ಶೋಭಾ ದಿನೇಶ್
ಇನ್ನೂ ಹಾಸಿಗೆಯ ಸುಕ್ಕು ನೆಟ್ಟಗಾಗಿಲ್ಲ
ವಿದಾಯದ ಒಂದೂ ಮಾತು ಹೇಳದೆ ನಿರುಮ್ಮಳ
ನಗೆಯೊಂದಿಗೆ ನೀ ನಡೆದು ಹೋದೆ………
ಮರೆಯಲಿ ಹೇಗೆ ??… ಸಣ್ಣ ಕರುಳಿನಾಳದಲ್ಲೂ ಆಸೆಯ
ಊಟೆಯೊಡೆಸುವ ನಿನ್ನ ವಗರು ವಗರು ಪ್ರೀತಿ…
ಇಳಿಸಂಜೆಗಳ ಮಾಧುರ್ಯ ಮಡಚಿ ಬೀಳದಂತೆ
ಕಾಪಿಟ್ಟಕೊಂಡು ಕಾಯುತ್ತಿದ್ದೇನೆ
ಒಂದು ಸುದೀರ್ಘ ಪ್ರೀತಿಯ ಕದನಕ್ಕೆ ಬೇಕಾಗುವ ಮದ್ದು
ಗುಂಡು ಗಂಧಕವನ್ನ ಪೇರಿಸಿಟ್ಟಿಕೊಂಡಿದ್ದೇನೆ….

ನೀ ಬರಬೇಕು.. ನೆತ್ತಿಯ ಮೇಲಿನ ಆಗಸದಿಂದ ಮತ್ತೊಮ್ಮೆ
ಸುಖದ ಸುರಿಮಳೆಯಾಗಬೇಕು…
ಪ್ರೀತಿಯ ಧನಸ್ಸು ಎದೆಯೇರಿ ವಿಜೃಂಭಿಸಬೇಕು…
ಹೊರಗೆ ಕತ್ತಲು ಮತ್ತು ಚಳಿ ಸ್ಪರ್ಧೆಗೆ ಬಿದ್ದ ದಂಪತಿಗಳಂತೆ
ಗಾಢವಾಗುತ್ತಿವೆ… ನೀ ಬೇಗ ಬಂದು ಬಿಡು..
ಈ ಬದುಕು ಪದೇ ಪದೇ ಒದಗುವಂತದಲ್ಲ ನೋಡು…






ತುಂಬಾ ಚೆನ್ನಾಗಿದೆ.