ಚರ್ಚೆಗಾಗಿ 
ಜಿ ಎನ್ ನಾಗರಾಜ್
ಎಮ್ಮೆ ಭಾರತದ ಹೆಮ್ಮೆ , ಭಾರತೀಯರನ್ನು ಪೋಷಿಸಿದ ಪ್ರಾಣಿ.-
ಮಹಿಷಾಸುರನ ವಧೆ ಜರುಗಿದ್ದೆಂದು ವಿಜಯ ದಶಮಿಯನ್ನು ಆಚರಿಸುವ ಸಮಯದಲ್ಲಿ ಈ ಶೋಧ ನಿಮಗಾಗಿ-
ಮಾರಮ್ಮನ ಬಗ್ಗೆ , ಕೋಣ ಬಲಿಯ ಐತಿಹ್ಯದ ಬಗ್ಗೆ ನಾನು ವಿಸ್ತಾರ ಅಧ್ಯಯನ ಮಾಡುತ್ತಿದ್ದೇನೆ. ಈ ದಾರಿಯಲ್ಲಿ ತಿಳಿದ ಕೆಲ ಸತ್ಯಗಳು. ಇಡೀ ವಿಶ್ವದಲ್ಲಿ ಭಾರತದಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆ ಇರುವ ಪ್ರಾಣಿ ಎಮ್ಮೆ -ಕೋಣಗಳು. ಭಾರತದಲ್ಲಿಯೇ ಹುಟ್ಟಿ,ಇಲ್ಲಿಯೇ ಸಾಕು ಪ್ರಾಣಿಯಾಗಿ ಪಳಗಿಸಲ್ಪಟ್ಟ ಏಕ ಮಾತ್ರ ಪ್ರಾಣಿ ಎಮ್ಮೆ.
ಸುಮಾರು ಕ್ರಿ.ಪೂ 5,000 ವರ್ಷಗಳಷ್ಟು ಹಿಂದೆ ಹರಪ್ಪ ಮೊಹೆಂಜದಾರೋ ನಾಗರೀಕತೆಗಿಂತ ಮೊದಲೇ, ಆರ್ಯರು ಭಾರತ ಪ್ರವೇಶಿಸುವುದಕ್ಕೆ ಮೂರು ಸಾವಿರ ವರ್ಷಗಳ ಮೊದಲೆ ಇಲ್ಲಿನ ಜನ ಸಮುದಾಯಗಳಿಂದ ಪಳಗಿಸಲ್ಪಟ್ಟ ಪ್ರಾಣಿ. ಇಲ್ಲಿಂದ ಹರಪ್ಪಾ ನಾಗರೀಕತೆಯ ಸಮಯದಲ್ಲಿ ತುರ್ಕಿ, ಈಜಿಪ್ಟ್ ಗಳನ್ನು, ನಂತರ ಇಟಲಿ ಮೊದಲಾದ ಮೆಡಿಟರೇನಿಯನ್ ದೇಶಗಳಿಗೆ ತಲುಪಿತು.
ಇಂದು ಅನೇಕ ವಿದೇಶಿ ಹಸುಗಳ ಹಾಲಿನ ತಳಿಗಳು ದೇಶವನ್ನು ಆವರಿಸಿರುವಾಗಲೂ ದೇಶದ ಹಾಲಿನ ಉತ್ಪಾದನೆಯಲ್ಲಿ ಶೇ 55ರಷ್ಟು ಹಾಲಿನದ್ದೇ. ಪ್ರಸಿದ್ಧ ಅಮುಲ್ ಪ್ರಸಿದ್ಧವಾದದ್ದು ಎಮ್ಮೆಯ ಹಾಲಿನಿಂದ. ವಿದೇಶೀ ಹಾಲಿನ ತಳಿಗಳು ಬರುವ ಮೊದಲು ಹಾಲಿನ ಉತ್ಪನ್ನದಲ್ಲಿ ಎಮ್ಮೆಯ ಪಾಲು ಇನ್ನೆಷ್ಟಿರಬಹುದು? ಅರ್ಯರ ಜೊತೆಗೂ ಬಂದ ಹಸುವಿನ ತಳಿಗಳು ಭಾರತವನ್ನು ಪ್ರವೇಶಿಸುವ ಮೊದಲು?
ಹೀಗಾಗಿ ದೇಶದ ಜನರನ್ನು ಪೋಷಿಸಿರುವ ‘ಮಾತೆ’ ಎಂಬು ಪಟ್ಟ ನೀಡುವುದೆ ಅದರೆ ಎಮ್ಮೆಗೆ ಅದು ಸಲ್ಲತಕ್ಕದ್ದು. ದೇಶದ ಅನೇಕ ಹಸುವಿನ ತಳಿಗಳು ಹಾಲಿನ ತಳಿಗಳಲ್ಲ. ಹಾಲಿನ ಉತ್ಪಾದನೆ ಬಹಳ ಕಡಿಮೆ. ಕರ್ನಾಟಕದ ಸ್ಥಳೀಯ ತಳಿಗಳನ್ನೇ ನೋಡಿ-ಹಳ್ಳಿಕಾರ್, ಅಮೃತ ಮಹಲ್ ಗಳು ಎತ್ತಿನ ತಳಿಗಳು, ಸೈನ್ಯದ ತಳಿಗಳು. ಅವುಗಳಲ್ಲಿ ಹಾಲು ಕರೆಯುತ್ತಿದ್ದದ್ದೇ ಬಹಳ ಕಡಿಮೆ. ಕರೆದರೂ ಗಂಡುಕರುಗಳು ಮುಂದೆ ಎತ್ತಾಗಬೇಕೆಂದು ಅವುಗಳಿಗೇ ಹೆಚ್ಚು ಪಾಲು ಹಾಲು ಬಿಡುತ್ತಿದ್ದರು. ಆಗ ಮಕ್ಕಳನ್ನು ಸಾಕಿದ್ದೇ ಎಮ್ಮೆಯ ಹಾಲು.
ಇನ್ನು ಬೆಣ್ಣೆ , ತುಪ್ಪ ಎಮ್ಮೆಯಲ್ಲಿ ಹಸುವಿನದಕ್ಕಿಂತ ಎರಡು -ಮೂರು ಪಟ್ಟು ಹೆಚ್ಚು. ಎಮ್ಮೆ ಅತಿ ಕಳಪೆ ಆಹಾರವನ್ನು ತಿಂದು ಕಡಿಮೆ ರೋಗ ಪೀಡಿತವಾಗಿರುವುದರಿಂದ ಬಡವರಿಗಂತೂ ಅತಿ ಅನುಕೂಲಕರ ಪ್ರಾಣಿ. ಉದ್ದಕ್ಕೂ ನಗರಗಳ ಮೇಲ್ಜಾತಿ ಶ್ರೀಮಂತರಿಗೆ ಮಾತ್ರ ಹಾಲುಣಿಸಿದ ಹಸು ಮಾತ್ರ ಮಾತೆ ಎಮ್ಮೆಯೇನು ಕೋತಿಯೇ..
ಜೊತೆಗೆ ಯಾವುದೇ ಕೃಷಿ, ಪಶು ಸಂಗೋಪನೆ ಆರಂಭವಾಗುವ ಮೊದಲು ತನ್ನ ಮಾಂಸದಿಂದ ಭಾರತದ ಅಂದಿನ ಜನರನ್ನು ಪೊರೆದದ್ದು ಎಮ್ಮೆ, ಕೋಣಗಳೇ. ಭಾರತದಲ್ಲಿ ಆರಂಭವಾದ ಭತ್ತದ ಕೃಷಿಯ ಉಳುಮೆಗೆ ಮೊದಲು ಒದಗಿದ್ದೂ ಕೋಣವೇ.





0 Comments