–ಜಿ ಎನ್ ಮೋಹನ್
ಎಲ್ಲರ ಬದುಕಿನಲ್ಲಿ ಶಾಲ್ಮಲೆಯಂತೆ ಹರಿಯುವ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಲವ್ ಲೆಟರ್ಸ್. ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ನ ಈ ಪ್ರಯೋಗ ಭಾವನೆಗಳ ಏರಿಳಿತಕ್ಕೆ ಸಾಕ್ಷಿಯಾಯಿತು.
ಇಬ್ಬರೂ ಅಕ್ಕ ಪಕ್ಕದಲ್ಲೇ ಇದ್ದಾರೆ. ತುಂಬಾ ಹತ್ತಿರ ಆದರೆ ತುಂಬಾ ದೂರ. ಒಮ್ಮೆ ಹತ್ತಿರ ಅನಿಸಿದರೆ ಇನ್ನೊಮ್ಮೆ ದೂರ. ಎರಡು ಒಲವಿನ ಜೀವಗಳ ನಡುವಿನ ಹತ್ತಿರ ಹಾಗೂ ದೂರದ ಹಾವು ಏಣಿ ಆಟವೇ- ಲವ್ ಲೆಟರ್ಸ್
‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ..’ ಎಂದರು ಕವಿ ಜಿ ಎಸ್ ಎಸ್. ಆದರೆ ಇದು ಸ್ವಲ್ಪ ಭಿನ್ನ. ಇಲ್ಲಿರುವವರಿಗೆ ಕಿಂಚಿತ್ತೂ ಅಹಂ ಇಲ್ಲ. ಆದರೆ ಹತ್ತಿರವಿದ್ದವರು ದೂರ ಆಗುತ್ತಾ ಹೋಗುತ್ತಾರೆ. ದೂರ ಆದಾಗ ಹಳಹಳಿಸಿ ಹತ್ತಿರವಾಗುತ್ತಾರೆ. ಇಲ್ಲಿ ಚಿಲಿಪಿಲಿ ಸಂಭ್ರಮವಿದೆ, ಕಾಡುವ ನೋವಿದೆ, ಬಿಟ್ಟುಕೊಡಲಾಗದ ಹಳಹಳಿಕೆ ಇದೆ, ಕೂಡಿದ ಸಂತಸವಿದೆ, ಕಾಡುವ ನೆನಪುಗಳಿವೆ, ದೂರವಾಗುವ ಅನಿವಾರ್ಯತೆ ಇದೆ. ಪ್ರತಿಯೊಬ್ಬರ ಬದುಕಿನಲ್ಲೂ ಗುಪ್ತಗಾಮಿನಿಯಂತೆ ಹರಿವ ಈ ಎಲ್ಲವನ್ನೂ ಕಟ್ಟಿಕೊಡುವ ಪ್ರಯತ್ನ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ನ ‘ಲವ್ ಲೆಟರ್ಸ್’.
ವೆಂಕಟೇಶ್ ಪ್ರಸಾದ್ ನಿರ್ದೇಶಿಸಿದ ಯಶಸ್ವಿ ನಾಟಕಗಳಲ್ಲಿ ಇದೂ ಒಂದು. ಈ ನಾಟಕದಲ್ಲಿ ಅಭಿನಯಿಸಿದ ಇಬ್ಬರೂ ಈಗಾಗಲೇ ರಂಗ ಹಾಗೂ ಚಲನಚಿತ್ರ ಎರಡರಲ್ಲೂ ಸಾಕಷ್ಟು ಹೆಸರು ಮಾಡಿದ ನಟರು. ಕಿಶೋರ್ ಕುಮಾರ್ ಹಾಗೂ ಸಿರಿ ರವಿಕುಮಾರ್. ‘ಎದೆಯೊಳಗೆ ಗಿಟಾರು ಡಿಂಗ್ ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆ..’ ಅನ್ನುವ ಅನುಭವ ಇಡೀ ಜಗತ್ತಿನದ್ದು. ಹಾಗಾಗಿಯೇ ‘ಲವ್ ಲೆಟರ್ಸ್’ ಹುಟ್ಟಿದ ಅಮೆರಿಕಾದಿಂದ ಹಿಡಿದು ಜಗತ್ತಿನ ಹಲವಾರು ದೇಶಗಳಲ್ಲಿ ಈ ನಾಟಕ ಅನೇಕ ರೂಪು ಪಡೆದು ಯಶಸ್ವಿ ಆಗಿದೆ. ಈ ನಾಟಕ ಬರೆದ ಎ ಆರ್ ಗರ್ನಿಗೆ ಸಮಾಜದ ಮೇಲ್ವರ್ಗದ ಒಳಗಿನ ಬದುಕು ಚೆನ್ನಾಗಿ ಸಿಕ್ಕಿ ಹೋಗಿತ್ತು ಹಾಗಾಗಿಯೇ ಈತ ‘ದ ಡೈನಿಂಗ್ ರೂಂ’, ‘ದ ಕಾಕ್ಟೇಲ್ ಹವರ್’ ಅನ್ನುವಂತಹ ನಾಟಕಗಳನ್ನು ಬರೆದ. ಈ ಎಲ್ಲಕ್ಕೂ ಮೀರಿ ಕ್ಲಿಕ್ ಆದದ್ದು 1986 ರಲ್ಲಿ ಬರೆದ ‘ಲವ್ ಲೆಟರ್ಸ್’.
ಈ ನಾಟಕ ತುಮರಿ ಅಮೃತಾ ಆಗಿ ಹಿಂದಿಯಲ್ಲಿ ಬಂದು ಇತಿ ನಿನ್ನ ಅಮೃತಾ ಆಗಿ ಕನ್ನಡಕ್ಕೆ ಬಂದು ಈಗ ನೇರ ನೇರಾ ಲವ್ ಲೆಟರ್ಸ್ ಆಗಿಯೇ ವೆಂಕಟೇಶ್ ಪ್ರಸಾದ್ ನಿರ್ದೇಶನದಲ್ಲಿ ಬಂದಿದೆ. ‘ಕಾಕ ದೋಷ’ ನಾಟಕದ ಮೂಲಕ ತನ್ನ ಛಾಪು ಮೂಡಿಸಿದ್ದ ವೆಂಕಟೇಶ ಪ್ರಸಾದ್ ಈ ನಾಟಕದ ಮೂಲಕ ಆಡದ ಮಾತಿಗೆ ದನಿ ಆಗಿದ್ದಾರೆ. ಈ ನಾಟಕಕ್ಕೆ ‘ನಿನ್ನ ಪ್ರೀತಿಯ ನಾನು’ ಎನ್ನುವ ಟ್ಯಾಗ್ ಲೈನ್ ಸೇರಿಸಿರುವುದರಲ್ಲಿಯೇ ಅವರು ಎಲ್ಲರ ಬದುಕನ್ನೂ ಈ ನಾಟಕಕ್ಕೆ ಬೆಸೆದಿದ್ದಾರೆ. ಇತಿ ನಿನ್ನ ಪ್ರೀತಿಯ ನಾನು ಎಂದು ಪತ್ರದ ಮೂಲಕ ಬರೆದುಕೊಳ್ಳುತ್ತಿದ್ದ ಜೋಡಿಯ ಕಥನವನ್ನು ಮೆಸೇಜ್ ಮೂಲಕ, ಎಮೋಜಿ ಮೂಲಕ, ಜೆನ್ ಜೀ ಭಾಷೆಯ ಮೂಲಕ ತೋಡಿಕೊಳ್ಳುವವರಿಗೂ ಕನೆಕ್ಟ್ ಮಾಡಿದ್ದಾರೆ.
ಶಾಲೆಯಲ್ಲಿ ಒಟ್ಟಿಗೇ ಕಲಿತ ಸಿದ್ದಾರ್ಥ ಹಾಗೂ ರಶ್ಮಿ ಒಳ್ಳೆ ಕ್ಲೋಸ್ ಫ್ರೆಂಡ್ಸ್ ಆಗುವ ಮೂಲಕ, ಮನೆಯ ಪರಿಸ್ಥಿತಿ ವಿವರಿಸಿಕೊಳ್ಳುವ ಮೂಲಕ ಹತ್ತಿರವಾಗುತ್ತ, ಇನ್ನೊಬ್ಬರು ನಡುವೆ ಇದ್ದಾರೆ ಎಂದಾಗ ಪೊಸೆಸಿವ್ ಆಗುತ್ತಾ, ಬೆರೆಯುವ ಬಯಕೆ ವ್ಯಕ್ತಪಡಿಸುತ್ತಾ, ಬೆರೆತು ಸಂಭ್ರಮಿಸುತ್ತಾ, ಬದುಕು ಎರಡು ದಿಕ್ಕಿಗೆ ಕರೆದೊಯ್ಯುವುದನ್ನು ನೋಡುತ್ತಾ, ಇಬ್ಬರೂ ಬೇರೆ ಬೇರೆಯಾಗುವುದಕ್ಕೆ ಸಾಕ್ಷಿ ಆಗುತ್ತಾ, ಒಬ್ಬರಿಗಾಗಿ ಇನ್ನೊಬ್ಬರು ಹಲಬುತ್ತಾ ಹೀಗೆ ಇಡೀ ನಾಟಕ ಭಾವನೆಗಳ ದೋಣಿಯಲ್ಲಿ ಏರಿಳಿಯುವಂತೆ ಮಾಡುತ್ತದೆ. ಪಾತ್ರಗಳ ಬದುಕು ಬದಲಾದಂತೆ ನೋಡುಗರೂ ನಿಟ್ಟುಸಿರಿಡುತ್ತಾ, ಕಣ್ಣೀರಾಗುತ್ತಾ ಹೋಗುವಂತೆ ಮಾಡುತ್ತದೆ.
‘ಪತ್ರದಲ್ಲಿರುವ ನೀನು, ನನ್ನೆದುರು ಕಾಣುವ ನೀನು ಬೇರೆ ಬೇರೆಯೇ’ ಎನ್ನುವ ಅರಿವು ಆಗುವುದೇ ಈ ನಾಟಕದ ಒಂದು ಮಹತ್ವದ ಟರ್ನಿಂಗ್ ಪಾಯಿಂಟ್. ವೆಂಕಟೇಶ್ ಪ್ರಸಾದ್ ರೂಪಾಂತರ ನೋಡುಗರನ್ನು ಭಾವನೆಗಳಲ್ಲಿ ತೇಲಿಸುವ ಯಾವ ಸಂದರ್ಭವನ್ನೂ ಬಿಟ್ಟುಕೊಟ್ಟಿಲ್ಲ. ಕಿಶೋರ್ ಹಾಗೂ ಸಿರಿ ಇಬ್ಬರೂ ಸಹಾ ಧ್ವನಿ ಮಾಡ್ಯುಲೇಶನ್ ನಲ್ಲಿ ಎತ್ತಿದ ಕೈ. ಆಡುವ ಮಾತಿನಂತೆಯೇ ಅದರ ನಡುವೆ ಅವರು ನೀಡುತ್ತಿದ್ದ ಪಾಸ್ ಗಳು, ಗಂಭೀರ ಪರಿಸ್ಥಿತಿಯ ಮಧ್ಯೆಯೇ ಚೆಲ್ಲುತ್ತಿದ್ದ ಹೂ ನಗೆ ನೋಡುಗರನ್ನು ಸೆಳೆಯಿತು.
ವಿದ್ದು ಉಚ್ಚಿಲ್ ಈ ನಾಟಕವನ್ನು ಕೊಂಕಣಿಯಲ್ಲಿ ನಿರ್ದೇಶಿಸಿದ್ದರು. ಜಗತ್ತಿನ ಎಲ್ಲೆಡೆ ನಡೆದ ನಾಟಕಗಳು ಒಂದು ರೀತಿಯದಾದರೆ ವಿದ್ದು ಪ್ರಯೋಗವೇ ಆದಕ್ಕಿಂತ ಭಿನ್ನ. ವೆಂಕಟೇಶ್ ಪ್ರಸಾದ್ ಹಾಗೂ ವಿದ್ದು ನಡುವಣ ಎರಡು ಪ್ರಯೋಗಗಳ ನಡುವೆ ನಮ್ಮೆಲ್ಲರ ಲವ್ ಲೆಟರ್ಸ್ ಹರಡಿ ಕೂತಿವೆ. ವೆಂಕಟೇಶ್ ಪ್ರಸಾದ್ ರೂಪಾಂತರ ಚೆನ್ನಾಗಿದೆ. ನಾಟಕದ ಯಶಸ್ಸಿಗೆ ಜಯಂತ್ ಜಿ, ನಿಶಾಂತ ಗುರುಮೂರ್ತಿ ವಿನ್ಯಾಸ, ಅರುಣ್ ಡಿ ಟಿ ಬೆಳಕು, ಸುಷ್ಮಾ ನಿರ್ಮಾಣ ಸಾಕಷ್ಟು ಕೊಡುಗೆ ನೀಡಿದೆ.






0 Comments