂ ನನ್ನ ಹತ್ತಿರವಿಲ್ಲ, ಬೆಳಗಾವಿಯಲ್ಲಿರುವ ಗೆಳೆಯ ಶ್ರೀನಿವಾದ ಹುದ್ದಾರರಿಗೆ ಫೋನಾಯಿಸಿ ವಿಷಯ ತಿಳಿಸಿ, ಗಂಗಾಧರರ ನಂಬರು ಪಡೆದೆ, ಹಾಗೆಯೇ ಯಮಕನಮರಡಿಯ ಡಾ. ಸರ್ವೇಶ ಗುರವರಿಗೆ ಕಾಂಟ್ಯಾಕ್ಟ್ ಮಾಡಿ ತಿಮ್ಮಾಪೂರರ ನಂಬರ ಪಡೆದು, ಮರಿಯ ವಿಷಯ ಇಬ್ಬರಿಗೂ ತಿಳಿಸಿದೆ. ಕಲ್ಲೂರ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ತಿಮ್ಮಾಪೂರರೂ ಬಂದರು. ಕಲ್ಲೂರರಂತೂ ಆ ಪಕ್ಷಿ, ‘ಗ್ರೇ ಟಿಟ್’ ಎಂದು ತಿಳಿಸಿ, ವಿದ್ಯುತ್ ಕಂಬದಲ್ಲಿ ಅದರ ಗೂಡು ಕೂಡ ತೋರಿಸಿದರು. ಹಾಗೂ ಅದನ್ನು ಫೀಡಿಂಗ್ ಚಾಲ್ತಿ ಇರುವ ಗೂಡಲ್ಲಿ ಬಿಡೋಣ ಎಂದು, ‘ವೇಳೆ ಇದ್ದರೆ ಬನ್ನಿ, ಅದರ ಗೂಡುಗಳನ್ನು ತೋರಿಸುವೆ’ ಎಂದು ಕರೆದಾಗ ನನಗೂ ಸಹಜ ಕುತೂಹಲದಿಂದ ಅವರಿಗೆ ಸಾರಥಿಯಾದೆ. ಕರ್ನಾಟಕ ಕಾಲೇಜಿನ ಹಲವಾರು ಕಡೆಗಳಲ್ಲಿ ‘ಗ್ರೇ ಟಿಟ್’ ಗಳು ಸಣ್ಣ ದೊಡ್ಡ ಕಟ್ಟಡಗಳ ಬಿರುಕುಗಳಲ್ಲಿ ಗೂಡು ನಿರ್ಮಿಸಿಕೊಂಡಿರುವುದನ್ನು ತೋರಿಸಿದರು. ಈ ಟಿಟ್ ಹಕ್ಕಿಯ ‘ಫೀಡಿಂಗ್ ಚಾಲ್ತಿ ಇರುವ’ ಪೇರೆಂಟ್ಸ್ ಗಳಿಗೆ ಹುಡುಕಾಟ ಶುರುವಾಯಿತು. ಕೆಸಿಡಿ, ಹಾಗೂ ತಹಶೀ¯ದಾರ ಕಚೇರಿಯ ಕಟ್ಟಡಗಳ ಬಿರುಕುಗಳಲ್ಲಿ, ಮರಗಳ ಬಿರುಕುಗಳಲ್ಲಿ ಹತ್ತಿಪ್ಪತ್ತು ಗೂಡು ಗುರುತಿಸಿ ತೋರಿಸಿದರು. ಆದರೆ ಎಲ್ಲಿಯೂ ಫೀಡಿಂಗ್ ಪೇರೆಂಟ್ ಸಿಗದೇ ನಿರಾಶರಾದೆವು, ತಿಮ್ಮಾಪೂರರು ಬೇರೆ ಕೆಲಸವಿದ್ದುದರಿಂದ ತಮ್ಮ ಕೆಲಸಕ್ಕೆ ತೆರಳಿದರು.

ಗಂಗಾಧರರು ಮರುದಿನವೇ ಪಕ್ಷಿ ವೀಕ್ಷಣೆಗಾಗಿ ಪ್ರತಿ ವರ್ಷ ತೆರಳುವಂತೆ, ಪಕ್ಷಿವೀಕ್ಷಣೆಗಾಗಿ ಸತತ ಇಪ್ಪತ್ತಾರನೆಯ ವರ್ಷ ಹಿಮಾಲಯದತ್ತ ಕೆಲ ತಿಂಗಳುಗಳು ತೆರಳುವವರಿದ್ದರು ಎಂಬುದನ್ನು, ತುಂಬ ಮುಜುಗುರ ಸ್ವಭಾವದ ಅವರು, ನನಗೆ ಅನಿವಾರ್ಯವಾಗಿ ತಿಳಿಸಬೇಕಾಗಿ ಬಂತು. ಅವರ ಗೆಳೆಯನ ಹತ್ತಿರವೇಕೆ ಈ ಮರಿಯನ್ನು ಬಿಡುತ್ತಿದ್ದೀರಿ ಎಂಬ ನನ್ನ ಸಹಜ ಪ್ರಶ್ನೆ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿತ್ತು. ಹೀಗಾಗಿ ಹಳೆಯ ಧಾರವಾಡದ ಇನ್ನೊಬ್ಬ ಪಕ್ಷಿಪ್ರೇಮಿ ಗೆಳೆಯ ಸ್ನೇಕ್ ಯಲ್ಲಪ್ಪನ ಮನೆಗೆ ನನ್ನನ್ನು ಕರೆದೊಯ್ದರು,.
ಯಲ್ಲಪ್ಪನಿಗೆ ಈ ಹಕ್ಕಿಯ ಮರಿ ಕೊಟ್ಟು ಜೋಪಾನವಾಗಿ ಫೀಡಿಂಗ್ ಮಾಡಲು ಹೇಳಿ ಅವರ ಜೋಳಿಗೆಗೆ ಅದನ್ನು ಹಾಕಿದೆವು. ಎರಡೇ ಕ್ಷಣಗಳಲ್ಲಿ ಅದರ ಧ್ವನಿ ತೆಗೆದು ಕೂಗಲು, ಅದೂ ಕೂಡ ಬಾಯಿ ತೆರೆದು ತನಗೆ ಹಸಿವಾಗಿರುವುದನ್ನು ಸೂಚಿಸಿತು. ಕೂಡಲೇ ಅದಕ್ಕೆ ಪುಟಾಣಿ, ಶೇಂಗಾ ಕಾಳು ಪುಡಿಮಾಡಿ ಗುಟುಕು ನೀಡಿದರು. ಅದುವರೆಗೆ ನಿತ್ರಾಣವಾಗಿದ್ದ ಅದು ಖುಷಿಯಲ್ಲಿ ಬಾಯಿ ತೆರೆದು ನುಂಗತೊಡಗಿತು. ಒಂಥರಹ ನನಗೂ ಇಲ್ಲಿ ಖಂಡಿತ ಮರಿ ಬದುಕಿತು ಎನ್ನಿಸಿತು. ತತ್ತಿಯಿಂದ ಹೊರಬಂದ ಮೇಲೆ ಸುಮಾರು ಎಂಟು ದಿನಗಳಲ್ಲಿ ಸ್ವತಂತ್ರವಾಗಿ ಹಾರಲು ಕಲಿಯುತ್ತವೆ. ಇನ್ನೆರಡು ದಿನದಲ್ಲಿ ಇದು ಹಾರಿ ಹೋಗುತ್ತದೆ. ಎಂದು ತಿಳಿಸಿದಾಗ ನೆಮ್ಮದಿ ಎನಿಸಿತು. ಹೀಗೆ ಪ್ರೀತಿಯಿಂದ ಬೆಳೆಸಿದ ಮರಿಗಳು ತುಂಬ ಆಪ್ತವಾಗಿ, ‘ಅಡಾಪ್ಟ್’ ಆಗಿ ಸಾಕಿದವರ ಹೆಗಲಮೇಲೆ, ಕೈಮೇಲೆ ಕುಳಿತು ತಮ್ಮ ಅಕ್ಕರೆಯನ್ನು ತೋರ್ಪಡಿಸುತ್ತವೆ ಎಂದು ಗಂಗಾಧರರು ವಿವರಿಸಿದರು.
ನಮಗೆ ಸಿಕ್ಕ ಮರಿ ‘ವೀಕ್ಲಿಂಗ’ ಅಂತೆ. ಅಂದರೆ, ಪಕ್ಷಿಗಳಲ್ಲಿ ಅಶಕ್ತವಾದ ಮರಿಗಳನ್ನು ಹಿಂದೆ ಬಿಟ್ಟು ಉಳಿದ ಮರಿಗಳೊಂದಿಗೆ ಪೇರೆಂಟ್ ಹಕ್ಕಿಗಳು ಬೇರೆಡೆಗೆ ಸ್ಥಳಾಂತರ ಹೊಂದುತ್ತವೆ. ಹೀಗೆ ಹಿಂದೆ ಉಳಿದ ಮರಿ ತಾನೇ ಹಾರಲು ಕಲಿತು, ತನ್ನ ಆಹಾರ ತಾನೇ ಹುಡುಕಿಕೊಳ್ಳಬೇಕು. ಇಲ್ಲವೇ ಸಾಯಬೇಕು! ವೀಕಲಿಂಗ್ಗಶಳನ್ನು (ಅಶಕ್ತ ಮರಿಗಳು) ಭಾರದ್ವಾಜ್ (ರತ್ನ ಪಕ್ಷಿ), ಕೋಗಿಲೆ, ಇಲ್ಲವೆ ಬೆಕ್ಕು (ಮಂಗಗಳೂ ಕೂಡ) ಇಂತಹ ಮರಿಗಳು ಸಿಕ್ಕರೆ ತಿಂದು ಬಿಡುತ್ತವೆ ಎಂದು ಗಂಗಾಧರರು ಹೇಳಿದಾಗ ದಂಗಾದೆ. ಪ್ರಕೃತಿ ಅದೆಷ್ಟು ಕ್ರೂರಿ ಅಲ್ಲವೇ?






Lakshmikanth Itnalare ‘grey tit ‘ hakkiya mariy kuritu bahal sanvedanasheelavagi niroopisiddeeri. Nimma Lekhana, putta hakkiya chitra, jotege nimma jeeva sanvedane ella seri atyuttam lekhan odid anubhav nannadayitu.
ಹನುಮಂತ ಅನಂತ ಪಾಟೀಲ್ ಜಿ, ತಮ್ಮ ಎಂದಿನ ಹೃತ್ಪೂರ್ವಕ ನುಡಿಗಳಿಗೆ ವಂದನೆಗಳು ಸರ್, ಪಕ್ಷಿ ಇನ್ನೂ ಸ್ನೇಕ್ ಯಲ್ಲಪ್ಪನ ಹತ್ತಿರ ಪಾಲನೆಯಲ್ಲಿದೆ. ಪಂಜರದಲ್ಲಿ ಇಡಬೇಡ ಎಂದು ಗಂಗಾಧರ ಹೇಳಿ ಹೋಗಿದ್ದಾರೆ. ಯಲ್ಲಪ್ಪನ ಮನೆಯಲ್ಲಿ ಮುಕ್ತವಾಗಿಯೇ ಇದೆ. ಫಸ್ಟ್ ಕ್ಲಾಸಾಗಿದೆ. ತುಂಬ ತುಂಟತನ ತೋರುತ್ತಿದೆ ಎಂದು ಯಲ್ಲಪ್ಪ ಹೇಳಿದರು. ಇನ್ನೂ ಎರಡು ಮೂರು ದಿನದಲ್ಲಿ ಹಾರಿಹೋಗಬಹುದು ಎಂದು ತಿಳಿಸಿದರು. ಗಂಗಾಧರರಿಗೆ ಹೇಳಬೇಕೆಂದರೆ ಆಗಲೇ ಅವರು ಹಿಮಾಲಯದತ್ತ ಹೊರಟುಬಿಟ್ಟಿದ್ದಾರೆ, ಪ್ರತಿವರ್ಷದಂತೆ…. ಇದು ಸತತ ಇಪ್ಪತ್ತಾರನೆಯ ವರ್ಷವಂತೆ….ಪ್ರತಿಸಾರೆಯೂ ಎರಡರಿಂದ ಮೂರು ತಿಂಗಳು…ನಮ್ಮ ನಡುವೆ ಎಂಥೆಂಥ ಸಾಧಕರಿದ್ದಾರಲ್ಲವೇ ಸರ್… ಅವರು ಅಂದು ಸಿಗದಿದ್ದರೆ ಮರಿಗೆ ಒಂದು ನೆಲೆ ಸಿಗುವುದು ದುರ್ಲಭವಿತ್ತು….ಅವರೆಲ್ಲರಿಗೆ, ಯಲ್ಲಪ್ಪನಿಗೆ ಮತ್ತೊಮ್ಮೆ ವಂದನೆಗಳನ್ನು ಸಲ್ಲಿಸುತ್ತೇನೆ….
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ನಿಮ್ಮ ಮರು ಪ್ರತಿಕ್ರಿಯೆ ಓದಿದೆ. ಗಂಗಾಧರ ರವರ ಹಿಮಾಲಯಕ್ಕೆ ಪ್ರತಿವರ್ಷ ಹೋಗಿ ಬರುವ ಸಾಧನೆಯ ಬಗೆಗೆ ಓದಿ ಸಂತಸವಾಯಿತು. ನಿಮ್ಮೆಲ್ಲರ ಕಾಳಜಿಯಿಂದ ಒಂದು ಹಕ್ಕಿಯ ಮರಿ ಒಂದು ನೆಲೆ ಕಂಡುಕೊಳ್ಳುವಂತಾಗಿರುವುದು ಸಂತಸ ತಂದಿದೆ. ಒಂದೊಳ್ಳೆಯ ಈ ಲೇಖನ ಬರುವುದಕ್ಕೆ ಕಾರಣರಾದ ಹಕ್ಕಿ ಮರಿ, ನೀವು, ಯಲ್ಲಪ್ಪ, ಗಂಗಾಧರ ಎಲ್ಲರಿಗೂ ವಂದನೆಗಳು.
Laksmimath Itnal has rendered a yoaman service to bird community and has made an achievement by saving one life of a bird. Congrats for the love of birds. Keep it up. I also congratulate Avadhi for its concern and interest in publishing such a human interest story.
ತಮ್ಮ ನುಡಿಗಳಿಗೆ ಮಾತು ಮೌನವಾಗಿ ವಂದಿಸಿತು ಅರುಣಕುಮಾರ್ ಜಿ.
ಗೆಳೆಯರೆ, ಇಂದು ಸಂಜೆ 4.30 ರ ಸುಮಾರು ಹಕ್ಕಿ ಮರಿ ಹಾರಿಹೋಯಿತು ಎಂದು ಸ್ನೇಕ್ ಯಲ್ಲಪ್ಪ ಫೋನ್ ಮಾಡಿ ತಿಳಿಸಿದರು. ಈ ಖುಷಿಯನ್ನೂ ತಮ್ಮೊಂದಿಗೆ ಹಂಚಿಕೊಳ್ಳೋಣವೆನ್ನಿಸಿತು. ಎಲ್ಲರಿಗೂ ಧನ್ಯವಾದಗಳು
ಎಷ್ಟು ಚೆನ್ನಾಗಿದೆ ಈ ಮರಿಹಕ್ಕಿ ಮತ್ತು ಈ ಬರವಣಿಗೆ…!
ಹೃದಯ ತುಂಬಿ ಬಂತು.
ಖಂಡಿತಾ ಈ ಹಕ್ಕಿ ಮಹಾರಾಜ್/ಮಹಾರಾಣಿಗೆ ಬದುಕುವ ಹಕ್ಕಿದೆ.
ಸಹೋದರಿ ಸುಧಾ ಚಿದಾನಂದಗೌಡ ರೆ, ತಮ್ಮ ಎರಡೇ ಲೈನುಗಳಲ್ಲಿ ಅದೆಷ್ಟು ಅಗಾಧ ಮೆಚ್ಚುಗೆ ಸುರಿದಿದೆ,.ಈ ಎಲ್ಲಾ ಮೆಚ್ಚುಗೆ ಸಂಬಂಧಿಸಿದ ಮಿತ್ರರಿಗೆ ವರ್ಗಾಯಿಸುವೆ. ಹಕ್ಕಿ ಈಗೆಲ್ಲೋ ಬಾನಾಡಿಯಾಗಿ ಹಾರುತ್ತಿದೆ.