ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಪ್ಪತ್ತೈದರ ಗಂಡನೇ ಗುರೂಜಿಗಿಂತಾ ಯುವಕರಾಗಿ ಕಂಡರು!’ – ಶಾಂತಾ ನಾಗರಾಜ್

ಪರಧ್ಯಾನ

ಶಾಂತಾ ನಾಗರಾಜ್

ಈ ಆಪ್ತ ಗೆಳತಿಯರೇ ಹೀಗೆ. ಎಷ್ಟು ಪ್ರೀತಿ ಪಡುತ್ತಾರೋ ಅಷ್ಟೇ ಹಕ್ಕಿನಿಂದ ಇಕ್ಕಟ್ಟಿಗೂ ಸಿಲುಕಿಸುತ್ತಾರೆ. ನನ್ನ ಗೆಳತಿ ಮಾಡಿದ್ದು ಹೀಗೇ. ಅವಳು ಮೊನ್ನೆ ಒಂದು ಹುಕುಂ ಹೊರಡಿಸಿದಳು. ” ನಾನು ಹತ್ತು ದಿನಗಳಿಂದ ಯೋಗಕ್ಲಾಸಿಗೆ ಹೋಗುತ್ತಿದ್ದೇನೆ. ನೀನೂ ಬಾ ಎಂದರೆ ಬರಲಿಲ್ಲ. ನಾಳೆ ಕೊನೆ ದಿನ ಅವರು ಧ್ಯಾನದ ಮಹತ್ವ ಮತ್ತು ಧ್ಯಾನ ಮಾಡುವ ವಿಧಾನದ ಬಗ್ಗೆ ಪ್ರವಚನ ಮಾಡಲಿದ್ದಾರೆ. ನೀನೂ ಬರತಕ್ಕದ್ದು”. ಅವಳು ನನಗಿಂತಾ ಹತ್ತು ವರ್ಷ ಚಿಕ್ಕವಳು. ಅದು ಹೇಗೋ ಮೂವತ್ತು ವರ್ಷಗಳಿಂದ ಆಪ್ತ ಗೆಳತಿಯಾಗಿ ಹೋಗಿದ್ದಾಳೆ. ನಮಗಿಂತಾ ಚಿಕ್ಕವರು ಹೀಗೆಲ್ಲಾ ಹಠ ಹಿಡಿದರೆ ಅವರನ್ನು ಬದಲಾಯಿಸುವುದಕ್ಕಾಗುವುದಿಲ್ಲ ಎನ್ನುವುದು ನನ್ನ ಅನುಭವದ ಮಾತು. ಆದರೂ ಈ ನನ್ನ ಎಪ್ಪತ್ತನೇ ವಯಸ್ಸಿನಲ್ಲೂ ’ಬೀಸುವ ದೊಣ್ಣೆ ತಪ್ಪಿದರೆ ಸಾವಿರವರ್ಷ ಆಯಸ್ಸು’ ಎನ್ನುವ ದುರಾಸೆ. ಅದಕ್ಕೇ ಅವಳಿಗೆ ಹೇಳಿದೆ ” ನೋಡು ಬದುಕಿನ ಎಲ್ಲಾ ಆಸೆ ಆಕಾಂಕ್ಷೆಗಳು ಮುಗಿದು ತೆಪ್ಪಗೆ ಕೂಡುವ ನೆಲೆಗೆ ಬಂದಿದ್ದೇವೆ. ಮಕ್ಕಳು ಮದುವೆಯಾಗಿ ತಮ್ಮತಮ್ಮ ಮಕ್ಕಳ ಜೊತೆ ತಮ್ಮ ಬದುಕನ್ನು ಕಂಡುಕೊಂಡು ನಮಗೆ ತೊಂದರೆ ಕೊಡದ ಹಾಗೆ, ನಮ್ಮಿಂದ ಅವರೂ ತೊಂದರೆ ಅನುಭವಿಸದ ಹಾಗೆ ಸ್ವಾನುಭವಗಳ ವಲಯದಲ್ಲಿ ಸುಖವಾಗಿಯೇ ಇದ್ದಾರೆ.
ಮದುವೆಯಾದ ನಲವತ್ತೊಂಬತ್ತು ವರ್ಷಗಳು ನನ್ನನ್ನು ರಿಪೇರಿ ಮಾಡಬೇಕೆಂದು ನನ್ನ ಗಂಡನೂ, ಅವರನ್ನು ರಿಪೇರಿ ಮಾಡಿಯೇ ಸಿದ್ಧ ಎಂದು ನಾನೂ ವಾಗ್ಬಾಣ, ಕಣ್ಬಾಣ, ಹುಸಿಕೋಪದ ಬಾಣ, ಮುಸಿಮುಸಿ ಅಳುವಿನ ಬಾಣ ಎಲ್ಲವನ್ನೂ ಬಿಟ್ಟು ಬಿಟ್ಟೂ, ಯಾವುದೂ ಗಮ್ಯಸ್ಥಾನವನ್ನು ತಲುಪದೇ ನೆಲಕಚ್ಚಿದುದರ ಫಲಿತಾಂಶವಾಗಿ, ಇನ್ನು ಈ ಐವತ್ತನೇ ವರ್ಷದ ದಾಂಪತ್ಯದ ಬದುಕಿನಲ್ಲಿ ’ಯಾರು ಯಾರನ್ನೂ ರಿಪೇರಿ ಮಾಡಲು ಸಾಧ್ಯವಿಲ್ಲ’ ಎನ್ನುವ ಸತ್ಯ ಯಾವ ಬೋಧಿವೃಕ್ಷದ ಅಗತ್ಯವೂ ಬೀಳದೇ ನಮ್ಮದೇ ಮನೆಯ ಸಿಮೆಂಟ್ ಕಬ್ಬಿಣಗಳಿಂದ ರಚಿತವಾದ ತಾರಸಿಯ ಕೆಳಗೇ ಜ್ಞಾನೋದಯವಾಗಿ, ಅವರು ಏನು ಮಾಡಿದರೂ ನಾನೂ, ನಾನು ಏನು ಮಾಡಿದರೂ ಅವರೂ ಕಿಸಿಕಿಸಿ ನಗುತ್ತಾ ಶಾಂತಿ ಕಂಡುಕೊಂಡಿದ್ದೇವೆ. ಮಗ ತಂದುಕೊಟ್ಟ ಗೋಡೆಯ ಎಲ್.ಸಿ.ಡಿ ಟಿ.ವಿಯಲ್ಲಿ ನನ್ನ ಗಂಡ ಮುಳುಗಿ ಧ್ಯಾನಸ್ಥರಾಗುತ್ತಾ, ಎಷ್ಟೋ ದಿನಗಳಿಂದ ಓದಬೇಕೆಂದು ಸಂಗ್ರಹಿಸಿಟ್ಟುಕೊಂಡಿದ್ದ ಪುಸ್ತಕಗಳ ಓದಿನಲ್ಲಿ ಮುಳುಗಿ ನಾನೂ ಧ್ಯಾನಸ್ಥೆಯಾಗುತ್ತಾ, ನಾವಷ್ಟೇ ಅಲ್ಲ ಮನೆಯನ್ನೂ ಮತ್ತು ಅಕ್ಕಪಕ್ಕದವರ ಮನೆಗಳನ್ನೂ ಈಗ ಸಾಕಷ್ಟು ಪ್ರಶಾಂತವಾಗಿಯೇ ಇಟ್ಟುಕೊಂಡಿದ್ದೇವೆ. ನನಗಿನ್ಯಾಕೆ ಬೇಕು ಮತ್ತೆ ಹೊಸ ಧ್ಯಾನ?” ಎಂದೆ.
ಉಹೂಂ ಇಷ್ಟಕ್ಕೆಲ್ಲಾ ಬಗ್ಗುವ ಆಸಾಮಿಯೇ ಅವಳು? “ಉಹೂಂ ನಥಿಂಗ್ ಡೂಯಿಂಗ್ ಬರಬೇಕು ಅಂದರೆ ಬರಬೇಕು ಅಷ್ಟೆ. ಇಂಥಾ ನೆವಗಳೆಲ್ಲಾ ನನ್ನ ಹತ್ತಿರ ನಡೆಯಲ್ಲ” ಎಂದಳು . ಮರುದಿನ ಮರುಮಾತಾಡದೇ ಕುರಿಯಂತೆ ತಲೆಬಗ್ಗಿಸಿ ಅವಳ ಹಿಂದೆ ನಡೆಯುವುದೊಂದೇ ನನಗಿದ್ದ ಮಾರ್ಗ!! ಅಲ್ಲದೇ ಈ ಹತ್ತು ದಿನಗಳಿಂದ ಎದುರಿಗೆ ಸಿಕ್ಕಾಗಲೂ, ಫೋನಿಸಿದಾಗಲೂ ಈ ಹೊಸ ಗುರೂಜಿಯ ಬಗ್ಗೆ ಅವಳು ಸಿಕ್ಕಾಪಟ್ಟೆ ಕೊರೆಯುತ್ತಿದುದರ ಪರಿಣಾಮವಾಗಿ ನನಗೂ ಒಳಗೆಲ್ಲೋ ಈ ಗುರೂಜಿಯನ್ನು ನೋಡಿಯೇ ಬಿಡಬೇಕೆಂಬ ಹಂಬಲ ಬಲವಾಗಿದ್ದರಿಂದಲೋ ಏನೋ ಮರುದಿನ ಅವಳ ಜೊತೆ ಹೆಜ್ಜೆಹಾಕಿದೆ.

ಮಹಡಿಯ ಮೇಲಿನ ದೊಡ್ಡ ಹಾಲಿನ ಒಳಗೆ ನಾವು ಅಡಿಯಿಡುತ್ತಿದ್ದಂತೇ ನೇರವಾಗಿ ಎದುರಿಗೇ ಸೋಫಾಕಿಂತಾ ಎತ್ತರವಾದ, ಕುರ್ಚಿಗಿಂತಾ ಅಗಲವಾದ ಒಂದು ಪೀಠ ಕಾಣಿಸಿತು. ಅದರ ಮೇಲೆ ಜರಿಯ ನೇಯ್ಗೆಯುಳ್ಳ ಕೆಂಪು ಶಾಲನ್ನು ಹೊದೆಸಲಾಗಿತ್ತು. ಅಂಥಾ ಭವ್ಯವಾದ ಪೀಠದಲ್ಲಿ ಯಾವದೋ ದೇವರ ಮೂರ್ತಿಯನ್ನೋ, ಚಿತ್ರವನ್ನೋ ಇಡುತ್ತಾರೆಂದುಕೊಂಡೆ. ಆ ಪೀಠದ ಮುಂದೆ ಜಮಖಾನೆಗಳನ್ನು ಹಾಸಲಾಗಿದ್ದು, ಸುಮಾರು ಇಪ್ಪತ್ತೈದು ಮೂವತ್ತು ಜನ, ತರುಣರಿಂದ ತೀರಾ ಮುದುಕರವರೆಗೂ ವಿವಿಧವಯೋಮಾನದವರು ಪದ್ಮಾಸನ ಹಾಕಿ ಕುಳಿತು ಕಣ್ಮುಚ್ಚಿ ಆಗಲೇ ಧ್ಯಾನಸ್ಥರಾಗಿದ್ದರು. ನಾವು ಪ್ರವೇಶ ಮಾಡಿದ ಬಾಗಿಲಿನ ಅಕ್ಕಪಕ್ಕದಲ್ಲಿ ಗೋಡೆಗೆ ಒತ್ತಿದಂತೆ ಸಾಲಾಗಿ ಕುರ್ಚಿಗಳನ್ನು ಹಾಕಿದ್ದರು. ನಾನೇನಾದರೂ ಕೆಳಗೆ ಕುಳಿತರೆ ಪ್ರವಚನ, ಧ್ಯಾನ ಎಲ್ಲಮುಗಿಯುವ ಹೊತ್ತಿಗೆ ನನ್ನ ಕಾಲುಗಳೆರಡರಲ್ಲೂ ಜೋಮು ಆವರಿಸಿ ಮರಗಟ್ಟಿಕೊಂಡು “ದಯವಿಟ್ಟು ನನ್ನನ್ನು ಎತ್ತಿನಿಲ್ಲಿಸಿ” ಎಂದು ಸುತ್ತಲಿದ್ದ ಜನರನ್ನು ಬೇಡಿಕೊಳ್ಳಬೇಕಾದ ಪ್ರಸಂಗ ಬರಬಹುದೆಂದು ಹೆದರಿ ಗಂಭೀರವಾಗಿ ಒಂದು ಖುರ್ಚಿಯ ಮೇಲೆ ಕುಳಿತುಬಿಟ್ಟೆ.
ನನ್ನ ಗೆಳತಿಗೆ ಸ್ವಲ್ಪ ಅಸಮಾಧಾನವಾದದ್ದು ಮುಖದಲ್ಲಿ ಪ್ರಕಟವಾಯಿತಾದರೂ ಮಾತಾಡದೇ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತಳು. ಕೆಲವೇ ಕ್ಷಣಗಳಲ್ಲಿ ನಮ್ಮ ಅಕ್ಕಪಕ್ಕದ ಕುರ್ಚಿಗಳೆಲ್ಲವೂ ವೃದ್ಧಾವಸ್ಥೆಗೆ ಕಾಲಿಟ್ಟ, ಕಾಲಿಡುತ್ತಿರುವ ಜನರಿಂದ ಸದ್ದಿಲ್ಲದೇ ತುಂಬಿಕೊಂಡವು. ಸದಾ ಎಡಬಿಡದೇ ವಟಗುಟ್ಟುವ ನನ್ನ ಈ ಮಹಾನ್ ಗೆಳತಿ ತುಟಿಯನ್ನು ಹೊಲೆದುಕೊಂಡಂಥವಳಾಗಿ ಮೌನಧಾರಿಯಾಗಿರುವುದನ್ನು ಕಂಡು ’ಭೇಷ್ ಯೋಗವೇ!! ಶಬ್ಬಾಷ್ ಧ್ಯಾನವೇ’ ಎಂದು ಮನದೊಳಗೇ ಖುಷಿ ಪಟ್ಟೆ.
ಗುರೂಜಿಯ ಆಗಮನವಾಯಿತು. ಎಲ್ಲರೂ ಧಡಬಡಿಸಿ ಎದ್ದುನಿಂತರು. ನನ್ನ ಮುಂದೆ ನೆಲದಲ್ಲಿ ಕುಳಿತಿದ್ದ ಆಜಾನುಬಾಹು ಮಾನವ ಎದ್ದುನಿಂತಾಗ, ಆತನ ಆರೂವರೆ ಅಡಿ ಎತ್ತರದ ಅದಕ್ಕೆ ತಕ್ಕನಾದ ದಪ್ಪದ ದೇಹ ನನ್ನ ಮುಂದೆ ದೊಡ್ಡ ಗೋಡೆಯಂತೆ ಆವರಿಸಿತಾದ್ದರಿಂದ ನಾನು ಎದ್ದು ನಿಲ್ಲದಿದ್ದರೂ ಯಾರಿಗೂ ಗೊತ್ತೇ ಆಗುವುದಿಲ್ಲವೆನಿಸಿ ಸುಮ್ಮನೇ ಕುಳಿತೇ ಬಿಟ್ಟೆ. ಎಲ್ಲರೂ ಸ್ವಸ್ಥಾನಕ್ಕೆ ಸೇರಿ ಮೊದಲಿದ್ದ ಸ್ಥಿತಿಗೇ ಬಂದರು. ನಾನು ದೇವರನ್ನಿಡಬಹುದೆಂದು ಭಾವಿಸಿದ್ದ ಪೀಠದ ಮೇಲೆ ಗುರೂಜಿ ಆಸೀನರಾಗಿದ್ದರು. ಸುಮಾರು ನಲವತ್ತು, ನಲವತ್ತೈದರ ಪ್ರಾಯ, ಎಷ್ಟೋ ವರ್ಷಗಳಿಂದ ಯೋಗ ಮಾಡುತ್ತಿದ್ದರೂ ದಷ್ಟಪುಷ್ಟವಾದ, ತುಸು ದಪ್ಪವೇ ಎನ್ನಬಹುದಾದ ಗಾತ್ರ. ಬೆಳ್ಳನೆಯ ಮುಖದಲ್ಲಿ ಕಪ್ಪುಬಿಳುಪು ಕೂದಲಿನ ಕುರುಚಲು ಗಡ್ಡ, ಹಣೆಯಲ್ಲಿ ಢಾಳಾದ ದೊಡ್ಡ ಕುಂಕುಮ, ಆದರೆ ’ಚಂಚಲ’ ಎನ್ನುವಷ್ಟು ಅತ್ತಿಂದಿತ್ತ ಚಲಿಸುವ ಕಣ್ಣುಗಳು!!
” ಯೋಗದ ಬಗ್ಗೆ ಈ ಹತ್ತು ದಿನಗಳಿಂದ ಸಾಕಷ್ಟು ತಿಳಿದುಕೊಂಡಿದ್ದಾಯಿತು ಇಂದು ಧ್ಯಾನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ” ಎಂದು ಆತ ತಮ್ಮ ಪ್ರವಚನವನ್ನು ಪ್ರಾರಂಭ ಮಾಡಿದರು. ಆತ್ಮೀಯರೇ ಅಂತಿಲ್ಲ, ಸಹೋದರ ಸಹೋದರಿಯರೇ ಅಂತಲೂ ಇಲ್ಲ ಹೀಗೆ ಯಾವ ಒಕ್ಕಣೆಯೂ ಇಲ್ಲದೇ ನೇರವಾಗಿ ಮಾತು ಶುರುವಾದದ್ದು ವಿಚಿತ್ರವೆನಿಸಿತು. ಇರಲಿ ಹತ್ತುದಿನವಾಯಿತಲ್ಲ? ಅವೆಲ್ಲ ಮೊದಲದಿನ ಹೇಳಿರಬಹುದು ಎಂದುಕೊಂಡು ಹಾಗೆ ಶುರುವಾದ ವಿಚಿತ್ರವನ್ನು ಪಕ್ಕಕ್ಕೆ ಸರಿಸಿ ಮುಂದಿನ ಮಾತುಗಳಿಗೆ ಕಿವಿಯಾದೆ. ” ಎಲ್ಲರೂ ನನ್ನನ್ನು ಕೇಳುತ್ತಾರೆ ಗುರೂಜಿ ಧ್ಯಾನವನ್ನು ಯಾಕೆ ಮಾಡಬೇಕು? ಗುರೂಜಿ ಧ್ಯಾನವನ್ನು ಹೇಗೆ ಮಾಡಬೇಕು? ಗುರೂಜಿ ಧ್ಯಾನಕ್ಕೆ ತಕ್ಕ ಸಮಯ ಯಾವುದು?” ಎನ್ನುತ್ತಾ ಆತ ತಮ್ಮ ಅನುಭವವನ್ನು ಹಂಚಿಕೊಳ್ಳ ತೊಡಗಿದರು.

ಆತನ ಒಂದು ವಾಕ್ಯದಲ್ಲಿ ಮೂರು ನಾಲ್ಕು ಬಾರಿ ’ಗುರೂಜಿ’ ಬರುತ್ತಿದುದನ್ನು ಕೇಳಿ ನನಗೆ ಗೊಂದಲ ಶುರುವಾಯಿತು. ಇಲ್ಲಿರುವವರ ಮನಸ್ಸಿನಲ್ಲಿ ತಾವು ’ಗುರೂಜಿ’ ಎನ್ನುವುದನ್ನು ಸ್ಥಾಪಿಸಲು ಹೀಗೆ ’ಗುರೂಜಿ’ ಪದ ಜಪ ಮಾಡುತ್ತಿದ್ದಾರೋ? ಅಥವಾ ಅವರಿಗೇ ತಾವು ’ಗುರೂಜಿ’ ಹೌದೋ ಅಲ್ಲವೋ ಎನ್ನುವ ಅನುಮಾನವೋ? ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲು ಈ ಗೊಂದಲವನ್ನೂ ಪಕ್ಕಕ್ಕಿಟ್ಟೆ. ಹೀಗೇ ನನ್ನ ಮನಸ್ಸಿನಲ್ಲಿ ಅನುಮಾನಗಳೂ, ಗೊಂದಲಗಳೂ ಹುಟ್ಟುತ್ತಾ, ಅವುಗಳನ್ನು ಹೀಗೆ ಪಕ್ಕಕ್ಕಿಡುತ್ತಾ ಹೋದರೆ ನನ್ನ ಪಕ್ಕ ಒಂದು ಪುಟ್ಟ ಬೆಟ್ಟವೇ ಹುಟ್ಟಿಬಿಡುತ್ತದಲ್ಲಾ ಎನಿಸಿ ಕಿಸಕ್ಕನೆ ನಗು ಬಂತು. ಗೆಳತಿ ’ಉಶ್’ ಎಂದಳು. ಗುರೂಜಿಯ ಮಾತು ಮುಂದುವರೆದಿತ್ತು. ” ಈ ಒಂದು ಗಂಟೆಯಲ್ಲಿ ಮಹತ್ತರವಾದ ಧ್ಯಾನವನ್ನು ಮಾಡಿಸಲು ಸಾಧ್ಯವಿಲ್ಲ, ಚುಟುಕಾಗಿ ಮಾಡಿಸಿ ಅದರ ಮಹತ್ವವನ್ನು ಮಾತ್ರ ಹೇಳುತ್ತೇನೆ. ಈಗ ಎಲ್ಲರೂ ನಿಮ್ಮ ತೋರು ಬೆರಳು ಮತ್ತು ಹೆಬ್ಬೆರಳನ್ನು ಸೇರಿಸಿ ಗುಂಡಾಗಿ ಹಿಡಿದು, ಅಂಗೈಯನ್ನು ಮೇಲ್ಮುಖವಾಗಿಸಿ,ತೊಡೆಯಮೇಲಿಟ್ಟುಕೊಂಡು ಕಣ್ಮುಚ್ಚಿ” ಎಂದಪ್ಪಣೆ ಕೊಡಿಸಿದರು. ಎಲ್ಲರೂ ಹಾಗೇ ಮಾಡಿದೆವು.
“ಈಗ ನಾನು ಹೇಳಿದಂತೆ ಮಾಡುತ್ತಾ ಹೋಗಿ. ಮೊದಲು ನಿಮ್ಮ ಮನಸ್ಸುಗಳನ್ನು ಶುಭ್ರಗೊಳಿಸಿ” ಅಯ್ಯೋ ಹಣೆಬರಹವೇ? ನನ್ನ ಮನಸ್ಸಿನಲ್ಲಿ ಯಾವ ಕೊಳೆಯೂ ಇಲ್ಲವಲ್ಲ? ಈಗ ಶುಭ್ರಗೊಳಿಸೋದು ಹೇಗೆ? ಮತ್ತೆ ಗೊಂದಲ ಮತ್ತೆ ಪ್ರಶ್ನೆ! ಪಕ್ಕಕ್ಕೆ ತಳ್ಳಿ ಬೆಟ್ಟವನ್ನು ಗಟ್ಟಿಮಾಡಿದೆ. ” ಈಗ ನಿಮ್ಮ ಮನಸ್ಸಿನಿಂದ ಮೂಗಿನ ಕೆಳಭಾಗದಲ್ಲಿ ತುಟಿಗೆ ಸೇರುವ ಗೋಡೆಯನ್ನು ದರ್ಶಿಸಿಕೊಳ್ಳಿ” ಭಗವಂತಾ ಇದೆಂಥಾ ಕಷ್ಟ ಕೊಟ್ಟೆಯಪ್ಪಾ? ಮೆಲ್ಲನೆ ನಿಟ್ಟುಸಿರೊಂದನ್ನು ಹೊರಹಾಕಿದೆ. ನನ್ನ ಮನಸ್ಸು ಇದ್ದಕ್ಕಿದ್ದಂತೆ ಬಾಲ್ಯಕ್ಕೆ ಜಿಗಿಯಿತು. ನನ್ನಕ್ಕನಿಗೆ ಮತ್ತು ನನ್ನ ತಮ್ಮನಿಗೆ ಮೂಗಿನ ತುದಿ ಚೂಪಾಗಿದ್ದು ನನ್ನ ಮೂಗಿನ ತುದಿ ಮಾತ್ರ ಸ್ವಲ್ಪ ಗುಂಡಗೆ ದಪ್ಪಗೆ ಇದೆ. ಇದು ನನ್ನ ಕೀಟಲೆ ಗುಣದ ಅಪ್ಪನಿಗೆ ಸದಾ ಆಹಾರವಾಗುತ್ತಿತ್ತು.
’ಆಲೂಗಡ್ಡೆ ಮೂಗವಳೋ… ಚೋಟುದ್ದ ಜಡೆಯವಳೋ… ಅಮಾವಾಸ್ಯೆ ಹೆಣ್ಣಾದಳೋ’ ಎಂದು ಸಿನಿಮಾ ಹಾಡೊಂದರ ಧಾಟಿಯಲ್ಲಿ ಹಾಡುತ್ತಾ ನನ್ನ ಚೋಟು ಜಡೆಯನ್ನು ಮೆಲ್ಲಗೆ ಎಳೆಯುತ್ತಾ ನನ್ನ ಬಣ್ಣವನ್ನೂ ಮೂಗನ್ನೂ ಒಟ್ಟಿಗೇ ಗೇಲಿ ಮಾಡುತ್ತಿದ್ದರು. ನಾನು ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡಾಗಲೆಲ್ಲಾ ಈ ಆಲೂಗಡ್ಡೆ ಮೂಗಿನ ತುದಿಯೇ ಕಾಣುತ್ತದೆಯೇ ವಿನಃ ಅದು ಮುಖಕ್ಕೆ ಸೇರಿಕೊಳ್ಳುವ ಭಾಗವನ್ನು ನಾನೆಂದೂ ನೋಡೇ ಇಲ್ಲ. ನನ್ನದೇ ದೇಹದಲ್ಲಿ ಹಾಗೊಂದು ’ಗೋಡೆ’ ಇದೆ ಎನ್ನುವ ವಿಚಾರದತ್ತಲೂ ನಾನು ಗಮನವನ್ನೇ ಹರಿಸಿಲ್ಲ. ಚಿಕ್ಕಂದಿನಲ್ಲಿ ನನಗೆ ನೆಗಡಿ ಬಹಳ. ಅಮ್ಮ ಯಾವಾಗಲೂ ಒಂದು ಕರ್ಚೀಫ್ ಇಟ್ಟುಕೊಂಡು ಹೋಗುತ್ತಾ ಬರುತ್ತಾ ಇರುವಾಗಲೆಲ್ಲಾ ನನ್ನ ಮೂಗನ್ನೇ ಗಮನಿಸುತ್ತಾ, ಅದರಲ್ಲಿ ಸ್ವಲ್ಪದ್ರವ ಕಂಡರೂ ಸಾಕು ಬಲವಾಗಿ ಒರೆಸುತ್ತಿದ್ದಳು. ಆಗ ಕರ್ಚೀಫಿನ ಜೊತೆ ನನ್ನ ಮೂಗನ್ನೂ ಎಳೆದಂತಾಗಿ ’ಅಯ್ಯೋ ನನ್ನ ಮೂಗೂ’ ಎಂದು ಅರಚಿಕೊಳ್ಳುತ್ತಿದ್ದೆನೇ ವಿನಃ ’ಅಯ್ಯೋ ನನ್ನ ಮೂಗಿನ ಗೋಡೇ’ ಎಂದೇನೂ ಹೇಳುತ್ತಿರಲಿಲ್ಲ. ಹೀಗೇ ನನ್ನಲ್ಲಿ ಏಳುತ್ತಿದ್ದ ತರ್ಕ ವಿತರ್ಕಗಳನ್ನು ಮತ್ತೆ ಗಂಟುಕಟ್ಟಿ ಪಕ್ಕಕ್ಕಿಟ್ಟು, ಗುರೂಜಿಯ ಕಡೆ ಕಿವಿ ತಿರುಗಿಸಿದೆ.
ಗುರೂಜಿ ಹೇಳುತ್ತಿದ್ದರು ” ನಿಮ್ಮ ನೆತ್ತಿಯ ಮೇಲ್ಭಾಗದಲ್ಲಿ ಒಂದು ಗೇಣು ಅಂತರದಲ್ಲಿ ನಿಮ್ಮ ಮನಸ್ಸನ್ನು ನಿಲ್ಲಿಸಿಕೊಳ್ಳಿ” ಆಯಿತು ನಿಲ್ಲಿಸಿಕೊಂಡೆ. ” ಈಗ ಕಲ್ಪಿಸಿಕೊಳ್ಳಿ ನಿಮ್ಮ ನೆತ್ತಿಯ ರಂಧ್ರದಿಂದ ಒಂದು ಟಾರ್ಚ್ ಬೆಳಕಿನಲ್ಲಿ ನಿಮ್ಮ ಇಡೀ ಶರೀರದ ಒಳಗನ್ನು ದರ್ಶಿಸುತ್ತಿದ್ದೀರಿ” ಬಂತಲ್ಲಾ ಮತ್ತೆ ಪೀಕಲಾಟ? ಟಾರ್ಚ್ ಬೆಳಕಲ್ಲಿ ಶರೀರದ ಒಳಗನ್ನು ದರ್ಶಿಸಿಕೊಳ್ಳಿ ಎಂದರೆ ನಮ್ಮ ಶರೀರ ಏನು ಖಾಲಿ ಮನೇನೇ? ಪ್ರತಿವರ್ಷ ನಮ್ಮ ಸಂಘಟನೆಯಲ್ಲಿ ’ಕೌನ್ಸಿಲಿಂಗ್ ಕೋರ್ಸ್’ ತರಗತಿಗಳನ್ನು ನಡೆಸುತ್ತೇವೆ. ಮೊದಲ ತರಗತಿಯೇ ಡಾ. ಸಿ.ಆರ್. ಚಂದ್ರಶೇಖರ್ ಅವರದು. ಅವರು ತರಗತಿಗೆ ಬರುವಾಗಲೇ, ಯಾರೋ ಪಾಪ ಸತ್ತ ಮೇಲೂ ಚಿರಸ್ಥಾಯಿಯಾಗಿ ಉಳಿಸಿದ, ಅರ್ಧಮೆದುಳಿರುವ ಪಾರದರ್ಶಕ ಪ್ಲಾಸ್ಟಿಕ್ ಪೆಟ್ಟಿಗೆಯನ್ನು ತಂದು ತೋರಿಸುತ್ತಾರೆ. ನಾವೂ ಮೆಡಿಕಲ್ ಸ್ಟೂಡೆಂಟ್ಸ್ ರೀತಿ ಅದನ್ನು ಕೈಯಲ್ಲಿ ಹಿಡಿದು ನೋಡುತ್ತೇವೆ. ಅದರ ತೂಕ ಆಕಾರ ನೋಡಿ ನೋಡಿ ಬೆರಗಾಗುತ್ತೇವೆ.
’ನಿಮ್ಮ ತಲೆಯಲ್ಲೂ ಇಂಥದೇ ಕೆಜಿಗಟ್ಟಲೇ ತೂಗುವ ಮೆದುಳಿದೆ’ ಎಂದು ಡಾಕ್ಟರ್ ಗೇಲಿ ಮಾಡುತ್ತಾರೆ! ಈಗ ಈ ಮಹಾನುಭಾವ ಹೇಳುತ್ತಿದ್ದಾರೆ ಟಾರ್ಚ್ ಬಿಟ್ಟುಕೊಂಡು ದೇಹದ ಒಳಗನ್ನು ದರ್ಶಿಸಬೇಕಂತೆ!! ಏನು ನೋಡುವುದು ಮಣ್ಣು? ಕೆಜಿಗಟ್ಟಲೇ ತೂಕದ ಮೆದುಳು ನೆತ್ತಿಯ ಹತ್ತಿರವೇ ಕೂತಿದೆಯಲ್ಲ? ಈ ನನ್ನ ಪ್ರಶ್ನೆಗಳು ಉತ್ತರದ ಹುಡುಕಾಟಗಳು ನಡೆಯುತ್ತಿದ್ದಂತೆ ಗುರೂಜಿಯವರು ಬೆನ್ನಿನ ವಿಚಾರಕ್ಕೆ ಬಂದು ನಿಂತಿದ್ದರು!! ” ಈಗ ನಿಮ್ಮ ಬೆನ್ನಿನ ಕೆಳಭಾಗದ ಒಂದೊಂದೇ ಮೂಳೆಯನ್ನು ಮನದಲ್ಲೇ ದರ್ಶಿಸುತ್ತಾ, ಸ್ಪರ್ಶಿಸುತ್ತಾ ಹೋಗಿ” ಎಂದಪ್ಪಣೆಕೊಡಿಸಿದರು. ಆ ಹೊತ್ತಿಗೆ ಕುರ್ಚಿಯ ಬೆನ್ನಿಗೆ ನನ್ನ ಬೆನ್ನನ್ನು ಆನಿಸದೇ ಬಹಳ ಹೊತ್ತಿನಿಂದ ನೆಟ್ಟಗೆ ಕುಳಿತಿದ್ದರ ಪರಿಣಾಮವಾಗಿ ಬೆನ್ನಿನ ಮೂಳೆಗಳು ಒಂದೊಂದೇ ಕುಯ್ಯೋಮರ್ರೋ ಎಂದು ಕಿರುಗುಟ್ಟಲು ಪ್ರಾರಂಭಿಸಿದ್ದವು. ಯಾವ ದರ್ಶನವೂ ಬೇಡ, ಯಾವ ಸ್ಪರ್ಶವೂ ಬೇಡ ಸುಮ್ಮನೇ ಮನೆಗೆ ನಡಿ ಎಂದು ಬುದ್ಧಿ ಮೊಂಡು ಹಿಡಿಯಲು ತೊಡಗಿತ್ತು. ಇನ್ನೂ ಒಂದಿಷ್ಟು ಇಂಥದೇ ಆಜ್~ಝೆಗಳನ್ನು ದಯಪಾಲಿಸಿ ಗುರೂಜಿ ಧ್ಯಾನವನ್ನು ಮುಕ್ತಾಯ ಮಾಡಿದರು. ’ಸಧ್ಯ ಬಡಪಾಯಿ ಬದುಕಿಕೊಂಡೆ’ ಎಂದು ನಿಟ್ಟುಸಿರಿಟ್ಟೆ.
ಇದಾದ ನಂತರ ಗುರೂಜಿಯ ಶಿಷ್ಯರು ನಮಗೆಲ್ಲಾ ಒಂದೊಂದು ಬುಕ್‍ಲೆಟ್ ಕೊಟ್ಟು ಹೋದರು. ಅದರಲ್ಲಿ ಗುರೂಜಿ ವಿವಿಧ ದೇಶಗಳಲ್ಲಿ ಮಾಡಿದ ಯೋಗಶಿಬಿರಗಳ ಛಾಯಾಚಿತ್ರಗಳೂ, ವಿವರಣೆಗಳೂ ಇಂಗ್ಲೀಷಿನಲ್ಲಿ ಇದ್ದವು. ಈಗ ಅವರ ಪ್ರವಚನ ಪ್ರಾರಂಭವಾಯಿತು. ತೀರಾ ಸುಸ್ತಾದವರಂತೆ ಮಾತುಗಳನ್ನು ನಿಧಾನವಾಗಿ ಎಳೆದೆಳೆದು ಆಡಲು ಪ್ರಾರಂಭಿಸಿದರು. ” ನೋಡಿ ಧ್ಯಾನವೆಂದರೆ ಪರಧ್ಯಾನ. ಪರಧ್ಯಾನವೆಂದರೆ ಪರಶಿವನ ಧ್ಯಾನ. ಪರವಾಸುದೇವನ ಧ್ಯಾನ. ನಮ್ಮನ್ನು ಈ ಜಗತ್ತಿನಿಂದ ಪಾರುಮಾಡುವ ಧ್ಯಾನ. ನೀವು ಇಡೀ ದಿನ ಬೇರೆಯವರಿಗಾಗಿ ಕೆಲಸ ಮಾಡುತ್ತೀರಿ, ಬೇರೆಯವರ ಬಗ್ಗೆಯೇ ಚಿಂತೆ ಮಾಡುತ್ತೀರಿ, ಆದ್ದರಿಂದ ನಿಮಗೇನು ಲಾಭವಿದೆ? ಇನ್ನು ಮುಂದೆ ನಿಮಗಾಗಿ ದಿನದ ಒಂದು ಗಂಟೆಯನ್ನು ಧ್ಯಾನಕ್ಕಾಗಿ ಮೀಸಲಿಡಿ” ಈ ಧಾಟಿಯ ಮಾತುಗಳು ನನ್ನ ಬದುಕಿಗೆ ಯಾಕೋ ಸರಿಹೋಗುವುದಿಲ್ಲ ಎನಿಸಿತು.
ಏಕೆಂದರೆ ದಿನದ ಒಂದು ಗಂಟೆ ಅಡುಗೆಮನೆಯಲ್ಲಿ ನನಗಾಗಿ ಮತ್ತು ಗಂಡನಿಗಾಗಿ ತಿಂಡಿ ಅಡುಗೆ ಮಾಡಿಟ್ಟುಬಿಟ್ಟರೆ ಉಳಿದ ದಿನರಾತ್ರಿಗಳೆಲ್ಲಾ ನನ್ನವೇ!! ನಾನೆಲ್ಲಿ ಬೇರೆಯವರ ಕೆಲಸ ಮಾಡುತ್ತೇನೆ? ಬೇರೆಯವರ ಬಗ್ಗೆ ಯೋಚಿಸುತ್ತೇನೆ? ನಾನಷ್ಟೇ ಅಲ್ಲ ನನ್ನ ಸುತ್ತಲಿನವರ ಬಗ್ಗೆಯೂ ಚಿಂತೆ ಮಾಡಿದೆ. ನನ್ನ ಮಕ್ಕಳು, ನನ್ನ ನೆಂಟರು, ಕಡೆಗೆ ನನ್ನನ್ನು ಇಲ್ಲಿಗೆ ಎಳೆದು ತಂದಿರುವ ಗೆಳತಿ ಎಲ್ಲರೂ ಎಲ್ಲಿ ಬೇರೆಯವರ ಕೆಲಸ ಮಾಡುತ್ತಾರೆ? ಬೇರೆಯವರ ಬಗ್ಗೆ ಚಿಂತಿಸುತ್ತಾರೆ? ಅಂಥಾ ಮಹಾನುಭಾವರು ಯಾರಿದ್ದಾರೆ? ಹಾಂ ಇದ್ದಾರೆ!! ಜಗತ್ತನ್ನೇ ತನ್ನದು ಎಂದು ಭಾವಿಸಿ ಎಲ್ಲರ ಏಳಿಗೆಗೆ ಶ್ರಮಿಸಿದ ಸ್ವಾಮಿ ವಿವೇಕಾನಂದ, ಅರಮನೆಯಲ್ಲಿ ಹುಟ್ಟಿದರೂ ದೀನದಲಿತರ ಸೇವೆಗೆ ನಿಂತ ಭಗವಾನ್ ಬುದ್ಧ, ದೇಶದ ಸ್ವಾತಂತ್ರ್ಯಕ್ಕೆ ಬರೀ ಉಪವಾಸವನ್ನೇ ಮಾಡುತ್ತಿದ್ದ ಮಹಾತ್ಮಗಾಂಧಿ, ಇವೆರೆಲ್ಲರೂ ಬೇರೆಯವರ ಬಗ್ಗೆಯೇ ಯೋಚಿಸಿದರು. ಅದು ಯಾರಿಗೂ ತಪ್ಪು ಎನಿಸಿಲ್ಲವಲ್ಲ? ಪ್ರಶ್ನೆಗಳ ಬೆಟ್ಟ ಆಕಾಶಕ್ಕೇರುತ್ತಿತ್ತು. ಗುರೂಜಿಯವರ ಪ್ರವಚನ ಮುಂದೆ ಹೋಗಿಬಿಟ್ಟಿತ್ತು. ಈಗ ಆತ ತಾವು ಹೋದ ದೇಶಗಳ ವಿವರಗಳು ಅಲ್ಲಿಯ ಜನ ತಾವು ಹೇಳಿದಂತೆ ಕೇಳಿ ತಮ್ಮ ಕ್ಯಾನ್ಸರ್ ಮುಂತಾದ ಭಯಂಕರ ಖಾಯಿಲೆಗಳನ್ನು ಹೇಗೆ ಗುಣ ಪಡಿಸಿಕೊಂಡರು ಮುಂತಾದ ಪ್ರಸಂಗಗಳನ್ನು ಬಹಳ ವೈಭವವಾಗಿ ವಿವರಿಸಿದರು. ಪ್ರತಿ ವಾಕ್ಯದಲ್ಲೂ ತಪ್ಪದೇ ತಮ್ಮನ್ನು ’ಗುರೂಜಿ’ ಎಂದೇ ಕರೆದುಕೊಳ್ಳುತ್ತಿದ್ದರು!!
ನಂತರದ ಪ್ರವಚನದಲ್ಲಿ ತಮ್ಮ ಆಶ್ರಮದ ವೈಭವವನ್ನು ನಮಗೆ ತಮ್ಮ ಮಾತುಗಳಲ್ಲೇ ದರ್ಶಿಸಿದರು! ಕೊನೆಯ ಅಸ್ತ್ರವೆಂಬಂತೆ ಶಿಷ್ಯರು ಎಲ್ಲರ ಮುಖದ ಮುಂದೆ ಒಂದು ಹುಂಡಿಯನ್ನು ಹಿಡಿದರು. ಗುರೂಜಿ ತಾವು ಇಷ್ಟು ದಿನ ಉಚಿತವಾಗಿ ಯೋಗವನ್ನು ಹೇಳಿಕೊಟ್ಟರೂ ಈ ಧ್ಯಾನದ ಪರಿಣಾಮ ಎಲ್ಲರಲ್ಲಿ ಉಂಟಾಗಬೇಕೆಂದರೆ ಎಲ್ಲರೂ ತಮ್ಮ ಯಥಾನುಶಕ್ತಿ ಕಾಣಿಕೆಯನ್ನು ಡಬ್ಬಿಯಲ್ಲಿ ಹಾಕಬೇಕೆಂದೂ, ಅದು ಆಶ್ರಮದಲ್ಲಿ ನಿಸ್ವಾರ್ಥ ಸೇವೆಗೆ ವಿನಿಯೋಗವಾಗುವುದೆಂದೂ ತಿಳಿಸಿದ್ದರಿಂದ ಅಲ್ಲಿದ್ದ ಭಕ್ತರು ನಾ ಮುಂದು ತಾಮುಂದು ಎಂದು ಐನೂರು, ಸಾವಿರ ರೂಗಳ ನೋಟನ್ನು ಡಬ್ಬಿಗೆ ತುರುಕಿ ಕೃತಾರ್ಥರಾದರು. ಇಷ್ಟು ಹೊತ್ತಿಗೆ ಗುರೂಜಿಯ ಮೂಲ ಉದ್ದೇಶ ನನಗೆ ಚೆನ್ನಾಗಿ ಅರ್ಥವಾಗಿ ಹೋಗಿದ್ದರಿಂದ ನನ್ನ ಪಕ್ಕದಲ್ಲಿದ್ದ ಗೊಂದಲದ ಮತ್ತು ಪ್ರಶ್ನೆಯ ಬೆಟ್ಟ ತಾನಾಗಿ ಕರಗಿ ಹೋಗಿತ್ತು!!
ನಾವು ವಾಪಸ್ ಮನೆಯ ಕಡೆ ಬರುವಾಗ ಅದೇಕೋ ಗೆಳತಿ ತೀರಾ ಮೌನವಾಗಿದ್ದಳು. ಅವಳ ಮುಖದಲ್ಲಿ ಅಸಮಾಧಾನ ನೆಲೆಸಿತ್ತು. ನಾನೂ ಮಾತಾಡದೇ ನಡೆಯುತ್ತಿದ್ದೆ. ಆದರೂ ಈ ನನ್ನ ಮೆದುಳು ಎನ್ನುವ ಮಿಷನ್ ಸುಮ್ಮನಿರಬೇಕಲ್ಲ? ಕೆಲವೇ ದಿನಗಳ ಹಿಂದ ನಾನು ಭಾಗವಹಿಸಿದ ಕಾರ್ಯಕ್ರಮಗಳು ನೆನಪಿಗೆ ಬಂದವು. ಶತಾಯುಷಿ, ಚೈತನ್ಯಮಯಿ, ತರುಣರೂ ನಾಚಿಕೊಳ್ಳುವಷ್ಟು ಲವಲವಿಕೆಯ ಪ್ರೊ. ವೆಂಕಟಸುಬ್ಬಯ್ಯನವರ ಭಾಷಣವನ್ನು ತನ್ಮಯಳಾಗಿ ಆಲಿಸಿದ್ದೆ. ಮೂರುದಿನಗಳ ಕಾಲ ಅವರ ಮಾತಿನ ಮೋಡಿ ನನ್ನನ್ನು ಉಲ್ಲಾಸಭರಿತಳನ್ನಾಗಿಸಿತ್ತು! ಮೊನ್ನೆ ಮತ್ತೊಂದು ವೇದಿಕೆಯಲ್ಲಿ ಮಾನ್ಯ ಎಚ್.ಎಸ್. ದೊರೆಸ್ವಾಮಿಯವರ ಮಾತುಗಳನ್ನು ಕೇಳಿದೆ. ನೂರರ ಕಡೆಗೆ ಧಾಪುಗಾಲಿಡುತ್ತಿರುವ ಧೀಮಂತ. ಅದೇನು ಪ್ರಖರವಾದ ಚಿಂತನೆ? ಅದೆಷ್ಟು ಮನುಷ್ಯ ಪ್ರೀತಿ? ಅವರನ್ನು ನೋಡುವುದೇ ಒಂದು ಸುಯೋಗ!
ನಿನ್ನೆಯಷ್ಟೇ ವಿದ್ವಾನ್ ಆರ್.ಕೆ.ಶ್ರೀಕಂಠನ್ ಅವರ ಸಂಗೀತ ಕಛೇರಿಗೆ ಹೋಗಿದ್ದೆ. ತೊಂಬತ್ತಮೂರನೇ ವಯಸ್ಸಿನಲ್ಲೂ ಅದೇನು ಕಂಚಿನ ಕಂಠ? ಅದೆಂಥಾ ಮನೋಧರ್ಮ ಸಂಗೀತ? ಎರಡುವರೆಗಂಟೆಗಳ ಕಾಲ ಮುಂದೆ ಕುಳಿತವರನ್ನು ಈ ಜಗತ್ತಿನಿಂದ ದೂರ ಕೊಂಡೊಯ್ದು ಸುಂದರ ಕಲಾ ಜಗತ್ತಿನಲ್ಲಿ ರಾಗರಸಗಂಗೆಯಲ್ಲಿ ತೋಯಿಸಿಬಿಟ್ಟರಲ್ಲ? ಇಂಥಾ ಮಹಾನುಭಾವರೆಲ್ಲಾ ನಮ್ಮ ಸುತ್ತಲೇ ಇದ್ದಾರಲ್ಲ? ಇವರೆಲ್ಲಾ ದಿನಾ ಒಂದು ಗಂಟೆ ಕುಳಿತು ಮೂಗಿನ ಗೋಡೆಯನ್ನೂ, ಬೆನ್ನಿನ ಮೂಳೆಯನ್ನೂ, ನೆತ್ತಿಯರಂಧ್ರದಿಂದ ಶರೀರವನ್ನೂ ದರ್ಶಿಸಿ ಸ್ಪರ್ಶಿಸಿ ಧ್ಯಾನಮಾಡುತ್ತಾರೇನು? ಅವರು ಮಾಡುತ್ತಿರುವ ಕೆಲಸಗಳೇ ಮಹಾಧ್ಯಾನವಲ್ಲವೇ? ಇಂಥವರಲ್ಲವೇ ನಮಗೆ ಮಾದರಿಯಾಗಬೇಕಾದ್ದು? ನನ್ನ ಮನೆ ಬಂತು. ಗೆಳತಿ ಥಟ್ಟನೆ ನನ್ನ ಎರಡು ಕೈಗಳನ್ನು ಹಿಡಿದು ಅಪರಾಧಿ ಭಾವದಲ್ಲಿ ” ನಿನಗೆ ತುಂಬಾ ಬೋರ್ ಮಾಡಿಸಿ ಬಿಟ್ಟೆನಾ”? ಎಂದಳು. ಅವಳ ಈ ಕಕ್ಕುಲಾತಿ ಕಂಡು ನನ್ನ ಕಣ್ಣಲ್ಲಿ ಎರಡು ಹನಿ ಕಣ್ಣೀರು ’ನಾವು ಹೊರಗೆ ಬರಬಹುದೇ?’ ಎಂದವು. ನಾನು ಸಾವರಿಸಿಕೊಂಡು, ” ಛೇ ಛೇ ಇದೆಂಥಾ ಮಾತಾಡುತ್ತೀ? ನಿಜವಾಗಿ ನೋಡಿದರೆ ನಾನೇ ನಿನಗೆ ’ಥ್ಯಾಂಕ್ಸ್’ ಹೇಳಬೇಕು. ಇವತ್ತು ಬದುಕಿನ ಒಂದು ಸುಂದರವಾದ ಸತ್ಯವನ್ನು ಕಂಡುಕೊಂಡೆ” ಎಂದೆ.
” ನೀನೊಬ್ಬಳು ಏನೋ ಹೇಳಿ ಸಮಾಧಾನ ಮಾಡಿಬಿಡುತ್ತೀ” ಎಂದು ಹುಸಿ ಮುನಿಸನ್ನು ತೋರಿ ನಸುನಕ್ಕು ’ಗುಡ್ ನೈಟ್’ ಹೇಳಿ ಹೊರಟುಹೋದಳು.
ಮನೆಗೆ ಬಂದೆ. ಗಂಡ “ಹೇಗಿತ್ತು ಪರಧ್ಯಾನ”? ಎಂದು ಗೇಲಿ ಮಾಡಿದರು. ಪ್ರತಿದಿನ ಬೆಳಿಗ್ಗೆ ಸಂಜೆ ಒಂದು ಗಂಟೆ ನಡೆಯುತ್ತಾ ಮನೆಗೆ ಬೇಕಾಗುವ ಎಲ್ಲ ದಿನಸಿ ಸಾಮಾನುಗಳು ಮತ್ತು ತರಕಾರಿಗಳನ್ನು ತಾವೇ ಹೊತ್ತು ತರುತ್ತಾ, ಮೂವತ್ತು ವರ್ಷಗಳಿಂದ ಸಕ್ಕರೆ ಕಾಯಿಲೆ ಇದ್ದರೂ ಅದನ್ನು ಕೇರೇ ಮಾಡದೇ ಸಿಹಿತಿಂಡಿಗಳನ್ನು ತಿನ್ನುತ್ತಾ, ಅಲ್ಪಸ್ವಲ್ಪ ದೂರಕ್ಕೆ ಸ್ಕೂಟರ್ ಓಡಿಸುತ್ತಾ, ಕಳೆದವರ್ಷ ಮದುವೆಯಾಗಿ ಮೈಸೂರಲ್ಲಿ ನೆಲೆಸಿರುವ ಮೊಮ್ಮಗಳ ಮನೆಗೆ ಒಂದು ದಿನ ತಮ್ಮ ಸ್ಕೂಟರ್ ಏರಿಯೇ ಹೋಗುತ್ತೇನೆ ಎಂದು ಕನಸು ಕಾಣುತ್ತಾ, ಎಲ್ಲರ ಹತ್ತಿರ ಈ ಸುದ್ದಿಯನ್ನು ಹೇಳಿ ಹಾಸ್ಯ ಮಾಡಿಸಿಕೊಳ್ಳುತ್ತಾ, ಯಾವ ಚಿಂತೆಯನ್ನೂ ಮನಸ್ಸಿಗೇ ಹಚ್ಚಿಕೊಳ್ಳದ ಎಪ್ಪತ್ತೈದರ ನನ್ನಗಂಡನೇ ಆ ಗುರೂಜಿಗಿಂತಾ ಯುವಕರಾಗಿ ಕಂಡರು!!!
 

‍ಲೇಖಕರು avadhi

11 May, 2013

13 Comments

  1. D.Ravivarma

    ನಿನ್ನೆಯಷ್ಟೇ ವಿದ್ವಾನ್ ಆರ್.ಕೆ.ಶ್ರೀಕಂಠನ್ ಅವರ ಸಂಗೀತ ಕಛೇರಿಗೆ ಹೋಗಿದ್ದೆ. ತೊಂಬತ್ತಮೂರನೇ ವಯಸ್ಸಿನಲ್ಲೂ ಅದೇನು ಕಂಚಿನ ಕಂಠ? ಅದೆಂಥಾ ಮನೋಧರ್ಮ ಸಂಗೀತ? ಎರಡುವರೆಗಂಟೆಗಳ ಕಾಲ ಮುಂದೆ ಕುಳಿತವರನ್ನು ಈ ಜಗತ್ತಿನಿಂದ ದೂರ ಕೊಂಡೊಯ್ದು ಸುಂದರ ಕಲಾ ಜಗತ್ತಿನಲ್ಲಿ ರಾಗರಸಗಂಗೆಯಲ್ಲಿ ತೋಯಿಸಿಬಿಟ್ಟರಲ್ಲ? ಇಂಥಾ ಮಹಾನುಭಾವರೆಲ್ಲಾ ನಮ್ಮ ಸುತ್ತಲೇ ಇದ್ದಾರಲ್ಲ? ಇವರೆಲ್ಲಾ ದಿನಾ ಒಂದು ಗಂಟೆ ಕುಳಿತು ಮೂಗಿನ ಗೋಡೆಯನ್ನೂ, ಬೆನ್ನಿನ ಮೂಳೆಯನ್ನೂ, ನೆತ್ತಿಯರಂಧ್ರದಿಂದ ಶರೀರವನ್ನೂ ದರ್ಶಿಸಿ ಸ್ಪರ್ಶಿಸಿ ಧ್ಯಾನಮಾಡುತ್ತಾರೇನು? ಅವರು ಮಾಡುತ್ತಿರುವ ಕೆಲಸಗಳೇ ಮಹಾಧ್ಯಾನವಲ್ಲವೇ? ಇಂಥವರಲ್ಲವೇ ನಮಗೆ ಮಾದರಿಯಾಗಬೇಕಾದ್ದು? ಮನೆಗೆ ಬಂದೆ. ಗಂಡ “ಹೇಗಿತ್ತು ಪರಧ್ಯಾನ”? ಎಂದು ಗೇಲಿ ಮಾಡಿದರು. ಪ್ರತಿದಿನ ಬೆಳಿಗ್ಗೆ ಸಂಜೆ ಒಂದು ಗಂಟೆ ನಡೆಯುತ್ತಾ ಮನೆಗೆ ಬೇಕಾಗುವ ಎಲ್ಲ ದಿನಸಿ ಸಾಮಾನುಗಳು ಮತ್ತು ತರಕಾರಿಗಳನ್ನು ತಾವೇ ಹೊತ್ತು ತರುತ್ತಾ, ಮೂವತ್ತು ವರ್ಷಗಳಿಂದ ಸಕ್ಕರೆ ಕಾಯಿಲೆ ಇದ್ದರೂ ಅದನ್ನು ಕೇರೇ ಮಾಡದೇ ಸಿಹಿತಿಂಡಿಗಳನ್ನು ತಿನ್ನುತ್ತಾ, ಅಲ್ಪಸ್ವಲ್ಪ ದೂರಕ್ಕೆ ಸ್ಕೂಟರ್ ಓಡಿಸುತ್ತಾ, ಕಳೆದವರ್ಷ ಮದುವೆಯಾಗಿ ಮೈಸೂರಲ್ಲಿ ನೆಲೆಸಿರುವ ಮೊಮ್ಮಗಳ ಮನೆಗೆ ಒಂದು ದಿನ ತಮ್ಮ ಸ್ಕೂಟರ್ ಏರಿಯೇ ಹೋಗುತ್ತೇನೆ ಎಂದು ಕನಸು ಕಾಣುತ್ತಾ, ಎಲ್ಲರ ಹತ್ತಿರ ಈ ಸುದ್ದಿಯನ್ನು ಹೇಳಿ ಹಾಸ್ಯ ಮಾಡಿಸಿಕೊಳ್ಳುತ್ತಾ, ಯಾವ ಚಿಂತೆಯನ್ನೂ ಮನಸ್ಸಿಗೇ ಹಚ್ಚಿಕೊಳ್ಳದ ಎಪ್ಪತ್ತೈದರ ನನ್ನಗಂಡನೇ ಆ ಗುರೂಜಿಗಿಂತಾ ಯುವಕರಾಗಿ ಕಂಡರು!!!manamuttuva maatu….

  2. Radhika

    ಒಂದು ಸುಂದರ ಲೇಖನ!

  3. ಅನಿತಾ ನರೇಶ್

    waah..sooooooper 🙂 🙂

  4. Aravind

    Thumbaa chennagi bardideera.

  5. ಲಿಂಗರಾಜು ಬಿ.ಎಸ್.

    ತಮ್ಮ ಮನೆಯಲ್ಲಿರುವ ತಮ್ಮೊಳಗೆ ಇರುವ ಶಾಂತಿಯನ್ನು ಕಾಣದೆ ಬೇರೆ ಕಡೆಗೆ ಶಾಂತಿಯನ್ನು ಅರಸುತ್ತಾ ಹೋಗುವವರಿಗೆ ಬುದ್ಧಿ ಹೇಳಿದಂತಿದೆ ಈ ಲೇಖನ. ಧ್ಯಾನದ ಹಿಂದಿನ ಮರ್ಮವನ್ನು ಬಿಡಿಸಿಟ್ಟಿದ್ದಕ್ಕೆ ಧನ್ಯವಾದಗಳು

  6. K.V.Tirumalesh

    ಶ್ರೀಮತಿ ಶಾಂತಾನಾಗರಾಜ್ ಅವರೇ,
    ಸರಿಯಾದ ಮಾತುಗಳನ್ನು ಹೇಳಿದ್ದೀರಿ. The King is naked! ಎನ್ನುವುದಕ್ಕೆ ಮುಗ್ಧತೆ ಬೇಕು. ಆದರೆ ಹಾಗಂದರೆ ನಿಮ್ಮನ್ನು ಭಾರತದ ಸಂಸ್ಕೃತಿ ವಿರೋಧಿ, ಪಾಶ್ಚಾತ್ಯ ಪ್ರೇಮಿ, ಪ್ರಚ್ಛನ್ನ ಕ್ರಿಶ್ಚಿಯನ್ ಎಂದು ಮುಂತಾಗಿ ನಿಂದಿಸುವ ಮಂದಿ ಇರುತ್ತಾರೆ. ನಾನೂ ನಿಮ್ಮಂತೆ, ಧ್ಯಾನ ಗೀನದ ಹಂದೆ ಬೀಳದೆ, ಕಾಯಕದಲ್ಲಿ ತೊಡಗಿರುವವರನ್ನು ಗೌರವಿಸುವವನು. ಅವರಿಂದಾಗಿಯೇ ಲೋಕ ಸಾಗುತ್ತಿರುವುದು. ನನ್ನ ಮಟ್ಟಿಗೆ ಧ್ಯಾನವೆಂದರೆ ಯಾವುದಾದರೂ ಒಳ್ಳೆಯ ಸಂಗತಿಯಲ್ಲಿ ಆಸಕ್ತಿವಹಿಸುವುದು. ಅದೊಂದು ಸ್ಕೂಟರ್ ರಿಪೇರಿ ಕೂಡಾ ಆಗಿರಬಹುದು, ಒಂದು ಪುಸ್ತಕದ ಓದು ಇರಬಹುದು, ಅಡುಗೆ ಇರಬಹುದು, ಹೊಸತೊಂದರ ಸಂಶೋಧನೆ ಇರಬಹುದು, ಆಟವಿರಬಹುದು.
    ನಮ್ಮ ಶಾಲಾ ಮಕ್ಕಳಿಗೆ ಒಂದು ಬಟನ್ ಹೊಲಿಯುವುದಕ್ಕೆ ಕೂಡ ಬರುವುದಿಲ್ಲ. ಯಾಕೆಂದರೆ ಇಂಥ ಕೆಲಸಗಳನ್ನು ನಾವು ಕೀಳೆಂದು ತಿಳಿದಿದ್ದೇವೆ. ಸ್ವಾಮಿಗಳ (ಬೇಕಾದರೆ ಗುರೂಜಿ ಎಂದು ಓದಿ) ತಿರುಗುವುದು? ಅಧ್ಯಾತ್ಮದ ವೇಷ ಕಟ್ಟುವುದು?
    ಅದು ಪುಣ್ಯದ ಕಾರ್ಯ! ಇಂದು ಸ್ವಾಮಿಗಳು, ಮಠಗಳು, ಪ್ರವಚನಗಳು ಹೆಚ್ಚುತ್ತಿವೆ. ಯಾವ ಯಾವುದೋ ಕಾರಣಗಳಿಗೆ ಜನ ಇಂಥವಕ್ಕೆ ಮರುಳಾಗುತ್ತಿದ್ದಾರೆ. ಒಬ್ಬ ಸ್ವಾಮಿಯನ್ನು ಅರೆಸ್ಟ್ ಮಾಡಿದರೆ ಗೊತ್ತಾಗುತ್ತದೆ, ಅವನ ಬಳಿ ಎ‍ಷ್ಟು ಕಿಲೋ ಚಿನ್ನ ಇದೆ ಎನ್ನುವುದು. ಆದರೆ ಆತ ಅನ್ನುತ್ತಾನೆ: ಭಕ್ತರು ಕೊಟ್ಟರು, ನಾನೇನು ಮಾಡಲಿ? ಎಂದು.
    ಸ್ವಾಮಿಗಳಿಂದಾಗಿ ಜನರೋ ಜನರಿಂದಾಗಿ ಸ್ವಾಮೀಜಿಗಳೋ?! ಈ ವಿಷವರ್ತುಲವನ್ನು ಮುರಿಯಬೇಕಾಗಿದೆ.
    ಕೆ.ವಿ. ತಿರುಮಲೇಶ್

    • shanthanagaraj

      ಶ್ರೀ ತಿರುಮಲೇಶ್ ಅವರಿಗೆ ವಂದನೆಗಳು
      ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು. ಈ ಲೇಖನ ಬರೆಯಲು ನನಗೆ ಮೊದಲ ಪ್ರೇರಣೆ ಬೆಂಗಳೂರಿನ ತುಂಬಾ ಇಂಥಾ ಠಕ್ಕ ಗುರೂಜಿಗಳು ತುಂಬಿರುವುದು, ಮತ್ತು ಕೋಟಿಗಟ್ಟಲೆ ಆಸ್ತಿ ಮಾಡುತ್ತಿರುವುದು. ಎರಡನೆಯ ಪ್ರೇರಣೆ, ಇಂಥಾ ಗುರೂಜಿಗಳ ಪಾದಕ್ಕೆ ಲಕ್ಷಗಟ್ಟಲೇ ಹಣ ಸುರಿಯುವ ಮೂರ್ಖ ಜನರು!! ಇದೊಂದು ಸಾಮಾಜಿಕ ರೋಗ. ಇದಕ್ಕೆ ಮದ್ದೆಲ್ಲಿದೆಯೋ ಗೊತ್ತಿಲ್ಲ.
      ಶಾಂತಾನಾಗರಾಜ್

  7. vasanth

    very very good article. Thanks for putting this piece in Avadhi.

  8. bharathi

    ಎಂಥ ಚೆಂದಕ್ಕೆ ಬರೆದಿದ್ದೀರಿ. ನನ್ನ ಅಭಿಪ್ರಾಯವೂ ಡಿಟ್ಟೋ … ಡಿಟ್ಟೋ !!

  9. Vasuki

    Delightful writeup. Enjoyed reading it!

  10. shanthanagaraj

    ನನ್ನ ಲೇಖನಕ್ಕೆ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಬರೆದ ಎಲ್ಲ ಅವಧಿ ಓದುಗರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಈ ನುಡಿಗಳೇ ನನ್ನ ಬರವಣಿಗೆಗೆ ಚೇತೋಹಾರಿಯಾದ ’ಟಾನಿಕ್’ಎಂದು ವಿನಯಪೂರ್ವಕವಾಗಿ ಹೇಳಬಯಸುತ್ತೇನೆ
    ಮತ್ತೊಮ್ಮೆ ಥಾಂಕ್ಯುವೆರಿಮಚ್
    ಶಾಂತಾನಾಗರಾಜ್

  11. poorimapurohot

    Poornima Purohit
    15 May (1 day ago)
    to me
    Dear Shantha,
    Eshtu saralavada,sundaravada matugalalli,dhyanavannu arthisiddiri.So nice.Please get it published in some noted newspaper so that it will reach out to more people and bring them out of this kind of ideotic mania.

  12. ಶಮ, ನಂದಿಬೆಟ್ಟ

    ನಿನ್ನೆಯಷ್ಟೇ ವಿದ್ವಾನ್ ಆರ್.ಕೆ.ಶ್ರೀಕಂಠನ್ ಅವರ ಸಂಗೀತ ಕಛೇರಿಗೆ ಹೋಗಿದ್ದೆ. ತೊಂಬತ್ತಮೂರನೇ ವಯಸ್ಸಿನಲ್ಲೂ ಅದೇನು ಕಂಚಿನ ಕಂಠ? ಅದೆಂಥಾ ಮನೋಧರ್ಮ ಸಂಗೀತ? ಎರಡುವರೆಗಂಟೆಗಳ ಕಾಲ ಮುಂದೆ ಕುಳಿತವರನ್ನು ಈ ಜಗತ್ತಿನಿಂದ ದೂರ ಕೊಂಡೊಯ್ದು ಸುಂದರ ಕಲಾ ಜಗತ್ತಿನಲ್ಲಿ ರಾಗರಸಗಂಗೆಯಲ್ಲಿ ತೋಯಿಸಿಬಿಟ್ಟರಲ್ಲ? ಇಂಥಾ ಮಹಾನುಭಾವರೆಲ್ಲಾ ನಮ್ಮ ಸುತ್ತಲೇ ಇದ್ದಾರಲ್ಲ? ಇವರೆಲ್ಲಾ ದಿನಾ ಒಂದು ಗಂಟೆ ಕುಳಿತು ಮೂಗಿನ ಗೋಡೆಯನ್ನೂ, ಬೆನ್ನಿನ ಮೂಳೆಯನ್ನೂ, ನೆತ್ತಿಯರಂಧ್ರದಿಂದ ಶರೀರವನ್ನೂ ದರ್ಶಿಸಿ ಸ್ಪರ್ಶಿಸಿ ಧ್ಯಾನಮಾಡುತ್ತಾರೇನು? ಅವರು ಮಾಡುತ್ತಿರುವ ಕೆಲಸಗಳೇ ಮಹಾಧ್ಯಾನವಲ್ಲವೇ? ಇಂಥವರಲ್ಲವೇ ನಮಗೆ ಮಾದರಿಯಾಗಬೇಕಾದ್ದು?
    ವಾಹ್.. ವಾಹ್… Sooooper Maaa.. Salute to you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading